top of page

ಕೋವಿಡ್ ಮತ್ತು ಕಮಲಮ್ಮ....

ಕಮಲಮ್ಮ ಎಂಬ ಪುರಾತನೆಯು ನಮ್ಮೂರ ಗ್ರಾಮ ಪಂಚಾಯತದ ಅಧ್ಯಕ್ಷೆಯಾದುದೇ ಒಂದು ಪವಾಡ. ನಮ್ಮೂರ ಪುರಾತನರಲ್ಲಿಯೇ ಪ್ರಥಮನಾದ ಸುಬ್ಬಜ್ಜ ತನ್ನ ಪ್ರಾಯದ ಉರಾವರಿ ಕಾಲದಿಂದಲೂ ಅವಳ ಮೇಲೆ ಇಟ್ಟುಕೊಂಡು ಬಂದಿದ್ದ ಅರೆಪಾವು ‘ಲವ್ವು’ ಎಂಬ ಕಾಮದ ಪಿತ್ಥವೇ ಪ್ರಧಾನವಾಗಿ ಅವಳು ಪಂಚಾಯತದ ಅಧ್ಯಕ್ಷೆಯಾಗುವಂತಾಗಿದ್ದು ಪವಾಡವಲ್ಲದೆ ಇನ್ನೇನಾಗಲು ಸಾಧ್ಯ? ಅಲ್ಲವಾದರೆ ಸುಬ್ಬಜ್ಜ ತನ್ನ ಬದುಕೆಂಬ ಮಡಕೆಗೆ ಅಂಟಿಕೊಂಡಿದ್ದ ‘ಅಂದಕಾಲತ್ತಿಲ್ ಪ್ರಿಯತಮೆ’ಯ ಮೇಲಣ ಲವ್ವಿನ ಕಾಟು-ಕಸರನ್ನು ಬಾಚಿಬಳಿದು ಮುಪ್ಪಾನುಮುಪ್ಪಾಗುವವರೆಗೂ ಇಟ್ಟುಕೊಳ್ಳುವುದೆಂದರೇನು? ‘ಕಾಡು ಬಾ....’ ಎನ್ನುವ ಪಿತುಗುಡುವ ವೃದ್ಧಾಪ್ಯದಲ್ಲಿಯೂ ಕಮಲಮ್ಮ ತನ್ನ ಮನೆಬಾಗಿಲಿಗೆ ಬಂದೊಡನೆ ನಾಚಿ ನೀರಾದಂಥ ಅನುಭವವನ್ನು ಅನುಭವಿಸಿದ್ದೇನು ಸಾಮಾನ್ಯವೆ?


ಅನುದಿನವೂ ಬೆಳ್ಳಾನ ಬೆಳಗ್ಗೆ ಹಾಸಿಗೆ ಪಿಂಡಿಯನ್ನು ಸುತ್ತಿಡುತ್ತಲೇ ಸೊಸೆಯೊಂದಿಗೆ ಒಂದು ಸೇರು ಜಗಳದ ತಾಲೀಮು ಮುಗಿಸಿಕೊಂಡು ಒಬ್ಬರ ಮನೆಯಲ್ಲಿ ಚಾ, ಇನ್ನೊಬ್ಬರ ಮನೆಯಲ್ಲಿ ದೋಸೆ, ಮತ್ತೊಬ್ಬರ ಮನೆಯಲ್ಲಿ ಊಟ... ಅವರ ಮನೆಯ ವರ್ತಮಾನ ಇವರ ಮನೆಗೆ, ಇವರ ಮನೆಯ ಸುದ್ದಿಸುಕಾಲು ಅವರ ಮನೆಗೆ... ಹೀಗೆ ತಾನಾಯಿತು ತನ್ನ ಹಚ್ಚಿಕುಟ್ಟಿ ವ್ಯವಹಾರವಾಯಿತು ಎಂಬಂತೆ ಇದ್ದವಳು ಕಮಲಮ್ಮ. ಅವಳಿಗೆ ಗ್ರಾಮಪಂಚಾಯತದ ಸದಸ್ಯಳಾಗುವ ಯೋಗ ಒದ್ದುಕೊಂಡು ಬಂದಾಗ ಹರಿಹರಬ್ರಹ್ಮಾದಿಗಳಿಂದಲೂ ತಪ್ಪಿಸಲು ಸಾಧ್ಯವಾಗಿರಲಿಲ್ಲ. ಆ ಒಂದು ಸದಸ್ಯ ಸ್ಥಾನ ಮಹಿಳೆಗೆ ಮೀಸಲಾಗಿ ಬಂದಾಗ ನಮ್ಮೂರಿನ ಸಾರ್ವಜನಿಕ ರಂಗದಲ್ಲಿ ಮಿನುಗುತ್ತಿದ್ದ ಏಕೈಕ ಮಹಿಳಾ ಧ್ರುವ ನಕ್ಷತ್ರ ಕಮಲಮ್ಮನಲ್ಲದೆ ಇನ್ನಾರು ತಾನೇ ಯೋಗ್ಯರು? ಸುಬ್ಬಜ್ಜನ ಅಧ್ಯಕ್ಷಗಿರಿಯಲ್ಲಿ ಠರಾವು ಅಂಗೀಕರಿಸಿದ ನಮ್ಮೂರ ಪುರಾತನರ ಪಡೆಯು ಬಿಲ್‍ಕುಲ್ ಬೇಡವೆಂದರೂ ಬಿಡದೆ ಅವಳನ್ನು ಒಪ್ಪಿಸುವಲ್ಲಿ ವಿಜಯಿಯಾಯಿತು. ಅವಳ ಹಚ್ಚಿಕುಟ್ಟಿಯ ಲಾಭ ಪಡೆದಿದ್ದೇವೆಂದು ಭಾವಿಸಿದ್ದ ಫಲಾನುಭವಿಗಳೆಲ್ಲರೂ ಅವಳ ಮಕಕ್ಕೆ ಠಸ್ಸೆ ಒತ್ತಿಯೇ ಒತ್ತಿದರು. ಸುಬ್ಬಜ್ಜನಂತೆಯೇ ಒಳಗೊಳಗೇ ಅವಳ ಮೇಲೆ ಲವ್ವು ಮಡಗಿಕೊಂಡಿದ್ದ ಮುದಿ ಲವ್ವರುಗಳ ಸಪೋಲ್ಟು ಬೇರೆ! ಅರ್ವಾಚೀನ ಪ್ರಭೃತಿಗಳೆಲ್ಲ ಬೆಂಗಳೂರು, ಮುಂಬಯಿ ಅಂತ ಎರಡೂ ಕಾಲಿಗೆ ಇಜಾರ ಸಿಕ್ಕಿಸಿಕೊಂಡು ಹೋಗಿರಲಾಗಿ ನಮ್ಮೂರಲ್ಲಿ ಅಳಿದುಳಿದ ಪುರಾತನರ ವೋಟೇ ನಿರ್ಣಾಯಕವಾದ ಪ್ರಯುಕ್ತ ಬೇಡಬೇಡವೆಂದರೂ ಸದಸ್ಯಳಾಗಿ ಆರಿಸಿ ಬಂದೇಬಿಟ್ಟಳು ಕಮಲಮ್ಮ. ದೇವರು ಕೊಡುವ ಕಾಲಕ್ಕೆ ಬೇಡವೆಂದರೂ ಒದ್ದು ಕೊಡುತ್ತಾನಂತೆ! ಕಮಲಮ್ಮನೆಂಬ ಪುರಾತನಳ ವಿಷಯದಲ್ಲಿಯೂ ಹಾಗೇ ಆಯಿತು. ಚುನಾವಣೆಯಲ್ಲಿ ಸ್ಪರ್ಧಿಸಲೇ ಹಿಂದೇಟು ಹಾಕಿದ್ದವಳ ಪಾಲಿಗೆ ಸುಬ್ಬಜ್ಜನ ‘ಲವ್ವಿ’ನ ರೂಪದಲ್ಲಿ ಅಧ್ಯಕ್ಷ ಗಾದಿಯೂ ಒಲಿಯಿತು. ಸಾಕ್ಷಾತ್ ಸುಬ್ಬಜ್ಜನೇ ಮನಸ್ಸು ಮಾಡಿರುವಾಗ ಬೇಡವೆನ್ನಲು ಅವಳಾದರೂ ಯಾರು? ಒಪ್ಪಿಯೇ ಒಪ್ಪಿದಳು, ‘ಹಚ್ಚಿಕುಟ್ಟಿ ಕಮಲಮ್ಮ’ ಇದ್ದವಳು ‘ಅಧ್ಯಕ್ಷೆ ಕಮಲಮ್ಮ’ನವರಾದರು!


ಅಧ್ಯಕ್ಷೆಯಾದ ನವೀನ ದಿನಮಾನಗಳಲ್ಲಿ ಮೀಟಿಂಗು, ಸಭೆ-ಸಮಾರಂಭಗಳಲ್ಲಿ ವೇದಿಕೆ ಏರುವುದು, ಅಧ್ಯಕ್ಷಗಿರಿ ವಹಿಸುವುದು ಎಷ್ಟು ಹಿಂಸೆಯೆಂದರೆ ಅಷ್ಟು ಹಿಂಸೆಯಾಗುತ್ತಿತ್ತು ಅವಳಿಗೆ. ಬ್ರಾಹ್ಮೀ ಮುಹೂರ್ತದಲ್ಲಿಯೇ ಎದ್ದು ಸೊಸೆಯೊಂದಿಗೆ ಜಗಳದ ತಾಲೀಮು ನಡೆಸುವಾಗ, ಇಡೀ ಊರು ತಿರುಗಿ ಚಾಡಿಕೋರತನ ಮಾಡುವಾಗ ಲೊಟಲೊಟನೆ ಬರುತ್ತಿದ್ದ ಮಾತುಗಳು ವೇದಿಕೆಯೇರಿದಾಗ ಯಾವ ಬಿಲವನ್ನು ಹೊಕ್ಕು ಕುಳಿತುಬಿಡುತ್ತಿದ್ದವೋ? ಸ್ವತಃ ಆ ಪುರಾತನಳಿಗೇ ಅದೊಂದು ಚಿದಂಬರ ರಹಸ್ಯವಾಗಿತ್ತು! ಹಾಗಾಗಿ ಸೆಕ್ರೆಟರಿಯೂ ಸಮಾರಂಭಗಳ ಉದ್ಘೋಷಕರೂ ‘ಈಗಾಗಲೇ ವೇಳೆಯಾಗಿರುವುದರಿಂದ ನಮ್ಮೂರ ಪಂಚಾಯತಿಯ ಮೊದಲ ಮಹಿಳಾ ಪ್ರೆಸಿಡೆಂಟು ಕಮಲಮ್ಮನವರು ಶುಭ ಹಾರೈಸಿದ್ದಾರೆ...’ ಎನ್ನುವುದು, ಪುರಾತನಳು ಬೊಚ್ಚುಬಾಯಗಲಿಸಿ ಇಷ್ಠೇ ಇಷ್ಟು ನಗು ತುಳುಕಿಸಿ ಕೈಮುಗಿಯುವುದು, ನಗುವನ್ನು ಕಂಡ ಪ್ರತಿಯೊಬ್ಬ ಪುರಾತನನೂ ಅವಳು ತನ್ನನ್ನು ನೋಡಿಯೇ ನಕ್ಕಿದ್ದು ಎಂದು ಮುಲುಗುವುದು ಮಾಮೂಲಾಗಿತ್ತು. ಎಷ್ಟು ದಿನವೆಂದು ‘ಈಗಾಗಲೇ ವೇಳೆಯಾಗಿರುವುದರಿಂದ...’ ಸಾಧ್ಯ? ಒಂದು ಬ್ರಾಹ್ಮೀ ಮುಹೂರ್ತದಲ್ಲಿ ಸೊಸೆಯೊಡನೆ ಮಹಾಯುದ್ಧದ ತಾಲೀಮು ನಡೆಸುವಾಗಲೇ ಒಂದು ಐತಿಹಾಸಿಕ ನಿರ್ಣಯವನ್ನೂ ಅಂಗೀಕರಿಸಿಬಿಟ್ಟಳು. ಅದೆಂದರೆ, ‘ಇಲ್ಲಿ ಆಡುವ ಜಗಳ, ಹೆರವರ ಮನೆಯ ಕಟ್ಟೆಯ ಮೇಲೆ ಆಡುವ ಚಾಡಿಮಾತುಗಳನ್ನೇ ಅಲ್ಲಿಯೂ ಆಡುವುದು!’ ಹಾಗೆ ಆರಂಭವಾದ ಅವಳ ವೇದಿಕೆಯ ಜಂಗೀ ಕುಸ್ತಿ ತಾಲೀಮಿನ ಮೇಲೆ ತಾಲೀಮು ಪಡೆದು, ‘ನಮ್ ಪ್ರದಾನ ಮಂತ್ರಿಗಳು ಹೇಳಿರೂ ಹಾಗೆ.... ನಮ್ ಮುಕ್ಯಮಂತ್ರಿಗಳು ಹೇಳದಂಗೆ...’ ಎಂಬೆಲ್ಲ ಉದ್ಧರಣವಾಚಕಗಳನ್ನೂ ಪಡೆದು ಒಂದು ಹದಕ್ಕೆ ಬಂದು ನಿಂತಿತು. ಮಳ್ಳಿಯ ಹಾಗಿದ್ದ ಕಮಲಮ್ಮನೆಂಬ ಪುರಾತನಳ ವಿಜಯವನ್ನು ತಮ್ಮ ದಿಗ್ವಿಯವೆಂದೇ ನಮ್ಮೂರಿನ ಎಲ್ಲ ಪುರಾತನರೂ ನಂಬಿಕೊಂಡು ತಮ್ಮ ಬೊಚ್ಚುಬಾಯಲ್ಲಿ ಹೊಸ ಹಲ್ಲುಗಳು ಮೊಳೆಯುವ ಕನಸು ಕಾಣತೊಡಗಿದರು!


ನಮ್ಮೂರು ಎಂಬ ತನ್ನ ಪುರಾತನರ ಸಾಮ್ರಾಜ್ಯದಲ್ಲಿ ತಾನೇ ತಾನಾಗಿ ಮೆರೆಯುತ್ತಿದ್ದ ಕಮಲಮ್ಮನ ಗಾಡಿಗೆ ‘ಬಿರಿ’ ಹಾಕುವ ಸನ್ನಿವೇಶ ಬಂದದ್ದು ಮಾತ್ರ ಅವಳು ಮಾತ್ರವಲ್ಲ ಅವಳ ಇಡೀ ಸಾಮ್ರಾಜ್ಯವೇ ಊಹಿಸದ ದುರ್ಭರ ಸನ್ನಿವೇಶವಾಗಿತ್ತು. ಕೋವಿಡ್-19 ಎಂಬ ಸೋಂಕಿನ ರೂಪದಲ್ಲಿ ತನ್ನ ಉರಾವರಿಗೆ ಘಾತ ಉಂಟಾಗಬಹುದೆಂದು ಕಮಲಮ್ಮ ಕನಸುಮನಸಿನಲ್ಲಿಯೂ ಎಣಿಸಿರಲಿಲ್ಲ. ಸರ್ಕಾರ ಘೋಷಿಸಿದ ಲಾಕ್‍ಡೌನು, ಸಾಮಾಜಿಕ ಅಂತರ, ಸ್ವಚ್ಛತೆ, ಮಾಸ್ಕು... ಒಂದೂ ಅರ್ಥವಾಗದಿದ್ದರೂ ಆ ಪುರಾತನಳು ‘ನಮ್ ಪ್ರದಾನಮಂತ್ರಿಗಳು ಹೇಳ್ದಂಗೆ... ಮುಕ್ಯಮಂತ್ರಿಗಳು ಹೇಳ್ದಂಗೆ... ಮೀಟಿಂಗು ಬಂದ್, ಸಭೆ-ಸಮಾರಂಭ ಬಂದ್...’ ಇತ್ಯಾದಿ ಫರ್ಮಾನುಗಳನ್ನು ಮನೆಯಿಂದಲೇ ಹೊರಡಿಸಿದಳು. ಕೋವಿಡ್ ಭೂತ ನಮ್ಮೂರನ್ನು ಹೇಗೂ ಹೊಕ್ಕಲು ಬಿಡಬಾರದೆಂದು ಗುಟ್ಟಾಗಿಯೇ ಕೆಲವು ಪುರಾತನರನ್ನು ಕರೆದು ಹತ್ತಿರವೇ ಕೂರಿಸಿಕೊಂಡು ಗುಪ್ತ ಮಂತ್ರಾಲೋಚನೆಗೈದಳು! ಟಿವಿ ನೋಡಿಕೊಂಡು ಕೋವಿಡ್ ಸೈನಿಕರು ಚೀನಾದಿಂದ ಬರುತ್ತಾರಂತೆ, ಹೇಗೂ ಅವರು ನಮ್ಮೂರಿನ ಮೇಲೆ ದಾಳಿ ಮಾಡದಂತೆ ನಮ್ಮೂರಿನ ಎಲ್ಲ ರಸ್ತೆಗಳನ್ನೂ ‘ನಾಕಾಬಂದಿ’ ಮಾಡತಕ್ಕದ್ದು ಎಂದು ಸುಗ್ರೀವಾಜ್ಞೆ ಹೊರಡಿಸಿದಳು. ಊರಿಗೆ ಬರುವ ಎಲ್ಲ ರಸ್ತೆಗಳಿಗೂ ಬೊಂಬು, ಅಡಕೆ ದಬ್ಬೆ ಬೇಲಿ ಕಟ್ಟಿ, ಅದಕ್ಕಿಷ್ಟು ಮುಳ್ಳು ಬಡಿದು ಕಾವಲಿಗಿಷ್ಟು ರಕ್ಷಕರನ್ನೂ ನೇಮಿಸಿ, ‘ಹ ಹ್ಹ ಹ್ಹಾ... ಇನ್ನು ಹೇಗೆ ಬರುತ್ತಾರೆ ಚೀನಾ ಸೈನಿಕರು...?’ ಎಂದು ಅಟ್ಟಹಾಸಗೈದು ಪುರಾತನಳು ಬೆಚ್ಚಗೆ ಹೊದ್ದು ಮಲಗಿದಳು!


ದೇಶದೆಲ್ಲೆಡೆ ಲಾಕ್‍ಡೌನ್ ಘೋಷಣೆಯಾದಾಗ ನಮ್ಮೂರಿನ ಅರ್ವಾಚೀನರಿಗೆ ಊರಿನ ನೆನಪಾಯಿತು. ಗಂಟುಗದಡಿ ಕಟ್ಟಿಕೊಂಡು ಊರಿನತ್ತ ಗುಳೇ ಹೊರಟ ಅವರು ಒಂದು ದಿನಮಾನ ನಾಲ್ಕೂ ನಿಟ್ಟಿನಿಂದ ಬೇಲಿಯ ಹೊರಗೆ ಜಮಾಯಿಸಿ, ‘ಅಂಬೋ...’ ಅಂದರು. ಪುರಾತನಳು, ‘ಇವರು ನಮ್ಮವರೇ, ಒಳಗೆ ಬಿಡಿ. ಚೀನಾದವರು ಬಂದರೆ ಹೋರಾಡುವುದಕ್ಕೆ ಆಳಾಗುತ್ತಾರೆ...!’ ಎಂದು ಹಾನ ಸುಳಿದು ಒಳಗೆ ಕರೆದುಕೊಂಡಳು. ಇಡೀ ಊರಿನ ಪುರಾತನರು ಒಳಗೊಳಗೇ ಮಳ್ಳರಂತೆ ತಮ್ಮ ಮಕ್ಕಳನ್ನು ಅಪ್ಪಿ ಮುದ್ದಾಡಿದರು. ಈಗಾದರೂ ಊರಿಗೆ ಬಂದರಲ್ಲ ಎಂದು ಸ್ವರ್ಗಸುಖವನ್ನೇ ಅನುಭವಿಸಿದರು.


ಕೆಲವೇ ದಿನಗಳಲ್ಲಿ ಒಬ್ಬೊಬ್ಬರಾಗಿ ಅರ್ವಾಚೀನರು ಕೆಮ್ಮಲು ಶುರುವಿಟ್ಟುಕೊಂಡರು. ಅವರು ಕೆಮ್ಮುವುದನ್ನು ನೋಡಿದ ಪುರಾತನರು ತಾವೇನು ಕಮ್ಮಿ? ಎಂದುಕೊಂಡು ತಾವೂ ಕೆಮ್ಮಲು ಪೈಪೋಟಿ ನಡೆಸತೊಡಗಿದರು. ಊರಿಗೆ ಊರೇ ‘ಹ್ಹು... ಹ್ಹು...’ ಕೆಮ್ಮಿನ ನೆಲೆವನೆಯಾಯಿತು. ಒಬ್ಬೊಬ್ಬನೇ ಪುರಾತನನು ಕೆಮ್ಮುತ್ತಲೇ ನಯಾಪೈಸೆ ಕೊಡದೇ ಆರಡಿ ಮೂರಡಿ ಸೈಟನ್ನು ಬುಕ್ ಮಾಡಿಕೊಂಡ! ಸರ್ಕಾರ ‘ಕಂಟೈನ್‍ಮೆಂಟ್ ಜೋನ್’ ಎಂದು ಕರಪತ್ರ ಅಂಟಿಸಿ ‘ಸೀಲ್‍ಡೌನ್’ ಮಾಡಿತು. ಕಮಲಮ್ಮನೆಂಬ ಪುರಾತನಳು ಮಾತ್ರ ಕೆಮ್ಮುತ್ತಲೇ, ‘ಎಲ್ಲಿ ಚೀನಾದ ಸೈನಿಕರು? ಬರಲೇ ಇಲ್ಲ. ಹ್ಹು... ಹ್ಹು... ನಮ್ಮೂರಿನ ಮೇಲೆ ದಾಳಿ ಮಾಡುವ ನೀರಿದ್ದರೆ ತಾನೆ...?’ ಎನ್ನುತ್ತ ತನ್ನ ಪಾಲಿನ ಸೈಟು ಬುಕ್ ಮಾಡುವ ಸನ್ನಾಹದಲ್ಲಿದ್ದಾಳೆ!

- ಹುಳಗೋಳ ನಾಗಪತಿ ಹೆಗಡೆ


ಶಿರಸಿ ತಾಲ್ಲೂಕಿನ ಹುಳಗೋಳದವರಾದ ನಾಗಪತಿ ಹೆಗಡೆಯವರು ಪ್ರಸ್ತುತ ಅಂಕೋಲಾ ಪಿ.ಎಮ್. ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಂದೆ ವೆಂಕಟ್ರಮಣ ಹೆಗಡೆ, ತಾಯಿ ರಾಧಾ. ಈವರೆಗೆ ಉತ್ತರಾರ್ಧ ಮತ್ತು ಹಗಲುಗನ್ನಡಿಯಲ್ಲಿ ಕನಸು... ಎಂಬೆರಡು ಕತಾಸಂಕಲನಗಳು, ‘ಗುರುವಂದನಾ’ ಭಕ್ತಿಗೀತೆಗಳ ಸಂಕಲನ, ಒಂಬತ್ತು ವ್ಯಕ್ತಿ ಚರಿತ್ರೆಗಳು, ‘ಸಂಕೀರ್ಣ’ ಪ್ರಬಂಧ ಸಂಕಲನ, ‘ಸಮಾಜ ವಿಜ್ಞಾನ ಕೈಪಿಡಿ’ ಪರಾಮರ್ಶನ ಗ್ರಂಥಗಳೂ ಸೇರಿ ಒಟ್ಟು ಹದಿನಾರು ಕೃತಿಗಳನ್ನು ಬರೆದಿದ್ದಾರೆ. ಅನೇಕ ಗ್ರಂಥಗಳನ್ನು ಸಂಪಾದಿಸಿದ್ದಾರೆ. 2004ರಲ್ಲಿ ನಮ್ರತಾ ಪ್ರಕಾಶನವೆಂಬ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ 22 ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರಿಗೆ 2006ರ ಕೋಲ್ಕತ್ತಾ ಭಾರತೀಯ ಭಾಷಾ ಪರಿಷತ್ತಿನ ರಾಷ್ಟ್ರೀಯ ಯುವ ಪುರಸ್ಕಾರ, ಉತ್ತರ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, 2015ರಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, 2016ರಲ್ಲಿ ಮುಂಬಯಿ ಎಮ್.ವಿ.ಎಲ್.ಎ. ಟ್ರಸ್ಟಿನ ಗ್ಲೋಬಲ್ ಟೀಚರ್ ಅವಾರ್ಡ್ ಹಾಗೂ ಹಲವು ಕಥಾ ಬಹುಮಾನಗಳು ಸಂದಿವೆ. ಇವರ ಅನೇಕ ಕತೆಗಳು ಹಿಂದಿ ಹಾಗೂ ಮಲೆಯಾಳಂ ಭಾಷೆಗೆ ಅನುವಾದಗೊಂಡಿವೆ.ಅಂಕೋಲೆಯ ಸಾಹಿತ್ಯಿಕ ಪರಿಸರವನ್ನು ತಮ್ಮ ಬರವಣಿಗೆ ಮತ್ತು ಸೃಜನ ಶೀಲ ಚಟುವಟಿಕೆಗಳ ಮೂಲಕ ಹಸನುಗೊಳಿಸುತ್ತಿರುವ ನಾಗಪತಿಯವರ ಪ್ರಬಂಧರೂಪದ ಪಟ್ಟಾಂಗ ನಿಮ್ಮ ಓದಿಗಾಗಿ. ಸಂಪಾದಕ

61 views0 comments
bottom of page