top of page

ಚುಟುಕು ಸಾಹಿತ್ಯಸಮ್ಮೇಳನದ ಸಮಗ್ರ ವರದಿ

ಸಾಹಿತ್ಯ ಸಮ್ಮೇಳನ

ಚುಟುಕಾಗಲಿಲ್ಲ, ಚುರುಕಾಗಿಯೂ ಇತ್ತು!

************

" ಚುಟುಕು ಸಾಹಿತ್ಯ ಸಮ್ಮೇಳನ" ಅಂದರೂ ಸಮ್ಮೇಳನವೇನೂ ಚುಟುಕಾಗಿರಲಿಲ್ಲ, ಬದಲು ದೊಡ್ಡದೇ ಆಗಿತ್ತು. ಎರಡು ದಿವಸಗಳ ಕಾಲ ರಾಮದುರ್ಗದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ ಮಟ್ಟದ ಮೂರನೆಯ ಚುಟುಕು ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆದು ಸಾಹಿತ್ಯಾಸಕ್ತರ ಮನಕ್ಕೆ ಮುದ ನೀಡಿತು.

ಹಿಂದೆ ಎಚ್. ಡುಂಡಿರಾಜರ ಅಧ್ಯಕ್ಷತೆಯಲ್ಲಿ ಒಂದನೆಯ ಸಮ್ಮೇಳನ ಮತ್ತು ಜಿನದತ್ತ ದೇಸಾಯಿಯವರ ಅಧ್ಯಕ್ಷತೆಯಲ್ಲಿ ಎರಡನೇ ಸಮ್ಮೇಳನಗಳು ಬೆಳಗಾವಿಯಲ್ಲೇ ಜರುಗಿದ್ದವು. ಈ ಸಲ ತಾವು ಮಾಡುತ್ತೇವೆಂದು ಉತ್ಸಾಹದಿಂದ ಮುಂದೆ ಬಂದು ಮಧ್ಯೆ ಎರಡು ವರ್ಷ ಕೊರೊನಾದಿಂದ ನಿರುತ್ಸಾಹಕ್ಕೊಳಗಾದರೂ ಮತ್ತೆ ಅದೇ ಉತ್ಸಾಹದಿಂದ ಮುಂದುವರಿದ ರಾಮದುರ್ಗದ ಚುಟುಕು ಬಳಗದವರು ನಿರೀಕ್ಷೆಗಿಂತ ಉತ್ತಮವಾಗಿ ಮಾಡಿದ್ದು ಶ್ಲಾಘನೀಯ. ಅದಕ್ಕೆ ಕಾರಣರಾದ ಜಿಲ್ಲಾಧ್ಯಕ್ಷ ಅಶೋಕ ಮಳಗಲಿ, ತಾಲೂಕಾ ಘಟಕದ ಸೋಮಶೇಖರ ಸೊಗಲದ, ಬಿ. ಬಿ. ಹಾಜಿ ಬಳಗದವರು ಅಭಿನಂದನಾರ್ಹರು.

ರಾಮದುರ್ಗ ಒಂದು ತಾಲೂಕಾ ಸ್ಥಳ. ಬೆಳಗಾವಿಯಿಂದ ೧೦೦ ಕಿ. ಮೀ. ದೂರ. ಪೌರಾಣಿಕ ಐತಿಹಾಸಿಕ ಹಿನ್ನೆಲೆಯುಳ್ಳ ತಾಣ. ಇಲ್ಲಿಯ ಶಬರಿಕೊಳ್ಳ ಶ್ರೀರಾಮನಿಗೆ ಬೋರೆ ಹಣ್ಣು ಕೊಟ್ಟ ಸ್ಥಳವೆಂಬುದು ಐತಿಹ್ಯ. ಅಲ್ಲಿ ಯಾವತ್ತೂ ಒಂದು ಬೋರೆ ಗಿಡ ಹಣ್ಣು ಕೊಡುತ್ತಲೇಇರುತ್ತದೆ. ಶಬರಿಯ ಮಂದಿರವೂ ಇದೆ. ಹಿಂದೆ ಸಂಸ್ಥಾನಿಕರ ಆಡಳಿತ ಕಂಡ ಕೋಟೆಯೂ ಇದೆ. ಅಲ್ಲೇ ಹತ್ತಿರ ತೊರಗಲ್ ಕೋಟೆಯೂ ಇದೆ.

ಸಾಹಿತ್ಯಿಕವಾಗಿ ನೋಡಿದರೆ " ಹಚ್ಚೋಣ ಕನ್ನಡದ ದೀಪ" ಎಂದ ಕವಿ ಡಿ. ಎಸ್. ಕರ್ಕಿ, " ಕನ್ನಡದ ಪುಲ್ಲೆನಗೆ ಪಾವನ ತುಲಸಿ" ಎಂದು ಹಾಡಿದ ಕವಿ ಸಾಲಿ ರಾಮಚಂದ್ರರಾಯರು ಜನಿಸಿದ ಪಾವನ ಭೂಮಿ. ಇಂತಹ ಪವಿತ್ರ ನೆಲದಲ್ಲಿ ಚುಟುಕು ಸಾಹಿತ್ಯ ಪರಿಷತ್ತು ತಾನೂ ಒಂದು ಕನ್ನಡದ ದೀಪವನ್ನು ಹಚ್ಚಲು ಹೊರಟಿದ್ದೇನೂ ವಿಶೇಷವಲ್ಲ. ಆ ದೀಪ ಹಚ್ಚುವ ಕೆಲಸಕ್ಕೆ ಜಿಲ್ಲೆಯ ಹಿರಿಯ ಸಾಹಿತಿ , ಪತ್ರಕರ್ತ ಶ್ರೀ ಎಲ್. ಎಸ್. ಶಾಸ್ತ್ರಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿತ್ತು. ಶಾಸ್ತ್ರಿ ಯವರು ನೂರಕ್ಕೂ ಹೆಚ್ಚು ಪುಸ್ತಕ ಬರೆದವರು ಮಾತ್ರವಲ್ಲ, ಜಿಲ್ಲೆಯಲ್ಲಿ ಕಳೆದ ೪೦ ವರ್ಷಗಳಿಂದಲೂ ನಿರಂತರವಾಗಿ ಸಾಹಿತ್ಯ / ಪತ್ರಿಕಾರಂಗದಲ್ಲಿ ಚಟುವಟಿಕೆಗಳನ್ನು ನಡೆಸುತ್ತ, ಹೊಸ ಬರೆಹಗಾರರಿಗೆ ಪತ್ರಕರ್ತರಿಗೆ ಬೆಳೆಯಲು ಪ್ರೋತ್ಸಾಹ ನೀಡುತ್ತ ಬಂದವರು. ಜಿಲ್ಲೆಯಲ್ಲಿ ಅನೇಕ ಸಂಘಟನೆಗಳನ್ನು ಕಟ್ಟಿ ಬೆಳೆಸಿ ಎಲ್ಲ ಹತ್ತು ತಾಲೂಕುಗಳಲ್ಲೂ ಪತ್ರಿಕೆ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಜನರ ಅಪಾರ ಪ್ರೀತಿ ವಿಶ್ವಾಸ ಗೌರವ ಪಡೆದವರು. ಅದಕ್ಕೆ ತಕ್ಕಂತೆ ನಡೆದ ಈ ಸಮ್ಮೇಳನದಲ್ಲಿಯೂ ಅವರ ಕುರಿತು ಸಾಕಷ್ಟು ಪ್ರೀತಿ ಗೌರವಗಳು ವ್ಯಕ್ತವಾದವು. ಹಲವರು ಅವರನ್ನು ಸತ್ಕರಿಸಿ ತಮ್ಮ ಪ್ರೀತಿ ವ್ಯಕ್ತಪಡಿಸಿದರು.

ಸಾಲಿ ರಾಮಚಂದ್ರರಾಯರ ಹೆಸರಿನ ವೇದಿಕೆಯಲ್ಲಿ ನಡೆದ ಸಮ್ಮೇಳನಕ್ಕಾಗಿ ದಿ. ೧೫ ರ ಬೆಳಿಗ್ಗೆ ೮. ೩೦ ಕ್ಕೆ ತಾಲೂಕಾ ತಹಶಿಲ್ದಾರ ಶ್ರೀ ಮಲ್ಲಿಕಾರ್ಜುನ ಹೆಗ್ಗಣ್ಣವರ ಅವರಿಂದ ರಾಷ್ಟ್ರ ಧ್ವಜಾರೋಹಣ ಮತ್ತು ಪಿಎಸ್ಐ ಶ್ರೀ ಆರ್. ಎ. ಹಟ್ಟಿ ಅವರಿಂದ ನಾಡಧ್ವಜಾರೋಹಣ ನಡೆಯಿತು. ಸರಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷರಾದ ಶ್ರೀ ರಮೇಶ ಪಿ. ಅರಕೇರಿ ಅವರು ಉಪಸ್ಥಿತರಿದ್ದರು. ನಂತರ ರಾಮದುರ್ಗ ಶಾಸಕರಾದ ಶ್ರೀ ಮಹಾದೇವಪ್ಪ ಯಾದವಾಡ ಅವರು ಮೆರವಣಿಗೆ ಉದ್ಘಾಟಿಸಿದರು. ವೀರಗಾಸೆ ಕುಣಿತ, ಡೊಳ್ಳಿನ ಕುಣಿತ ಸಹಿತ ಎಂಟು ಗ್ರಾಮೀಣ ಕಲಾತಂಡಗಳ ಕಲಾಪ್ರದರ್ಶನದೊಂದಿಗೆ ಭವ್ಯ ಮೆರವಣಿಗೆಯಲ್ಲಿ ಸರ್ವಾಧ್ಯಕ್ಷರಾದ ಎಲ್. ಎಸ್. ಶಾಸ್ತ್ರಿ ಮತ್ತು ರಾಜ್ಯ ಸಂಚಾಲಕರಾದ ಡಾ. ಎಂ. ಜಿ. ಆರ್. ಅರಸ್ ಅವರು ಕುಳಿತ ವಾಹನ ಎರಡು ಕಿಲೋಮೀಟರ್ ತನಕ ನಗರದ ರಸ್ತೆಯಲ್ಲಿ ಸಾಗಿ ಸಾವಿರಾರು ಜನರ ಕಣ್ಮನ ಸೆಳೆಯಿತು.

ಮ. ೧೧.೩೦ ಕ್ಕೆ ಸಮ್ಮೇಳನದ ಉದ್ಘಾಟನಾ ಸಮಾರಂಭ ಚಿಂಚಣಿ ಸಿದ್ಧ ಸಂಸ್ಥಾನಮಠದ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳವರ ದಿವ್ಯ ಸನ್ನಿಧಿಯಲ್ಲಿ ಆರಂಭವಾಯಿತು. ಶ್ರೀ ಗುರು ಪುಟ್ಟರಾಜ ನಾದಸ್ವರ ಸಂಗೀತ ಶಾಲೆ ಮಕ್ಕಳಿಂದ ನಾಡಗೀತೆ ಮತ್ತು ಶ್ರೀ ಮನ್ವಾಚಾರ್ಯ ತಂಡದವರಿಂದ ಹಚ್ಚೇವು ಕನ್ನಡದ ದೀಪ ಪದ್ಯದ ನೃತ್ಯ ನಡೆಯಿತು. ಜಿಲ್ಲಾ ಚುಸಾಪ ಅಧ್ಯಕ್ಷರಾದ ಅಶೋಕ ಮಳಗಲಿಯವರಿಂದ ಸ್ವಾಗತ ಪರಿಚಯ, ಗೌರವಾಧ್ಯಕ್ಷರಾದ ಶ್ರೀ ಪಿ. ಬಿ. ಸ್ವಾಮಿಯವರಿಂದ ಪ್ರಾಸ್ತಾವಿಕ ನುಡಿಗಳಾದವು. ತಾಲೂಕಾ ಅಧ್ಯಕ್ಷ ಬಿ. ಬಿ. ಹಾಜಿಯವರಿಂದ ಗ್ರಂಥಗೌರವ ನಡೆಯಿತು. ಡಾ. ಅರಸ್ ಅವರು ಸಮ್ಮೇಳನದ ಸ್ಮರಣಸಂಚಿಕೆ " ಚುಟುಕು ಪ್ರಭೆ" ಯನ್ನು, ಪ್ರೊ. ಹುಣಶೀಕಟ್ಟೆ ಮತ್ತು ಎಚ್. ಆರ್. ಮುದಿಗೌಡರ ಅವರು ಗುರುಸಿದ್ದಯ್ಯ ಹಿರೆಮಠ ಅನ್ನಪೂರ್ಣಾ ಹಿರೆಮಠ ಮೊದಲಾದವರ ಕೃತಿಗಳನ್ನು ಬಿಡುಗಡೆ ಮಾಡಿದ ನಂತರ ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾಗಿದ್ದ ಜಿನದತ್ತ ದೇಸಾಯಿಯವರು ಮಾತನಾಡಿದರು. ಸರ್ವಾಧ್ಯಕ್ಷರಾದ ಎಲ್. ಎಸ್. ಶಾಸ್ತ್ರಿಯವರು ಅಧ್ಯಕ್ಷಸ್ಥಾನದಿಂದ ತಮ್ಮ ವಿಚಾರಗಳನ್ನು ಮಂಡಿಸಿದರು.

ಶ್ರೀ ಆರ್. ಎಸ್. ಪಾಟೀಲ ಸಾಲಹಳ್ಳಿ ಅವರು ಮುಖ್ಯ ಅತಿಥಿಗಳಾಗಿ, ಆನಂದ ಪುರಾಣಿಕ, ಎಂ. ಎ. ಪಾಟೀಲ ಗೌರವ ಉಪಸ್ಥಿತಿ, ಪ್ರೊ. ಪಿ. ಎಲ್. ಮಿಸಾಳೆಯವರಿಂದ ನಿರೂಪಣೆ, ವಿಜಯ ಶೆಟ್ಟಿಯವರಿಂದ ನೆನಪಿನ ಕಾಣಿಕೆ, ತಾಲೂಕಾ ಕಾರ್ಯದರ್ಶಿ ಸೋಮಶೇಖರ್ ಸೊಗಲದರಿಂದ ವಂದನಾರ್ಪಣೆಗಳಾದವು.

ಮಧ್ಯಾಹ್ನ ಮೊದಲ ಗೋಷ್ಠಿ " ನಾಡುನುಡಿಯ ಅಭಿಮಾನ" . ಜಯಾನಂದ ಮಾದರ ಅವರಿಂದ ಆಶಯ ಭಾಷಣ, ಡಾ. ಸಿ. ಕೆ. ಜೋರಾಪುರರಿಂದ ಬೆಳಗಾವಿ ಜಿಲ್ಲೆಯ ಹಿರಿಮೆ ಗರಿಮೆ ಹಾಗೂ ಡಾ. ಸಿದ್ದಪ್ಪ ಕಟ್ಟೆಕಾರರಿಂದ ರಾಮದುರ್ಗದ ಸಾಂಸ್ಕೃತಿಕ ವೈಭವ ಕುರಿತು ಉಪನ್ಯಾಸಗಳಾದವು. ಡಾ. ಮಾದಣ್ಣವರರಿಂದ ಸ್ವಾಗತ, ನರಸನಗೌಡರಿಂದ ಗ್ರಂಥಗೌರವ, ಆನಂದ ಪಾಟೀಲರಿಂದ ನೆನಪಿನ ಕಾಣಿಕೆ, ಮಹಾದೇವಿ ಕಿತ್ತೂರರಿಂದ ನಿರೂಪಣೆ, ಸುನೀಲ ಕಾಂಬಳೆಯವರಿಂದ ವಂದನಾರ್ಪಣೆಗಳಾದವು.

ಎರಡನೆ ಗೋಷ್ಠಿಯಲ್ಲಿ ಡಾ. ವೈ. ಎಂ. ಯಾಕೊಳ್ಳಿ ಅವರು " ಕನ್ನಡ ಸಾಹಿತ್ಯಕ್ಕೆ ಚುಟುಕು ಪ್ರಕಾರದ ಕೊಡುಗೆ " ಎಂಬ ವಿಷಯವಾಗಿ ವಿದ್ವತ್ಪೂರ್ಣ ಪ್ರಬಂಧ ಮಂಡಿಸಿದರು. ಶ್ರೀ ಇವರು ರೈತರ ಸಮಸ್ಯೆಗಳ ಬಗ್ಗೆ ಮಾತಾಡಿದರು.ಕೆ. ವಿ. ಅಜವಾನರಿಂದ ಸ್ವಾಗತ ,ಜಂಗವಾಡರಿಂದ ಗ್ರಂಥಗೌರವ, ದಸಮನಿಯವರಿಂದ ನೆನಪಿನ ಕಾಣಿಕೆ, ಪಿ. ಡಿ. ಕಾಲವಾಡರಿಂದ ನಿರೂಪಣೆ,ಭೈರಕದಾರರಿಂದ ವಂದನಾರ್ಪಣೆಗಳಾದವು.

ಶರಣ ಸಾಹಿತ್ಯ ಚಿಂತನ ಗೋಷ್ಠಿಯಲ್ಲಿ ಡಾ. ಬಾಳಪ್ಪ ಚಿನಗುಡಿ ಅವರು ಕನ್ನಡ ಸಾಹಿತ್ಯಕ್ಕೆ ವಚನಕಾರರ ಕೊಡುಗೆ ಮತ್ತು ಪ್ರೇಮಕ್ಕ ಅಂಗಡಿಯವರು ವಚನಕಾರ್ತಿಯರ ಕೊಡುಗೆಗಳ ಕುರಿತು ಮಾತನಾಡಿದರು. ಸುರೇಶ ದೇಸಾಯಿ ಸ್ವಾಗತ, ಸುರೇಶ ಕಲ್ಲೂರರಿಂದ ಗ್ರಂತಗೌರವ, ಬಸನಗೌಡ ಪಾಟಿಲರಿಂದ ನೆನಪಿನ ಕಾಣಿಕೆ, ಆರ್. ಎಂ. ಪಾಟೀಲರಿಂದ ನಿರೂಪಣೆ, ಐ. ಪಿ. ಮುಳ್ಳೂರರಿಂದ ವಂದನಾರ್ಪಣೆಗಳಾದವು.

ನಾಲ್ಕನೆಯ ಹಾಸ್ಯಲಾಸ್ಯ ಗೋಷ್ಠಿಯಲ್ಲಿ ಬೆಳಗಾವಿಯ ಹಾಸ್ಯಕೂಟದ ಕಲಾವಿದರಾದ ಗುಂಡೇನಟ್ಟಿ ಮಧುಕರ, ಅಶೋಕ ಮಳಗಲಿ, ಪ್ರೊ. ಜಿ. ಕೆ. ಕುಲಕರ್ಣಿ, ಜಿ. ಎಸ್. ಸೋನಾರ ಮತ್ತು ಎಂ. ಬಿ. ಹೊಸಳ್ಳಿ ಹಾಸ್ಯಚಟಾಕಿಗಳಿಂದ ಜನರನ್ನು ನಗಿಸಿದರು. ಮಲ್ಲಿಕಾರ್ಜುನ ಶಿರ್ಕೆ ಸ್ವಾಗತ, ಪುಂಡಲೀಕ ಬಡಿಗೇರ ರಿಂದ ಗ್ರಂಥ ಗೌರವ , ಸಣ್ಣನಿಂಗಪ್ಪ ಸೊಗಲದರಿಂದ ನೆನಪಿನ ಕಾಣಿಕೆ, ಮಲ್ಲಿಕಾರ್ಜುನ ಭಾವಿಕಟ್ಟಿಯವರಿಂದ ವಂದನಾರ್ಪಣೆ, ಅರವಿಂದ ಹುನಗುಂದ ರಿಂದ ನಿರೂಪಣೆಗಳಾದವು.‌

‌ ನಂತರ ಶ್ರೀಮತಿ ಶಂಕ್ರಮ್ಮ ಲ. ಮುಗಳಿ ಅವರ ನೇತೃತ್ವದಲ್ಲಿ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಡಾ. ಕೆ. ವಿ. ಪಾಟೀಲ್ ಉದ್ಘಾಟಿಸಿದರು. ಮಾರುತಿ ಪ್ಯಾಟಿ ನಿರೂಪಿಸಿದರು.

*

ಎರಡನೆಯ ದಿನ ಬೆಳಿಗ್ಗೆ ಶ್ರೀ ಅಪ್ಪಾಸಾಹೇಬ ಅಲಿಬಾದಿಯವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಚುಟುಕು ವಾಚನ ಗೋಷ್ಠಿಯನ್ನು ಜಿ. ವೈ. ಕರಮಲ್ಲಪ್ಪನವರ ಉದ್ಘಾಟಿಸಿದರು . ನಾಗೇಶ ನಾಯಕ ಅವರು ಆಶಯ ಭಾಷಣ ಮಾಡಿದರು. ೫೦ ಕ್ಕೂ ಹೆಚ್ಚು ಕವಿ/ ಕವಯಿತ್ರಿಯರು ಚುಟುಕುಗಳನ್ನೋದಿದರು. ಮಹಾಂತೇಶ ಸಿದ್ಧಿಬಾವಿಯವರಿಂದ ಗ್ರಂಥಗೌರವ , ರಾಚಪ್ಪ ಪಾತಾಳಿಯಿಂದ ನೆನಪಿನ ಕಾಣಿಕೆ, ಸಂಜೀವ ಲದ್ದಿಮಠ ಮತ್ತು ಕುಮಾರ ತಳವಾರರಿಂದ ನಿರೂಪಣೆ, ಡಾ. ದೊಡ್ಡಲಿಂಗಪ್ಪಗೋಳರಿಂದ ವಂದನಾರ್ಪಣೆಗಳಾದವು.

ಸ್ತ್ರೀ ಶಕ್ತಿ ಎಂಬ ಗೋಷ್ಠಿಯಲ್ಲಿ ಶ್ರೀಮತಿ ದಿಪಿಕಾ ಚಾಟೆಯವರ ಅಧ್ಯಕ್ಷತೆಯಲ್ಲಿ ಕರ್ನಾಟಕದ ವೀರರಾಣಿಯರ ಕುರಿತು ಶ್ರೀಮತಿ ರಜನಿ ಜೀರಗ್ಯಾಳ ( ಬೆಳವಡಿ ಮಲ್ಲಮ್ಮ), ಡಾ. ಪ್ರೇಮಾ ಯಾಕೊಳ್ಳಿ ( ಚೆನ್ನಭೈರಾದೇವಿ), ರಾಜನಂದಾ ಘಾರ್ಗಿ( ಕಿತ್ತೂರು ಚೆನ್ನಮ್ಮ), ಹಮೀದಾ ಬೇಗಂ ದೇಸಾಯಿ ( ರಾಣಿ ಅಬ್ಬಕ್ಕ ಮತ್ತು ಕೆಳದಿ ಚೆನ್ನಮ್ಮ) ಉಪನ್ಯಾಸಗಳನ್ನಿತ್ತರು. ರಾಜಶ್ರೀ ಗುದಗನವರ ಸ್ವಾಗತ, ಶೈಲಾ ಸೊಗಲದರಿಂದ ಗ್ರಂಥಗೌರವ, ಸುಧಾರಾಣಿ ಅಗಾಸಿಯವರಿಂದ ನೆನಪಿನ ಕಾಣಿಕೆ, ಸುಮಂಗಲಾ ಕಳಸಪ್ಪನವರರಿಂದ ನಿರೂಪಣೆ, ಶಾರದಾ ಪಾಲೇಕರರಿಂದ ವಂದನಾರ್ಪಣೆಗಳಾದವು.

ಸನ್ಮಾನ ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದಿಂದ ಪ್ರೊ. ಸುರೇಶ ಗುದಗನವರ, ಜಾನಪದ ಕ್ಷೇತ್ರದಿಂದ ಈಶ್ವರಚಂದ್ರ ಬೆಟಗೇರಿ, ರಂಗಭೂಮಿಯಿಂದ ಬಸವರಾಜ ಪಟ್ಟಣಶೆಟ್ಟಿ, ಸಂಗೀತ ಕ್ಷೇತ್ರದಿಂದ ಪಿ. ಎಂ. ಹೂಗಾರ, ಶಿಕ್ಷಣ ಕ್ಷೇತ್ರದಿಂದ ಭಾಗೀರಥಿಬಾಯಿ ಹಿರೇಮಠ, ಕೃಷಿ ವಾಣಿಜ್ಯ ಕ್ಷೇತ್ರದಿಂದ ಅಖಿಲ ಸರದೇಶಪಾಂಡೆ, ವೈದ್ಯಕೀಯ ಕ್ಷೇತ್ರದಿಂದ ಡಾ. ಶಿವಲೀಲಾ ಕಂಬಿ, ಸಮಾಜಸೇವಾ ಕ್ಷೇತ್ರದಿಂದ ಚಿದಾನಂದ ಸರವಡೆ ಇವರನ್ನು ಗೌರವಿಸಲಾಯಿತು. ಜಿಲ್ಲಾಧ್ಯಕ್ಷ ಅಶೋಕ ಮಳಗಲಿ, ತಾಲೂಕಾ ಕಾರ್ಯದರ್ಶಿ ಸೊಗಲದ ಕಾರ್ಯಕ್ರಮ ನಡೆಸಿಕೊಟ್ಟರು.

ಸಮಾರೋಪ ಸಮಾರಂಭ ಮುಳ್ಳೂರು ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಶ್ವಾಮಿಗಳವರ ದಿವ್ಯ ಸನ್ನಿಧಿಯಲ್ಲಿ ಜರುಗಿತು. ಶ್ರೀ ಧನಲಕ್ಷ್ಮಿ ಸಹಕಾರಿ ಸಕ್ಕರೆ ಕಾರಖಾನೆ ಅಧ್ಯಕ್ಷರಾದ ಶ್ರೀ ಮಲ್ಲಣ್ಣ ಸಿ. ಯಾದವಾಡ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಶ್ರೀ ಆರ್. ಎಂ. ಪಾಟೀಲರು ಸಮಾರೋಪ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಶಾಸ್ತ್ರಿ ದಂಪತಿಗಳನ್ನು ಸತ್ಕರಿಸಲಾಯಿತು. ವಿಜಯ ನಾಯಕರಿಂದ ಸ್ವಾಗತ, ರವೀಂದ್ರ ಹರವಿಯವರಿಂದ ಗ್ರಂಥಗೌರವ, ಪ್ರೊ. ಬಿ. ವಿ. ಸೋಮಣ್ಣವರರಿಂದ ನಿರೂಪಣೆ, ತೇಜಪ್ಪ ಮರಡೂರ ಮಹಾಂತೇಶ ಪಾಶ್ಚಾಪೂರರಿಂದ ನೆನಪಿನ ಕಾಣಿಕೆ, ಆರ್. ಸಿ. ರಾಠೋಡರಿಂದ ವಂದನಾರ್ಪಣೆಗಳಾದವು.

ಸಾಹಿತ್ಯಾಸಕ್ತರಿಗೆ ಎರಡೂ ದಿನ ಉತ್ತಮ ಭೋಜನ ಮತ್ತು ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಸೊಗಲದ / ಹಾಜಿ ಬಳಗದವರು ಅಶೋಕ ಮಳಗಲಿಯವರ ಮಾರ್ಗದರ್ಶನದಲ್ಲಿ ಶಿಸ್ತಿನಿಂದ ಮತ್ತು ವ್ಯವಸ್ಥಿತವಾಗಿ ಸಮ್ಮೇಳನವನ್ನು ಸಂಘಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ರಾಜ್ಯ ಸಂಚಾಲಕರಾದ ಡಾ. ಎಂ. ಜಿ. ಆರ್. ಅರಸ್ ಅವರು ಎರಡೂ ದಿನ ಹಾಜರಿದ್ದು ಪ್ರೋತ್ಸಾಹಿಸಿದರು. ಬೆಳಗಾವಿಯ ಪ್ರಹ್ಲಾದ ಪ್ರಕಾಶನದವರು ಪುಸ್ತಕ ಪ್ರದರ್ಶನ ಮಾರಾಟ ಮಳಿಗೆಯನ್ನಿಟ್ಟಿದ್ದರು .

ಚಿತ್ರದಲ್ಲಿ: ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಚಿಂಚಣಿ ಶ್ರೀಗಳು, ಡಾ. ಅರಸ್, ಜಿನದತ್ತ ದೇಸಾಯಿ, ಎಲ್. ಎಸ್. ಶಾಸ್ತ್ರಿ, ಪಿ. ಬಿ. ಸ್ವಾಮಿ, ಅಶೋಕ ಮಳಗಲಿ, ಆರ್. ಎಸ್. ಹಿರೇಮಠ, ಪ್ರೊ. ಹುಣಶಿಕಟ್ಟಿ, ಸೊಗಲದ, ಹಾಜಿ, ಆನಂದ ಪುರಾಣಿಕ, ಎಂ. ಎ. ಪಾಟೀಲ ಮೊದಲಾದವರು.


ಎಂ. ಎ. ಪಾಟೀಲ

23 views0 comments
bottom of page