top of page

ಮರೆಯಲಾಗದ ಮಹಾನುಭಾವರು -೧೯೩

ಜೈನ ಸಂಶೋಧನಾ ಕ್ಷೇತ್ರದ "ಆನೆ"

ಡಾ. ಆ. ನೆ. ಉಪಾಧ್ಯೆ

*********

ಆದಿನಾಥ ನೇಮಿನಾಥ ಉಪಾಧ್ಯೆ.

ಇವರನ್ನು " ಜೈನ ಸಂಶೋಧನಾ ಕ್ಷೇತ್ರದ ಆನೆ" ಎಂದವರು ಖ್ಯಾತ ವಿದ್ವಾಂಸ ಡಿ. ಎಲ್. ನರಸಿಂಹಾಚಾರ್ ( ಡಿಎಲ್ಎನ್.) ಅವರು. ಅದಕ್ಕೆ ತಕ್ಕಂತೆ ಉಪಾಧ್ಯೆಯವರು ಜೈನ ಧರ್ಮ ಸಾಹಿತ್ಯ ಕ್ಷೇತ್ರಗಳಿಗೆ ಸಂಬಂಧಿಸಿ ಮಾಡಿದ ಕೆಲಸವೂ ಅಗಾಧವಾದುದು.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಎಂಬಲ್ಲಿ ೧೯೦೬ ರ ಫೆಬ್ರವರಿ ೬ ರಂದು ಜೈನ ಪುರೋಹಿತ ಕುಟುಂಬದಲ್ಲಿ ಜನಿಸಿದ ಆದಿನಾಥರು ಸಂಸ್ಕೃತ ಪ್ರಾಕೃತ ಭಾಷೆಯ ದೊಡ್ಡ ವಿದ್ವಾಂಸರು. ಪುಣೆಯಲ್ಲಿ ಎಂ. ಎ. ಮುಗಿಸಿ ಕೊಲ್ಲಾಪುರದ ರಾಜಾರಾಮ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ೩೨ ವರ್ಷ ಸತತ ಸೇವೆ ಸಲ್ಲಿಸಿದ ನಂತರ ಮೈಸೂರು ವಿಶ್ವ ವಿದ್ಯಾಲಯದಲ್ಲಿ ಆರಂಭಿಸಲಾದ ದಕ್ಷಿಣ ಭಾರತದ ಮೊಟ್ಟ ಮೊದಲ ಜೈನ ಪೀಠದಲ್ಲಿ ಸಂಸ್ಥಾಪಕ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಅಪೂರ್ವ ಸಾಧನೆಗೈದರು. ಈ ಮಧ್ಯೆ ಕೆಲಕಾಲ ಶಿವಾಜಿ ವಿವಿ ದಲ್ಲಿ ಗೌರವ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ಮುಂಬಯಿ ವಿವಿ ಡಿಲಿಟ್ ಪಡೆದ ಅವರು ೧೯೩೯ ರಿಂದ ೪೨ ರತನಕ ರೀಸರ್ಚ್ ಸ್ಕಾಲರ್ ಆಗಿದ್ದರು.

ಆ. ನೆ. ಉಪಾಧ್ಯೆಯವರು ಕೊಲ್ಲಾಪುರ ಕಾಲೇಜಿನಲ್ಲಿದ್ದಾಗ ಅದೆಷ್ಟು ಜನಪ್ರಿಯತೆ ಮತ್ತು ಗೌರವ ಪಡೆದಿದ್ದರೆಂದರೆ ಅವರ ಸಲುವಾಗಿಯೇ ಅಂಚೆ ಕಚೇರಿಯವರು ಮನೆಯಿಂದ ದೂರವಿದ್ದ ಪೋಸ್ಟ್ ಬಾಕ್ಸನ್ನು ಅವರ ಮನೆ ಹತ್ತಿರ ತಂದು ಹಾಕಿದ್ದರು. ಅವರ ನಿಧನಾನಂತರ ಕೊಲ್ಲಾಪುರ ಪಾಲಿಕೆ ಅವರ ಮನೆ ( ಧವಳ) ಇದ್ದ ರಸ್ತೆಗೆ "ಆ‌. ನೆ. ಉಪಾಧ್ಯೆ ಮಾರ್ಗ್ " ಎಂದು ಹೆಸರಿಟ್ಟಿತು.

ಜೈನ ಭಾಷೆ, ಸಾಹಿತ್ಯ ಕ್ಷೇತ್ರದಲ್ಲಿ ಅವರು ಅಗಾಧ ಸ್ವರೂಪದ ಕೆಲಸ ಮಾಡಿದರು. ಜೈನ ಧರ್ಮ- ಸಾಹಿತ್ಯ ಗ್ರಂಥಗಳ ಆಳವಾದ ಅಧ್ಯಯನ, ಸಂಗ್ರಹ, ಸಂಶೋಧನೆಗಳ ಮೂಲಕ ಜೈನ ಪೀಠದ ಮಹತ್ವ ಹೆಚ್ಚಿಸಿದರು. ಅಸಂಖ್ಯಾತ ಗ್ರಂಥಗಳನ್ನು ಸಂಪಾದಿಸಿ ಹೊರತಂದರು. ಹೊಸ ಸಂಶೋಧನೆಗಳಿಗೆ /ಅಧ್ಯಯನಕ್ಕೆ ಅವಕಾಶ ಕಲ್ಪಿಸಿದರು. ಅಕ್ಷರಶಃ ಅವರು ಆ ಕ್ಷೇತ್ರದ "ಆನೆ" ಯೇ ಆಗಿದ್ದರು.

೧೯೬೭ ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ೪೬ ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಅವರಿಗೆ ದೊರಕಿತು. ಹಂಪಿ ಕನ್ನಡ ವಿಶ್ವಿದ್ಯಾಲಯವು ಜೈನ ಪೀಠವನ್ನು ಅವರ ಹೆಸರಿನಲ್ಲೇ ಸ್ಥಾಪಿಸಿದ್ದು ಅದರ ವಿಸ್ತರಣಾ ಕೇಂದ್ರ ಬೆಳಗಾವಿಯ ಭರತೇಶ ಶಿಕ್ಷಣ ಸಂಸ್ಥೆಯಲ್ಲಿ ಆರಂಭಿಸಲಾಗಿದೆ.

ಉಪಾಧ್ಯೆಯವರು ೧೯೭೫ ಅಗಸ್ಟ ೧೦ ರಂದು ನಿಧನರಾದರು.

- ಎಲ್. ಎಸ್. ಶಾಸ್ತ್ರಿ




12 views0 comments
bottom of page