top of page

ಸೀತಾಯಣ

ನಾಮಕರಣ ಅಂತ ಪಕ್ಕದಮನೆ ಅಂಕಲ್, ನಾರ್ತ್ ಇಂಡಿಯನ್, ಕರೆಯಲು ಬಂದಿದ್ರು. ನಮ್ಮ ಮನೆಗೆ ಲಕ್ಷ್ಮಿ ಬಂದಿದ್ದಾಳೆ ಅಂತ ತುಂಬಾ ಖುಷಿಯಾಗಿ ಹೇಳಿದ್ರು.

‘ಸಿಯಾ’ ನಾಮ ಸೋಛಾ ಹೈ, ಆಪ್ ಸಬ್ ಕೊ ಜರೂರ್ ಆನಾ ಹೈ”. ಪಟ ಪಟ ಅಂತ ಹೇಳ್ತಾನೇ ಇದ್ರು. ಅವರ ಖುಷಿ ನೋಡಿ ನಮಗೂ ತುಂಬಾ ಖುಷಿಯಾಯ್ತು. ಮಗುವನ್ನು ನೋಡ್ಬೇಕು ಅಂತ ಆಸೆನೂ ಆಯ್ತು. ಖಂಡಿತ ಬರ್ತೀವಿ ಅಂತ ಹೇಳಿದೆ.

ಇವತ್ತೇ ನಾಮಕರಣ, ಹೋಗಿ ಬರಬೇಕು, ಏನು ಉಡುಗೊರೆ ಕೊಡ್ಲಿ ಅಂತ ಯೋಚಿಸುತ್ತ ಸ್ನಾನ ಮುಗಿಸಿ ಬಂದೆ. ಇವತ್ತು ನನಗೆ ಆಫೀಸಿನಲ್ಲೇನೋ ಮುಖ್ಯ ಮೀಟಿಂಗ್ ಇದೆ ನೀನು ಹೋಗಿ ಬಾ ನಾನು ಬರೋದು ಲೇಟ್ ಆಗತ್ತೆ ಅಂತ ನನ್ನ ಮನೆಯವರು ಹೇಳಿದ್ದರಿಂದ ನಾನೊಬ್ಬಳೇ ನಾಮಕರಣಕ್ಕೆ ಹೋಗೋದು ಅಂತ ತೀರ್ಮಾನ ಮಾಡಿದೆ.

ಬೇಗ ಹೋಗಿ ಬೇಗ ಬಂದುಬಿಡಬೇಕು ಅಂದುಕೊಂಡು ಕಪಾಟಿನಿಂದ ಹಸಿರು ಬಣ್ಣದ ಸೌತ್ ಸಿಲ್ಕ್ ಸೀರೆ ತೆಗೆಯುವಾಗ ಅನ್ನಿಸಿತು, ನಾರ್ತ್ ಇಂಡಿಯನ್ಸ್ ಇಷ್ಟು ಭಾರಿ ಸೀರೆ ಉಟ್ಕೋಳೊದಿಲ್ಲ, ಇಷ್ಟಾನೂ ಪಡೋದಿಲ್ಲ. ಅಲ್ಲೇ ಪಕ್ಕದಲ್ಲಿದ್ದ ನೀಲಿ ಬಣ್ಣದ ಕಾಥಾ ಸ್ಟಿಚ್ ಸೀರೆ ಸಾಕು ಅಂತ ಅದನ್ನ ಉಟ್ಟಿಕೊಂಡು ಒಂದೆಳೆ ಮುತ್ತಿನ ಸರ ಧರಿಸಿ ರೆಡಿಯಾಗಿ ಹೊರಟಾಗ 11 ಘಂಟೆ.

ತುಂಬಾ ವಿಜೃಂಭರಣೆಯ ನಾಮಕರಣ. ಮನೆಯನ್ನೆಲ್ಲ ತಿಳಿ ಗುಲಾಬಿ ಬಣ್ಣದಲ್ಲಿ ಅಲಂಕಾರ ಮಾಡಿದ್ದರು. ತೊಟ್ಟಿಲಂತೂ ತುಂಬಾ ಶ್ರದ್ಧೆಯಿಂದ ಅಲಂಕಾರಗೊಂಡು ತನ್ನ ತೋಳ ತೆಕ್ಕೆಯಲ್ಲಿ ಅಲಂಗಿಸಿಕೊಳ್ಳಲು ಕಾಯುತ್ತ ಕುಳಿತಿತ್ತು. ತೊಟ್ಟಿಲಲ್ಲಿರುವ ಮಗು ತುಂಬಾ ಮುದ್ದಾಗಿತ್ತು. ರಾತ್ರಿಯೆಲ್ಲಾ ಎದ್ದಿತ್ತೇನೋ ಈಗ ಇಷ್ಟು ಗಲಾಟೆಯಲ್ಲೂ ಶಾಂತವಾಗಿ ಮಲಗಿತ್ತು. ಮಗುವಿನ ಅಮ್ಮನಿಗೆ ನಾನು ತೆಗೆದು ಕೊಂಡು ಹೋದ ಉಡುಗೊರೆ ನೀಡಿ ಏನು ಹೆಸರಿಟ್ಟಿದೀರಾ ಅಂತ ಕೇಳ್ದೆ ನನಗೆ ತಿಳಿದ ಅಲ್ಪ ಸ್ವಲ್ಪ ಹಿಂದಿಯಲ್ಲಿ. "ದಿಯಾ" ಅಂತ ಹೇಳಿದ್ರು.

ಒಹ್! ಬೇರೆ ಹೆಸರು ಇಟ್ಟಿದ್ದೀರಾ "ಸಿಯಾ" ಅಂತ ಇಡ್ತೀವಿ ಅಂತ ಹೇಳಿದ್ರು, ನಿಮ್ಮ ಮನೆಯವರು ಕರೆಯೋಕೆ ಬಂದಾಗ, ಅಂತ ಕೇಳ್ದೆ. ಹೋದ ಮೇಲೆ ಒಂದೆರಡು ಮಾತಾಡ್ಬೇಕು ಅಂತ ಅಂದುಕೊಳ್ತಾ.

ಸಿಯಾ ಅಂದ್ರೆ ಸೀತೆಯ ಇನ್ನೊಂದು ಹೆಸರಂತೆ!

ಹೆಸರಿಟ್ಟರೆ ಮಗುವಿಗೆ ಸೀತೆ ಅನುಭವಿಸಿದಷ್ಟೇ ಕಷ್ಟ ಜೀವನದಲ್ಲಿ ಬರತ್ತದಂತ ನಮ್ಮತ್ತೆ ಹೆಸರು ಬೇಡ ಅಂದ್ರು. ಅದಕ್ಕೆ ದಿಯಾ ಅಂತ ಇಟ್ಟಿದೀವಿ, ದಿಯಾ ಅಂದ್ರೆ ದೀಪ ಅಂತ ನಗ್ತಾ ಹೇಳಿದ್ಲು.ದಿಯಾ ಹೆಸರು ತುಂಬಾ ಚೆನ್ನಾಗಿದೆ. ಹೆಸರಿನಂತೆ ಅವಳು ನಿಮ್ಮ ಮನೆ ಮತ್ತು ಮನಗಳನ್ನು ಬೆಳಗಲಿ ಎಂದು ಹಾರೈಸಿದೆ.

ಆದರೆ ಅವರು ಹೆಸರು ಬದಲಿಸಿದ ಕಾರಣ ಕೇಳಿದಾಗ ನನ್ನ ಮನಸ್ಸು ಮೊದಲಿನಷ್ಟು ತಿಳಿಯಾಗಿರಲಿಲ್ಲ. ಊಟ ಮುಗಿಸಿ ಅವರ ಮನೆಯಿಂದ ವಾಪಾಸ್ ಬಂದರು ವಿಷಯ ಯಾಕೋ ತಲೆಯಿಂದ ಹೋಗ್ತಾನೇ ಇರ್ಲಿಲ್ಲ. ಮನಸ್ಸು ಅವರು ಮಾಡಿದ್ದು ಸರಿ ಅಂದರೆ, ಬುದ್ಧಿ ಯಾಕೋ ಹೆಸರಿನಿಂದ ಬದುಕಲ್ಲಿ ತೊಂದರೆಯೇ ಅಂತ ನಗ್ತಾ ಇತ್ತು. ಮನಸ್ಸು, ಬುದ್ದಿ ಎರಡನ್ನು ಮೀರಿ ನನ್ನ ವಿಚಾರ ಮಾತ್ರ ಸೀತೆಯ ಜೀವನದ ಸುತ್ತ ಸುತ್ತುತ್ತಿತ್ತು.

ಭೂಮಿ ತೂಕದ ಹೆಣ್ಣೇ ಸೀತೆ!

ಮಹಾಮಾತೆ ಸೀತಾ ದೇವಿ. ಅವಳನ್ನ ಭೂಮಿಯಿಂದ ಬಂದ ನೀನು ಭೂಮಿ ತೂಕದ ಹೆಣ್ಣೆಂದರು, ಅವಳು ಮಾತು ಸುಳ್ಳಾಗದಿರಲೆಂದು ಪೂರ್ತಿ ಜೀವನ ಕಷ್ಟವನ್ನು ಸಹಿಸಿಕೊಂಡು ಸಹನಾಮೂರ್ತಿಯಾದಳೇನೊ. ಭೂಮಿ ಊಳುವಾಗ ಸಿಕ್ಕ ಮಗು, ಜನಕ ಮಹಾರಾಜನ ಸಾಕು ಮಗಳು. ಆಗೇನೂ ತಿಳಿಯದ ಶಿಶು ಅವಳು. ಆದರೆ ಜನರ ಬಾಯಲ್ಲಿ ಅವಳ ಕಥೆ ಶುರುವಾಗಿತ್ತಲ್ಲ. ಬೆಳೆಯುತ್ತ ಬೆಳೆಯುತ್ತ ಅದೆ ಕಥೆಯನ್ನೇ ತಾನೂ ಕೇಳುತ್ತ ಬೆಳೆದಳೇ? ಅರಮನೆಯ ದಾಸಿಯರೆಲ್ಲ ಕಥೆ ಹೇಳುವುದು ಅವಳ ಕಿವಿಯನ್ನು ತಲುಪಿದಾಗ ಅವಳ ಮನಸ್ಸು ಭಾರವಾಗಿರಬಹುದೇ?

ಅವಳ ಭೂಮಿ ತೂಕದ ಹೆಣ್ಣಿನ ಪಾತ್ರ ಅಲ್ಲಿಂದಲೇ ಶುರು ಆಗಿರಬಹುದೇ?

ಸೀತಾಸ್ವಯಂವರ! ಸೀತೆಯ ಮದುವೆಯ ಸಂಭ್ರಮ!. ಸೀತೆಗೂ ಅಷ್ಟೇ ಹರ್ಷವಿತ್ತೇ? ಶಿವಧನಸ್ಸು ಮುರಿದವನೇ ಅವಳ ಗಂಡನೆಂದು ಅಪ್ಪ ಜನಕನ ನಿರ್ಣಯ ಅವಳಿಗಿಷ್ಟ ಇತ್ತೇ? ಶಿವಧನಸ್ಸನ್ನು ಮುರಿದು ಗೆದ್ದೆನೆಂದು ಬೀಗಲು ತಾನೇ ಬಲಿಷ್ಟ, ತಾನೇ ವೀರ ತಾನೇ ಶೂರನೆಂದು ತೋರಿಸಲು ರಾವಣನಂಥ ಕ್ರೂರ ರಾಕ್ಷಸರೂ ಬಂದಿದ್ದನ್ನು ತಿಳಿದು ಅವಳ ಕೋಮಲ ಮನಸ್ಸು ಭಯ ಪಟ್ಟಿರಬಹುದೇ? ಅಲ್ಲಿಂದ ಅವಳಿಗೆ ಸಾಧ್ವಿಯ ಪಟ್ಟವೇ?

ಸೀತಾರಾಮ ಕಲ್ಯಾಣದ ಉತ್ಸವವಂತೆ. ರಾಮನು ಶಿವಧನಸ್ಸನ್ನು ಮುರಿದು ಪಂಧ್ಯ

ಗೆದ್ದನೆಂದು ಖುಷಿಯಲ್ಲಿದ್ದ ಸೀತೆಗೆ ಮತ್ತದೇ ಅವಳ ಹುಟ್ಟಿನ ಪ್ರಶ್ನೆ ಕಾಡಿತ್ತೆ? ದಶರಥ ಮಹಾರಾಜರು ಅವಳ ಮೂವರು ತಂಗಿಯರನ್ನ ಸೊಸೆಯಂದಿರನ್ನಾಗಿಸಿಕೊಳ್ಳಲು ಒಪ್ಪಿಕೊಂಡು, ಅವಳನ್ನು ತಿರಸ್ಕರಿಸಿ, ನನ್ನ ರಾಮನಿಗೆ ರಾಜಕುವರಿಯೇ ಬೇಕು. ಹುಟ್ಟಿನ ಮೂಲವಿಲ್ಲದ ಹೆಣ್ಣನ್ನು ನನ್ನ ರಾಮನ ಮಡದಿಯಾಗಿ ನಾನು ಸ್ವೀಕರಿಸಲಾರೆ ಅಂದರಂತೆ ಎಂಬ ಗಾಳಿಸುದ್ದಿಯ ಕೇಳಿ ಅವಳಿಗೆ ಉಸಿರು ಕಟ್ಟಿದಂತಾಗಿರಬಹುದೇ?

ಧನಸ್ಸು ಮುಟ್ಟುವ ಮೊದಲೇ ಅವಳ ಮದುವೆಯಾಗಲು ನಾನು ಒಪ್ಪಿದಂತೆ, ಧನಸ್ಸು ಮುರಿದ ಮರುಕ್ಷಣ ಅವಳು ನನ್ನ ಪತ್ನಿ ಅಂದ ಮುದ್ದು ಮಗನ ಮಾತಿಗೆ ಸೊಸೆಯೆಂದು ಒಪ್ಪಿಕೊಂಡನಂತೆ ದಶರಥ. ಕರ್ತವ್ಯ, ಧರ್ಮಪಾಲನೆ, ಕೊಟ್ಟ ಮಾತಿಗೆ ಭದ್ಧನಾಗಷ್ಟೇ ಮದುವೆಯಾದನೇ ಅವಳ ರಾಮ? ಖುಷಿ ಪಡುವ ಸಮಯದಲ್ಲಿ ಹರ್ಷವ ತೋರಿಸದ, ಕೋಪದ ಸಮಯದಲ್ಲಿ ಕೋಪವನ್ನೂ ತೋರಿಸದ ಎಲ್ಲ ಸಮಯದಲ್ಲೂ ನಿರ್ಲಿಪ್ತನಾಗಿರುವ ಮರ್ಯಾದಾ ಪುರುಷೋತ್ತಮನಾದ ಗಂಡನ ಜೊತೆಯಲ್ಲಿಅವಳಿಗೆ ಸಲಿಗೆ ಸಾಧ್ಯವಿತ್ತೇ?. ಹೇಗಿತ್ತೋ ಅವಳ ದಿನಗಳು?.

ಅದಕ್ಕೇ ಅವಳನ್ನು ಎಲ್ಲರೂ ಸರ್ವಗುಣಸಂಪನ್ನೇ ಎಂದಿರಬಹುದೇ?.

ವನವಾಸದಲ್ಲೂ ಜೊತೆಯಾದವಳು. ಕೈಕೆಯ ಹಠದಂತೆ ಭರತನಿಗೆ ಪಟ್ಟ, ರಾಮನಿಗೆ ಹದಿನಾಲ್ಕು ವರ್ಷ ವನವಾಸವಂತೆ. ಮಾವ ದಶರಥ ಕೊಟ್ಟ ಮಾತಂತೆ. ವಂಶದಲಿ ಕೊಟ್ಟ ಮಾತು ನೆಡೆಯಲೇ ಬೇಕೆಂದು ರಾಮ ವನವಾಸಕ್ಕೆ ಹೊರಟು ನಿಂತಾಗ ಸೀತೆ ತಾನೂ ಗಂಡನ ಜೊತೆಯಾಗಿ ಹೋದಳು. ತನ್ನ ಸುಖದ ಸುಪ್ಪತ್ತಿಗೆಯ ತೊರೆದು ಗಂಡನ ಜೊತೆ ಹೊರಟ ಸೀತೆಗೆ ವನವಾಸದ ಕಷ್ಟ ತಿಳಿದಿರಲಿಲ್ಲವೇ? ವನ್ಯಮೃಗಗಳ, ಕ್ರೂರ ರಕ್ಕಸರ ನೆನೆದು ಹೆದರಲಿಲ್ಲವೇ ಅವಳ ಮನ? ಲಕ್ಷ್ಮಣನ ಪತ್ನಿಯಂತೆ ಅರಮನೆಯಲ್ಲೇ ಉಳಿದಿದ್ದರೆ ಸೀತೆಯನ್ನು ಸೀತಾಮಾತೆ ಅನ್ನುತ್ತಿರಲಿಲ್ಲವೇ ನಾವೆಲ್ಲ?

ರಾಮನೇನೋ ಅಪ್ಪನ ಮಾತು ಉಳಿಸಲು ಹೋದ. ಇವಳು ವೃದ್ಧ ಅತ್ತೆ,-ಮಾವರ ಸೇವೆ ಮಾಡದೇ ಪತಿಯ ಜೊತೆಗೇಕೆ ಹೋದಳೋ ಎಂದು ಜರಿದ ಜನರೂ ಇರಬಹುದೇ?

ಮುಂದೆ ? ಸ್ವಯಂವರದಲ್ಲಿ ಕೈತಪ್ಪಿದ ಅವಳನ್ನು ಆ ಅಸುರ ಅಪಹರಿಸದ!. ಸುಂದರಳಾಗಿದ್ದುದು ಅವಳ ತಪ್ಪೇ? ಆ ರಾವಣ ಅವಳನ್ನು ನೋಡಿದ್ದು ಅವಳ ತಪ್ಪೇ? ಅವನು ಅವಳನ್ನ ಬಯಸಿದ್ದು ಅವಳ ತಪ್ಪೇ?. ಬಲಿಷ್ಠನಾದ ಆ ಕ್ರೂರಿ ಅವಳನ್ನ ಅಪಹರಿಸಿದರೆ ಅವಳೇನು ಮಾಡಲು ಸಾಧ್ಯವಿತ್ತು?

ಅಷ್ಟು ದಿನ ಅಸುರ ರಾವಣನ ಬಂಧನದಲ್ಲಿದ್ದ ಸೀತೆ ಎಷ್ಟು ಪವಿತ್ರಳೊ ಎಂದು ಜನರಾಡಿದ ಪಿಸುಮಾತು ಇವಳ ಕಿವಿಗಳ ತಲುಪಿದಾಗ ಅವಳಿಗಾದ ಸಂಕಟವೆಷ್ಟೋ?

ತನ್ನ ಪಾವಿತ್ರ್ಯ ಪರೀಕ್ಷೆಗೆ ಅಗ್ನಿಯನ್ನೇ ಅವಳು ಪ್ರವೇಶಿಸಿದಳು. ಅಗ್ನಿಮಾತೆ ಸುಡದಿದ್ದರು ಅವಳ ಆತ್ಮಗೌರವ ಅವಳನ್ನ ಸುಡದಿರಬಹುದೇ?. ಅಂದಿನಿಂದವಳು ಮಹಾಪತಿವ್ರತೆ.!

ಪತ್ನಿ ಗರ್ಭಿಣಿಯೆಂದು ತಿಳಿದೂ ರಾಮ ಸೀತೆಯನ್ನು ಕಾಡಿಗೆ ಅಟ್ಟಿದ. ರಾವಣನಿಂದ ಬಿಡಿಸಿ ಕರೆತಂದ ಶ್ರೀರಾಮ ತನ್ನನ್ನು ಹರ್ಷವಾಗಿಡುತ್ತಾನೆಂದ ಸೀತೆಗೆ ಸಿಕ್ಕಿದ್ದು ಏನು? ಮತ್ತೊಮ್ಮೆ ವನವಾಸ. ಗುರುಗಳ ಆಶ್ರಮಕ್ಕೆ ಕರೆತಂದು ಇಲ್ಲೇ ಇರು ಎಂದು ಬಿಟ್ಟು ಹೋದನಲ್ಲ ಭಾತೃ ಆಜ್ಞಾಪಾಲಕ ಲಕ್ಷ್ಮಣ!

ತುಂಬಾ ದಿನಗಳ ನಂತರವಷ್ಟೇ ಅವಳಿಗೆ ತಿಳಿಯಿತಂತೆ, ರಾಮ ಅವಳನ್ನು ತ್ಯಜಿಸಿದ್ದಾನೆಂದೂ, ಅದಕ್ಕೆ ಕಾರಣ ರಾವಣ ಅಪಹರಿಸಿದ ತನ್ನ ಪಾತಿವ್ರತ್ಯದ ಕುರಿತು ಅವನ ಪ್ರಜೆಗಳಾರೋ ಆಪಾದಿಸಿದುದಕೆ. ಅದನ್ನು ತಿಳಿದ ಅವಳ ಹೃದಯ ಒಡೆದೇ ಹೋಗಿರಬಹುದೇ? ರಾಮ ಅವಳಿಗೆ ಕೊಟ್ಟ ಮಾತುಗಳು, ಅವಳ ಒಪ್ಪಿಗೆ, ಅವಳ ಜವಾಬ್ದಾರಿ, ಅವಳ ಅಗ್ನಿಪರೀಕ್ಷೆಗೆ ಬೆಲೆಯೇ ಇರಲಿಲ್ಲವೇ?. ಸೀತೆ ಅಂದು ಆ ಪ್ರಶ್ನೆ ಕೇಳಿದ್ದರೆ? ಅವಳಿಗೆ ನಾವೆಲ್ಲ ಮಹಾ ಪತಿವ್ರತೆ ಅಂತ ಪಟ್ಟ ಕೊಡುತ್ತಿರಿಲಿಲ್ಲವೇನೋ.!

ಪತಿ ತ್ಯಜಿಸಿದ ಹೆಣ್ಣು ಅವಳು, ರಾಮನ ಕುಡಿ ಅವಳ ಗರ್ಭದಲಿ,, ತಾಯಿಯಾಗುವ ಖುಷಿಯನ್ನು ಸಂಭ್ರಮಿಸಲಿಲ್ಲ. ಹೆರಿಗೆಯ ಸಮಯದಲ್ಲಿ ಕಾಳಜಿ ತೋರಲು ತನ್ನವರಾರು ಇಲ್ಲ ಎಂದು ಎಷ್ಟು ನೊಂದಳೋ ಮಹಾಸಾಧ್ವಿ? ಹೆರಿಗೆಯ ನೋವಿನ ಉಸಿರಿನಲ್ಲಿ ಮನದ ನೋವಿನ ನಿಟ್ಟುಸಿರೆಷ್ಟೊ ಕಣ್ಣಿಂದ ಹರಿದ ನೀರಲ್ಲಿ ಮನದ ನೋವು ಧಾರೆಯಾಗಿ ಹರಿಯತೆಷ್ಟೋ ಆ ಪರಿತ್ಯಕ್ತೆ ಸೀತಾಮಾತೆಗೆ!

ಮರಳಿ ಭೂಮಿಗೆ! ಪರಿತ್ಯಕ್ತ ಭಾವನೆಯಲ್ಲೇ ಬೇಯುತ್ತಾ, ಲವ, ಕುಶರ ಜೊತೆಗೆ ಅವಳು ದುಃಖ ಮರೆಯುವ ಪ್ರಯತ್ನ ಪಡುತ್ತಿರುವಾಗಲೇ ವಾಲ್ಮೀಕಿ ಗುರುಗಳ ಒತ್ತಾಯ ತುಂಬಿದ ಆದೇಶದಂತೆ ರಾಮನ ಅಶ್ವಮೇಧ ಯಾಗಕ್ಕೆ ಹೋಗಬೇಕಾಯಿತಲ್ಲ ಅವಳಿಗೆ, ಹೊರಟ ಅವಳಿಗೆ ಯಾಗದಲ್ಲಿ ಕೂರಲೇ ಬೇಕಾದ ಪತ್ನಿಯ ಸ್ಥಾನ ಮತ್ತೆ ರಾಮ ಕೊಡಬಹುದೇ ಎಂಬ ಸಹಜ ಆಸೆಯಿತ್ತೇ? ಜೀವನದಲ್ಲಿ ಮತ್ತೆ ಗಂಡ ಮಕ್ಕಳ ಜೊತೆ ಬಾಳುವ ಕನಸಿತ್ತೇ? ಯಾಗಕ್ಕೆ ಹೋದ ಅವಳಿಗೆ ತನ್ನ ಜಾಗದಲ್ಲಿ ತನ್ನದೇ ಬಂಗಾರದ ಪುತ್ಥಳಿಯ ನೋಡಿ. ನೀನೊಂದು ಗೊಂಬೆ ಅಷ್ಟೇ ಎಂದು ಯಾಗ ಮಾಡುತ್ತಿದ್ದ ರಾಮನೇ ಕಿವಿಯಲ್ಲಿ ಬಂದು ಕೂಗಿದಂತಾಯಿತೇ?. ಜೀವನದಲ್ಲಿ ಮತ್ತೆ ಬಂದ ಪತಿ ರಾಮ ಎಂದು ನೊಂದ ಉಸಿರು ಕಳಚಿತೆಂಬ ಭಾವ ಮೂಡುವ ಹೊತ್ತಿಗೆ ಅವಳ ಅರಿವಿಗೆ ಬಂತು ಬಂದಿದ್ದು ಗಂಡ ರಾಮನಲ್ಲ, ಬಂದಿದ್ದು ರಾಜಾರಾಮ ಎಂಬ ಕಹಿಸತ್ಯ. ಬಂದಿದ್ದು ಧರ್ಮನಿಷ್ಠ ರಾಮ, ಸತ್ಯ ಸಂಧ ರಾಮ, ಪಿತೃವಾಕ್ಯ ಪರಿಪಾಲಕ ರಾಮ, ಪ್ರಜಾವಾಕ್ಯ ಪರಿಪಾಲಕ ಪ್ರಜಾರಾಮ ಆದರೆ ಸೀತಾರಾಮನಲ್ಲ! ಆಗಲೇ ಸೀತೆಗೆ ಯಾರಿಗೂ ಕಾಣದ, ಎಂದಿಗೂ ಮರಳಿ ಬಾರದ ಭೂಮಿಯೊಳಗೆ ಸೇರಿ ಹೋಗುವ ಮನಸ್ಸಾಯಿತೇನೋ. ಅವಳ ಮನದಾಳದಲ್ಲಿ ಎದ್ದ ತುಮುಲಗಳನ್ನು ಬಲ್ಲವರಾರು?

ಆದರೆ ಸೀತೆಯ ಹೆಸರನ್ನು ಬೇಡ ಅನ್ನುವಷ್ಟು ಅವಳ ಬದುಕು ಕಷ್ಟ ಹಾಗೂ ಗೊಂದಲಗಳ ಗೂಡಾಗಿತ್ತೇ ಅದೂ ಗೊತ್ತಿಲ್ಲ. ಅವಳ ಹೆಸರನ್ನು ಇಟ್ಟರೆ ಅವಳ ಎಲ್ಲಾ ಕಷ್ಟ, ದುಃಖಗಳ ತಾಪ ನಮ್ಮನ್ನೂ ತಟ್ಟಿ ಬಿಡಬಹುದೇ?

ಕೆಲವು ಪ್ರಶ್ನೆಗಳಿಗೆ ಮನಸ್ಸಿಗೊಪ್ಪುವ ಉತ್ತರ ಸಿಗುವುದು ತುಂಬಾ ಕಷ್ಟ. ಅಂತ ಪ್ರಶ್ನೆಗಳನ್ನು ಯಾವುದೋ ಉತ್ತರಗಳಿಂದ ಸಮಾಧಾನ ಪಡಿಸಿಕೊಳ್ಳಬೇಕು. ಇಲ್ಲ ಅಂದರೆ ಪ್ರಶ್ನೆಗಳನ್ನು ಪ್ರಶ್ನೆಗಳಾಗಿಯೇ ಇರಲು ಬಿಡಬೇಕು ಎಂದು ಅಂದು ಕೊಳ್ಳುತ್ತಾ ರಾತ್ರಿ ಊಟದ ತಯಾರಿ ಮಾಡಲು ಅಡುಗೆ ಮನೆಗೆ ಹೊರಟೆ..

ಅಂದ ಹಾಗೆ ನನ್ನ ಪರಿಚಯ ನಾನು ನಿಮಗೆ ಹೇಳಲೇ ಇಲ್ಲ. ನಾನು "ಜಾನಕಿ" ಅಂತ.

ನಿಲ್ಲಿ ನಿಲ್ಲಿ ಹಾಗೆಲ್ಲ ಯೋಚಿಸ ಬೇಡಿ. ನನ್ನ ಜೀವನದಲ್ಲಿ ಸೀತೆಯ ಬಾಳಿನ ಕಷ್ಟಗಳು, ಪ್ರಶ್ನೆಗಳು, ಯಾವುದೂ ಇಲ್ಲ. ತುಂಬಾ ಪ್ರೀತಿಸುವ ಗಂಡ, ಖುಷಿಯಾದ ಸಂತೃಪ್ತ ಜೀವನ ನನ್ನದು. ಸೀತೆಯಂತೆ ನನಗೆ ಅವಳಿ ಜವಳಿ ಗಂಡು ಮಕ್ಕಳಿದ್ದಾರೆ. ಅವರಿಗೆ ಮದುವೆ ಮಾಡಲು ವಧು ಬೇಕು. ಹೆಸರು ಏನೇ ಇದ್ರು ತೊಂದರೆ ಇಲ್ಲ. ಸೀತಾ, ಸಿಯಾ, ಜಾನಕಿ, ಜಾಹ್ನವಿ, ಮೈಥಿಲಿ, ವೈದೇಹಿ, ಭೂಮೀಜಾ.....


ಕವಿತಾ ಗಿರೀಶ್ ಹೆಗಡೆ, ಶಾರ್ಜಾ :

ಓದಿದ್ದು ಕಂಪ್ಯೂಟರ್ ಸೈನ್ಸ್ ಆದರೂ ಬಾಲ್ಯದಿಂದಲೂ ಬರೆಹ, ಓದುಗಳಲ್ಲಿ ಅಪಾರ ಆಸಕ್ತಿ ಹೊಂದಿರುವ ಕವಿತಾ ಗಿರೀಶ್ ಹೆಗಡೆ ಇವರು ಪ್ರಸ್ತುತದಲ್ಲಿ ಶಾರ್ಜಾದಲ್ಲಿ ವಾಸವಾಗಿದ್ದಾರೆ. ಮೂಲತಃ ಯಲ್ಲಾಪುರದವರಾದ ಇವರು ಯಕ್ಷಗಾನ ಅರ್ಥಧಾರಿ ಹಾಗೂ ಅಂಕಣಕಾರ ಶ್ರೀ ಅನಂತ ವೈದ್ಯರ ಪ್ರಥಮ ಪುತ್ರಿ. ಸಾಮಾಜಿಕ ಮನೋಸ್ಥರಗಳಲ್ಲಿ ಹುಟ್ಟುವ ವಿಚಿತ್ರ ನಂಬುಗೆಗಳ ಮೇಲೆ ಅತ್ಯಂತ ಮನೋಜ್ಞವಾಗಿ ಬೆಳಕು ಚೆಲ್ಲುವ ಈ ಕತೆ ಕವಿತಾ ಗಿರೀಶರ ಕಥನಶಕ್ತಿಯ ಬಗ್ಗೆ ಅಪಾರ ಭರವಸೆಯನ್ನು ಹುಟ್ಟಿಸುತ್ತದೆ.




515 views2 comments
bottom of page