top of page

ಕಬೀರ ಕಂಡಂತೆ...೫೩

ಅಂತರಂಗದ ಪ್ರೀತಿಗಿದೆ ತ್ಯಾಗದ ಹೊಳಪು..


ಪ್ರೇಮ ಪ್ಯಾಲಾ ಜೊ ಪೀಯೆ, ಶೀಶ ದಕ್ಷಿಣಾ ದೇಯ|

ಲೋಭ ಶೀಶ ನ ದೇಸಕೆ,ನಾಮ ಪ್ರೇಮಕಾ ಲೋಯ||


ಯಾವುದೇ ರೀತಿಯ ಪರಿಶುದ್ಧ ಪ್ರೀತಿಯಿದ್ದರೂ ಅಲ್ಲಿ ಕಷ್ಟ, ಹೋರಾಟ, ತ್ಯಾಗಗಳು ಇದ್ದೇ ಇರುತ್ತವೆ. ತಂದೆ, ತಾಯಿಯರು ತಮ್ಮ ಮಕ್ಕಳನ್ನು ಏಕೆ ಪ್ರೀತಿಸುತ್ತಾರೆ ಎಂದರೆ ಅವರು ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಬೆವರು, ರಕ್ತ ಹರಿಸುತ್ತಾರೆ. ಸಮಾಜ, ದೇಶದ ಮೇಲೆ ಪ್ರೀತಿ ಇರುವ ಸಮಾಜ ಸುಧಾರಕರು, ದೇಶಭಕ್ತರು ತಮ್ಮ ಕುಟುಂಬ ಸ್ವಾಸ್ಥ್ಯ ವನ್ನು ತ್ಯಾಗ ನಾಡಿದ ಅನೇಕ ಉದಾಹರಣೆಗಳಿವೆ. ಇತರ ವ್ಯಕ್ತಿಗಳ ಮೇಲೆ ಪ್ರೇಮಭಾವ ಹೊಂದಿದವರು ಅವರಿಗಾಗಿ ಎಲ್ಲವನ್ನೂ ತ್ಯಾಗ ಮಾಡಲು ಸಿದ್ಧರಿರುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರೀತಿಯ ಜೊತೆಜೊತೆಗೆ ಸಂಕಷ್ಟ, ತ್ಯಾಗ, ಬಲಿದಾನ ಗಳೂ ನೆರಳಾಗಿ ಹಿಂಬಾಲಿಸುತ್ತವೆ ಎಂದರ್ಥ. ದೇಶದ ಮೇಲೆ ಅಪಾರ ಪ್ರೀತಿ ಹೊಂದಿದ್ದ ಭಗತಸಿಂಗ್, ಬಟುಕೇಶ್ವರ ದತ್ತ, ಸುಖದೇವ, ಸುಭಾಶ್ಚಂದ್ರ ಬೋಸ ಮುಂತಾದ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದ ಇತಿಹಾಸ.


ಒಬ್ಬ ಮನುಷ್ಯ ಇನ್ನೊಬ್ಬನನ್ನು ಪ್ರೀತಿಸುವ ವಿಷಯ ಎಲ್ಲ ಕಾಲದಲ್ಲೂ ನಡೆದುಕೊಂಡೇ ಬಂದಿದೆ. ಈ ಪ್ರೇಮದ ಕುರಿತು ಸಂತ ಕಬೀರರು,

*"ಪ್ರೇಮದ ರುಚಿ ಹತ್ತಿದವ, ತ್ಯಾಗಕ್ಕೆ ಸಿದ್ಧನಾದಾನು|

ತ್ಯಾಗ ಮಾಡದ ಲೋಭಿ,ಪ್ರೇಮ ನಾಟಕವಾಡ್ವನು||*

ಎಂದು ಹೇಳುತ್ತ ಪ್ರೇಮ, ತ್ಯಾಗವನ್ನು ಬಯಸುತ್ತದೆ ಎಂದಿದ್ದಾರೆ. ಪ್ರೇಮದ ಕಾರಣಕ್ಕಾಗಿ ಸ್ವಂತ ಸುಖ ಅಷ್ಟೇಯೇಕೆ ಪ್ರಾಣವನ್ನೂ ತ್ಯಾಗ ಮಾಡಲು ಹಿಂಜರಿಯುವ ವ್ಯಕ್ತಿ ಪ್ರೇಮದ ನಾಟಕ ಆಡುತ್ತಾನೆ ಹೊರತು ಅದು ಎಂದಿಗೂ ಅಪ್ಪಟ ಪ್ರೇಮ ಎನಿಸಲಾರದು ಎಂಬುದು ಕಬೀರರ ಅಭಿಪ್ರಾಯ.


ಕೆಲವು ಢೋಂಗಿ ವ್ಯಕ್ತಿಗಳು ಹೆಣ್ಣಿನ ಬಾಹ್ಯ ಸೌಂದರ್ಯಕ್ಕೆ ಮರುಳಾಗಿ, ಕಾಮ ವಾಸನೆಯಿಂದ ತಾವು ಮರಳು ಮಾಡಿದವಳ ಮೇಲೆ ಅತ್ಯಾಚಾರ ಎಸಗಲು, ಕೊಲೆ ಮಾಡಲು ಹೇಸದ ಪ್ರಕರಣಗಳೂ ಈ ಸಮಾಜದಲ್ಲಿವೆ. ಭಕ್ತ-ಭಗವಂತನ ಮಧ್ಯದ ಪ್ರೀತಿ ಎಲ್ಲಕ್ಕಿಂತ ಮಿಗಿಲು. ಅಲ್ಲಿಯೂ ಸಹ ತ್ಯಾಗ ಮತ್ತು ಸಮರ್ಪಣಾ ಭಾವ ಅತ್ಯಂತ ಮುಖ್ಯ. ಐಹಿಕ ಸುಖೋಪಭೋಗಗಳನ್ನು ತೊರೆದು ಭಕ್ತ, ಏಕಾಗ್ರ ಚಿತ್ತದಿಂದ ಭಗವಂತನನ್ನು ಆರಾಧಿಸುವದೇ ನಿಜವಾದ ಭಕ್ತಿ. ತ್ಯಾಗ, ಸಮರ್ಪಣೆಯಿಲ್ಲದ ಪ್ರೀತಿಗೆ ಅರ್ಥವಿಲ್ಲವೆಂದು ತಿಳಿದು ನಡೆದಾಗ ಶುದ್ಧಾಂತಃಕರಣದ ಪ್ರೀತಿಯ ಅನಾವರಣವಾದೀತು!


ಪ್ರೇಮವೆಂಬ ದೀಪವದು ನೀಡುವದು ಬೆಳಕು

ಪ್ರೇಮ-ಪ್ರೀತಿಯಲ್ಲಡಗಿದೆ ತ್ಯಾಗದ ಹೊಳಪು|

ಅಂತರಂಗದೊಳು ಪ್ರಜ್ವಲಿಸಿ ಭಗವಂತನ ಪ್ರೀತಿ

ಸಂತನಾಗುವನು ನರ - ಶ್ರೀವೆಂಕಟ||


ಶ್ರೀರಂಗ ಕಟ್ಟಿ ಯಲ್ಲಾಪುರ.

3 views0 comments
bottom of page