top of page

ಹನಿ ಕವಿತೆಗಳು

    ಮಾತಿನ ಗಿಡ

ಮಾತಿನ ಗಿಡವ ನೆಟ್ಟವರು

ಮುತ್ತು ಮಾಣಿಕದ ಹಣ್ಣು ಕೊಯ್ಯಲು

ಕುತ್ತಿಗೆ ಉದ್ದಮಾಡಿ ಕುಕ್ಕರು ಬಡಿದರು

ಮಳೆಯಿಲ್ಲದೆ ಮಾತಿನ ಗಿಡದ

ಎಲೆಯುದುರಿ ಧರೆಗೆ ಬೀಳುವಾಗ

ಮಾಮೇರಿ ಮಳೆ ಬಂದು

ಹೊಳೆ ತುಂಬಿ ನೆರೆ ಹಾವಳಿ ಬಂದು

ಗಿಡ ಕೊಚ್ಚಿಕೊಂಡು ಹೋಗುವಾಗ

ಮಾತು ಮನಸಿಗೆ ನೋವಾಗಿ

ಮೌನ ಒಳಗೊಳಗೆ ನಕ್ಕಿತು.

                            

  ನಗು ನಗುತ ಬಾಳು

ನಲಿವಿರಲು ಒಲವು ಬೇಕು

ಬಾಳಿನುಬ್ಬರಕೆ ಪ್ರೀತಿ ಸಾಕು

ಗಳಿಸಿದ್ದು ಎಷ್ಟೆಂದು ಬೇಡ

ಉಳಿಸಿದ್ದು ಇಷ್ಟೆಂದು ಬೇಕು

ಗಳಿಸಿ ಉಳಿಸುತ

ಬೆಳೆಸಿ ಬಳಸುತ

ಹಳಸಿ ಹೋಗುವ ಮುನ್ನ

ನಗು ನಗುತ ಬಾಳು ನೀ ಅಣುಗದಮ್ಮ

                      

   ಪುರುಷಾರ್ಥ

ಇಂದಿಗೆ ಇದೆ ಸ್ವರ್ಗ ನಾಳೆ ಹೇಗಿರಲಿ

ಎಂಬ ಚಿಂತೆ ಮಾಡ ಬೇಡ

ಸಾವಿನ ಬಲೆಯಹೆಣೆಯುತಿದೆ

ಕುಳಿತಲ್ಲೆ ಕಾಲದ ಜೇಡ

ನಿನ್ನೆಯನು ಮರೆಯ ಬೇಡ

ನಾಳೆಯ ಸಿದ್ಧತೆ ನಡೆಸು ಬೇಗ

ಇಂದು ಸಾರ್ಥಕವಾದರೆ

ನಿನ್ನೆ ನಾಳೆಗೆ ಅದು ಪುರುಷಾರ್ಥ

ಯೋಚನೆಗೆ ಯೋಜನೆಯು

ಸೇರಿರಲಿ ಅಣುಗದಮ್ಮ

         ಇರಲಿ

ಮತದ ಮಾತಂತಿರಲಿ

ಮನದ ಮಾತು ಕೇಳುತಿರಲಿ 

ಋತದ ಹಾದಿ ಇಂದೆ ಸಿಗಲಿ

ಗುರಿಯೆಡೆಗೆ ಪಯಣವಿರಲಿ

ಅತ್ತ ಇತ್ತ ಚಿತ್ತ ಚಲಿಸದಿರಲಿ

ಗುರಿ ಮುಟ್ಟುವೆಡೆಯ ಲಕ್ಷ್ಯವಿರಲಿ

ಹುರುಪಿರಲಿ ಕಸುವಿರಲಿ

ಭವದಾಟದಲಿ ನಿತ್ಯ ಗೆಲುವಿರೆ

ಮೊಗವು ಚೆಲುವಕ್ಕು ಅಣುಗದಮ್ಮ.

           ಒಳ್ಳೆತನ ನೆಲೆಸಲಿ.

ಮಳೆಯು ಬೀಳುತಲಿರಲಿ

ಇಳೆಯು ತೋಯುತಲಿರಲಿ

ಚಿಗುರಿದಾ ಮರಗಳಲಿ ಹೂವರಳಿ

ಎಲ್ಲೆಲ್ಲು ಪರಿಮಳವು ಸೂಸಲಿ

ವಾಸನೆಯು ತೊಲಗಲಿ

ಹರ ಕರುಣೆ ಒದಗಿ ಬರಲಿ

ಖುಲ್ಲತನ ಕಳೆದು ಒಳ್ಳೆತನ ನೆಲೆಸಲಿ

ಪರರಿಗೊಳಿತನು ಗೈಯುತಲಿ

ಅನುದಿನವು ನಗು ನಗುತಾ ನಲಿ ಅಣುಗದಮ್ಮ


ಡಾ.ಶ್ರೀಪಾದ ಶೆಟ್ಟಿ

71 views1 comment
bottom of page