ಅದ್ಭುತ ಗ್ರಂಥಪಾಲಕ ಜಿ.ಎಂ.ವೇದೇಶ್ವರ
ಇವತ್ತು ರಾಷ್ಟ್ರೀಯ ಗ್ರಂಥಪಾಲಕರ ದಿನ.ಸುಪ್ರಸಿದ್ದ ಗ್ರಂಥಾಲಯ ವಿಜ್ಞಾನಿ,ಗಣಿತ ಶಾಸ್ತ್ರಜ್ಞ ಕನ್ನಡಿಗ ಎಸ್.ಆರ್. ರಂಗನಾಥ್ ಅವರ ಜನ್ಮದಿನವನ್ನು ರಾಷ್ಟ್ರೀಯ ಗ್ರಂಥಪಾಲಕರ ದಿನವನ್ನಾಗಿ ಆಚರಿಸಲಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈದಿನ ಇನ್ನೋರ್ವ ಅದ್ಭುತ ಗ್ರಂಥಪಾಲಕ ಗೋಕರ್ಣದ "ದಿ.ಗಣಪತಿ ಮಂಜುನಾಥ ವೇದೇಶ್ವರ" ಅವರನ್ನು ಕೂಡಾ ಸ್ಮರಿಸಲೇ ಬೇಕು.ಐದು ವರ್ಷಗಳ ಹಿಂದೆ, ತಮ್ಮ 85 ನೇ ವಯಸ್ಸಿನಲ್ಲಿ ನಿಧನರಾದ ಈ ಮಹಾನುಭಾವರ ಅದ್ಭುತ ಸಾಧನೆಯ ವಿವರ ತಿಳಿದರೆ ನೀವು ದಂಗು ಬಡಿದು ಹೋಗುತ್ತೀರಿ..!! ಹೌದು..ಇವರೇ ಗೋಕರ್ಣದ 76 ವರ್ಷ ಹಳೆಯದಾದ ಗೋಕರ್ಣ ಸ್ಟಡಿ ಸರ್ಕಲ್ ಗ್ರಂಥಾಲಯದ ಸ್ಥಾಪಕ ಜಿ.ಎಂ. ವೇದೇಶ್ವರ್. ತಮ್ಮ 18 ನೇ ವಯಸ್ಸಿನಲ್ಲಿ ಪುಸ್ತಕ ಓದುವ ಆಸಕ್ತಿಯಿಂದ 1948 ರಲ್ಲಿ ಆರಂಭಿಸಿದ ಈ ಏಕವ್ಯಕ್ತಿ ಸಾಹಸದ ಗ್ರಂಥಾಲಯದಲ್ಲಿ 38 ಭಾಷೆಗಳ 70 ಸಾವಿರಕ್ಕೂ ಅಧಿಕ ಪುಸ್ತಕಗಳು,ತಾಳೆಗರಿ ಗ್ರಂಥಗಳು,ಹಳೇ ಪೈಂಟಿಂಗ್ಸ್ ಅಪರೂಪದ ಸ್ಟಾಂಪು,ನಾಣ್ಯಗಳಿವೆ..!! ಹಾಗೆಂದು ವೇದೇಶ್ವರ ಶ್ರೀಮಂತರೇನೂ ಅಲ್ಲ. ಸ್ವತಃ ಕಲಾವಿದನಾಗಿ ಗಣಪತಿ ಮೂರ್ತಿ ಮಾಡಿ,ನಾಟಕಗಳಿಗೆ ವೇಷಭೂಷಣ,ಮದುವೆ ಮಂಟಪ ತಯಾರಿಸಿ ಬಂದ ಹಣದಲ್ಲೇ ಜೀವನ ಸಾಗಿಸುವುದರ ಜತೆಗೇ ತನ್ನ ಪರಮ ಆಸಕ್ತಿಯ ಗ್ರಂಥಾಲಯವನ್ನೂ ಕಟ್ಟಿದರು..! 52 ವರ್ಷಗಳ ಕಾಲ ಗ್ರಂಥಾಲಯ ನಡೆಸಿದ ನಂತರ ವೃದ್ಧಾಪ್ಯದ ಕಾರಣದಿಂದ ಇನ್ನು ನಡೆಸಲು ಸಾಧ್ಯವಿಲ್ಲವೆಂದು ಕೈಚೆಲ್ಲಿ ಕೂತಿದ್ದಾಗ, 2001 ರಲ್ಲಿ ಆಪದ್ಭಾಂಧವನಂತೇ ಬಂದವರು ಓರ್ವ ಫ್ರೆಂಚ್ ನಾಟಕ ನಿರ್ದೇಶಕ ಇಲಿಯಾಸ್ ಟೆಬೆಟ್ (Elias Tabet ). ಪ್ರವಾಸಿಯಾಗಿ ಗೋಕರ್ಣ ನೋಡಲು ಬಂದ ಅವರು ಅಪರೂಪದ ಗ್ರಂಥಗಳ ಬೃಹತ್ ಸಂಗ್ರಹದ ಈ ಗ್ರಂಥಾಲಯ ನೋಡಿ ಆಶ್ಚರ್ಯ ಚಕಿತರಾದರು. ತೀರಾ ಜೀರ್ಣಾವಸ್ಥೆಗೆ ತಲುಪಿದ್ದ ಗ್ರಂಥಾಲಯಕ್ಕೆ ಕಾಯಕಲ್ಪ ನೀಡುವ ಪಣ ತೊಟ್ಟರು. ತನ್ನ ಪತ್ನಿ ಡಾಫ್ಟ್ ಪಿಕೆಟ್ (Daphne Piquet) ಜೊತೆಗೂಡಿ, ಫ್ರೆಂಚ್ ಸರಕಾರದ ನೆರವಿನೊಂದಿಗೆ ಪ್ಯಾರಿಸಿನಲ್ಲಿ ಇದಕ್ಕಾಗಿ 45 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ವೇದೇಶ್ವರರ 'ಗೋಕರ್ಣ ಸ್ಟಡಿ ಸರ್ಕಲ್' ಗ್ರಂಥಾಲಯವನ್ನು ವಿಶಾಲವಾದ ಸುಸಜ್ಜಿತ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳಿಸಲು ನೆರವಾದರು ..!! ನಂತರ ಗ್ರಂಥಾಲಯದ ಖ್ಯಾತಿ ಎಲ್ಲೆಡೆ ಹಬ್ಬಿತು.ದೇಶವಿದೇಶಗಳ ಪತ್ರಿಕೆಗಳಲ್ಲಿ ಲೇಖನ ಪ್ರಕಟವಾಯಿತು ಮತ್ತು ಬಿಬಿಸಿ ಕೂಡ ಈ ಗ್ರಂಥಾಲಯದ ಕುರಿತು ಕಾರ್ಯಕ್ರಮವನ್ನು ಬಿತ್ತರಿಸಿತ್ತು. ಬೇಂದ್ರೆ, ಕಾರಂತ, ಅಡಿಗ, ಅನಕೃ, ಮೊಕಾಶಿ,ಚಿತ್ತಾಲ, ತರಾಸು,ವೀ.ಸೀ,ಗೋಕಾಕ್,ಮಾಸ್ತಿ ಮುಂತಾದ ಸಾಹಿತಿಗಳು ಈ ಗ್ರಂಥಾಲಯ ನೋಡಲೆಂದೇ ಗೋಕರ್ಣಕ್ಕೆ ಬರುತ್ತಿದ್ದರಂತೆ.ಗೋಕರ್ಣದಲ್ಲೇ ಇದ್ದ ಗೌರೀಶ ಕಾಯ್ಕಿಣಿಯವರಂತೂ ನಿತ್ಯವೂ ಭೇಟಿ ನೀಡುತ್ತಿದ್ದರು. ಗ್ರಂಥಾಲಯದ ಪುಸ್ತಕಗಳನ್ನೇ ತನ್ನ ಕರುಳ ಬಳ್ಳಿಗಳಂತೇ ನೋಡಿಕೊಳ್ಳುತ್ತಿದ್ದ ವೇದೇಶ್ವರ್ 85 ನೇವಯಸ್ಸಿನಲ್ಲೂ ದಿನಕ್ಕೆ 12 ತಾಸು ಈ ಗ್ರಂಥಾಲಯದಲ್ಲೇ ಕಳೆಯುತ್ತಿದ್ದರು ಎಂದರೆ ಅವರ ಅಗಾಧ ಪುಸ್ತಕ ವ್ಯಾಮೋಹದ ಅರಿವಾದೀತು..!! ಇಂಥಹ ಅದ್ಭುತ ಪುಸ್ತಕ ಪ್ರೇಮಿ ಕಟ್ಟಿ ಬೆಳೆಸಿದ ಅಪರೂಪದ ಗ್ರಂಥಲೋಕವನ್ನು ಗೋಕರ್ಣಕ್ಕೆ ಹೋಗುವವರು ಒಮ್ಮೆಯಾದರೂ ನೋಡಿಬನ್ನಿ. ಅಪರೂಪದ ಗ್ರಂಥಲೋಕ ಕಟ್ಟಿದ ವೇದೇಶ್ವರ ಅವರಿಗೆ ಗೌರವಪೂರ್ವಕ ನಮನಗಳು.. - ಗಿರಿಧರ ಕಾರ್ಕಳ.