top of page

ಅರಣ್ಯದ ನಡುವೆ ಆಧ್ಯಾತ್ಮ ಮತ್ತು ಅಟ್ಟಹಾಸ

ಅರಣ್ಯವನ್ನು ಇಂದು ಅತ್ಯಂತ ಸಂಕುಚಿತ ಅರ್ಥದಲ್ಲಿ ನಿರ್ವಹಿಸಲಾಗುತ್ತಿದೆ. ಅರಣ್ಯವೆಂದರೆ ಅದು ಕೇವಲ ಮರಗಿಡಗಳ ಕೂಟವಲ್ಲ. ಗಿಡ, ಮರ, ಅಣಬೆ, ಆರ್ಕಿಡ್, ಮುಳ್ಳು, ಪೊದೆ, ಬಳ್ಳಿ, ಬಿದಿರು, ಬೆತ್ತ, ಬಿಳಲು ಮುಂತಾದ ಸಸ್ಯ ಸಂಕುಲವಲ್ಲದೆ, ಮರಗಿಡಗಳನ್ನು ಆಶ್ರಯಿಸಿ ಬದುಕುವ ನೂರಾರು ಬಗೆಯ ಪ್ರಾಣಿ, ಪಕ್ಷಿ, ಸಸ್ತನಿ, ಕ್ರಿಮಿ, ಕೀಟಗಳ ಒಕ್ಕೂಟವೇ ಅರಣ್ಯ. ಈ ಎಲ್ಲ ಜೀವಿಗಳಂತೆ ಮನುಷ್ಯನೂ ಒಂದು ಜೀವಿಯಾಗಿ ಸಹಸ್ರಾರು ವರ್ಷಗಳಿಂದ ಕಾಡಿನಲ್ಲಿ ಬದುಕಿ, ಪರಂಪರಾಗತ ಬದುಕನ್ನು ರೂಢಿಸಿಕೊಂಡು ಬಂದಿದ್ದಾನೆ. ಇವೆಲ್ಲವೂ ಸೇರಿ ಒಂದು ಅರಣ್ಯ. ಇಂಥ ಸಂಕೀರ್ಣ ಸ್ವರೂಪದ ಅರಣ್ಯವನ್ನು ಆಧುನಿಕ ಮನುಷ್ಯ ತನ್ನ ಸ್ವತ್ತು ಎಂದೂ ಇದು ಇರುವುದೇ ತನಗಾಗಿ ಎಂದೂ ಭಾವಿಸಿದ್ದೇ ಮೊದಲ ತಪ್ಪು. ತನ್ನ ಸುಖಕ್ಕಾಗಿ ಯಾವುದೇ ಜೀವ ಸಂಕುಲವನ್ನು ಅಹುತಿ ತೆಗೆದುಕೊಳ್ಳಬಯಸುವ ಅವನ ಸ್ವಾರ್ಥ ಇವತ್ತಿನ ಏನೆಲ್ಲ ದುರಂತಗಳಿಗೆ ಎಡೆಮಾಡಿಕೊಟ್ಟಿದೆ. ಆದರೆ ನಿಸರ್ಗದ ನಿಯಮದಲ್ಲಿ ಮನುಷ್ಯನಂತೆಯೇ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಸೃಷ್ಟಿಯ ಸಚರಾಚರ ಜೀವರಾಶಿಗಳೂ ಒಂದಕ್ಕೊಂದು ಪೂರಕವಾಗಿ ಬದುಕು ಸಾಗಿಸಿದಾಗ ಮಾತ್ರ ಸೃಷ್ಟಿಯ ಸಮತೋಲನ ಸಾಧ್ಯ. ಇದು ಗೊತ್ತಿದ್ದೂ ಆಧುನಿಕ ಮನುಷ್ಯ ನಿಸರ್ಗದ ಸಹಜ ಚೇತನಕ್ಕೆ ಅಡ್ಡಗಾಲು ಹಾಕುತ್ತಾ ಬಂದಿದ್ದಾನೆ. ಆಸೆ, ಅಹಂಕಾರ ಮತ್ತು ಅಜಾಗರೂಕತೆಯ ಫಲವೇ ಇದೀಗ ಉಂಟಾಗಿರುವ ಪಶ್ಚಿಮ ಘಟ್ಟಗಳ ವಿವಾದ. ಅರಣ್ಯ ಎನ್ನುವುದು ಅಭಿವೃದ್ಧಿಯ ಉಪಕರಣ ಹಾಗೂ ಸ್ವೇಚ್ಚಾಚಾರದ ತಾಣ ಎಂದು ಭಾವಿಸುವವರು ನಿಜಕ್ಕೂ ಮೂರ್ಖರು. ಅರಣ್ಯದ ಮೇಲಿನ ಈ ರೀತಿಯ ಆಕ್ರಮಣ ಹಿಂದಿನಿಂದಲೂ ನಡೆದು ಬಂದಿದೆ. ಬ್ರಿಟೀಷರು ಬಂದಾಗಿನಿಂದ ಅರಣ್ಯ ಆರ್ಥಿಕ ಚಟುವಟಿಕೆಯ ಅಂಗವಾಯಿತು. ನಮ್ಮ ಕಾಡುಗಳನ್ನು ಅವರು ವಾಣಿಜ್ಯ ಬೆಳೆಗಳನ್ನು ಬೆಳೆಯುವ ಎಸ್ಟೇಟುಗಳನ್ನಾಗಿ ಮಾರ್ಪಡಿಸಲು ತೊಡಗಿದರು. ಅರಣ್ಯದ ಸಹಜ ಉತ್ಪನ್ನಗಳನ್ನು ನಂಬಿ ಸ್ವತಂತ್ರವಾಗಿ ಬದುಕುತ್ತಿದ್ದ ಗಿರಿಜನರು ಅಂದಿನಿಂದ ಎಸ್ಟೇಟುಗಳಲ್ಲಿ ದುಡಿಯುವ ತೊತ್ತುಗಳಾದರು ಇಲ್ಲವೇ ನಿರಾಶ್ರಿತರಾದರು. ಆಕಾಶಕ್ಕೆ ಮೈಚಾಚಿದ್ದ ಬೃಹತ್ ಮರಗಳು ನೆಲಕ್ಕುರುಳಿದವು. ಸಮೃದ್ಧ ಜೀವ ವೈವಿಧ್ಯದ ಕಣಿವೆಗಳು ತೋಟಗಳಾಗಿ ಮಾರ್ಪಾಟಾದವು. ಅವರ ಬಂದೂಕಿನ ನಳಿಕೆಯಲ್ಲಿ ಪ್ರಾಣಿ ಪಕ್ಷಿಗಳು ಸಾಯತೊಡಗಿದವು. ಆದರೆ ನಮ್ಮ ಸ್ವಾತಂತ್ರ್ಯ ಬಂದ ನಂತರ ಪರಿಸ್ಥಿತಿ ಬದಲಾಯಿತೇ? ಸರ್ಕಾರಗಳು ಮತ್ತು ಅರಣ್ಯ ಇಲಾಖೆಯೇ ನವ ವಸಾಹತುಶಾಹಿಯ ಪ್ರತಿನಿಧಿಯಾದದ್ದು ಮತ್ತೊಂದು ದುರಂತ. ಅಸೆಬುರುಕ ರಾಜಕಾರಣಿಗಳು, ಅವರಿಗೆ ಪೂರಕವಾದ ಅಧಿಕಾರಿಗಳು, ಸ್ಪಷ್ಟ ನೀತಿ ನಿಯಮಗಳಿಲ್ಲದ ಆಡಳಿತ ವ್ಯವಸ್ಥೆಯಿಂದಾಗಿ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಶೇ. 33ರಷ್ಟಿದ್ದ ಅರಣ್ಯ ಇಂದು ಶೇ. 11ಕ್ಕೆ ಇಳಿದು ನಿಂತಿದೆ! ಹಾಗಾದರೆ ಅರಣ್ಯ ಸಂರಕ್ಷಣೆಗಾಗಿಯೇ ಹುಟ್ಟಿಕೊಂಡ ಸ್ವತಂತ್ರ ಕರ್ನಾಟಕದ ಬೃಹತ್ ಇಲಾಖೆಯೊಂದು ಮಾಡಿದ್ದಾದರೂ ಏನು? ಇಂಥ ಅರಣ್ಯಾಭಿವೃದ್ಧಿಗಾಗಿ ಒಂದು ಇಲಾಖೆ ಬೇಕಿತ್ತೇ? ಒಂದು ರೀತಿಯಲ್ಲಿ ‘ನೀತಿ’ಯೇ ಇಲ್ಲದ ‘ಅರಣ್ಯನೀತಿ’ ಇದಾಗಿದೆ. ಹಾಗೆಂದು ಇದು ಕೇವಲ ಅರಣ್ಯ ಇಲಾಖೆಯೊಂದರ ವೈಫಲ್ಯವಲ್ಲ. ಇಡೀ ವ್ಯವಸ್ಥೆಯ, ಜನತೆಯ ವೈಫಲ್ಯ. ಪಶ್ಚಿಮ ಘಟ್ಟಗಳನ್ನು ಕುರಿತಂತೆ ಕರ್ನಾಟಕದಲ್ಲಿ ಈಗ ಎದ್ದಿರುವ ವಿವಾದ ಮತ್ತು ನಡೆಯುತ್ತಿರುವ ಪರ-ವಿರೋಧಗಳ ಚರ್ಚೆ ಈ ವೈಫಲ್ಯದ ದೃಷ್ಟಿಯಿಂದ ಬಹು ಮುಖ್ಯವಾದದ್ದು. ವಿಶ್ವಪರಂಪರೆಯ ಪಟ್ಟಿಯಲ್ಲಿ ಪಶ್ಚಿಮ ಘಟ್ಟಗಳನ್ನು ಸೇರಿಸುವ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ಸರ್ಕಾರ ಮತ್ತು ಅದರ ಪರವಾದ ಗುಂಪು ಅರಣ್ಯವನ್ನು ಉತ್ಪಾದನೆಯ ಒಂದು ಭೌತಿಕ ವಸ್ತು ಎಂದು ಭಾವಿಸಿದೆ. ಅರಣ್ಯದ ಮಂತ್ರಿಯೂ ಸೇರಿದಂತೆ ಶಾಸಕರು ಹಾಗೂ ಮತ್ತಿತರರ ಅಭಿವೃದ್ಧಿ ಪರಿಕಲ್ಪನೆ ಯಾಂತ್ರಿಕವಾದದ್ದು ಮತ್ತು ಸಾಂಪ್ರದಾಯಿಕವಾದದ್ದು. ಇವರಿಗೆ ಅರಣ್ಯವೆಂಬುದು ಒಂದು ಉದ್ಯಮ ಅಥವಾ ಆದಾಯದ ಒಂದು ಮೂಲ. ಹೀಗೆ ಯೋಚಿಸುವ ಯಾರೂ ಅರಣ್ಯವನ್ನು ವಿಶಾಲಾರ್ಥದಲ್ಲಿ ನೋಡುತ್ತಿಲ್ಲ. ಭ್ರಷ್ಟವ್ಯವಸ್ಥೆಯ ಒಂದು ಭಾಗವಾದ ಆಪೊಶನ ಪ್ರವೃತ್ತಿಯ ಜನರಿಗೆ ತತ್ಕಾಲದ ಸ್ವಾರ್ಥ ಮುಖ್ಯವೇ ಹೊರತು ಭವಿಷ್ಯ ಮುಖ್ಯವಲ್ಲ. ಇಂಥ ಸಂದರ್ಭದಲ್ಲಿ ನಾವು ಅರಣ್ಯವನ್ನು ಹೇಗೆ ಪರಿಭಾವಿಸಬೇಕು ಎಂಬುದೇ ಮುಖ್ಯ. ಅರಣ್ಯ ಕೇವಲ ಭೌತಿಕ ಸಂಪತ್ತಲ್ಲ. ಅದೊಂದು ಅನಾದಿ ಕಾಲದಿಂದ ರೂಪುಗೊಂಡ ಅಖಂಡ ಜೀವತಾಣ. ಅರಣ್ಯಕ್ಕೊಂದು ಜೀವವಿದೆ, ಆತ್ಮವಿದೆ. ಅದಕ್ಕೆ ಅದರದೇ ಆದ ನೀತಿ, ನಿಯಮ, ಪರಿಚಲನೆ ಇದೆ. ಕಾಡು ಬಾಹ್ಯದಲ್ಲಿ ಸ್ಥಾವರದಂತೆ ಕಂಡರೂ ಆಂತರ್ಯದಲ್ಲಿ ನಿರಂತರ ಚಲನಶೀಲ ಹಾಗೂ ಸೃಜನಶೀಲವಾದದ್ದು. ಹಾಗಾಗಿ ಅದಕ್ಕೆ ತನ್ನದೇ ಆದ ನಿವೇದನೆಯೂ ಇದೆ. ಅದು ಕೇವಲ ಮನುಷ್ಯನಿಗಾಗಿ ಅಲ್ಲ. ಸಚರಾಚರ ಜೀವರಾಶಿಗಳನ್ನು ಪೊರೆಯುವ ಮಹಾ ಮಾತೆಯ ಸ್ಥಾನ ಅದಕ್ಕಿದೆ. ಜಗತ್ತಿನ ಜೀವಜಾಲಕ್ಕೆ ಹೇಗೆ ಆದಿ ಸ್ವರೂಪವೋ ಹಾಗೆ ಮನುಷ್ಯನ ಸಂಸ್ಕೃತಿ ಉಗಮಕ್ಕೆ ಬುನಾದಿಯಾದದ್ದೇ ಈ ಕಾಡು. ಆದ್ದರಿಂದಲೇ ಕಾಡು ಕೇವಲ ಮನುಷ್ಯನ ವ್ಯವಹಾರದ, ವ್ಯಾಪಾರದ ಸಂಗತಿಯಲ್ಲ. ಅನಾದಿ ಕಾಲದಿಂದ ಅರಣ್ಯದಲ್ಲಿ ಬಾಳ್ವೆ ನಡೆಸಿಕೊಂಡು ಬಂದಿರುವ ನಮ್ಮ ಆದಿವಾಸಿಗಳು ಅರಣ್ಯವನ್ನು ದೈವವಾಗಿ ಭಾವಿಸುತ್ತಾರೆ. ಆದ್ದರಿಂದಲೇ ಅವರು ಅರಣ್ಯವನ್ನು ದೈವ ಬನಗಳನ್ನಾಗಿ ಪರಿವರ್ತಿಸಿದರು. ತಮ್ಮ ತಮ್ಮ ಪರಿಧಿಯ ಅರಣ್ಯಗಳನ್ನು ಕಾಪಾಡಲು ಗಡಿದೈವಗಳನ್ನು ಸೃಷ್ಟಿಸಿದರು. ಗುಡ್ಡಬೆಟ್ಟಗಳನ್ನು ಆರಾಧಿಸಿದರು. ಮಕ್ಕಳಿಗೆ ಗಿಡಮರಗಳ, ನದಿತೊರೆಗಳ ಹೆಸರನ್ನಿಟ್ಟರು. ಹೀಗೆ ಒಂದು ಆಧ್ಯಾತ್ಮದ ಪರಿಧಿಯನ್ನು ರಚಿಸಿಕೊಂಡು ತಮ್ಮ ಕಾಡನ್ನು ತಾವೇ ರಕ್ಷಿಸಿಕೊಂಡು ಬಂದರು. ಹಾಗಾದರೆ ನಿಜವಾದ ಅರ್ಥದಲ್ಲಿ ಕಾಡು ನಾಶವಾಗತೊಡಗಿದ್ದು ಯಾವಾಗ? ಈಗಾಗಲೇ ಪ್ರಸ್ತಾಪಿಸಿದಂತೆ ಬ್ರಿಟೀಷರ ಕಾಲದಲ್ಲಿ ಅವ್ಯಾಹತವಾಗಿ ಅರಣ್ಯ ನಾಶವಾಯಿತು. ಸ್ವಾತಂತ್ರ್ಯ ಬಂದ ನಂತರದ ನಮ್ಮ ‘ಅಭಿವೃದ್ಧಿ’ ರಾಜಕಾರಣ ಕೂಡ ಮುಖ್ಯ ಗುರಿಯಾಗಿಸಿಕೊಂಡಿದ್ದು ಅರಣ್ಯವನ್ನೇ. ವಿದ್ಯುತ್ತಿಗೆ, ಗಣಿಗಾರಿಕೆಗೆ, ನೀರಾವರಿಗೆ ಮುಂತಾಗಿ ವಶಪಡಿಸಿಕೊಳ್ಳಲಾದ ಅರಣ್ಯದ ವಿಸ್ತಾರ ಗಮನಿಸಿದರೆ ನಿಜಕ್ಕೂ ದಿಗಿಲಾಗುತ್ತದೆ. ನೀರಾವರಿಗಾಗಿ 6,722,29 ಹೆಕ್ಟೇರು, ಜಲವಿದ್ಯುತ್ ಯೋಜನೆಗಾಗಿ 5183.6 ಹೆಕ್ಟೇರು, ಗಣಿಗಾರಿಕೆಗಾಗಿ 381-814 ಹೆಕ್ಟೇರು, ರೈಲ್ವೆಗಾಗಿ 348.88 ಹೆಕ್ಟೇರು, ಇತರೆ ವಿವಿಧ ಅಭಿವೃದ್ಧಿಗಳಿಗಾಗಿ ವಶಪಡಿಸಿಕೊಂಡ ಅರಣ್ಯ 4550-1348 ಹೆಕ್ಟೇರು, ಹೀಗೆ ಒಟ್ಟು ಪರಿವರ್ತನೆಯಾದ ಅರಣ್ಯ 11,464.63 ಹೆಕ್ಟೇರುಗಳು. ಇದು ಅಧಿಕೃತ ದಾಖಲೆ. ಆದರೆ ಬಲಾಢ್ಯರ ಒತ್ತುವರಿಗಾಗಿ ಬಲಿಯಾದ ಸಾವಿರಾರು ಹೆಕ್ಟೇರುಗಳಾಗಲೀ, ಗಣಿಗಾರಿಕೆಯ ತಿಮಿಂಗಿಲಗಳ ಅನಧಿಕೃತ ಒತ್ತುವರಿಗಳಾಗಲೀ ಅರಣ್ಯ ಲೂಟಿಕೋರರಿಗೆ ಬಲಿಯಾದ ಅಸಂಖ್ಯಾತ ಪ್ರದೇಶಗಳಾಗಲೀ ಎಲ್ಲಿಯೂ ದಾಖಲಾಗಿಲ್ಲ. ಒಟ್ಟಿನಲ್ಲಿ ನಮ್ಮ ಸಂವಿಧಾನವೇ ಒಪ್ಪಿಕೊಂಡಿರುವಂತೆ ಒಟ್ಟು ಭೂಭಾಗದ ಶೇ. 33.3ರಷ್ಟು ಇರಬೇಕಾಗಿದ್ದ ಅರಣ್ಯ ಇಂದು ಕೇವಲ ಶೇ. 16ಕ್ಕೆ ಇಳಿದಿದೆ. ತಜ್ಞರ ಅಂದಾಜಿನ ಪ್ರಕಾರ ಕರ್ನಾಟಕದ ಒಟ್ಟು ಶೇ. ಅರಣ್ಯ ಕೇವಲ 11ರಷ್ಟು ಮಾತ್ರ. ವಿಶ್ವದ ಇತರೆ ದೇಶಗಳ ಅರಣ್ಯ ಸಂಪತ್ತನ್ನು ನೋಡಿಯಾದರೂ ನಮಗೆ ನಾಚಿಕೆ ಬರಬೇಕು. ಜಪಾನ್ ಶೇ. 61, ರಷ್ಯಾ ಶೇ. 39, ಅಮೇರಿಕಾ ಶೇ. 30, ಭಾರತ 23, ಆದರೆ ಕರ್ನಾಟಕ ಶೇ. 11. ಕರ್ನಾಟಕದ ಈ ದುಃಸ್ಥಿತಿಯ ಹಿನ್ನೆಲೆಯಲ್ಲಿ ನಾವು ನಮ್ಮ ಅರಣ್ಯಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ. ಪ್ರಪಂಚದ 18 ಬಹುಮುಖ್ಯ ಜೀವವೈವಿಧ್ಯ ಕಾಡುಗಳಲ್ಲಿ ನಮ್ಮ ಪಶ್ಚಿಮ ಘಟ್ಟವೂ ಒಂದು. ಪಶ್ಚಿಮ ಘಟ್ಟಗಳ ಹೃದಯ ಭಾಗ ಕರ್ನಾಟಕದ್ದು. ಇಲ್ಲಿರುವ ವಿವಿಧ ಬಗೆಯ ಬಣ್ಣದ ಓತಿಗಳು, ಕೆಂಜಳಿಲುಗಳು, ಬರ್ಕ, ಕಾಡುಪಾಪ, ಸಿಂಗಳೀಕ, ಕಪ್ಪು ಚಿರತೆ, ಕಾಳಿಂಗಸರ್ಪ, ವೈವಿಧ್ಯಮಯ ಪಕ್ಷಿಕೂಜನ, ರಂಗಿನ ಪಾತರಗಿತ್ತಿಗಳು, ಬೆಟ್ಟಗಳ ಕಣಿವೆಯಾದ್ಯಂತ ಅರಳಿ ನಳನಳಿಸುವ ಅಸಂಖ್ಯಾತ ಪುಷ್ಪಗಳು ಹಾಗೂ ಆರ್ಕಿಡ್‍ಗಳ ನೂರಾರು ಬಗೆಗಳು ಇಲ್ಲಿ ಮಾತ್ರ ಸಿಗಬಲ್ಲಂಥವು. ಇವುಗಳಲ್ಲಿ ಅಳಿವಿನಂಚಿನ ಪ್ರಭೇದಗಳೇ ಅಧಿಕ. ನಿತ್ಯ ಹರಿದ್ವರ್ಣದ ಕಾಡುಗಳೆನಿಸಿದ ಪಶ್ಚಿಮ ಘಟ್ಟದ ಅರಣ್ಯಗಳು ಪ್ರಪಂಚದಲ್ಲಿಯೇ ಅಪರೂಪದ ಭೀಮಕಾಯದ ಮರಗಳನ್ನು ಹೊಂದಿದ್ದು ಜೀವ ಜಗತ್ತಿನ ಎಲ್ಲ ವಿಸ್ಮಯಗಳನ್ನು ಬಿಂಬಿಸುವ ತಾಣಗಳಾಗಿವೆ. ಧೂಪ, ಧೂಮ, ಮಡ್ಡಿ, ಮತ್ತಿ, ಉಮ್ಮತ್ತಿ, ಚಂದನ, ಶಿವನೆ, ಶ್ರೀಗಂಧ, ಉಗುರಾವಿ, ಸಳ್ಳೆ, ತಾರೆ, ದೇವದಾರು, ದೇವಗರಿಗೆ, ಚೆನ್ನಂಗಿ, ಸುರಗಿ, ಸುರಹೊನ್ನೆ, ಹೆಬ್ಬಲಸು, ಹೊನ್ನೆ, ಉಣಾಲು, ದಾಲ್ಚಿನ್ನಿ, ತಾಳೆ, ಬಗನಿ, ಬಲ್ಗೆ, ಬೆತ್ತ, ಬಿದಿರು, ಕಾಸರಕ, ಅಂಟುವಾಳ, ಅಗಸೆ, ಅಶೋಕ ಇತ್ಯಾದಿ ಸಾವಿರಾರು ಬಗೆಯ ಬೃಹತ್ ಮರಗಳಿದ್ದು ಅವುಗಳಲ್ಲಿ ಅನೇಕ ಔಷಧೀಯ ಗುಣಪಡೆದವುಗಳಿವೆ. ಇಂಥ ಅಪರೂಪದ ಸಂಪತ್ತನ್ನು ಕಾಪಾಡಬೇಕಾದವರು ಯಾರು? ಈಗಾಗಲೇ ಇಂಥ ಸಮೃದ್ಧ ಮರಗಳನ್ನು ಇಲ್ಲವಾಗಿಸಿ, ರೋಗಗ್ರಸ್ತ ಕಾಗದದ ಕಾರ್ಖಾನೆಗಳನ್ನು ಸಲಹುವ ನೆಪದಲ್ಲಿ ಪಶ್ಚಿಮಘಟ್ಟಗಳ ಸಾವಿರಾರು ಹೆಕ್ಕೇರುಗಳಲ್ಲಿ ನಿರರ್ಥಕ ಅಕೇಶಿಯಾ ಬೆಳೆಯಲಾಗುತ್ತಿದೆ. ಇದರ ಹಿಂದಿರುವ ಹುನ್ನಾರಗಳನ್ನು ವಿವರಿಸಲು ಇಲ್ಲಿ ಸಾಧ್ಯವಿಲ್ಲ. ಇಂತಹ ಮೆದುಳು ಇಲ್ಲದ ಯೋಜನೆಗಳನ್ನು ನಿಯಂತ್ರಿಸುವವರು ಯಾರು? ಅರಣ್ಯದಲ್ಲಿರುವ ಗಿರಿಜನರಿಗೆ ತೊಂದರೆಯಾಗುತ್ತದೆ ಎಂಬ ನೆಪವೊಡ್ಡಿ ಪಶ್ಚಿಮಘಟ್ಟಗಳನ್ನು ವಿಶ್ವಪರಂಪರೆ ಪಟ್ಟಿಗೆ ಸೇರಿಸಬಾರದೆಂಬುವುದು ಕೆಲವರ ವಾದವಾಗಿತ್ತು. ಆದರೆ ನಮ್ಮದೇ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಈ ಐವತ್ತು ವರ್ಷಗಳಲ್ಲಿ ಗಿರಿಜನರನ್ನು ಯಾರು ತಾನೆ ರಕ್ಷಿಸಿದ್ದಾರೆ? ಹಾಗೊಂದು ವೇಳೆ ಸರ್ಕಾರ ಅವರ ಪರವಾಗಿ ಸಕ್ರಿಯ ಯೋಜನೆಗಳನ್ನು ರೂಪಿಸಿ ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತಂದಿದ್ದಲ್ಲಿ ‘ನಕ್ಸಲ್’ ಎಂಬ ಅಡ್ಡ ಹಾದಿಯನ್ನು ಗಿರಿಜನ ಯುವಕರು ಹಿಡಿಯುತ್ತಿದ್ದರೆ? ಚಾರ್ಮಾಡಿ, ಕುದ್ರೆಮುಖ, ಆಗುಂಬೆ, ಕೊಡಚಾದ್ರಿಯ ದಟ್ಟಾರಣ್ಯಗಳು ಇಷ್ಟು ಪ್ರಕ್ಷುಬ್ಧವಾಗಲು ಸರ್ಕಾರವೇ ಕಾರಣವಲ್ಲವೆ? ಗಿರಿಜನರ ವಕ್ತಾರರಂತೆ ಮಾತನಾಡುವ ಮಧ್ಯವರ್ತಿಗಳು ತಮ್ಮ ಕೆಲವು ಅಜೆಂಡಾಗಳ ಮೂಲಕ ಮಾತನಾಡುತ್ತಿದ್ದಾರೆಯೇ ಹೊರತು ಅವರ ಭಾವನೆಗಳನ್ನು ಅರ್ಥ ಮಾಡಿಕೊಂಡಿಲ್ಲ. ಅವರ ಸಂಕಷ್ಟಗಳನ್ನು ಅರಿತಿಲ್ಲ. ಕುದ್ರೆಮುಖ, ಚಾರ್ಮಾಡಿ ಮತ್ತು ಆಗುಂಬೆಯ ಗೌಡ್ಲು ಮತ್ತು ಮಲೆಕುಡಿಯರು, ಕೊಡಗಿನ ಕುಡಿಯರು ಮತ್ತು ಯರವರು, ಉತ್ತರ ಕನ್ನಡದ ಕುಣಬಿಯರು, ಗೌಳಿಗರು, ಸಿದ್ಧಿಯರು, ಹೆಗ್ಗಡದೇವನ ಕೋಟೆ, ಕಬಿನಿ ಹಾಗೂ ನಾಗರಹೊಳೆಯ ಜೇನು ಕುರುಬರು, ಕಾಡು ಕುರುಬರು, ಶರಾವತಿ ಜಲನಯನ ಪ್ರದೇಶದ ಹಸಲರು ಮತ್ತು ಕುಣಬಿಯರು ಮುಂತಾಗಿ ನಮ್ಮ ಅಭಿವೃದ್ಧಿ ಯೋಜನೆಗಳು ಹಾಗೂ ಬಲಾಢ್ಯರ ತೋಟ ವಿಸ್ತಾರಣೆಗಾಗಿ ತಮ್ಮನ್ನು ತಾವೇ ತೆತ್ತುಕೊಂಡ ಪರಿ ಅತ್ಯಂತ ಅಮಾನವೀಯ. ಇದರಲ್ಲಿ ಬಹುತೇಕರಿಗೆ ಇವತ್ತಿಗೂ ಪುನರ್ವಸತಿ ಸಿಕ್ಕಿಲ್ಲ. ಅಥವಾ ಅವರು ವಾಸಿಸುವ ತುಂಡು ಜಾಗಕ್ಕೆ ಅಧಿಕೃತ ಮನ್ನಣೆಯೂ ಸಿಕ್ಕಿಲ್ಲ. ಯೋಜನೆಗಳು ಅನುಷ್ಠಾನಗೊಳ್ಳುತ್ತಿದ್ದಂತೆ ಮರೆತೇಬಿಡುವ ಜಾಯಮಾನ ನಮ್ಮ ವ್ಯವಸ್ಥೆಯದು. ಬಹುಸಂಖ್ಯಾತರ ಅನುಕೂಲಕ್ಕಾಗಿ ಎಂಬ ಹಣೆ ಪಟ್ಟಿಯಲ್ಲಿ ರೂಪಿಸುವ ಇಂಥ ಯೋಜನೆಗಳು ಅಲ್ಪಸಂಖ್ಯಾತರನ್ನು ನಿರ್ನಾಮಗೊಳಿಸುತ್ತವೆ. ಇಂಥ ವಿಕೃತ ಅಭಿವೃದ್ಧಿ ಮಾದರಿಗೆ ಏನನ್ನಬೇಕು? ಹೀಗೆ ನಿಸರ್ಗದ ನಾಶದ ಜೊತೆಗೇ ಗಿರಿಜನರ ಆತ್ಮಸ್ಥೈರ್ಯದ ನಾಶವೂ ನಿರಂತರವಾಗಿ ನಡದೇ ಇದೆ. ಆದರೆ ಇದೇ ಸಂದರ್ಭದಲ್ಲಿ ಅತ್ಯಂತ ಪ್ರಭಾವಿ ವಲಯದಲ್ಲಿರುವ ಕಾಡುಗಳ್ಳರು, ಗಣಿಲೂಟಿಕೋರರು. ಒತ್ತುವರಿ ಮಾಡಿಕೊಂಡ ಭೂಮಾಲೀಕರು ಕಾಡಿನಿಂದ ಅಪಾರ ಲಾಭ ಪಡೆದಿದ್ದಾರೆ. ಪಶ್ಚಿಮ ಘಟ್ಟ ಪ್ರದೇಶದ ಅದೆಷ್ಟು ಸಾವಿರ ಹೆಕ್ಟೇರು ಪ್ರದೇಶವನ್ನು ಕಾಫಿ, ಟೀ, ಕೋಕ್ ಮತ್ತು ರಬ್ಬರ್ ಎಸ್ಟೇಟುಗಳನ್ನು ವಿಸ್ತರಿಸಲು ನೀಡಲಾಗಿದೆ ಎಂಬ ನಿಖರ ಅಂಕಿ ಅಂಶಗಳನ್ನು ಸರ್ಕಾರ ಎಂದೂ ನೀಡಿಲ್ಲ. ನೀಡುವುದೂ ಇಲ್ಲ. ಡಾ. ಹಿ.ಚಿ. ಬೋರಲಿಂಗಯ್ಯ ಕರ್ನಾಟಕದ ಮಲಿನೋವಸ್ಕಿ ಎಂದು ನಾವೆಲ್ಲ ಪ್ರೀತಿಯಿಂದ ಕರೆಯುವ ಪ್ರೊ.ಹಿ.ಚಿ.ಬೋರಲಿಂಗಯ್ಯ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹಿತ್ತಲ ಪುರದವರು ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಎಂ.ಎ.ಪದವಿಯಲ್ಲಿ ಚಿನ್ನದ ಪದಕ ಪಡೆದ ಅವರು ಡಾ.ಚಂದ್ರಶೇಖರ ಕಂಬಾರರ ಮಾರ್ಗದರ್ಶನದಲ್ಲಿ ಪಿಎಚ್,ಡಿ. ಪದವಿಯನ್ನು ಪಡೆದಿರುತ್ತಾರೆ.     ಕನ್ನಡ ವಿಶ್ವ ವಿದ್ಯಾಲಯದ ಕುಲಪತಿ,ಕುಲ ಸಚಿವ,ಲಲಿತ ಕಲಾ ಮತ್ತು ಸಮಾಜ ವಿಜ್ಞಾನ ನಿಕಾಯಗಳ ಡೀನ್ ಆಗಿ ಅಪಾರವಾದ ಆಡಳಿತಾತ್ಮಕ ಅನುಭವ ಹೊಂದಿರುವ ಇವರು,ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್ ಆಗಿ, ಸದಸ್ಯರಾಗಿ, ಕನ್ನಡ ವಿಶ್ವ ವಿದ್ಯಾಲದ ಬುಡಕಟ್ಟು ಅಧ್ಯಯನ ವಿಭಾಗದ  ಮುಖ್ಯಸ್ಥರಾಗಿ ಜಾನಪದ ಮತ್ತು ಬುಡಕಟ್ಟು ಅಧ್ಯಯನ ಕ್ಷೇತ್ರದ ಆಯಾಮಗಳನ್ನು ವಿಸ್ತರಿಸಲು ಕಾರಣ ಕರ್ತರಾಗಿ  ಜಾನಪದ ಮತ್ತು ಬುಡಕಟ್ಟು ಅಧ್ಯಯನ ಕ್ಷೇತ್ರದ ಆಯಾಗಳನ್ನ  ವಿಸ್ತರಿಸಲು ಕಾರಣ ಕರ್ತರಾಗಿದ್ದಾರೆ. ಪ್ರಶಸ್ತಿ: ಗಿರಿಜನ ಸಂಸ್ಕೃತಿ ಅಧ್ಯಯನಕ್ಕಾಗಿ ಬರೋಡಾದ ಭಾಷಾ ಸಂಶೋಧನಾ ಪರಿಷತ್ತಿನ ಪ್ರಶಸ್ತಿ,ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜಾನಪದ ತಜ್ಞ ಪ್ರಶಸ್ತಿ,ಆರ್ಯಭಟ ಪ್ರಶಸ್ತಿ,ಮಂಟೇಸ್ವಾಮಿ ಸಾಹಿತ್ಯ ಪ್ರಶಸ್ತಿ,,ಶಿವರಾಮ ಕಾರಂತ ಜಾನಪದ ಪ್ರಶಸ್ತಿ,ಕಾವ್ಯಾನಂದ ಪ್ರಶಸ್ತಿ ಹಾಗು ನೂರಾರು ಸನ್ಮಾನಗಳು ಇವರಿಗೆ ಸಂದಾಯವಾಗಿವೆ. ಪ್ರಕಟಿತ ಕೃತಿಗಳು: ಗಿರಿಜನ ನಾಡಿಗೆ ಪಯಣ,ಸಿದ್ಧಿಯರ ಸಂಸ್ಕೃತಿ,ಕಾಡು ಕಾಂಕ್ರೀಟ ಮತ್ತು ಜಾನಪದ,ಗಿರಿಜನರು,ಕರ್ನಾಟಕ ಜಾನಪದ ಕಲೆಗಳ ಕೋಶ,ಮಂಟೆ ಸ್ವಾಮಿ ಮಹಾಕಾವ್ಯ, ಗೊಂಡರ ರಾಮಾಯಣ,ಬುಡಕಟ್ಟು ದೈವಾರಾಧನೆ,  ಗಿರಿಜನ ಕಾವ್ಯ,ಸಂಸ್ಕೃತಿ ಮತ್ತು ವಿಸ್ಮೃತಿ ಸಂಕಥನ,ಬುಡಕಟ್ಟು ಚಿತ್ರ ಸಂಪುಟ,ಆನೆ ಕಾಡು (ಜೇನು ಕುರುಬರ ಜೀವನಾಧಾರಿತ ಕಾದಂಬರಿ) ಹೀಗೆ ೨೫ ಕ್ಕು ಮೇಲ್ಪಟ್ಟು ಕೃತಿಗಳನ್ನು ರಚಿಸಿದ್ದಾರೆ.ತಮ್ಮ ಸರಳವಾದ ನಡೆ ನುಡಿಗಳಿಂದ ನಾಡಿನಾದ್ಯಂತ ಪರಿಚಿತರಾಗಿರುವ ಹಿಚಿಬೊ ಅವರು ಸ್ನೇಹಪರ ವ್ಯಕ್ತಿ. ಸಂಪಾದಕ.

ಅರಣ್ಯದ ನಡುವೆ ಆಧ್ಯಾತ್ಮ ಮತ್ತು ಅಟ್ಟಹಾಸ
bottom of page