top of page

ಹೆಂಡತಿಗೆ ಹೇಳಿ......

ಕೆಲವು ವರ್ಷಗಳ ಹಿಂದೆ ಇಂಗ್ಲೀಷ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಒಂದು ಲೇಖನ ನನ್ನ ಗಮನವನ್ನು ಸೆಳೆಯಿತು. ಅದನ್ನು ಬರೆದವರು ಕ್ಲಿಫರ್ಡ ಮಾರ್ಟಿಸ್ ಎನ್ನುವ ಒಬ್ಬ ಮಾನವ ಸಂಪನ್ಮೂಲ ವ್ಯಕ್ತಿ. ಕಚೇರಿಯ ಕೆಲಸವನ್ನು ಅದರ ನಾಲ್ಕು ಗೋಡೆಯ ಒಳಗೇ ಮಾಡಿ ಮುಗಿಸಬೇಕು; ಅಷ್ಟೇ ಅಲ್ಲಾ ಕಚೇರಿಗೆ ಸಂಬಂಧಿಸಿದ ವಿಚಾರವನ್ನು ಸಹ ಅಲ್ಲಿಯೇ ಬಿಟ್ಟು ಮನೆಗೆ ತೆರಳಬೇಕು – ಇವು ಉದ್ಯೋಗಿಗಳ ವಲಯದಲ್ಲಿ ಸಾಮಾನ್ಯವಾಗಿ ಪ್ರತಿಪಾದಿತ ವಿಚಾರ. ಆದರೆ ಕಚೇರಿಯ ‘ಕೆಲಸ’ವನ್ನು ಮನೆಗೆ ಒಯ್ಯುವುದು ಹೇಗೆ ಅದರ ಸಾಧಕ-ಬಾಧಕಗಳೇನು ಎಂಬುದರ ಕುರಿತು ಆ ಲೇಖನದಲ್ಲಿ ಹೊಸ ಚಿಂತನೆ ಮಾಡಿದ್ದು ನಿಜವಾಗಿಯೂ ಕುತೂಹಲಕರವಾಗಿತ್ತು. ಆ ಕುರಿತು ನಿಮ್ಮೊಂದಿಗೆ ಹಂಚಿಕೊಳ್ಳುವ ಒಂದು ಪ್ರಯತ್ನವೇ ಈ ಬರೆಹ.


ಕಚೇರಿಗಳಲ್ಲಿ ಕೆಲಸ ಮಾಡುವವರಲ್ಲಿ ನಾವು ಎರಡು ಅತಿರೇಕಗಳನ್ನು ಕಾಣುತ್ತೇವೆ. ಒಂದು ವರ್ಗದವರು ಕಚೇರಿಯ ಕೆಲಸದ ಬಗ್ಗೆ ಸದಾ ತಲೆಕೆಡಿಸಿಕೊಳ್ಳುತ್ತಾರೆ. ಅವರನ್ನು ‘ಕಾರ್ಯವ್ಯಸನಿ’ [Workaholic] ಯೆಂದು ಕರೆಯಲಾಗುತ್ತದೆ. ಅಂತಹವರು ಕಚೇರಿಯ ಅವಧಿಯ ನಂತವವೂ ತಮ್ಮ ಖುರ್ಚಿಯನ್ನು ಬಿಟ್ಟೇಳದೆ ಉಳಿದ ಉದ್ಯೋಗಿಗಳು ಮನೆಗೆ ಹೋಗಿ ಹೆಂಡತಿ-ಮಕ್ಕಳೊಂದಿಗೆ ಸಂಸಾರವನ್ನು ಸಲಹುತ್ತಿದ್ದರೆ ತಾವು ಮಾತ್ರ ಕಚೇರಿಯಲ್ಲಿಯೇ ಬಾಕಿ ಉಳಿದ ತಮ್ಮ ಕೆಲಸಗಳನ್ನು ಮಾಡುತ್ತಾ ಕಾಲನೂಕುತ್ತಾರೆ. ಅಷ್ಟೇ ಅಲ್ಲಾ ಕೆಲಸ ಮುಗಿದಿಲ್ಲವೆಂದು ತಮ್ಮ ಬ್ರೀಫ್ ಕೇಸುಗಳಲ್ಲಿ ಕಡತಗಳನ್ನು ಮನೆಗೆ ಒಯ್ದು ತಡರಾತ್ರಿಯವರೆಗೆ ಕುಳಿತು ಅದನ್ನು ವಿಲೇವಾರಿ ಮಾಡುತ್ತಾರೆ. ಕೆಲವರಂತೂ ಮನೆಯನ್ನೇ ಪರ್ಯಾಯ ಕಚೇರಿಯಾಗಿ ಪರಿವರ್ತಿಸಿ ಬಿಡುತ್ತಾರೆ.


ಆದರೆ ಇಂತಹ ಅತಿಕಾರ್ಯ ಪ್ರವೃತ್ತರು ಧೀರ್ಘಾವಧಿಯಲ್ಲಿ ತಮ್ಮ ದಕ್ಷತೆಯನ್ನು ಕಳೆದುಕೊಳ್ಳುತ್ತಾರೆಂಬುದು ಕ್ಷಮತಾತಜ್ಞರ ಅಭಿಪ್ರಾಯ. ಉದ್ಯೋಗಿ ತನಗಿತ್ತ ಕೆಲಸವನ್ನು ನಿಗದಿತ ಅವಧಿಯ ಒಳಗೆ ಮುಗಿಸಬೇಕು. ಒಮ್ಮೆ ಸಾಧ್ಯವಾಗದೆ ಇದ್ದರೆ ಆತ ಸಮರ್ಥನಲ್ಲವೆಂದು ಭಾವಿಸಬೇಕೆಂಬುದು ಅವರ ವಾದ. ಹೀಗಾಗಿ ಕಾರ್ಯವ್ಯಸನಿಗಳು ಸಮರ್ಥ ಉದ್ಯೋಗಿಗಳಲ್ಲವೆಂಬುದು ತಜ್ಞರ ನಿಲುವು.


ಇದಕ್ಕೆ ಭಿನ್ನವಾದ ಇನ್ನೊಂದು ಅತಿರೇಕದ ಗುಂಪು ಕಛೇರಿಯ ಕೆಲಸವನ್ನು ಮನೆಗೆ ಒಯ್ಯುವದಿರಲಿ ಕೆಲಸದ ಸ್ಥಳದಲ್ಲಿಯೇ ಕೊಟ್ಟ ಕೆಲಸದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ತಾವು ಕಛೇರಿಯ ಬಾಗಿಲಿನಿಂದ ಹೊರಕ್ಕೆ ಹೆಜ್ಜೆ ಇಟ್ಟ ತಕ್ಷಣವೇ ಕಛೇರಿಯನ್ನೇ ಮರೆತು ಬಿಡುತ್ತೇವೆಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅವರ ದೃಷ್ಟಿಯಲ್ಲಿ ಅದು “ಸ್ವಿಚ್‍ಆಫ್” ಮಾಡಿದಷ್ಟು ಸುಲಭ. ಆದರೆ ವಾಸ್ತವಿಕವಾಗಿ ಅದು ಅಷ್ಟು ಸುಲಭದ ಕೆಲಸವಲ್ಲ. ಒಬ್ಬ ಪ್ರಜ್ಞಾವಂತ ಉದ್ಯೋಗಿ ಕಛೇರಿಯ ಸಮಸ್ಯೆ ಯಾ ಬಾಕಿ ಉಳಿದ ಕಡತಗಳಿಂದ ಹೊರಬರಲು ಎಷ್ಟೇ ಪ್ರಯತ್ನ ಪಟ್ಟರೂ ಅದರಿಂದ ತಪ್ಪಿಸಿಕೊಳ್ಳಲಾರ.


ಆದರೆ ಇವೆರಡಕ್ಕೂ ಭಿನ್ನವಾದ ಮೂರನೇಯ ಮಾರ್ಗವೊಂದನ್ನು ಮಾರ್ಟೀಸ್ ನಮ್ಮ ಮುಂದಿಡುತ್ತಾರೆ. ಅವರ ದೃಷ್ಟಿಯಲ್ಲಿ ಅದು ಉದ್ಯೋಗಿಯ ಮೇಲಿನ ಕೆಲಸದ ಒತ್ತಡವನ್ನು ಕಡಿಮೆ ಮಾಡುತ್ತದೆಯಲ್ಲದೆ ಆತನಿಗೆ ಮಾನಸಿಕ ಬೆಂಬಲ ದೊರಕಿಸಿಕೊಡುತ್ತದೆ. ಪರಿಣಾಮದಲ್ಲಿ ಆತನ ಕಾರ್ಯಕ್ಷಮತೆಯನ್ನು ಅದು ಹೆಚ್ಚಿಸುತ್ತದೆ. ತಾನು ಮಾಡುವ ಉದ್ಯೋಗದ ಬಗ್ಗೆ ನಿಷ್ಠೆ ಹಾಗೂ ಶ್ರದ್ಧೆಯಿರುವ ಉದ್ಯೋಗಿ ತನ್ನ ಕೆಲಸದ ಕುರಿತು ತನ್ನ ಕುಟುಂಬದವರಲ್ಲಿ ಚರ್ಚಿಸುವುದು ಉಪಯೋಗಕಾರಿ. ಕಛೇರಿಯಲ್ಲಿ ನಡೆದ ಹಾಸ್ಯ ಘಟನೆಗಳು, ಮನರಂಜಕ ವಿಚಾರಗಳನ್ನು ಕುಟುಂಬದ ಸದಸ್ಯರಲ್ಲಿ ಹಂಚಿಕೊಳ್ಳುವುದರಿಂದ ಉದ್ಯೋಗಿ ಅವರನ್ನು ತನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬಹುದಾಗಿದೆ. ಇದರಿಂದ ಉದ್ಯೋಗಿಗೆ ತನ್ನ ಕಾರ್ಯ ನಿರ್ವಹಣೆಯಲ್ಲಿ ಪರೋಕ್ಷ ಬೆಂಬಲ ದೊರಕುವಂತಾಗುತ್ತದೆ. ಜೊತೆಗೆÀ ಆ ಉದ್ಯೋಗಿಯ ಕಾರ್ಯಕ್ಷಮತೆಯು ಹೆಚ್ಚುತ್ತದೆಯೆಂಬುದು ಆಡಳಿತ ತಜ್ಞರ ಅಂಬೋಣ. ಇತ್ತೀಚೆಗೆ “ಜೀವನ ಗುಣಮಟ್ಟ” ಎಂಬ ಹೊಸ ಪರಿಕಲ್ಪನೆ ಆಡಳಿತ ನಿರ್ವಹಣಾ ಶಾಸ್ತ್ರದಲ್ಲಿ ಹುಟ್ಟಿಕೊಂಡಿದೆ. “ಜೀವನ ಗುಣಮಟ್ಟ” ವೆಂದರೆ ತನ್ನ ಕೆಲಸದಲ್ಲಿ ಸಂತೋಷ ಕಾಣುವ ಮತ್ತು ಆ ಸಂತೋಷವನ್ನು ತನ್ನ ಆತ್ಮೀಯರಲ್ಲಿ ಹಂಚಿಕೊಳ್ಳುವ ಸ್ಥಿತಿಯೆಂಬುದು ಅದರ ಅರ್ಥವಾಗಿದೆ.


ಉದಾಹರಣೆಗೆ ಒಬ್ಬ ಉದ್ಯೋಗಿಯ ಮಗನನ್ನು “ನಿನ್ನ ತಂದೆ ಎಲ್ಲಿ ಕೆಲಸ ಮಾಡುತ್ತಾರೆ.” ಎಂಬ ಸರಳ ಪ್ರಶ್ನೆಯನ್ನು ಕೇಳಿ. ಆಗ ಆ ಹುಡುಗನು ನೀಡುವ ಉತ್ತರದ ಮೇಲೆಯೇ ಉದ್ಯೋಗಿಯ ಗುಣಮಟ್ಟವನ್ನು ನಿರ್ಧರಿಸಬಹುದಾಗಿದೆ. ಉದ್ಯೋಗಿಯ ಮಗ “ ನನ್ನ ತಂದೆ ಕೆಲಸಕ್ಕೆ ಹೋಗುತ್ತಾರೆ – ಎಂಬುದಷ್ಟೇ ಗೊತ್ತು, ಅದರೆ ಎಲ್ಲಿ ಏನು ಮಾಡುತ್ತಾರೆ ಎಂಬುದು ನನಗೆ ಗೊತ್ತಿಲ್ಲ.”ಎಂದರೆ ಆ ಉದ್ಯೋಗಿ ತನ್ನ ಕುಟುಂಬದೊಂದಿಗೆ ತನ್ನ ಕೆಲಸದ ಕುರಿತು ಸಂವಾದಿಸುವದಿಲ್ಲವೆಂದೆ ಅರ್ಥ. ಹೀಗಿರುವಾಗ ಉದ್ಯೋಗಿಗೆ ತನ್ನ ವೃತ್ತಿಯಲ್ಲಿ ತೃಪ್ತಿ ಇಲ್ಲವೆಂದೇ ಪರಿಭಾವಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಉದ್ಯೋಗಿಯಲ್ಲಿ ಕಾರ್ಯಕ್ಷಮತೆಯನ್ನು ನಿರೀಕ್ಷಿಸುವುದು ಹೇಗೆ ಸಾಧ್ಯ?


ಇನ್ನೊಂದು ಉದಾಹರಣೆಯನ್ನು ನಾವು ಪರೀಕ್ಷಿಸಬಹುದು. ಸುಸ್ತಾಗಿ ಬಂದ ಗಂಡನನ್ನು ಹೆಂಡತಿ, “ಏಕೆ ತಡವಾಗಿ ಬಂದಿರಿ?” ಎಂದು ಕೇಳಿದಾಗ ಪತಿರಾಯ, “ನಿನಗೇನು ಗೊತ್ತು ನಮ್ಮ ಕಛೇರಿ ಕೆಲಸ? ಅದೆಲ್ಲ ನಿನಗೆ ಸಂಬಂಧಪಟ್ಟಿದ್ದಲ್ಲ.” ಎಂದು ದಬಾಯಿಸುವ ಬದಲು ತಾನು ತಡವಾಗಿ ಬರಲು ಏನು ಕಾರಣವೆಂಬುದನ್ನು ಈ ರೀರಿಯಲ್ಲಿ ಹೇಳಬಹುದು, “ ಇಲ್ಲ, ನಾನು ಕೆಲಸ ಮುಗಿಸಿ ಮನೆಗೆ ಹೊರಟಿದ್ದೆ, ನಮ್ಮ ಸಾಹೇಬರು ಕರೆದರು. ಗೊತ್ತಲ್ಲ ನಮ್ಮ ಸಾಹೇಬರ ವಿಚಾರ. ಅವರು ಮಾತು ಸುರು ಮಾಡಿದರೆ ಮುಗಿಯಿತು. ಅದಕ್ಕೆ ಕೊನೆ ಎಂಬುದೇ ಇಲ್ಲ.” ಎಂದು ಹೇಳಿದರೆ ಭಿನ್ನ ವಾತಾವರಣ ಸೃಷ್ಟಿಯಾಗುವದಿಲ್ಲವೆ?. ಬಹುಷಃ ಇದನ್ನೇ ಹೊಸ ಪರಿಕಲ್ಪನೆಯ “ಗುಣಮಟ್ಟದ ಜೀವನ”ಎಂದು ಕರೆಯುವುದು.


ಆದರೆ ಕಛೇರಿಯ ವ್ಯವಹಾರಗಳೆಲ್ಲವನ್ನೂ ಅದೂ ವಿಶೇಷವಾಗಿ ಗೌಪ್ಯ ವಿಚಾರಗಳನ್ನು ಮನೆಮಂದಿಗೆ ಹೇಳಬೇಕೆಂಬುದು ಇದರ ಅರ್ಥವಲ್ಲ. ಅಂತಹ ಪ್ರಯತ್ನಗಳು ಔದ್ಯೋಗಿಕ ಸಂಬಂಧದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಬಹುದು. ಅದಕ್ಕಾಗಿ ಕೇವಲ ಕಛೇರಿಯ ಕಾರ್ಯ ಚಟುವಟಿಕೆಗಳಲ್ಲಿ ಜರುಗುವ ಹಾಸ್ಯ ಹಾಗೂ ಮನರಂಜನೆಯ ಅಂಶಗಳನ್ನಷ್ಟೇ ಮನೆಯ ಜನರಲ್ಲಿ ಹಂಚಿಕೊಳ್ಳಬಹುದೇ ವಿನಃ ಉಳಿದ ಅಂಶಗಳನ್ನಲ್ಲ ಎಂಬುದನ್ನು ನಾವು ಮರೆಯ ಬಾರದೆಂದು ಕ್ಲೀಫರ್ಡ ಮಾರ್ಟೀಸ್ ಸ್ಪಷ್ಟವಾಗಿಯೇ ಹೇಳುತ್ತಾರೆ.


ಒಟ್ಟಾರೆ ಕಛೇರಿಯ ಕೆಲಸವನ್ನು ಮನೆಗೆ ಒಯ್ಯುವುದೆಂದರೆ ತನ್ನ ವೃತ್ತಿಯ ಘನತೆ ಗಾಂಭೀರ್ಯವನ್ನು ಮತ್ತು ಅದರ ನಿರ್ವಹಣೆಯ ಸುಖಃಸಂತೋಷಗಳನ್ನು ಹಂಚಿಕೊಳ್ಳುವುದು. ಆಗಲೇ ಉದ್ಯೋಗಿಗೆ ತನ್ನ ವೃತ್ತಿಯ ನಿರ್ವಹಣೆ ಸುಲಭವಾದೀತಲ್ಲದೆ ಆತನ ಕಾರ್ಯಕ್ಷಮತೆ ಹೆಚ್ಚುವುದು ಸಾಧ್ಯ. ಜೊತೆಗೆ “ಜೀವನ ಗುಣಮಟ್ಟ” ಹೆಚ್ಚೀತು. ಅದಕ್ಕಾಗಿಯೆ ‘ಹೆಂಡತಿಗೆ ಹೇಳಿ’ ಎಂದು ಕ್ಲಿಫರ್ಡ ಮಾರ್ಟೀಸ್ ಹೇಳುವುದು.


ಆದರೆ ಹೆಂಡತಿಗೆ ಹೇಳುವಾಗ ಯಾವುದನ್ನು ಹೇಳುವುದು; ಯಾವುದನ್ನು ಹೇಳದಿರುವುದು - ಎಂಬ ಎಚ್ಚರ ಮಾತ್ರ ನಮ್ಮ ಮನಸ್ಸಿನಲ್ಲಿ ಸದಾ ಇರಬೇಕು. ಅಲ್ಲವೆ?


- ಶ್ರೀಪಾದ ಹೆಗಡೆ,ಸಾಲಕೋಡ


ಕರ್ನಾಟಕ ವಿದ್ಯುತ್ ನಿಗಮದಲ್ಲಿ ಅಧಿಕಾರಿಯಾಗಿ ನಿವೃತ್ತಿಯಾದ ಶ್ರೀಪಾದ ಹೆಗಡೆ, ಸಾಲಕೊಡ ಇವರುತಮ್ಮ ಬಾಲ್ಯದ ದಿನಗಳಿಂದಲೂ ಸಾಹಿತ್ಯಾಸಕ್ತಿಯನ್ನು ಹೊಂದಿದವರು. ಕತೆ, ಹರಟೆ,ಲಲಿತ ಪ್ರಬಂಧ, ಕಾವ್ಯ, ನಾಟಕ,ವಿಮರ್ಶೆ ಮುಂತಾದಸಾಹಿತ್ಯ ಪ್ರಭೇಧಗಳಲ್ಲಿ ಬರವಣಿಗೆಯ ಮೂಲಕ ಕಳೆದ ನಾಲ್ಕು ದಶಕಗಳಿಂದ ತೊಡಗಿಕೊಂಡ ಇವರ ಕತೆ, ಪ್ರಬಂಧ, ಕವಿತೆಗಳು ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅವರ ಕತೆಗಳಿಗೆ ಬಹುಮಾನಗಳು ಸಂದಿವೆ. ‘ಬೆಕ್ಕಿನ ಮೀಸೆ’ ಎಂಬ ಅವರ ಕಥಾ ಸಂಕಲನ ಪ್ರಕಟವಾಗಿದೆ. ಹಾಸ್ಯವನ್ನು ಸ್ಥಾಯಿಭಾವವಾಗಿ ತಮ್ಮ ಬರೆಹಗಳಲ್ಲಿ ನೆಲೆಗೊಳಿಸಿ ಮಾನವೀಯ ವಿಚಾರಗಳನ್ನುಪ್ರಸ್ತುತಿ ಪಡಿಸುವದು ಅವರ ಬರೆಹದ ವೈಶಿಷ್ಟ್ಯ. ನಮ್ಮ ಪತ್ರಿಕೆಯ ಸಲಹಾ ಮಂಡಳಿಯ ಸದಸ್ಯರಾಗಿದ್ದಾರೆ- ಸಂಪಾದಕ

240 views4 comments
bottom of page