"ಸಣ್ಣ ಬೆಂಕಿ"
ಕವಿಮಿತ್ರ ನಾಗರಾಜ ಹೆಗಡೆ ಅಪಗಾಲ ಅವರ ಎರಡನೇ ಕವನಸಂಕಲನ "ಸಣ್ಣ ಬೆಂಕಿ". 36 ಕವಿತೆಗಳ ಈ ಸಂಗ್ರಹವನ್ನು ಅವರು ಮೊದಲ ಸಂಕಲನ ಪ್ರಕಟವಾದ ಹನ್ನೊಂದು ವರ್ಷಗಳ ಬಳಿಕ ಹೊರತಂದಿದ್ದಾರೆ. ಇವತ್ತು ಮುದ್ದು ಮುದ್ದೆನ್ನಿಸಿದ್ದು ನಾಳೆ ಪೆದ್ದುಪೆದ್ದಾಗಿ ಕಂಡೀತು ಎಂಬ ಎಚ್ಚರವು ಕಲಿಸಿದ ಕಾಯುವಿಕೆಗೆ ಒಡ್ಡಿಕೊಳ್ಳುವುದು ಕಟ್ಟಿರುವ ರೂಪಕದಂತೆ 'ಸಣ್ಣ ಬೆಂಕಿ' ವ್ಯಕ್ತಗೊಂಡಿದೆ. ಈ ಸಂಕಲನದ ಕವಿತೆಗಳಲ್ಲಿ ಮಧುರ ಭಾವವೊಂದು ಮತ್ತೆ ಮತ್ತೆ ಮುಂದಿರುತ್ತದೆ, ತಲ್ಲಣಗಳು ಒಳಗೆ ದುಮುಗುಡುತ್ತಿದ್ದರೂ. ಅಬ್ಬರಿಸದೆ, ಆಕ್ರಮಿಸದೆ ಅನುಗೊಳ್ಳುವ ಅನುನಯದ ವಿವೇಚನೆ ಇಲ್ಲಿನದು. ಕತ್ತು ಕರಕಲಾಗಿಸದ ಬೇಯದೆ ಹಸಿ-ಬಿಸಿಯಾಗಿಸದ ಸುರಿದುದೆಲ್ಲವುಗಳ ಸಾರ- ಸತ್ವವನುಳಿಸಿ ಹದಗೊಳಿಸುವ ಈ ಸಣ್ಣ ಬೆಂಕಿ 'ಬೆಂಕಿ'ಯೇ ಆದರೂ ದೊಡ್ಡ ಬೆಂಕಿಯಂತಲ್ಲ ಒಲೆಯ ಪರಿಮಿತಿಯಲ್ಲೇ ವರ್ತಿಸುವ ಸಣ್ಣ ಬೆಂಕಿ ಅಕ್ಕಿಯನ್ನು ಅನ್ನವಾಗಿಸುವ ಬೆಂಕಿಯೇ ಹೊರತು, ಅನ್ನದ ನೆಲೆಗಳನ್ನೇ ನುಂಗಿಹಾಕುವ ಬೆಂಕಿಯಲ್ಲ. ನಂಬುವ ದೇವರು, ಅನುಸರಿಸುವ ಧರ್ಮದಂಥ ಎಲ್ಲ ಭಾವನಾತ್ಮಕ ಸಂಗತಿಗಳು ಹಿಂಸೆಗೆ ಎಳಸುತ್ತಿರುವುದಕ್ಕೆ ಕಾರಣವಾಗುವ, ಅವುಗಳಲ್ಲೇ ಅವಿತಿರುವ ಅತಿರೇಕದ ಬಗೆಗಿನ ಅರಿವಾಗಿಯೂ ಸಣ್ಣ ಬೆಂಕಿಯ ಬಗೆಗಿನ ಅಪಗಾಲರ ಗ್ರಹಿಕೆಯನ್ನು ಕಾಣಬೇಕೆನ್ನಿಸುತ್ತದೆ. ಸಾತ್ವಿಕತೆ ಒಂದೆಡೆಗಾದರೆ, ರಾಜಸ ಮತ್ತು ತಾಮಸಗಳೆರಡೂ ಕೂಡಿಕೊಂಡುಬಿಟ್ಟಲ್ಲಿನ ದುರ್ನಡತೆಯೂ ನೋಡುವುದಕ್ಕೆ ಸಾತ್ವಿಕತೆಯಂತೆಯೇ ಕಂಡೂ, ಆಂತರಿಕವಾಗಿ ಎಲ್ಲವನ್ನೂ ಕರಕಲಾಗಿಸುವ ವಿಕಾರ. ಆದರೆ ಈ ವಿಕಾರದ ಕುರಿತು ಮೈಮರೆಯದಂತಿರುವುದಕ್ಕೆ ಸಾಧ್ಯವಾಗುವುದು ಸಾತ್ವಿಕತೆಯ ಬಗೆಗೆ ಸ್ಪಷ್ಟ ತಿಳಿವಳಿಕೆ ಇದ್ದಾಗ ಮಾತ್ರ. ಈ ಹಿನ್ನೆಲೆಯಲ್ಲಿ 'ಸಣ್ಣ ಬೆಂಕಿ' ಸತ್ವ ಮತ್ತು ಶಕ್ತಿಗಳೆರಡರ ತತ್ವ. ಭಾವಗಳ ಜೊತೆಗಿನ ಆರ್ದ್ರ ಸಲ್ಲಾಪದ ಎಳೆಗಳು ಇಲ್ಲಿನ ಕವಿತೆಗಳನ್ನು ಒಂದು ಮಿತಿಯೊಳಗೇ ಇರುವಂತೆ ಬೆಸೆದಿವೆ ಎನ್ನಿಸಿದರೂ, ಇದು ಕವಿಯು ತನ್ನ ತಳಮಳಗಳನ್ನು ಹೇಳುತ್ತಿರುವ ಬಗೆಯೂ ಆಗಿರಬಹುದು ಎಂಬುದೂ ಕಾಡುತ್ತದೆ. ನಂಬಲಾರೆ ನಾನು, ಹೂವಿನೊಡನೆ ನಾರೂ ಸ್ವರ್ಗ ಸೇರಿತೆಂದು ದೇವರೆಂದರೂ! -ಹೀಗೆ ಮುಗಿಯುವ 'ದೇವರೆಂದರೂ' ಎಂಬ ಕವಿತೆ ಶುರುವಾಗುವುದು ಹೂವಿನವಳ ಚಿತ್ರಣದೊಂದಿಗೆ. ಪುರಾಣದ ಕುರಿತ ಮೋಹದಲ್ಲೂ ವರ್ತಮಾನದ ಕುರಿತ ನಿಚ್ಚಳತೆ ಅವಳೊಳಗೆ, ನಾರು ಕಾಣಿಸದಂತೆ ಹೂಕಟ್ಟುವ ನಿಪುಣತೆಯಂತೆಯೇ ಅವಿನಾಭಾವ. ಆದರೂ ಸಾರ್ಥಕತೆಯ ಕುರಿತ ನಿರೀಕ್ಷೆಯು ಉಳಿಸಿಯೇಬಿಡುವ ವಿಷಾದವು ಸಣ್ಣದಲ್ಲ. ನಿಷ್ಠುರವಾದುದನ್ನೂ ಅವಿಚಲಿತ ಚಿತ್ರದ ಮೂಲಕ ಕಾಣಿಸುವ ಈ ಬಗೆಯು ಇಲ್ಲಿನ ಬಹುಪಾಲು ಕವಿತೆಗಳ ಗುಣವೇ ಆಗಿದೆ. ಇವತ್ತಿನ ಸಾಮಾಜಿಕ ಮತ್ತು ರಾಜಕೀಯ ವಾಸ್ತವವನ್ನೂ ಸೂಕ್ಷ್ಮ ಪದಗಳ ಮೂಲಕ ಕಂಡಿರಿಸುತ್ತ ವಿಷಾದದ ನಿಟ್ಟುಸಿರು ತಟ್ಟುವಂತೆ ಕವಿ ಮಾತನಾಡುತ್ತಾನೆ. ಹೂವಿನ ಕುರಿತೇ ಇರುವ 'ಹೂವೆಂದರೆ' ಮತ್ತು 'ನಿತ್ಯಪುಷ್ಟ' ಕವಿತೆಗಳು ಕೂಡ ಸಾರ್ಥಕತೆಯ ಬಗ್ಗೆಯೇ ಮಾತನಾಡುತ್ತವೆ. ಇಲ್ಲಿ ಭಾವುಕತೆಯಿದ್ದರೂ ಪ್ರಕೃತಿಯ ಜೊತೆಗಿನ ಬಂಧವನ್ನು ಒಳಗೊಂಡುದರಿಂದ ನುಡಿಗೊಂಡ ಅನುಭೂತಿ ಅದಾಗಿದೆ. ಈ ಮಾತುಗಳನ್ನೇ ಸಂಕಲನದ ಕಡೆಯ ಕೆಲವು ಕವಿತೆಗಳತ್ತ ವಿಸ್ತರಿಸಬೇಕೆನ್ನಿಸುತ್ತದೆ. ಒಂದು ಹಂತದಲ್ಲಿ ಆಧ್ಯಾತ್ಮಿಕ ಹೊಳಹುಗಳು ನಮ್ಮನ್ನು ದುಃಖವು ಸುತ್ತುವರಿದ ಜಂಜಡಗಳಿಂದ ಬಿಡಿಸಿಕೊಳ್ಳಲು ಒದಗುತ್ತವೆ. 'ಮುಂದೆ - ಹಿಂದೆ', 'ಕಾದಿರುವ ಶಬರಿ', 'ತ್ರಿಶಂಕು' ಈ ಕವಿತೆಗಳು ಒಂದು ನಿರ್ದಿಷ್ಟ ಚಿತ್ರಣದ ಮೂಲಕ ಕಂಡುಕೊಳ್ಳಲು ಕಾತರಿಸುವುದು ಇಂಥ ಬಿಡುಗಡೆಯ ನೆಲೆಯನ್ನೇ. 'ಸತ್ವಪರೀಕ್ಷೆ' ಕವಿತೆಯಲ್ಲಿನ ವ್ಯಂಗ್ಯ ಮತ್ತು 'ವಿಷಾದಯೋಗ' ಕವಿತೆಯ ಉದ್ದಕ್ಕೂ ವ್ಯಕ್ತವಾಗುವ ದುಗುಡ ಮತ್ತೊಂದು ಬಗೆಯ ಬಿಡುಗಡೆ. ಅಪ್ಪ ಅಮ್ಮನ ಬಗ್ಗೆ ಕವಿತೆಗಳಿರುವಂತೆಯೇ ಈ ಸಂಕಲನದಲ್ಲಿ ಹಲವು ಗಣ್ಯರನ್ನು ನೆನೆಯುವ ನುಡಿನಮನದ ರೀತಿಯ ಕವಿತೆಗಳಿವೆ. ಇಲ್ಲೆಲ್ಲ ಕರಾವಳಿಯ ಗಂಧವು ಮನಸ್ಸನ್ನು ಆವರಿಸಿಕೊಳ್ಳುವ ಹಾಗೆ ಸೇರಿಕೊಂಡಿದೆ. ಇವಲ್ಲದೆ, 'ಉಂಬುಳ', 'ಸಂತೆ', 'ಲೋಕ' 'ಇಳಿಜಾರು' ಉಲ್ಲೇಖಿಸಲೇಬೇಕಾದ ಇನ್ನಷ್ಟು ಕವಿತೆಗಳು. ಇವತ್ತು, ರಮ್ಯತೆಯ ಆಚೆಗೆ ಚಿಂತಿಸಬೇಕಾದ ಹೊತ್ತಲ್ಲಿ ಕವಿಯೊಬ್ಬ ಏಕೆ ಮತ್ತು ಏನನ್ನು ಬರೆಯಬೇಕು ಎಂದು ತನ್ನನ್ನು ತಾನು ಕೇಳಿಕೊಳ್ಳಬೇಕಿರುವಂತೆಯೇ, ಓದುಗನೂ ತನ್ನ ದಾರಿಯನ್ನು ಕಂಡುಕೊಳ್ಳುವ ತುರ್ತಿನ ಎಚ್ಚರದಲ್ಲಿಯೇ ನಡೆಯಬೇಕಿದೆ. ಇಂಥ ಹೊತ್ತಲ್ಲಿ ನಾಗರಾಜ ಹೆಗಡೆಯವರ ಒಳನೋಟಗಳು ಕಾಲಘಟ್ಟವೊಂದರ ಜರೂರನ್ನು ಉತ್ತರಿಸುವ ನಿಖರತೆಯೊಂದಿಗೇ ಒಡಮೂಡಿವೆ ಎಂಬುದನ್ನು "ಸಣ್ಣ ಬೆಂಕಿ" ಖಾತರಿಪಡಿಸುತ್ತಿದೆ. ಇದು ತುಂಬ ಸಮಾಧಾನಕರ ಸಂಗತಿ ಮತ್ತು ಅಭಿನಂದನೀಯ. ಹೆಗಡೆಯವರ ಹೊಸ ಕವಿತಗಳು ಇನ್ನಷ್ಟು ಪ್ರಖರತೆಯೊಂದಿಗೆ ಬರಲಿ ಎಂದು ಹಾರೈಸುವೆ. - ವೆಂಕಟರಮಣ ಗೌಡ.