top of page

My Items

I'm a title. ​Click here to edit me.

                         ನಿಶ್ಶಬ್ದ

ನಿಶ್ಶಬ್ದ

ಇಲ್ಲಿ ಇರುವೆ ಕಟ್ಟುತ್ತಿಲ್ಲ ಸಾಲು ಔಷಧಿಮಯ ! ಸಿಂಪಡಣೆ ಇಲ್ಲ ಜಾಗರಣೆ, ಜಾತ್ರಿ ಏಳರಿಂದಲೇ ರಾತ್ರಿ! ದುಸ್ತರದ ಅಯೋಗ್ಯ ದಿನಗಳ ನೂಕಿ ನುಗ್ಗು ಮಾಡುತ್ತಿವೆ ಸಣ್ಣವಾಗುತಿಲ್ಲ ಹರಿಯುತ್ತಿಲ್ಲ ಸಾರು ಕಾರದ ಕಲ್ಲಿನಂತೆ.. ಸುತ್ತುತ್ತಲೇ ಇರುವ ಭೂಮಿ ಅದೇ ಹಗಲು -ರಾತ್ರಿ ನಿದ್ರೆ, ಸ್ನಾನ, ಸ್ಮಶಾನ ಆಲಿಂಗನ ಚುಂಬನ ಎಲ್ಲ ನಿರಂತರ ಆದರೆ ನಿಶ್ಶಬ್ದ ನಡೆಯುತ್ತಲೇ ಇವೆ ರೆಕ್ಕೆ ಪುಕ್ಕಬೀಸಿ ನೆಗೆದು ಮೋಸ ,ಕೈ ಚುಟುಕುತನ ಬಡವಗೆ ಬೆವರು ಹೊಸತೇನಲ್ಲ ಬಿಡಿ ಶ್ರಮದ ಹರಿವು ಹಾಗೆ ಇದೆ ಗೂಟದ ಕಾರು ಹಲ್ಲಿಗೆ ಖಂಡ,ಹೊಟ್ಟೆಗೆ ಶರಾಬು ಸದ್ದಿಲ್ಲದೆ ಸದ್ದು ಸೋಲಲ್ಲಿ ಶೂನ್ಯ ಕಾಣದ ವಾಸ್ತವ ಇನ್ನೂ ಆಶಯದೆಡೆಗೆ ಮರ ಗಿಡ, ಹಳ್ಳ ಕೊಳ್ಳ ಕೋರದಿದ್ದರೂ ಸುಖ ಸ್ವರ್ಗ.. ಭುವಿಯ ಮೈ ಮನಕೆ ವರುಣ, ಅರುಣ ,ವರ್ಷಿಣಿಯರೆಲ್ಲರ ಆಗಮನ ನಾಸಿಕ ರಂಧ್ರ ಮುಚ್ಚಲಾಗಿದೆ ನಯನಗಳು ಎಂದಿನಂತೆ ತೆರೆಯಲಾಗಿದೆ ಬಾಯಿ, ತುಟಿ, ಹಲ್ಲು ಗಳೆಂಬ ಬಡ ಬಗ್ಗರಿಗಂತೂ ಕಡಿವಾಣ ಬಿಡಿ ಅವರ ಬದುಕು ಕಗ್ಗಂಟು ಅಂತ್ಯವಿಲ್ಲದೆಡೆಗೆಲ್ಲ ಸುಖಾಂತ್ಯ ಕನವರಿಸುತ್ತಿದ್ದಾರೆ ಸಂಘ ಜೀವನ ಪ್ರತ್ಯಕ್ಷವಾಗಿದೆ ಕಾಣದ ಜೀವಿಯೊಂದು ಕೇಕೆ ಹಾಕಿ ಈ ನಿಶ್ಶಬ್ದದ ನಡುವೆಯೂ ಭರದಿ ಸಾಗುತ್ತಿದೆ ಗ್ರಾಮೀಣ ಕೃಷಿ ಕುಟುಂಬದಿಂದ ಬಂದಿರುವ ಅರುಣ ಕೊಪ್ಪ ಇವರು ಕಲಾ ವಿಭಾಗದ ಪದವೀಧರರು. ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಈಗಾಗಲೇ ‘ ಭಾವಗಳು ಬಸುರಾದಾಗ’ ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ. ಸದ್ಯದಲ್ಲೆ ಇವರು ಬರೆದ ‘ಹನಿಗಳ ಹಂದರ’ ಎಂಬ ಹನಿಗವಿತೆಗಳ ಸಂಕಲನ ಬೆಳಕು ಕಾಣುತ್ತಿದೆ. ಆಕಾಶವಾಣಿ ಧಾರವಾಡದ ಕವಿ-ಮನ ಸಂದರ್ಶನ ಕಾರ್ಯಕ್ರಮದಲ್ಲಿ ಇವರು ಭಾಗಿಯಾಗಿದ್ದಾರೆ. ಇವರಿಗೆ ಕರುನಾಡ ಸಾಹಿತ್ಯ ರತ್ನ, ಶಿರಡಿ ಶ್ರೀ ಸಾಯಿಬಾಬಾ ರಾಷ್ಟ್ರೀಯ ಪ್ರಶಸ್ತಿ ಮುಂತಾದವು ಲಭಿಸಿವೆ. ಇವರ ಹಲವು ಬರಹಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ಶಿರಸಿ ತಾಲ್ಲೂಕ ಕಬಡ್ಡಿ ಅಮೆಚೂರ್ ಅಧ್ಯಕ್ಷರಾಗಿಯೂ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ) ಬೆಂಗಳೂರು ಇದರ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.- ಸಂಪಾದಕ

                      ವಿದ್ಯಾಗಮದೊಂದಿಗೆ ಕಾಂಟಿ ಪುರಾಣ

ವಿದ್ಯಾಗಮದೊಂದಿಗೆ ಕಾಂಟಿ ಪುರಾಣ

ವಿದ್ಯಾಗಮ ಕಾರ್ಯಕ್ರಮದಡಿಯಲ್ಲಿ ಮಕ್ಕಳ ಮನೆ ಭೇಟಿ ನೀಡಿ ಪಾಠ ಮಾಡುವ ಯೋಜನೆ ಶುರುವಾದದ್ದೆ ಅಣಶಿಯ ಸರ್ಕಾರಿ ಶಾಲೆಯಲ್ಲಿ. ಮಕ್ಕಳು ಯಾವ ಯಾವ ಊರಿನಿಂದ ಶಾಲೆಗೆ ಬರುತ್ತಾರೆ ಎಂಬ ಪಟ್ಟಿ ಮಾಡುವ ಕೆಲಸ ಮೊದಲು ಶುರುವಾಯಿತು. ಜೋಯಿಡಾ ಸದಾ ತನ್ನತನವನ್ನು ಉಳಿಸಿಕೊಂಡ ತಾಲೂಕು. ಉತ್ತರಕನ್ನಡ ಜಿಲ್ಲೆಯಲ್ಲಿ ಬೇರಾವ ತಾಲೂಕಿನಲ್ಲಿಯೂ ಕಾಣಲಾಗದ ಭೌಗೋಳಿಕ ಭಿನ್ನತೆಯನ್ನು ಹೊಂದಿರುವ ತಾಲೂಕು ಜೋಯಿಡಾ. ಇಲ್ಲಿ ಕೆಲಸ ಮಾಡಿದವರಿಗೆ ಮಾತ್ರ ಜೋಯಿಡಾವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಮಳೆಗಾಲವಂತೂ ಜೋಯಿಡಾ ಕತ್ತಲಲ್ಲೇ ಹೆಚ್ಚು ಕಳೆದಿದೆ. ಇತ್ತೀಚಿನ ವರ್ಷಗಳಲ್ಲಿ ಆಗಾಗ ಪ್ರವಾಹಕ್ಕೂ ಸಿಲುಕಿ ನರಳಿದೆ. ಕಾಳಿ ಕೆರಳಿದರೆ ಪ್ರವಾಹ. ನಕ್ಕರೆ ಹಸಿರು ಎಂಬ ರೀತಿ ಜನ ಎಲ್ಲವನ್ನು ಎದುರಿಸಿ ಬದುಕುತ್ತಿದ್ದಾರೆ. ಇದರ ಜೊತೆ ಅಧಿಕಾರಿ ವೃಂದದವರು ಕೂಡ. ಬರೆಯುತ್ತ ಹೋದರೆ ದೊಡ್ಡದಾದ ಕಥೆಯನ್ನು ಹೊಂದಿರುವ ಕಾಳಿ ತೀರದ ಸುಮಾರು ಹದಿನೈದು ಹಳ್ಳಿಗಳಿಂದ ಶಾಲೆಗೆ ಮಕ್ಕಳು ಬರುತ್ತಾರೆ. ಜೋಯಿಡಾದಲ್ಲಿ ಹಳ್ಳಿ ಎಂದರೆ ಕಾಡು ಎಂದರ್ಥ. ಹತ್ತು ಹದಿನೈದು ಮನೆಗಳು ಸೇರಿ ದಟ್ಟ ಕಾನನದಲ್ಲಿ ಯಾವುದೇ ಮೂಲಭೂತ ಸೌಲಭ್ಯವಿಲ್ಲದೆ, ಸರಿಯಾಗಿ ನಾಲ್ಕು ಚಕ್ರದ ಗಾಡಿ ಹೋಗಲು ಜಾಗವಿಲ್ಲದ ಕಿರುದಾರಿಯನ್ನು ಹೊಂದಿರುವ, ಫೋನ್ ಸಿಗ್ನಲ್ ಇಲ್ಲದ, ಕಾಡು ಪ್ರಾಣಿಗಳು ಯಾವಾಗ ಬೇಕಾದರೂ ದರ್ಶನ ಕೊಡಬಹುದಾದ ಊರು. ಇಂತಹುದ್ದೆ ಒಂದು ಊರಿಗೆ ನಾನು ಹಾಗೂ ಸುವರ್ಣ ಟೀಚರು ಹೊರಡುವ ನಿರ್ಧಾರ ಮಾಡಿಕೊಂಡೆವು. ನನ್ನ ಶಾಲೆ ಹಾಗೂ ನನಗೆ ಸಮೀಪವಿರುವ ಪ್ರೌಢಶಾಲೆಯಲ್ಲಿ ಕಲಿಯುವ ಮಕ್ಕಳು ಈ ಹಳ್ಳಿಯಲ್ಲಿದ್ದಾರೆ. ಹೀಗಾಗಿ ಪ್ರೌಢಶಾಲೆಯ ಮಾಸ್ತರರು ಆ ಊರಿಗೆ ಹೋಗುವುದು ಗೊತ್ತಾದ ತಕ್ಷಣ ನಾವು ಅವರೊಟ್ಟಿಗೆ ಹೋಗುವುದೆಂದು ಅಂದುಕೊಂಡು ಹೊರಟಿದ್ದು ಆಯಿತು. ಮೂರ್ತಿ ಸರ್ ಕಾರು ನಮ್ಮನ್ನು ಹೊತ್ತೊಯ್ದ ಆರಂಭದ ಕುಂಭಗಾಳ ಊರಿನ ನಮ್ಮ ಪ್ರಯಾಣ ನಿಜಕ್ಕೂ ಖುಷಿ ತಂದಿತ್ತು. ಮುಖ್ಯ ರಸ್ತೆ ಮುಗಿದು ಕಾರು ಕಿರುದಾರಿ ಆರಂಭಿಸಿ ಒಂದು ಮೈಲಿ ಹೋಗುವಷ್ಟರಲ್ಲಿ ನವೀನ ಸರ್ ಅವರಿಗೆ ಕಾರು ಹತ್ತುವ ಇಳಿಯುವ ಕೆಲಸ ನಿರ್ವಹಿಸಬೇಕಾಯಿತು. ಇದ್ದ ಚೂರು ಪಾರು ಕಾಂಕ್ರೀಟ ರಸ್ತೆಯ ಎಡಬಲ ಬದಿಗೆ ನೀರು ಬಂದು ಮಣ್ಣು ಕೊಚ್ಚಿಕೊಂಡು ಹೋಗಿ ಇಕ್ಕಟ್ಟಾದ ದಾರಿ ನಿರ್ಮಾಣವಾಗಿತ್ತು. ಹೀಗಾಗಿ ಕಾರು ನೇರವಾಗಿ ಚಲಿಸಬೇಕಾಗುತ್ತಿತ್ತು ಚೂರು ಡೊಂಕಾದರೂ ಕಾರಿನ ಚಕ್ರಗಳು ಹುಗಿದು ಹೋಗುವ ಸಾಧ್ಯತೆ ಬಹಳ ಇತ್ತು. ಇದರ ಜೊತೆ ಜೊತೆಗೆ ಆ ದಾರಿಯಲ್ಲಿ ಬೇರಾವ ಗಾಡಿಗಳು ಚಲಿಸದ ಕಾರಣ ರಸ್ತೆಯುದ್ದಕ್ಕೂ ಬಿದ್ದ ಮರದ ಗೆಲ್ಲುಗಳನ್ನು ಎತ್ತಿ ಬದಿಗೆ ಸರಿಸುವ ಕೆಲಸ ನವೀನ ಸರ್ ಮಾಡಬೇಕಾಗಿತ್ತು. ಮರದ ದೊಡ್ಡ ಟೊಂಗೆಗಳು ಎಲೆಯನ್ನು ಹೇರಿಕೊಂಡು ಭಾರವಾಗಿಯೂ ಇರುತ್ತಿದ್ದವು. ಜೋರು ಮಳೆಯಲ್ಲಿ ಕಾರಿನಿಂದ ಪದೆ ಪದೆ ಇಳಿಯುವ ಹತ್ತುವ ಅವರ ಸರ್ಕಸ್ ಆಯಾಸದ ಕೊಡುಗೆ ನೀಡಿತ್ತು. ಅಂತೂ ಎಲ್ಲ ದಾಟುತ್ತ ಸ್ವಲ್ಪ ಮುಂದೆ ಹೋದಂತೆಲ್ಲ ಸಿಕ್ಕಿದು ಸಣ್ಣ ಹಳ್ಳ. ನೀರು ಜೋರಾಗಿ ಹರಿಯುತ್ತಿತ್ತು. ಹೀಗಾಗಿ ನವೀನ ಸರ್ ಇಳಿದು ನೀರಿನ ರಭಸ ಪರಿಶೀಲಿಸಿ ಕಾರು ದಾಟಿಸಬಹುದು ಎಂದರಾದರೂ ನಮಗೆ ಒಂಥರಾ ಭಯ. ಹೀಗಾಗಿ ನಾನು ಸುವರ್ಣ ಟೀಚರು ಕಾರು ಇಳಿದುಕೊಂಡು ಆ ಹೊಳೆಯನ್ನು ದಾಟಲು ಮುಂದಾದೆವು. ಉಟ್ಟ ಸೀರೆಯನ್ನು ಮೊಣಕಾಲಿನವರೆಗೂ ಎತ್ತಿ ಆ ಹಳ್ಳ ದಾಟುವಾಗ ಒಂದೆಡೆ ಆತಂಕ. ಮಳೆಯ ರಭಸದಲ್ಲಿ ಹರಿಯುವ ನೀರಿನಲ್ಲಿ ಹಾವು ಕಂಡರೆ, ನೀರಿನ ಹರಿವು ಜೋರಾಗಿ ನಮ್ಮನ್ನು ಬೀಳಿಸಿಬಿಟ್ಟರೆ ಎಂದೆಲ್ಲ ಯೋಚಿಸಿ ಕೈ ಹಿಡಿದು ನದಿಯನ್ನು ದಾಟಿ ಆಗಿತ್ತು. ಕಳೆದ ಮಳೆಗಾಲದಲ್ಲಿ ಕುಂಭಗಾಳ ದ್ವೀಪವಾಗಿ ವಾರಗಟ್ಟಲೆ ನೀರು ತುಂಬಿದ್ದ ಕಥೆಯನ್ನು ಶಶಿಕಾಂತ ಹುಲಿ ಸರ್ ಹೇಳಿದ್ದು ತಟ್ಟನೆ ನೆನಪಾದರೂ, ಮಕ್ಕಳನ್ನು ಭೇಟಿ ಮಾಡಿ ಅವರಿಗೆ ಅಭ್ಯಾಸದ ಹಾಳೆಗಳನ್ನು ತಲುಪಿಸಬೇಕೆಂಬ ಹಂಬಲ ಕುಂಭಗಾಳದ ಹಳ್ಳವನ್ನು ದಾಟಿಸಿತ್ತು. ಕುಂಭಗಾಳದ ಕುಣಬಿಗಳ ಫಾಯ್ಕ ದೇವರ ಸಣ್ಣ ಗುಡಿ ಅಷ್ಟೇನು ಎತ್ತರದ ತಳಪಾಯ ಹೊಂದಿಲ್ಲದಿದ್ದರೂ ಆರಾಮವಾಗಿ ಎಲ್ಲರನ್ನು ಕೈ ಬೀಸಿ ಕರೆಯುತ್ತಿತ್ತು. ಹಳ್ಳದ ಸಮೀಪ ಈ ಗುಡಿ ಇದ್ದರೂ ಗುಡಿಯ ಬಳಸಿ ಹರಿವ ನೀರು ಚೂರು ಒಳಗೆ ಹೋಗದೆ ತನ್ನ ಪಾಡಿಗೆ ಬದಿಯಲ್ಲಿ ಹರಿದು ಹೋಗುವ ನೋಟ ಮನದಲ್ಲಿ ಮಕ್ಕಳಂತೆ ಹಾಗೆ ಉಳಿದು ಬಿಟ್ಟಿತ್ತು. ಇನ್ನು ಸಾಕಷ್ಟು ದೂರವಿದೆ ಎಂದು ನಮಗಂತು ಅಲ್ಲಿವರೆಗೆ ಅನಿಸಿರಲಿಲ್ಲ. ಚೂರು ಮುಂದೆ ಹೋದರೆ ಸಾಕು ಇಲ್ಲೆ ಇಲ್ಲೆ ಎಂದು ಸರ್ ಗಳು ಹೇಳಿ ಹೇಳಿ ಸುಮಾರು ಮೂರು ಕಿ. ಮೀ ನಡೆದದ್ದು ಊರು ತಲುಪಿದ ನಂತರ ತಿಳಿದ ವಿಷಯ. ಮಕ್ಕಳನ್ನು ನೋಡುವ ಉಮೇದಿ ಒಂದು ಕಡೆಯಾದರೆ ಇನ್ನೊಂದೆಡೆ ಕಾಡಿನ ಅವ್ಯಕ್ತ ಮೌನ ಮನಸ್ಸನ್ನು ಅಲುಗಿಸಿತ್ತು. ನಡೆಯಲು ಆರಂಭಿಸಿದ ಮೇಲೆಯೆ ನಮಗೆ ಕಾಂಟಿ(ಉಂಬಳ)ಯ ನಿಜ ಅವತಾರ ನೋಡಲು ಸಿಕ್ಕಿದ್ದು. ಇಲ್ಲಿಯವರೆಗೆ ಒಂದಿಷ್ಟು ಕಾಂಟಿಗಳು ಹಿಂದೆಲ್ಲ ನಮ್ಮ ಮಾತಾಡಿಸಿದ್ದು ಉಂಟು. ಶಾಲೆಯ ಬಳಿ ಗಿಡ ನೆಡಲು ಹೋದಾಗ, ಸ್ವಚ್ಛತಾ ಆಂಧೋಲನಕ್ಕೆ ಹೋದಾಗ, ಇಕೋ ಕ್ಲಭ ಪರಿಸರ ಸ್ವಚ್ಛತೆ ಜಾಗೃತಿ ಜಾಥಾ ಹಮ್ಮಿಕೊಂಡಾಗ, ಅಣಶಿಯಲ್ಲಿ ತಾಲೂಕಾ ಮಟ್ಟದ ಪ್ರೌಢಶಾಲೆ ಕ್ರೀಡಾ ಕೂಟವಾದಾಗ ನಮಗೆ ಕಾಂಟಿ ಮಾತಾಡಿಸಿದ್ದು ನಿಜ. ಅವು ನಮ್ಮ ಕಾಲು ಅರಸಿ ಹತ್ತುವಷ್ಟರಲ್ಲಿ ಎಚ್ಚರಗೊಂಡು ಕಾಲು ಕೊಡವಿ ಆರಾಮವಾಗುತ್ತಿದ್ದೆವು. ಇನ್ನು ವಿನೋದ ಸರು ಸಕಲ್ ಮಾಟಗಾಂವ ಶಾಲೆಗೆ ಹೋದರೆ ದೊಡ್ಡದಾದ ಅಗಲವಾದ ಕಾಂಟಿ ಹತ್ತಿಸಿಕೊಂಡು ಬರುತ್ತಿದ್ದರು. ಅವರ ಎರಡು ಚಕ್ರದ ಗಾಡಿಯ ಸಂಧಿಯಲ್ಲಿಯೇ ಅವು ಹೊಕ್ಕಿ ಮನುಷ್ಯರ ವಾಸನೆ ಅರಸಿ ದಾಳಿ ಮಾಡುತ್ತಿದ್ದವು. ಇಷ್ಟೆ ನಮಗೆ ಅವುಗಳ ಬಗ್ಗೆ ಗೊತ್ತಿತ್ತು ಬಿಡಿ. ಉಳಿದ ಕಥೆಗಳನ್ನು ದೂರದೂರಿನಿಂದ ನಡೆದು ಬರುವ ಮಕ್ಕಳು ಹೇಳುತ್ತಿದ್ದುದ್ದನ್ನು ಕೇಳಿ ತಿಳಿದುಕೊಳ್ಳುತ್ತಿದ್ದೆವು. ಮಕ್ಕಳ ಕಥೆಗಳು ಕುಂಭಗಾಳದ ದಾರಿಯಲ್ಲಿ ಹೆಜ್ಜೆ ಹಾಕಿದಾಗ ನೆನಪಾಗಿ, `ಬೇಗ ಬೇಗ ಹೆಜ್ಜೆ ಹಾಕಿದರೆ ಕಾಂಟಿ ಹತ್ತುವುದಿಲ್ಲ' ಎಂದು ಸುವರ್ಣ ಟೀಚರು ಎಚ್ಚರಿಸಿ ಬೇಗ ಹೆಜ್ಜೆ ಹಾಕಿದ್ದು ನಿಜ. ನಮ್ಮ ನಡಿಗೆಯ ವೇಗ ಹೆಚ್ಚಿದರೆ ಕಾಂಟಿ ಹತ್ತುವುದಿಲ್ಲ ಎಂಬ ವಿಶ್ವಾಸ. ಒಂದಷ್ಟು ಮುಂದೆ ಹೋದೆವು. `ನೀರಿನಲ್ಲಿ ಹೋದರೆ ಕಾಂಟಿ ಹತ್ತುವುದಿಲ್ಲ' ಎಂದು ಮಕ್ಕಳು ಹಿಂದೆ ಹೇಳಿದ್ದು ನೆನಪಿಸಿಕೊಂಡು ಸುವರ್ಣ ಟೀಚರ್‍ಗೆ ನಾನು ಒಂದು ಸಲಹೆ ಕೊಟ್ಟೆ. ಅಂತೂ ಇಂತು ಆದಷ್ಟು ಲಕ್ಷ್ಯ ವಹಿಸಿ ಮುಂದೆ ಸಾಗುತ್ತಿದ್ದಂತೆ ಮೂರ್ತಿ ಸರ್ ಸೆನಿಟೈಜರ್ ಹಿಡಿದು ಓಡಿಯೇ ಬಂದರು. `ನವೀನ ಸರ್ ಕಾಲಿಗೆ ಹತ್ತಿಪ್ಪತ್ತು ಕಾಂಟಿ ಹತ್ತಿ ಎಲ್ಲ ತೆಗೆದು ತೆಗೆದು ಹಾಕುತ್ತಿದ್ದಾರೆ. ನಿಮ್ಮ ಕಾಲು ನೋಡಿ' ಎಂದದ್ದೆ ಗಡಿಬಿಡಿಗೊಂಡು ಜೋರು ಹುಡುಕಾಡಿದೆವು. ಅದಾಗಲೆ ಸುವರ್ಣ ಟೀಚರ್ ಕಾಲಿನ ಗೆಜ್ಜೆಯ ಒಳಗೆ ಕಾಂಟಿ ಹೊಕ್ಕಿ ರಕ್ತದ ರುಚಿ ನೋಡುತ್ತಿತ್ತು. ಅವರಂತೂ ಅಸಹ್ಯದಿಂದ ಕಾಲು ಕೊಡವಿದರೂ ಅದು ಬೀಳಲಿಲ್ಲ. ಕೋಲಿನಲ್ಲಿ ತೆಗೆಯಲು ಹೋದೆ. ಅಷ್ಟರಲ್ಲಿ ನವೀನ ಸರು ತಡೆದು ಕೋಲಿನಿಂದ ತೆಗೆದರೆ ನಂಜು ಹೆಚ್ಚಾಗುತ್ತದೆ. ಅದಾಗಿಯೆ ಬಿಡುವಂತೆ ಮಾಡಬೇಕು. ಎಳೆದು ತೆಗೆಯಲೂ ಬಾರದು ಎಂದು ಕಾಂಟಿ ಕಚ್ಚಿದ ನಂತರದ ಪರಿಸ್ಥಿತಿ ಹೇಳಿದಾಗ ಮತ್ತಷ್ಟು ಸಂಕಟವಾಯಿತು. ಕೊನೆಗೆ ಮೂರ್ತಿ ಸರು ಸೆನಿಟೈಜರ್ ಹಾಕಿದರೆ ಬೀಳುತ್ತದೆ ಎಂದು ಹಾಕಿದಾಗ ಪಟಕ್ಕನೆ ಕಾಂಟಿ ಉದುರಿ ಬಿತ್ತು. ಅಬ್ಬಾ! ನಿರಾಳ ಎನ್ನುವಷ್ಟರಲ್ಲಿ ಮತ್ತೊಂದು ಕಾಂಟಿ ಹತ್ತಬೇಕೆ... ಅರೆ ಮತ್ತೊಂದು... ಇನ್ನೊಂದು... ಸುಮಾರು ಐದದು ಕಾಂಟಿಗಳು ಹತ್ತಿ ನಾನು ಸುವರ್ಣ ಟೀಚರು ಅದನ್ನು ನೋಡಿಯೇ ಸುಸ್ತಾಗಿ ಹೋದೆವು. `ಇಲ್ಲಿಯೆ ನಿಂತರೆ ಮತ್ತೆ ಹತ್ತುತ್ತವೆ. ನಡೆಯುತ್ತಾ ಕಾಂಟಿ ತೆಗೆದುಕೊಳ್ಳುತ್ತಾ ಹೋಗಿ' ಎಂಬ ಮೂರ್ತಿ ಸರ್ ಸಲಹೆ ಪಾಲಿಸಲು ಹರಸಾಹಸ ಪಡಬೇಕಾಯಿತು. ಒಂದೆಡೆ ಜೋರು ಮಳೆ ಗಾಳಿ. ಎತ್ತರೆತ್ತರ ಮರಗಳು ಮೈಮೇಲೆ ಎರಗಿದಂತೆ ಓಲಾಡುತ್ತಿವೆ. ಇನ್ನೊಂದೆಡೆ ಕೈಯಲ್ಲಿ ಕಲಿಕಾ ಸಾಮಗ್ರಿ, ಅಭ್ಯಾಸದ ಹಾಳೆಗಳ ಚೀಲ. ಉಟ್ಟ ಸೀರೆಯ ನೆರಿಗೆಗಳ ಜೊತೆ ನಮ್ಮ ಇಡೀ ದೇಹವೇ ಕಂಪಿಸುತ್ತಿರುವಂತೆ ಅನ್ನಿಸುವಾಗ ಕಾಂಟಿ ಎಲ್ಲಿ ಹತ್ತುತ್ತದೆ ಎಲ್ಲಿ ಏಳುತ್ತದೆ ಎಂದೇ ತಿಳಿಯುತ್ತಿರಲಿಲ್ಲ. ಮನುಷ್ಯನ ವಾಸನೆ ತಟ್ಟನೆ ಗ್ರಹಿಸುವ ಅವು ಹಾವಿನ ಹೆಡೆಯಂತೆ ತಲೆ ಎತ್ತಿ ಎದ್ದು ಹತ್ತಿಕೊಂಡು ಬಿಡುತ್ತವೆ. ನನ್ನ ಕಾಲಿಗೆ ತೆಗೆಯಲಾರದಷ್ಟು ಹತ್ತಿ ಏನು ಮಾಡುವುದೆಂದೇ ತಿಳಿಯದೆ, ಮಳೆಯನ್ನು ಲೆಕ್ಕಿಸದೆ ಅಲ್ಲೆ ಇದ್ದ ಗಿಡಕ್ಕೆ ಬ್ಯಾಗು ಚೀಲ ಎಲ್ಲ ತೂಗಿ ಕಾಲನ್ನು ಕೊಡವಿ ಏನೇನೋ ಸರ್ಕಸ್ ಮಾಡಿ ಮುಗಿಸಿದೆ. ಬೀಳಲಿಲ್ಲ. ಕೊರೋನಾ ಹಿನ್ನೆಲೆಯಲ್ಲಿ ಸೆನಿಟೈಜರ್ ಬಾಟಲಿ ತಂದದ್ದು ಒಳ್ಳೆಯದೇ ಆಯಿತು ಎನಿಸಿತು. ಕಾಲಿಗೆ ಹಾಕಿದಾಗ ಅವು ಪಟಪಟನೆ ಉದುರಿ ಬೀಳುತ್ತಿದ್ದವು. ಸತ್ತಂತೆ ಅನಿಸಿದರು ಕ್ಷಣ ಮಾತ್ರದಲ್ಲಿ ಮತ್ತೆ ಎದ್ದು ಕಚ್ಚಲು ರೆಡಿ ಆಗಿ ಬರುತ್ತಿದ್ದವು. ಹೀಗಾಗಿ ಒಂದೆಡೆ ಸ್ವಲ್ಪ ಆರಾಮ ಪಡೆಯುವ ಎಂದು ನಾವು ಎಣಿಸಿದರೆ ಸಾಧ್ಯವೇ ಆಗುತ್ತಿರಲಿಲ್ಲ. ಅಂತೂ ಇಂತೂ ಕುಂಭಗಾಳದ ಸೇತುವೆ ಬಳಿ ನಿಂತಾಗ ಚೂರು ಸಮಾಧಾನ ಆಯಿತು. ಸುತ್ತ ನೀರಿನ ಸದ್ದು ಬಿಟ್ಟರೆ ಬೇರಾವ ಸದ್ದು ಇರಲಿಲ್ಲ. ಬೀಸುವ ಗಾಳಿಗೆ ನನ್ನ ಛತ್ರಿಯೂ ಬಲಿಯಾಗಿತ್ತು. ಆ ಮಳೆಯಲ್ಲೆ ಒಂದಿಷ್ಟು ಫೋಟೋಗಳು ಕ್ಲಿಕ್ಕಾಗಿ ನಮ್ಮ ಪ್ರಯಾಣ ಮತ್ತೆ ಮುಂದುವರೆಯಿತು. ಒಂದು ಗುಡ್ಡ ಹತ್ತಿ ಇಳಿದ ನಂತರ ಕುಂಭಗಾಳದ ಜನ ಗದ್ದೆಯಲ್ಲಿ ಕೆಲಸ ಮಾಡುತ್ತಿರುವುದು ದೂರದಿಂದ ಕಂಡಿತು. ಆಗ ಜೀವ ಬಂದ ಹಾಗಾಯಿತು. ಇದುವರೆಗೆ ಕಾಡು ಪ್ರಾಣಿಗಳ ಭಯ ನೆರಳಂತೆ ನಮ್ಮ ಬೆನ್ನಿಗಂಟಿರುವಾಗ ನಿರಾಯಾಸವಾಗಿ ಉಸಿರು ತೆಗೆಯುವುದಾದರೂ ಹೇಗೆ? ಹೀಗಾಗಿ ಜನ ಕಂಡೊಡನೆ ಮತ್ತೆ ಹೆಜ್ಜೆಗಳು ಜೋರಾಗಿ ಚಲಿಸತೊಡಗಿದವು. ನವೀನ ಸರ್ ಕಾಲಿಗೆ ಮತ್ತೆ ಹತ್ತು ಉಂಬಳ ಕಚ್ಚಿದರೂ ಅವರು ತೆಗೆಯುವ ಗೋಜಿಗೆ ಹೋಗಲೇ ಇಲ್ಲ. ಅವರ ಕಾಲಿಗಂತೂ ಸದಾ ತೆಗೆದಷ್ಟು ದುಪ್ಪಟ್ಟು ಕಾಂಟಿ ಹತ್ತುವ ವಿಷಯ ಎಲ್ಲ ಅಕ್ಕೋರಿಗೆ ಮಾಸ್ತರಿಗೆ ಗೊತ್ತಿತ್ತು. ಇಂದು ಕೂಡ ಬೇರೆಲ್ಲರಿಗಿಂತ ಅವರಿಗೆ ಕಾಂಟಿ ಹೆಚ್ಚು ಹತ್ತಿದ್ದು. ಹೀಗಾಗಿ `ಕಾಂಟಿ ಶತಕ ವೀರ' ಎಂದು ನಡೆದು ಬಂದ ಕಷ್ಟದಲ್ಲೂ ಹೇಳಿಕೊಂಡು ಒಂದಿಷ್ಟು ನಕ್ಕದ್ದು ಆಯಿತು. ಗದ್ದೆ ದಾಟಿದ ನಂತರ ಎದುರಾದದ್ದೆ ಅಲ್ಲಿನ ಈಶ್ವರ ದೇವಸ್ಥಾನ. ಸುಮಾರು ಹನ್ನೆರಡು ಮನೆಗಳಿರುವ ಊರು ಅದು. ಒಂದು ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಬಿಟ್ಟರೆ ಅಲ್ಲಿ ಬೇರಾವ ಸರಕಾರಿ ಕಟ್ಟಡ ಇರಲಿಲ್ಲ. ಊರಿನ ಜನ ಹಸಿರ ನಡುವೆ ಕಟ್ಟಿದ ದೇಗುಲಕ್ಕೆ ಚಂದವಾಗಿ ಬಣ್ಣ ಬಳಿದು ಎದ್ದು ಕಾಣುವಂತೆ ಮಾಡಿದ್ದರು. ಸುವರ್ಣ ಟೀಚರು ಹಾಗು ನಾನು ಶಾಲೆ ಮುಟ್ಟುವಷ್ಟರಲ್ಲಿ ನನ್ನ ಕಾಲಿನಲ್ಲಿ ರಕ್ತ ಒಸರಿ ಸೀರೆಗೂ ತಾಗಿತ್ತು. ಕಾಂಟಿಯೊಂದು ಗೊತ್ತಿಲ್ಲದೆ ಹತ್ತಿ ತನ್ನ ಹೊಟ್ಟೆ ತುಂಬಿಸಿಕೊಂಡಿತ್ತು. ಅಲ್ಲೆ ಹರಿಯುತ್ತಿದ್ದ ತೊರೆಯ ಬಳಿ ಸೀರೆ, ಕಾಲಿಗೆ ಅಂಟಿದ ರಕ್ತ ತೊಳೆದುಕೊಂಡು ಒಂದಿಷ್ಟು ಸುಧಾರಿಸಿಕೊಂಡೆವು. ಅಷ್ಟರಲ್ಲಿ ಹುರುಪಿನಿಂದ ತಮ್ಮ ಶಿಕ್ಷಕರು ಇಲ್ಲಿಯವರೆಗು ಬಂದಿದ್ದಾರೆಂಬ ಸುದ್ದಿ ಗದ್ದೆ ಕೆಲಸ ಮಾಡುತ್ತಿದ್ದ ಅವರ ಪಾಲಕರ ಮೂಲಕವಾಗಿ ಅವರಿಗೂ ತಲುಪಿ ದೇಗುಲದ ಕಡೆ ಅವರೆಲ್ಲ ಓಡಿಯೇ ಬಂದಿದ್ದರು. ಖುಷಿಯಿಂದ ಹೊಳೆಯುತ್ತಿದ್ದ ಮಕ್ಕಳ ಕಣ್ಣು ನೋಡಿ ಕಾಂಟಿಯ ಅವತಾರಗಳೆಲ್ಲ ಮರೆತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವತ್ತ ಮನಸ್ಸು ಜಾರಿತ್ತು. ಸಮಯ ಮೆಲ್ಲನೆ ಸರಿದು ನೆಂದ ನಮ್ಮ ಸೀರೆಗಳ ಮೇಲೆಲ್ಲ ಚಳಿ ಬಹು ಬೇಗ ಬಂದು ಕುಳಿತಿತ್ತು. ಅಕ್ಷತಾ ಕೃಷ್ಣಮೂರ್ತಿ

                     ಮಹಾಭಾರತ

ಮಹಾಭಾರತ

ಹೆಣಗಳ ಮುಂದೆ ನಿಂತು ಗೋಳಿಡುವ ಸುಯೋಧನನ ನೆರಳು ಕಾಡುತಿದೆ ಜಗವ ಕಪ್ಪೆಯ ಮೇಲಿನ ಸಪ್ಪದ ಛಾಯೆಯಂತೆ ಮೈವೆತ್ತಿತಲ್ಲ ವಿಧಿಯೇ ನುಂಗುವ ಅವತಾರವಾಗಿ ಸಾಲದೆಂದು ದುಶ್ಯಾಸನನ ರೂಪ ತಾಳಿ ಮರುಳು ಪಾಂಡವರೆಲ್ಲರೆಂದು ಬಗೆದು ಭುವನವನಾಕ್ರಮಿಸಿ ತಿಂದು ಜಗಿದು ಲಸಿಕೆ ಹೊರಡುವ ಸೂಜಿ ಮೊನೆಯೂ ತನ್ನದೆಂದು ಬಿಡದೆ ಮುನಿದು ಅಟ್ಟಹಾಸಗೈದೆ ಶಾಸನಗಳ ಕೊಂದು ಕವಡೆ ಮೇಲಿನ ಚುಕ್ಕೆ ಸಂಖ್ಯೆ ಹೆಣೆದ ವಿಷದ ವ್ಯೂಹ ಚಿಂತೆ ಪಗಡೆಯಾಟದ ದ್ಯೂತದೊಳಗೆ ಬಿಕರಿಗಿದೆ ಪ್ರಾಣ, ಆತ್ಮ ಜೋಳಿಗೆ ಅಮರ ಪ್ರೇಮ ಭವದ ಮೋಹ ನುಚ್ಚು ನೂರು ವ್ಯಾಕರಣ ನೇಹ ದಂದಶೂಕನಂತೆ ದ್ರೌಪದಿಯ ಸೆರಗು ಹರಿದು ನುಂಗುತಿದೆ ಜಗದ ಸೊಬಗು ಕಂಗೆಟ್ಟ ಮುಡಿಯ ಕೇಶದ ಬಲೆ ವಿಸ್ಮಯ ಹೆಣೆದು ಪಡೆದ ಜೀವ ಕಲೆ ಎಂದು ಬರುವ ಭೀಮ ನೊಂದು ಕಾಯಬೇಕು ಎಲ್ಲಿಯವರೆಗೆ ಬೆಂದು ಭೇದಿಸಲು ಹೊರಟ ಚಕ್ರವ್ಯೂಹ ಸುಳಿಗೆ ಒಳಸುಳಿಯ ದ್ರೋಹ ಬಗೆದು ಅಭಿಮನ್ಯುಗಳ ಆಹುತಿ ಪಡೆದು ಕಾಲಾಗ್ನಿರುದ್ರನಂತೆ ಮೆರೆದು ಮಹಿಪತಿಗಳ ಮೀರಿ ತುಳಿದು ಮರುಕಳಿಸಿರಲ್ಲ ಚರಿತೆ ಯುಗಬರಹ ತೊಳೆದು -00- ಶ್ರೀ ಚಂದ್ರಶೇಖರ ಹೆಗಡೆಯವರು ಮೂಲತಃ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದವರಾಗಿದ್ದು ಅಧ್ಯಾಪಕರಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ. ಕಾವ್ಯ, ಪ್ರಬಂಧ, ಕತೆ ಹಾಗೂ ವಿಮರ್ಶೆ ಹೀಗೆ ಸಾಹಿತ್ಯದ ವಿವಿಧ ಆಯಾಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗಾಗಲೇ "ಬರಹವೆಂಬ ನಿತ್ಯ ಧ್ಯಾನ" ಎಂಬ ಸಂಪಾದನಾ ಕೃತಿ ಹಾಗೂ "ಭೌತವಾದ" ಎಂಬ ವಿಮರ್ಶಾ ಗ್ರಂಥಗಳನ್ನು ರಚಿಸಿರುವ ಇವರ ೩೦ ಕ್ಕೂ ಹೆಚ್ಚು ಕಾವ್ಯ, ಕತೆ, ಸಂಶೋಧನಾ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕನ್ನಡದ ಪ್ರಮುಖ ಬ್ಲಾಗಿಸ್ಟ್ ಆಗಿರುವ ಶ್ರೀಯುತರು cbhegade.blogspot.in ಎಂಬ ವಿಳಾಸದ ಬ್ಲಾಗಿನಲ್ಲಿ 2017 ರಿಂದ ಕ್ರಿಯಾಶೀಲರಾಗಿದ್ದಾರೆ.- ಸಂಪಾದಕ

                     ಮೌನ ಮುರಿದಾಗ

ಮೌನ ಮುರಿದಾಗ

ಏಕಾಂಗಿಯಾಗಿ ರೋದಿಸುತ್ತಿತ್ತು ದನಿ ಹೊರಡಿಸಲಾಗದೇ ಪುಟ್ಟ ಹಕ್ಕಿಯೊಂದು ಕಾಡಿನಾ ಗೂಡಿನಲಿ ಕುಳಿತು ಹಾಡದೆ ಕಾಲ ಅದೆಷ್ಟಾಯಿತೋ ಲೆಕ್ಕ ಇಟ್ಟವರಾರು? ಕತ್ತು ಹೊರಳಿಸಿ, ಹೊರಳಿಸಿ ನೋಡಿತೊಮ್ಮೆ ಗೂಡಿನಾಚೆ ಮೇಲೆ ನೀಲಾಕಾಶ ಸರಿದಾಡುವ ಮೋಡಗಳು ಗಿಡ, ಮರ, ಬಳ್ಳಿಗಳು ತೂಗಾಡಿವೆ ಹೂ ಹಣ್ಣುಗಳು ಅಲಲ್ಲಿ ನೀರ್ಝರಿಗಳು, ಸರೋವರಗಳು ಹಸಿರ ನುಕ್ಕಿಸುವ ವನದೇವಿ ಸೊಬಗಿನ ನೆಲೆವೀಡು ಕಣ್ಣರಳಿಸಿ ನೋಡೇ ನೋಡಿತು ರೆಕ್ಕೆ ಜಾಡಿಸಿತೊಮ್ಮೆ ಹೊರಬಂದು ಪುರ್ರನೆ ಹಾರಿತು ನೆಗೆ ನೆಗೆದು ನಭದತ್ತ ಮೊಗಮಾಡಿ ಮರದಿಂದ ಮರಕ್ಕೆ ಹಾರಿ ಹಾರಿ ಕುಣಿದೇ ಕುಣಿಯಿತು ನಲಿನಲಿದು ನಿರ್ಭಿಡೆಯಿಂದ ತೇಲಾಡಿತು ಕಾಡಿನಾ ಉದ್ದಗಲದಲಿ ಸಂಚರಿಸಿ ಅರೇ! ಅಲೆ ಅಲೆಯಾಗಿ ತೇಲಿಬಂತು ಹೊರಟಿತದೋ ದನಿ ಕಾಡನಾವರಿಸಿ, ಅನುರಣಿಸಿ ಮೌನ ಮುರಿಯಿತು ಹಕ್ಕಿ ಮೂಕವಾಯಿತು ತೊನೆವ ಕಾಡು. =000= ಸುಭದ್ರಾ ಹೆಗಡೆ

                     ವೃದ್ಧಜೀವ ಹರೋಹರ !

ವೃದ್ಧಜೀವ ಹರೋಹರ !

ಅಂದಾಜು ಮೂರು ದಿನಗಳಾಗಿರಬಹುದು, ಬಾಳಕೃಷ್ಣ ಮಾಮಾ ತಮ್ಮ ಊರುಗೋಲಿಗಾಗಿ ತಡಕಾಡಲು ಪ್ರಾರಂಭಿಸಿ. ಯಾವ ಸುತ್ತಿನಲ್ಲಿ ತಡಕಾಡಿದರೂ ಕೈಗೆ ಸಿಗೂದೇ ಇಲ್ಲ ಅದು! ತಡಕಾಡುವ ಐಚ್ಛಿಕ ಕ್ರಿಯೆಯೊಂದಿಗೆ ‘ಪಾರತೀ, ನನ್ ದೊಣ್ಣೆ ಎಲ್ಲಿ...?’ ಎಂಬ ಅನೈಚ್ಛಿಕ ಕರೆಯೂ ಬೆರೆತಿದೆ. ಪಿತುಗುಡುವ ವೃದ್ಧಾಪ್ಯದ ಸಿನುಗು ನಾತದೊಂದಿಗೆ ಮೂರು ದಿನಗಳ ಅವರ ಮಲಮೂತ್ರಾದಿ ಸಕಲ ವಿಸರ್ಜನೆಗಳೂ ಒಂದರೊಳಗೊಂದು ಬೆರೆತು ಮನುಷ್ಯ ಮಾತ್ರರು ಕಾಲಿಡಲಾಗದಂತಹ ದುರ್ನಾತ ಆ ಕೋಣೇಲಿ ಇಡುಕಿರಿದಿದೆ. ಬಾಳಕೃಷ್ಣ ಮಾಮನ ಗೋಳನ್ನು ಕೇಳಿ ಅವನನ್ನು ಆ ಉಚ್ಚಿಷ್ಟಗಳ ತಿಪ್ಪೆಯಿಂದ ಕೈಹಿಡಿದು ಕರೆತರುವ ಕರುಣಾಳು ಒಬ್ಬರೂ ಇಲ್ಲವೆ? ಮೂರು ದಿನಗಳ ಹಿಂದಿನವರೆಗೆ ಇದ್ದರು, ಈಗ ಇಲ್ಲ! ಮೂರು ದಿನಗಳ ಹಿಂದಿನವರೆಗೆ ಕಣ್ಣು ಕಾಣದ, ಕಿವಿ ಕೇಳದ ಸ್ವತಂತ್ರವಾಗಿ ನಡೆಯಬಲ್ಲಷ್ಟು ಸದೃಢವಾದ ಕಾಲಿಲ್ಲದ ಬಾಳಕೃಷ್ಣ ಮಾಮಾನಿಗೆ ಕಣ್ಣಾಗಿ, ಕಿವಿಯಾಗಿ, ಊರುಗೋಲಾಗಿ.... ಅವರದೆಲ್ಲವನ್ನೂ- ಹೊಡೆತಬಡಿತ ಬೈಗುಳಗಳನ್ನೂ ಸಹಿಸಿಕೊಂಡೂ ಮೂಕವಾಗಿ ಬದುಕುತ್ತಿದ್ದ ಜೀವವೊಂದು ಆ ಮನೆಯಲ್ಲಿತ್ತು. ಬಾಳಕೃಷ್ಣ ಮಾಮಾನ ಹೆಂಡತಿ ಪಾರತಿ ಮಾಮಿ ಎಂಬ ಮೂಕಪಶುವೊಂದು ಕಷ್ಟಕೋಟಲೆಗಳನ್ನು ಸಹಿಸಿ ಸಹಿಸಿ ಸವೆಯಲೆಂದೇ ಈ ಅಖಿಲಾಂಡಕೋಟಿ ಬ್ರಹ್ಮಾಂಡದಲ್ಲಿ ಅವತಾರವನ್ನು ತಾಳಿತ್ತು, ಆದರೆ ಆ ಮೂಕಜೀವ ಮೂರು ದಿನಗಳ ಹಿಂದಷ್ಟೇ ತನ್ನ ವ್ಯಾಪಾರ ವಹಿವಾಟುಗಳನ್ನೆಲ್ಲ ಚುಕ್ತಾ ಮಾಡಿ ಪರಂಧಾಮವನ್ನೈದಿತ್ತು; ಅದಕ್ಕೆ ಸಾಕ್ಷಿಯಾಗಿ ಪ್ರಧಾನ ಬಾಗಿಲಿನ ನಟ್ಟ ನಡುವೆ ಅನಾಥ ಹೆಣವಾಗಿ ಬಿದ್ದಿತ್ತು! ಹೇಳುವ ಕೇಳುವ ದಾತಿಕರಿಲ್ಲದೆ, ನೊಣಗಳು ಮುತ್ತಿ ಹೆಣವು ದುರ್ನಾತ ಬೀರುತ್ತಿತ್ತು! ಬಾಳಕೃಷ್ಣ ಮಾಮಾ ಮತ್ತು ಪಾರತಿ ಮಾಮಿ ಅನಾಥರಲ್ಲವೆಂದರೆ ಅಲ್ಲ, ಹೌದೆಂದರೆ ಹೌದು. ಅವರಿಗೆ ಒಬ್ಬಿಬ್ಬರಲ್ಲ, ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳು ಇದ್ದಾರೆ. ಹಾಗಾಗಿ ಅವರು ಅನಾಥರಲ್ಲ; ಆದರೆ ಅವರಲ್ಲೊಬ್ಬರೂ ಈ ದಂಪತಿಯ ವೃದ್ಧಾಪ್ಯದ ಅಸಹಾಯಕ ಪರಿಸ್ಥಿತಿಯಲ್ಲಿ ಇವರ ಜೊತೆಯಲ್ಲಿಲ್ಲ, ಇವರ ಯೋಗಕ್ಷೇಮ ನೋಡಿಕೊಳ್ಳುವಂತಹ ಚಿಲ್ಲರೆ ಕೆಲಸ ಮಾಡಲು ಅವರಿಗೆ ಪುರಸತ್ತಿಲ್ಲ, ಹಾಗಾಗಿ ಅನಾಥರು! ಹಿರಿಮಗ ಮನ್ನಾತ ತನ್ನ ಸಂಸಾರದೊಂದಿಗೆ ಮುಂಬಯಿಯಲ್ಲಿದ್ದಾನೆ, ಕಿರಿಯವ ಪುಂಡಿ ಮಂಗಳೂರಲ್ಲಿದ್ದಾನೆ. ಮಗಳು ಚಂದ್ರಭಾಗಿ ತನ್ನ ಗಂಡ-ಮಕ್ಕಳೊಂದಿಗೆ ವಾಪಿಯಲ್ಲಿ ಸೆಟ್ಲ್ ಆಗಿದ್ದಾಳೆ. ಮಕ್ಕಳ ವಾದದ ಪ್ರಕಾರ ಮೂರು ಮೂರು ಮಕ್ಕಳಿದ್ದೂ ತಂದೆ-ತಾಯಿ ವೃದ್ಧಾಪ್ಯದಲ್ಲಿ ಬಳ್ಕೂರಿನ ಭೂತದಂತಹ ಮನೆಯಲ್ಲಿ ಇಬ್ಬರೇ ಇರುವಂತಾದುದರಲ್ಲಿ ಮಕ್ಕಳ ತಪ್ಪು ಏನೂ ಇಲ್ಲ. ಮೂವರಿಗೂ ತಮ್ಮ ತಮ್ಮ ಜೀವನೋಪಾಯಕ್ಕಾಗಿ ಹೊರ ಊರುಗಳಲ್ಲಿ ಇರುವುದು ಅನಿವಾರ್ಯ. ಅವರ ಮೂಗಿನ ನೇರಕ್ಕೇ ವಿಚಾರ ಮಾಡಿದರೆ ತಂದೆ-ತಾಯಿಯ ಯೋಗಕ್ಷೇಮದ ವಿಚಾರದಲ್ಲಿಯೂ ಅನಾಸಕ್ತಿ ತೋರಿದವರಲ್ಲ. ಐದಾರು ವರ್ಷಗಳ ಹಿಂದೆ ಬಾಳಕೃಷ್ಣ ಮಾಮಾ ದೇವರಿಗೆ ಹೂ ಕೊಯ್ಯಲು ಹೋದಾಗ ಕಾಲು ಜಾರಿದ್ದೇ ನೆಪವಾಗಿ ಹಾಸಿಗೆ ಹಿಡಿದಾಗ ಮೂವರೂ ತಮ್ಮ ತಮ್ಮ ಸಂಸಾರ ಸಮೇತರಾಗಿ ಬಂದಿದ್ದರು. ಮನೆಯ ಒಳಗೆ ಹೊರಗೆ, ಮಾಳಿಗೆಯ ಮೇಲೆ ಕೆಳಗೆ, ತೆಣೆಯ ಮೇಲೆ, ಬಾಗಾಯ್ತಿನ ಮೂಲೆಯಲ್ಲಿ.... ಹೀಗೆ ಎಷ್ಟು ಕಡೆ ಕುಳಿತು-ನಿಂತು ಕಡೆದದ್ದನ್ನೇ ಕಡೆದರೂ ಅಂತಿಮವಾಗಿ ಬಂದ ನವನೀತ ಮಾತ್ರ ಒಂದೇ ಆಗಿತ್ತು. ‘ಪಪ್ಪ-ಆಯಿ ಇಲ್ಲೇ ಇರುತ್ತೇವೆ ಎನ್ನುತ್ತಾರೆಯೇ ಶಿವಾಯ್ ನಮ್ಮ ಯಾರೊಂದಿಗೂ ಬರಲು ತಯಾರಿಲ್ಲ. ಅವರಿಗೆ ಸ್ವಂತ ಮಕ್ಕಳಿಗಿಂತಲೂ ಲಾಗಾಯ್ತಿನಿಂದಲೂ ಪೂಜಿಸಿಕೊಂಡು ಬಂದಿರುವ ಮನೆದೇವರೇ ಮುಖ್ಯ! ತಲೆ ಕೆಳಗಾಗಿ ತಪಸ್ಸು ಮಾಡಿದರೂ ಅವರು ಈ ಭೂತದಂತಹ ಮನೆಯನ್ನು ಬಿಟ್ಟು ನಮ್ಮಲ್ಲಿ ಯಾರೊಬ್ಬರೊಂದಿಗೂ ಬರಲಾರರು. ಆದರೆ ಮನೆಯಲ್ಲಿರುವ ಸೇರುಗಟ್ಟಲೆ ಬೆಳ್ಳಿಬಂಗಾರದ ಆಭರಣ ಮತ್ತು ಬ್ಯಾಂಕಿನಲ್ಲಿರುವ ಠೇವಣಿಗಳನ್ನು ಸುರಕ್ಷತೆಯ ದೃಷ್ಟಿಯಿಂದ ಮೂವರೂ ಸಮನಾಗಿ ಹಂಚಿಕೊಳ್ಳತಕ್ಕದ್ದು! ಮನೆ ಮತ್ತು ಬಾಗಾಯ್ತಿನ ವಿಭಾಗಣೆಯನ್ನು ಪಪ್ಪ-ಆಯಿ ಮೈತಾದ ನಂತರವಷ್ಟೇ ಈಗಿನಂತೆಯೇ ಮೂವರೂ ತಮ್ಮ ತಮ್ಮಲ್ಲಿಯೇ ಸಮನಾಗಿ ಹಂಚಿಕೊಳ್ಳತಕ್ಕದ್ದು! ಎಲ್ಲಕ್ಕಿಂತ ಮುಖ್ಯವಾಗಿ ಪಪ್ಪ ಮತ್ತು ಆಯಿಗೆ ಮಕ್ಕಳಿಲ್ಲದವರೆಂದು, ದಾತಿಕರಿಲ್ಲದವರೆಂದು ಸರ್ಟಿಫಿಕೇಟ್ ಮಾಡಿಸಿ ವೃದ್ಧಾಪ್ಯ ವೇತನ ಮಂಜೂರಿ ಮಾಡಿಸಿಕೊಡುವಂತೆ ಉಗ್ರಾಣಿ ಬಾಬು ಮೂಲಕ ವ್ಯವಸ್ಥೆ ಮಾಡಿಸಿ ಹೋಗುವುದು!’ ಇಷ್ಟು ಲೈಕಾಗಿ ಹೆತ್ತವರ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಇನ್ನಾವ ಮಕ್ಕಳಿಂದ ತಾನೇ ಸಾಧ್ಯ?! ಬ್ಯಾಂಕಿನ ವಿಭಾಗೀಯ ವ್ಯವಸ್ಥಾಪಕ, ಪ್ರತಿಷ್ಠಿತ ಕಾಲೇಜೊಂದರ ಪ್ರಾಂಶುಪಾಲ, ದೊಡ್ಡ ಕಾರ್ಖಾನೆಯ ಮಾಲೀಕನ ಪತ್ನಿ ತಮ್ಮ ವೃದ್ಧ ತಂದೆ-ತಾಯಿಯ ಹೇಲುಚ್ಚೆ ಬಳಿಯುವುದು ಅವರ ಸ್ಥಾನಮಾನಕ್ಕೆ ಕುಂದುಂಟು ಮಾಡುವುದಿಲ್ಲವೆ?! ಆಗ ಅಷ್ಟು ಲೈಕಾಗಿ ಯೋಗಕ್ಷೇಮ ನೋಡಿಕೊಂಡು ಹೋದವರು ಅಲ್ಲಿಗೇ ಬಿಟ್ಟರೆಂದುಕೊಳ್ಳಬೇಡಿ. ಮೂವರೂ ವರ್ಷಂಪ್ರತಿ ಮಠದ ವರ್ಧಂತಿ ಉತ್ಸವಕ್ಕೆ ಬರುವುದನ್ನು ತಪ್ಪಿಸುವುದಿಲ್ಲ. ಬಂದಾಗ ಕಣ್ಣುದೃಷ್ಟಿ ಸಮಾ ಹಾಯದಿದ್ದರೂ ಅಂದಾಜಿನ ಮೇಲೆ ತಡವರಿಸುತ್ತಲೇ ಆಯಿ ಹೆರಕಿ ಇಡುವ ಬಾಗಾಯ್ತಿನಲ್ಲಿ ಬಿದ್ದಿದ್ದ ತೆಂಗಿನ ಕಾಯಿ, ಅಡಕೆ ಇತ್ಯಾದಿಗಳನ್ನು ಆಳಿಗೆ ಒಂದೊಂದು ಹೊರೆಯಂತೆ ಹೊತ್ತುಕೊಂಡು ಹೋಗುವ ರೂಢಿಯನ್ನು ಅವರು ಮರೆತವರಲ್ಲ! ತಮ್ಮಿಂದ ಕೊಯ್ಯಲಾಗದ ಮಾವಿನಕಾಯಿ, ಹಲಸಿನ ಕಾಯಿಗಳನ್ನು ಪಪ್ಪ-ಆಯಿಗೇ ಬಿಟ್ಟು ಹೋಗುತ್ತಾರೆ! ಅವರ ಪ್ರಕಾರ ಇದೇ ಹೆತ್ತವರಿಗೆ ಮಕ್ಕಳು ಮಾಡಬಹುದಾದ, ಮಾಡುವ ಆರೈಕೆ; ಬರಿಗೈಯಿಂದ ಹೋದರೆ ಹಿರಿಜೀವಗಳಿಗೆ ಬೇಜಾರಾಗುವುದಿಲ್ಲವೆ?! ಮುಗ್ಧ ವೃದ್ಧಜೀವಗಳು ಮಕ್ಕಳೊಂದಿಗೆ ಅವರು ಇರುವಲ್ಲಿ ಕಾಯಂ ಆಗಿ ಹೋಗಿ ನೆಲೆಸಲು ಒಡಂಬಡದಿದ್ದದ್ದು ಹೌದು. ಆದರೆ ವರ್ಷದಲ್ಲಿ ಎಲ್ಲೋ ಒಂದೆರಡು ತಿಂಗಳ ಮಟ್ಟಿಗೆ ಬಂದಿರಿ ಎಂದರೆ ಹೋಗುವ ಆಸೆಯನ್ನು ಮನದ ಮೂಲೆಯಲ್ಲಿ ಬಚ್ಚಿಟ್ಟುಕೊಂಡಿದ್ದದ್ದೂ ಹೌದು. ಅಥವಾ ಒಬ್ಬೊಬ್ಬ ಮಕ್ಕಳೂ ಒಂದೆರಡು ತಿಂಗಳು ಇಲ್ಲಿಗೇ ಬಂದು ತಮ್ಮ ಆರೈಕೆ ಮಾಡಲೆಂಬ ಬಯಕೆಯೂ ಇಲ್ಲದಿರಲಿಲ್ಲ. ಆದರೆ ಹೇಗಾದರೂ ಮಾಡಿ ದೂರದಿಂದಲೇ ಕೈ ತೊಳೆದುಕೊಳ್ಳಬೇಕೆಂಬ ಸಂಕಲ್ಪದಿಂದಲೇ ಬಂದವರಲ್ಲಿ ತಮ್ಮ ಮನದ ಬೇಕು-ಬೇಡಗಳನ್ನು ಹಂಚಿಕೊಳ್ಳಲು ಆಸ್ಪದವೇ ಆಗದಿದ್ದಾಗ ಮೌನವಾಗಿಯೇ ಇರಬೇಕಾದ ಅಸಹಾಯಕತೆಯ ವಿನಾ ಬೇರೆ ದಾರಿ ಅವರಿಗಿರಲಿಲ್ಲ. ಹಾಸಿಗೆ ಹಿಡಿದಿದ್ದ ಬಾಲಕೃಷ್ಣ ಮಾಮಾನಿಗೆ ಮಕ್ಕಳು ನಗನಾಣ್ಯದ ಹಂಚಿಕೆಯ ವಿಚಾರವನ್ನು ಅರುಹಿದಾಗಲೇ ಪಾರತಿ ಮಾಮಿಗೆ ಹೇಳಿದ್ದರು, ‘ಮುಚ್ಚಿಹೋಗಲಿದ್ದ ಅಪ್ಪನ ಕಾಲದ ಅಂಗಡಿಯನ್ನು ಉಳಿಸಿಕೊಂಡು ಪೈಸಾ ಪೈಸಾ ಕೂಡಿಟ್ಟು ಈ ಮಕ್ಕಳನ್ನು ಓದಿಸಿ ನೌಕರಿಗೆ ಹತ್ತಿಸುವಾಗ ತಂದೆ-ತಾಯಿಗಳಾದ ನಾವಿಬ್ಬರೂ ಪಟ್ಟ ಪಡಿಪಾಟಲು ಈ ಮಕ್ಕಳಿಗೆ ಗೊತ್ತೇ ಇಲ್ಲವೆ? ಅಥವಾ ಗೊತ್ತಿಲ್ಲದವರಂತೆ ನಟಿಸುತ್ತಿದ್ದಾರೆಯೇ? ಎಂಥಾ ವಿಚಿತ್ರ ನೋಡು, ಅವರಿಗೆ ನಾವು ಕೂಡಿಟ್ಟ ಆಸ್ತಿ ಬೇಕು, ಆದರೆ ನಾವು ಬೇಡದ ಗುಜರಿ ವಸ್ತುಗಳಾಗಿದ್ದೇವೆ! ಇಂಥ ಮಕ್ಕಳು ಹುಟ್ಟದಿದ್ದರೇ ಒಳ್ಳೆಯದಿತ್ತು. ಆಸ್ತಿಯೆಲ್ಲವನ್ನೂ ಮಠಕ್ಕೆ ಬರೆದರೆ ಅವರಾದರೂ ನಮ್ಮ ಯೋಗಕ್ಷೇಮವನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದರು’ ಪಾರತಿ ಮಾಮಿ ಮಾತ್ರ ತನ್ನ ತಾಯಿಕರುಳ ಕಕ್ಕುಲಾತಿಯಿಂದ, ‘ನಾವು ಪಡಕೊಂಡು ಬಂದ್ದಿದ್ದೇ ಇಷ್ಟು, ದಸ್ಕತ್ತು ಹಾಕಿ ಕೊಟ್ಟುಬಿಡಿ. ಅದರಿಂದ ಅವರಿಗೆ ಸಂತೋಷವಾಗುವುದಾದರೆ ಆಗಲಿ. ನಮಗಾದರೂ ಅವರನ್ನು ಬಿಟ್ಟು ಇನ್ಯಾರಿದ್ದಾರೆ? ನೀವು ಹಾಸಿಗೆ ಹಿಡಿದ್ದೀರಿ, ನನಗೂ ಬೆನ್ನು ಬಾಗಿದೆ, ಕಣ್ಣು ಸಮಾ ಕಾಣುವುದಿಲ್ಲ, ಸರಿಯಿದ್ದರೂ ಮಕ್ಕಳ ಕಣ್ಣಿಗೆ ಹೆತ್ತವರ ಸಂಕಟ ಕಾಣುವುದಿಲ್ಲ! ನಿಮಗೆ ನಾನು, ನನಗೆ ನೀವು ಇದಿಷ್ಟೇ ಸದ್ಯಕ್ಕೆ ನಮ್ಮ ಮುಂದಿರುವ ಸತ್ಯ’ ಎಂದು ಮಕ್ಕಳ ಆಸೆಗೆ ರಹದಾರಿ ಒದಗಿಸಿದ್ದಳು. ಮಕ್ಕಳನ್ನು ಸಂತುಷ್ಟಗೊಳಿಸಿ ಕಳುಹಿಸಿದ ವೃದ್ಧಜೀವಗಳು ಸತ್ತಿಲ್ಲ, ಅದಕ್ಕಾಗಿ ಬದುಕಿವೆ ಎಂಬ ರೀತಿಯಲ್ಲಿ ಕಾಲಯಾಪನೆ ಮಾಡುತ್ತಿದ್ದವು. ಅದರಲ್ಲಿಯೂ ಮಾಮಿಯ ಗೋಳು ಯಾರಿಗೂ ಬೇಡ. ಹಾಸಿಗೆಯಲ್ಲಿಯೇ ವಿಸರ್ಜನೆ ಮಾಡಿಕೊಳ್ಳುವ ಮಾಮಾನ ಉಚ್ಚಿಷ್ಟಗಳನ್ನೆಲ್ಲ ತೊಳೆದು ಬಳಿದು ಆ ಮುದಿಜೀವ ಹಣ್ಣುಹಣ್ಣಾಗಿ ಹೋಯಿತು. ಜೊತೆಗೆ ಸ್ವಭಾತಃ ಕೋಪಿಷ್ಟನಾದ ಮಾಮ ಕೈಗೆ ಸಿಕ್ಕಿದ್ದರಲ್ಲಿ ಹೊಡೆಯುತ್ತಿದ್ದರು. ಆ ಮೂಕ ಜೀವ ಅವೆಲ್ಲವನ್ನೂ ಸಹಿಸಿಕೊಂಡು ಪತಿಸೇವೆಯಲ್ಲಿಯೇ ಪರಮಾತ್ಮನನ್ನು ಕಾಣುತ್ತ ಒಂದು ದಿನ ಪ್ರಧಾನ ಬಾಗಿಲು ದಾಟುವಾಗ ದೃಷ್ಟಿ ಹಾಯದೆ ಎಡವಿಬಿದ್ದದ್ದೇ ನೆಪವಾಗಿ ಅಲ್ಲಿಯೇ ಪ್ರಾಣ ಕಳೆದುಕೊಂಡಿತು! ಅದನ್ನು ತಿಳಿಯದ ಬಾಳಕೃಷ್ಣ ಮಾಮಾ ತನ್ನ ಊರುಗೋಲಿಗಾಗಿ ಹುಡುಕಾಡುತ್ತಲೇ ಇದ್ದ. ನಡುಮನೆಯಲ್ಲಿ ಬಿದ್ದುಹೋಗಿದ್ದ ಅದು ಸಿಗುವುದಾದರೂ ಹೇಗೆ? ಐದಾರು ದಿನಗಳ ಬಳಿಕ ಅಕ್ಕಪಕ್ಕದಲ್ಲಿದ್ದ ಮನೆಯವರಿಗೆ ತಡೆದುಕೊಳ್ಳಲಾಗದಷ್ಟು ದುರ್ವಾಸನೆ ಮೂಗಿಗಡರಿತು. ಅದು ಬಾಳಕೃಷ್ಣ ಮಾಮಾನ ಮನೆಯಿಂದಲೇ ಬರುತ್ತಿರುವುದೂ ಖಾತ್ರಿಯಾಯಿತು. ಅವರ ಮನೆಯ ಬಾಗಿಲು ಬಡಿದರೆ ನಿರುತ್ತರ, ನೂಕಿದರೂ ತೆಗೆಯಲಾಗಲಿಲ್ಲ. ಮಾಮಾನ ಹಿರಿಮಗ ಮನ್ನಾತನಿಗೆ ಫೋನು ಮಾಡಿದರೆ ನನಗೆ ವರ್ಷಾಂತ್ಯ ಬರಲಾಗುವುದಿಲ್ಲ, ಪುಂಡೀಗೆ ಫೋನು ಮಾಡಿ ಎಂದ. ಪುಂಡಿ ಫೋನಿಗೆ ಸಿಗಲಿಲ್ಲ. ಬೇರೆ ದಾರಿಗಾಣದೆ ಪೊಲೀಸ್ ಕಂಪ್ಲೆಂಟ್ ಕೊಟ್ಟರು. ಪೊಲೀಸರು ತಹಶೀಲ್ದಾರರ ಸಮಕ್ಷಮದಲ್ಲಿ ಬಾಗಿಲು ಮುರಿದು ತೆರೆಯುತ್ತಿದ್ದಂತೆಯೇ ವಾಂತಿ ಬಂದಂತಾಯಿತು! ಹೇಗೋ ಸಹಿಸಿಕೊಂಡು ಒಳಗೆ ಹೋಗಿ ನೋಡಿದರೆ, ಪ್ರಧಾನ ಬಾಗಿಲ ನಟ್ಟನಡುವೆಯೇ ಹೆಣವೊಂದು, ಹೆಣವೇನು? ಕೇವಲ ಜಂಗು (ಅಸ್ಥಿಪಂಜರ) ಬಿದ್ದುಕೊಂಡಿದೆ. ನೊಣಗಳು ‘ಬೊಂಯ್..’ಗುಡುತ್ತಿವೆ! ಸೀರೆ ಇತ್ಯಾದಿ ಆಬೂಷಣಗಳಿಂದ ಮಾತ್ರವೇ ಅದು ಪಾರತಿ ಮಾಮಿ ಎಂದು ಗುರುತು ಹಿಡಿಯಲಾಯಿತು. ಯಾರೋ ‘ಬಾಳಕೃಷ್ಣ ಮಾಮಾ...?’ ಎಂದರು. ಎಲ್ಲ ಕಡೆ ಹುಡುಕಿ ಕೊನೆಗೆ ಕೋಣೆಯೊಳಗೆ ಹೊಕ್ಕಾಗ ವಿಸರ್ಜನೆಗಳ ಮಹಾಕೂಪದೊಳಗೆ ಮಂಚದ ಮೇಲೆ ಪವಡಿಸಿದ ಬಡಕಲು ಶರೀರವೊಂದು ಗೋಚರವಾಯಿತು. ಕಣ್ಣುಬಾಯಿಗಳಿಗೆ ಮುತ್ತಿಕೊಂಡಿದ್ದ ನೊಣಗಳನ್ನು ನೋಡಿಯೇ ‘ಇದೂ ಮುಗಿದ ಕಥೆಯೇ...!’ ಎಂದು ತೀರ್ಮಾನಿಸಿದ ಪೊಲೀಸರು ಮಕ್ಕಳಿಗೆ ಸುದ್ದಿ ಮುಟ್ಟಿಸಿದರು. - ಹುಳಗೋಳ ನಾಗಪತಿ ಹೆಗಡೆ

                    *ಸ್ವಾತಂತ್ರ್ಯಕ್ಕೊಂದು ಕವಿತೆ.*

*ಸ್ವಾತಂತ್ರ್ಯಕ್ಕೊಂದು ಕವಿತೆ.*

ಭಾವಗಳ ಸ್ವಾತಂತ್ರ್ಯದ ಖುಷಿಯಲ್ಲಿ . ಹುಟ್ಟಿದ ಕವಿತೆ ಮಾತ್ರ ಅತಂತ್ರ. ಕಟ್ಟುಪಾಡುಗಳ ಕೋಳ, . ತೊಡಿಸಿ ಕತ್ತಲ ಬಂದೀಖಾನೆಯಲ್ಲಿ ಬಂದಿ . ಕೇಳುವರಾರಿಲ್ಲ ಗೋಳ, ಒಂಟಿ,ಪಾಪ ಬಿಡುಗಡಗೆ ಚಡಪಡಿಸಿ ಮುಚ್ಚಿದ ಬಾಗಿಲು ಸ್ವಲ್ಪ ಓರೆಯಾದರೆ ಸಾಕು ಬೆಳಕ ಬಯಲಿನ ಸ್ವಚ್ಛಂದಕ್ಕೆ ಜಿಗಿಯುವ ಅವಸರಕ್ಕೆ ಸಿಲುಕಿಕೊಂಡರೆ ಸಂಧಿಯಲ್ಲಿ ಒಳಗರ್ಧ ಕತ್ತಲಲ್ಲಿ ಅತಂತ್ರ ಉಳಿದರ್ಧ ಬಯಲ ಬೆಳಕಲ್ಲಿ ಸ್ವಾತಂತ್ರ್ಯದ ಕವಿತೆ.."ಪಾ..ಪ"!!!! --ಅಬ್ಳಿ,ಹೆಗಡೆ.

                    ಭವಸಾಗರದ ನಾವಿಕ

ಭವಸಾಗರದ ನಾವಿಕ

ಭವ ಸಾಗರ ದಾಟಿಸುವ ನಾವಿಕ| ಕಾಯ್ದು ನಿಂತ ನದಿ ನಾವಿಕನ| ಸೂರ್ಯನ ಮುನ್ನಡೆಸೆ| ದೀಪದ ಬೆಳಕು| ಎದೆಯ ಮೊಗ್ಗರಳಿ ಮಧು ದ್ರವಿಸಲಿ|| ಇದು ರಸರಾಮಾಯಣ ಕಾವ್ಯದಲ್ಲಿರುವ ಗುಹನಿಗೆ ಸಂಬಂಧಿಸಿದ ಮೂರು ಸಾಲಿನ ಚಿಕ್ಕ ಪದ್ಯ. ಈ ಕಾವ್ಯದಲ್ಲಿ ರಾಮಾಯಣದ ಕಥೆ ಪ್ರಧಾನವಲ್ಲ. ಸರ್ವರ ಅಭ್ಯುದಯಕ್ಕೆ ಶ್ರೀರಾಮ ಹೇಗೆ ಕಾರಣೀಭೂತನಾದ ಎಂಬುದನ್ನು ಗಮನಕ್ಕೆ ತರುವ ಉದ್ದೇಶವುಳ್ಳದ್ದು ಈ ಕಾವ್ಯ. ಅದಕ್ಕೆ ಪೂರಕವಾಗಿ ರಾಮಾಯಣದ ಕೆಲವು ಘಟನೆಗಳು, ಪಾತ್ರಗಳು, ವರ್ಣನೆಗಳು ಇಲ್ಲಿವೆ. ಕೈಕೇಯಿಯ ಆಶಯ, ಆದೇಶದಂತೆ 14 ವರ್ಷ ವನವಾಸ ಮಾಡಲು ರಾಮ ಅಯೋಧ್ಯೆಯಿಂದ ಹೊರಟು ಬಂದಾಗ ಗಂಗಾನದಿಯನ್ನು ದಾಟಬೇಕಾಗಿ ಬರುತ್ತದೆ. ಅದನ್ನು ದಾಟಿಸುವ ಗುಹನಿಗಾಗಿ ಕಾಯುತ್ತಿರುತ್ತಾನೆ. ಆ ಸಂದರ್ಭವನ್ನು ಚಿತ್ರಿಸುವ ಪದ್ಯ ಇದು. ಶ್ರೀರಾಮ ಅಸಾಮಾನ್ಯನಾಗಿದ್ದರೂ ಅವನ ಅಸಾಮಾನ್ಯತೆ ವಿಶೇಷ ಸಂದರ್ಭಗಳಲ್ಲಿ ಮಾತ್ರ ಎದ್ದು ಕಾಣುವಂತಹುದು. ಅವನು ಸಾಮಾನ್ಯನಂತೆಯೇ ಬಹುಮಟ್ಟಿಗೆ ಕಾಣಿಸಿಕೊಂಡವನು. ಅಂತಹ ಒಂದು ಸಂದರ್ಭ ಇದು. ಇಲ್ಲಿ ಎರಡು ಸಂಗತಿಗಳು ಇವೆ. ಮೊದಲಿಗೆ ಸೂರ್ಯನ ಮುನ್ನಡೆಸೆ ದೀಪದ ಬೆಳಕು ಎನ್ನುವುದನ್ನು ಗಮನಿಸಬೇಕು. ಆ ನಂತರ ಭವಸಾಗರವನ್ನು ದಾಟಿಸುವ ನಾವಿಕ ನದಿಯನ್ನು ದಾಟಿಸುವ ನಾವಿಕನಿಗಾಗಿ ಕಾದು ನಿಂತಿದ್ದಾನೆ ಎನ್ನುವುದನ್ನು ಗಮನಿಸಬೇಕು. ಆಗ ಇದಕ್ಕೆ ಇರುವ ಮಹತ್ವ ಪ್ರಕಾಶಮಾನ ಆಗುತ್ತದೆ. ಈ ಪದ್ಯದಲ್ಲಿ ಸೂರ್ಯನ ಮುನ್ನಡೆಸೆ ದೀಪದ ಬೆಳಕು ಮುಕ್ತಾಯದ ಸಾಲು. ಇದಕ್ಕೆ ಅನೇಕ ಅರ್ಥಗಳಿವೆ. ಮೊದಲಿಗೆ ಇದೊಂದು ವಿಡಂಬನೆ ಎಂದು ಗ್ರಹಿಸಬಹುದು. ನಾವು ಬಗೆ ಬಗೆಯಾಗಿ ಶ್ರೀರಾಮನ ವ್ಯಕ್ತಿತ್ವವನ್ನು ಗ್ರಹಿಸುತ್ತೇವೆ. ಅವನು ಇರುವುದು ಹಾಗೆಯೇ ಎಂದು ನಿರ್ಧರಿಸುತ್ತೇವೆ, ನಮಗೆ ತಿಳಿದಂತೆ ಮೌಲ್ಯಮಾಪನ ಮಾಡುತ್ತೇವೆ. ನಮಗೆ ಇಷ್ಟ ಬಂದಂತೆ ನಿಂದಿಸುತ್ತೇವೆ, ಅದಕ್ಕೆ ಪ್ರಚಾರವನ್ನೂ ಕೊಡುತ್ತೇವೆ. ಶ್ರೀರಾಮನನ್ನು ಅರ್ಥಮಾಡಿಕೊಳ್ಳುವ ಇಂಥ ಪ್ರಯತ್ನ ಕೈದೀಪ ಹಿಡಿದುಕೊಂಡು ಸೂರ್ಯನ ದರ್ಶನ ಪಡೆಯಲು ಹೊರಟಂತಾಗುತ್ತದೆ ಅಷ್ಟೇ. ಶ್ರೀರಾಮ ಸ್ವಪ್ರಕಾಶಿತ ಸೂರ್ಯ, ಗುಹ ಕೈಯಲ್ಲಿರುವ ದೀಪ. ಎರಡೂ ಬೆಳಕು ಕೊಡುತ್ತವೆ, ಬೆಳಗುತ್ತವೆ. ಕೈದೀಪ ಕೇವಲ ಒಂದು ಸಾಧನ. ಅದರಿಂದ ಇಡೀ ಜಗತ್ತನ್ನು ಕಾಣಲಾಗದು. ಇದನ್ನು ಸರಳವಾಗಿಯೂ ಅರ್ಥಮಾಡಿಕೊಳ್ಳಬಹುದು. ಶ್ರೀರಾಮ ಚಿಕ್ಕಮ್ಮ ಕೈಕೇಯಿಯ ಮಾತಿಗೆ ಕಟ್ಟು ಬಿದ್ದು 14 ವರ್ಷಗಳ ವನವಾಸಕ್ಕಾಗಿ ಸೀತೆ, ಲಕ್ಷ್ಮಣನೊಂದಿಗೆ ವನವಾಸಕ್ಕೆ ಹೊರಟ ಸಂದರ್ಭದಲ್ಲಿ ಗಂಗಾನದಿಯನ್ನು ದಾಟಬೇಕಾಗಿದೆ. ಆ ಪ್ರದೇಶದ ನಾಯಕ ಗುº. ಅದರಿಂದ ಅವನಿಗಾಗಿ ಶ್ರೀ ರಾಮ ಕಾಯುತ್ತಾ ಇದ್ದಾನೆ. ಕೈಕೇಯಿಯಿಂದಾಗಿ ರಾಜನಾಗುವ ಅವಕಾಶ ತಪ್ಪಿ ಹೋಗದಿದ್ದರೆ ಸೂರ್ಯವಂಶವನ್ನು ಮುನ್ನಡೆಸುವವನು ಅವನೇ ಆಗಿದ್ದ. ಅವನೇ ಎಲ್ಲರ ದೀಪದ ಬೆಳಕು ಆಗುತ್ತಿದ್ದ. ಈಗ ಸಂದರ್ಭ ಬದಲಲಾಗಿಬಿಟ್ಟಿದೆ. ನದಿಯನ್ನು ದಾಟಿಸುವವನಿಗಾಗಿಯೂ ಕಾಯಬೇಕಾಗಿದೆ. ಆದರೆ ಈ ಪದ್ಯಕ್ಕೆ ಹಲವಾರು ವಿಶಿಷ್ಟ ಅರ್ಥಗಳೂ ಇವೆ: ದಶರಥ ಕುಲೋದ್ಧಾರಕ ಪುತ್ರನಿಗಾಗಿ ಅಶ್ವಮೇಧ ಮತ್ತು ಪುತ್ರಕಾಮೇಷ್ಟಿ ಯಾಗ ಮಾಡಿ ದೈವಕೃಪೆಯಿಂದ ಪಡೆದವನು ಹಿರಿಯ ಮಗ ರಾಮ. ದೈವಿಕತೆಯ ಜೊತೆಗೆ ಅವನಿಗೆ ಅವನ ವಿಶಿಷ್ಟ ಕುಲದಲ್ಲಿ ಜನಿಸಿದ ರಘು, ದಿಲೀಪ, ಅಜರಂಥ ಮಹಾರಾಜರ ಭವ್ಯ ಪರಂಪರೆಯ ಭಂಡಾರವೇ ಬೆನ್ನಿಗೆ ಇದೆ. ಅವನಿಗೆ ಮುನ್ನಡೆಯಲು ಯಾವ ಪ್ರತ್ಯೇಕವಾದ ಹೊರಗಿನ ದೀಪದ ಅವಶ್ಯಕತೆಯೇ ಇಲ್ಲ. ಸೂರ್ಯ ವಂಶಜನೂ ಆದ ಅವನು ಸಹಜವಾಗಿ ಸೂರ್ಯನಂತೆ ಸ್ವಪ್ರಕಾಶಿತ. ಆದರೂ ಅವನು ನದಿಯನ್ನು ದಾಟಿಸುವವನಿಗಾಗಿ ಕಾಯುತ್ತಾನೆ ಎನ್ನುವುದು ಅವನ ಸಜ್ಜನಿಕೆ. ಇತರರ ಘನತೆಗೆ ತನ್ನಿಂದ ಕುಂದುಂಟಾಗಬಾರದೆಂಬ ಕಾಳಜಿ ಅವನದು. ಸೂರ್ಯನ ಮುನ್ನಡೆಸೆ ಎನ್ನುವುದಕ್ಕೆ ಸೂರ್ಯ ಮುಳುಗಿದ ನಂತರ ಬೆಳಕನ್ನು ಕೊಡುವ ಸಂಗತಿಗಳು ಎನ್ನುವ ಅರ್ಥವೂ ಇದೆ. ಸೂರ್ಯ ಮುಳುಗಿದ ನಂತರ ಒಂದೊಂದೇ ನಕ್ಷತ್ರಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ತಾರೆಗಳಿಂದ ತುಂಬಿದ ಆಕಾಶದಲ್ಲಿ ಮಿನುಗುವ ನಕ್ಷತ್ರಗಳ ಬೆಳಕು ಹಬ್ಬಿ ನಕ್ಷತ್ರಗಳ ಜೊತೆಗೆ ಸುತ್ತಲಿನ ಸಂಗತಿಗಳು ಕಾಣಲಾರಂಭಿಸುತ್ತವೆ. ಮುನ್ನಡೆಯುವ ದಾರಿಯೂ ಗೋಚರವಾಗುತ್ತದೆ. ಚಂದ್ರನ ಬೆಳಕು ಹುಣ್ಣಿಮೆಯ ಬೆಳಕಾಗುವಷ್ಟು ವಿಸ್ತøತ ಆದಾಗ ಮತ್ತಷ್ಟು ನಿಚ್ಚಳ. ಇವೆಲ್ಲಾ ದೇವರ ಮುಂದೆ ಹಚ್ಚಿಡುವ ಹಣತೆಗಳ ಹಾಗೆ. ಇವು ಮಾರ್ಗದರ್ಶಿಗಳೂ ಹೌದು, ತಂತಮ್ಮ ಪಾಡಿಗೆ ಬೆಳಗಿಕೊಳ್ಳುವವುಗಳೂ ಹೌದು. ಇದು ಅಭ್ಯುದಯದ ಒಂದು ರೂಪ. “ರಾಮಾಯಣದ ಉದ್ದೇಶ ಸರ್ವರ ಅಭ್ಯುದಯ” ಎನ್ನುವ ದರ್ಶನ ರಸ ರಾಮಾಯಣದ್ದು. ಸರ್ವರಲ್ಲಿ ಗುಹನೂ ಒಬ್ಬ ಎನ್ನುವ ಸೂಚನೆ ಇಲ್ಲಿದೆ. ಸೂರ್ಯನನ್ನು ಮುನ್ನಡೆಸುವ ದೀಪ ಎಂದರೆ ಸೂರ್ಯನಿಗೇ ದಾರಿ ತೋರಲು ಕೈಯಲ್ಲೊಂದು ದೀಪ ಹಿಡಿದ ಹಾಗೆ ಎಂದೂ ಅರ್ಥ ಆಗುತ್ತದೆ. ಹಾಗೆ ದೀಪ ಹಿಡಿದವನಿಗೆ ತಾನು ದಾರಿ ಮುನ್ನಡೆಸಬಲ್ಲೆ ಎಂಬುದು ಖಾತರಿಯಾದ ವಿಷಯ. ಸೂರ್ಯನ ಪ್ರಖರವಾದ ಬೆಳಕಿನ ಮುಂದೆ ಕೈದೀಪದ ಬೆಳಕು ಕಾಣುವುದೇ ಇಲ್ಲ ಎನ್ನುವುದು ಮನಸ್ಸಿಗೇ ಬರುವುದಿಲ್ಲ. ಇದನ್ನು ಅದ್ವೈತದ ಮಾಯೆಗೆ ಹೋಲಿಸಬಹುದು. ಮಾಯೆ ನಿಜವಾಗಿ ಇರುವುದನ್ನು ಮರೆಮಾಡುತ್ತದೆ, ಇಲ್ಲದುದನ್ನು ಎತ್ತಿ ತೋರಿಸುತ್ತದೆ. ಶ್ರೀರಾಮ ಸಾಮಾನ್ಯನಾಗಿದ್ದೂ ನಿಜವಾದ ಬೆಳಕು ಯಾವುದು ಎಂಬುದನ್ನು ತನ್ನ ನಡೆ ನುಡಿಯಿಂದ ತೋರಿಸಿಕೊಟ್ಟ - ಅಸಾಮಾನ್ಯನಾದ - ಪುರುಷ. ಅವನಿಗೆ ಅವನೇ ಸಾಟಿ ಎನ್ನುವುದೂ ಒಂದು ಅರ್ಥ. ಈ ಹಿನ್ನೆಲೆಯಲ್ಲಿ ಗಂಗಾನದಿಯನ್ನು ದಾಟುವ ಈ ಪ್ರಸಂಗವನ್ನು ಆಧ್ಯಾತ್ಮಿಕವಾಗಿ ಅರ್ಥೈಸಿಕೊಳ್ಳುವ ಕವಿ ಶ್ರೀರಾಮನನ್ನು ಭವ ಸಾಗರ ದಾಟಿಸುವ ನಾವಿಕ ನದಿ ನಾವಿಕನಿಗಾಗಿ ಕಾಯ್ದು ನಿಂತಿರುವುದಕ್ಕೆ ಹೋಲಿಸಿರುವುದನ್ನು ಗಮನಿಸಬೇಕು. ಶ್ರೀರಾಮ ಈಗಾಗಲೇ ಹರ ಮತ್ತು ಹರಿ ಇಬ್ಬರ ಪ್ರತೀಕವಾಗಿ ರೂಪುಗೊಂಡಿರುವುದು ಸೀತೆಯನ್ನು ಮದುವೆಯಾಗುವ ಮತ್ತು ಪರಶುರಾಮನ ಸಂದರ್ಭದಲ್ಲಿ ಸುಸ್ಪಷ್ಟ ಆಗಿದೆ. ಆತ ಭವ ಸಾಗರವನ್ನು ದಾಟಿಸುವ ನಾವಿಕನಾಗಿಯೇ ತೋರಿಬಂದಿದ್ದಾನೆ. ಆದರೂ ಸಾಮಾನ್ಯ ಮನುಷ್ಯನಂತೆ ಪ್ರಾಪಂಚಿಕ ನದಿಯನ್ನು ದಾಟಿಸುವ ನಾವಿಕನಿಗಾಗಿ ಕಾದು ನಿಂತಿದ್ದಾನೆ. ಇಲ್ಲಿ ಎರಡು ರೀತಿಯ ನಾವಿಕರು ಇದ್ದಾರೆ. ಒಬ್ಬನ ಭವ ಎನ್ನುವ ಸಾಗರದಷ್ಟು ಭಂಗಗಳನ್ನೆಲ್ಲಾ ಪರಿಹರಿಸಿ ಆ ಸಾಗರದಲ್ಲಿ ಮುಳುಗಲು ಅಥವಾ ತೇಲಲು ಅಥವಾ ಈಜಲು ಬಿಡದೆ ನಾವೆಯೊಂದರಲ್ಲಿ ತನ್ನ ಜೊತೆಯಲ್ಲೇ ಕುಳ್ಳಿರಿಸಿಕೊಂಡು ಅಪಾರವಾದ ಸಾಗರವನ್ನು ದಾಟಿಸುವವನು ಒಬ್ಬ ನಾವಿಕ. ಇನ್ನೊಬ್ಬ ನೀರಿನ ರಾಶಿಯೊಡನೆ ರಭಸವಾಗಿ ಆಳ ಮತ್ತು ಅಗಲವಾಗಿರುವ ಪಾತ್ರದಲ್ಲಿ ಹರಿಯುವ ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ದೋಣಿಯೊಂದರಲ್ಲಿ ಜನರನ್ನು ದಾಟಿಸುವ ಅಥವಾ ತನ್ನನ್ನೇ ದಾಟಿಸಿಕೊಳ್ಳುವ ನಾವಿಕ. ಮೊದಲನೆಯ ನಾವಿಕ ಭಗವಂತನಿಗೆ ಪ್ರತೀಕವಾದರೆ ಎರಡನೆಯ ನಾವಿಕ ಒಂದು ದಂಡೆಯಿಂದ ಇನ್ನೊಂದು ದಂಡೆಗೆ ದಾಟುವ ಕ್ರಿಯೆಗಷ್ಟೇ ಸೀಮಿತವಾಗಿ ಇರುವ ಭವಬದ್ಧ ಜೀವಿಗಳ ಪ್ರತೀಕ ಆಗಬಹುದು. ಭವ ಸಾಗರವ ದಾಟಿಸುವ ನಾವಿಕ ನದಿ ನಾವಿಕನಿಗಾಗಿ ಕಾಯ್ದು ನಿಂತಿರುವುದನ್ನು ವಿಶಿಷ್ಟಾದ್ವೈತ ಸಿದ್ಧಾಂತದ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬಹುದು. ವಿಶಿಷ್ಟಾದ್ವೈತದಲ್ಲಿ ಮರ್ಕಟ ನ್ಯಾಯ, ಮಾರ್ಜಾಲ ನ್ಯಾಯ ಎಂಬ ಉಪ ಸಿದ್ಧಾಂತಗಳು ಇವೆ. ಮಾರ್ಜಾ¯ ನ್ಯಾಯದ ಪ್ರಕಾರ ಭಗವಂತ ಬೆಕ್ಕಿನ ಹಾಗೆ. ಬೆಕ್ಕು ತನ್ನ ಮರಿಗಳ ಸಂರಕ್ಷಣೆಯನ್ನು ಮಾಡಲು ಅದೇ ತನ್ನ ಮರಿಗಳನ್ನು ಅವುಗಳಿಗೆ ಸ್ವಲ್ಪವೂ ನೋವಾಗದ ಹಾಗೆ ಬಾಯಿಯಲ್ಲಿ ಕಚ್ಚಿಕೊಂಡು ತನಗೆ ಸುರಕ್ಷಿತ ಎಂದು ತೋರಿದ ಜಾಗಕ್ಕೆ ಮರಿಗಳನ್ನು ಸ್ಥಳಾಂತರ ಮಾಡುತ್ತಿರುತ್ತದೆ, ಭಗವಂತನೂ ಹಾಗೆಯೇ. ಸಂಸಾರಕ್ಕೆ ಸಿಕ್ಕಿಕೊಂಡು ಒದ್ದಾಡುತ್ತಿರುವ ಮಾನವಜೀವಿಯನ್ನು ಉದ್ಧರಿಸಲು ತಾನೇ ಮುಂದಾಗಿ ಬಂದು ಮೇಲೆತ್ತಿಕೊಳ್ಳುತ್ತಾನೆ. ಮರ್ಕಟ ನ್ಯಾಯದ ಪ್ರಕಾರ ಭಗವಂತ ಕೋತಿಯ ಹಾಗೆ. ಕೋತಿ ಸುಮ್ಮನೆ ಮರಿಗಳ ಹತ್ತಿರ ಇರುತ್ತದೆ. ಮರಿಗಳೇ ತಮ್ಮ ರಕ್ಷಣೆಗಾಗಿ ತಾಯಿ ಕೋತಿಗೆ ಆತುಕೊಳ್ಳುತ್ತವೆ. ಶ್ರೀರಾಮ ಈ ಎರಡೂ ಅರ್ಥದಲ್ಲಿ ನದಿ ನಾವಿಕನಾಗಿ ಕಾಯ್ದು ನಿಂತಿದ್ದಾನೆ. ಇದು ಅಹಲ್ಯೆ, ವಿರಾಟ, ಕಬಂಧ, ಶಬರಿ, ಮಾರೀಚ ಮುಂತಾದವರ ಪ್ರಸಂಗಗಳಲ್ಲಿ ಸ್ಪಷ್ಟವಾಗುತ್ತದೆ. ಇಂಥ ಮಾನವೀಯತೆ ಎದೆಯ ಮೊಗ್ಗರಳಿ ಮಧುವನ್ನು ದ್ರವಿಸಲಿ ಎನ್ನುವ ಸದಾಶಯ ಇಲ್ಲಿಯದು. [ಶ್ರೀ ಗಜಾನನ ಹೆಗಡೆ ವಿರಚಿತ 'ರಸರಾಮಯಣ ' ದ ಪದ್ಯವೊಂದರ ಅವಲೋಕನ] ಕೆ . ಎಲ್ . ಪದ್ಮಿನಿ ಹೆಗಡೆ

                    🔶 ಅಳುವ ಹೂವು  [ಕವಿತೆ]🔶

🔶 ಅಳುವ ಹೂವು [ಕವಿತೆ]🔶

ಹೂವು ಕೂಡ ಅಳಬಹುದು    ಕೆಲವೊಮ್ಮೆ ಬದುಕಿನಹಾಗೆ       ಕವಿತೆಯಹಾಗೆ ನಗು ನೋಟಕ್ಕಷ್ಟೆ       ವೇಧ್ಯ ಅಳು ಅಭೇಧ್ಯ       ಮುಂಜಾವಲ್ಲಿ ಮೈನೆರೆದ ಹುಡುಗಿ       ಮುಖದ ತುಂಬ ಮತ್ತುಬರಿಸುವ       ಮಂದಹಾಸ ಮನಸೋತ ದುಂಬಿಗಳ       ಸಾಲು,ಸಾಲು ಮೇಲಾಟ       ಹಸಿದ ಕಣ್ಣು ಮನಸ್ಸು ಹೊಟ್ಟೆ       ತಣಿಸುವ ಪರಿ ಸಂಜೆವರೆಗಷ್ಟೆ       ಅಂದ,ಗಂಧ,ಮಕರಂದ,ಉನ್ಮಾದ       ವೆಲ್ಲ ಖಾಲಿ ತೊಳೆದು ಚೆಲ್ಲಾಪಿಲ್ಲಿ       ಬೀಸಾಡಿದ ಪಾತ್ರೆ,ಬಾಡಿ ಬಸವಳಿದು       ಗಿಡದಿಂದ ತೊಟ್ಟು ಕಳಚಿ       ನೆಲಕ್ಕುದುರಿ ಮಣ್ಣಲಿ ಮಣ್ಣಾಗುವ       ಒಂದು ದಿನದ ಬದುಕ ಯಾತ್ರೆ ನೆನೆದು       ಒಳಗೊಳಗೇ ಅಳುತ್ತಿರಬಹುದು        ಮೌನವಾಗಿ ಮುಂಜಾವಲ್ಲೂ        ಈ ಅಂದದ ಹೂವು. - ಅಬ್ಳಿ,ಹೆಗಡೆ

                   ಜೋಡಿ ಚಪ್ಪಲಿ [ಕವನ]

ಜೋಡಿ ಚಪ್ಪಲಿ [ಕವನ]

ನವ ವಧುವಂತೆ ಬಂದೆನು ಮನೆಗೆ ಸ್ವಾಗತಿಸಿದಿರಿ ನನ್ನನು ಮನ್ನಿಸಿ. ಹೊರಟೆವು ನಾವು ಜೋಡಿಲಿ ಜಾತ್ರೆಗೆ ಕದ್ದೊಯ್ದರು ನಮ್ಮನು ಅಗಲಿಸಿ. ನನ್ನೆದುರಲ್ಲೇ ಯಾರದೋ ಜೊತೆಯಲಿ ಮರೆಯಾದನು ನನ್ನಯ ನಲ್ಲ. ಇದ್ದನು ಅವನು ನನ್ನೆದೆ ಉಸಿರಲಿ ಬೇರೆ ಮಾಡಿದರೆ ಬದುಕಿಲ್ಲ. ಬರಿಗಾಲಲಿ ಬೇಕಾದೆ ನಡೆವಾಗ ಅಂದು ಜೊತೆಯಾದಳೇ ಬೂಟು. ಸ್ವಲ್ಪವೇ ಹರಿದರೂ ಎಸೆವಿರಿ ಬದಿಯಲಿ ನಾನಾದೆ ಬೇಡದ ಸಗಟು. ಮನ್ನಣೆ ನನಗಿದೆ ನಿಮ್ಮಯ ಸಿಟ್ಟಲಿ ಕಳ್ಳನ ಮುಖಕೆ ಎಸೆಯುವಿರಿ. ಮರುದಿನ ತೋರ್ವರು ದಿನಪತ್ರಿಕೆಯಲಿ ಖುಷಿಯೋ ದುಃಖವೋ ನೋಡುವಿರಿ. ಒಂದಾಗುವಿರಿ ಮದುವೆಯ ನೆಪದಲಿ ಬೇರೆ ಆಗದಿರಿ ನೀವೆಂದು. ಜೋಡಿಯಾಗಿಯೇ ಇರುವೆವು ಮನುಜ ನಮ್ಮನು ನೋಡಿ ಕಲಿ ಇಂದು. ಅರುಣ ಗೌಡ. ಜೂಗ

                   ಬಾವುಟ [ಮಕ್ಕಳ ಕವಿತೆ ]

ಬಾವುಟ [ಮಕ್ಕಳ ಕವಿತೆ ]

ಅತ್ತ ನೋಡು ಇತ್ತ ನೋಡು 
ಸುತ್ತ ನೋಡು ಎತ್ತ ನೋಡು
ಬೀದಿ ನೋಡು ಕೇರಿ ನೋಡು
ನೋಡು ನೀನು ಬಾವುಟ 
ಮಾಡು ನೀನು ಸೆಲ್ಯೂಟ್...

ಕೆಸರಿ ಬಿಳಿ ಹಸಿರು 
ಮೂರು ಬಣ್ಣ ನಡುವೆ 
ಚಕ್ರ ಒಂದು ನೀಲಿ ನೋಡು

ಸತ್ಯ ಶಾಂತಿ ನ್ಯಾಯ ಪ್ರೀತಿ
ತ್ಯಾಗ ಶೌರ್ಯ ನೀತಿ ಮೌಲ್ಯ
ಐಕ್ಯ ಒಂದು ಪ್ರತೀಕ ನೋಡು 

ಪರತಂತ್ರವ ಕಳಚಿ ಬಿಟ್ಟು
ಸ್ವಾತಂತ್ರವ ಮೆರೆಸಿ ಕೊಟ್ಟು
ದೇಶದೊಂದು ಪ್ರತೀಕ ನೋಡು

ಮೆಡಂ ಕಾಮಾ ಹಾರಿಸಿದ
ಭಗತ ಗುರು ಪ್ರೇಮಿಸಿದ
ಗಾಂಧೀನೆಹರು ಪ್ರೀತಿಸಿದ ಪ್ರತೀಕ ನೋಡು

ಹಲವು ಭಾವ ಹಲವು ಭಾಷೆ
ಹಲವು ಬಣ್ಣ ಹಲವು ವೇಷ
ಎಲ್ಲರೊಂದು ಪ್ರತೀಕ ನೋಡು ಮಲಿಕಜಾನ ಶೇಖ ಅಕ್ಕಲಕೋಟ, ಸೊಲ್ಲಾಪುರ ಸಂಪರ್ಕ - 9423468808

                   ಶ್ರಾಧ್ಧ [ಕತೆ]

ಶ್ರಾಧ್ಧ [ಕತೆ]

ನಾಗವೇಣಿಗೆ ಬೆಳಿಗ್ಗೆಯಿಂದಲೂ ತಳಮಳವೇ. ಕುಳಿತರೆ ಕುಳಿತ ಹಾಗಿಲ್ಲ; ನಿಂತರೆ ನಿಂತ ಹಾಗಿಲ್ಲಾ. ಗಂಡ ಸದಾಶಿವನ ಜೊತೆ ಈ ವರ್ಷ ಮಾವನವರ ಶ್ರಾಧ್ಧಕ್ಕೆ ತಾನು ಊರಿಗೆ ಹೋಗಲೇಬೇಕು ಎಂದು ಆಕೆ ನಿರ್ಧಾರ ಮಾಡಿದಾಗಿನಿಂದಲೂ ಅವಳಿಗೆ ಒಂದು ರೀತಿಯ ಅವ್ಯಕ್ತ ಆತಂಕ ಮನದಾಳದಲ್ಲಿ ಆಗೀಗ ಇಣುಕಿ ಹಾಕಿ ಕಾಡುತ್ತಿತ್ತು . ಕಳೆದ ನಾಲ್ಕು ವರ್ಷದಿಂದಲೂ ಮಾವನವರ ಶ್ರಾಧ್ದಕ್ಕೆ ಊರಿಗೆ ಹೋಗಲು ಅವಳಿಗೆ ಆಗಿರಲಿಲ್ಲಾ. ಮನೆಯ ಹಿರೀ ಸೊಸೆಯಾಗಿ ಅವಳು ಹಿಂದೆಂದೂ ಇಂಥಾ ಜವಾಬ್ದಾರಿಯಿಂದ ತಪ್ಪಿಸಿಕೊಂಡವಳಲ್ಲಾ . ಆದರೆ ಈಗ ಅವಳಿಗೆ ಮಗಳು ದೀಪಾಳ ಸಮಸ್ಯೆಯ ಮುಂದೆ ಊರು, ಕೇರಿ, ಮನೆ, ಶ್ರಾಧ್ಧ ಎಲ್ಲವೂ ಅಸ್ಪಷ್ಟ, ಅಯೋಮಯ. ಆದರೆ ಇದನ್ನೆಲ್ಲಾ ಯಾರಿಗೆ ಹೇಳುವುದು? ಹೇಳಿದ್ರೂ ಅದು ಯಾರಿಗೂ ಅರ್ಥವಾಗೋದಲ್ಲಾ ಅನ್ನೋದೂ ಅವಳಿಗೆ ಗೊತ್ತು. ಸದಾಶಿವನ ಬೆನ್ನಿಗೆ ಬಂದ, ಅವನ ನಾಲ್ಕು ತಂಗಿಯರೂ ನಾಗವೇಣಿಯ ಬೆನ್ನು ಹಿಡದರು ಅಂದ್ರೆ, ನಾಗವೇಣಿಗೆ ಸಾಕೋ ಸಾಕು ಮಾಡ್ಸಿಯೇ ಬಿಡೋ ಸ್ವಭಾವ ಅವರದ್ದು. ಹೀಗಿದ್ದಾಗ ಈ ವರ್ಷ ತಾನು ಮಾವನವರ ಶ್ರಾಧ್ಧಕ್ಕೆ ಊರಿಗೆ ಹೋದ್ರೆ ತನ್ನ ಅತ್ತಿಗೆಯರಿಂದ, ತನಗೆ ಇನ್ನು ಎಂತೆಂತ ಮಾತು ಕೇಳಬೇಕಾಗುತ್ತೋ ಎಂದೆನಿಸಿ ಅವಳಲ್ಲಿ ಆತಂಕ ಮನೆ ಮಾಡಿತ್ತು . ಸದಾಶಿವ ಮನೆಯ ಹಿರೀ ಮಗ. ಕೊನೆಯ ಮಗ ಮಂಜು ಗಿಂತಲೂ ಸದಾಶಿವ ಬಹಳ ಬುಧ್ಧಿವಂತ. ತಂದೆ ಶಿವರಾಮ ಹೆಗಡೆಯವರಿಗೆ, ಮಗನ ಬುದ್ಧಿವಂತಿಕೆಯ ಬಗ್ಗೆ ಎಲ್ಲಿಲ್ಲದ ಹೆಗ್ಗಳಿಕೆ. ಅದಕ್ಕೆ ಮಗ ಸದಾಶಿವ ಎಷ್ಟು ಓದ್ತೆ ಹೇಳಿದ್ನೋ ಅಷ್ಟು ಅವನನ್ನು ಶಿವರಾಮ ಹೆಗಡೆ ಓದಿಸಿದರು. ಸದಾಶಿವನೂ ಚೆನ್ನಾಗಿ ಓದಿ ಬ್ಯಾಂಕಿನಲ್ಲಿ ಒಳ್ಳೆ ಕೆಲಸಕ್ಕೂ ಸೇರಿಕೊಂಡ. ಪ್ರಮೋಷನ್ ಮೇಲೆ ಪ್ರಮೋಷನ್ ಬಂದು ಮಗ ಸೊಸೆ ಮನೆ ಬಿಟ್ಟು ಶಹರಕ್ಕೆ ಹೊರಟು ನಿಂತಾಗ ನಾಗವೇಣಿ ಅತ್ತೆ ಶೇಷ ಹೆಗ್ಗಡತಿ, ಬೇಡ ಈಗ ಈ ಸೊಸೆ ಮನೆ ಬಿಟ್ಟು ದೂರ ಹೋದ್ರೆ ಆ ಕಿರೀ ಸೊಸೆ ಜೊತೆ ತನ್ನ ಹತ್ತಿರ ಇಷ್ಟು ದೊಡ್ಡ ಮನೆ ನಿಭಾಯಿಸಲು ಸಾಧ್ಯವೇ ಇಲ್ಲ, ಶಹರಕ್ಕೆ ಹೋಗುವುದಾದರೆ ಸದಾಶಿನೊಬ್ಬನೇ ಹೋಗಲಿ ಸೊಸೆ ನಾಗವೇಣಿ ಮನೆಯಲ್ಲೇ ಇರಲಿ, ಎಂದು ಪಟ್ಟು ಹಿಡಿದಾಗ ನಾಗವೇಣಿಯ ಮಾವ ಶಿವರಾಮ ಹೆಗಡೆ, ತನ್ನ ಸೊಸೆ ಮಗನ ಜೊತೆ ಶಹರಕ್ಕೆ ಹೋಗೋದೇ ಸರಿ ಹೇಳಿ ತೀರ್ಮಾನ ಕೊಟ್ಟುಬಿಟ್ಟಿದ್ದ . ಹೀಗಾಗಿ ತಾನು ಇಷ್ಟು ದೊಡ್ಡ ನಗರಕ್ಕೆ ಬಂದು, ಮಗಳು ದೀಪಾಗೆ ಚೆನ್ನಾಗಿ ಓದಿಸಲಿಕ್ಕೆ ಸಾಧ್ಯವಾಗಿದ್ದು ಎಂಬ ಕಾರಣಕ್ಕೆ ಅವಳಿಗೆ ಮಾವ ಶಿವರಾಮ ಹೆಗಡೆಯವರ ಮೇಲೆ ಎಲ್ಲಿಲ್ಲದ ಗೌರವ. ಆದ್ರೆ ನಾಗವೇಣಿಗೆ ಮನದ ಮೂಲೆಯಲ್ಲೆಲ್ಲೋ ಈಗ ನಾಲ್ಕು ವರ್ಷ ದಿಂದಲೂ ತನ್ನ ಪ್ರೀತಿಯ ಮಾವನವರ ಶ್ರಾಧ್ಧಕ್ಕೂ ಹೋಗಲಿಕ್ಕೆ ಸಾದ್ಯವಾಗಿಲ್ಲವಲ್ಲ ಅನ್ನೋ ಕೊರಗು ಕಾಡುತ್ತಿತ್ತು . ಇದಕೆಲ್ಲ ಮಗಳು ದೀಪಾ ಮೆಡಿಕಲ್ ಕೊನೆಯ ವರ್ಷದಲ್ಲಿ ಇದ್ದಾಗ ನಡೆದ ಆ ಘಟನೆ ಎಂಬುದನ್ನು ನೆನೆದಾಗಲಂತೂ ಕಣ್ಣು ಅವಳಿಗೆ ಅರಿವಿಲ್ಲದಂತೆ ದ್ರವಿಸತೊಡಗಿತು. ದೀಪಾ ಮೆಡಿಕಲ್ ಅಂತಿಮ ವರ್ಷದಲ್ಲಿದ್ದಾಗ ಮುಂದಿನ ಎಂಟು ದಿನಕ್ಕೇ ಅವಳ ಕೊನೆಯ ವರ್ಷದ ಎಕ್ಸಾಮು. ಆ ಕಡೆ ಗಂಡಿನ ಕಡೆಯವರಿಗೆ ಹುಡುಗಿಯ ನೋಡಲೂ ಅವಸರ. ನೋಡಿದ ತಕ್ಷಣ ಹುಡುಗಿಯ ಒಪ್ಪಿಗೆ ತಿಳಿಸಲೂ ಅವಸರವೇ. ಅದು ಯಾವ ಮಾಯೇಯಲ್ಲೋ, ಬರೇ ಕಾಲೇಜು. ಎಕ್ಸಾಮು ಎಂದು ಓಡಾಡಿಕೊಂಡಿರುವ ದೀಪಾಳ ಹತ್ತಿರವೂ ಮದುವೆಗೆ ಹೂಂ ಎಂದು ಹೇಳಿಸಿ, ಎಂಟು ದಿನದೊಳಗೇ ದೀಪಾಳ ಮದುವೆ ಮುಗಿದು ಹೋಗಿತ್ತು. ಆಮೇಲೆ ಶುರುವಾಗಿದ್ದೇ ಬೇರೆ ಕತೆ. ದೀಪಾಳನ್ನು ತಮ್ಮ ಸೊಸೆಯನ್ನಾಗಿ ಮಾಡಿಕೊಂಡ ರಾವ್ ಕುಟುಂಬ ನಿಜವಾಗಿಯೂ ಒಳ್ಳೆಯ ಕುಟಂಬವೇ. ತಂದೆ ತಾಯಿ, ಮೂರು ಮಕ್ಕಳು, ಎಲ್ಲರೂ ಡಾಕ್ಟ್ರೇ. ಅದಕ್ಕೇ ತಮಗೆ ಸೊಸೆಯಾಗಿ ಬರುವವಳೂ ಡಾಕ್ಟ್ರೇ ಆಗಿರಲಿ ಅನ್ನೋ ಅಭಿಪ್ರಾಯದಿಂದ ಅವರು ದೀಪಾಳನ್ನ ಸೊಸೆಯಾಗಿ ಮಾಡಿಕೊಂಡಿದ್ದು. ಆದರೆ ಆ ಡಾಕ್ಟರ್ ಮನೆಯ ರೂಲ್ಸು, ರೆಗ್ಯುಲೆಶನ್ಸ್, ಅತೀ ಶಿಸ್ತು, ಅತೀ ಸ್ವಚ್ಚತೆ ಇವೆಲ್ಲಾ ದೀಪಾಳಿಗೆ ಸಾಕು ಸಾಕಾಗಿ ಹೋಗಿತ್ತು. ಆ ಮನೆಯ ಚಾಕರಿಯಲ್ಲೇ ಮುಳುಗಿದ ಅವಳಿಗೆ ತಾನೂ ಮೆಡಿಕಲ್ ಓದಿದ್ದೇ ಅನ್ನೋದೇ ಮರೆತು ಹೋಗುವ ಹಾಗೆ ಆಗಿತ್ತು. ಅದೂ ಅಲ್ಲದೇ ತಮಗೆ ವಯಸ್ಸು ಆಗಿ ಹೋಯಿತು, ಮೊಮ್ಮಗುವನ್ನು ನೋಡಲೇಬೇಕೆಂಬ ಅತ್ತೆ-ಮಾವರ ವರಾತದಿಂದ ದೀಪಾ ಮದುವೆ ಆಗಿ ವರ್ಷದೊಳಗೇ ಮಗು ಹೆತ್ತಿದ್ದೂ ದೀಪಾಳಿಗೆ ಒಂದು ರೀತಿಯ ನುಂಗಲಾರದ ತುತ್ತೇ ಆಗಿತ್ತು. ಒಂದಾದ ಮೇಲೊಂದರಂತೆ ಬಂದೆರಗಿದ ಈ ಎಲ್ಲಾ ಘಟನೆಗಳಿಂದ ದೀಪಾ ಮಾನಸಿಕವಾಗಿ ತುಂಬಾ ಬಳಲಿ ಹೋಗಿದ್ದಳು. ಸಂಸಾರ ಸಮುದ್ರಕ್ಕೆ ತಳ್ಳಿದ ತಂದೆ-ತಾಯಿಗಳ ಮೇಲೆ ಅಸಮಾಧಾನಗೊಂಡಿದ್ದಳು. ಮಗಳ ಈ ಎಲ್ಲಾ ಸಂಕಟವೂ ನಾಗವೇಣಿಯ ಎದೆಯ ಮೇಲೇ ಬಂದು ಕುಳಿತು ಕೊಂಡಂತಾಗಿ ನಾಗವೇಣಿಗೆ ಊರು, ಕೇರಿ, ಮನೆ, ಮಾವನವರ ಶ್ರಾಧ್ಧ ಎಲ್ಲ ಮರೆತೇ ಹೋದಂತಾಗಿತ್ತು. ಹೀಗಿರುವಾಗ ಈ ತಾಪಾತ್ರಯದಿಂದ ಬಿಡಿಸಿಕೊಂಡು ತಾನು ಹೇಗೆ ಮಾವನವರ ಶ್ರಾಧ್ಧಕ್ಕೆ ಹೋಗಲು ಸಾಧ್ಯ ಅಂತ ಅವಳಿಗೆ ಅನಿಸಿತು. ಇದೆಲ್ಲಾ ತನ್ನ ಅತ್ತಿಗೆಯರಿಗೆ, ಅತ್ತೆಗೆ ಅರ್ಥ ಮಾಡಿಸುವದಾದರೂ ಹೇಗೆ? ಎಂಬ ಆತಂಕ ಕಾಡುತ್ತಿತ್ತು . ಅದು ಏನೇ ಆಗ್ಲಿ ಈ ಸಾರೆ ತಾನು ಮಾವನವರ ಶ್ರಾಧ್ಧಕ್ಕೆ ಹೋಗಿಯೇ ತೀರೋದು ಅಂತ ತೀರ್ಮಾನ ಮಾಡಿ ಮಾಡಿದ್ದಳು. ಮೊದಲಾಗಿದ್ರೆ ತಾನು ಶ್ರಾಧ್ಧಕ್ಕೆ ಬರುತ್ತೇನೆಂಬ ಖಾತ್ರಿಯಿಂದ ತನ್ನ ಅತ್ತಿಗೆಯರಲ್ಲಿ ಯಾರಾದ್ರೂ ಒಬ್ಬರು ಶ್ರಾಧ್ಧದಲ್ಲಿ ತನಗೆ ಬೇಕಾಗೋ ಮಡಿಸೀರೆಯನ್ನ ತೊಳ್ದು ವಣಗಲು ಹಾಕಿರ್ತಿದ್ರು. ಆದ್ರೆ ಈ ಸಾರೆ ಅವರಿಗೆಲ್ಲಾ ತನ್ನ ಮೇಲೆ ಅಸಮಾಧಾನ ಇರೋದ್ರಿಂದ ತಾನು ಇಲ್ಲಿಂದಲೇ ಮಡಿಸೀರೆ ತಗಂಡು ಹೊಗಬೇಕು ಎಂದು ನಾಗವೇಣಿ ತನ್ನ ಒಂದು ಮಡಿಸೀರೆನೂ ಬ್ಯಾಗ್ನಲ್ಲಿ ಹಾಕಿಕೊಂಡಳು. ಹಿಂದಿನ ದಿನವೇ ತಂದಿಟ್ಟ, ತನ್ನ ಮಾವನವರಿಗೆ ಇಷ್ಟವಾದ ಒಂದಿಷ್ಟು ಬೆಂಡೆಕಾಯಿ, ಹಾಗಲಕಾಯಿಯನೆಲ್ಲಾ ತನ್ನ ಬ್ಯಾಗನಲ್ಲಿ ಪ್ಯಾಕ್ ಮಾಡಿಕೊಂಡ ನಾಗವೇಣಿ, ಗಂಡ ಸದಾಶಿವನ ಜೊತೆ ಮಾವನವರ ಶ್ರಾದ್ಧಕ್ಕೆ ಹೊರಟೇ ಬಿಟ್ಟಳು . ಹಿಂದೆಲ್ಲ ಅವಳಿಗೆ ರೇಲ್ವೆ ಪಯಣ ಖುಷಿ ನಿಡುತ್ತಿತ್ತು. ಆದ್ರೆ ಇವತ್ತು ಊರಿಗೆ ಹೋದ ಮೇಲೆ ತನ್ನ ಅತ್ತಿಗೆಯರಿಂದ ಬರೋ ಮಾತುಗಳನ್ನೆಲ್ಲಾ ಹೇಗೆ ಎದ್ರುಸೋದು ಎಂಬ ವಿಚಾರ ಅವಳಿಗೆ ತಲೆ ಬಿಸಿ ತಂದಿತು. ಅದನ್ನ ಗಂಡ ಸದಾಶಿವನ ಹತ್ತಿರವೂ ಹೇಳಿ ನೋಡಿದಳು. ಆದ್ರೆ ಸದಾಶಿವ ಅದಕೆಲ್ಲಾ ತಲೆಕೆಡಿಸಿ ಕೊಳ್ಳುವವನೇ ಅಲ್ಲಾ. ನಾಗವೇಣಿಗೇ ಅನಿಸಿತು. ತಾನು ಹೇಗೂ ಮನೆಗೆ ಹೋದಮೇಲೆ ಅತ್ತಿಗೆಯರನ್ನು ಎದುರಿಸೋದು ಇದ್ದದ್ದೇ, ಅವಾಗ ನೋಡಿಕೊಂಡರೆ ಆಯ್ತು ಅನ್ನೋ ಒಂದು ಸಣ್ಣ ಸಮಾಧಾನದಿಂದ ಅವಳು ತನ್ನ ಕಣ್ಣನ್ನ ಬಿಗಿಯಾಗಿ ಮುಚ್ಚಿಕೊಂಡು ರೈಲಿನಲ್ಲಿ ಕುಳಿತಳು . ಕಣ್ಣ ಮುಚ್ಚಿಕೊಂಡು ಕುಳಿತರೂ ನಾಗವೇಣಿಗೆ ಈಗ ನಾಳಿನ ಶ್ರಾಧ್ಧದ್ದ ತಯಾರಿ ಯೋಚನೆ ಹುಟ್ಟಿಕೊಂಡಿತು. ಶ್ರಾಧ್ಧಕ್ಕೆ ಪ್ರತಿ ವರ್ಷಕ್ಕಿಂತ ಈ ವರ್ಷ ಜಾಸ್ತಿನೇ ಜನ ಆಗೋದು. ಯಾಕೆಂದರೆ ಈ ಸಾರೆ ಇನ್ನೂ ಮಳೆ ಅಷ್ಟು ಜೋರಾಗಿ ಶುರು ಆಗಿಲ್ಲಾ. ಪ್ರತಿ ವರ್ಷದ ಹಾಗೆ ಈ ವರ್ಷ ಹಲಸಿನ ಹಣ್ಣಿನ ಕಡುಬು ಮಾಡಿಕೊಂಡರೆ ಹೇಗಾಗುತ್ತೋ ಏನೋ. ಬೆಳಿಗ್ಗೆ ಎಷ್ಟು ಬೇಗ ಎದ್ರೂ ಅದು ತಡವೇ ......ಜಾನಕಿಯಂತೂ ತಾನು ಕಿರೀ ಸೊಸೆ ಅಂತ ಮನೆಗೆ ಬಂದಾಗಿನಿಂದಲೂ ಏನನ್ನೂ ತಾಗಿಸಿ ಕೊಂಡವಳೇ ಅಲ್ಲಾ. ಅತ್ತೆಗಂತೂ ಈಗೀಗ ಕಾಲು ನೋವೇ ಜಾಸ್ತಿ. ಇನ್ನು ಅತ್ತಿಗೆಯ ರು ಒಬ್ಬಬ್ಬರೂ ಒಂದೊಂದು ಮಾತು ಶುರು ಮಾಡಿ ಬಿಟ್ಟರೆ ಕುಳಿತಲ್ಲಿಂದ ಏಳುವವರೇ ಅಲ್ಲಾ. ಹಾಗಾದ್ರೆ ತನ್ನ ಕಥೆ ಮುಗಿದ ಹಾಗೆಯಾ. ನಾಗವೇಣಿಗೆ ಕುಳಿತಲ್ಲೇ ಬೆವರಲು ಶುರುವಾಯಿತು. ನಾಗವೇಣಿಯ ಅತ್ತಿಗೆಯರು ಮೊದಲಿನಿಂದಲೂ ಹಾಗೆಯೇ. ಅವರು ಒಬ್ಬೊಬ್ಬರೂ ಒಂದೊಂದು ಮಾತನಾಡಿದರೆ, ನಾಗವೇಣಿಗೆ ಅದು ತನ್ನ ಹೃದಯ ಕೊರೆದುಕೊಂಡು ಒಳಗೆ ಹೋಗುತ್ತೇನೋ ಅನ್ನಿಸುತಿತ್ತು. ಆಗೆಲ್ಲಾ ಅವಳ ಮಾವ ಶಿವರಾಮ ಹೆಗಡೆಯವರೇ ಅವಳ ಸಹಾಯಕ್ಕೆ ಬರೋದಾಗಿತ್ತು. ನಾಗವೇಣಿಗೆ ಮಾವನ ನೆನಪಿಸಿಕೊಂಡು ಕಣ್ಣಲ್ಲಿ ನೀರು ತುಂಬಿತು. ದೇವರಂತಹ ಮನುಷ್ಯ. ಎಲ್ಲರಿಗೂ ಬೇಕು ಬೇಕು ಅನ್ನುವಾಗಲೇ ದೇವರು ಅವರನ್ನು ಕರೆಸಿಕೊಂಡು ಬಿಟ್ಟ. ನಾಗವೇಣಿಗೆ ಮಾವನವರ ನೆನಪು ಹೃದಯ ಹಿಂಡಿದ ಹಾಗಾಯ್ತು. ತಾನು ಮದುವೆಯಾಗಿ ಮನೆಗೆ ಬಂದಾಗಿನಿಂದ ತನಗೆ ಅವರು ತಂದೆಯೇ ಆಗಿದ್ದರು. ಯಾವ ಯಾವುದೋ ಕೆಲಸಕ್ಕೆ ಅತ್ತೆಯಿಂದ ಬೈಸಿಕೊಂಡು ಮೂಲೆಯಲ್ಲಿ ಅಳುತ್ತಾ ನಿಂತಾಗಲೆಲ್ಲಾ ಅವಳನ್ನ ಮಾವನವರೇ ಸಮಾಧಾನ ಮಾಡಿದ್ದು ಅದೆಷ್ಟು ಸಲ? ಆದ್ರೆ ಈಗ ಆತ್ತಿಗೆಯರು ಎಲ್ಲಾ ಸೇರಿ ತನ್ನ ಮೇಲೆ ದೂರಿನ ಮಳೆಗೆರೆದರೆ ಸಹಾಯಕ್ಕೆ ಬರುವವರು ಯಾರು ಎಂದೆಲ್ಲಾ ಅನ್ನಿಸಿ ಎದೆಯಲ್ಲಿ ಒಂದು ತರಹ ವೇದನೆ ಅನ್ನಿಸಿತು ಅವಳಿಗೆ. ತನ್ನ ಅದ್ರಷ್ಟವೇ ಹಾಗಿದ್ದಿರಬಹುದು. ಇಲ್ಲವಾದರೆ ಇಲ್ಲಿ ಇಷ್ಟು ಒಳ್ಳೆ ಮಾವ, ಅಲ್ಲಿ ತನ್ನ ಜೀವಕ್ಕೆ ಜೀವವೇ ಆದ ಅಮ್ಮ, ಹೀಗೆ ತನ್ನ ಬಿಟ್ಟು ಹೊರಟು ಹೊಗೊತ್ತಿದ್ದರೆ? ತನ್ನ ಅಮ್ಮನಾದರು ತನ್ನನ್ನು ಅಷ್ಟು ಬೇಗ ಬಿಟ್ಟು ಹೋಗುತ್ತಾಳೆ ಎಂದು ಅವಳು ಕನಸಿನಲ್ಲೂ ಎಣಿಸಿರಲಿಲ್ಲಾ. ಈ ಇಬ್ಬರನ್ನೂ ಕಳೆದು ಕೊಂಡಿದ್ದು ನಾಗವೇಣಿಗೆ ಭರಿಸಲಾರದಷ್ಟು ದುಖಃವಾಗಿತ್ತು. ಯೋಚಿಸ್ತಾ ಯೋಚಿಸ್ತಾ ಮನೆಗೆ ಬಂದು ತಲುಪಿದ್ದೇ ನಾಗವೇಣಿಗೆ ಗೊತ್ತಾಗಲಿಲ್ಲಾ. ನಾಗವೇಣಿ ಮನೆಗೆ ಬರುವಷ್ಟರಲ್ಲಿ ಏನೋ ಅವಳ ಪುಣ್ಯ. ಅವಳ ಅತ್ತಿಗೆಯರು ಇನ್ನೂ ಮನೆಗೆ ಬಂದಿರಲಿಲ್ಲಾ. ನಾಗವೇಣಿ ಬಂದವಳೇ ಸ್ನಾನ ಮಾಡಿ ಪ್ರಯಾಣದ ಮೈಲಿಗೆಯನ್ನು ತೊಳೆದುಕೊಂಡಳು. ಆ ಮೇಲೆ ಸೊಂಟಕ್ಕೆ ಸೀರೆಯನ್ನ ಸಿಕ್ಕಿಸಿಕೊಂಡು ಮರು ದಿನಕ್ಕೆ ಪೂಜೆಗೆ, ಶ್ರಾಧ್ಧಕ್ಕೆ ಅಡುಗೆಗೆ ಬೇಕಾದ ಎಲ್ಲಾ ತಯಾರಿಯನ್ನೂ ಮಾಡಿಟ್ಟುಕೊಂಡೇ ಮಲಗಿದಳು. ನಾಗವೇಣಿಗೆ ಮಲಗಿಕೊಂಡರೂ ನಿದ್ದೆ ಬರಲೇ ಇಲ್ಲಾ. ಆ ಕಡೆ ಈ ಕಡೆ ಹೊರಳಿದರೂ ಮತ್ತೆ ಮತ್ತೆ ಅವಳಿಗೆ ನಾಳೆಯ ಕೆಲಸವೆಲ್ಲಾ ಹೇಗಾಗುತ್ತೋ ಏನೋ ಅನ್ನೋ ಭಯ. ನಾಗವೇಣಿಗೆ ಮನೆಯಲ್ಲಿ ಪ್ರತೀಸಲ ವಿಶೇಷವಾದಾಗಲೂ ಬೆಳಿಗ್ಗೆ ಬೇಗ ಎಚ್ಚರ ವಾಗದಿದ್ರೆ ಅನ್ನೋ ಆತಂಕವೇ. ಮಾವನವರು ಇದ್ದಾಗಾದ್ರೆ ಅವರೇ ನಾಗವೇಣಿಯನ್ನ ಏಳಸ್ತಿದ್ರು. ಆದ್ರೆ ಈಗ? ಅವಳಿಗೆ ನಾಳೆ ಬೇಗ ಎಚ್ಚರ ವಾಗದಿದ್ರೆ ಅನ್ನೋ ಭಯ ಶುರು ವಾಯಿತು. ಅವಳು ಒಂದು ಕ್ಷಣ ಕಣ್ಣು ಮುಚ್ಚಿಕೊಂಡಳು. ಕಣ್ಣುಮುಚ್ಚಿಕೊಂಡರೂ ಅವಳಿಗೆ ನಾಳಿನ ಕೆಲಸವೇ ಕಣ್ಣಮುಂದೆ ಬಂದಿತು. ಆಗ ಅವಳಿಗೆ ಮತ್ತೂ ಭಯವಾಯಿತು ಸ್ವಲ್ಪ ಹೊತ್ತಿನಲ್ಲೇ ಅವಳಿಗನಿಸಿತು. ತಾನು ಹೀಗೆ ಭಯಪಡುವದಕ್ಕಿಂತ ಎದ್ದು ಕೆಲಸ ಶುರು ಮಾಡುವುದೇ ಒಳ್ಳೇಯದು ಅಂತ. ಹಾಗೆ ನಾಗವೇಣಿಗೆ ಅನಿಸಿದ್ದೇ ತಡ, ಅವಳು ಎದ್ದು, ಹಾಸಿಗೆ ಮಡಚಿಟ್ಟು ಆ ಕತ್ತಲೆಯಲ್ಲೇ ಬಚ್ಚಲ ಒಲೆಗೆ ಬೆಂಕಿ ಹಾಕಲು ಹೋದಳು. ಒಲೆಯ ಬೆಂಕಿ ಹೊತ್ತಿ ಉರಿಯುತ್ತಿದ್ದ ಹಾಗೆ ನಾಗವೇಣಿಗೆ ಮೈ ಛಳಿ ಎಲ್ಲಾ ಬಿಟ್ಟು ಅವಳ ಮೈಯಲ್ಲಿ ಏನೋ ಒಂದು ಶಕ್ತಿ ಹೊಕ್ಕ ಹಾಗೆ ಆಯಿತು. ಆ ಉಮೆದಿನಲ್ಲೇ ಅವಳು ಪಟ ಪಟನೇ ಎಲ್ಲ ಕೆಲಸ ಮಾಡಲು ಶುರು ಮಾಡಿದಳು . ನೋಡ್ತಾ ನೋಡ್ತಾ ಇದ್ದ ಹಾಗೆ ಅವಳಿಗೆ ತನಗೆ ಎರಡೇ ಕೈಯಲ್ಲಾ ನಾಲ್ಕು ಕೈ ಇದೆಯೇನೋ ಅನ್ನಿಸುವಷ್ಟು ಅವಳ ಕೆಲಸ ಎಲ್ಲಾ ಸಾಗತ್ತಾ ಬಂತು. ದೊಡ್ಡ ಬೆಳಕು ಹರಿಯುವದರೊಳಗೆ ನಾಗವೇಣಿಗೆ ಅನ್ನ ಮಾಡುವುದೊಂದು ಬಿಟ್ಟು ಎಲ್ಲಾ ಕೆಲಸವೂ ಮುಗಿಯುತ್ತಾ ಬಂದಿತು. ಅತ್ತಿಗೆಯರೆಲ್ಲಾ ಬರುವದರೊಳಗೆ ತೊವ್ವೆ, ಗೊಜ್ಜು, ಪಲ್ಯ, ಕೋಸಂಬರಿ, ಇಡ್ಲಿ, ವಡೆ, ಚಟ್ನಿ, ಪಾಯಸ, ಕೊಟ್ಟೆ ಕಡಬು, ಹಲಸಿನ ಹಣ್ಣಿನ ಕಡುಬು, ಎಲ್ಲಾ ರೆಡಿ ಆಗ್ಬಿಟ್ಟಿತ್ತು. ಅವಳಿಗೆ ದೇವರಿಗೆ ಪಂಚಾಮೃತಕ್ಕೆ ರೆಡಿ ಮಾಡಿ, ಪಿಂಡಕ್ಕೆಂದು ಬಾಳೆ ಆರಿಸಿಯೂ ಆಯಿತು. ಆಗ ನಾಗವೇಣಿಗೆ ಮನಸ್ಸು ಹಗುರವಾಗುತ್ತ ಬಂದಂತೆ ಅನಿಸಿತು. ಅವಳಿಗೆ ತಾನೊಬ್ಬಳೆ ಇದ್ದೇನೆ ಎಂಬ ಅನಾಥ ಭಾವ ಕ್ಷೀಣಿಸಿದಂತೆ ಅರವಾಗತೊಡಗಿತು. ಇನ್ನು ಅತ್ತಿಗೆಯರು ಬಂದು ತನಗೆ ಏನೇ ಹೇಳಿದ್ರೂ ತಾನು ಅದನ್ನ ನಿಭಾಯಿಸಬಲ್ಲೆಂಬ ವಿಶ್ವಾಸ ತಲೆ ಎತ್ತಿ ನಿಂತಿತು. ಅವರ ಕಟುಕಿಗಳನ್ನು ಎದುರಿಸ ಬಲ್ಲೆ ಎಂಬ ಧೈರ್ಯ ಬಂತು. ದೂರದಲ್ಲಿ ಅಂಗಳದ ತುದಿಯಲ್ಲಿ ಮಾಂವ ನಡೆದುಕೊಂಡು ಬರುತ್ತಾ ಇದ್ರು. ಒಳಗೆ ಬಂದು “ಆರೇ ನಾಗವೇಣಿ ನೀ ಬಂದಿಯಲ್ಲೇ. ಅಷ್ಟೇ ಅಲ್ಲಾ ಶ್ರದ್ಧೆಲಿ ನನಗೆ ಪ್ರೀತಿ ಅಪ್ಪೋ ಅಡಗೆನೂ ಮಾಡಿದೀಯಲ್ಲೇ. ನಿಜ ಹೇಳೋವೋ, ಇವತ್ತು ನನಗೆ ಪ್ರೀತಿ ಶ್ರಾದ್ಧ ಆತು” ಎಂದು ಮಾಂವ ಹೇಳಿದಾಗಂತು ಅವಳಿಗೆ ಹೊಸ ಜೀವ ಬಂದಂತೆ ಭಾಸವಾಯಿತು. ಮನಸ್ಸು ವಾಸ್ತವಕ್ಕೆ ಇಳಿದು ಹಗುರವೆನಿಸಿತು. “ಅಡಿಗೆ ಎಲ್ಲ ಆಯ್ದು, ಭಟ್ಟರಿಗೆ ಕೈ ಕಾಲು ತೊಳುಲೆ ನೀರು ಕೊಡಿ” ಎಂದು ಗಂಡನಿಗೆ ಕೂಗಿ ಹೇಳಿದಳು. ಹಾಗೆ ಅಂದವಳೇ ಒಂದು ದೀರ್ಘ ವಾದ ನಿಟ್ಟುಸಿರಬಿಟ್ಟು ಅಲ್ಲೇ ಸ್ವಲ್ಪ ಹೊತ್ತು ಕಾಲು ಚಾಚಿ ಕುಳಿತುಕೊಂಡಳು. ಉಮಾ ಭಟ್‌, ಹುಬ್ನಳ್ಳಿ, ಯಲ್ಲಾಪುರ ಸಂಗೀತ ಮತ್ತು ಸಾಹಿತ್ಯಗಳೆರಡರಲ್ಲೂ ಅಪಾರ ಆಸಕ್ತಿ ಹೊದಿರುವ ಶ್ರೀಮತಿ ಉಮಾ ಭಟ್ ಯಲ್ಲಾಪುರ ತಾಲೂಕಿನ ಹುಬ್ನಳ್ಳಿಯೆಂಬ ಹಳ್ಳಿಯಲ್ಲಿ ತಮ್ಮ ಪತಿ ಶ್ರೀ ನಾರಾಯಣ ಭಟ್ಟರೊಂದಿಗೆ ಕೃಷಿಯಲ್ಲಿ ನಿರತರು. ಎಳವೆಯಲ್ಲೇ ಹಿದುಸ್ತಾನಿ ಸಂಗೀತದಲ್ಲಿ ಮತ್ತು ಕನ್ನಡ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊದಿರುವ ಇವರು ಬರೆದ ಹಲವಾರು ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಮತ್ತು ಪ್ರಶಸ್ತಿಗಳನ್ನು ಪಡೆದಿವೆ. ಇವರ ಅಪ್ರಕಟಿತ ಕವನ ಸಂಕಲನ "ವಿವಕ್ಷೆ", ಪ್ರಶಸ್ತಿ ಪಡೆದಿದೆ. ಬೆಂಗಳೂರಿನ ಹವ್ಯಕ ಮಹಾಸಭೆಯ ಅಧ್ಯಯನ ಕೇಂದ್ರದಲ್ಲಿದ್ದಾಗ "ಅಡಕೆ ಸಂಸ್ಕೃತಿ" ಗ್ರಂಥದ ಸಂಪಾದನೆಯ
ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಅವರ ಸಾಹಿತ್ಯಾಸಕ್ತಿಗೆ ಹಿಡಿದ
ಕನ್ನಡಿಯಾಗಿದೆ. -ಸಂಪಾದಕ

                  ಗ್ರಾಮೋತ್ಸವಗಳ ಅಗತ್ಯ

ಗ್ರಾಮೋತ್ಸವಗಳ ಅಗತ್ಯ

ನಮ್ಮ ಭಾರತೀಯ ಸಂದರ್ಭದಲ್ಲಿ ಉತ್ಸವಗಳಿಗೆ ವಿಶೇಷವಾದ ಸ್ಥಾನವಿದೆ. ದೇಶದ ಉದ್ದಗಲದಲ್ಲಿ ಇರುವ ಧಾರ್ಮಿಕ ಕೇಂದ್ರಗಳಲ್ಲಿ ವರ್ಷಕ್ಕೊಮ್ಮೆ ಅಥವಾ ಹಬ್ಬ ಹರಿದಿನಗಳ ಸಂದರ್ಭದಲ್ಲಿ ವಿಶೇಷ ಉತ್ಸವಾದಿಗಳು ಏರ್ಪಡುತ್ತವೆ. ಉತ್ಸವ ಎಂದರೆ ವೈಭವ, ಅದ್ದೂರಿತನ. ಎಲ್ಲ ವಯೋಮಾನದವರು ಸಂಭ್ರಮದಿಂದ ಒಂದು ನಿರ್ದೀಷ್ಟ ಸ್ಥಳದಲ್ಲಿ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಕಲೆಯುವ ಉತ್ಸವಗಳು ಪರಿಣಾಮದಲ್ಲಿ ಹಲವು ಗುಣಮೌಲ್ಯಗಳನ್ನು ಒಟ್ಟಿಗೇ ನೀಡುತ್ತವೆ. ತುಂಬ ಜನ ಸೇರುವಲ್ಲಿ ವಿವಿಧ ರೀತಿಯ ಆಸಕ್ತಿ ಉಳ್ಳವರಿರುತ್ತಾರೆ. ಎಲ್ಲ ವಯೋಮಾನದವರ ಆಕರ್ಷಣೆ ಉಳಿಸಿಕೊಳ್ಳಲು ಸಂಭ್ರಮ - ಅದ್ದೂರಿತನಗಳು ಬೇಕೇಬೇಕಾಗುತ್ತದೆ. ಉತ್ಸವ ಎಂಬ ಪರಿಕಲ್ಪನೆ ಕೇವಲ ಧಾರ್ಮಿಕ ಕೇಂದ್ರಗಳ ಸಾಂಪ್ರದಾಯಿಕ ಆಚರಣೆ ಎಂದು ಭಾವಿಸಬೇಕಾಗಿಲ್ಲ. ಪರಿಣಾಮದಲ್ಲಿ ಅದು ಐಹಿಕವಾದದ್ದೇ. ಉತ್ಸವಗಳನ್ನು ಐಹಿಕವಾದ ಲೋಕೋದ್ದೇಶಗಳಿಗಾಗಿ ಬಳಸಿಕೊಂಡ ಉದಾಹರಣೆಗಳು ಸಾಕಷ್ಟು ಕಂಡು ಬರುತ್ತದೆ. ಮೇಳ ಮತ್ತು ಸಂತೆಗಳು ಉತ್ಸವದ ಒಂದು ಭಾಗ. ತುಂಬ ಜನ ಒಂದೆಡೆ ಸೇರುವುದರಿಂದ ಉತ್ಸವದ ಅಂಗವಾಗಿ ಮೇಳ/ಸಂತೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಒಂದು ದೇವಸ್ಥಾನದ ಉತ್ಸವ ಕೇವಲ ಐದು/ಏಳು ದಿನಗಳದಾದರೂ ಮೇಳ/ಸಂತೆ ಹದಿನೈದು ದಿನಗಳ ವರೆಗೂ ಮುಂದುವರಿಯುವುದಿದೆ. ಇದರಿಂದ ವ್ಯಾವಹಾರಿಕ ಚಟುವಟಿಕೆಗಳು ವಿಸ್ತರಿಸಿಕೊಳ್ಳಲು ಆಸ್ಪದವಾಗುತ್ತದೆ. ಆಧುನಿಕ ಕಾಲದಲ್ಲಿ ವಿಭಿನ್ನ ಉದ್ದೇಶಗಳಿಗಾಗಿ ಉತ್ಸವ ಮಾಡುವುದನ್ನು ಕಾಣುತ್ತಿದ್ದೇವೆ. ನದಿ ಉತ್ಸವ, ಕಡಲ ಉತ್ಸವ, ವನಗಳ ಉತ್ಸವ, ಕೃಷಿ ಉತ್ಸವ, ಸಿನಿಮಾ ಉತ್ಸವ, ರಂಗ ಉತ್ಸವ, ಸಾಹಿತ್ಯ ಉತ್ಸವ, ಪುಸ್ತಕ ಉತ್ಸವ - ಹೀಗೆ ವ್ಯಾವಹಾರಿಕ ಲೋಕಕ್ಕೆ ಉತ್ಸವಗಳು ವಿಸ್ತರಿಸಿವೆ. ಅದೇ ರೀತಿ ಹಲವು ಮೇಳಗಳು ಏರ್ಪಡುವುದನ್ನು ನೋಡಬಹುದು. ಹಲಸಿನ ಮೇಳ, ಹಣ್ಣುಗಳ ಮೇಳ, ವಸ್ತ್ರ ಮೇಳ ಮೊದಲಾದವು ಸಂಘಟಿಸಲ್ಪಡುತ್ತವೆ. ಇವೆಲ್ಲ ಒಳ್ಳೆಯ ಉದ್ದೇಶದವು ಅನ್ನುವುದರಲ್ಲಿ ಅನುಮಾನವಿಲ್ಲ. ಯಾವುದಾದರೂ ವಸ್ತು/ಉತ್ಪನ್ನಗಳನ್ನು ಮುನ್ನೆಲೆಗೆ ತರಲು, ಮಾರುಕಟ್ಟೆ ಮಾಡಲು ಉತ್ಸವ ಮೇಳಗಳು ನೆರವಾಗುತ್ತವೆ. ಒಂದರ್ಥದಲ್ಲಿ ಇವನ್ನು ಉನ್ನತೀಕರಿಸಲ್ಪಟ್ಟ (ಜಿಚಿಛಿe ಟiಜಿಣ ಮಾಡಿದ) ಮಾರುಕಟ್ಟೆಗಳು ಅನ್ನಬಹುದು. ಎಷ್ಟೋ ಕಡೆ ಹಳ್ಳಿ ಕೇಂದ್ರಗಳಲ್ಲಿ ವಾರದ ಸಂತೆಗಳಿರುತ್ತವೆ. ವಾರದ ಒಂದೊಂದು ದಿನ ಒಂದೊಂದು ಕಡೆ ಸಂತೆಗಳಾಗುತ್ತವೆ. ತಮ್ಮ ಉತ್ಪನ್ನಗಳನ್ನು ಮಾರಲು, ಬೇಕಾದ ಉತ್ಪನ್ನಗಳನ್ನು ಕೊಂಡುಕೊಳ್ಳಲು ಅವು ನೆರವಾಗುತ್ತವೆ. ವಾರದ ಆರು ದಿನಗಳೂ ದುಡಿಯುವ ಜನರಿಗೆ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಕೊಳ್ಳಲು ವಾರದ ಸಂತೆಯ ಅಗತ್ಯ ತುಂಬ ಇದೆ. ಕರಾವಳಿ ಜಿಲ್ಲೆಗಳಲ್ಲಿ ವಾರದ ಸಂತೆ ಎಂಬ ಪರಿಕಲ್ಪನೆ ಅಷ್ಟೊಂದು ಸಬಲವಾಗಿಲ್ಲ. ನಮ್ಮ ಸರಕಾರ (ಮಾರುಕಟ್ಟೆ ಇಲಾಖೆ) ಸ್ಥಳೀಯ ಸಂಘ ಸಂಸ್ಥೆಗಳೊಂದಿಗೆ, ಊರ ಪ್ರಮುಖರೊಂದಿಗೆ ಚರ್ಚಿಸಿ, ಸ್ಥಳೀಯ ಪಂಚಾಯತ್ ಗಳ ಸಹಕಾರ ಪಡೆದು ’ವಾರದ ಸಂತೆ’ ಪರಿಕಲ್ಪನೆಯನ್ನು ಗಟ್ಟಿಗೊಳಿಸುವ ಅಗತ್ಯವಿದೆ. ಇದರಿಂದ ಹಳ್ಳಿಗಳ ಕೃಷಿ ಉತ್ಪಾದನೆಗಳಿಗೆ ಮಾರುಕಟ್ಟೆ ಲಭ್ಯವಾಗಿ ಗ್ರಾಮ ಪ್ರದೇಶಗಳ ಆರ್ಥಿಕ ಚಟುವಟಿಕೆ ಕೊಂಚ ಸುಧಾರಿಸೀತು ಅನ್ನಿಸುತ್ತದೆ. ಹಳ್ಳಿಗರಿಗೆ ಹಲಸು ಮಾವು ಹುಣಿಸೆ ಮತ್ತಿನ್ನಿತರ ವಸ್ತುಗಳಿಂದ ತಯಾರಿಸುವ ಮೌಲ್ಯವರ್ಧಿತ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಇದು ಸಹಕಾರಿಯಾಗುತ್ತದೆ. ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಳ್ಳಿಗರೊಂದಿಗೆ ಸೇರಿಕೊಂಡು ಮಾಡುವ ಕೃಷಿ ಕ್ಷೇತ್ರೋತ್ಸವ ಈ ದೃಷ್ಟಿಯಿಂದ ಒಂದು ಮಾದರಿಯಾದ ಚಟುವಟಿಕೆ. ಇಂತಹ ಚಟುವಟಿಕೆಗಳಿಂದ ಹಳ್ಳಿಗಳ ಬಲವರ್ಧನೆ ಸಾಧ್ಯ. ಕೃಷಿಗೆ ಮತ್ತು ಅವರ ಬದುಕಿಗೆ ಪೂರಕವಾಗಿ ನಡೆಯುವ ವಿವಿಧ ಕ್ರೀಡಾ ಚಟುವಟಿಕೆಗಳನ್ನು ನಗರ ಪ್ರದೇಶದ ಮಂದಿ ತಮ್ಮ ’ಹಳದಿಕಣ್ಣು’ಗಳಿಂದ ನೋಡುತ್ತ ಅಪಪ್ರಚಾರ ಮಾಡುವುದನ್ನು ಬಿಟ್ಟು, ಇಂಥವುಗಳು ಗ್ರಾಮೀಣ ಜನರ ಬದುಕನ್ನು ಸಹ್ಯಗೊಳಿಸುವ ಮತ್ತು ಆರ್ಥಿಕತೆಯನ್ನು ಸಬಲಗೊಳಿಸುವ ವಿದ್ಯಮಾನಗಳು ಎಂದು ಅರ್ಥ ಮಾಡಿಕೊಳ್ಳುವುದನ್ನು ಕಲಿಯಬೇಕು. ದುರ್ಬಲವಾದ ಹಳ್ಳಿಗಳು ತಮ್ಮನ್ನು ತಾವು ಸಮರ್ಥಿಸಿಕೊಳ್ಳಲಾಗದ ಸ್ಥಿತಿಯಲ್ಲಿವೆ. ಹಳ್ಳಿಗರ ಪರವಾಗಿ ವಾದಿಸುವವರು ಯಾರೂ ಕಾಣಿಸುತ್ತಲಿಲ್ಲ. ನಮ್ಮ ಪ್ರತಿಯೊಂದು ಹಳ್ಳಿಯಲ್ಲಿರುವ ದೇವಸ್ಥಾನಗಳಲ್ಲಿ ನಡೆಯುವ ಜಾತ್ರೋತ್ಸವಗಳನ್ನು ಉನ್ನತೀಕರಿಸುವ ಅಗತ್ಯವಿದೆ. ಎಲ್ಲ ವರ್ಗ/ಸಮುದಾಯಗಳೊಂದಿಗೆ ಸೇರಿಕೊಂಡು ದೇವಸ್ಥಾನ ವ್ಯವಸ್ಥಾನ ಸಮಿತಿಯವರು ಜಾತ್ರೋತ್ಸವಗಳನ್ನು ಗ್ರಾಮೋತ್ಸವವಾಗಿ ಪರಿವರ್ತಿಸಬೇಕು. ಇದರಿಂದ ಯುವಕರ ಮತ್ತು ಆಧುನಿಕರ ಗಮನವನ್ನು ಸೆಳೆದಂತಾಗುತ್ತದೆ. ಧಾರ್ಮಿಕ ಚಟುವಟಿಕೆಯ ಜೊತೆಗೆ ಕೃಷಿಯ ಅಭಿವೃದ್ಧಿ, ಗ್ರಾಮೀಣ ಉದ್ಯಮಗಳ ಅಭಿವೃದ್ಧಿ ಮತ್ತು ಮಾರುಕಟ್ಟೆ ವಿಸ್ತರಣೆ ಎಲ್ಲವೂ ಇದರಿಂದ ಸಾಧ್ಯವಾಗುತ್ತದೆ. ಅಲಕ್ಷಿತ ಕ್ಷೇತ್ರಗಳನ್ನು ಮುನ್ನೆಲೆಗೆ ತರಲು ಇದು ಸಹಕಾರಿಯಾಗಬಲ್ಲದು. ಸ್ಥಳೀಯ ಸಂಘ ಸಂಸ್ಥೆಗಳು, ಊರ ಪ್ರಮುಖರು, ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್, ದೇವಸ್ಥಾನ ವ್ಯವಸ್ಥಾಪನ ಸಮಿತಿ ಇವರೆಲ್ಲ ಒಟ್ಟಿಗೆ ಕುಳಿತು ಚರ್ಚಿಸಿ ಮಾಡಬೇಕಾದ ಕೆಲಸ ಇದು ಮತ್ತು ಗ್ರಾಮೋತ್ಥಾನದ ನಿಟ್ಟಿನಲ್ಲಿ ಇಂತಹ ಗಂಭೀರ ಪ್ರಯತ್ನದ ಅಗತ್ಯ ಇವತ್ತು ಹಿಂದೆಂದಿಗಿಂತ ಹೆಚ್ಚಾಗಿದೆ. -ಡಾ. ವಸಂತಕುಮಾರ ಪೆರ್ಲ.

bottom of page