top of page

ಬೇಂದ್ರೆ ಕಾವ್ಯ - ಒಂದು ವಿಶಿಷ್ಟ ಕವನ

ಏಲಾಗೀತ

***( ಗಂಗಾವತರಣದಿಂದ)

ಏಲಾವನ ಲವಲೀಬನ ಲವಂಗ ಬನಗಳಲೀ

ನಾಗಲತಾ ಸಂಕುಲ ಬನವಾಸಿಯ ಜನಗಳಲೀ

ಲೀಲಾಂದೋಲಿತ ದೋಲಾ ಲಲನಾಮಣಿಗಳಲಿ/ಏಲಾ


ಏಲಾಪದ ಲೀಲಾಪದ ಆಲಾಪದ ಸರಣೀ

ಸಖಸಖಿಯರ ಮೇಳಾಪದೆ ತೆರೆದಿರೆ ಎದೆ ಭರಣಿ

ಆಲಿಸುತಿವೆ ಮಾಲಿಸುತಿವೆ ಹರಿಣದ ಜತೆ ಹರಿಣಿ/


ಙಂ ಞಣನಮಾ, ಅಂ ಜ್ಞ ಓಂ ಜಂ ಸಂ ಶಂ ಎಂಬಾ

ಅಂಬಾಗರೆವುದು ವಾಣಿಯ ವೀಣೆಯು ಬಾಯ್ತುಂಬಾ

ಬಾ ಅಮ್ಮಾ ಅಮಾ ಬಾ ಬಾರೇ ಜಗದಂಬಾ/


ಉಸಿರುಸಿರಲಿ ಸರಿವರಿದೂ ಊದೂದುತ ನಲಿದು

ದನಿಯೆ ನದಿಯೊಲಿ ಚಲಿಸಿತು ಕೊಂಕೊಂಕೆನೆ ಒಲೆದು

ಅಲೆಯಾಯಿತು ಬಲೆಯಾಯಿತು ಜಗದಗಲಕೆ ಸೆಲೆದು/


ಕಿನ್ನರಿ ಕಿನ್ನರಿ ಮಿಥುನವು ಅರೆಅರೆ ಮೈಗೂಡಿ

ನುಡಿಯಲಿ ಹುದುಗಿದ ಹುರುಳೊಳು ಹದುಳದೊಳೊಡಮೂಡಿ

ನಾಲಿಗೆ ನಾಡಿಯನಾಡಿಸಿ ಸ್ವರಮೂರ್ತಿಯ ಮಾಡಿ/


ನರಗಳಲಿಂಗಿಂಗೀ ನರನಾಳದೆ ತಂಗೀ

ಲಾಸ್ಯದಿ ಹಾಸ್ಯವ ಮಿಂಚಿಸಿಪರಶಿವನರ್ಧಾಂಗಿ

ತಾಲದಿ ಕಾಲವ ಸೊಲ್ಲಿಸುವಂತಿದೆ ಈ ಭಂಗೀ/


ನೆಲೆಗೆಡಿಸುವ ವಾಸನೆಗಳ ಎದೆಬೀಜವ ಸೀಳಿ

ರತಿರಮಣನ ನಿಜಜನಕನ ಎದೆಯಾಳವನಾಳಿ

ಹೃದಯಾಕೂತಿಯ ಅನುಪಮ ಲಾವಣ್ಯವ ತಾಳಿ/


ಸ್ವಾದದ ನಾದದ ಮೋದದ ಒಳಬಸಿರನೆ ಬಗೆದು

ಹುಂಕಾರದ ಒಳನೂಲನು ಮೆಲ್ಲನೆ ಹೊರದೆಗೆದು

ಶಬ್ದಕೆ ಹಾಸಿಗೆಯಾಗಿಹ ತನಿಮೌನದಿ ಮುಗಿದು/


ಯಾಳದ ಜತಿ ಏಳೆಯ ಗತಿ ಏಳೇಳೇಳೆಂದು

ಎಬ್ಬಿಸಿ ಮಬ್ಬನು ಚದುರಿಸಿ ಬಾಳ್ ಬಾಳ್ ಬಾಳೆಂದು

ತಂತಿಯ ತಾಳಕೆ ಮಿಡಿದರೆ , ಎಲ್ಲಾಯಿತು ಒಂದು/


ಏಳೆಯ ಬಸಿರೊಳು ಮಲಗಿದ ಯಾವುದೊ ಗತಿ ಚಿತ್ರ

ದನಿ ಪಡೆದಿತು, ತಿಳಿದೆದ್ದಿತು ಕಣ್ಬಡೆದು ವಿಚಿತ್ರ

ಆ ಕ್ಷಣವನು ಈ ಕ್ಷಣವನು ಮಾಡಿತು ಸುಪವಿತ್ರ/

ಏಲಾವನ...‌‌‌‌‌


- ಅಂಬಿಕಾತನಯದತ್ತ


ಇದೊಂದು ಅಪರೂಪದ, ವೈಶಿಷ್ಟ್ಯಪೂರ್ಣವಾದ ಕವನ. ಮೊದಲ ಓದಿಗೆ ಅರಗಿಸಿಕೊಳ್ಳಲಾಗದ ರಚನೆ. ಬೇಂದ್ರೆ ಓರ್ವ ದೃಷ್ಟಾರ ಕವಿ. ಅವಧೂತ ಕವಿ. ಅವರಿಗೆ ಕಾವ್ಯ ಕೇವಲ ಶಬ್ದ-ಯೋಗವಲ್ಲ. ನಾದ-ಯೋಗ. ಅವು ಶಬ್ದಚಿತ್ರಗಳಾಗಿ ನಮ್ಮ ಕಣ್ಣಮುಂದೆ ನಿಲ್ಲುತ್ತವೆ. ಅದರಿಂದ ಹೊರಬರುವ ನಾದದಲ್ಲಿ ನಮ್ಮ ಮನ ಲೀನವಾಗಿಬಿಡುತ್ತದೆ. ಈ ಏಲಾಗೀತದ ಒಳತಿರುಳಿನ ಬಗ್ಗೆ ಬೇಂದ್ರೆಕಾವ್ಯದ ಒಳಹೊಕ್ಕವರೊಬ್ಬರ ವಿವರಣೆಯನ್ನು ನಾಳೆ ನೋಡೋಣ.


- ಲಕ್ಷ್ಮೀನಾರಾಯಣ ಶಾಸ್ತ್ರಿ

5 views0 comments
bottom of page