top of page

ಹೀಗೊಂಥರಾ ಕತೆಗಳು -೧

(ಇದು ಕತೆಯಾ/ ಹರಟೆಯಾ/ ಲಲಿತಪ್ರಬಂಧವಾ? ಅಥವಾ ಎಲ್ಲವೂ ಸೇರಿದ ತ್ರೀ ಇನ್ ಒನ್ ಎನ್ನೋಣವೇ ? ಗೊತ್ತಿಲ್ಲ. ಓದಿದವರು ಹೇಳಿ. ನಾನು ಕತೆಗಾರನಲ್ಲ. ಆದರೆ ಬಹಳ ಹಿಂದೆ ಯಾವಾಗಲೋ ಹೀಗೇ ಬರೆದಿಟ್ಟಿದ್ದರಿಂದ ಇವಕ್ಕೆ ಹೀಗೊಂಥರಾ ಕತೆಗಳು ಎಂದಿದ್ದೇನೆ.)


 

//// ಅರ್ಜೆಂಟ್ ಅವಧಾನಿಗಳು /////

 

" ಏನು ಅವಧಾನಿಗಳೇ,ಎಲ್ಲೋ ಹೊರಟಹಾಗಿದೆ ?"

" ಹೌದಪಾ, ಅರ್ಜೆಂಟಾಗಿ ಸುಬ್ರಾಯ ಕಾಮತರ ಮನೆಗೆ ಹೋಗಬೇಕಾಗಿದೆ. ಶ್ರಾದ್ಧ ಕಾರ್ಯ ಇದೆ"

ಓಹೋಹೋ, ಅವಧಾನಿಗಳೂ... ಬಹಳ ಗಡಿಬಿಡಿಯಲ್ಲಿದ್ದ ಹಾಗಿದೆ ? "

ಹೌದರೀ, ಶಂಕರ ಹೆಗಡೇರ ಮನೇಲಿ ಸತ್ಯನಾರಾಯಣ ಮುಗಿಸಿ, ಶ್ರೀನಿವಾಸ ನಾಯಕರ ಮನೆಗೆ ಪುಣ್ಯಾವರ್ತನೆ ಕಾರ್ಯಕ್ಕೆ ಹೋಗಬೇಕಾಗಿದೆ..‌"

ನೀವು ಯಾವ ಹೊತ್ತಿನಲ್ಲಿ, ಎಲ್ಲಿ ಅವಧಾನಿಗಳನ್ನು ಭೆಟ್ಟಿಯಾಗಿ ಪ್ರಶ್ನಿಸಿದರೂ ಅವರು ಒಂದಿಲ್ಲೊಂದು ಅರ್ಜೆಂಟಿನಲ್ಲೇ ಇರುತ್ತಾರೆ. ಧೋತರದ ಮುಂಭಾಗದ ಒಂದು ಚುಂಗನ್ನು ಎಡಗೈಲಿ ಹಿಡಿದು ,ಕಂಕುಳಲ್ಲಿ ಬಟ್ಟೆಯ ತುಂಡಲ್ಲಿ ಸುತ್ತಿದ ಮಂತ್ರ ಪುಸ್ತಕ ಇಟ್ಟುಕೊಂಡು, ಬಲಗೈಯಲ್ಲಿ ಗಿಂಡಿ , ಬೆಳ್ಳಿತಟ್ಟೆ ಹಿಡಿದು ಭರ ಭರ ಹೆಜ್ಜೆ ಹಾಕುತ್ತ ಅವರು ನಮ್ನ ಬೀದಿಯಲ್ಲಿ ಹೊರಟರೆಂದರೆ ಸಾಕು, ಬಿರುಗಾಳಿಯಲ್ಲಿ ಯಾರೋ ತೂರಿಕೊಂಡು ಹೊರಟಂತೆ ಕಾಣುತ್ತದೆ. ನಮ್ಮೂರಲ್ಲಿ ಅವರು ಎಷ್ಟೊಂದು ಪ್ರಸಿದ್ಧ ವ್ಯಕ್ತಿಗಳಾಗಿದ್ದಾರೆಂದರೆ ಹೈಸ್ಕೂಲು ಕಾಲೇಜು ಗೆದರಿಂಗ್ ಗಳಲ್ಲಿ ಹುಡುಗರು ಫ್ಯಾನ್ಸಿಡ್ರೆಸ್ ಮಾಡುವಾಗ ಅವಧಾನಿಯವರ ಪಾತ್ರ ಹಾಕಿ ರಂಜಿಸಿ ಬಹುಮಾನ ಪಡೆಯುವದುಂಟು.


ಅವಧಾನಿಗಳ ಈ ಅರ್ಜೆಂಟಿಗೆ ಕಾರಣವಿಲ್ಲದಿಲ್ಲ. ನಮ್ಮೂರಿನ ಬಗ್ಗೆ ಕೆಲವು ಕೆಲವು ವಿಚಾರಗಳನ್ನು ಇದಕ್ಕೆ ಹಿನ್ನೆಲೆಯಾಗಿ ತಿಳಿದುಕೊಂಡರೆ ಅವರ ಅರ್ಜೆನ್ಸಿ ಅರ್ಥಪೂರ್ಣ ಮತ್ತು ಸಹಜ ಅನಿಸೀತು.


ನಮ್ಮೂರೆಂದರೆ ಅತ್ತ ಪಟ್ಟಣವೂ ಅಲ್ಲ, ಇತ್ತ ಹಳ್ಳಿಯೂ ಅಲ್ಲ ಎನ್ನುವಂತಹ ತ್ರಿಶಂಕು ಸ್ಥಿತಿಯಲ್ಲಿರುವಂತಹದು. ಅಗತ್ಯ ನಾಗರಿಕ ಸೌಕರ್ಯಗಳಿಗೇನೂ ಬರಗಾಲವಿಲ್ಲ. ಆದರೆ ದೊಡ್ಡ ನಗರ ಎನ್ನುವಂತಹ ಬೆಳವಣಿಗೆಯೂ ಆಗಿಲ್ಲ. ಒಂದು ರೀತಿ ಇದನ್ನು ದೊಡ್ಡ ಹಳ್ಳಿ ಎನ್ನಬಹುದು. ಇದರಿಂದ ಊರ ಜನರಿಗೆ ಅಷ್ಟೇನೂ ದು:ಖ ಆಗಿಲ್ಲವಾದರೂ ಕೆಲ ಹೊಸ ಹುಡುಗರಿಗೆ ಬೇಗ ಇದೊಂದು ಮಹಾನಗರವಾಗಿ ಬೆಳೆದು ಆರೆಂಟು ಸಿನಿಮಾ ಥೇಟರು, ಐವತ್ತರವತ್ತು ಬಾರ್ & ರೆಸ್ಟೋರೆಂಟ್ ಗಳು, ಪಬ್ ಗಳು , ಸಾಧ್ಯವಾದರೆ ನೈಟ್ ಡಾನ್ಸಿಂಗ್ ಕ್ಲಬ್ ಗಳು, ಎಲ್ಲ ಆರಂಭವಾಗಿ ಮೋಜಿನ ಬದುಕು ನಡೆಸುವ ದಿನಗಳು ಬರಬಾರದೇ ಎಂದು ಹಂಬಲಿಸುತ್ತಿರುವದು ಸುಳ್ಳಲ್ಲ. ಸದ್ಯಕ್ಕಂತೂ ಅದಕ್ಕಾಗಿ ಹತ್ತಿರದ ಬೇರೆ ನಗರವನ್ನಾಶ್ರಯಿಸಬೇಕಾಗಿ ಬಂದಿರುವ ಬಗ್ಗೆ ಹಲವರಿಗೆ ಬೇಸರವಿದೆ.


ಆದರೂ ಇತ್ತೀಚೆಗೆ ದುಬೈನಿಂದ ಬಂದ ಸುನೀಲ ಶೆಟ್ಟಿ ಒಂದು ಬಾರ್ & ರೆಸ್ಟೋರೆಂಟ್ ಆರಂಭಿಸಿರುವದರಿಂದ ನಮ್ಮೂರ ಸುಧಾರಿಸಿದ ಹುಡುಗರಿಗೆಲ್ಲ ಸಿಕ್ಕಾಬಟ್ಟೆ ಖುಷಿ ಆಗಿರುವದಂತೂ ನಿಜ. ಅವರೆಲ್ಲ ಆಗಾಗ ಕದ್ದುಮುಚ್ಚಿ ಮದ್ಯ ಕುಡಿದು ಮಧ್ಯರಾತ್ರಿ ನಂತರ ಕಳ್ಳರ ಹಾಗೆ ಮನೆ ಸೇರಲು ಆರಂಭಿಸಿದ್ದಾರೆ. ಆದರೂ ಮದ್ಯದ ವಾಸನೆ ಮುಚ್ಚಿಡಲು ಸಾಧ್ಯವೆ? ಕೆಲ ಹಳಬರು ಈ ಪಡ್ಡೆ ಹುಡುಗರ ಬಗ್ಗೆ ಮಾತಾಡುತ್ತ " ಕಾಲ ಕೆಟ್ಟೋಯ್ತ್ರಪಾ... ನಮ್ಕಾಲದಲ್ಲಿ ಇಂಥಾದ್ದೆಲ್ಲಾ ಇರಲಿಲ್ಲ" ಎಂದು ಹೇಳುವಾಗ ಒಂದು ಬಗೆಯ ನಿರಾಶೆಯೂ ಅದರಲ್ಲಿ ಎದ್ದು ಕಾಣುತ್ತದೆನ್ನಿ.


ಸುಮಾರು ಇನ್ನೂರು ಮುನ್ನೂರು ಮನೆಗಳುಳ್ಳ ನಮ್ಮೂರಲ್ಲಿ ಬೇರೆ ಯಾವುದಕ್ಕೆ ಕೊರತೆ ಇಲ್ಲವಾದರೂ ಪುರೋಹಿತರ ಕೊರತೆ ಇದ್ದೇಇದೆ. ಬ್ರಾಹ್ಮಣ ಕುಟುಂಬಗಳ ಮಕ್ಕಳು ಕಲಿತು ಪಟ್ಟಣ ಸೇರುತ್ತಿರುವದರಿಂದ ಪೌರೋಹಿತ್ಯ ಕಲಿತು ಮನೆಯಲ್ಲೇ ಇರುವವರು ಯಾರೂ ಉಳಿದಿಲ್ಲ. ಇದ್ದವರಿಗೆ ಜುಟ್ಟು ಬಿಟ್ಟು , ಪಂಚೆ ಉಟ್ಟು ಈ ಕೆಲಸ ಮಾಡಲು ನಾಚಿಕೆ ಬೇರೆ. ಸುಬ್ಬಾಭಟ್ಟರ ಹಿರಿಯ ಮಗ ಶ್ರೀಧರ ಬಿ. ಇ. ಪಾಸಾಗಿ ಇಂಜಿನಿಯರ ಆಗಿ ಮೈಸೂರು ಸೇರಿದರೆ ರಾಮ ಭಟ್ಟರ ಮಗ ಅನಂತ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಅಮೆರಿಕಾ ಸೇರಿದ್ದಾನೆ. ಇನ್ನೊಬ್ಬ ಶಿಕ್ಷಕನಾಗಿದ್ದಾನೆ. ಹೀಗೆ ಒಬ್ಬೊಬ್ಬ ಭಟ್ಟರ ಮನೆಯವರದೂ ಒಂದೊಂದು ಕತೆ. ಯಾರೂ ಪೌರೋಹಿತ್ಯ ದಂದೆ ಮಾಡಲು ತಯಾರಾಗೇ ಇಲ್ಲ. ಒಬ್ಬರೂ ಸಂಧ್ಯಾವಂದನೆ ಮಂತ್ರ ಕಲಿತಿಲ್ಲ. ಆಚಮನ ಮಾಡಲೂ ಬರುವದಿಲ್ಲ. ಒಬ್ಬಿಬ್ಬರು ಸಣ್ಣಪುಟ್ಟ ನಾಗರ ಪೂಜೆ, ಜಟಕನ ಪೂಜೆ, ಅಂಗಡಿಪೂಜೆ ಮಾಡುವ ಚಿಲ್ಲರೆ ಭಟ್ಟರು ಇದ್ದಾರಾದರೂ ಎಲ್ಲವನ್ನೂ ಮಾಡಿಸಬಲ್ಲ " ದೊಡ್ಡ ಭಟ್ಟ" ರೆಂದರೆ ಈಶ್ವರ ಅವಧಾನಿಗಳೊಬ್ಬರೇ. ಹಾಗಾಗಿ ಅವರಿಗೆ ಕುಂಡೆ ಊರಲೂ ಪುರಸೊತ್ತಿಲ್ಲ. " ಡಿಮ್ಯಾಂಡಪ್ಪೋ ಡಿಮ್ಯಾಂಡು!". ಬೆಳಿಗೆ ಒಂದೆಡೆ ಚೌಲ, ಮತ್ತೊಂದೆಡೆ ಮುಂಜಿ, ಇನ್ನೊಂದೆಡೆ ತಿಥಿ, ಇನ್ನೆಲ್ಲೋ ಶಾಂತಿಹೋಮ, ಅಥವಾ ಬೊಜ್ಜ ಏನೆನೋ . ಎಲ್ಲದಕ್ಕೂ ನಮ್ಮ ಅವಧಾನಿಗಳೇ ಗತಿ. ವಾಸ್ತವವಾಗಿ ಅವರಿಗೆ ಪ್ರತಿಕ್ಷಣವೂ " ಅರ್ಜೆಂಟೆ".


ಅವಧಾನಿಗಳ ಈ "ಬಿಝಿ ಶೆಡ್ಯೂಲ"ನಿಂದಾಗಿ ಕೆಲವೊಮ್ಮೆ ಗೊಂದಲಗಳಾಗುವದೂ ಉಂಟು. ಅದೇನೂ ಉದ್ದೇಶಪೂರ್ವಕವಾಗಿ ಅಲ್ಲ ಅನ್ನಿ. ಒಮ್ಮೆ ಅವಧಾನಿಗಳು ನಿತ್ಯದಂತೆ ಬೆಳಿಗ್ಗೆ ಐದು‌ಗಂಟೆಗೆ ಸ್ನಾನ ಪ್ರಾತರ್ವಂದನೆ ಎಲ್ಲ ಮುಗಿಸಿ ಚಾ ಕುಡಿದು ಅವಸರದಲ್ಲಿ ಗಣೇಶ ಹೆಗಡೆಯವರ ಮನೆಯ ಕಡೆ ಧಾಪುಗಾಲು ಹಾಕಿದರು. ಹೋದವರೇ ಎಂದಿನಂತೆ " ಹೆಗಡೇರೇ, ಒಂದು ಚೆಂಬು ನೀರು‌ಕೊಡಿ" ಎಂದು ಹೇಳಿ ತಾವು ತಂದ ಸಾಮಗ್ರಿಗಳನ್ನೆಲ್ಲ ಜಗುಲಿಯ ಮೇಲೆ ಒಂದು ಕಡೆ ಇಟ್ಟು ಕೈಕಾಲು ತೊಳೆದುಕೊಂಡು ಯಜಮಾನನಿಗಾಗಿ ಕಾಯುತ್ತ ಕುಳಿತರು. ಆದರೆ ಅಲ್ಲಿ ಯಾರೂ ತಮ್ಮನ್ನು ಕಾದು ಕುಳಿತ ಹಾಗೆನಿಸಲಿಲ್ಲ. ಕೊನೆಗೆ ಅರಿವಾಯಿತು, ತಾವು ಹೋಗಬೇಕಿದ್ದುದು ಗಣೇಶ ಹೆಗಡೆಯವರ ಮನೆಗಲ್ಲ, ಗಣಪತಿ ಹೆಗಡೆಯವರ ಮನೆಗೆ ಎಂದು. ಕೊನೆಗೆ ಅವಧಾನಿಗಳು ತಾವು ಹಾಗೇ ಸಹಜವಾಗಿ ಬಂದಿದ್ದೆಂದು ತೋರಿಸಲು " ಏನು ಸಾವಿತ್ರಕ್ಕಾ, ಯಜಮಾನ್ರು ಮನೇಲಿದ್ದಹಾಂಗಿಲ್ಲೆ. ಹೀಂಗೇ ಈ ಕಡೆ ಬಂದಿದ್ದೆ..ನಾ ಬತ್ತೆ..." ಎಂದು ಏನೆನೋ ಹೇಳಿ ಸರಿಯಾದ ಅಡ್ರೆಸ್ ಕಡೆ ಕಾಲು ಹಾಕಿದರು.


ಇನ್ನೊಮ್ಮೆ ಏನು ಫಜೀತಿಯಾಯಿತೆಂದರೆ ರಾಮಕೃಷ್ಣ ಭಟ್ಟರ ಮಗಳ ಮದುವೆಗೆ ಹೋಗಬೇಕಾಗಿದ್ದವರು ಗಡಿಬಿಡಿಯಲ್ಲಿ ಮಾದೇವ ಶೆಟ್ಟರ ಮನೆಗೆ ಒಯ್ಯಬೇಕಾಗಿದ್ದ ಬೊಜ್ಜದ ಸಾಮಗ್ರಿಗಳನ್ನೆಲ್ಲ ಒಯ್ದುಬಿಟ್ಟಿದ್ದರು. ಅಲ್ಲಿ ಹೋಗಿ ಗಂಟು ಬಿಚ್ಚುವಾಗಲೇ ಅವರಿಗೆ ತಮ್ಮ ತಪ್ಪು ಅರಿವಾಗಿದ್ದು. ಆ ಗಂಟು ಬಿಚ್ಚದೇ ಬದಿಗಿರಿಸಿ ಮದುವೆ ಕಾರ್ಯ ಮುಗಿಸಿದರೆನ್ನಿ. ಆ ಮೇಲೆ ಯಾರಿಗೋ ಅವರೇ ಈ ವಿಷಯ ಹೇಳಿಕೊಂಡು ನಕ್ಕಿದ್ದರಂತೆ.


ಆದರೆ ಅವಧಾನಿಗಳು ಏನೇ ಮಾಡಿದರೂ ಯಾರಿಗೂ ಸಿಟ್ಟು ಬರುತ್ತಿದ್ದಿಲ್ಲ. ಸಿಟ್ಟು ಮಾಡಿದರೆ ನಡೆಯುತ್ತಿರಲೂ ಇಲ್ಲ. ಇಂದಿಗೂ ಸಂಪ್ರದಾಯದ ಮೇಲೆ ಶ್ರದ್ಧೆ ಇಟ್ಟುಕೊಂಡವರಿಗೆ ಮನೆಯಲ್ಲಿ ನಡೆಯುವ ಎಲ್ಲ ಕೆಲಸಕ್ಕೂ ಅವರು ಅನಿವಾರ್ಯ. ಇದ್ದವರನ್ನು ಉಳಿಸಲೂ ಅವರು ಬೇಕು, ಸತ್ತವರನ್ನು ಮೇಲೆ ( ಸ್ವರ್ಗಕ್ಕೆ) ಕಳಿಸಲೂ ಅವರೇ ಬೇಕು ತಾನೆ. ಮಕ್ಕಳಾಗದವರಿಗೆ ನಾಗಶಾಂತಿಯೋ, ಮಂತ್ರತಾಯಿತ ಕಟ್ಟಿಯೋ ಮಕ್ಕಳಾಗುವಂತೆ ಮಾಡುವ ಅವಧಾನಿಗಳು ಸಿಟ್ಟಿಗೆದ್ದರೆ " ಅಪುತ್ರಸ್ಯ ಗತಿರ್ನಾಸ್ತಿ" ಎಂದು ನಂಬಿದವರ ಗತಿಯೇನು? ಹೀಗೆ ಅನೇಕ ಬಗೆಯ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ಅವಧಾನಿಗಳ ಅರ್ಜೆಂಟಿನಿಂದಾಗುವ ಅವಾಂತರಗಳನ್ನು ಸಹಿಸಬಲ್ಲ ಶಕ್ತಿ ಅಥವಾ ಅನಿವಾರ್ಯತೆ ನಮ್ಮೂರಿನವರಿಗಿದೆ.


ನೀವು ಏನೇ ಹೇಳಿ, ಬೆಳಿಗ್ಗೆ ಐದರಿಂದ ಸಂಜೆ , ಕೆಲವೊಮ್ಮೆ ಮಧ್ಯರಾತ್ರಿ , ಬೆಳಗಿನತನಕವೂ ಬೇಸರಿಸದೇ ಪರರ ಕೆಲಸದಲ್ಲಿ ತೊಡಗಿರುವ ಅವಧಾನಿಗಳದೂ ಒಂದು ಅದ್ಭುತ ಜನಸೇವೆಯೇ ಎಂದು ನನ್ನ ಭಾವನೆ. ಎಲ್ಲದಕ್ಕೂ ಅವರು ರೊಕ್ಕ ತೆಗೆದುಕೊಳ್ಳುತ್ತಾರೆ ನಿಜ, ಆದರೆ ಎಂದೂ ಅವರು ಇಂತಿಷ್ಟು ಹಣ ಎಂದು ರೇಟು ಫಿಕ್ಸ್ ಮಾಡಿದವರೂ ಅಲ್ಲ. ಕೇಳಿದವರೂ ಅಲ್ಲ. ಕೊಟ್ಟಷ್ಟನ್ನು ಎಣಿಸಿಯೂ ನೋಡದೇ ಸೊಂಟಕ್ಕೆ ಸಿಕ್ಕಿಸಿಕೊಂಡು ಅಥವಾ ತಮ್ಮ ಕೈಚೀಲದಲ್ಲಿ ಹಾಕಿ ಕೈಬೀಸಿ ಹೊರಟುಬಿಡುವವರು. ಕೆಲವರು " ಭಟ್ರೇ, ನಿಮ್ಮ ದಕ್ಷಿಣೆ ನಾಳೆ ಮನೆಗೇ ಕಳಿಸಿಕೊಡ್ತೇನೆ" ಎಂದರೂ ಅಲ್ಲವೆಂದವರಲ್ಲ. ಆ ನಾಳೆಯೆ ಬರದಿರುವದೂ ಉಂಟು. ಅವರು ಅದಕ್ಜೆಲ್ಲ ತಲೆ ಕೆಡಿಸಿಕೊಂಡವರಲ್ಲ. ತಾವು ಮಾಡುತ್ತಿರುವದು ಒಂದು ಪುಣ್ಯ ಕಾರ್ಯ ಎಂಬ ಭಾವನೆ ಇರಿಸಿಕೊಂಡ ಅವಧಾನಿಗಳಿಗೆ ದುಡ್ಡು ಬಂದರೂ ಸರಿ, ಬರದಿದ್ದರೂ ಸರಿ, ಕರೆದಲ್ಲಿ ಹೋಗುವದಷ್ಟೇ ಗೊತ್ತು . ಅದು ಅವರ ದೊಡ್ಡತನವಾಗಿದ್ದರೂ ಕೆಲವರು ಅದನ್ನು ದಡ್ಡತನ ಎಂದೂ ಭಾವಿಸುವವರಿದ್ದಾರೆ.


ಅವಧಾನಿಗಳ ಕುಟುಂಬದಲ್ಲಿಯೂ ಅವರ ಕುಲಕಸುಬು ಮುಂದುವರಿಸುವವರು ಯಾರೂ ಉಳಿದಿಲ್ಲ. ಇದ್ದ ಒಬ್ಬನೇ ಕುಲದೀಪಕ ವಿಶ್ವನಾಥ ಮೇರಿ ಎಂಬಾಕೆಯನ್ನು ಮದುವೆಯಾಗಿ ಗೋವಾದಲ್ಲಿದ್ದಾನೆ. ಮಗಳಿಗೆ ಮದುವೆ ಆಗಿ ಗಂಡನ ಸಂಗಡ ಬಹ್ರೇನಿಗೆ ಹೋಗಿದ್ದಾಳೆ. ಹೆಂಡತಿ ಸೀತಮ್ಮ ಹಸೀ ಮುತ್ತೈದೆಯಾಗಿಯೇ ಗಂಡನ ಕೈಯಲ್ಲಿ ಗಂಗಾಜಲ ಹಾಕಿಸಿಕೊಂಡು ಪರಲೋಕವಾಸಿಯಾಗಿದ್ದಾಳೆ.


" ಏನು ಅವಧಾನಿಗಳೇ, ಒಬ್ಬರೇ ಆಗಿಬಿಟ್ರಲ್ಲ" ಅಂತ ಯಾರಾದರೂ ಲೊಚಗುಟ್ಟಿದರೆ " ಹೌದ್ರಪಾ, ಅವರಿಗೆಲ್ಲ ಅರ್ಜೆಂಟಿತ್ತು..‌ಹೋದರು. ನನಗಿನ್ನೂ ಆಮಂತ್ರಣ ಬಂದಿಲ್ವಲ್ಲ, ಏನು ಮಾಡ್ಲಿ ?" ಎಂದು ಸಣ್ಣದಾಗಿ ನಕ್ಕುಬಿಡುತ್ತಾರೆ. ..‌


ಅವಧಾನಿಗಳಿಗೀಗ ಎಪ್ಪತ್ತು ದಾಟಿದೆ. ನಿರಂತರ ದುಡಿಮೆ ಅವರನ್ನು ಹಣ್ಣು ಮಾಡಿದೆ. ಪೌರೋಹಿತ್ಯದ ಕೆಲಸಕ್ಕೆ ಹೋಗಲು ಆಗುತ್ತಿಲ್ಲ. ಊರ ಜನರಿಗೆಲ್ಲ ಫಜೀತಿಯಾಗಿದೆ. ಬೇರೆ ಯಾರಾದರೂ ಬಂದರೆ ಅವರಿಗೆ ಸಮಾಧಾನವಿಲ್ಲ. ಕೊನೆಗೆ ಅವಧಾನಿಗಳ ಸಲಹೆ ಕೇಳಲಾದರೂ ಅವರ ಮನೆಗೆ ಬರುತ್ತಾರೆ. ತಮ್ಮ ವೃತ್ತಿಯ ನಡುವೆಯೂ ಹಸ್ತಶುದ್ಧಿ ಹಾಗೂ ಮಾನವೀಯ ಗುಣಗಳನ್ನು ಉಳಿಸಿಕೊಂಡು ಬಂದ ಅವರನ್ನು ಈಗಲೂ ಜನ ಅಷ್ಟೇ ಪ್ರೀತಿ ಗೌರವಗಳಿಂದ ನೋಡುತ್ತಾರೆ. ತಮ್ಮ ಮಂತ್ರಗಳಿಂದಲೇ ಎಲ್ಲವೂ ಸಾಧಿಸುವದಿಲ್ಲ ಎಂಬ ಸತ್ಯ ಅವರಿಗೆ ತಿಳಿದಿರಲಿಲ್ಲವೆಂದಲ್ಲ. ಆದರೆ ಅಂತಹ " ನಂಬಿಕೆ" ಉಳ್ಳ ಜನರಿಗೆ ಆ ಕುಲಕ್ಕೆ ಸಿಗುವ ತೃಪ್ತಿ ಸಂತೋಷ ಅವರಿಗೆ ಮುಖ್ಯವಾಗಿತ್ತು. ಊರಿನ ಎಲ್ಲರ ಜಾತಕ ನೋಡುತ್ತಿದ್ದ ಅವರು ತಮ್ಮ ಜಾತಕವನ್ನು ನೋಡಿರಲಿಲ್ಲ. ನೋಡಲಿ ಬಿಡಲಿ, ಆಗುವದನ್ನಂತೂ ತಪ್ಪಿಸಲು ಬರುವದಿಲ್ಲವಲ್ಲ. ಮೊದಲು ಹುಟ್ಟಿದ ಮಗ ಹದಿನಾರರಲ್ಲಿ ನೀರಿನಲ್ಲಿ ಮುಳುಗಿ ಸತ್ತ. ಎರಡನೆಯವ ಬೇರೆ ಜಾತಿಯ ಹೆಣ್ಣು ಕಟ್ಟಿಕೊಂಡು ಮನೆ ಬಿಟ್ಟು ಹೋದ. ಭಟ್ಟರು ಯಾವುದರಿಂದಲೂ ತಮ್ಮ ಮನಸ್ಸಿನ ಸ್ಥಿಮಿತ ಕಳೆದುಕೊಳ್ಳಲಿಲ್ಲ. ಸಿಟ್ಟಿಗೆದ್ದು ಹಾರಾಡಲಿಲ್ಲ. ಎಲ್ಲರಿಗೂ ಅಚ್ಚರಿಯಾಗುವಂತೆ " ಅದು ಅವನ ಇಷ್ಟ. ನಾನೇಕೆ ಅಡ್ಡ ಬರಲಿ. ಅವನು ಎಲ್ಲಾದರೂ ಸುಖವಾಗಿರೋದು ಮುಖ್ಯ " ಅಂದರು. ತಾವು ಹುಟ್ಟಿ ಬೆಳೆದ ಸಂಪ್ರದಾಯದಂತೆ ವೃತ್ತಿ ನಡೆಸಿದರಾದರೂ ಕಾಲದ ಬದಲಾವಣೆಗಳಿಗೆ ಎದುರಾಗಲಿಲ್ಲ.


ವಯೋಮಾನಕ್ಕನುಗುಣವಾಗಿ ಅವಧಾನಿಗಳ ದೇಹ ಜರ್ಝರಿತವಾಗಿದೆ. ಹಾಸಿಗೆಯಲ್ಲಿ ಮಲಗಿರುವದೇ ಹೆಚ್ಚು. ಯಾರಾದರೂ‌ ಪರಿಚಿತರು ಬಂದರೆ ಒಂದೆರಡು ಮಾತಾಡುತ್ತಾರೆ. "ಹೇಗಿದೀರಿ ಅವಧಾನಿಗಳೇ ?" ಎಂದರೆ ಸೋತ ದನಿಯಲ್ಲಿ ಹೇಳುತ್ತಾರೆ-

" ನನಗೇನೋ ಅರ್ಜೆಂಟಿದೆಯಪ್ಪಾ ಹೋಗಲಿಕ್ಕೆ, ಆದರೆ ಆ ಕರೆದುಕೊಂಡು ಹೋಗುವವನಿಗೆ ಅರ್ಜೆಂಟಿರಬೇಕಲ್ಲ ..."

- ಎಲ್. ಎಸ್. ಶಾಸ್ತ್ರಿ

( ಮುಂದಿನ ಕತೆ : ಹಡಗಿನ ಮೇಲೆ ಕರಡ ಬೆಳೆದ ಪ್ರಕರಣ. )


ಲಕ್ಷ್ಮೀನಾರಾಯಣ ಶಂಭು ಶಾಸ್ತ್ರಿ ( ಎಲ್. ಎಸ್. ಶಾಸ್ತ್ರಿ) ಬರವಣಿಗೆಯ ಕಾಯಕದಲ್ಲಿ ತಮ್ಮನ್ನ ಸಂಪೂರ್ಣವಾಗಿ ತೆತ್ತುಕೊಂಡಿರುವ ಶ್ರೀಯುತರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು.ಪತ್ರಿಕೋದ್ಯಮದಲ್ಲಿ ೫೬ ವರ್ಷಗಳ ಅಖಂಡ ಸೇವೆ.

ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ವಿಶ್ವವಾಣಿ , ಲೋಕದರ್ಶನ, ಶೃಂಗಾರ, ನವಕಲ್ಯಾಣ, ದೀನವಾಣಿ, ಜನತಾ, ನವನಾಡು, ಕರ್ನಾಟಕ ಮಲ್ಲ ಮೊದಲಾದ ದಿನಪತ್ರಿಕೆ, ಸಾಪ್ತಾಹಿಕಗಳಲ್ಲಿ ಸಂಪಾದಕ, ಉಪಸಂಪಾದಕ, ವರದಿಗಾರನಾಗಿ ಕಾರ್ಯ ನಿರ್ವಹಣೆ.

* ಸಾಹಿತ್ಯ ಕ್ಷೇತ್ರದಲ್ಲಿ- ೬೦ ವರ್ಷಗಳಿಂದ ಬರವಣಿಗೆ.

* ಹೊರಬಂದ ಕೃತಿಗಳು: ೧೧೦

* ಬಿಡಿಬರೆಹಗಳು: ೪೦ ಸಾವಿರಕ್ಕೂ ಹೆಚ್ಚು.

* ಇತರ ಕ್ಷೇತ್ರಗಳು: ಯಕ್ಷಗಾನ, ಸಂಗೀತ, ಗಮಕ, ನಾಟಕ, ಸಾಂಸ್ಕೃತಿಕ ಸಂಘಟನೆ ಇತ್ಯಾದಿ.

* ಹತ್ತು ಸಾವಿರ ಸಂಪಾದಕೀಯಗಳು, ಎರಡು ಸಾವಿರ ಮುನ್ನುಡಿಗಳು.

* ೫ ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳ ಸಂಘಟನೆ

* ೩ ಸಾವಿರಕ್ಕೂ ಹೆಚ್ಚು ಉಪನ್ಯಾಸ, ಪ್ರಬಂಧ ಮಂಡನೆ, ಕಾವ್ಯವಾಚನ ಇತ್ಯಾದಿ.

* ಪ್ರಶಸ್ತಿಗಳು: ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ ಬೆಂಗಳೂರು, ಕರ್ಕಿ ವೆಂಕಟರಮಣ ಶಾಸ್ತ್ರಿ, ಸೂರಿ ಪ್ರಶಸ್ತಿ, ಮುಂಬಯಿ, ಜಿ. ಆರ್. ಪಾಂಡೇಶ್ವರ ಪ್ರಶಸ್ತಿ, ಧಾರವಾಡ, ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ,, ಬೆಳಗಾವಿ, ಕುಮಾರವ್ಯಾಸ ಪ್ರಶಸ್ತಿ, ಗದಗ, ಸಾಹಿತ್ಯ ರತ್ನ ಪ್ರಶಸ್ತಿ ಬೆಳಗಾವಿ, ನಾಗನೂರು ಮಠದ ಸೇವಾರತ್ನ ಪ್ರಶಸ್ತಿ, ಬೆಳಗಾವಿ, ಹೂಗಾರ ಪತ್ರಿಕಾ ಪ್ರಶಸ್ತಿ,ಬೆಂಗಳೂರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಬೆಳಗಾವಿ, ರಾಜಕುಮಾರ ಸದ್ಭಾವನಾ ಪ್ರಶಸ್ತಿ ಬೆಂಗಳೂರು ಇತ್ಯಾದಿ ೧೫ ಕ್ಕೂ ಹೆಚ್ಚು ಪ್ರಶಸ್ತಿಗಳು ಮತ್ತು ಸಾವಿರಕ್ಕೂ ಹೆಚ್ಚು ಸಾರ್ವಜನಿಕ ಸನ್ಮಾನಗೌರವಗಳು

* ಹದಿನೈದಕ್ಕೂ ಹೆಚ್ಚು ಸಂಘಸಂಸ್ಥೆಗಳ ಸ್ಥಾಪನೆ: ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಇಂಪು ಸಂಗೀತ ವೇದಿಕೆ, ಜಿಲ್ಲಾ ಸಾಹಿತ್ಯ ಮಂಟಪ, ಮತ್ತಿತರ.

* ಸಾವಿರಕ್ಕೂ ಹೆಚ್ಚು ನಾಟಕ, ಸಂಗೀತ, ಗಮಕ, ಯಕ್ಷಗಾನ ಕಲಾ ಪ್ರದರ್ಶನ ಪ್ರಸ್ತುತ ಪಡಿಸುವಿಕೆ.

* ಉದಯೋನ್ಮುಖ ಬರೆಹಗಾರರಿಗೆ ಮತ್ತು ಪತ್ರಕರ್ತರಿಗೆ ಮಾರ್ಗದರ್ಶನ, ಶಿಬಿರಗಳ ಸಂಘಟನೆ.

* ಆದಿತ್ಯ ಪಬ್ಲಿಕೇಶನ್ ಮೂಲಕ ರಾಜ್ಯದ ವಿವಿಧೆಡೆಯ ೩೦೦ ಕ್ಕೂ ಹೆಚ್ಚು ಸಾಹಿತಿಗಳ ಕೃತಿ ಪ್ರಕಟನೆಗೆ ಅವಕಾಶ.

* ಮೌಂಟ್ ಅಬೂ ,ರಾಜಸ್ಥಾನ, ದಿಲ್ಲಿ , ಮುಂಬಯಿ, ಬೆಂಗಳೂರು, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಉಡುಪಿ, ಮಂಗಳೂರು , ಕಾಸರಗೋಡು ಸಹಿತ ಹಲವೆಡೆ ಪತ್ರಿಕೆ, ಸಾಹಿತ್ಯ, ಯಕ್ಷಗಾನ ಮೊದಲಾದವುಗಳ ಕುರಿತು ಉಪನ್ಯಾಸ.

ಹೀಗೆ ಪಾದರಸದಂತೆ ಚಲನಶೀಲರಾಗಿರುವ ಎಲ್ಎಸ್ಎಸ್ ಅವರಿಗೆ ೭೬ ಅಂದರೆ ನಂಬುವುದು ಕಷ್ಟ.ಅವರು ನಿತ್ಯ ಯುವಕರು. ಸಂಪಾದಕ.

114 views1 comment
bottom of page