ಅಂಜುಬುರುಕಿಯ ರಂಗವಲ್ಲಿ...
ಎರಡು ಕಂಬದ ನಡುವೆ ಒಂದು ಹಗ್ಗದ ಸಾಲು ತೂರಾಡೋ ತಿಳಿಗಾಳಿಗೆ ಸೋಲು ಕಾಣಲೆಂದು ಕೈಯಲಿ ಒಂದು ಉದ್ದನೆ ಕೋಲು ಚಿಂದಿಬಟ್ಟೆಯ ಮೇಲೆ ಸಹಿ ಮಾಡಿದೆ ಬಡತನದ ಪ್ರತಿಬಿಂಬ ಕಣ್ಣಲಿ ಕತ್ತಲೋಡಿಸಬೇಕೆಂಬ ಚಂದ್ರಬಿಂಬ - ಇದು ಮಂಜುನಾಥ ನಾಯ್ಕ ಯಲ್ವಡಿಕವೂರ ಅವರ ಕವನ ಸಂಕಲನ, ‘ಅಂಜುಬುರುಕಿಯ ರಂಗವಲ್ಲಿ’ಯಿಂದ ಆಯ್ದ ಒಂದು ಕವನ, ‘ಡೊಂಬರಾಟದ ಹುಡುಗಿ’ ಸುರುವಾಗುವ ಪರಿ. ಎಚ್ ಎಸ್ ಶಿವಪ್ರಕಾಶ್ ಅವರು ಕನ್ನಡಕ್ಕೆ ತಂದಿರುವ ಜಿಂಗೋನಿಯಾ ಜಿಂಗೋನೆಯ ‘ಮರೆತು ಹೋದ ದೊಂಬರಾಕೆ’ ಸಂಕಲನದ ಈ ಕವಿತೆ ನೋಡಿ: ದೊಂಬರವಳು ಆಯತಪ್ಪದ ಹಾಗೆ ಚಾಚಿ ಎರಡೂ ತೋಳುಗಳನ್ನು ಮುಗುಳುನಗುತ್ತಾ ಅಳುವಿನಲ್ಲಿ ದೊಂಬರ ಹುಡುಗಿ ನಡೆಯುತ್ತಿದ್ದಾಳೆ ಹಗ್ಗದ ಮೇಲೆ ಅತ್ತಿಂದ ಇತ್ತಾ ಇತ್ತಿಂದ ಅತ್ತಾ ತಿರುಗಿಯೂ ನೋಡದ ಹಾಗೆ ಹೊರಟ ಜಾಗಕ್ಕೆ ತಿರುಗಿ ಹೋಗದ ಹಾಗೆ ಹಗ್ಗ ಹಿಗ್ಗಾಮುಗ್ಗಾ ಗಾಳಿಯಲಿ ಬುಗುರಿ ತಿರುಗುತ್ತಿವೆ ಅವಳ ತಲೆಯಲ್ಲಿ ಹಗ್ಗ ಹಿಂತುರುಗುತ್ತದೆ ಖಾಲಿ ಕೇಂದ್ರದ ರಾಟೆಯೊಳಗೆ (ಇದನ್ನು ಅಹರ್ನಿಶಿ ಪ್ರಕಟಿಸಿದೆ) ಮಂಜುನಾಥ ನಾಯ್ಕ ಅವರ ಕವಿತೆ ಸ್ವಲ್ಪ ದೊಡ್ಡದಿದೆ, ಅದು ಮುಂದುವರಿಯುತ್ತದೆ. ಆದರೆ ನನಗೆ ಮುಖ್ಯವೆನಿಸಿದ ಅಂಶವೊಂದಿದೆ. ಇವರ ಯಾವತ್ತೂ ಕವಿತೆಗಳು ಧ್ವನಿಲಯವನ್ನು ಬಿಟ್ಟುಕೊಡವುದಿಲ್ಲ. ಅಷ್ಟರಮಟ್ಟಿಗೆ ಅವು ಶಬ್ದದ ನಾದಮಾಧುರ್ಯಕ್ಕೆ ನ್ಯಾಯ ಸಲ್ಲಿಸುವ ಪಣತೊಟ್ಟಂತಿವೆ. ಆದರೆ ಎಲ್ಲಿಯೂ ಅದು ತನ್ನ ನುಡಿಗೆ ತಾನೇ ಮೈಮರೆಯುವ ಹಂತಕ್ಕೆ ಹೋಗುವುದಿಲ್ಲ. ಇಲ್ಲವಾದಲ್ಲಿ ಸಾಕಷ್ಟು ಓದಿಕೊಂಡಿರುವ, ಪ್ರಾಯಪ್ರಬುದ್ಧರೂ ಆಗಿರುವ, ಭಾಷೆಯ ನೆಲೆಯಿಂದ ಸಾಕಷ್ಟು ಪಳಗಿರುವ ಮಂಜುನಾಥ ನಾಯ್ಕ ಅವರ ಕವಿತೆಗಳೆಲ್ಲಾ ಶಬ್ದಜಾಲದ ಮೋಹಕತೆಗೇ ತಮ್ಮನ್ನು ತಾವು ಸಮರ್ಪಿಸಿಕೊಳ್ಳಬಹುದಾದ ಅಪಾಯ ಇದ್ದೇ ಇತ್ತು. ಆದರೆ ಇಲ್ಲಿ ಹಾಗಾಗುವುದಿಲ್ಲ ಎನ್ನುವುದೇ ಈ ಕವಿತೆಗಳ ಹೆಚ್ಚುಗಾರಿಕೆ. ಹೃದಯಕ್ಕೆ ಮಾತ್ರ ಅರ್ಥವಾಗುವ ಪಿಸುಮಾತಿನಲ್ಲಷ್ಟೇ ಮಾತನಾಡದ, ರೂಪಕ-ಪ್ರತಿಮೆಗಳಲ್ಲೇ ಬುದ್ಧಿಗೆ ಮಾತ್ರ ಹೊಳೆದು ಯಾವುದೋ ಸ್ಮೃತಿಕೋಶವನ್ನು ಚುಚ್ಚಿ, ಅದು ಬಡಿದೆಬ್ಬಿಸುವ ಯಾವುದೋ ಅಮೂರ್ತ ಚಿತ್ರ/ನೆನಪು/ಭಾವವನ್ನೇ ನೆಚ್ಚಿಕೊಳ್ಳದ ಕವಿತೆ ಕೂಡ ಬರೀ ಸದ್ದು ಮಾತ್ರ ಎಬ್ಬಿಸದೆ ಎದೆಗೆ ತಟ್ಟಬಹುದು ಎಂಬ ಮಾತಿನಲ್ಲಿ ವಿಶ್ವಾಸ ಚಿಗುರಿಸುವಂತೆ ಬರೆಯುತ್ತಾರೆ ಇವರು. ಇದನ್ನು ಎಳೆಯ ಯುವಕವಿಗಳೆಲ್ಲ ಗಮನವಿಟ್ಟು ನೋಡುವ ಅಗತ್ಯವಿದೆ. ಇವತ್ತು ತುಂಬ ಮಂದಿ ಯುವಕವಿಗಳು ಉತ್ಸಾಹದಿಂದ ಕವಿತೆಗಳನ್ನು ಬರೆಯುತ್ತಿದ್ದಾರೆ. ಅದ್ಭುತವಾದ ಶಬ್ದಗಳಿಂದ, ನುಡಿಬಂಧದ ಆಕರ್ಷಣೆಯಿಂದ, ಆಹಾ ಎನಿಸುವಂಥ ಕವಿತೆಗಳನ್ನು ಅವರು ಬರೆಯುತ್ತಿದ್ದಾರೆ. ಆದರೆ ಯಾವ ಸಾಲೂ ಎದೆಗೆ ತಲುಪುವುದಿಲ್ಲ, ಬುದ್ಧಿಗೆ ಕುಟುಕುವುದಿಲ್ಲ. ಅಂದರೆ, ಅವರ ಮೂಲ ಉದ್ದೇಶವೇ ಬಹಿರ್ಮುಖವಾದದ್ದು. ಸಮಾಜದ, ಸಾಹಿತ್ಯದ, ವರ್ತಮಾನದ ತುಡಿತಗಳಿಗೆ ನುಡಿಯಾಗುವ ತುರ್ತಿನಿಂದ ಹುಟ್ಟಿದ್ದು. ಅದಕ್ಕೆ ಚಂದದ ಮತ್ತು ತಪ್ಪಿಲ್ಲದ ಭಾಷೆ ಸಾಕಾಗುತ್ತದೆ. ಆದರೆ ಆಗ ಹುಟ್ಟುವುದನ್ನು ಕವಿತೆ ಎಂದು ತಪ್ಪಾಗಿ ತಿಳಿಯಲಾಗಿದೆ. ಅವು ಸುಂದರ ಶಬ್ದಜಾಲದ ವ್ಯಾಖ್ಯಾನಗಳಷ್ಟೇ, ಕವಿತೆಗಳಲ್ಲ. ಕವಿತೆ ಯಾವತ್ತೂ ಒಳಗಿನಿಂದ ಹುಟ್ಟುತ್ತದೆ ಮತ್ತು ಅದು ಸದಾ ಅಂತರ್ಮುಖಿಯಾದದ್ದು. ಅಂದ ಮಾತ್ರಕ್ಕೆ ಅದು ಆಧ್ಯಾತ್ಮ, ಮೌನ, ಜ್ಞಾನ, ಭಾವನಾತ್ಮಕ ಸೂಕ್ಷ್ಮ ಮತ್ತು ಬೌದ್ಧಿಕ ಜ್ಞಾನೋದಯದ ಅಭಿವ್ಯಕ್ತಿ ಎಂದೇನಲ್ಲ. ಈ ಯಾವತ್ತೂ ಸಾಧ್ಯತೆಗಳ ಒಂದು ಮನಸ್ಸೇ ತನ್ನ ಬಹಿರಂಗದೊಂದಿಗೆ ಹೊಂದುವ ನಿರಂತರ ಮುಖಾಮುಖಿಯಿಂದ ಹುಟ್ಟಿದಾಗಲೇ ಅದು ಪರಿಪೂರ್ಣವಾಗುವುದು. ಆದರೆ ಅದರ ಜನ್ಮಸಾಂಗತ್ಯ ಶಬ್ದಲೋಕಕ್ಕೋ ಅಕ್ಷರಲೋಕಕ್ಕೋ ಸೇರಿದ್ದಲ್ಲ. ಕವಿತೆಯ ನಿಜವಾದ ಕಷ್ಟವಿರುವುದೇ ಭಾಷೆಯೊಂದಿಗೆ, ಅಕ್ಷರದೊಂದಿಗೆ, ಸದ್ದಿನಲ್ಲಿ ಸಾಕ್ಷಾತ್ಕಾರವಾಗಬೇಕಾದ ಗ್ರಹಚಾರದೊಂದಿಗೆ. ಆದರೆ ನಾವು ತಪ್ಪಾಗಿ ಕವಿತೆಯ ನಿಜವಾದ ಸುಖವಿರುವುದೇ ಭಾಷೆಯೊಂದಿಗೆ ಮತ್ತು ಅಕ್ಷರದೊಂದಿಗೆ ಎಂದು ತಿಳಿದಿದ್ದೇವೆ. ಕವಿತೆ ಈ ಅರ್ಥದಲ್ಲಿ ಪ್ರಿ-ಲಿಂಗುವಿಷ್ಟಿಕ್. ಭಾಷೆಯೊಂದು ರೂಪುಗೊಳ್ಳುವುದಕ್ಕೂ ಮೊದಲು ಇದ್ದಿದ್ದು ಕವಿತೆ. ಭಾಷೆಯಲ್ಲಿ ಅದು ಸದಾ ಸೋಲುತ್ತದೆ. ಆದರೆ ನಮ್ಮ ಹೆಚ್ಚಿನ ಯುವ ಕವಿಗಳ ನಂಬುಗೆಯೇನೆಂದರೆ, ತಮಗೇ ಸ್ಪಷ್ಟವಾದ ಪರಿಕಲ್ಪನೆಯಿಲ್ಲದ ಅವರ ಇನ್ನೂ ಹುಟ್ಟದಿರುವ ಕವಿತೆ ಸದಾ ತಮಗೆ ಕರಗತವಾಗಿರುವ ಭಾಷೆಯಲ್ಲೇ ಗೆಲ್ಲುತ್ತದೆ ಎಂಬ ವಿಶ್ವಾಸ. ಅವರ ಸೋಲು ಕೂಡ ಇರುವುದು ಇಲ್ಲಿಯೇ. ಹಾಗಾಗಿ ಹೆಚ್ಚಿನ ಕವನ ಸಂಕಲನಗಳ ಬಗ್ಗೆ ನನಗೆ ಹೇಳುವುದಕ್ಕೇನೂ ಇರುವುದಿಲ್ಲ. ಏಕೆಂದರೆ, ಅದು ನಿಮಗೆ ಅರ್ಥವಾದಾಗ ನಾನು ಹೇಳಬೇಕಾದುದು ಏನೂ ಇರುವುದಿಲ್ಲ ಮತ್ತು ಅದು ನಿಮಗೇ ಅರ್ಥವಾಗುವ ಮೊದಲು ನಾನು ಏನು ಹೇಳಿದರೂ ನಿಮಗದು ಅರ್ಥವಾಗುವುದಿಲ್ಲ. ಮತ್ತೆ ಮಂಜು ನಾಯ್ಕರ ಕವಿತೆಗೆ ಬರುತ್ತೇನೆ. ಎರಡು ಕಂಬದ ನಡುವೆ ಒಂದು ಹಗ್ಗದ ಸಾಲು ತೂರಾಡೋ ತಿಳಿಗಾಳಿಗೆ ಸೋಲು ಕಾಣಲೆಂದು ಕೈಯಲಿ ಒಂದು ಉದ್ದನೆ ಕೋಲು ಚಿಂದಿಬಟ್ಟೆಯ ಮೇಲೆ ಸಹಿ ಮಾಡಿದೆ ಬಡತನದ ಪ್ರತಿಬಿಂಬ ಕಣ್ಣಲಿ ಕತ್ತಲೋಡಿಸಬೇಕೆಂಬ ಚಂದ್ರಬಿಂಬ ಈ ಕವಿತೆಯಲ್ಲಿ ಬರುವ ಒಂದು ನುಡಿಬಂಧ, ಎರಡು ಕಂಬದ ನಡುವೆ ಒಂದು ಹಗ್ಗದ ಸಾಲು. ಈ ಎರಡು ಕಂಬ ಎನ್ನುವ ಅಂಶ ಜಿಂಗಾನಿಯೊ ಕವಿತೆಯಲ್ಲಿಯೂ ಇದೆ. ‘ಅತ್ತಿಂದ ಇತ್ತಾ| ಇತ್ತಿಂದ ಅತ್ತಾ’ ಎನ್ನುವಲ್ಲಿ ಇದೆ ಅದು. ಆದರೆ ಹಗ್ಗ ಅಲ್ಲಿ ಒಂದು ಸಾಲು ಅಲ್ಲ. ‘ಹಗ್ಗ ಹಿಂತುರುಗುತ್ತದೆ ಖಾಲಿ ಕೇಂದ್ರದ ರಾಟೆಯೊಳಗೆ’! Tight Rope Walker ಎಂಬ ಈ ಕವಿತೆಯ ಇಂಗ್ಲೀಷ್ ಆವೃತ್ತಿಯಲ್ಲಿ ಅದು ನೀಡುವ ಪರಿಕಲ್ಪನೆ ಒಂದು ತರದ ಬ್ಲ್ಯಾಕ್‌ಹೋಲ್‌ನಂಥದ್ದು. ಈ ಹಗ್ಗ ಆ ಬಗೆಯಲ್ಲಿ ಗಾಳಿಯಲ್ಲಿ ತಿರುಗಣಿ ಸುತ್ತುತ್ತ ಒಂದು ಶೂನ್ಯಕೇಂದ್ರಕ್ಕೆ ಸೆಳೆಯುತ್ತದೆ. ಆದರೆ ಕುತೂಹಲಕರ ಎಂದರೆ, ಮಂಜುನಾಥ ನಾಯ್ಕರಲ್ಲಿ ಆ ಹಗ್ಗ ಎರಡು ಕಂಬಗಳ ನಡುವಿನ ಸಾಲು. ಅಷ್ಟರಮಟ್ಟಿಗೆ ಅದು ಅವರಿಗೆ ನಿಜ, ವಾಸ್ತವ ಮತ್ತು ವರ್ತಮಾನ. ಜಿಂಗಾನಿಯೊಗೆ ಅದು ತಟ್ಟನೆ ಆಧ್ಯಾತ್ಮ ಕೂಡ! ಈ ಎರಡು ಕಂಬ ಎನ್ನುವುದು ಬದುಕು ಮತ್ತು ಸಾವು ಇದ್ದಂತೆ. ಅದರ ನಡುವಣ ಸಾಲು ಈ ಬದುಕು. ಅದಕ್ಕೆ ಬೇಕಾದ್ದು ಒಂದು ಸಮತೋಲ. ಶಾಲೆಗೆ ಹೋಗಬೇಕಾಗಿದ್ದ, ಆಟಪಾಟಗಳಲ್ಲಿ, ತಂದೆ ತಾಯಿಯರ ಪ್ರೀತಿ ಮತ್ತು ಆರೈಕೆಯಲ್ಲಿ ಮುದ್ದಿನಿಂದ ಬೆಳೆಯಬೇಕಾಗಿದ್ದ ಪುಟ್ಟ ಪೋರಿ ಈಗ ಸಂಸಾರದ ಹೊಟ್ಟೆ ಹೊರೆಯುವ ನೊಗ ಹೊತ್ತಿದ್ದಾಳೆ. ಕವಿ ಇದನ್ನು ನೋವಿನಿಂದ, ಬೇರೆ ಬೇರೆ ರೂಪಕಗಳಲ್ಲಿ ಕಟ್ಟಿಕೊಡುತ್ತಾ ಹೋಗುತ್ತಾನೆ. ಈ ಪುಟ್ಟ ಹುಡುಗಿಯ ಬದುಕೇ ಒಂದು ಗೇಣುದ್ದುದ ಹೊಟ್ಟೆ ಎಂಬ ಚೀಲ ತುಂಬುವುದಕ್ಕಾಗಿ ಮಾರ್ಪಟ್ಟ ಭಿಕ್ಷಾಪಾತ್ರೆ ಎನ್ನುವುದನ್ನು ಕವಿ ಸಶಕ್ತವಾಗಿ ಮತ್ತು ಸಶಬ್ದವಾಗಿ ಕಟ್ಟಿಕೊಡುತ್ತಾರೆ. ಈ ಸಶಬ್ದವಾಗಿ ಎನ್ನುವ ಮಾತೇ ನನಗೆ ಕೊನೆಗೂ ಮುಖ್ಯವಾದದ್ದು. ಅದಕ್ಕಾಗಿಯೇ ನಾನು ಕವಿತೆ ಕಟ್ಟುವುದರ ಬಗ್ಗೆ ಕೆಲವು ಮಾತುಗಳನ್ನಾಡಿದ್ದೇನೆ. ಅದಕ್ಕಾಗಿಯೇ ಆಧ್ಯಾತ್ಮದ ಶೋಧಕ್ಕೂ ಇಳಿದಿದ್ದ ಎಚ್ ಎಸ್ ಶಿವಪ್ರಕಾಶರ ಅನುವಾದವನ್ನೇ ಆರಿಸಿಕೊಂಡಿದ್ದೇನೆ. ಅದಕ್ಕಾಗಿಯೇ ಜಿಂಗಾನಿಯೊಗೆ ಹೇಗೆ ದೊಂಬರಾಕೆ ನಡೆದಾಡುವ Tight Rope ಕೃಷ್ಣರಂಧ್ರಕ್ಕೆ ದಾರಿತೋರುವ ತಂತುವಾಗಿದೆ ಎನ್ನುವುದನ್ನು ಎತ್ತಿ ಹೇಳಿದ್ದೇನೆ. ಜಿಂಗಾನಿಯೊಗೆ ಹುಡುಗಿಯ ವರ್ತಮಾನಕ್ಕಿಂತ ಮಿಗಿಲಾದ್ದು ಇದೆ. ಮಂಜುನಾಥ ನಾಯ್ಕ ಅವರಿಗೆ ಹುಡುಗಿಯ ವರ್ತಮಾನದ ಭೀಕರ ವಸ್ತುಸ್ಥಿತಿ ಕರುಳು ಹಿಂಡುತ್ತಿದೆ. ಈ ಸಂಕಲನದ ‘ಕನಸು ಮಾರುವ ಹುಡುಗ’ ಕವಿತೆ ಕೂಡ ತುಂಬ ಮನಸೆಳೆವ ಕವಿತೆ. ರಂಜಾನ್ ಪೇಟೆ ಪಕ್ಷಿರಾಶಿಯ ಕೇಕೆ ನಡುವೆ ಗುಡುಗು ಬಡಿಸುವ ಹುಡುಗ ಶಾಮಿಯಾನದ ಕಂಡಿಯೊಳಗೆ ಚಿಗುರಿದೆ ನಲಿವ ಚಂದ್ರಯಾನದ ಧ್ಯಾನ ಕನಸು ಹರಡಿ ಕುಳಿತಿದ್ದಾನೆ ಕಣ್ಣು ಕದಲಿಸಿದವರಿಲ್ಲ ಹೊನ್ನೆಂದು ತಬ್ಬಿದವರಿಲ್ಲ ಬೇಕೆ? ನಿಮಗೊಂದಾದರೂ ಕನಸು ಬೇಕೆ? ನಿಮಗೆ ಬಾರದ ಕನಸು ನಯನ ಜಾರದ ಕನಸು ಬೀಗ ಜಡಿದ ಕನಸ ಮನೆಗೆ ಕೀಲಿ ಬೇಕೆ? ಶತಶತಮಾನದ ಕಗ್ಗಲ್ಲ ಕನಸಿದು ಕನಸು ಹೊತ್ತು ಹೋಗಿ ಶಿಲ್ಪಿಯನಿಟ್ಟು ಹೋಗಿ ತುಂಬ ತಟ್ಟುವ, ವಿಸ್ಮಯವನ್ನು ಹುಟ್ಟಿಸುವ ಕವಿತೆಯಿದು. ಇಲ್ಲಿ ಶಬ್ದದ ತರಂಗಾಂತರದ ಪಾಲೂ ಇದೆ, ಕವಿಯ ಧ್ಯಾನದ ಪಾಲೂ ಇದೆ. ಯಾವುದರದ್ದು ಎಷ್ಟು ಎಂದು ಹೇಳುವುದು ಒಂದು ಕಷ್ಟವಾದರೆ, ಯಾವುದರಿಂದ ಯಾವುದಕ್ಕೆ ಲಾಭ ಅಥವಾ ನಷ್ಟ ಆಗಿದೆ ಎಂದು ಹೇಳುವುದು ಇನ್ನೊಂದು, ಸ್ವಲ್ಪ ಹೆಚ್ಚಿನದ್ದಾದ, ಕಷ್ಟ. ಮಂಜುನಾಥ ನಾಯ್ಕ ಯಲ್ವಡಿಕವೂರ ಅವರ ಕವಿತೆಗಳು ಒಡ್ಡುವ ಸವಾಲು ಇದೇ. ರಂಜಾನ್ ಪೇಟೆ ಪಕ್ಷಿರಾಶಿಯ ಕೇಕೆ ಎಂದಾಗ ಅದೇನೋ ಸಹಜವೆಂದೇ ಅನಿಸುತ್ತದೆ. ಆದರೆ ‘ನಡುವೆ ಗುಡುಗು ಬಡಿಸುವ ಹುಡುಗ’ ಎನ್ನುವ ಸಾಲು ತನ್ನ ಡುಡುಡುಡುಗಳಿಂದಲೇ ಇಷ್ಟವಾಗುತ್ತಿದೆಯೆ ಅಥವಾ ಅದು ನಮ್ಮ ಮನಸ್ಸಿನಲ್ಲಿ ದುಗುಡ ಹೆಚ್ಚಿಸುತ್ತಿದೆಯೆ? ಎರಡನೆಯದು ಉದ್ದೇಶಪೂರ್ವಕವಾದದ್ದು, ಕವಿತೆಯ ಆತ್ಮಕ್ಕೆ ಅಗತ್ಯವಾದದ್ದು. ‘ದೊಂಬರಾಟದ ಹುಡುಗಿ’ ಕವಿತೆಯಲ್ಲಿಯೂ ‘ತೂರಾಡೊ ತಿಳಿಗಾಳಿಗೆ| ಸೋಲು ಕಾಣಲೆಂದು| ಕೈಯಲಿ ಒಂದು ಉದ್ದನೆಯ ಕೋಲು’ ಎಂದಿದೆ. ಸೋಲು ಮತ್ತು ಕೋಲು ತನ್ನ ಪ್ರಾಸಬದ್ಧತೆಯಾಚೆಗೂ ಕೊಡುವ ಅರ್ಥ ಹೆಚ್ಚುಗಾರಿಕೆ ಹೊಂದಿದೆ ಎನ್ನುವುದನ್ನು ಗಮನಿಸಿ. ಮುಂದಿನ ಸಾಲುಗಳೆಲ್ಲಾ ಶಬ್ದರತಿಯ ಮೋಹದಿಂದ ಮುಕ್ತವಾಗಿಯೇ ಬಂದಿರುವಂಥಾವು. ಶಾಮಿಯಾನದ ಕಿಂಡಿಯೊಳಗೆ ಚಿಗುರುವ ಚಂದ್ರಯಾನದ ಕನಸು! ಎಷ್ಟು ಚಂದವಿದೆ ಈ ಸಾಲು! ಅದೇ ರೀತಿ ಹೊನ್ನೆಂದು ತಬ್ಬಿದವರಿಲ್ಲ ಎಂಬ ನುಡಿಬಂಧ! ಶತಶತಮಾನಗಳ ಕಗ್ಗಲ್ಲ ಕನಸಿದು ಕನಸು ಹೊತ್ತು ಹೋಗಿ ಶಿಲ್ಪಯನಿಟ್ಟು ಹೋಗಿ - ಎಂಬ ಮಾತು ಗಮನಿಸಿ. ಕನಸು ಶಿಲ್ಪಿಯ ಕೈಗೆ ಸಿಕ್ಕಿದ ಕಲ್ಲಿನ ಹಾಗೆ! ಅವನು ಕಲ್ಲಿನಿಂದ ಕನಸನ್ನು ಕಟೆದು ಕಾಣಿಸುತ್ತಾನೆ. ಆದರೆ ಆ ಶಿಲ್ಪಿ ಯಾರು, ಕನಸನ್ನು ಕಾಂಬ ಕಣ್ಣು ಯಾರವು ಮತ್ತು ಇಲ್ಲಿ ಕಲ್ಲು ಯಾವುದು? ಈ ಸಾಲುಗಳನ್ನು ಓದುವಾಗ ನನ್ನ ಮನಸ್ಸಿಗೆ ಡಾ|| ಬಿ ಆರ್ ಅಂಬೇಡ್ಕರರ ಚಿತ್ರವೇಕೆ ಛಕ್ಕೆಂದು ಹೊಳೆಯಿತು? - ಈ ಯಾವುದೂ ಅರ್ಥಕ್ಕೆ, ವ್ಯಾಖ್ಯಾನಕ್ಕೆ ಸಿಗುವುದಿಲ್ಲ. ಜಯಂತ ಕಾಯ್ಕಿಣಿಯವರ ಮುನ್ನುಡಿಯ ಒಂದು ಮಾತಿನೊಂದಿಗೆ ಇದನ್ನು ಮುಗಿಸುತ್ತೇನೆ. "ಇಲ್ಲಿ, ಸಂತೆಯಲ್ಲಿ ಕನಸು ಮಾರುವ ಹುಡುಗರಿದ್ದಾರೆ, ಭೋರ್ಗರೆವ ಮಳೆಯ ನಂತರ ಕೊಂಬೆಗೆ ಗೂಡು ಕಟ್ಟುವ ಗುಬ್ಬಿ ಇದೆ, ಅಮಾವಾಸ್ಯೆಯಿಂದಲೇ ರೂಪುಗೊಂಡು ಚಲಿಸುವ ಅಜ್ಜಯ್ಯನಿದ್ದಾನೆ, ಚಟ್ಟದ ಮನೆಯಲ್ಲಿ ಕುಂತ ಚಿಟ್ಟೆಯಿದೆ, ಅಪ್ಪನ ಕಿಸೆಯಿಂದ ಕದ್ದ ಬೀಡಿಯಿದೆ, ಹಾಯಿದೋಣಿಯಲ್ಲಿ ಕೂತ ಅಕ್ವೇರಿಯಂ ಮೀನು ಇದೆ, ಅಂಜುವ ಬೆರಳುಗಳಿಂದ ಮೂಡಿದ ನೆರಳು ಬೆಳಕಿನ ರಂಗವಲ್ಲಿ ಇದೆ, ಬೆಟ್ಟವೇರುತ್ತ ಹಗುರಾಗುವ ವಾಂಛೆಯಿದೆ." ನರೇಂದ್ರ ಪೈ