top of page

ಆತ್ಮನಲ್ಲಿ ಪರಮಾತ್ಮನಿದ್ದಾನೆ..!

ಕಬೀರ ಕಂಡಂತೆ..೧೮ ಭುಲಾ ಭುಲಾ ಕ್ಯಾ ಫಿರೆ, ಸಿರ ಪರ ಬಂಧ ಗಯಿ ಬೇಲ/ ತೇರಾ ಸಾಯಿ ತುಝಮೆ, ಜೋ ತಿಲ ಮಾಹಿ ತೇಲ// "ಹೊರಗೆಲ್ಲೋ ಹುಡುಕಿದೆ ಕಾಣದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ" ಎಂಬ ಕವಿಯ ಉದ್ಗಾರ ನಮ್ಮ ಇಂದಿನ ಸ್ಥಿತಿಗೆ ಹಿಡಿದ ಕನ್ನಡಿ -ಯಾಗಿದೆ. ಇಂದು ನಾವು ವಾಸ್ತವವನ್ನು ಕಾಣಲು ಪ್ರಯತ್ನ ನಡೆಸದೇ ಭ್ರಮಾಲೋಕದಲ್ಲಿ ಭ್ರಮಣ ಮಾಡುತ್ತಿದ್ದೇವೆ. ದೇಹವೆಂಬ ಗುಡಿಯ ತೆರೆದು ನೋಡು, ದಿವ್ಯ ಚೇತನವೊಂದು ಬೆಳಗುತಿದೆ. 'ನಮ್ಮಲ್ಲೇ ದೇವರನ್ನು ಕಾಣಬೇಕು', 'ಆತ್ಮನಲ್ಲಿ ಪರಮಾತ್ಮನಿದ್ದಾನೆ' ಎಂಬ ಸಂತ ವಾಕ್ಯಗಳು ಎಂಥ ಅದ್ಭುತ ಸಂದೇಶ ನೀಡುತ್ತವೆ! ದೇವರನ್ನು ಹುಡುಕುತ್ತ ಹಿಮಾಲಯ ಸುತ್ತುತ್ತೇವೆ. ಗಂಗೆ, ಯಮುನೆಯರಲ್ಲಿ ಮುಳುಗೇಳುತ್ತೇವೆ. ಎಲ್ಲ ಕಡೆಗೆ ಹುಡುಕಿ ನಿರಾಶರಾಗಿ ಕೊನೆಗೆ ಮನೆಗೆ ಬಂದ ಮೇಲೆ ದೇವರೆಲ್ಲಿ? ಎಂದು ಕೇಳುತ್ತೇವೆ! ಮನ ಮಂದಿರದಲ್ಲಿ ಬೆಳಗುವ ಚಿರಂತನ ಜ್ಯೋತಿ -ಯನ್ನು ನೋಡದೇ ದೀಪ ಹಚ್ಚಿಕೊಂಡು ಜಗತ್ತನ್ನೆಲ್ಲ ಅರಸುತ್ತೇವೆ..! ಇದೇ ರೀತಿ, ಇಂದಿನ ಧಾವಂತದ ಪ್ರಪಂಚದಲ್ಲಿ ಮನುಷ್ಯ ಸುಖವೆಂಬ ಬಿಸಿಲ್ಗುದುರೆಯ ಬೆನ್ನತ್ತಿ ಅಂತ್ಯ ಕಾಣದ ಓಟದಲ್ಲಿ ತನ್ನನ್ನೇ ಮರೆತಿದ್ದಾನೆ. "ಬಗಲಲ್ಲಿ ಮಗು ಇಟ್ಟುಕೊಂಡು ಊರೆಲ್ಲ ಹುಡುಕಿದಂತೆ" ಎಂಬ ಗಾದೆಯಂತೆ ನಮ್ಮೊಳಗೇ ಅಂತರ್ಗತ ವಾಗಿರುವ ಆನಂದವನ್ನು ಕಾಣಲು ಪ್ರಯತ್ನಿಸದೇ ಬೇರೆಲ್ಲೋ ಹುಡುಕುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದೇವೆ. ಕಣ್ಣಿದ್ದರೂ ಸಹ, ರಾಗ-ದ್ವೇಷಗಳ ಪೊರೆಯಿಂದ ಕುರುಡರಾಗಿ ಅಂತರಂಗದ ಆನಂದವನ್ನು ಕಾಣದೇ ತೊಳಲಾಡುತ್ತಿದ್ದೇವೆ. ಸುಖೋಪಭೋಗದ ವಸ್ತು ಗಳನ್ನು ಗುಡ್ಡೆ ಹಾಕಿಕೊಂಡು ನಾವು ಹೊರಗೆ ಸುಖವನ್ನು ಅರಸುತ್ತಿದ್ದೇವೆ. ಈ ಹಿನ್ನಲೆಯಲ್ಲಿ ಕಬೀರರು ಈ ದೋಹೆಯಲ್ಲಿ.. ಕಣ್ಣಿಗೆ ಪಟ್ಟಿ ಕಟ್ಟಿಕೊಂಡು, ತಿರುಗುವಿಯಲ್ಲ ಕಂಡಕಂಡಲ್ಲಿ/ ದೇವ ನಿನ್ನೊಳಗಿಹನು, ಎಳ್ಳಿನಲ್ಲಿ ಎಣ್ಣೆಯಿರುವ ರೀತಿಯಲ್ಲಿ// ಎಂದು ಹೇಳುತ್ತ ನಮ್ಮ ವ್ಯರ್ಥ ಹುಡುಕಾಟಕ್ಕೆ ತಾರ್ಕಿಕ ಅಂತ್ಯ ಹಾಡಿದ್ದಾರೆ. ಕಣ್ಣಿದ್ದೂ ಕುರುಡ ರಂತೆ ಭ್ರಮೆಯಲ್ಲಿ ತೇಲಾಡುವದನ್ನು ಬಿಟ್ಟು ಎಳ್ಳಿನ ಬೀಜದ ಗರ್ಭದಲ್ಲಿಯೇ ಎಣ್ಣೆ ಇರುವ ರೀತಿಯಲ್ಲಿ "ನಿಮ್ಮ ಅಂತರಂಗದ ಕದ ತೆರೆದು ನೋಡಿ, ಅಲ್ಲಿ ದೇವರಿದ್ದಾನೆ..!" ಎಂಬ ಸತ್ಯವನ್ನು ಅತ್ಯಂತ ಸರಳವಾಗಿ ಅನಾವರಣ ಗೊಳಿಸಿದ್ದಾರೆ. ಕಣ್ಣಿಗೆ ಪಟ್ಟಿ ಕಟ್ಟಿದ ಕುದುರೆಗೆ ಜಗತ್ತು ಕಾಣದು. ಅದೇ ರೀತಿ ಅಹಂಕಾರ, ಮೋಹ, ಈರ್ಷೆಗಳ ಪಟ್ಟಿಯನ್ನು ಕಿತ್ತೆಸೆಯಿರಿ, ವಿಶಾಲ ಪ್ರಪಂಚದ, ಭಗವಂತನ ಸಾಕ್ಷಾತ್ಕಾರ ಪಡೆಯಿರಿ ಎಂದು ಉಪದೇಶ ನೀಡಿದ್ದಾರೆ. ಭ್ರಮೆಯಿಂದ ಕುರುಡ ರಾಗಿ ದಿಶಾಹೀನರಂತೆ ಅಂಡಲೆಯುವದ ಬಿಟ್ಟು ಹೃದಯದ ಕವಾಟ ತೆರೆದರೆ, ಅಂತರಂಗದಲ್ಲಿ ಸಚ್ಚಿದಾನಂದ ಸ್ವರೂಪಿಯಾದ ಭಗವಂತ ನೆಲೆ ನಿಂತಿರುವ ಎಂಬ ಕಬೀರರ ಸಂದೇಶ ಮನ ಮುಟ್ಟುವಂಥದ್ದು. ಕುಂಡೆ ದೀಪದ ಮಿಂಚುಹುಳಕೆ ಬೆಳಕು ಕಾಣದು ಕಂಡ ಕಂಡಲ್ಲಿ ಅಲೆದರೆ ಸುಖವೆಲ್ಲಿ ದಕ್ಕುವದು?/ ಕಂಡೀತು ನಿನ್ನೊಳಗೆ ಚೈತನ್ಯದ ಸೊಬಗು ಗುಡಿ ಕಾಣು ಮನದಲ್ಲಿ - ಶ್ರೀವೆಂಕಟ// ಶ್ರೀರಂಗ ಕಟ್ಟಿ ಯಲ್ಲಾಪುರ.

ಆತ್ಮನಲ್ಲಿ ಪರಮಾತ್ಮನಿದ್ದಾನೆ..!
bottom of page