top of page

ದೀಪ ಪ್ರಕಾಶ

ಬೆಳಕಿನ ಹಬ್ಬ ದೀಪಾವಳಿ ಲಂಬಾಣಿ ಸಮಾಜದಲ್ಲಿ ಅತೀ ವಿಜೃಂಭಣೆಯಿಂದ ಆಚರಿಸುವ ಹಬ್ಬ. ಯುವತಿಯರ ಹಬ್ಬವೆಂದೇ ಕರೆಯಲ್ಪಡುವ ದೀಪಾವಳಿಯ ದಿನ ಸಾಯಂಕಾಲ ತಾಂಡಾದ ಯುವತಿಯರೆಲ್ಲ ಕೂಡಿಕೊಂಡು ನಾಯಕನ ಮನೆಯಂಗಳದಲ್ಲಿ ನೆರೆದಿದ್ದರು. ಮಣ್ಣಿನ ದೀಪದಲ್ಲಿ ಹರಳೆಣ್ಣೆ ಸುರಿದು ದೀಪವ ಹಚ್ಚಿ ನಾಯಕರ, ಕರಭಾರಿಯವರ, ಗುರು-ಹಿರಿಯರ ಅಪ್ತರ ಮನೆ-ಮನೆಗೆ ತೆರಳಿ ಆರತಿ ಬೆಳಗಿ ಶುಭಕೋರಲು ಈ ಕನ್ಯೆಯರೆಲ್ಲ ಶೃಂಗಾರ ಮಾಡಿಕೊಂಡು ಬಂದಿದ್ದರು. ನಾಯಕರ ಮನೆಗೆ ಆರತಿ ಬೆಳಗಿ ಮನ ತಣಿಸುವ ಹಾಗೂ ಇತರ ಮನೆಗಳಿಗೆ ಹೋಗಲು ಅನುಮತಿ ಬೇಡುವ ಉದ್ದೇಶ ಅವರದ್ದಾಗಿತ್ತು. ಅಲ್ಲದೆ ಪ್ರತಿ ಯುವತಿಯರ ಮನೋಮಂದಿರದಲ್ಲಿ ಮನೆ ಮಾಡಿ ಕುಳಿತ ಹೃದಯರಾಜನನ್ನು ಕಣ್ಣಂಚಿನಲ್ಲಿ ತುಂಬಿಕೊಳ್ಳುವ ಹುನ್ನಾರವೂ ಅವರದಾಗಿತ್ತು. ದೀಪದ ಬೆಳಕಿನಲ್ಲಿ ತಮ್ಮ ತಮ್ಮ ಕನಸಿನ ರಾಜನನ್ನು ಆರಾಧಿಸುತ್ತಿದ್ದರು. ಕತ್ತಲೆಯ ಸರಿಸಿ ಪ್ರತಿಯೊಬ್ಬರ ಮನದಂಗಳದಲ್ಲಿ ಮಮತೆಯ ಬೆಳಕು ಬಿತ್ತಲು ಹಾತೊರೆಯುತ್ತಿದ್ದರು.

ರಾತ ಅಂಧೇರಿ ಏ ದಿವಲೋ ಬಾಳಲಿಜೋ

ಪಾಣಿರೋ ತೊಟೋ ಏ ಝಾರಿ ಭರಲಿಜೋ.....!!ಪ!!

ಹಣತೆ ಕೈಯಲ್ಲಿ ಹಿಡಿದು ಹಲಗೆಯ ನಾದಕ್ಕೆ ಏಕತಾಲವಾಗಿ ಹೆಜ್ಜೆ ಹಾಕುವ ವನಿತೆಯರ ನೃತ್ಯ ಮನಸ್ಸಿಗೆ ಮುದನೀಡುತ್ತಿತ್ತು. ನಾಯಕ ಬರುವುದಕ್ಕಿಂತ ಮುಂಚೆಯೇ ಹುಡುಗರ ದಿಂಡು ಜಮಾ ಆಗಿ ಬಿಟ್ಟಿತು. ರಮಣಿಯರ ಬಳುಕುವ ಸೋಂಟು ತಮ್ಮ ಕಣ್ಮನಗಳಲ್ಲಿ ತುಂಬಿಕೊಳ್ಳುತ್ತ ಈ ಹಬ್ಬದ ಸಂದರ್ಭದಲ್ಲಿ ತಮ್ಮ ಜೀವನ ಸಂಗಾತಿಯರ ಅನ್ವೇಷಣೆ ಆರಂಭಿಸಿ ಬಿಟ್ಟಿದರು ಯುವಕರು.

ನೃತ್ಯ ಮಾಡುವ ತರುಣಿಯರ ನೇತೃತ್ವ ದೀಪಾ ವಹಿಸಿದಳು. ತಾಂಡಾದ ಕುಶಾ ಕಾರಭಾರಿಯ ಮೊಮ್ಮಗಳು ದೀಪಾ ತುಂಬ ಸುಂದರವಾಗಿದ್ದಳು. ದೀಪದ ಬೆಳಕಿನಲ್ಲಿ ಇನ್ನೂ ಚೆಲುವಾಗಿ ಕಾಣಿಸುತ್ತಿದ್ದಳು. ಎರಡು ತಿಂಗಳ ಹಿಂದೆಯಷ್ಟೇ ಅವಳ ಮದುವೆ ನಾಯಕನ ಮೊಮ್ಮಗ ಪ್ರಕಾಶನೊಂದಿಗೆ ನಿಶ್ಚಯವಾಗಿತ್ತು. ಪ್ರಕಾಶ ಪುಣೆಯಲ್ಲಿ ಯಾವುದೋ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದನು. ಹಬ್ಬಕ್ಕೆ ಬರುತ್ತೇನೆಂದು ಹೇಳಿದ್ದರಿಂದ ಅವಳ ಮುಖ ಲಜ್ಜೆಯಿಂದ ಕೆಂಪಗಾಗಿತ್ತು. ಗಂಡನ ಮನೆಗೆ ಆರತಿ ತೆಗೆದುಕೊಂಡು ಬಂದಳೆಂದು ಗೆಳತಿಯರೆಲ್ಲ ಅವಳನ್ನು ಚುಡಾಯಿಸಿ ರೇಗಿಸುತ್ತಿದ್ದರು.

ಹಬ್ಬಕ್ಕೆ ಮುಂಚೆ ವರುಷದಲ್ಲಿ ಯಾರ ಮನೆಯಲ್ಲಿ ಯಾರಾದರು ಮರಣಹೊಂದಿದರೆ ಅವರ ಮನೆಗೆ ತಾಂಡಾದ ಗುರು ಹಿರಿಯರೊಂದಿಗೆ ನಾಯಕ-ಕಾರಭಾರಿ ಹೋಗುತ್ತಾರೆ. ಕಳೆದ ಹಬ್ಬಕ್ಕೆ ನಮ್ಮ ಗುಂಪಿನಲ್ಲಿ ಇರುತ್ತಿದ್ದ ವ್ಯಕ್ತಿ ಇಂದು ನಮ್ಮೊಂದಿಗೆ ಇಲ್ಲ ಎನ್ನುವ ಭಾವನೆಯಿಂದ ಅವರ ಮನೆಗೆ ಸಾಂತ್ವನಪರ ಭೇಟಿ ನೀಡುತ್ತಾರೆ. ವಿಳ್ಯ, ಬೀಡಿ ತಂಬಾಕು ಮೆಲ್ಲುತ್ತ ನಾಲ್ಕು ಮಾತುಗಳನ್ನು ಆಡಿ ಮುಂದಿನ ಹಬ್ಬದ ಕಾರ್ಯಕ್ಕೆ ಚಾಲನೆ ಕೊಡುತ್ತಾರೆ. ಜೀವಿ ಎಂದ ಮೇಲೆ ಹುಟ್ಟು ಸಾವು ಬಂದೇ ಬರುತ್ತವೆ. ಮರಣ ಯಾರಿಗೂ ತಪ್ಪಲ್ಲ ಆದರೆ ಅಲ್ಪ ವಯಸ್ಸಿನಲ್ಲಿ ಬಂದ ಸಾವು ಆಪ್ತರಿಗೆ, ಮನೆ ಮಂದಿಗೆ ತುಂಬಾ ದುಃಖ ನೀಡುತ್ತದೆ. ತಂದೆ ಕಷ್ಟಪಟ್ಟು ಮಕ್ಕಳನ್ನು ಸಾಕಿ ಸಲುಹಿ ಒಳ್ಳೆಯ ದಾರಿಗೆ ತಂದ ಮೇಲೆ ಕುಳಿತು ನಾಲ್ಕು ತುತ್ತು ಹಾಯಾಗಿ ಉಂಡು ಮನೆಯಲ್ಲಿ ಇರಬೇಕೆಂದುಕೊಳ್ಳುವರಷ್ಟರಲ್ಲಿ ದೇವರು ಬೇರೆಯೇ ನಮ್ಮ ಉಡಿಯಲ್ಲಿ ಹಾಕಿರುತ್ತಾನೆ. ಹಾಗೆಯೇ ಕುಶಾ ಕರಭಾರಿಯ ಬದುಕಿನಲ್ಲಿ ಆ ಕರಾಳ ರಾತ್ರಿ ಉದಯಿಸಿತು. ಕಳೆದ ಸಿಜನಿನಲ್ಲಿ ಕಬ್ಬು ಕೊಯ್ಯಲೆಂದು ಮಗ-ಸೊಸೆ ಮುಕಾದಮ ಜೊತೆ ಹೋದವರು ಮರಳಿ ಮನೆ ಬಾಗಿಲು ಕಾಣಲೇ ಇಲ್ಲ. ಕಬ್ಬು ಹೇರಿದ ಟ್ರಾಕ್ಟರ್ ಗದ್ದೆಯಿಂದ ರಸ್ತೆಗೆ ಬರುತ್ತಿರಲು ಮನೆಯಿಂದ ಮಗಳು ದೀಪಾ ಪಿ.ಯು.ಸಿ. ಫರ್ಸ್ಟ್ ಕ್ಲಾಸಿನಲ್ಲಿ ಪಾಸಾಗಿದ್ದಾಳೆಂದು ಮತ್ತು ನಿಮ್ಮನ್ನು ನೆನೆಸುತ್ತಿದ್ದಾಳೆಂದು ಅಪ್ಪ ಫೋನ್ ಮಾಡಿದಾಗ ಖುಷಿಯಿಂದಲೇ ಸಿಟಿಗೆ ಹೋಗಿ ಮಿಠಾಯಿ ತರಬೇಕೆಂದು ಟ್ರಾಕ್ಟರ್ ಏರಲು ಹೋದ ಭೀಮಾ ಕಾಲು ಜಾರಿ ಟಾಯರ್ ಕೆಳಗೆ ಸಿಲುಕಿಕೊಂಡನು. ಗಂಡ ಟಾಯರ್ ಕೆಳಗೆ ಸಿಲುಕಿದನ್ನು ಕಂಡು ಹೌಹಾರಿದ ಲಕ್ಷ್ಮಿ ತಾನೂ ಟಾಯರ್ಕೆಳಗೆ ಬಿದ್ದು ತನ್ನ ಪ್ರಾಣ ಕಳೆದುಕೊಂಡಳು. ಮಗಳು ಪಾಸಾದ ಖುಷಿಯಲ್ಲಿ ಮಗಳ ಮುಖ ಕೂಡ ನೋಡದೆ ಅವಳನ್ನು ತಬ್ಬಲಿಯನ್ನಾಗಿ ಮಾಡಿ ದೇವರಿಗೆ ಪ್ರೀಯರಾದರು ದೀಪಾಳ ಅಪ್ಪ-ಅಮ್ಮ. ಅಂದಿನಿಂದ ತಬ್ಬಲಿ ದೀಪಾಳಿಗೆ ಕುಶಾ ಅಜ್ಜನೇ ಸರ್ವಸ್ವ. ಹರೆಯದ ಮಗ ಸೊಸೆಯ ಸಾವಿನಿಂದ ತತ್ತರಿಸಿ ಹೋದ ಕುಶಾ ತಾಂಡಾದ ಯಾವುದೇ ಕಾರ್ಯಕ್ರಮದದಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿರಲಿಲ್ಲ. ತತ್ತರಿಸಿ ಹೋಗಿದನು. ಪ್ರತಿ ಸಂಕಟಗಳಿಗೂ ಊರಿನ ಪ್ರತಿಯೊಬ್ಬರಿಗೆ ಧೈರ್ಯ ಹೇಳಿ ಬೆಂಗಾವಲಾಗಿ ನಿಂತುಕೊಳ್ಳುತ್ತಿದ್ದ ಕುಶಾನಿಗೆ ಬಂದ ಆಪತ್ತಿನಿಂದ ಎಲ್ಲರೂ ದುಃಖಿಯಾಗಿದ್ದರು. ಹಬ್ಬದ ದಿನ ಅವನ ಮನೆಗೆ ಗುರು-ಹಿರಿಯರೊಂದಿಗೆ ಹೋಗಿದ್ದ ನಾಯಕ ನಾಲ್ಕು ಸಾಂತ್ವನದ ಮಾತುಗಳನ್ನು ಹೇಳಿ ಎಲಿ ಅಡಿಕೆ ಹಾಕಿಕೊಂಡು ಒತ್ತಾಯಪೂರ್ವಕವಾಗಿ ಕುಶಾ ಕಾರಭಾರಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದರು. ನಾಯಕ ಹಾಗೂ ಕಾರಭಾರಿ ತಾಂಡಾ ಜೀವನಕ್ಕೆ ಎರಡು ಕಣ್ಣುಗಳಿದ್ದಂತೆ. ಒಂದು ಕಣ್ಣಿಗೆ ನೋವಾದರೆ ಇನ್ನೊಂದು ಕಣ್ಣಿಗೂ ನೋವು ಆಗುತ್ತದೆ. ಊರಿನ ಯಾವುದೇ ಕಾರ್ಯಕ್ರಮವಿರಲಿ, ಹಬ್ಬ ಹರಿದಿನಗಳು, ಮದುವೆ ಮುಂಜಿಗಳು ಜನರ ಗುಂಪಿನಲ್ಲಿ ನಾಯಕ-ಕಾರಭಾರಿ ಇಲ್ಲದಿದ್ದರೆ ಆ ಕಾರ್ಯಕ್ಕೆ ಶೋಭೆಯೇ ಬರುವುದಿಲ್ಲ. ಅಂದಾಗ ವರುಷದ ದೊಡ್ಡ ಹಬ್ಬ ದೀಪಾವಳಿ ದಿನ ಕಾರಭಾರಿ ಮನಸಿನಲ್ಲಿಯ ಕತ್ತಲೆಯನ್ನು ದೂರ ಮಾಡದಿದ್ದರೆ ಬೆಳಕಿನ ಹಬ್ಬಕ್ಕೆ ಅರ್ಥವೇನಿದೆ? ಹಾಗಾಗಿ ಸೋಮಾ ನಾಯಕ ಕುಶಾ ಕರಭಾರಿಯನ್ನು ತನ್ನ ಜೊತೆಗೆ ಕರೆ ತಂದಿದ್ದರು.

ಅಂಗಳದಲ್ಲಿ ಎಲ್ಲ ಹಿರಿಯರು ಅರ್ಧಗೋಲಾಕಾರವಾಗಿ ಆಳು ಹಾಸಿದ ಚಾಪೆಯ ಮೇಲೆ ಕುಳಿತುಕೊಂಡರು. ಚಹಾ ಪಾನವಾಯಿತು. ಮುಂದೆ ಕುಣಿಯುತ್ತಿರುವ ಕನ್ಯಾಮಣಿಗಳ ನೃತ್ಯ ನೋಡುತ್ತಾ ಕುಳಿತರು. ತನ್ನ ಮೊಮ್ಮಗಳು ದೀಪಾಳನ್ನು ನೋಡಿ ಕಾರಭಾರಿ ಕರುಳು ಚುರುಕ್ ಅಂದಿತು. ಅವಳ ಬಗ್ಗೆ ಅದೆಂಥ ಕನಸುಗಳನ್ನು ಕಂಡಿದ್ದ ಭೀಮಾ. ತಾನು ಬಡವನಾದರೂ ತನ್ನ ಮಗಳಿಗೆ ಉಚ್ಚ ಶಿಕ್ಷಣ ಕೊಡಿಸಬೇಕೆಂದು ಹಗಲು-ರಾತ್ರಿ ದುಡಿಯುತ್ತಿದ್ದ. ಒಳ್ಳೆಯ ಸರಕಾರಿ ನೌಕರಿ ಇದ್ದ ಹುಡುಗನೊಂದಿಗೆ ಬಲು ವಿಜ್ರಂಭಣೆಯಿಂದ ಮದುವೆ ಮಾಡಬೇಕು ಎಂದು ಆಗಾಗ ಹೇಳುತ್ತಲಿದ್ದ. ಆದರೆ ಮಗ ಒಂದು ಬಗೆದರೆ ವಿಧಿ ತಾನೊಂದು ಬಗೆಯಿತು. ಆ ದೊಡ್ಡ ಭಾರ ಈ ಮುದುಕನ ಹೆಗಲಿಗೆ ಹಾಕಿ ಹೋಗಿ ಬಿಟ್ಟನು. ಕಾಲದ ಮುಂದೆ ಯಾರ ಆಟ ನಡೆಯುತ್ತದೆ? ಆತ ಕುಣಿಸಿದಂತೆ ಕುಣಿಯುವ ಸೂತ್ರದ ಗೊಂಬೆಗಳು ನಾವು. ಮೊಮ್ಮಗಳನ್ನು ಕಂಡು ಮರಗುತ್ತಿದ್ದ ಕಾರಭಾರಿ ಮನಸ್ಸು ಸೋಮಾ ನಾಯಕನಿಗೆ ಅರ್ಥವಾಯಿತು. ಮೆಲ್ಲಗೆ ಅವನ ಹೆಗಲು ಚಪ್ಪರಿಸುತ್ತ ಎಲ್ಲ ಒಳ್ಳೆಯದಾಗುತ್ತದೆ. ಕಾಳಜಿ ಮಾಡಬೇಡ ಎಂದು ಮೂಕ ಸಮ್ಮತಿ ನೀಡಿದರು ನಾಯಕ.

ಹಲಗೆ ಬಾರಿಸಿ ಸುಸ್ತಾದ ದುರ್ಗಪ್ಪ ಉಸ್ಸೆಂದು ಹಲಗೆ ಕೆಳಗಿಟ್ಟು ಬದಿಗೆ ಕುಳಿತುಕೊಂಡ, “ಬಾಪು, ಸಂಜೆಯಿಂದ ಬಾರಿಸ್ತಿದ್ದಿನಿ. ಒಂದ ಹನಿ ನೀರು ಕುಡಿದಿಲ್ಲ.”

ದುರ್ಗಪ್ಪ ಒಂದ ಹನಿ ನೀರಿನ ಹೆಸರಿನಲ್ಲಿ ಏನು ಬೇಡುತ್ತಿದ್ದಾನೆ ಎಂಬುದು ಎಲ್ಲರಿಗೂ ತಿಳಿದು ಯುವಕರೆಲ್ಲ ಸಹೇತುಪೂರ್ವಕ ನಕ್ಕರು. “ಕುಡಿದರೆ ತಾನೆ ನಾದ ಚೆನ್ನಾಗಿ ಬಾರಿಸಲು ಬರ್ತದೆ. ಹಾಕಿ ಹಾಕಿ ಅವಂಗೆ ಪಾವಸೆರ್ ದಾರು ಹಾಕಿ.” ಗುಂಪಿನಿಂದ ಯಾರೋ ಹಿರಿಯರು ಹೇಳಿದರು. ನಾಯಕಣ ಒಳಗಿನಿಂದ ದಾರು ಹಂಡೆ ತಂದು ಶಿವಾ ಕೈಯಲ್ಲಿ ಕೊಟ್ಟಳು. ಶಿವಾ ಅಂಗಳದಲ್ಲಿ ಬಂದು ಹಿರಿಯರ ಎದುರಿಗೆ ಹಂಡೆ ಇಟ್ಟು ಗ್ಲಾಸಿನೊಳಗೆ ದಾರು ಹಾಕತೊಡಗಿದ್ದನು. ನಾಯಕನ ಸನ್ಮಾನಕ್ಕೆಂದು ಕೊಟ್ಟ ಮೊದಲನೆಯ ಗ್ಲಾಸು ಸೋಮಾ ನಾಯಕ ಹಿಡಿದು ಕುಶಾ ಕಾರಭಾರಿಯತ್ತ ತಿರುಗಿದರು. ಮಗನ ದುಃಖದಲ್ಲಿ ಮರುಗುತ್ತ ಕುಳಿತ ಕುಶಾನಿಗೆ ಗ್ಲಾಸು ಕೊಡುತ್ತ, “ಕಾರಭಾರಿ, ನೀವೇ ಈ ರೀತಿ ದುಃಖಿಸುತ್ತ ಕುಳಿತರೆ ಹೇಗೆ? ಮಿಂಚಿ ಹೋದ ಮಾತಿಗೆ ಚಿಂತಿಸಿ ಫಲವಿಲ್ಲ. ನಿನ್ನ ಚಿಂತೆ ಮೊಮ್ಮಗಳ ಚಿಂತೆ ತಾನೆ? ನಿನ್ನ ಮೊಮ್ಮಗಳು ನನಗೂ ಮೊಮ್ಮಗಳು ಕಣೋ. ಅದಕ್ಕೆ ತಾನೆ ನನ್ನ ಮಮ್ಮಗನಿಗೆ ತೆಗೆದುಕೊಂಡು ಮನೆ ತುಂಬಿಸಿಕೊಳ್ಳುತ್ತಿರೋದು. ತಗೋ ನಿನ್ನಳಿಯ ಬರ್ತಾ ಇದ್ದಾನೆ ಇಷ್ಟರಲ್ಲಿ.” ಎಂದು ಹೇಳಿದನು.

ನಾಯಕರ ಪ್ರೀತಿಪೂರ್ವಕ ಒತ್ತಾಯಕ್ಕೆ ನಿರಾಕರಿಸದೆ ಕುಶಾ ಗ್ಲಾಸನ್ನು ಬಾಯಿಗೆ ಹಚ್ಚಿದನು. ಎಲ್ಲರೂ ಗ್ಲಾಸುಗಳ ವಿನಿಮಯ ಮಾಡಿಕೊಂಡು ಹರಟತೊಡಗಿದ್ದರು.

ಹುಡುಗಿಯರೆಲ್ಲ ದೀಪಗಳಲ್ಲಿ ಎಣ್ಣೆ ಹಾಕಿ ಸುರಸುರ್ ಬತ್ತಿ ಹಚ್ಚಿ ಕುಣಿದಾಡತೊಡಗಿದ್ದರು. ಹಿರಿಯ ಯುವತಿಯರು ಅರತಿಗಳನ್ನು ತೆಗೆದುಕೊಂಡು ನಾಯಕರ ಮನೆ ಬಾಗಿಲಿಗೆ ಬೆಳಗಿದರು.

ವರಸೆ ದಾಡೇರಿ ಕೋಟ ದವಾಳಿ ಯಾಡಿ ತೊನ ಮೇರಾ

ವರಸೆ ದಾಡೇರಿ ಕೋಟ ದವಾಳಿ ಬಾಪು ತೊನ ಮೇರಾ

ವರಸೆ ದಾಡೇರಿ ಕೋಟ ದವಾಳಿ ನಾಯಕ ತೊನ ಮೇರಾ

ವರಸೆ ದಾಡೇರಿ ಕೋಟ ದವಾಳಿ ನಾಯಕಣ ತೊನ ಮೇರಾ

ವರಸೆ ದಾಡೇರಿ ಕೋಟ ದವಾಳಿ ಡಾವಸಾಣ ತಮೆನ ಮೇರಾ

ಹೀಗೆ ಆರತಿ ಬೆಳಗುತ್ತ ಅಮ್ಮ, ಅಪ್ಪ ನಾಯಕ, ನಾಯಕಣ, ಊರಿನ ಹಿರಿಯರ ಹೆಸರು ತೆಗೆದುಕೊಳ್ಳುತ್ತಾ ಆರತಿ ಮಾಡಿದರು. ಈ ಹಾಡಿನ ಅರ್ಥ ನಿಮ್ಮೆಲ್ಲರ ಬಾಳಿನಲ್ಲಿ ಹೊಂಬೆಳಕು ಮೂಡಲಿ ಎಂಬ ಹರಕೆ ಇದೆ. ನಂತರ ಹಿರಿಯರಲ್ಲಿಗೆ ಬಂದು ಎಲ್ಲರಿಗೂ ವಂದಿಸಿದರು. ಹಿರಿಯರು ಆಶಿರ್ವಾದ ಮಾಡಿದರು. ಮತ್ತು ಹುಡುಗಿಯರ ಉಡಿಯಲ್ಲಿ ಕಿರು ಕಾಣಿಕೆಗಳನ್ನು ಸಲ್ಲಿಸಿದರು. ದೀಪಾ ಅಜ್ಜನ ಎದುರಿಗೆ ಬಂದು ವಂದಿಸಿದಾಗ ಆತನ ಕಂಗಳಲ್ಲಿ ಕಾಣುವ ವೇದನೆಯನ್ನು ಅರ್ಥ ಮಾಡಿಕೊಂಡ ಆಕೆಯ ದುಃಖದ ಕಟ್ಟೆ ಒಡೆಯಿತು. ತನ್ನಂತರಂಗದಲ್ಲಿ ಹುದುಗಿಸಿಟ್ಟ ದುಃಖ ದುಮ್ಮಾನಗಳು ಕಣ್ಣಿರಾಗಿ ಸುರಿಯತೊಡಗಿದ್ದವು. ತಾತನನ್ನು ತಬ್ಬಿಕೊಂಡು ಅಳತೊಡಗಿದ್ದಳು. ಅವಳ ಎದೆ ಒಡೆಯುವಂತಹ ಅಳಲು ಕೇಳಿ ನೆರೆದ ಮಹಿಳೆಯರ, ತರುಣ ಹುಡುಗಿಯರ ಕಂಗಳಲ್ಲೂ ಅಶ್ರುಧಾರೆ ಉಕ್ಕಿ ಬಂದಿತ್ತು. ತಮ್ಮ ಗೆಳೆತಿಯ ತಂದೆ ಭೀಮಾ ಆರು ತಿಂಗಳ ಹಿಂದೆ ಟ್ರಾಕ್ಟರ್ ಅಪಘಾತದಲ್ಲಿ ಮರಣ ಹೊಂದಿದ್ದ ಘಟನೆ ಎಲ್ಲರಿಗೂ ಗೊತ್ತಿತ್ತು. ಬಾಲ್ಯದ ಗೆಳತಿ ಅನಿತಾ ಮುಂದೆ ಬಂದು ದೀಪಾಳನ್ನು ಸಂತೈಸಿದಳು. ದೀಪಾ-ಪ್ರಕಾಶರ ಮದುವೆ ಇದೇ ಯುಗಾದಿ ಪಾಡ್ಯದ ಶುಭ ಮುಹೂರ್ತದಲ್ಲಿ ಆಗುವುದಿತ್ತು. ತಂದೆ-ತಾಯಿ ಇಲ್ಲದ ತಬ್ಬಲಿ ಮಗುವಿಗೆ ಕುಶಾ ತಾತ ಸರ್ವಸ್ವ ಆಗಿದ್ದರು. ನಾಳೆ ಗಂಡನ ಮನೆಗೆ ಹೋದರೆ ತಾತನನ್ನು ಯಾರು ನೋಡಿಕೊಳ್ಳುತ್ತಾರೆ ಎಂದು ಹೆಂಗಳೆಯರೆಲ್ಲ ಮರುಕಪಟ್ಟರು.

“ಎಲ್ಲ ಹುಡುಗ್ಯಾರು ಇತ್ತಕಡೆ ಬನ್ನಿ, ರಾತ್ರಿ ಅಗ್ತಾ ಇದೆ. ಬೇಗ ಬೇಗ ಹೋಗಿ ತಾಂಡಾ ಸುತ್ತ ಮೇರಾ ಮಾಡಿ ಬರೋಣ ಬನ್ನಿರೆ.” ಅನಿತಾ ಗೆಳೆತಿಯರಿಗೆ ಹೇಳಿ ನಾಯಕರ ಸಂಮತಿಗೊಸ್ಕರ ಅವರತ್ತ ನೋಡಿದಳು. ನಾಯಕ ಬಲಗೈ ಮೇಲೆತ್ತಿ ಹಸಿರು ನಿಶಾನೆ ತೋರಿಸಿದರು. ಶಿವಪ್ಪನಿಗೆ ಹುಡುಗಿಯರ ಜೊತೆಗಿದ್ದು ಯಾವ ತೊಂದರೆಯಾಗದಂತೆ ನೋಡಿಕೊಳ್ಳಲು ಹೇಳಿ ನಾಯಕ ಹಿರಿಯರತ್ತ ತಿರುಗಿದರು. ಹುಡುಗಿಯರೆಲ್ಲ ಹರುಷಗೊಂಡು ಕಾರಭಾರಿ ಮನೆಯತ್ತ ಸಾಗಿದರು. ಅಲ್ಲಿಂದ ಮುಂದೆ ತಾಂಡಾದ ಉಳಿದ ಮನೆಗಳಿಗೆ ಹೋಗಬೇಕಾಗಿತ್ತು.

ಕುಶಾ ಕರಭಾರಿಯವರ ಮನೆ ಸಾಧಾರಣವಾಗಿದ್ದು ಹಬ್ಬದಂದು ಅಂಗಳವೆಲ್ಲ ದೀಪಗಳ ಝಗಮಗ ಬೆಳಕಿನಲ್ಲಿ ಹೊಳೆಯುತ್ತಿತ್ತು. ಬಾಗಿಲದಲ್ಲಿಯ ರಂಗೋಲಿ ದೀಪಾಳ ಕೈಚಳಕವೆಂದು ಸಾರಿ ಹೇಳುತ್ತಿತ್ತು. ಎರಡು ಕೋಣೆಗಳಿರುವ ಮನೆಯು ಅಂದು ತುಂಬ ಶಾಂತ ವೆನಿಸುತ್ತಿತ್ತು. ಅಜ್ಜಿ ಅಂಗಳದಲ್ಲಿ ಚಾಪೆ ಮೇಲೆ ಕುಳಿತು ಶೂನ್ಯ ದೃಷ್ಟಿಯನಿಟ್ಟು ಅಂಗಳದಲ್ಲಿ ಆಗಮನವಾಗುತ್ತಿರುವ ಕನ್ಯೆಯರ ಸ್ವಾಗತ ಮಾಡಿದಳು. ಎದುರಿಗೆ ಕುಳಿತು ಅಜ್ಜಿಯೊಂದಿಗೆ ಮಾತಾಡುತ್ತಿದ್ದ ಯುವಕನೆಡೆಗೆ ಗಮನಕೊಡದೆ ಹುಡುಗಿಯರೆಲ್ಲ ಬಾಗಿಲ ಬಳಿಗೆ ಹೋಗಿ ಮೇರಾ ಹಾಡಿ ಆರತಿ ಬೆಳಗಿದರು. ದೀಪಾ ಒಳಗೆ ದೇವರ ಮನೆಗೆ ಹೋಗಿ ಆರತಿ ತಂದು ಹುಡುಗಿಯರಿಗೆ ಆರತಿ ಬೆಳಗಿದಳು.

ವರಸೆ ದಾಡೇರಿ ಕೋಟ ದವಾಳಿ ಯಾಡಿ ತೊನ ಮೇರಾ

ವರಸೆ ದಾಡೇರಿ ಕೋಟ ದವಾಳಿ ಬಾಪು ತೊನ ಮೇರಾ....

ಅಜ್ಜಿಯೊಂದಿಗೆ ಹರಟುತ್ತ ಕುಳಿತ ಯುವಕ ಮೆಲ್ಲನೆದ್ದು ತನ್ನ ಜೇಬಿನಿಂದ ಹಣದ ಕಟ್ಟೊಂದನ್ನು ತೆಗೆದು ಎಲ್ಲ ಹುಡುಗಿಯರ ಆರತಿಗೆ ಹಣ ಹಾಕಿದನು. ದೀಪಾಳ ಆರತಿಗೆ ಹಣ ಹಾಕಲು ಹೋದಾಗಲೇ ದೀಪಾ ಅವನನ್ನು ಕಣ್ಣೆತ್ತಿ ನೋಡಿದಳು. ಅವನು ಪ್ರಕಾಶನಿದ್ದ. ಅವಳ ಎದೆ ಜೋರಾಗಿ ಬಡಿಯತೊಡಗಿತು. ಕಣ್ಣುಗಳು ಒಂದಾದವು. ಅವಳಿಗೆ ತುಂಬಾ ಸಂತೋಷವಾಯಿತು. ಆದರೆ ಆ ಸಂತೋಷವನ್ನು ವ್ಯಕ್ತ ಪಡಿಸುವಷ್ಟು ಸಮಯ ಅವಳಲ್ಲಿ ಇರಲಿಲ್ಲ. ಕೈಯಲ್ಲಿ ಹಿಡಿದ ಆರತಿ ತಟ್ಟೆ ನಡುಗುತ್ತಿತ್ತು. ಬೆಳಕಿನಲ್ಲಿ ಅವರಿಬ್ಬರ ಮುಖ ಹುಣ್ಣಿಮೆಯ ಚಂದ್ರನ ಹಾಗೆ ಬೆಳ್ಳಗಾಗಿ ಸೊಗಸಾಗಿ ಕಾಣುತ್ತಿದ್ದವು. ಪ್ರಸಂಗಾವಧಾನ ತಳೆದು ಅನಿತಾ ದೀಪಾಳ ಕೈಯಿಂದ ಆರತಿ ತಟ್ಟೆ ಹಿಡಿದುಕೊಂಡಳು. ಆಗ ಎಚ್ಚೆತ್ತ ದೀಪಾ ನಾಚಿ ತಲೆ ತಗ್ಗಿಸಿದಳು. ಮೆಲ್ಲನೆ ಬದಿಗೆ ನೋಡಿದಳು. ಗೆಳೆತಿಯರೆಲ್ಲ ತನ್ನತ್ತ ಕುತೂಹಲದಿಂದ ನೋಡುತ್ತಿರುವುದನ್ನು ಕಂಡು ದೀಪಾ ನಾಚಿ ನೀರಾದಳು. ಎರಡ್ಹೆಜ್ಜೆ ಹಿಂದೆ ಸರಿದು ಓಡುತ್ತ ಹೋಗಿ ಅಜ್ಜಿಯ ಕೊಳ್ಳಿಗೆ ಬಿದ್ದಳು. ಅಜ್ಜಿ ನಸುನಕ್ಕು ಮೊಮ್ಮಗಳ ಬೆನ್ನು ಸವರುತ್ತ ನುಡಿದಳು, “ನನ್ನ ಮುದ್ದು ಮರಿ, ಪ್ರಕಾಶ ಈದೀಗ ಬಂದಿದ್ದಾನೆ. ಒಳಗೆ ಹೋಗಿ ನೀರು ತಂದ್ಕೋಡು.”

“ಬೇಡ ಬೇಡ. ನಾನು ನೀರು ಕುಡಿದ್ದಿದ್ದೇನೆ. ಪರವಾಗಿಲ್ಲ.” ಪ್ರಕಾಶ ಒಡನೆಯೇ ನುಡಿದನು.

ಅಜ್ಜಿಯ ಮಡಿಲಿನಿಂದ ದೂರಾಗಿ ಅಜ್ಜಿಯ ಸೀರೆಯ ಸೆರಗಿನಿಂದ ಮುಖ ಮುಚ್ಚಿಕೊಳ್ಳುತ್ತಲೇ ದೀಪಾ ಹಿಂತಿರುಗಿ ಪ್ರಕಾಶನತ್ತ ಪ್ರೀತಿಯ ನೋಟ ಬಿರಿದಳು. ಗೆಳೆತಿಯರೆಲ್ಲ ಒಕ್ಕೊರಲಿಯಿಂದ ಕೂಗಾಡಿದರು. ಅವಳ ಗಲ್ಲ ನಾಚಿಕೆಯಿಂದ ಕೆಂಪಾದವು. ದೀಪದ ಬೆಳಕಿನಲ್ಲಿ ಇನ್ನಷ್ಟೂ ಮೋಹಕವಾಗಿ ಕಂಡಳು.

ಅನಿತಾ ಮುಂದೆ ಬಂದು, “ಹೀರೋ ಬಂದನಂತ ನಮ್ಮನ್ನೆಲ್ಲ ಮರಿಬ್ಯಾಡ, ಕಂದ. ಇನ್ನೂ ಬಹಳಷ್ಟು ಮನೆಗಳು ಇವೆ. ಬಾ ಮೇರಾ ಮಾಡಿ ಬರೋಣ.” ಎಂದಳು.

ದೀಪಾ ಅಜ್ಜಿಯ ಕಡೆಯೂಮ್ಮೆ ಹಾಗೂ ಪ್ರಕಾಶನಕಡೆಗೊಮ್ಮೆ ಹೇತುಪುರ್ವಕ ನೋಡಿದಳು. ಪ್ರಕಾಶ ಹೋಗು ಎಂದು ಸಮ್ಮತಿಸಿದರೆ ಅಜ್ಜಿ ಮುಗುಳ್ನಕ್ಕು ಅಳಿಯನ ಸಂಭಾವಿತಗುಣವನ್ನು ಕೌತುಕದಿಂದ ನೋಡಿದಳು. ಹುಡುಗಿಯರ ಗುಂಪು ನಗುತ್ತ ನಲಿಯುತ್ತ ಶ್ರೀ. ಸೇವಾಲಾಲ ದೇವಾಲಯದತ್ತ ಹೆಜ್ಜೆ ಹಾಕಿತು. ದೂರದ ವೆರೆಗೆ ದೀಪಾ ತಿರು ತಿರುಗಿ ಪ್ರಕಾಶನತ್ತ ನೋಡುತ್ತಿದ್ದಳು.


ಲೇಖಕರು:- ಶ್ರೀ. ದಿನೇಶ ಚವ್ಹಾಣ

62 views1 comment
bottom of page