top of page

🌼 ಮೋಕ್ಷ 🌼 [ ಕತೆ]


ಯಾಕೋ ಬೆಳಿಗ್ಗೆಯಿಂದ ಅಪಶಕುನಗಳು ಒಂದಾದ ಮೇಲೊಂದು ಆಗುತ್ತಲೇ ಇತ್ತು ಸುನಿತಾಳಿಗೆ. ಮಗ ಇವತ್ತು ಬೈಕ್ ತೊಗೊಂಡು ಕಾಲೇಜ್ ಗೆ ಹೊರಟಾಗಲೂ ಯಾಕೋ ಮನದಲ್ಲೊಂದು ತಳಮಳ. "ಮಗಾ ಇವತ್ತು ಬೈಕ್ ಬೇಡಾ ಬಸ್ ನಲ್ಲಿ ಹೋಗು." ಯಾಕೋ ಮನಸಿಗೆ ಬಂದ ಮಾತು ಬಾಯಿಂದ ಹೊರ ಬರಲೇ ಇಲ್ಲಾ. ಬುದ್ದಿಗೆ ಅನಿಸಿತ್ತು ಅಪಶಕುನಗಳು ಮಗನಿಗಾಗಿ ಅಲ್ಲಾ...


ಎಲ್ಲಾ ಅಪಶಕುನಗಳನ್ನು ಮರೆತು ಸಾಮಾನ್ಯವಾಗಿರಲು ಮತ್ತಷ್ಟು ಪ್ರಯತ್ನಿಸಿದಳು ಸುನೀತಾ. ಮನೆಯ ಪಕ್ಕದಲ್ಲೇ ಇರುವ ಪುಟ್ಟದಾದ ಅವಳ ಹಪ್ಪಳ ಕಾರ್ಖಾನೆಗೆ ಹೋದಳು. ಮಳೆಗಾಲವಾದ್ದರಿಂದ ಅಲ್ಲಿ ಈಗ ಹೆಚ್ಚಿನ ಕೆಲಸವೇನು ನೆಡೆಯುತ್ತಿರಲಿಲ್ಲ. ಒಣಗಿಸಿ ಡಬ್ಬದಲ್ಲಿಟ್ಟ ಹಪ್ಪಳಗಳನ್ನು ಅಂಗಡಿಗಳ, ಮದುವೆ ಮನೆಗಳ ಆರ್ಡರ್ ಗಳಿಗೆ ಸರಿಯಾಗುವಂತೆ ಎಣಿಸಿ ಪ್ಯಾಕ್ ಮಾಡುವ ಕೆಲಸವಷ್ಟೇ ನೆಡೆಯುತ್ತಿತ್ತು.


ಬದುಕಿನಲ್ಲಿ ಎಲ್ಲಾ ಬಾಗಿಲುಗಳು ಮುಚ್ಚಿ ಹೋದ ನಂತರ ಸುನೀತಾ ತನ್ನ ಬದುಕಿನ ಆಸರೆಗಾಗಿ ತೆರೆದ ಬಾಗಿಲು ಈ ಹಪ್ಪಳದ ಕಾರ್ಖಾನೆಯದಾಗಿತ್ತು. ಅವಳ ಕಾರ್ಖಾನೆಯಲ್ಲಿ ಬರೀ ಹಪ್ಪಳವಷ್ಟೇ ಅಲ್ಲದೇ ಉಪ್ಪಿನಕಾಯಿ, ಸಂಡಿಗೆಗಳನ್ನು ತಯಾರಿಸುತ್ತಿದ್ದಳು. ತುಂಬಾ ಚಿಕ್ಕಂದಿನಲ್ಲಿ ಅಜ್ಜಿ ಮಾಡುತ್ತಿದ್ದ ಹಪ್ಪಳ ಉಪ್ಪಿನಕಾಯಿಗಳನ್ನು ನಿಷ್ಠೆಯಿಂದ ನೋಡುತ್ತಿದ್ದ ಸುನೀತಾ ಅಂದು ಅಂದುಕೊಂಡಿರಲಿಲ್ಲ ಮುಂದೊಮ್ಮೆ ಅದೇ ಅವಳ ಬದುಕಿಗೆ ದಾರಿಯಾಗ ಬಹುದೆಂದು.


ಇಂದಿಗೆ ಸಾಕಷ್ಟು ಅಭಿವೃದ್ಧಿ ಗಳಿಸಿರುವ ಅವಳ ಫ್ಯಾಕ್ಟರಿಯಲ್ಲಿ ಇಂದಿಗೂ ಸುನಿತಾಳೆ ಉಪ್ಪಿನಕಾಯಿ ಮಸಾಲೆ ಹಾಕುತ್ತಿದ್ದಳು. ಹಪ್ಪಳದ ಹಿಟ್ಟಿನ ಹದಕ್ಕೂ ಅವಳ ಕೈಯೇ ಬೇಕು... ಹಾಗಿತ್ತು ಅವಳ ಕೈರುಚಿ. ಹದವಾದ ಖಾರ, ಮೆಂತೆ, ಸಾಸಿವೆ, ಎಣ್ಣೆ ಹಾಕಿ ಅವಳು ಮಾಡುವ ಉಪ್ಪಿನಕಾಯಿ ಈಗೀಗ ವಿದೇಶಗಳಿಗೂ ಸರಬರಾಜಾಗುತ್ತಿತ್ತು.


ಮಳೆಗಾಲವಾದ್ದರಿಂದ ಹೆಚ್ಚಿನ ಕೆಲಸದವರ್ಯಾರು ಬರುತ್ತಿರಲಿಲ್ಲಾ. ಆದರೆ ಆ ದಿನ ಯಾವತ್ತೂ ಅವಳ ಸಹಾಯಕ್ಕೆ ಬರುವ ತಿಮ್ಮಿಯೂ ಬಂದಿರಲಿಲ್ಲ. ಇವತ್ತವಳು ಬರಲಿಕ್ಕಿಲ್ಲಾ ಅಂದುಕೊಳ್ಳುತ್ತ ಇರುವಾಗಲೇ... ತಿಮ್ಮಿ ಬಂದಿದ್ದಳು. ಬೆಳಿಗ್ಗೆಯಿಂದ ಜೋರಾಗಿ ಒಂದೇ ಸಮನಾಗಿ ಹೊಯ್ಯುತ್ತಿದ್ದ ಮಳೆಯಿಂದ ಅವಳ ಛತ್ರಿ ಅವಳನ್ನು ಹೆಚ್ಚೆನೂ ರಕ್ಷಿಸಿರಲಿಲ್ಲ. ಅರ್ಧಕ್ಕಿಂತ ಹೆಚ್ಚಿನ ಅವಳ ದೇಹ ಮಳೆಯಿಂದ ಒದ್ದೆಯಾಗಿತ್ತು. ಬಂದವಳೇ "ಅಮ್ಮಾವರೇ ಇವತ್ತು ಬೆಳಿಗ್ಗೆ ವೆಂಕಟೇಶ ಅಪ್ಪನೋರು ಹೋಗಬುಟ್ಟರಂತೆ... ನನ್ನ ಗಂಡ ಸಿದ್ಧ ಅಲ್ಲೇ ಹೋಗವನೇ.. " ಸುನೀತಾಳಿಗೆ ಒಮ್ಮೆಲೇ ಗರಬಡಿದಂತಾಗಿತ್ತು. 'ಹೇಗೆ, ಏನಾಗಿತ್ತಂತೆ' ಎನ್ನುವಾಗ ಅವಳ ಧ್ವನಿ ನಡುಗುತ್ತಿತ್ತು. "ಗೊತ್ತಿಲ್ಲಾ ಅಮ್ಮೋರೆ ನಿನ್ನೆ ಆರಾಮಿದ್ದಿದ್ದರಂತೆ ಇವತ್ತು ಬೆಳಿಗ್ಗೆ ಹಾಸಿಗೆ ಬಿಟ್ಟು ಏಳಲೇ ಇಲ್ಲವಂತೆ. ನನ್ನ ಗಂಡ ಇವತ್ತು ಕೆಲ್ಸಕ್ಕೆ ಹೋದವ ಎಷ್ಟು ಬಾಗಿಲು ಬಡಿದ್ರೂ ಬಾಗಿಲೇ ತೆಗೀಲಿಲ್ಲವಂತೆ. ಊರವರೆಲ್ಲ ಹೋಗಿ ನೋಡಿ ಕಡೆಗೆ ಬಾಗಿಲು ಒಡೆದು ನೋಡಿದ್ರೆ ಹೀಂಗಂತೆ ಕತೆ. ನಿಮಗೊಂದು ಮಾತು ಹೇಳು ಹೇಳಿ ನನ್ನ ಕಳಸವ್ರೆ."


ಈಗ ಎರಡು ವರ್ಷಗಳಿಂದ ಅವರ ಹೆಂಡತಿ ಅವರನ್ನು ಬಿಟ್ಟು ಹೋದ ಮೇಲೆ, ವೆಂಕಟೇಶ ಅವರು ಒಂಟಿಯಾಗಿದ್ದರು ಎನ್ನುವುದು ಸುನೀತಾಳಿಗೆ ತಿಳಿದೇ ಇತ್ತು.


"ಆಯ್ತು ನೆಡಿ ಹೋಗ್ವಾ... ಫ್ಯಾಕ್ಟರಿ ಬಾಗಿಲು ಹಾಕು... ನಾನು ಮನೆಗೆ ಬೀಗ ಹಾಕಿ ಬರ್ತೆ" ಅನ್ನುತ್ತಾ ಮನೆಯ ಕಡೆಗೆ ಓಡಿದ ಸುನೀತಾಳ ಮನದಲ್ಲಿ ಅವಳ ಮನಸ್ಸಿಗೂ ಅರ್ಥವಾಗದ ಭಾವನೆಯೊಂದಿತ್ತು.


ಅವತ್ತು ವರುಣದೇವ ಕೋಪಗೊಂಡಂತಿತ್ತು. ಗುಡುಗು, ಮಿಂಚುಗಳ ಆರ್ಭಟವೂ ಜೋರಾಗಿತ್ತು. ಉಟ್ಟಿದ್ದ ಕಾಟನ್ ಸೀರೆ ಜೋರಾಗಿ ನೆಡೆಯಲು ಅಡ್ಡಿಯಾಗಿತ್ತು. ಅದನ್ನು ಇನ್ನಷ್ಟು ಮೇಲೆತ್ತಿ ಜೋರಾಗಿ ನೆಡೆಯುವ ಪ್ರಯತ್ನ ಮಾಡಿದ್ದಳು ಸುನೀತಾ.


ಅವಳು ಹೆಚ್ಚಿಸಿದ ನೆಡಿಗೆಯ ರಭಸದ ವೇಗದಲ್ಲೇ ಅವಳ ನೆನಪುಗಳು ಹಿಂದಕ್ಕೆ ಓಡುತ್ತಿತ್ತು.


ಅಷ್ಟೊಂದು ಪ್ರೀತಿಸುತ್ತಿದ್ದವನು ಒಮ್ಮೆಲೇ ಎಷ್ಟು ಹಿಂಸಿಸಲು ಶುರು ಮಾಡಿಬಿಟ್ಟಿದ್ದ. ಅವನ ಆಸೆಗಳು ಈಡೇರಲಿಲ್ಲ ಎನ್ನುವ ಒಂದು ಕಾರಣ ಅವನ ಪ್ರೀತಿಯನ್ನು ಇನ್ನಿಲ್ಲದಂತೆ ಮುಗಿಸಿಬಿಟ್ಟಿತ್ತು. ಕೆಟ್ಟ ನೆನಪುಗಳು ಅಲ್ಲಿ ಮಳೆಗೆ ದಾರಿಯ ಗುಂಟ ಬೆನ್ನತ್ತಿ ಬರುತ್ತಿದ್ದಂತೆ ಅವಳಿಗೆ ಭಾಸವಾಯಿತು. ಅವನ ಬಗ್ಗೆ ಹೇಸಿಗೆಯೆನಿಸಿತು... ಮರುಕ್ಷಣವೇ ಬುದ್ಧಿ ನೆನಪಿಸಿತ್ತು "ಅವನು ಬದುಕಿಲ್ಲ..." ಆ ಕ್ಷಣ ಮತ್ತೆ ಮನಸ್ಸು ಬುದ್ಧಿಯನ್ನು ಒಪ್ಪಿತ್ತು. ಒಮ್ಮೆ ಅವನ ಮುಖ ಕೊನೆಯ ಸಲ ನೋಡುವ ತವಕ ಹೆಚ್ಚಾಗಿತ್ತು ಸುನೀತಾಳಿಗೆ.


ಎದುರಿಗೆ ಯಾರೋ ಬರುತ್ತಾ ಇರುವುದು ಕಾಣುತ್ತಿತ್ತು. ದಪ್ಪ ಮಳೆಯ ಹನಿಗಳಿಂದಾಗಿ ಯಾರು ಅಂತಾ ಗೊತ್ತಾಗುತ್ತಾ ಇರಲಿಲ್ಲಾ... ದೂರದಲ್ಲಿ ಬರುತ್ತಿದ್ದ ವ್ಯಕ್ತಿ ತುಂಬಾ ಹತ್ತಿರ ಬಂದಾಗ ಅಷ್ಟೇ ಗೊತ್ತಾಗಿತ್ತು ಅವಾ ಶೇಷಣ್ಣ...!. ನಮ್ಮನ್ನು ನೋಡಿ ನಿಂತು ಏನೋ ಹೇಳುತ್ತಿದ್ದ ಶೇಷಣ್ಣ... ಅಲ್ಲೇ ಪಕ್ಕದಲ್ಲಿ ಕಾಡಿನಿಂದ ಕೆಳಗೆ ಧೋ ಎಂದು ಧುಮುಕುತ್ತಿದ್ದ ನೀರಿನಿಂದಾಗಿ ಶೇಷಣ್ಣ ಕೂಗಿ ಹೇಳುತ್ತಿದ್ದ ಮಾತು ಅಸ್ಪಷ್ಟವಾಗಿತ್ತು. ಆದರೂ ಅರ್ಥವಾಗಿದ್ದು ಅವನು ಒಣಗಿದ ಕಟ್ಟಿಗೆಯ ವ್ಯವಸ್ಥೆ ಮಾಡಲು ಹೋಗುತ್ತಿದ್ದಾನೆ... ಅವನು ಹೇಳಿದ ಕಟ್ಟಿಗೆ ಶಬ್ಧ ಮತ್ತೆ ಅವಳನ್ನು ನೆನಪುಗಳ ಕೂಪಕ್ಕೆ ತಳ್ಳಿತ್ತು. ಅವತ್ತು ಮಳೆಗಾಲಕ್ಕಾಗಿ ಕಟ್ಟಿಗೆ ಕೂಡಿಡಲು ಒಣಗಿದ ಆಗಲೋ ಈಗಲೋ ಬೀಳುವಂತಿದ್ದ ಒಂದು ಮರವನ್ನು ಕಡಿಸುತ್ತಿದ್ದಳು ಸುನೀತಾ. ಆಗ ಅಲ್ಲಿಗೆ ಬಂದ ವೆಂಕಟೇಶ ಅವಳಿಗೆ ಸಿಟ್ಟಿನಿಂದ ಕಟುವಾಗಿ ಹೇಳಿದ್ದ "ನೀನು ಇನ್ನು ನನ್ನ ಜೀವನದಿಂದ ಹೊರ ಹೋಗು" ಎಂದು. ಅಂದು ತಿಮ್ಮ ಮರಕ್ಕೆ ಹಾಕುತ್ತಿದ್ದ .

ಕೊಡಲಿ ಏಟು ಕೇವಲ ಮರಕ್ಕೆ ಬಿದ್ದಿರಲಿಲ್ಲ.


ನೆನಪುಗಳ ರಾಶಿ ಮುಗಿದಿರಲಿಲ್ಲ ಆದರೆ ದಾರಿ ಸವೆದಿತ್ತು. ಆ ಮನೆಯ ಎದುರಿಗೆ ನಿಂತಿದ್ದಳು. ಜೀವನದಲ್ಲಿ ಎಂದಿಗೂ ಕಾಲೇ ಹಾಕಬಾರದು ಎಂದುಕೊಂಡಿದ್ದ ಮನೆಯ ಗೇಟಿನ ಸರಗೋಲು ಅವಳೇ ಸರಿಸಿದ್ದಳು.


ಪಡಸಾಲೆಯಲ್ಲಿ ಶಾಂತವಾಗಿ ಮಲಗಿದ್ದ ವ್ಯಕ್ತಿಯನ್ನು ನೋಡಿದವಳ ಕಣ್ಣುಗಳು ನೀರಾಡಿದ್ದವು. ಮನೆಯ ಹೆಬ್ಬಾಗಿಲು ಮತ್ತೆ ನೆನಪುಗಳ ಬಂಡಿಯೆಳೆದಿತ್ತು...! ಆ ಮನೆಯ ಹೊಸಿಲು ತುಳಿದ ವಧುವಾಗಿದ್ದೆ ತಾನು... ಒಮ್ಮೆ ಈ ವ್ಯಕ್ತಿಯ ವಧುವಾಗಿದ್ದೆ ನಾನು ಎನ್ನುವ ನೆನಪು ಅವಳಿಗೆ ಹಿತ ಅನಿಸದಿದ್ದರೂ ಸತ್ಯವಾಗಿತ್ತು.


ಮದುವೆಯಾಗಿ ಒಂದು ವರ್ಷ, ಆ ದಿನದ ಮಳೆಯಂತೆ ಹೊಯ್ದಿದ್ದ ಈ ವ್ಯಕ್ತಿಯ ಪ್ರೀತಿ ಆ ಒಂದು ವರ್ಷಕ್ಕಷ್ಟೇ ಸೀಮಿತವಾಗಿತ್ತು.

ವರ್ಷದೊಳಗೆ ಅವಳಿಗೆ ಮಗುವಾಗವ ಸೂಚನೆ ಕಾಣದಿದ್ದಾಗ ಇದೇ ವ್ಯಕ್ತಿ ತನ್ನ ಅಮ್ಮನ ಜೊತೆ ಸೇರಿ ಹೇಗೆಲ್ಲಾ ಹಿಂಸಿಸಿದ್ದರು ನೆನಪಾದಾಗ, ಈಗಷ್ಟೇ ಬಂದ ದಾರಿಯಲ್ಲೇ ತಿರುಗಿ ಓಡಿ ಹೋಗಿ ಬಿಡುವ ಮನಸ್ಸಾಗಿತ್ತು ಸುನೀತಾಳಿಗೆ.


ಅದೇ ಮನೆಯಲ್ಲಿ ಒಂದೊಂದು ತುತ್ತನ್ನು ಬೇಡಿ ತಿಂದ ನೆನಪಾಗಿತ್ತು. ಮಕ್ಕಳಾಗದಿದ್ದದ್ದು ನನ್ನದೇ ದೋಷ ಎಂದು ಹೀಗಳೆದು ಇಲ್ಲದ ವೃತ ಮಾಡಿಸಿ... ಪಥ್ಯದ ರುಚಿಯಿಲ್ಲದ ಅಡುಗೆ ತಿನ್ನಿಸಿ... ಕಹಿ ಮದ್ದು ಕುಡಿಸಿ ಸಜೀವ ಹೆಣವಾಗಿಸಿದ್ದು ಇದೇ ವ್ಯಕ್ತಿ ಮತ್ತು ಇವನ ಅಮ್ಮಾ. ಯಾಕೋ ಗಂಟಲು ಉಬ್ಬಿ ಕಣ್ಣಿಂದ ನೀರು ತೊಟ್ಟಿಕ್ಕಿತ್ತು.


ಊರ ಹಿರಿಯರೊಬ್ಬರು ಬಂದು ಹೇಳಿದ್ದರು ಸುನೀತಾಳ ಬಳಿ... ನಿನ್ನ ಮಗನನ್ನು ಕರೆಸು ಸುನೀತಾ ಅಂತ್ಯಕ್ರಿಯೆ ಮಾಡಬೇಕು.


ನನ್ನ ಮಗಾ ಯಾಕೆ ಮಾಡಬೇಕು ಅಂತ್ಯಕ್ರಿಯೆ ಸುನೀತಾ ಕೇಳಿದ್ದಳು ಆಶ್ಚರ್ಯದಿಂದ.


ಆಗ ಅವರು ಉತ್ತರಿಸಿದ್ದರು "ನಿನ್ನ ಮಗಾ ಸಾಕುಮಗನಾದರೂ.., ನಿನಗೆ ಮಗಾ ಅಂದರೆ ಇವನಿಗೂ ಮಗಾ... ಈಗ ನೀವಿಬ್ಬರು ಇಲ್ಲಾ ಅಂದರೆ ನಿನ್ನ ಗಂಡನದು ಅನಾಥ ಹೆಣ ವಾಗುತ್ತದೆ."


ಮಗುವಾಗದಿದ್ದದ್ದು ನನ್ನದೇ ದೋಷ ಎಂದು ಏಕಮುಖ ತೀರ್ಮಾನ ಮಾಡಿ... ಮತ್ತೊಂದು ಮದುವೆಯಾಗಿ... ಆ ಹೆಂಡತಿ ಬಿಟ್ಟವನಾಗಿ ಅಲ್ಲಿ ಮಲಗಿದ್ದ ಅನಾಥ ಹೆಣವನ್ನು ನೋಡಿ ಅವಳ ಮುಖದಲ್ಲೊಂದು ವಿಷಾದದ ಛಾಯೆ ಇತ್ತು.


ಹೆಣವನ್ನು ನೋಡುತ್ತಾ ಹೇಳಿದ್ದಳು "ಆಯ್ತು ನನ್ನ ಮಗನನ್ನು ಕರೆಸುತ್ತೇನೆ ಅಂತ್ಯಕ್ರಿಯೆ ಮಾಡಲು."


ಬದುಕೆಲ್ಲಾ ಪ್ರೇತದಂತೆ ಕಾಡಿದ್ದ ಮನುಷ್ಯನಿಗೆ ಮೋಕ್ಷ ಕೊಡಿಸಬೇಕಿತ್ತು. ಧರ್ಮವನ್ನು ಮರೆತು ಬಾಳಿದ್ದ ಮನುಷ್ಯ ಬದುಕ ಮುಗಿಸಿದ್ದ ಅವನಿಗೆ ಮೋಕ್ಷದ ದಾರಿ ತೋರಿಸುವುದು ಅವಳ ಧರ್ಮವಾಗಿತ್ತು..!!






ಕವಿತಾ ಗಿರೀಶ ಹೆಗಡೆ ️

88 views0 comments
bottom of page