top of page

ಬುಕ್ ಫೇಸ್

ಗಾಂಧೀಜಿಯವರ ಕಥೆ_

ಗಳನ್ನು ಹೇಳಿದ

ಉದಯಕುಮಾರ ಹಬ್ಬು ಅವರು.

_______________

ದೇಶದ ಮಹಾಪುರುಷರನ್ನೂ ವಿವಾದಗಳಿಗೆ ಸಿಲುಕಿಸುವಂತಹ ವಿಶಿಷ್ಟ ಅಥವಾ ವಿಚಿತ್ರ ಕಾಲಘಟ್ಟದಲ್ಲಿ ಇರುವ ಸಂದರ್ಭದಲ್ಲಿ ನಮ್ಮ ನಡುವಿನ ಹಿರಿಯ ಸಾಹಿತಿ ಉದಯ ಕುಮಾರ ಹಬ್ಬು ಅವರು " ಗಾಂಧೀಜಿಯವರ ಕಥೆಗಳು " ಎಂಬ ಈ ಪುಸ್ತಕವನ್ನು ನಮ್ಮ ಕೈಗಿಡುತ್ತಿದ್ದಾರೆ.

ಗಾಂಧೀಜಿಯವರ ಕುರಿತ ಪುಸ್ತಕಗಳಿಗೆ ಲೆಕ್ಕವಿಲ್ಲ. ಈಚಿನ ಕೆಲ ವರ್ಷಗಳನ್ನು ಬಿಟ್ಟರೆ ಸಾಮಾನ್ಯವಾಗಿ ಗಾಂಧೀಜಿಯವರನ್ನು ಜಗತ್ತು" ಭಾರತದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ " ಎಂಬ ಒಂದೇ ದೃಷ್ಟಿಯಿಂದ ನೋಡುತ್ತಾ ಬಂದಿತ್ತು. ಆದರೆ ಇಂದು ಅವರ ತಪ್ಪು/ ದೋಷ/ ದೌರ್ಬಲ್ಯವನ್ನು ಹುಡುಕಿ ಹುಡುಕಿ ಹೊರ ತೆಗೆಯುವ ಒಂದು ಪ್ರವೃತ್ತಿ ಕಂಡುಬರುತ್ತಿದೆ. ಅದು ಚರ್ಚೆಯ ಬೇರೆ ವಿಷಯವಾಗಿದ್ದು ನಾನು ಅದನ್ನು ಇಲ್ಲಿ ವಿಸ್ತರಿಸಬಯಸುತ್ತಿಲ್ಲ.

ಹಬ್ಬು ಅವರು ಗಾಂಧೀಜಿಯವರ ಸುತ್ತಲಿನ ಘಟನೆಗಳನ್ನು ಆಧರಿಸಿ 64 ಚಿಕ್ಕ ಚಿಕ್ಕ ಕಥೆಗಳನ್ನು 128 ಪುಟಗಳಲ್ಲಿ ಕಟ್ಟಿಕೊಡುವ ಕೆಲಸ ಮಾಡಿದ್ದಾರೆ. ಕೆಲವು ನೇರವಾಗಿ ಗಾಂಧೀಜಿಯವರ ಸಂಬಂಧಿಸಿದಂತೆ ಇದ್ದರೆ, ಕೆಲವು ಅವರ ಹತ್ತಿರದವರ ಅನುಭವಗಳನ್ನು ಆಧರಿಸಿವೆ. ಗಾಂಧೀಜಿ ಬಗ್ಗೆ ಈಗಾಗಲೇ ಓದಿಕೊಂಡವರಿಗೆ ತಿಳಿದಿರುವ ಕಥೆಗಳು ಇರುವಂತೆ ತಿಳಿಯದೇ ಇರುವ ಕಥೆಗಳೂ ಕೆಲವು ಇರಬಹುದು. ಆ ಕಥೆಗಳನ್ನು ಓದಿಯೇ ಅವುಗಳ ಸ್ವಾರಸ್ಯ, ಮಹತ್ವ ಅರಿಯಬೇಕು.

ಗಾಂಧೀಜಿಯವರು ಲೋಕಮಾನ್ಯ ಬಾಲಗಂಗಾಧರ ತಿಲಕರ ನಿಧನದ ನಂತರ 1920 ರಿಂದ ಭಾರತದ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿಕೊಂಡಿದ್ದು. ಕೆಲ ವರ್ಷ ತಿಲಕರೊಂದಿಗಿದ್ದು , ದೇಶ ಸಂಚಾರ ಮಾಡಿ ಅನುಭವಗಳನ್ನು ಪಡೆದುಕೊಂಡು ನಂತರ 1947 ರಲ್ಲಿ ಸ್ವಾತಂತ್ರ್ಯ ಸಿಗುವತನಕ ಭಾರತೀಯರನ್ನು ಒಂದುಗೂಡಿಸಿ ಹೋರಾಟ ನಡೆಸಿದರು. ಕ್ರಾಂತಿಕಾರಿಗಲ ತ್ಯಾಗ ಬಲಿದಾನ ಮತ್ತು ಲಕ್ಷಾಂತರ ಭಾರತೀಯರ ಹೋರಾಟದ ಫಲವಾಗಿ ಸ್ವಾತಂತ್ರ್ಯ ದೊರಕಿದ್ದು. ಆದರೆ ಅದರಲ್ಲಿ ಗಾಂಧೀಜಿಯವರ ಪಾತ್ರದ ಮಹತ್ವವನ್ನು ಯಾರೂ ನಿರಾಕರಿಸಲು ಬರುವುದಿಲ್ಲ. ಗಾಂಧೀಜಿಯವರಿಂದ ಕೆಲ ತಪ್ಪು ಅಥವಾ

ಲೋಪದೋಷ ಆಗಿರಬಹುದು. ಅದಕ್ಕಾಗಿ ಅವರ ತೇಜೋವಧೆ ಮಾಡುವ ಅಗತ್ಯವಿಲ್ಲ.

ಗಾಂಧೀಜಿಯವರ ಕಥೆಗಳು ಎಂಬ ಈ ಪುಸ್ತಕ ಗಾಂಧೀಜಿಯವರ ವ್ಯಕ್ತಿತ್ವ ದ ಹಲವು ಮುಖಗಳನ್ನು ತೆರೆದಿಡುತ್ತದೆ. ಒಂದು ಮಾತನ್ನು ನೆನಪಿಡಬೇಕು _ ಗಾಂಧೀಜಿ ನಮ್ಮ ಹಾಗೆ ತಮ್ಮ ತಪ್ಪುಗಳನ್ನು ಬಚ್ಚಿಟ್ಟುಕೊಂಡವರಲ್ಲ. ಅದನ್ನೂ ಹೇಳಿಕೊಂಡಿದ್ದಾರೆ. ಆ ಆತ್ಮಸ್ತೈರ್ಯ ಎಷ್ಟು ಜನರಲ್ಲಿದ್ದೀತು? ಬೇರೆಯವರ ತಪ್ಪುಗಳನ್ನು ಹುಡುಕುವುದು ಸುಲಭ. ಒಬ್ಬ ಗಾಂಧೀಜಿ ಆಗುವುದು ಸುಲಭವಲ್ಲ.

ಗಾಂಧೀಜಿಯವರಿಗೆ ಸಂಬಂಧಿಸಿದಂತೆ ಟ್ಯಾಗೋರ್, ಸರದಾರ ಪಟೇಲ್, ಕಾಲೇಲಕರ ಸಹಿತ ಹಲವರ ಅನುಭವ ಅನಿಸಿಕೆಗಳಲ್ಲದೆ ಜನಸಾಮಾನ್ಯರಿಗೆ ಆದ ಅನುಭವಗಳೂ ಇಲ್ಲಿವೆ. ಆಸಕ್ತಿ ಇದ್ದವರು ಓದಬೇಕು. ಓದಿಸಬೇಕು. ಗಾಂಧೀಜಿಯವರನ್ನು ದ್ವೇಷಿಸುವವರು ಸಹ ಓದುವದರಲ್ಲಿ ತಪ್ಪೇನಿಲ್ಲ.

- ಎಲ್. ಎಸ್. ಶಾಸ್ತ್ರಿ




6 views0 comments
bottom of page