top of page

ಕಬೀರ ಕಂಡಂತೆ... ೮೯

ಹುತ್ತಕ್ಕೆ ಕೈ ಹಾಕುವ ಹುಚ್ಚುತನ ಬೇಡ..!ಬಿಟ್ಟಕರತಾ ಥಾ ತೊ ಕ್ಯೊಂ ರಹಾ, ಅಬ ಕಾರಿ ಕ್ಯೊಂ ಪಛತಾಯ|

ಬೋವೆ ಪೇಡ ಬಬುಲ ಕಾ, ಆಮ ಕಹಾಂ ಸೆ ಖಾಯ||

ತಂದೆ, ತಾಯಿ,ಗುರು, ಹಿರಿಯರು ಚಿಕ್ಕ ಮಕ್ಕಳಿಗೆ ಜೀವನದ ಒಳಿತು-ಕೆಡಕುಗಳ ಬಗ್ಗೆ ತಿಳಿ ಹೇಳಿ ಅವರಲ್ಲಿ ವಿವೇಚನಾ ಬುದ್ಧಿಯನ್ನು ಬೆಳೆಸುವದು ಉತ್ತಮ‌ ಸಂಸ್ಕಾರಗಳಲ್ಲಿ ಪ್ರಮುಖವಾದದ್ದು. ಜ್ಞಾನ, ಬುದ್ಧಿವಂತಿಕೆಗಳು ಮನುಷ್ಯನಿಗೆ ಹುಟ್ಟಿನಿಂದಲೆ ಸಿಗಲಾರವು.‌ ನಿರಂತರ ಹುಡುಕಾಟ ಮತ್ತು ಸೂಕ್ತ ಮಾರ್ಗದರ್ಶನದಿಂದ ಮಾತ್ರ ಒಳ್ಳೆಯ ಜ್ಞಾನ ಪ್ರಾಪ್ತಿ -ಯಾದೀತು. ಆದರೆ ಮುಖ್ಯವಾಗಿ ಪಾಲಕರು, ತಮ್ಮ ಮಕ್ಕಳು ಮಾಡುವ ತಪ್ಪುಗಳನ್ನು ಮುಚ್ಚಿಡುವ ಮೂಲಕ ಅಪ್ರತ್ಯಕ್ಷವಾಗಿ ಮಕ್ಕಳಿಗೆ ತಪ್ಪು ದಾರಿ ತುಳಿಯಲು ಪ್ರೋತ್ಸಾಹ ನೀಡುತ್ತಾರೆ. ಗುಲಾಬಿ ಗಿಡ -ದಂತೆ ಸುಂದರ ಪುಷ್ಪಗಳಿಂದ ನಳನಳಿಸಬೇಕಾದ ಮಕ್ಕಳು, ಹಿರಿಯರ ಈ ರೀತಿಯ ನಡುವಳಿಕೆಯಿಂದ ಪಾಪಾಸು ಕಳ್ಳಿಯಾಗಿ ಬೆಳೆದು ಸಮಾಜ ಕಂಟಕರಾಗಿ ನಿಲ್ಲುತ್ತಾರೆ! ಮಕ್ಕಳ ತಪ್ಪಿನ‌ ಕುರಿತು ಮೌನ ವಹಿಸುತ್ತ ಅಥವಾ ಅವುಗಳನ್ನು ಸಮರ್ಥಿಸುತ್ತ ಹಿರಿಯರು ನಡೆದಾಗ ಕೊನೆಗೆ ಅದರ ದುಷ್ಪರಿಣಾಮಗಳಿಗೆ ಪಶ್ಚಾತ್ತಾಪಪಟ್ಟರೆ ಏನು ಪ್ರಯೋಜನ!?


"ಬಿತ್ತಿದ್ದನ್ನು ಬೆಳೆದುಕೊ" ಎಂಬ ಗಾದೆಯಂತೆ, ಸತ್ಕರ್ಮಕ್ಕೆ ಸತ್ಫಲ ಮತ್ತು ದುಷ್ಕರ್ಮಕ್ಕೆ ದುಷ್ಫಲ -ಗಳು ಕಟ್ಟಿಟ್ಟ ಬುತ್ತಿ. ಆರಂಭದಲ್ಲೇ ಈ ಕುರಿತು ಎಚ್ಚರ ವಹಿಸುವದನ್ನು ಬಿಟ್ಟು ನಂತರ ಹಳಹಳಿಸುವ ಮನುಷ್ಯನ ಪ್ರವೃತ್ತಿಯ ಕುರಿತು ಸಂತ ಕಬೀರರು,

ಕುಕರ್ಮ ಮಾಡಿದ ಬಳಿಕ ಪಶ್ಚಾತ್ತಾಪಪಟ್ಟರೆ ಫಲವಿಲ್ಲ|

ಜಾಲಿಯ ಗಿಡ ನೆಟ್ಟು, ಮಾವು ಬಯಸಿದರೆ ಸಿಗುವದಿಲ್ಲ ||

ಎಂದು ಸ್ಪಷ್ಟಪಡಿಸಿದ್ದಾರೆ. ಕೆಲವು ಸಲ ಗುರುಗಳು, ಹಿರಿಯರು ಎಚ್ಚರಿಸಿದರೂ ಮಕ್ಕಳು ಉಡಾಫೆ ಪ್ರವೃತ್ತಿ, ಗರ್ವದಿಂದ ಅದನ್ನು ಕಡೆಗಣಿಸುತ್ತಾರೆ. ನಂತರ ಅದರ ದುಷ್ಪರಿಣಾಮ ಕಂಡು ಹೌಹಾರಿದರೆ, ದುಃಖಪಟ್ಟರೆ ಅದು ವ್ಯರ್ಥವಾದೀತು. ಬೇವಿನ ಬೀಜ ಬಿತ್ತಿ ಮಾವಿನ ಫಲ ಅಪೇಕ್ಷಿಸಿದಂತೆ, ಮೈತುಂಬ ಮುಳ್ಳಿರುವ ಜಾಲಿ ಗಿಡ ನೆಟ್ಟು, ಪೋಷಿಸಿ ಅದರಿಂದ ಸಿಹಿ ಹಣ್ಣು ಬಯಸಿದರೆ ವ್ಯರ್ಥವಾದೀತು! ಒಮ್ಮೆ ಮಾಡಿದ ತಪ್ಪನ್ನು ತಿದ್ದಿಕೊಳ್ಳುತ್ತ ಸನ್ಮಾರ್ಗದಲ್ಲಿ ನಡೆಯುವದು ಅತ್ಯಂತ ಅವಶ್ಯ.


ಹುತ್ತಕ್ಕೆ ಕೈ ಹಾಕುವ ಹುಚ್ಚುತನ ಏತಕ್ಕೆ?

ಮತ್ತೆ ಉನ್ಮತ್ತತೆಯಲಿ ನೀ ಮೆರೆಯಲೇಕೆ?|

ಕಿಚ್ಚನು ಬಿಗಿದಪ್ಪಿದರೆ ಬದುಕು ಸುಟ್ಟೀತು

ಎಚ್ಚರಿಕೆ ನಡೆಯಿರಲಿ - ಶ್ರೀವೆಂಕಟ||


ಶ್ರೀರಂಗ ಕಟ್ಟಿ ಯಲ್ಲಾಪುರ.

4 views0 comments
bottom of page