top of page

ಜಾಗ ಬಿಡಿ

ಸಮುದ್ರವೇ ನಾನು ಬರುತ್ತಿದ್ದೇನೆ

ಸ್ವಲ್ಪ ಆಚೆ ಸರಿ

ಸಾಕು ನಿನ್ನ ತೆರೆಗಳ ಅಬ್ಬರ

ಈ ನೆಲ ನನಗೆ ಬೇಕಾಗಿದೆ


ಪರ್ವತವೇ ತುಸು ಆಚೆಕಡೆ ಹರಡಿಕೋ

ನಿನ್ನ ಆಡಂಬರದ ದಿಂಬ ಡಂಬಾಚಾರಗಳ ಕಿತ್ತೊಗೆದು ಬಿಡು

ತುಸು ಕೆಲಸವಿದೆ ನನಗಿಲ್ಲಿ


ನೀವೆಲ್ಲ ನೂರಾರು ವರ್ಷಗಳಿಂದ ಹೀಗೆ

ನುಗ್ಗುತ್ತ ಏರುತ್ತ ಆಕ್ರಮಿಸಿಕೊಂಡಿದ್ದೀರಿ

ಸಾಕು ನಿಮ್ಮ ಮೇಲುಸ್ತುವಾರಿ

ನನಗೆ ಒಂದಷ್ಟು ಕೆಲಸವಿದೆ ಇಲ್ಲಿ

ಈ ಜಹಗೀರಿನಲ್ಲಿ


ನೆಲವ ಉತ್ತು ಬಿತ್ತಿ ಬೆಳೆ ತೆಗೆದಿದ್ದೇನೆ

ಎತ್ತರೆತ್ತರ ಕಟ್ಟೋಣಗಳ ಕಟ್ಟಿ

ಅಂತರಿಕ್ಷಕ್ಕೂ ಹಾರಿದ್ದೇನೆ

ಜಲಾಂತರ್ಗಾಮಿಯ ಹೂಡಿದ್ದೇನೆ

ನೆಲೆ ಕೊರೆದು ನೀರು ತೆಗೆದಿದ್ದೇನೆ

ಅನ್ಯಗ್ರಹಕ್ಕೂ ನೆಗೆದಿದ್ದೇನೆ

ತೆಗೆದಿದ್ದೇನೆ ನೆಲದಡಿಯ ನಿಕ್ಷೇಪ

ತೈಲಬಾವಿ ಅನಿಲದ ಕೊಳವೆ


ಲೋಹಗಳನ್ನೆಲ್ಲ ಅಗೆದು ತೆಗೆದಿದ್ದೇನೆ

ತಳಮುಟ್ಟಿ ತಡಕಾಡಿ

ನೀರು ಕೂಡ ಬರಿದು ಮಾಡಿದ್ದೇನೆ

ಹೂಡಿದ್ದೇನೆ ಪ್ರಯೋಗಗಳ ಯಾಗಶಾಲೆ

ಜಗದ್ವಂದ್ಯ ನಾನೀಗ ಹೊರಟಿದ್ದೇನೆ


ನೀವು ನಿಷ್ಕಾರಣ ಕುಳಿತದ್ದು ಸಾಕು

ಏಳಿ ನನಗೆ ಒಂದಷ್ಟು ಕೆಲಸ ಮಾಡಲು ಬಿಡಿ

ತಂದಿದ್ದೇನೆ ಹಾರೆ ಗುದ್ದಲಿ ಸಲಿಕೆ

ಹಾಕಿ ಬೇರೆ ಕಡೆ ನಿಮ್ಮ ಚಾಪೆ!


-ಡಾ. ವಸಂತಕುಮಾರ ಪೆರ್ಲ

32 views1 comment
bottom of page