top of page

ತಾತ್ವಿಕತೆಯ ತಿಳಿಯಾಗಿ ಬೋಧಿಸುವ - ಮುಳುಗದಿರಲಿ ಬದುಕು* 



'ತಿಳಿದಿರುವುದು ವಿಜ್ಞಾನ ತಿಳಿಯದಿರುವುದು ತತ್ವಜ್ಞಾನ' - ಬಟ್ರಾಂಡ್ ರಸೆಲ್. 


ತತ್ವಜ್ಞಾನವು ತಿಳಿಯದಿರುವುದನ್ನು ತಿಳಿಯಲು ಇರುವ ಮೂಲ ಆಕರವಾಗಿದೆ. ಅದು ಶ್ರೀಸಾಮಾನ್ಯನ ಬದುಕಿನಿಂದ ಹೊರತಾದದು, ಸುಲಭಕ್ಕೆ ದಕ್ಕುವಂಥದು ಅಲ್ಲ ಎಂದೇ ಈವರೆವಿಗೂ ಭಾವಿಸಲಾಗಿದೆ. ಯಾವ ಜ್ಞಾನವೂ ಬದುಕಿನ ಗರ್ಭದಿಂದಲೇ ಹುಟ್ಟುಪಡೆದಿರಬೇಕು. ಹಾಗೊಂದು ವೇಳೆ ಬದುಕಿನಿಂದ ಬದುಕಿಗಾಗಿ ಬದುಕದಿದ್ದರೆ ಅದು ಜ್ಞಾನವೇ ಅಲ್ಲ; ಅದು ನಿರರ್ಥಕ ಎಂಬುದು ನಿಸ್ಸಂಶಯ.  ಈ ಬದುಕೇ ವಿಸ್ಮಯ. ಜ್ಞಾನ, ವಿಜ್ಞಾನ, ತತ್ವಜ್ಞಾನ ಎಂಬ ಸಕಲೆಂಟು ಪರಿಧಿಯೊಳಗೆ ಬಂಧಿಸಿ ಅದನ್ನು ಅರ್ಥೈಸಿದಷ್ಟೂ ನುಸುಳಿಕೊಳ್ಳುವ ಜಾಯಮಾನ ಈ ಬದುಕಿನದು. ಅರ್ಥಕ್ಕೊಗ್ಗದ ಅನಂತಮುಖಿಯಾಗಿ ಹರವಿಕೊಳ್ಳುವ ಈ ಬದುಕಿನ ಕುರಿತು ಅರಿವು ಪಡೆಯಲು ಹೆಣಗಾಡಿದ ಮನುಷ್ಯ ಅನುಮಾನಿಸಿದ್ದು, ಆಶ್ರಯಿಸಿದ್ದು ಮತ್ತೆ ಇದೇ ತತ್ವಜ್ಞಾನವನ್ನು. ಹುಟ್ಟು, ಸಾವು, ಜೀವನ, ಜಗತ್ತು, ದೇವರು ಎಂಬಿತ್ಯಾದಿ ಸಂಗತಿಗಳ ಕುರಿತು ಅಪಾರ ತಿಳಿವಳಿಕೆಯನ್ನು ಪಡೆಯಲು ನಡೆಸಿದ ಮನುಷ್ಯನ ನಿರಂತರ ಪ್ರಯತ್ನಕ್ಕೆ ತತ್ವಜ್ಞಾನವು ಕೈಮರವಾಗಿ ಒದಗಿದೆ. 


ನೋವು, ಸಂಕಟ, ನಿರಾಶೆ, ಹತಾಶೆ, ಜುಗುಪ್ಸೆ ಮುಂತಾದ ಸಾಸಿರ ಸಮಸ್ಯೆಗಳ ಸರಮಾಲೆಯನ್ನೇ ಸುತ್ತಿಕೊಂಡಿರುವ ಈ ಬದುಕು ನಿಜಕ್ಕೂ ಸಂಕೀರ್ಣ. ಸಂಕೀರ್ಣದಿಂದ ಸರಳತೆಗೆ, ಸಂಕಟದಿಂದ ಸಂಭ್ರಮದೆಡೆಗೆ ಕೊಂಡೊಯ್ಯುಲು ಚಿಂತಿಸಿದ, ಜ್ಞಾನಕ್ಕಾಗಿಯೇ ಬದುಕಿದ ಮಹಾನ್ ತತ್ವಜ್ಞಾನಿಗಳಲ್ಲಿ ಗ್ರೀಸ್ ನ ಎಪಿಕ್ಟೆಟಸ್ ಮಹತ್ವದವನಾಗಿ ತೋರುತ್ತಾನೆ.  ಯುರೋಪಿನ ಗ್ರೀಸ್ ದೇಶವು ತತ್ವಜ್ಞಾನಿಗಳನ್ನು ಹೆತ್ತ ನೆಲ. ಇಲ್ಲಿ ಜನ್ಮವೆತ್ತಿದ ಎಪಿಕ್ಟೆಟಸ್ (ಕ್ರಿ.ಶ. 55-135)ನ 'ದಿ ಆರ್ಟ್ ಆಫ್ ಲಿವಿಂಗ್' ಕೃತಿಯನ್ನು ನಮ್ಮ ನಾಡಿನ ಭರವಸೆಯ ಅನುವಾದಕ, ಲೇಖಕ ಡಾ. ಸುಭಾಷ್ ರಾಜಮಾನೆ 'ಮುಳುಗದಿರಲಿ ಬದುಕು' ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ.  ತತ್ವಜ್ಞಾನಿ ಎಪಿಕ್ಟೆಟಸ್ ನ ಚಿಂತನೆಗಳ ಸಾರವು ಇಲ್ಲಿ ಸೇಂದ್ರೀಕೃತಗೊಂಡಿದೆ. ತತ್ವಶಾಸ್ತ್ರೀಯ ಸಿದ್ಧಾಂತಗಳನ್ನು ಬದುಕಿನ ಮೌಲ್ಯಗಳೊಂದಿಗೆ ಸಮೀಕರಿಸಿ ಸರಳವಾಗಿ ಸೂತ್ರೀಕರಿಸಲಾದ ಈ ಕೃತಿ ಕನ್ನಡದಲ್ಲಿ ತತ್ವಜ್ಞಾನಪ್ರಿಯರ ಮತ್ತು ವ್ಯಕ್ತಿತ್ವವಿಕಾಸಾಸಕ್ತರ ಪ್ರೀತಿಗೆ ಪಾತ್ರವಾಗಲಿದೆ.


ಗ್ರೀಕ್ ದೇಶವು ತತ್ವಜ್ಞಾನದ ಬಹುದೊಡ್ಡ ಸರಕುಳ್ಳ ನೆಲ. ಪಶ್ಚಿಮದ ತತ್ವಜ್ಞಾನ ಮತ್ತು ಅಲ್ಲಿನ ಚಿಂತಕರನ್ನು ಕುರಿತು ಕನ್ನಡದಲ್ಲಿ ಅಧ್ಯಯನ ನಡೆಸಲಾಗಿದೆ ಎಂಬುದು ಸಮಾಧಾನದ ಸಂಗತಿ. ಆದರೂ ಪ್ರಮಾಣ ಕಡಿಮೆ. ಇಂಥ ವಿರಳ ಪ್ರಯತ್ನಗಳಲ್ಲಿ ಸುಭಾಷ್ ರಾಜಮಾನೆಯವರ ಈ ಕೃತಿ ಮಹತ್ವದ್ದಾಗಿದೆ. ತತ್ವಜ್ಞಾನದ ಕ್ಲಿಷ್ಟತೆ, ವಿಷಯದ ಗಹನತೆ, ಶಾಸ್ತ್ರಸಂಕೀರ್ಣತೆ ಇಲ್ಲಿ ಇಡಿಕಿರಿದಿಲ್ಲ. ಬದುಕಿನ ಸರಳತೆಯನ್ನು ಕುರಿತ ಧ್ಯಾನಸ್ತತೆಯ ಫಲವಾಗಿ ಇಲ್ಲಿನ ಚಿಂತನೆಗಳು ಮೈಚೆಲ್ಲಿಕೊಂಡಿವೆ. 


ಈ ಕೃತಿ ಎರಡು ಭಾಗಗಳಲ್ಲಿ ಮೈಚಾಚಿಕೊಂಡಿದೆ. ಮೊದಲ ಭಾಗದಲ್ಲಿ ವ್ಯಕ್ತಿತ್ವವಿಕಾಸ ಸಂಬಂಧೀ ವಿಷಯಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ತತ್ವಜ್ಞಾನದ ಮೂಲ ಉದ್ದೇಶ ಮತ್ತು ಜೀವನ, ಜೀವನ ಸಂವರ್ಧನೆ ಇತ್ಯಾದಿ ಸಂಗತಿಗಳ ಕುರಿತು ಎರಡನೇ ಭಾಗದಲ್ಲಿ ಚರ್ಚಿಸಲಾಗಿದೆ. ಈ ಕೃತಿಯಲ್ಲಿ ಬದುಕಿನ ಘನತೆಗೆ ಅನುಸರಿಸಬೇಕಾದ ಮಾರ್ಗೋಪಾಯಗಳನ್ನು ಹಾಗೂ ಜೀವನ ಮೌಲ್ಯಗಳನ್ನು ಪ್ರತಿಪಾದಿಸಲಾಗಿದೆ. 


ಜೀವಜಗತ್ತಿನ ಎಲ್ಲಾ ಪ್ರಾಣಿಗಳಲ್ಲಿ ಮನುಷ್ಯ ಭಿನ್ನನಾಗಿದ್ದಾನೆ. ಈ ಭಿನ್ನತೆಗೆ ಕಾರಣವಾದ ಅಂಶಗಳಲ್ಲಿ  ಬುದ್ಧಿಶಕ್ತಿಯೂ ಒಂದು. ಬುದ್ಧಿ ಮನುಷ್ಯನ ಮುಖ್ಯ ಲಕ್ಷಣ. ಅದನ್ನು ಸರಿಯಾಗಿ, ಸಮರ್ಪಕವಾಗಿ ವಿನಿಯೋಗಿಸುವಲ್ಲಿ ವಿಫಲನಾಗಿರುವ ಮನುಷ್ಯ ಬದುಕಿನ ಸಂತೋಷವನ್ನು ಕಂಡುಕೊಳ್ಳುವಲ್ಲಿ ಸೋತಿದ್ದಾನೆ. ತನ್ನ ಬುದ್ಧಿಶಕ್ತಿಯನ್ನು ಬೇಡವಾದ ವಸ್ತು, ವಿಷಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ದುಃಖಕ್ಕೊಳಗಾಗುತ್ತಾನೆ. ಬದುಕನ್ನು ಸಾರ್ಥಕಪಡಿಸಿಕೊಳ್ಳಲು ಏನು ಮಾಡಬೇಕು ಎಂಬುದನ್ನು ಚಿಂತಿಸಿದ ಎಪಿಕ್ಟೆಟಸ್ ಮನುಷ್ಯನ ದೃಷ್ಟಿಕೋನ ರೂಪುಗೊಳ್ಳುವ ಬಗ್ಗೆ ಖಚಿತ ನಿಲುವು ತಾಳುತ್ತಾನೆ. 'ಘಟನೆಗಳು ನಮ್ಮನ್ನು ವಿಚಲಿತರನ್ನಾಗಿ ಮಾಡುವುದಿಲ್ಲ; ಅವುಗಳ ಬಗೆಗಿನ ನಮ್ಮ ವ್ಯಾಖ್ಯಾನಗಳೇ ವಿಚಲಿತರನ್ನಾಗಿ ಮಾಡುತ್ತವೆ' ಎನ್ನುವ ಎಪಿಕ್ಟೆಟಸ್ ಚಿಂತನೆಗಳು ಬಹಳ ವಿಶಿಷ್ಟ ಎನಿಸುತ್ತವೆ. ಮನುಷ್ಯನ ಮೂಲ ಹಸಿವುಗಳಲ್ಲಿ ಸಂತೋಷ ಮತ್ತು ಸ್ವಾತಂತ್ರ್ಯ ಅತ್ಯವಶ್ಯವಾಗಿವೆ. ಸಂತೋಷ ಮತ್ತು ಸ್ವಾತಂತ್ರ್ಯ ಹೊಂದಬೇಕಾದರೆ ಅಧಿಕಾರಲಾಲಸೆ ಹಾಗೂ ಹಣದ ಮೋಹವನ್ನು ತೊರೆಯಬೇಕಾಗುತ್ತದೆ ಎಂಬುದನ್ನು ಎಪಿಕ್ಟೆಟಸ್ ಮಾರ್ಮಿಕವಾಗಿ ತಿಳಿಹೇಳುತ್ತಾನೆ. 


ಅಪೇಕ್ಷೆ ಮತ್ತು ದ್ವೇಷ ತುಂಬ ಶಕ್ತಿಶಾಲಿಯಾದವು. ಅಲ್ಲದೆ, ಅವು ಹವ್ಯಾಸಗಳು ಎಂಬುದನ್ನು ಮರೆಯುವ ಹಾಗಿಲ್ಲ. ಅಧೀನಕ್ಕೊಳಪಡದ ಸಂಗತಿಗಳ ಕುರಿತು ತಲೆಕೆಡಿಸಿಕೊಳ್ಳದೇ ನಮ್ಮೊಳಗಿನ ಸಾಮರ್ಥ್ಯಗಳ ಮೇಲೆ ಗಮನ ಹರಿಸುವುದರಿಂದ ಒಳಿತಾಗುತ್ತದೆ. ನಮ್ಮ ಇಚ್ಛಾಶಕ್ತಿಯನ್ನು ನಿಸರ್ಗದೊಂದಿಗೆ ಸಾಮರಸ್ಯಗೊಳಿಸಿಕೊಳ್ಳುವುದೇ ನಮ್ಮ ಮುಖ್ಯ ಆದರ್ಶವಾಗಬೇಕು. ಪ್ರತಿಯೊಬ್ಬರಿಗೂ ತಮ್ಮದೇಯಾದ ಯೋಗ್ಯತೆ ಇದ್ದೇ ಇರುತ್ತದೆ, ಸ್ವಂತ ಯೋಗ್ಯತೆಯನ್ನು ಸಂಪಾದಿಸಿಕೊಳ್ಳಬೇಕು. ಪ್ರಯತ್ನಗಳೇ ನಮ್ಮ ಗೆಲುವಿನ ಮೊದಲ ಮೆಟ್ಟಿಲು. ಪ್ರಯತ್ನ ಮಾಡದ ಹೊರತು ಯಶಸ್ಸು ಫಲಿಸದು. ನಮ್ಮ ಅಸ್ತಿತ್ವ ಎಂದರೆ ಬರೀ ಶರೀರವಲ್ಲ. ನೀವೇಂದರೆ, ನಿಮ್ಮ ಕಾಲುಗಳಷ್ಟೇ ಅಲ್ಲ. ನಿಮ್ಮ ಇಚ್ಛಾಶಕ್ತಿಯು ನಿಮ್ಮ ಪಾದಗಳಿಗಿಂತಲೂ ಹಿರಿದಾದದ್ದು. ನಮಗೆ ಅಗತ್ಯವಿರುವುದನ್ನು ಪಡೆದುಕೊಳ್ಳಲು ಕಾಳಜಿ ವಹಿಸಿದರೆ ಆಗ ಜಗತ್ತು ಅದನ್ನು ನಮಗೆ ಸಿಗುವಂತೆ ಮಾಡುತ್ತದೆ. ಉನ್ನತ ಜೀವನದ ಸಂಕೇತವೆಂದರೆ ನಿಸ್ಸಂಶಯವಾಗಿ ನೆಮ್ಮದಿ. ನಮಗೆ ಸಂಬಂಧ ಪಡೆದೇ ಇರುವುದರ ಬಗ್ಗೆ ದಿವ್ಯ ನಿರ್ಲಕ್ಷ್ಯವಹಿಸಬೇಕು. ಬದುಕು ಒಂದು ಔತಣಕೂಟವಿದ್ದಂತೆ. ಅದನ್ನು ಸಂಭ್ರಮದಿಂದ ಸ್ವೀಕರಿಸಬೇಕು. ಮೆಚ್ಚುಗೆಯನ್ನು ಅಪೇಕ್ಷಿಸುವುದು ಅಪಾಯ. ಪ್ರಸಿದ್ಧಿಗಿಂತ ಸಚ್ಚಾರಿತ್ರ್ಯವೇ ಮುಖ್ಯ. ನಿಸರ್ಗದ ನಿಯಮಗಳನ್ನು ನಮ್ಮಿಂದ ಬದಲಿಸಲು ಸಾಧ್ಯವಿಲ್ಲ. ಬದಲಾಗಿ ಅದರ ಇಚ್ಛೆಯನ್ನು ನಮ್ಮದಾಗಿಸುವ ನಿಯಮವನ್ನು ಅನುಸರಿಸಬೇಕು. ಒಂದು ಪ್ರೇರಣೆಯನ್ನು ಎಂದಿಗೂ ದಮನಿಸಬಾರದು. ನಮ್ಮೊಂದಿಗೆ ನಾವು ಘನತೆಯಿಂದ ನಡೆದುಕೊಳ್ಳಬೇಕು. ನಮ್ಮ ಕೀರ್ತಿ ಮತ್ತು ಉದ್ದೇಶಗಳನ್ನು ಎಂದಿಗೂ ಸಮರ್ಥಿಸಿಕೊಳ್ಳಬಾರದು. ಅಲ್ಪ ಸಂತೋಷಕ್ಕಿಂತಲೂ ದೊಡ್ಡ ಸಂತೃಪ್ತಿಗಾಗಿ ಸಿದ್ಧರಾಗಬೇಕು ಹೀಗೆ ಅನೇಕ ಸಂಗತಿಗಳ ಬಗ್ಗೆ ಪ್ರಸ್ತಾಪಿಸುವ ಎಪಿಕ್ಟೆಟಸ್, ನಮಗೆ ಜೀವನ ಸತ್ಯಗಳನ್ನು ಅರುಹುತ್ತಾನೆ. 


ತತ್ವಜ್ಞಾನವು ವಿವೇಕದ ಅದಮ್ಯ ಪ್ರೀತಿಯಾಗಿದೆ. ಅದು ಬದುಕುವ ಅತ್ಯುತ್ತಮ ಕಲೆಯಾಗಿದೆ. ಅಲ್ಲದೆ, ಧಾರ್ಮಿಕ ಗುರುಗಳಿಂದ ಬಿಡುಗಡೆ ನೀಡುತ್ತದೆ; ನಿಗೂಢ ಪಂಥಗಳು ಶೋಷಣೆ ಮಾಡುವುದನ್ನು ತಡೆಯುತ್ತದೆ. ಮರೆಮಾಚಿದ ಬೌದ್ಧಿಕ ತಂತ್ರಗಳ ಮೂಲಕ ನೀವು ಎಷ್ಟು ವಿವೇಕವಂತರು ಎಂಬುದನ್ನು ತೋರಿಸುತ್ತದೆ. ತತ್ವಜ್ಞಾನವು ಗಗನ ಕುಸುಮವಲ್ಲ; ಅದು ಎಲ್ಲರಿಗೂ ಎಟಕುವಂಥದು ಎಂದು ತತ್ವಜ್ಞಾನದ ಸ್ವರೂಪವನ್ನು ಕುರಿತು ಸ್ಪಷ್ಟಪಡಿಸುವ ಎಪಿಕ್ಟೆಟಸ್, ಮೂಢನಂಬಿಕೆಗಳಲ್ಲಿ ತೊಳಲಾಡುವ ಆತ್ಮವನ್ನು ಬೆಳಗಿಸುವುದು ತತ್ವಜ್ಞಾನದ ಮುಖ್ಯ ಉದ್ದೇಶ ಎಂದೂ ಖಚಿತಪಡಿಸುತ್ತಾನೆ.

ಸಂವರ್ಧನಶೀಲ ಬದುಕನ್ನು ನಮ್ಮದನ್ನಾಗಿ ಮಾಡಿಕೊಳ್ಳಲು ಹಂಬಲಿಸುವ ನಾವು ನಿಜವಾದ, ಅಂತಿಮ ಸತ್ಯವನ್ನು ತಿಳಿಯಲು ಹೊರಟರೆ ಸ್ವತಃ ನಾವೇ ತತ್ವಜ್ಞಾನಿಗಳಾಗುತ್ತೇವೆ ಎನ್ನುತ್ತಾನವನು. ಬುದ್ಧಿವಂತರಾಗುವ ಮೊದಲ ಹೆಜ್ಜೆ ಎಂದರೆ ಅಹಂಕಾರವನ್ನು ತೊರೆಯಬೇಕು ಎನ್ನುತ್ತಾನೆ ಎಪಿಕ್ಟೆಟಸ್. ಸ್ವ-ಯೋಗ್ಯತೆಯ ಮೂಲಕವೇ ಬದುಕಿನ ಸಂವರ್ಧನೆ ಸಾಧ್ಯ. ಸಂಪ್ರದಾಯವನ್ನು ಸಂಶಯದಿಂದ ನೋಡಿ, ಸ್ವಂತ ಆಲೋಚನೆ ಬೆಳೆಸಿಕೊಳ್ಳಬೇಕು ಎನ್ನುವ ಅವನು, ಅನ್ಯರೊಂದಿಗೆ ಸೇರುವಾಗ ಎಚ್ಚರವಹಿಸಬೇಕು. ಪುಸ್ತಕಗಳನ್ನು ಓದುವ ಬದಲಿಗೆ ಅವುಗಳಲ್ಲಿನ ವಿಚಾರಗಳೊಂದಿಗೆ ಜೀವಿಸುವುದನ್ನು ಕಲಿಯಬೇಕು. ತಪ್ಪು ಮಾಡುವವರ ಮೇಲೆ ರೇಗಬಾರದು. ಸದ್ಗುಣದ ಜೀವನವೇ ಸಿರಿವಂತ ಜೀವನ. ನಾವು ಎಂದೆಂದಿಗೂ ದಯಾಳುಗಳಾಗಿಯೇ ಇರಬೇಕು ಎಂಬಿತ್ಯಾದಿ ಜೀವನ ಮೌಲ್ಯಗಳನ್ನು ಪ್ರತಿಪಾದಿಸುತ್ತಾನೆ ಎಪಿಕ್ಟೆಟಸ್. ಇಂಥ ಮಹಾನ್ ಚಿಂತಕ ಎಪಿಕ್ಟೆಟಸ್ ಕುರಿತು, ಅವನನ್ನು ತೀವ್ರವಾಗಿ ಪ್ರಭಾವಿಸಿದ ಸ್ಟೋಯಿಕ್ ಪಂಥ, ಗ್ರೀಸ್ ನ ತತ್ವಜ್ಞಾನಿಗಳ ಬಗೆಗಿನ ಪ್ರಾಥಮಿಕ ತಿಳಿವಳಿಕೆ, ತತ್ವಶಾಸ್ತ್ರದ ಬಗೆಗಿನ ಅಲ್ಲಿಯವರ ನಿಲುವು, ಈ ಬಗ್ಗೆ ಕನ್ನಡದಲ್ಲಿ ನಡೆದ ಅಧ್ಯಯನ ಪರಂಪರೆಯ ಅವಲೋಕನವನ್ನು ರಾಜಮಾನೆಯವರು ಪ್ರವೇಶಿಕೆಯಲ್ಲಿ ಸಮರ್ಥವಾಗಿ ಮಾಡಿದ್ದಾರೆ. ಪಶ್ಚಿಮದ ಚಿಂತಕನೊಬ್ಬನ ಬಗ್ಗೆ ಕನ್ನಡದಲ್ಲಿ ತಿಳಿಯಲು, ಓದಲು ಅನುವು ಮಾಡಿಕೊಡುವ ಅನುವಾದಕನ ನಿಜವಾದ ಕಾಳಜಿ, ಜವಾಬ್ಧಾರಿಯನ್ನು ರಾಜಮಾನೆ ಸಮರ್ಥವಾಗಿ ನಿರ್ವಹಿಸಿರುವುದು ಇಲ್ಲಿ ಗಮನಾರ್ಹ. 


ಈವರೆವಿಗೂ ನಾವು 'ನಾನ್ ಫಿಕ್ಷೆನ್' ಎನ್ನಬಹುದಾದ ಶುದ್ಧಶಾಸ್ತ್ರ ಸಂಗತಿಗಳನ್ನು, ಶ್ರೇಷ್ಠ ಚಿಂತಕರ, ಲೇಖಕರ ತಾತ್ವಿಕ ಮೌಲಿಕ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿಕೊಂಡಿರುವುದು ವಿರಳ. ಪಶ್ಚಿಮದ ವಿಭಿನ್ನ ಬಗೆಯ ಕೃತಿ, ಚಿಂತನೆಗಳನ್ನು ಕನ್ನಡದ ನೆಲಕ್ಕೆ ತರುವ ವಿರಳ ಪ್ರಯತ್ನಗಳಲ್ಲಿ ರಾಜಮಾನೆಯವರ ಎಪಿಕ್ಟೆಟಸ್ ನ ಈ ಅನುವಾದ ಮುಖ್ಯವೂ ಮಹತ್ವದ್ದೂ ಆಗಿದೆ. ಈ ಹಿನ್ನೆಲೆಯಲ್ಲಿ "ಅದಮ್ಯವಾದ ಸಾಹಿತ್ಯಪ್ರೇಮಿಯಾಗಿರುವ ಇವರು ಸಮಕಾಲೀನ ಸಂದರ್ಭದ ಸಮೂಹಪ್ರಜ್ಞೆಯನ್ನು ಅರ್ಥಮಾಡಿಕೊಂಡಿದ್ದಾರೆ" ಎಂಬುದಾಗಿ ಡಾ. ರಿಯಾಜ್ ಪಾಷ ಈ ಕೃತಿಯಲ್ಲಿ 'ಮುನ್ನುಡಿ'ದಿರುವುದು ಸರಿಯಾಗಿಯೇ ಇದೆ. ತನ್ನ ಭಾಷೆಯಲ್ಲಿ ದೊರಕದ ವಿಷಯ, ಚಿಂತನೆಗಳನ್ನು ಬೇರೆ ಭಾಷೆಯಲ್ಲಿ ಹುಡುಕಿ ತನ್ನ ನೆಲದ ಓದುಗ ವಲಯಕ್ಕೆ ತಂದು ತಲುಪಿಸುವುದು ಸೃಜನಶೀಲ ಅನುವಾದಕನ ಆಯ್ಕೆಪ್ರಜ್ಞೆಯ ದ್ಯೋತಕ. ರಾಜಮಾನೆಯವರ ಪ್ರಕೃತ ಕೃತಿಯನ್ನು ಈ ಹಿನ್ನೆಲೆಯಲ್ಲಿಯೇ ಗಮನಿಸಬೇಕು. "ಪುಟ್ಟ ಪುಟ್ಟ ಅಧ್ಯಾಯಗಳಲ್ಲಿ ಬದುಕಿನ ತಾತ್ವಿಕ ದರ್ಶನಗಳನ್ನು ನಿರ್ಲಿಪ್ತವಾಗಿ ಇಲ್ಲಿ ಪರಿಚಯಿಸಲಾಗಿದೆ. ಇಲ್ಲಿನ ಚಿಂತನೆಗಳು ಆಪ್ತಸಮಾಲೋಚಕವಾಗಿವೆ" ಎಂಬುದಾಗಿ ಖ್ಯಾತ ಲೇಖಕ ಡಾ. ಮುಡ್ನಾಕೂಡು ಚಿನ್ನಸ್ವಾಮಿ ಅವರು ಬೆನ್ನುಡಿಯಲ್ಲಿ ಹೇಳಿರುವುದು ಕೃತಿಯ ಸ್ವರೂಪವನ್ನು ಸ್ಪಷ್ಟಪಡಿಸುತ್ತದೆ. 


ಒಂದು ವಿಷಯವನ್ನು ಹಲವು ದೃಷ್ಟಿಕೋನಗಳಿಂದ, ಹಲವು ಆಯಾಮಗಳಿಂದ ಆಲೋಚಿಸಿ ನೋಡಲು ಸೂಕ್ತ ತರಬೇತಿಯನ್ನು ತತ್ವಶಾಸ್ತ್ರದ ಓದು ಮತ್ತು ಅಧ್ಯಯನವು ನೀಡುತ್ತದೆ. ಈ ಹಿನ್ನೆಲೆಯಲ್ಲಿ ಬದುಕನ್ನು ಹಲವು ದೃಷ್ಟಿಕೋನಗಳಿಂದ ಪರಿಶೀಲಿಸಿ, ವಿವೇಚಿಸಿ, ಸ್ವೀಕರಿಸಿ, ಸಾರ್ಥಕಪಡಿಸಿಕೊಳ್ಳಲು ಪ್ರೇರೇಪಿಸುವ ಎಪಿಕ್ಟೆಟಸ್ ನ ಚಿಂತನೆಗಳು ಮುಖ್ಯವೂ, ಪ್ರೇರಣಾದಾಯಿಯೂ ಆಗಿವೆ. ಆಧುನಿಕ ಧಾವಂತಕ್ಕೆ ಒಳಗಾದ ಮನುಷ್ಯ ಇಂದು ತೀವ್ರ ತಲ್ಲಣಕ್ಕೊಳಗಾಗಿದ್ದಾನೆ. ಕೊರೊನಾ ತಂದೊಡ್ಡಿದ್ದ ಸಂಕಷ್ಟವು ಇನ್ನೂ ಹೆಚ್ಚಿನ ತಳಮಳವನ್ನು ಸೃಷ್ಟಿಸಿದೆ. ಅಸಂಗತತೆ, ಅಸಹಾಯಕತೆ, ಅಸಹನೀಯತೆಗಳಿಂದಾಗಿ ಬದುಕು ಹೆಚ್ಚು ವಿಹ್ವಲಗೊಂಡಿದೆ. ಬಿಡಲಾರದ ಸಂಕಟಗಳಿಂದಾಗಿ ಬದುಕು ಸಂಕೀರ್ಣವೆನಿಸುತ್ತಿದೆ. ಮೌಲ್ಯಗಳು ಅಪಮೌಲ್ಯೀಕರಣಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಸಂದಿಗ್ಧತೆಯ ಸುಳಿಗೆ ಸಿಲುಕಿ ತೊಳಲಾಡುವ ಮನುಷ್ಯನ ಬಾಳಹಡಗು ನೈತಿಕ ಅದಃಪತನದಿಂದಾಗಿ ಮುಳುಗುತ್ತಲಿದೆ. ಇಂಥ ಸಂದರ್ಭದಲ್ಲಿ ನೈತಿಕ ಎಚ್ಚರ, ಸಚ್ಚಾರಿತ್ರ್ಯಶೀಲ ನಡವಳಿಕೆ, ಆತ್ಮವಿಶ್ವಾಸ, ವಿವೇಕ ಬೆಳೆಸುವ ಇಲ್ಲಿನ ಚಿಂತನೆಗಳು ನಮ್ಮ ಬದುಕು ಮುಳುಗದಂತೆ ಸುರಕ್ಷಿತ ದಡ ತಲುಪಿಸುತ್ತವೆ. ಬಳಲುತ್ತಿರುವ ಬದುಕಿಗೆ ಟಾನಿಕ್ ರೂಪದಲ್ಲೂ ಅವು ಒದಗುತ್ತವೆ. 


ಈ ಕೃತಿಯನ್ನು ಬೆಂಗಳೂರಿನ ಆಕೃತಿ ಪುಸ್ತಕ ಪ್ರಕಾಶನವು ಅಂದವಾಗಿ ಹೊರತಂದಿದೆ. ವಿಷ್ಣು ಕುಮಾರ ರೇಖಿಸಿದ ಮುಖಪುಟ ವಿನ್ಯಾಸ ವಸ್ತುವಿಷಯ, ಆಶಯವನ್ನು ಒಟ್ಟಿಗೇ ಧ್ವನಿಸುತ್ತದೆ. ವ್ಯಕ್ತಿತ್ವ ವಿಕಸನದಂಥ ಪುಸ್ತಕಗಳ, ಜನಪ್ರಿಯ ಮಾದರಿಯ, ಮಾರ್ಕೆಟಿಂಗ್ ವಲಯಕ್ಕೆ ಮಾತ್ರ ಸೀಮಿತಗೊಳ್ಳಬಹುದಾದ ಅಪಾಯವನ್ನು ಇಲ್ಲಿ ಪ್ರಜ್ಞಾಪೂರ್ವಕವಾಗಿ  ಮೀರುವ ಪ್ರಯತ್ನ ಕಾಣಿಸುತ್ತದೆ. ತಾತ್ವಿಕ ಜಿಜ್ಞಾಸುಗಳ ಮತ್ತು ಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಎಪಿಕ್ಟೆಟಸ್ ನ  ಚಿಂತನೆಗಳನ್ನು ಹಾಗೂ ತಾತ್ವಿಕ ವಿಷಯಗಳನ್ನು ತಲುಪಿಸುವ ಉದ್ದೇಶ ಸಾಕಾರಗೊಂಡಿದೆ. ಅನುವಾದಕರ ಭಾಷಾ ಪ್ರಯೋಗ ಅದನ್ನು ಸಾಂಗವಾಗಿ ಸಾಧ್ಯವಾಗಿಸಿದೆ. ಒಂದೇ ಗುಕ್ಕಿಗೆ ಓದಬಹುದಾದ ಎಪಿಕ್ಟೆಟಸ್ ಚಿಂತನೆಗಳನ್ನು ದಾಖಲಿಸುವಾಗ ಅತ್ಯಂತ ಸರಳವಾಗಿ, ಸುಲಲಿತವಾಗಿ, ಮನಮುಟ್ಟುವ ಹಾಗೇ ಕನ್ನಡದಲ್ಲಿ ಕಟ್ಟಿಕೊಟ್ಟ ಸುಭಾಷ್ ರಾಜಮಾನೆಯವರ ಅನುವಾದ ಮೌಲಿಕವಾಗಿದ್ದು, ಕನ್ನಡದ್ದೇ ಎನ್ನುವಷ್ಟು ಆಪ್ತವಾಗಿದೆ. ಈ ಕಾರಣಕ್ಕಾಗಿ ಅವರು ಅಭಿನಂದನಾರ್ಹರು. ಇಂಥ ಮೌಲಿಕ ಕೃತಿಗಳ ಅನುವಾದವನ್ನು ಕನ್ನಡ ಚಿಂತನಾಲೋಕ ಅವರಿಂದ ಇನ್ನೂ ಹೆಚ್ಚೆಚ್ಚು ನಿರೀಕ್ಷಿಸುತ್ತದೆ.







- ಡಾ. ಸಂಗಮೇಶ ಎಸ್. ಗಣಿ

ಕನ್ನಡ ಉಪನ್ಯಾಸಕರು,

9743171324

53 views1 comment
bottom of page