top of page

ಬುಕ್ ಫೇಸ್-೨೬೫

ತಾಲೂಕಿನ ಪ್ರಾತಿನಿಧಿಕ ಕವನಸಂಕಲನ


" ಹೊನ್ನಾವರದ ಕವಿತೆಗಳು"

************

ಕನ್ನಡ ಸಾಹಿತ್ಯ ಪರಿಷತ್ತಿನ ಹೊನ್ನಾವರ ತಾಲೂಕಾ ಘಟಕದಿಂದ ಪ್ರಕಟಗೊಂಡ ಈ ಕವನ ಸಂಕಲನ ಆ ತಾಲೂಕಿನ ಕಾವ್ಯ ಲೋಕದ ಸುಮಾರು ಒಂದು ಶತಮಾನದ ಅವಧಿಯ ಸ್ಥೂಲ ಸ್ವರೂಪ ದರ್ಶನ ಮಾಡಿಸುವಂತಹದು. ಇದರಲ್ಲಿ ೬೫ ಕವಿತೆಗಳಿದ್ದು ಪಾಂಡೇಶ್ವರ, ವಿ. ಜಿ. ಭಟ್ಟರಂತಹ ಹಿರಿಯರಿಂದ ಇಂದಿನ ಹೊಸ ಪೀಳಿಗೆಯವರತನಕ ಕಾವ್ಯ ಬೆಳೆದು ಬಂದ ಬಗೆಯನ್ನು ಗುರುತಿಸಲು ಈ ಸಂಕಲನ ಸಹಾಯಕವೆನಿಸಬಹುದಾಗಿದೆ. ಇಂತಹ ಪ್ರಯತ್ನ ಸ್ವಾಗತಾರ್ಹವೇ ಆಗಿದೆ.

ತಾಲೂಕಾ ಕಸಾಪ ಪದಾಧಿಕಾರಿಗಳೇ ಆಗಿರುವ ಪ್ರೊ. ನಾಗರಾಜ ಹೆಗಡೆ ಅಪಗಾಲ ಮತ್ತು ಪ್ರಶಾಂತ ಮೂಡಲಮನೆ ಇವರ ಸಂಪಾದಕತ್ವದಲ್ಲಿ ಮೂಡಿಬಂದಿರುವ ಈ ಸಂಕಲನದ ಮೂಲಕ ಪರಿಷತ್ತಿನ ಚಟುವಟಿಕೆಗಳಿಂದ ಸಂಗ್ರಹವಾಗಿ ಉಳಿದ ಹಣ ಸದುಪಯೋಗವಾಗುವಂತೆ ಮಾಡಲಾಗಿದೆ.

ಈ ಸಂಕಲನದಲ್ಲಿ ನವೋದಯ, ನವ್ಯ, ದಲಿತ ಬಂಡಾಯ ಪ್ರಕಾರಗಳ ಕವನಗಳನ್ನೆಲ್ಲ ಕಾಣಬಹುದಾಗಿದೆ. ಪಾಂಡೇಶ್ವರರು ನವೋದಯದ ಪ್ರಮುಖ ಕವಿಗಳಲ್ಲೊಬ್ಬರಾಗಿದ್ದರೆ ವಿ. ಜಿ. ಭಟ್ಟರು ನವ್ಯ ಕಾವ್ಯದ ರೂವಾರಿಗಳಲ್ಲೊಬ್ಬರು. ಆರ್. ವಿ. ಭಂಡಾರಿ , ಜಿ.ಎಸ್. ಅವಧಾನಿ ಮೊದಲಾದವರು ಬಂಡಾಯದ ಪ್ರತಿನಿಧಿಗಳಾಗಿ ಕಾಣಿಸಿಕೊಂಡವರು. ಈ ಯಾವ ಪಂಥಪಂಗಡಗಳಿಗೆ ಸೇರದ ಅಲಿಪ್ತ ವರ್ಗದ ಕವಿಗಳೂ ಇಲ್ಲಿ ಇದ್ದಾರೆ. ಗಂಗಾಧರ ಶಾಸ್ತ್ರಿ, ಮಾಳಕೋಡು ನಾರಾಯಣ, ಡಾ. ಎನ್. ಆರ್. ನಾಯಕ, ಡಾ. ಶ್ರೀಪಾದ ಶೆಟ್ಟಿ, ಡಾ. ಶ್ರೀಪಾದ ಕಣ್ಣಿ , ಸುಮುಖಾನಂದ ಜಲವಳ್ಳಿ, ವಿಡಂಬಾರಿ, ಕನ್ನಿಕಾ ಹೆಗಡೆ , ಕೃಷ್ಣ ಶರ್ಮಾ, ಎಲ್. ಎಸ್. ಶಾಸ್ತ್ರಿ ಮೊದಲಾದವರ ಒಂದು ಸಮಕಾಲೀನ ಪೀಳಿಗೆಯ ಜೊತೆಗೆ ಎಚ್. ಎಸ್. ಅನುಪಮಾ, ರಾಜು ಹೆಗಡೆ, ಮಾಸ್ತಿಗೌಡ, ನಾಗರಾಜ ಹೆಗಡೆ, ಕೃಷ್ಣಮೂರ್ತಿ ಹೆಬ್ಬಾರ , ಕಮಲಾ / ಗಣಪತಿ ಕೊಂಡದಕುಳಿ ಮೊದಲಾದವರಿಂದ ಈಚಿನ ಹೊಚ್ಚಹೊಸ ಕವಿಗಳ ಕವನಗಳನ್ನು ಒಳಗೊಂಡ ಈ ಸಂಕಲನ ಉತ್ತರಕನ್ನಡದ ಕಾವ್ಯದ ಬೆಳವಣಿಗೆಯ ರೀತಿಯನ್ನು ಕೆಲಮಟ್ಟಿಗೆ ಪರಿಚಯಿಸಿಕೊಡುತ್ತದೆ. ಇದನ್ನು ಪರಿಪೂರ್ಣ ಅಥವಾ ಸಮಗ್ರ ಎನ್ನುವಂತಿಲ್ಲ. ಕವಿಗಳ ಕಿರು ಪರಿಚಯವನ್ನು ಹಾಕಬಹುದಿತ್ತೇನೊ. ಅಲ್ಲದೇ ಒಂದೇ ಕವನದಿಂದ ಒಬ್ಬ ಕವಿಯ ಸಾಮರ್ಥ್ಯವನ್ನು ಅಳೆಯಲುಬರುವದಿಲ್ಲ. ಇನ್ನೂ ಕೆಲ ಹೊಸ ಕವಿಗಳು ಬದಲಾದ ಕಾವ್ಯಮಾರ್ಗವನ್ನು ಗುರುತಿಸಿಲ್ಲವೆನಿಸುತ್ತದೆ.

ಆದರೆ ಒಟ್ಟಿನಲ್ಲಿ ಇದೊಂದು ಒಳ್ಳೆಯ ಪ್ರಯತ್ನವೆನ್ನುವದರಲ್ಲಿ ಸಂದೇಹವಿಲ್ಲ. ಸಂಪಾದಕದ್ವಯರು ಅಭಿನಂದನಾರ್ಹರು. ಇಲ್ಲಿ ನನ್ನ ಒಂದು ಸಲಹೆಯೆಂದರೆ ಪ್ರತಿಯೊಂದು ತಾಲೂಕಾ ಘಟಕ ಅಥವಾ ಜಿಲ್ಲಾ ಘಟಕ ಆ ತಾಲೂಕಿನ / ಜಿಲ್ಲೆಯ ಸಾಹಿತ್ಯಚರಿತ್ರೆಯನ್ನು ಪ್ರಕಟಿಸುವ ಕೆಲಸ ಮಾಡಿದರೆ ಅದು ಸಾಹಿತ್ಯ ಕ್ಷೇತ್ರಕ್ಕೆ ಬಹಳ ಮಹತ್ವದ ಕೊಡುಗೆಯೆನಿಸಬಲ್ಲದು. ಮುಂದಿನ ವರ್ಷಗಳಲ್ಲಿ ಆ ಕೆಲಸವೂ ಆಗಲಿ .


- ಎಲ್‌. ಎಸ್. ಶಾಸ್ತ್ರಿ





11 views0 comments
bottom of page