top of page

ನಿಸರ್ಗವನ್ನು ರಕ್ಷಿಸುವ ಗ್ರಾಮೀಣ ದೈವೀಶಕ್ತಿಗಳು (ನನ್ನ ಕುತೂಹಲಕ್ಕೆ ಕಾರಣವಾದ ಕೆಲ ಸಂಗತಿಗಳು)

ನಾವು ಎಷ್ಟೋಸಲ ನಮ್ಮ ಗ್ರಾಮೀಣ ಜನಪದದಲ್ಲಿರುವ ಕೆಲವು ಆಚರಣೆಗಳನ್ನು ನೇರವಾಗಿ ಮೂಢನಂಬಿಕೆ, ಅಂಧಶ್ರದ್ಧೆ ಎಂದೆಲ್ಲ ಹೇಳಿ ನಾವು ಸುಧಾರಿಸಿದ ಆಧುನಿಕ ಯುಗದವರೆಂದುಕೊಂಡು ನಮ್ಮ ಬೆನ್ನು ನಾವೇ ಚಪ್ಪರಿಸಿಕೊಳ್ಳುವದುಂಟು. ಆದರೆ ಆ ಜನಪದರ ಆಚರಣೆಗಳಲ್ಲಿ ಅಡಗಿದ ಕೆಲವು ಮಹತ್ವದ ಸಂಗತಿಗಳನ್ನು ನಾವು ಗಮನಿಸುವದೇ ಇಲ್ಲ. ಇಲ್ಲಿ ಅಂತಹ ಒಂದು ಸಂಗತಿ ನನ್ನ ಗಮನಕ್ಕೆ ಬಂದಿದ್ದನ್ನು ಹೇಳಬೇಕಾಗಿದೆ.

ಕೆಳಗಿನ ಚಿತ್ರ ನೋಡಿ. ಇದು ಕುಂದಾಪುರ ತಾಲೂಕಿನ ಹಲ್ಸನಾಡು ಭಾಗದ ಕುಂದ ಎಂಬ ಪ್ರದೇಶದಲ್ಲಿರುವ " ಶ್ರೀ ಹಾಡಿ ಚಿಕ್ಕು ದೈವಸ್ಥಾನ". ನನ್ನ ಮಾವ ಕರಣಿಕರ ಕುಟುಂಬ ಮತ್ತು ಕರಣಿಕ ಸಮುದಾಯದವರು ಇತರ ಕೆಲ ಕುಟುಂಬದವರು, ಹಿಂದಿನಿಂದಲೂ ನಂಬಿ ಆರಾಧಿಸುತ್ತ ಬಂದ ದೈವಸ್ಥಾನ. ಕಾಡಿನ ಮಧ್ಯದಲ್ಲಿರುವ ಈ ದೈವಸ್ಥಾನವನ್ನು ಅಭಿವೃದ್ಧಿ ಪಡಿಸಿ ಅಲ್ಲೊಂದು ಆಧುನಿಕ ಮಾದರಿಯ ಗುಡಿ ಕಟ್ಟುವ ವಿಚಾರ ಆ ಮನೆಯವರಿಗೆ ಬಂದಾಗ ಅವರೆಲ್ಲ ಸೇರಿ ಈ ವಿಷಯವಾಗಿ ಪದ್ಧತಿಯಂತೆ ದೈವಜ್ಞರನ್ನು ಕರೆಸಿ ಅವರ ಮೂಲಕ ದೈವ ಪ್ರಶ್ನೆಯನ್ನು ಇರಿಸಿ ಜ್ಯೋತಿಶ್ಶಾಸ್ತ್ರದ ಆಧಾರದಲ್ಲಿ ಪರಿಹಾರ ಕೇಳಿಕೊಳ್ಳಲಾಯಿತು. ವೇದಮೂರ್ತಿ ಚೆನ್ನಕೇಶವ ಭಟ್ಟ ಅನಗಳ್ಳಿ ಅವರು ಈ ಕಾರ್ಯ ನೆರವೇರಿಸಿಕೊಟ್ಟರು.

ಈ ಸಂದರ್ಭದಲ್ಲಿ ದೈವದ ಮೂಲಕ ಹೊರಬಂದ ಕೆಲ ವಿಚಾರಗಳು ನನಗೆ ತುಂಬ ಅಚ್ಚರಿಯನ್ನುಂಟುಮಾಡಿದವು. ಈ" ಕಾಡಿನ ದೈವ" ಹೇಗೆ ತನ್ನ ಮೂಲ ಸ್ವರೂಪವನ್ನು ಕಾದುಕೊಳ್ಳಬಯಸಿತೆಂಬುದನ್ನು ಇಲ್ಲಿ ಗಮನಿಸಬಹುದಾಗಿದೆ. ಆ ದೈವ ಸ್ಪಷ್ಟವಾಗಿ ಅಲ್ಲಿ ಬೇರೆ ಯಾವುದೇ ಭೌತಿಕ ಸ್ವರೂಪದ ನಿರ್ಮಾಣವನ್ನು ನಿರಾಕರಿಸಿ ಮೂಲ ಸಹಜ ಸ್ವರೂಪದಲ್ಲೇ ಇರಿಸಿಕೊಳ್ಳಬೇಕೆಂದು ಅಪ್ಪಣೆ ವಿಧಿಸಿದ್ದಲ್ಲದೆ ಪಾರಂಪರಿಕ ಪದ್ಧತಿಯ ಪೂಜೆ ಮಾಡಬಹುದು ಹೊರತು ಯಾವುದೇ ಭೂಮಿ ಅಗೆಯುವ , ಕಟ್ಟಡ ನಿರ್ಮಿಸುವ ಕೆಲಸ ಮಾಡಬಾರದು ಮತ್ತು ಅಲ್ಲಿಯ ಮರಗಳನ್ನು ಕಡಿಯಬಾರದು, ಒಣ ತರಗೆಲೆಗಳನ್ನು ಸಹ ಅಲ್ಲಿಂದ ಪೂರ್ತಿ ತೆಗೆಯಬಾರದು. ಅದರಿಂದ ಅವುಗಳ ನಡುವೆ ಬದುಕುವ ಸೂಕ್ಷ್ಮ ಜೀವಿಗಳಿಗೆ ತೊಂದರೆಯಾಗುತ್ತದೆ. ಬಾವಿ ತೋಡುವ ಅಗತ್ಯವೂ‌ಇಲ್ಲ. ಮಳೆಗಾಲದ ನೀರು ಹೋಗುವಂತೆ ತೋಡು, ಇಂಗುಗುಂಡಿ ನಿರ್ಮಿಸಬಹುದು. ಅಂದರೆ ಹಾಡಿಯ ಅಂದರೆ ಕಾಡಿನ ಪರಿಸರ ವ್ಯವಸ್ಥೆಗೆ ಯಾವುದೇ ರೀತಿ ಭಂಗ ತರಬಾರದು" ಎಂದು ದೈವ ಅಪ್ಪಣೆ ಕೊಡಿಸಿತು.

ಆ ಅಪ್ಪಣೆಯಂತೆ ಅಲ್ಲಿ ನಡೆದುಕೊಳ್ಳುವ ಕುಟುಂಬದವರು ಈಗ ಹೊಸ ಯಾವುದೇ ನಿರ್ಮಾಣ ಮಾಡದಿರಲು ನಿರ್ಧರಿಸಿದ್ದಾರೆ. ನಮ್ಮ ಜಾನಪದ ಜೀವನದಲ್ಲಿ ನಿಸರ್ಗವೇ ಹಿಂದಿನ ಜನರ ಮೊದಲ ಆರಾಧನೆಯ ದೇವರೆನಿಸಿತ್ತು. ನಿಸರ್ಗವೇ ತಮ್ಮನ್ನು ಕಾಪಾಡುವದು ಎನ್ನುವ ದೃಢವಾದ ನಂಬಿಕೆ ಅಂದಿನವರಲ್ಲಿತ್ತು. ಕ್ರಮೇಣ ಕಾಡು ನಾಶವಾಗುತ್ತ, ಪರಂಪರಾಗತ ರೂಢಿರಿವಾಜುಗಳು ಬದಲಾಗುತ್ತ, ಆಧುನಿಕತೆಯ ಆಡಂಬರಗಳಿಗೆ ಜನ ಮರುಳಾಗುತ್ತ ಬಂದುದನ್ನೂ ನಾವು ಕಾಣುತ್ತೇವೆ. ಈ ದೃಷ್ಟಿಯಿಂದ ಮೊನ್ನೆ ಇಲ್ಲಿ ದೈವವೇ ನೀಡಿದ ಪರಿಹಾರದ ಉತ್ತರ ನಮ್ಮ ಕಣ್ಣು ತೆರೆಸಬೇಕಾಗಿದೆ. ಕಾಡಿನ ರಕ್ಷಣೆಗೆ ಮಹತ್ವ ನೀಡಬೇಕಾಗಿದೆ. ಇದನ್ನೆಲ್ಲ ನಾವು ಮೂಢ ನಂಬಿಕೆಗಳೆಂದು ಮೂಲೆಗೆ ಸರಿಸಬೇಕಾಗಿಲ್ಲ. ತನ್ನನ್ನು ತಾನೇ ರಕ್ಷಿಸಿಕೊಳ್ಳಲು ಈ ಕಾಡಿನ ದೈವ ನೀಡಿದ ಸಲಹೆಗಳನ್ನು ಯಾರೂ ಅಲಕ್ಷಿಸಲಾಗದು. ಜನರಿಗೆ ಇಂತಹ ಮಾರ್ಗದರ್ಶನ ನೀಡಿದ ಆ ದೈವಕ್ಕೆ ಶರಣು ಶರಣು.


ಎಲ್.ಎಸ್.ಶಾಸ್ತ್ರಿ




17 views0 comments
bottom of page