" ಇದೆಲ್ಲವೂ ವಿಷ್ಣು ಮಾಯೆ " !
ಅಂದಿನ ದಿನಗಳಲ್ಲಿ ಉತ್ತರ ಕನ್ನಡದ ಸಾಹಿತ್ಯಿಕ ಸಾಂಸ್ಕೃತಿಕ ರಂಗಗಳಲ್ಲೇನಾದರೂ ಅದ್ಭುತ ಘಟನೆಗಳು ಘಟಿಸಿದರೆ , ನಾಡಿನ ಶ್ರೇಷ್ಠ ವಿಮರ್ಶಕರೂ ನನ್ನ ವಿದ್ಯಾಗುರುಗಳೂ ಆದ ಡಾ. ಗೌರೀಶ ಕಾಯ್ಕಿಣಿ ಯವರು , " ಇದೆಲ್ಲವೂ ವಿಷ್ಣು ಮಾಯೆ " ! ಎಂದು ಉದ್ಗರಿಸುತಿದ್ದರು. ಹೌದು ಅಂಬಾರಕೋಡ್ಲಿನ ವಿಷ್ಣು ನಾಯ್ಕರ ಮಾನಸಿಕ ಸಂಘಟನೆಯೇ ಹಾಗಿತ್ತು. ಆ 'ಪರಿಮಳದಂಗಳ' ವೆಂದರೆ ಅದೊಂದು ಆಲದಮರ ಇದ್ದಂತೆ.ಎಲ್ಲೆಲ್ಲಿಂದಲೋ ಒಂದ ಹಕ್ಕಿಪಕ್ಷಿಗಳು ಗೂಡುಕಟ್ಟಿ ವಾಸಿಸಿ ರೆಕ್ಕೆ ಬಲಿತೊಡನೆ ಮತ್ತೆ ಆಲವ ಬಿಟ್ಟು ಮುಂದೆ ಪಯಣಿಸಿ ಮತ್ತೆಂದಾದರೂ ಹಾರಿ ಬರುವಂತೆ ! ಇಲ್ಲೂ ಹಾಗೇನೆ. ಒಬ್ಬ ನಿರಕ್ಷರಿ ತಾಯಿಯ ಮಗನಾಗಿ , ಸಾಕುತಾಯಿ ಎನಿಸಿದ ಹಾಲಕ್ಕಿ ಹೆಂಗಸಿನ ಮೊಲೆಕುಡಿದು , ತೀರಾ ಹಿಂದುಳಿದ ಪ್ರದೇಶದಲ್ಲಿ ನೆಲೆಸಿ , ಚಿಮಣಿ ದೀಪದಲ್ಲಿ ಓದಿ , ಹಣಕಾಸಿನ ತತ್ವಾರದ ದಿನಗಳಲಿ ವಿದ್ಯಾಭ್ಯಾಸ ಮುಂದುವರಿಸಿದ ವಿಷ್ಣು ನಾಯ್ಕರು ತಾವೂ ಬೆಳೆದರು; ನಂಬಿದವರನ್ನೂ ಮೆರೆಸಿದರು ; ಹರಿಸಿದರು . ಉತ್ತರ ಕನ್ನಡದ ಮಂಚಿಕೇರಿ , ಸಾಗದದ ಹೆಗ್ಗೋಡಿನಂತೆ , ಆಂಕೋಲೆಯ ಈ ಪುಟ್ಟ ಊರು ಅಂಬಾರಕೋಡ್ಲವನ್ನು ಕನ್ನಡ ನಾಡಿನ ಸಾಹಿತ್ಯ - ಸಾಂಸ್ಕೃತಿಕ - ಸಂಘಟನೆಗಳ ನೆಲೆವೀಡಾಗಿಸಿ ಚುಂಬಕ ಶಕ್ತಿಯಂತೆ ನಾಡಿನ ಮೂಲೆ ಮೂಲೆಗಳಿಂದ ಬಂದ ಸಾಹಿತ್ಯಾಸಕ್ತರಿಂದ ಶ್ರೀ ರಾಘವೇಂದ್ರ ಪ್ರಕಾಶನ, ಸಕಾಲಿಕ ಪತ್ರಿಕೆ , ದಿನಕರ ಪ್ರತಿಷ್ಠಾನ , ರಾಘವೇಂದ್ರ ರಂಗ ಸಂಘ , ಸದಾನಂದ ವೇದಿಕೆ ಹಾಗೂ ಇನ್ನಿತರ ಸಹಭಾಗಿ ಸಾಂಸ್ಕೃತಿಕ ಸಂಘಟನೆಗಳ ಮೂಲಕ ಈ ನೆಲದಲ್ಲಿ ಅಕ್ಷರಗಳ ರಸದೌತಣ ಉಣಿಸಿದರು . ಇವರ ಈ ಎಲ್ಲಾ ಮನೋಭಾವನೆಯ - ವಿಚಾರಗಳ ಪ್ರೇರಕ ಶಕ್ತಿಯೇ ಡಾ. ದಿನಕರ ದೇಸಾಯಿ ಎಂಬ ಪ್ರಗತಿಪರ ವಿಚಾರಧಾರೆಯ , ಮಾನವೀಯ ಮೌಲ್ಯ ಗಳ , ಸಮಾನತೆಯ , ಅಕ್ಷರಗಳ ಮನಸ್ಸಿನ ಅದ್ಭುತ ಕ್ರಿಯಾಶೀಲ ಮನಸ್ಸು. ಆ ಹಿರಿಯ ' ಆಲ'ದ ಮನಸ್ಸಿನಡಿ ತಮ್ಮನ್ನು ತಾವೇ ತೊಡಗಿಸಿಕೊಂಡು , ಹೆಣಗಾಡಿ ಬದುಕಲು ಬೇಕಾದ ಮೂಲಭೂತ ಶಿಕ್ಷಣ ಪಡೆದು ಅಂಕೋಲೆಯ ಗೋಖಲೆ ಕಾಲೇಜಿನ ವಾಚನಾಲಯ ವಿಭಾಗದಲಿ ಕಾರ್ಯನಿರ್ವಹಿಸುತ್ತಲೇ ಶಿಕ್ಷಣ ಮುಂದುವರಿಸುತ್ತಾ ಪದವಿ ಪಡೆದು ಮುಂದೆ ದಿನಕರರ ಆದೇಶದಂತೆ ದಾಂಡೇಲಿ ಹೈಸ್ಕೂಲ್ ನಲಿ ಶಿಕ್ಷಕ ವೃತ್ತಿ ಪ್ರಾರಂಭಿಸುವ ತನಕ ಇವರು ಪಟ್ಟ ಕಷ್ಟ, ಉಂಡ ನೋವು ವರ್ಣಿಸಲಸಾಧ್ಯ . ವಿಷ್ಣು ಎಂದರೆ ಸಾಹಿತ್ಯಲೋಕದ ಒಂದು ವ್ಯಕ್ತಿ ಅಲ್ಲ ಅದೊಂದು ಶಕ್ತಿ ಎಂಬ ಅರಿವಿನ ಮೂಲವೇ ದಾಂಡೇಲಿ ಎಂಬ ಔದ್ಯೋಗಿಕ ನಗರ. ಅಲ್ಲೇ ಸಾಹಿತ್ಯ - ಸಾಂಸ್ಕೃತಿಕ ಕಣ್ಮಣಿ ಶ್ರೀ ರಾಘವೇಂದ್ರ ಪ್ರಕಾಶನ ಹುಟ್ಟಿದ್ದು. ನನ್ನ ಮತ್ತು ವಿಷ್ಣು ನಾಯ್ಕರದು ನಾಲ್ಕು ದಶಕಗಳ ಕಿಲುಬಿಲ್ಲದ ಪ್ರೀತಿ. ಎಂಬತ್ತರ ದಶಕದ ಮೊದಲ ಭಾಗ ಅದು. ಆಗಿನ್ನೂ ಅವರು ದಾಂಡೇಲಿಯಲ್ಲೇ ನೌಕರಿ ಮಾಡುತಿದ್ದರು. ವಾರಕ್ಕೊಮ್ಮೆ ಅವರು ಅಂಕೋಲೆಗೆ ಬರಲಿರುವದೆಂದರೆ ನನಗೆ ಸಂಭ್ರಮ . ಅಂಕೋಲೆಯ ಮನೆಯಲ್ಲಿಯೆ ಅವರದೊಂದು ಕಾರ್ಯನಿರ್ವಹಣಾ ಕಚೇರಿ. ಆಗ ತಾನೇ ಪದವಿಪಡೆದ ನನಗೆ ಸರ್ ರೇ ಆಫೀಸ್ ನ ಕಾಗದಪತ್ರಗಳ ನಿರ್ವಹಣೆ , ಫೈಲ್ಗಳಿಗೆ ಪತ್ರಗಳನ್ನು ಜೋಡಿಸುವದು , ಆಫೀಸಿನ ಸ್ವಚ್ಛತೆಗಳ ಕುರಿತಾಗಿ..... ಇವೆಲ್ಲವನ್ನೂ ತಿಳಿಸಿಕೊಟ್ಟ ಮೊದಲ ಗುರು ಅವರು ; ನನ್ನ ಕಾವ್ಯ ಗುರುಗಳೂ ಸಹ. ಕೈಯ್ಯಾರ ಕಿಂಞಣ್ಣ ರೈ ರಿಂದ ಮೊದಲಸಾರಿ ಕವಿತೆಗೆ ಬಹುಮಾನ ಕೊಡಿಸಿ ಅಧಿಕೃತವಾಗಿ ಮೊದಲಬಾರಿಗೆ ಕವಿಗೋಷ್ಠಿಯಲ್ಲಿ ಕವಿತೆ ಓದಲು ವೇದಿಕೆ ಹತ್ತಿಸಿದ ಹಿರಿಮೆ ಈ ಹಿರಿಯ ಜೀವಕ್ಕೆ ಸಲ್ಲಬೇಕು.ಕೆಲವೇ ದಿನಗಳಲ್ಲಿ ದಾಂಡೇಲಿಯಿಂದ ವರ್ಗವಾಗಿ ಅಂಕೋಲೆಗೆ ಬಂದು ಮುಂದಿನ ದಿನಗಳಲ್ಲಿ ನಿರಂತರವಾಗಿ ಅಂಕೋಲೆಯನ್ನೇ ಕೇಂದ್ರವಾಗಿಸಿ ಚಟುವಟಿಕೆ ಗಳಲ್ಲಿ ತೊಡಗಿಸಿಕೊಂಡರು. ಆ ದಿನಗಳಲ್ಲಿ ಅಂಬಾರಕೋಡ್ಲಿನ ಗದ್ದಿಗೆಯ ಮೇಲಿನ ನಾಟಕ ಮತ್ತು ಅದರ ತಾಲೀಮೆಂದರೆ ಅದೊಂದು ಸಾಂಸ್ಕೃತಿಕ ಕಾರ್ಯಾಗಾರ - ಉತ್ಸವ ವಿದ್ದಂತೆ. ಒಮ್ಮೆ ನಾಟಕದಲ್ಲಿ ಅಭಿನಯಿಸಲು ಒಪ್ಪಿಕೊಂಡರೆ ತೀರಿತು,ದಿನವೂ ತಾಲೀಮಿಗೆ ತಪ್ಪದೇ ಸರಿಯಾದ ಸಮಯದಲ್ಲಿ ಶಿಸ್ತು ಬದ್ಧವಾಗಿ ಬರಲೇ ಬೇಕಿತ್ತು. ಸಾಮಾಜಿಕ ಕತೆಗಳನ್ನು ತುಂಬ ಮುತುವರ್ಜಿಯಿಂದ ರಂಗದಮೇಲೆ ಅಳವಡಿ ಸುವ ವಿಷ್ಣು , ತಾವೇ ಬರೆದ ನಾಟಕಗಳಲ್ಲಿ ' ಹೀರೋ ' ಆಗಿ ಅಭಿನಯಿಸಿ ವಿಲನ್ನ್ ನಿಂದ ಬರಿಮೈಯ್ಯಲ್ಲಿ ಬಾರುಕೋಲಿನಿಂದ ನಿಜವಾಗಿಯೂ ಹೊಡೆತ ತಿನ್ನು ತಿದ್ದುದು ಮೈ ನವಿರೇಳಿಸುತಿತ್ತು. ನನಗೆ ನಾಟಕಾ- ಭಿನಯದ ಗೀಳು ಅಂಟಿಕೊಂಡಿದ್ದು ಆಗಲೇ. ಐದಾರು ವರ್ಷಗಳ ತನಕ ಅವರ ನಾಟಕದಲ್ಲಿ ನನಗೊಂದು ಪಾತ್ರ ಕಟ್ಟಿಟ್ಟ ಬುತ್ತಿಯಂತೆ. ಅವರ ನಿರ್ದೇಶನ ಹಾಗೂ ನಟನಾ ಚಾತುರ್ಯ ಸುತ್ತಲಿನ ಪ್ರದೇಶಗಳಲ್ಲೆಲ್ಲಾ ಪ್ರಸಿದ್ಧಿಯಾಗಿತ್ತು. ಪಾತ್ರಧಾರಿಗಳ ವ್ಯಕ್ತಿತ್ವಕ್ಕೆ ತಕ್ಕಂತೆ ಪಾತ್ರ ಸೃಷ್ಟಿಸಿ ಅದರಲ್ಲೇ ತಲ್ಲೀನ ಗೊಳಿಸುವ ಕ್ರಿಯೆ ನಿಜವಾಗಿಯೂ ಆಶ್ಚರ್ಯ ಎನಿಸುತಿತ್ತು. ಸಾಮಾಜಿಕ ಕಳಕಳಿಯ ಬೀದಿ ನಾಟಕದ ತಂಡದ ಅಭಿನಯವೂ ಔಚಿತ್ಯಪೂರ್ಣವಾಗಿತ್ತು . ರಾಘವೇಂದ್ರ ಪ್ರಕಾಶನದ ಮೂಲಕ ನಾಡಿನ ಹಿರಿ ಕಿರಿಯ ಲೇಖಕರ ಸುಮಾರು 230ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಲ್ಲದೇ ಸಾಹಿತ್ಯ ಗೋಷ್ಠಿ , ಕಮ್ಮಟ , ಸ್ಪರ್ಧೆ ನಡೆಸಿ ಪ್ರಕಾಶನದ ಬೆಳ್ಳಿಹಬ್ಬದ ಸಂದರ್ಭದಲ್ಲಂತೂ ನಾಲ್ಕುದಿನಗಳ ಸಾಹಿತ್ಯ ಸಮ್ಮೇಳನವನ್ನು ಕನ್ನಡನಾಡೇ ಮೆಚ್ಚುವಂತೆ ಮಾಡಿ ' ಅಂಬಾರಕೋಡ್ಲ ' ವೆಂಬ ಈ ಪುಟ್ಟಹಳ್ಳಿಯ ಹೆಸರನ್ನು ಕನ್ನಡ ಸಾರಸ್ವತಲೋಕದಲ್ಲಿ ವಿಲೀನಗೊಳಿಸಿದರು . ಶೈಕ್ಷಣಿಕ , ಸಾಹಿತ್ಯಿಕ , ಸಾಮಾಜಿಕ , ಜನಪರ ಹೋರಾಟಗಳ ಮೂಲಕ , ಪ್ರಕಾಶಕನಾಗಿ , ಪತ್ರಕರ್ತನಾಗಿ , ರಂಗ ಕರ್ಮಿಯಾಗಿ, ಆಡಳಿತಗಾರನಾಗಿ , ವಿಷ್ಣುವಿನ ಸಾಧನೆಗೆ ಮಾಪನವಿಲ್ಲ.ಸಂದ ಪುರಸ್ಕಾರ ಬಹುಮಾನಕ್ಕೆ ಎಡೆಯೇ ಇಲ್ಲ. ವಿದ್ಯಾರ್ಥಿ ಕವಿಯಾಗಿ ಬೆಳಕಿಗೆ ಬಂದು ಅರವತ್ತು ವರ್ಷಗಳ ಬರವಣಿಗೆಯ ಬದುಕಿನಲ್ಲಿ ಅನೇಕ ಕವನ ಸಂಕಲನ ,ನಾಟಕ, ಕತೆ ,ಕಾದಂಬರಿ , ಮಕ್ಕಳ ನಾಟಕ, ಅಂಕಣ ಬರಹ ,ವಿಚಾರ ವಿಮರ್ಶಾ ಸಂಕಲನ, ಸಂಶೋಧನೆ ಮತ್ತು ಮಾನವಿಕ ಗ್ರಂಥ , ವ್ಯಕ್ತಿ ಪರಿಚಯ ಆತ್ಮಚರಿತ್ರೆಯಲ್ಲದೇ ಸಂಪಾದಿತ ಗ್ರಂಥವನ್ನೂ ಒಳಗೊಂಡರೆ ವಿಷ್ಣು ರಚಿಸಿದ ಪುಸ್ತಕದ ಸಂಖ್ಯೆ ನೂರರಗಡಿದಾಟಿ ಅರ್ಧದಶಕಗಳೇ ಕಳೆದಿವೆ. ಸದಾನಂದ ವೇದಿಕೆ ,ಪರಿಮಳ ಸಭಾಂಗಣ ದಲ್ಲಿ ಊಟೋಪಚಾರದ ಶಿಸ್ತು ಬದ್ಧತೆ ಕಂಡ ಯಾರಾದರೂ ಇಂತಹ ವ್ಯವಸ್ಥೆಗೆ ತಲೆಬಾಗಲೇ ಬೇಕು. ಇವುಗಳ ಒಡತಿ " ಕವಿತಕ್ಕ " ಈಗಿಲ್ಲ ಎನ್ನುವ ನೋವು ಒಂದು ಬಿಟ್ಟರೆ ದಿನದಿನವೂ ಇಲ್ಲಿ ದಾಸೋಹವೇ.ವೈಯಕ್ತಿಕವಾಗಿ ಹೇಳಬೇಕೆಂದರೆ, ಹಸಿವು ಬಡತನದ ನಡುವೆಯೇ ಸಹನೆ - ಸಮಾಧಾನದ ಪಾಠವನ್ನೂ ಇಲ್ಲೇ ಕಲಿತಿದ್ದು ಎನ್ನಲು ಹೆಮ್ಮೆ ಅನಿಸುತ್ತಿದೆ , ನನಗೆ . ಹದಿನಾರು ವರ್ಷಗಳ ಹಿಂದೆ ವಿಷ್ಣು ನಾಯಕರಿಗೆ ಅರವತ್ತು ತುಂಬಿದ ಸಂಭ್ರಮದಲ್ಲಿ ಸುನಂದಾಳೊಂದಿಗೆ ನಮ್ಮ " ನಾಗಸುಧೆ " ಪ್ರಕಾಶನದಿಂದ ಹೊರತಂದ ಅಭಿನಂದನಾ ಗ್ರಂಥವೇ " ಪರಿಮಳದಂಗಳ " .ಅಂಬಾರಕೋಡ್ಲಿನ ಕೆಮ್ಮಣ್ಣು - ಕಲ್ಲು ಗೊಜ್ಜಿನ ಹಾದಿ ತುಳಿದಾಗ ನಮ್ಮ ಕನಸುಗಳಿಗೆ ರೆಕ್ಕೆ - ಪುಕ್ಕ ಚುಚ್ಚಿ ದವರು ವಿಷ್ಣು ನಾಯ್ಕರು. ನಮ್ಮ ಚೂರು - ಪಾರು ಓದು ಬರಹದ ಹಿಂದೆ ಇದ್ದದ್ದು ಅವರ ಪ್ರೀತಿ ಮತ್ತು ಕಾಳಜಿಗಳು. ಈ ಪರಿಮಳದಂಗಳ ದಲ್ಲಿ ವಿವಿಧ ವಯಸ್ಸು , ಮನೋಧರ್ಮಗಳ , ಚಳುವಳಿ - ನಂಬಿಕೆಗಳ ನಾಡಿನ ಅರವತ್ತೆಂಟು ಹಿರಿ ಕಿರಿಯ ಲೇಖಕರ ಆತ್ಮೀಯ ಬರಹಗಳಿವೆ. " ಪರಿಮಳದಂಗಳ" ಎಂದು ನಾಮಕರಣ ಮಾಡಿದವರು ಹಿರಿಯರಾದ ಯಶವಂತ ಚಿತ್ತಾಲರು. ನಮ್ಮೆಲ್ಲರ ಹಿರಿಯಣ್ಣ ಜಯಂತ್ ಕೈಕಿಣಿ 'ಪರಿಮಳದಂಗಳ' ದ ' ವಿಷ್ಣು ತುಳಸಿ ' ಯಲ್ಲಿ , " ಸದಾನಂದ ವೇದಿಕೆಯಲ್ಲಿ ವಿಷ್ಣು ನಡೆಸಿಕೊಂಡು ಬಂದಿರುವ ಚಟುವಟಿಕೆಗಳನ್ನು ನೋಡಿ. ಪೇಟೆಯಲ್ಲಿ ಸಿಕ್ಕವರೆಲ್ಲಾ ಅಲ್ಲಿರುತ್ತಾರೆ. ಸೋಡಾ ಅಂಗಡಿಯವನು, ಸೈಕಲ್ ಅಂಗಡಿಯವನು, ಮದುವೆಯಲ್ಲಿ ಊಟ ಬಡಿಸುವವನು....... . ಇವರೆಲ್ಲರಿಗೆ ಅಪಾರ ಘನತೆ ಮತ್ತು ಗೌರವದ ಸ್ಥಾನ ಕೊಟ್ಟು ಮೆಲ್ಲನೆ ಅವರ ಸಂವೇದನೆಯನ್ನು ತಿದ್ದಿದ್ದಾರೆ , ತೀಡಿದ್ದಾರೆ , ಸಕಾಲಿಕದ ' ಅರೆಖಾಸಗಿ ' ಯಲ್ಲಿ ಅರರೇ ಅನ್ನುವಂತೆ ಮೂಡಿ ಬಂದಿರುವ ಮನುಷ್ಯಲೋಕ ಅದು. ಗೋಷ್ಠಿ, ವಿಮರ್ಶೆ, ಪ್ರಶಸ್ತಿ, ದಸರಾ ಕವಿಗೋಷ್ಠಿ, ಕ್ಯಾಸೆಟ್ ಶಹನಾಯಿ ಹಿನ್ನೆಲೆಯ ಸನ್ಮಾನಗಳ ಪ್ರಪಂಚದ ಪಕ್ಕವೇ ಇರುವ ನಿತ್ಯದ ಅಪ್ಪಟ ಲೋಕ. ವಿಷ್ಣು ನಾಯ್ಕರ ಜೀವ ಅಲ್ಲಿದೆ. ಮಧ್ಯಾನ್ಹ ಗೇಟು ಕರ್ ಗುಡಿಸಿ, ಕೋಳಿ ಶೆಂಡ್ಗ ಆಶೆಗೆ ಬರುವ ಬುದ್ಧಿಜೀವಿಗಳಿಗಿಂತ, ಸುಗ್ಗಿ ವೇಶ ಗುಣಿದು ಹೋದ ಮೇಲೆ ಅಂಗಳದಲ್ಲಿ ಉದುರಿದ ಬೇಗಡೆ - ಬಣ್ಣದ ಕಾಗದದ ಚೂರುಗಳನ್ನು ನೋಡುವಲ್ಲೇ ವಿಷ್ಣುವಿಗೆ ನಿಜವಾದ ಅಕ್ಕರೆ " ಎಂದಿರುವರು. ಇದರಿಂದ ನಮಗೆ ತಿಳಿಯುವ ಅತೀ ಮುಖ್ಯ ಅಂಶ ವೆಂದರೆ ' ಸಾಹಿತ್ಯವೆಂದರೆ ಜನಸಾಮಾನ್ಯರದು , ಅದು ಯಾರಪ್ಪನ ಆಸ್ತಿ ಅಲ್ಲ ' ಎಂದು. ಸುನಂದಾಳೇ ಹೇಳುವಂತೆ " ನಮ್ಮ ಕಡಮೆ ಊರಿನಲ್ಲಿ ವಿಷ್ಣು ನಾಯ್ಕರ ' ಬೀರದೇವ ' ನೆಂಬ ಗ್ರಾಮದೇವ ನಿದ್ದಾನೆ . ಆದರೆ ನನ್ನ ಹಾಗೂ ಪ್ರಕಾಶ್ ನ ಗ್ರಾಮ ದೇವತೆ ' ಅಂಬಾರಕೊಡಲಿನ ಪರಿಮಳದಂಗಳ ' . ಸರ್ಕಾರದ ಅಧೀನ ಅಕಾಡೆಮಿಗಳು , ವಿಶ್ವವಿದ್ಯಾಲಯಗಳೂ ಮಾಡದೇ ಇದ್ದ , ಡಾ. ಗೌರೀಶ ಕೈಕಿಣಿಯವರ ಸಮಗ್ರ ಸಾಹಿತ್ಯವನ್ನು 10 ಸಂಪುಟದಲ್ಲಿ ಪ್ರಕಟಿಸಿದ ಖ್ಯಾತಿ ಗ್ರಾಮೀಣ ಪ್ರದೇಶದ ರಾಘವೇಂದ್ರ ಪ್ರಕಾಶನದ್ದು . ಇದಕ್ಕಾಗೂ ಇರಬಹುದು , ಸಾಹಿತ್ಯಾಲೋಕದಲ್ಲಿ ಏನಾದರೂ ಆಶ್ಚರ್ಯ ಸಂಭವಿಸಿದರೆ " ಇದೆಲ್ಲಾ ವಿಷ್ಣು ಮಾಯೆ " ಎಂಬ ಗೌರೀಷರ ವಿಸ್ಮಯದ ನುಡಿ. ==000== ಪ್ರಕಾಶ ಕಡಮೆ. ನಾಗಸುಧೆ, ಹುಬ್ಬಳ್ಳಿ.