top of page

ಕಬೀರ ಕಂಡಂತೆ...೭೧

ತನುರೋಗ ಗುಣವಾದೀತು, ಮನಕೆ ಮದ್ದಿಲ್ಲ..!


ಧರತಿ ಫಾಟೆ ಮೇಘ ಮಿಲೆ, ಕಪಡಾ ಫಾಟೆ ಡೋರ|

ತನ ಫಾಟೆ ಕೊ ಔಷಧಿ, ಮನ ಫಾಟೆ ನಹಿಂ ಟೋರ ||


ಜಗತ್ತಿನಲ್ಲಿ ಯಾವುದೇ ವಸ್ತು ಹಾಳಾದರೂ ಅದನ್ನು ಸರಿಪಡಿಸುವ ಉಪಾಯ ಇದ್ದೇ ಇದೆ. ಬಿಸಿಲಿನ ಝಳಕ್ಕೆ ಭೂಮಿ ಬಿರುಕು ಬಿಡಬಹುದು. ಅಸಗ ಮಳೆ ಬಂದರೆ ಬಿರುಕುಗಳು ದೂರವಾಗಿ ಎಲ್ಲ ಒಂದಾಗುವ ಅವಕಾಶವಿದೆ. ಒಂದು ವೇಳೆ ಬಟ್ಟೆ ಹರಿದರೆ ದಾರದಿಂದ ಅದನ್ನು ಹೊಲಿದು ಸರಿಪಡಿಸಬಹುದು. ಅದೇ ರೀತಿ ದೇಹಕ್ಕೆ ಏನಾದರೂ ಗಾಯವಾದರೆ, ಸೂಕ್ತ ಔಷಧೋಪಚಾರದಿಂದ ಅದನ್ನು ಗುಣಪಡಿಸಬಹುದು. ಆದರೆ ಮನಸ್ಸು ಮುರಿದರೆ ಅದಕ್ಕೆ ಪರಿಹಾರ ಎಲ್ಲಿದೆ? ಹಣ ಮತ್ತು ಯೌವನ ಕಾಲಕ್ರಮೇಣ ಗತಿಸಿಹೋಗಬಹುದು. ಆದರೆ ನೈಜ ಸ್ನೇಹ ಸಂಬಂಧ ಜೀವನದ ಕೊನೆವರೆಗೂ ಉಳಿದೀತು. ಸ್ನೇಹ ಬಾಂಧವ್ಯದ ಸೌಧ ಕಟ್ಟಲು ವರ್ಷಗಳ ಕಠಿಣ ಪರಿಶ್ರಮ ಅಗತ್ಯವಾಗಿದ್ದು ಈ ಬಾಂಧವ್ಯ ಮುರಿದು ಬೀಳಲು ಒಂದು ಕ್ಷಣ ಸಾಕು. ಅತ್ಯಂತ ಕಾಳಜಿಯಿಂದ ಸಂಬಂಧಗಳನ್ನು ಕಾಪಿಟ್ಟುಕೊಂಡು

ನಡೆದಾಗ ಬದುಕು ಶ್ರೀಮಂತವೆನಿಸೀತು. ಒಂದು ಬಾರಿ ಹರಿದ ಬಾಂಧವ್ಯದ ಎಳೆಯನ್ನು ಮತ್ತೆ ಸರಿಪಡಿಸುವದು ಕಷ್ಟ ಸಾಧ್ಯ. ತುಂಡಾದ ಎಳೆಗಳನ್ನು ಗಂಟು ಹಾಕಿ ಜೋಡಣೆ ಮಾಡಿದರೂ ಆ ಗಂಟು ಮಾತ್ರ ಎದ್ದು ಕಾಣುತ್ತದೆ.

ಸಂತ ಕಬೀರರು ಈ ದೋಹೆಯಲ್ಲಿ,

ಮಣ್ಣ ಬಿರುಕು ಮುಚ್ಚೀತು ಮಳೆ, ದಾರವಿದೆ ಬಟ್ಟೆ ಹರಿದರೆ|

ದೇಹದ ರೋಗಕ್ಕಿದೆ ಔಷಧಿ, ಮದ್ದಿಲ್ಲ ಮನ ಮುರಿದರೆ||

ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಜಗತ್ತಿನಲ್ಲಿ ಸರಿಪಡಿಸ -ಲಾಗದ್ದು ಎಂದರೆ ಮನಸ್ಸು. ಸ್ನೇಹ ಮತ್ತು ಪ್ರೀತಿಯ ಸಂಬಂಧಗಳು ಬಹಳ ಸೂಕ್ಷ್ಮ. ಅವುಗಳಿಗೆ ನಿಷ್ಕಲ್ಮಷ ಪ್ರೀತಿ, ವಿಶ್ವಾಸ, ಬದ್ಧತೆಗಳು ಅಗತ್ಯ. ಹೃದಯದಿಂದ ಬೆಸೆಯಲ್ಪಟ್ಟ ಇಂಥ ಸಂಬಂಧಗಳಲ್ಲಿ ಹಣಕಾಸು ಅಥವಾ ಇನ್ನಾವುದೇ ವ್ಯವಹಾರ ನಡೆದರೆ ಆಗ ಮನಸ್ತಾಪ, ಅವಿಶ್ವಾಸಗಳು ಹೆಚ್ಚಾಗುವ ಸಾಧ್ಯತೆಯಿದ್ದು ಮನಸ್ಸು ಮುರಿಯುತ್ತದೆ. ಹಾಗಾಗಿ "ಸಂಬಂಧಿಕರಲ್ಲಿ‌ ವ್ಯವಹಾರ ಮಾಡವಾರದು" ಎಂಬ ನಾಣ್ಣುಡಿಯೇ ಇದೆ.


ಇದರ ಹೊರತಾಗಿ ಅಹಂಕಾರ, ಧೋರಣೆಯ ನಿಲುವು ಖಂಡಿತವಾಗಿಯೂ ಸಂಬಂಧಗಳಲ್ಲಿ ಇರಲೇಬಾರದು. ತಪ್ಪಾಗಿದ್ದರೆ ಕ್ಷಮೆ ಕೇಳುವ ಉದಾರತೆ ನಮಗಿರಬೇಕು.‌ ಈ ರೀತಿ ಕ್ಷಮೆ ಕೇಳುವದರಿಂದ, ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುವದರಿಂದ ಮಾಸಿದ ಸಂಬಂಧ ಪುನರ್ ಸ್ಥಾಪನೆ -ಯಾದೀತು. ಅಪ್ಪಟ ಸ್ನೇಹ, ಪ್ರೀತಿಯ ಬಾಂಧವ್ಯಗಳು ಸುಂದರ ಬದುಕಿಗೆ ಅಗತ್ಯವಾಗಿದ್ದು ಅವುಗಳನ್ನು ಕಾದುಕೊಳ್ಳುವದೇ ಜೀವನದ ಪರಮ ಗುರಿಯಾಗಬೇಕು.


ಇಳೆಯ ಬಿರುಕು ಮುಚ್ಚುವದು ಮಳೆ

ನೂಲು ಹೊಲಿದೀತು ಹರಕು ಅರಿವೆ|

ತನುರೋಗ ಗುಣ ಮಾಡೀತು ಔಷಧಿ

ಮನಕ್ಕೆ ಮದ್ದಿಲ್ಲ - ಶ್ರೀವೆಂಕಟ||



ಶ್ರೀರಂಗ ಕಟ್ಟಿ ಯಲ್ಲಾಪುರ.

5 views0 comments
bottom of page