top of page

ವಸಂತೋಕ್ತಿ - ಎಡ ಮತ್ತು ಬಲ ಡಾ.ವಸಂತಕುಮಾರ ಪೆರ್ಲ

Updated: May 20, 2023

ಎಡ, ಬಲ; ಎಡಪಂಥೀಯರು, ಬಲಪಂಥೀಯರು; ಎಡಚರು ಎಂಬಿತ್ಯಾದಿ ಮಾತುಗಳನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಇದು ಇಂಗ್ಲಿಷಿನ leftists ಮತ್ತು rightists ಎಂಬುದರ ಅನುವಾದವಾಗಿದೆ. ಆದರೆ ಭಾರತೀಯರಲ್ಲಿ ಎಡ, ಎಡಪಂಥ ಎಂಬುದು ಇದೆಯೇ ಹೊರತು ಬಲ, ಬಲಪಂಥ ಎಂಬುದು ಇಲ್ಲ!

ಸಂಸ್ಕೃತದಲ್ಲಿ ಎಡಕ್ಕೆ ವಾಮಭಾಗ ಅನ್ನಲಾಗುತ್ತದೆ. ಬಲಭಾಗಕ್ಕೆ ದಕ್ಷಿಣಭಾಗ ಅನ್ನುವರು. ಪೂರ್ವ, ಪಶ್ಛಿಮ, ಉತ್ತರ, ದಕ್ಷಿಣ ಇವು ನಾಲ್ಕು ಭಾಗಗಳು ಅಥವಾ ದಿಕ್ಕುಗಳು. ಬಲಭಾಗ ಅಥವಾ ಬಲದಿಕ್ಕು ಎಂಬುದು ಇಲ್ಲ.

ಯಾವುದೇ ಶುಭಕಾರ್ಯಗಳನ್ನು ಅಥವಾ ಧಾರ್ಮಿಕ ಕಲಾಪಗಳನ್ನು ಪೂರ್ವದಿಕ್ಕಿಗೆ ಮುಖ ಮಾಡಿ ಆಚರಿಸುವುದು ನಮ್ಮ ಸಂಪ್ರದಾಯ. ಆಗ ಅಧ್ವರ್ಯುವಿನ ವಾಮಭಾಗದಲ್ಲಿ ಆತನ ಪತ್ನಿ ಇರಬೇಕಾಗುತ್ತದೆ. ವಾಮಭಾಗ ಎಂದರೆ ಎಡಭಾಗ. ದಕ್ಷಿಣಭಾಗದಲ್ಲಿ ಪತಿ. ಅಲ್ಲಿ ಬಲಭಾಗ ಎಂಬುದಿಲ್ಲ.

ಬಲ ಎಂಬುದಕ್ಕೆ ಶಕ್ತಿ ಎಂದಷ್ಟೇ ಅರ್ಥ. ‘ಬಲಪ್ರಮಥನಾಯ ನಮಃ’ ಎಂದು ರುದ್ರಮಂತ್ರದಲ್ಲಿ ಬರುತ್ತದೆ. ಬಲವಾನ್ ಶಕ್ತಿಮಾನ್ ಮುಂತಾದ ಪ್ರಯೋಗಗಳನ್ನು ಕೇಳಿದ್ದೇವೆ. ಅದಕ್ಕೆ right (ಸರಿ) ಎಂಬ ಅರ್ಥವಿಲ್ಲ. Right ಗೆ ಬಲಭಾಗ ಎಂಬ ಅರ್ಥ ಬಂದುದು ಇಂಗ್ಲಿಷ್ ಪ್ರಭಾವದಿಂದ. ಇಂಗ್ಲಿಷರ right, wrong ಎಂಬ ಶಬ್ದಗಳಿಗೆ ನಾವು ಸರಿ - ತಪ್ಪು ಎಂಬುದರ ಜೊತೆಗೆ ಬಲ, ಎಡ ಎಂಬ ಅರ್ಥಗಳನ್ನು ಆರೋಪಿಸಿಕೊಂಡೆವು.

ಸರಿ, ದಕ್ಷಿಣಭಾಗಕ್ಕೆ ಕನ್ನಡದಲ್ಲಿ ‘ಬಲ’ ಎಂಬ ಪ್ರಯೋಗ ಯಾಕೆ ಬಂತು? ಬಲಗೈ ಎಡಗೈಗಿಂತ ಬಲಿಷ್ಠ. ಬಲಪ್ರಯೋಗಕ್ಕೆ ಬಲಭಾಗದ ಕೈ ಬೇಕೇ ಬೇಕು. ಬಲಿಷ್ಠವಾದ ಬಲಗೈ ದಾಳಿ ಮಾಡಲು (to attack) ಮತ್ತು ಎಡಗೈ ಪೂರಕ ಚಟುವಟಿಕೆಗಳಿಗಾಗಿ (to support and protect) ಮತ್ತು ರಕ್ಷಣೆಗಾಗಿ ಇರುವಂಥಾದ್ದು. ಬಲಗೈ ಈಟಿ ಹಿಡಿಯಲು ಅಥವಾ ಬಾಣ ಹೂಡಲು; ಎಡಗೈ ಭರ್ಚಿ ಹಿಡಿಯಲು ಅಥವಾ ಬಿಲ್ಲು ಹಿಡಿಯಲು (ರಕ್ಷಣೆ).

ಹಾಗಾಗಿ ಕೇಂದ್ರಭಾಗ ಅನ್ನುವುದು ಇದೆಯೇ ಹೊರತು ‘ಬಲಪಂಥ’ ಅನ್ನುವ ಪರಿಕಲ್ಪನೆಯೇ ನಮ್ಮಲ್ಲಿಲ್ಲ. ಅದನ್ನು ಕೇಂದ್ರಸ್ಥಳದಲ್ಲಿರುವ ಪರಂಪರಾಗತ ಪಾರಂಪರಿಕ ತರವಾಡು ಎಂದು ಬೇಕಾದರೆ ಕರೆಯಬಹುದು. ವಾಮವನ್ನು ಎಡಭಾಗ ಎಂದು ಕರೆಯಲಾಗಿದ್ದು ಅದು ಸರಿಯಾಗಿಯೇ ಇದೆ.

ವಾಸ್ತವವಾಗಿ ಎಡಪಂಥದವರದ್ದು ಪೂರಕ ಕರ್ತವ್ಯಗಳನ್ನು ನಿರ್ವಹಿಸುವ, ರಕ್ಷಣಾತ್ಮಕ ಚಟುವಟಿಕೆಗಳಿಗೆ ಅಗತ್ಯವಿರುವ ಪಾತ್ರ. ಅದೊಂದು ಪ್ರಶ್ನಿಸುವ (ಅಥವಾ ಹಿಂದಕ್ಕೆಳೆವ) ವ್ಯವಸ್ಥೆ.

ನಡೆಯುವಾಗ ಒಂದು ಹೆಜ್ಜೆ ಮುಂದಕ್ಕೆ, ಸದಾ ಬಲಗಾಲಿನಿಂದ. ಅನಂತರ ಅನುಸರಿಸುವುದು ಎಡ ಹೆಜ್ಜೆ. ಆಗಷ್ಟೇ ಚಲನೆ ಪೂರ್ಣ. ಹಿಂದಕ್ಕೆ ಹೋಗುವಾಗ ಚಲನೆಯ ಗತಿ ವಿರುದ್ಧ; ಮೊದಲು ಎಡ ಹೆಜ್ಜೆ. ಅನಂತರ ಅನುಸರಿಸುವುದು ಬಲ ಹೆಜ್ಜೆ.

ಎಡಪಂಥದ ಪೂರಕ ಪಾತ್ರ (supportive role) ಎಷ್ಟು ಮುಖ್ಯ ಅನ್ನುವುದಕ್ಕೆ ಬಾಣ ಬಿಡುವ ಭಂಗಿ ಒಂದು ಸಂಕೇತದಂತಿದೆ. ಎಡಗಾಲನ್ನು ಮುಂದಿಟ್ಟರೆ ಮಾತ್ರ ಬಲಗೈ ಹಿಂದಕ್ಕೆ ಹೋಗಿ ಮತ್ತಷ್ಟು ಶಕ್ತಿಯನ್ನು ಕ್ರೋಢೀಕರಿಸಿಕೊಂಡು ಗಮ್ಯದತ್ತ ಬಾಣ ಹೂಡಲು ಸಾಧ್ಯ.

ಕೇಂದ್ರಕ್ಕೆ ಶಕ್ತಿ ಒದಗುವುದು ‘ಎಡ’ದಿಂದ. ಬಲ ಎಷ್ಟು ಮುಖ್ಯವೋ ಎಡವೂ ಅಷ್ಟೇ ಮುಖ್ಯ. ಮನುಷ್ಯ ದೇಹದ ಬಲಭಾಗ ಶಿವ; ಎಡಭಾಗ ಶಿವೆ (ಪಾರ್ವತಿ). ಇದೊಂದು ಬಲುದೊಡ್ಡ ಸಂಕೇತ. ವಾಗರ್ಥ (ವಾಕ್ ಮತ್ತು ಅರ್ಥ ಅಂದರೆ ಗಂಡು ಮತ್ತು ಹೆಣ್ಣು) ಸೇರಿದರೆ ಮಾತ್ರ ಜೀವ ಪರಿಪೂರ್ಣ ಆಗುವುದು; ಪಾರ್ವತೀಪರಮೇಶ್ವರ ಆಗುವುದು; ಜಗತ್ತಿಗೆ ಪಿತರಾಗುವುದು.

೦0೦೦೦೦೦೦

22 views0 comments
bottom of page