top of page

ಕುಳವಾಡಿ ಎಂಬ ದೇಸೀ ಪದ

ಅಂಕಣ

ವಸಂತೋಕ್ತಿ – 2.


ಕಾಲದ ಮಹಿಮೆಯೋ ಜೀವನದ ರೀತಿ ನೀತಿ ಬದಲಾದದ್ದರಿಂದಲೋ ಗೊತ್ತಿಲ್ಲ, ದೇಸೀಯವಾದ ಹಲವು ಮಹತ್ವದ ಶಬ್ದಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಮೂಲಭಾಷೆಯಲ್ಲಿ ಅವು ತುಂಬ ಶಕ್ತಿಯುತವಾಗಿ, ಸಮರ್ಥವಾಗಿ ಬಳಕೆಯಾಗುತ್ತಿದ್ದವು. ಅದರೆ ಇಂದು ಜನಜೀವನ ಬದಲಾಗಿ ಸಾಂಸ್ಕೃತಿಕ ಪಲ್ಲಟ ಉಂಟಾಗಿ ಭಾಷೆ ಕೂಡ ಅಂದಗೆಟ್ಟು ಇನ್ನಾರನ್ನೋ ಆಶ್ರಯಿಸುವ ಸ್ಥಿತಿ ಬಂದಿದೆ.

ಅಂತಹ ಒಂದು ಅಪರೂಪದ ಮೂಲ ಕನ್ನಡ ಶಬ್ದ ‘ಕುಳವಾಡಿ’ ಎಂಬುದು. ನಮ್ಮ ಕರಾವಳಿ ಕಡೆ ಇದನ್ನು ‘ಕುಳವಾರು’ ಎಂದು ಕರೆಯುತ್ತಾರೆ.

ಕುಳವಾಡಿ ಎಂದರೆ ಜಮೀನ್ದಾರ ಎಂಬುದು ಸ್ಥೂಲವಾದ ಅರ್ಥ. ಆದರೆ ಕುಳವಾಡಿ ಎಂದರೆ ಜಮೀನ್ದಾರಿಕೆಯ ಜೊತೆಗೆ ನೂರಾರು ವರ್ಷಗಳಿಂದ ಒಂದೇ ಕಡೆ ನೆಲೆನಿಂತು ಹತ್ತಾರು ಕುಟುಂಬಗಳಿಗೆ ಆಶ್ರಯ ಕಲ್ಪಿಸಿದ ಗಟ್ಟಿ ತಳಪಾಯದ ಸುಸ್ಥಿರ ಆರ್ಥಿಕ ವ್ಯವಸ್ಥೆಯ ಜಮೀನ್ದಾರಿ ಕುಟುಂಬ ಎಂದು ಅರ್ಥ.

ಕುಳ ಎಂಬುದಕ್ಕೆ ಬೇರೆ ಬೇರೆ ಅರ್ಥಗಳಿವೆ. ಕೆಂಪಾದ ಮಂದ ರಸಕ್ಕೆ ಕುಳ (ಉದಾಹರಣೆಗೆ ಮಹಿಳೆಯರು ತಿಲಕದಂತೆ ಮುಖಕ್ಕೆ ಇಟ್ಟುಕೊಳ್ಳುವ ಲಾಲ್ ಗಂಧ) ಅನ್ನುವರು. ನೇಗಿಲಿನ ಮೊನೆಗೆ ಕುಳ ಅನ್ನುವರು.

ದೊಡ್ಡ ದೊಡ್ಡ ಜಮೀನ್ದಾರರಲ್ಲಿ ಹತ್ತಾರು ಕುಳ ಅಥವಾ ನೇಗಿಲುಗಳಿರುತ್ತಿದ್ದವು. ಗಟ್ಟಿ ಭೂಮಿಯನ್ನು ಉಳುಮೆ ಮಾಡಲು, ಹೆಂಟೆ ಪುಡಿ ಮಾಡಲು, ಕೆಸರುಗದ್ದೆ ಹೂಡಲು ಬೇರೆ ಬೇರೆ ಸ್ವರೂಪದ, ಬೇರೆ ಬೇರೆ ಗಾತ್ರದ ನೇಗಿಲುಗಳು ಬೇಕಾಗುತ್ತವೆ. ಕೃಷಿ ಕಾರ್ಯ ಮುಗಿದ ಬಳಿಕ ಅವುಗಳನ್ನು ತೊಳೆದು, ಮಳೆ ಬಿಸಿಲು ತಾಗದ ಹಾಗೆ ಕೊಟ್ಟಿಗೆಯಲ್ಲಿ ಒಂದೇ ಕಡೆ ಜೋಡಿಸಿಡುತ್ತಿದ್ದರು. ಹೆಚ್ಚು ನೇಗಿಲು ಇರುವವರು ಹೆಚ್ಚು ಜಮೀನು ಉಳ್ಳವರೆಂದು ಅರ್ಥ. ಅಂಗಳವನ್ನು ಪ್ರವೇಶಿಸುತ್ತಿದ್ದಂತೆ ಮೊದಲು ಕಣ್ಣಿಗೆ ಬೀಳುವುದು ಈ ನೇಗಿಲುಗಳು. ಹೆಚ್ಚು ನೇಗಿಲುಗಳಿವೆಯೆಂದರೆ ಆತನಲ್ಲಿ ಹೆಚ್ಚು ಎತ್ತುಗಳು, ಹೆಚ್ಚು ಜಾನುವಾರುಗಳು ಇವೆಯೆಂದು ಅರ್ಥ. ಬಹುಶಃ ಆ ಕಾರಣಕ್ಕೆ ಕುಳವಾಡಿ, ಕುಳವಾರು ಮೊದಲಾದ ಶಬ್ದ ಪ್ರಯೋಗಕ್ಕೆ ಬಂದಂತೆ ತೋರುತ್ತದೆ.

ಕುಳದ ಮೂಲಕ ಒಬ್ಬಾತನ ಶ್ರೀಮಂತಿಕೆಯನ್ನು ಮತ್ತು ಸಮಾಜದಲ್ಲಿ ಆತನ ಸ್ಥಾನಮಾನಗಳನ್ನು ನಿರ್ಧರಿಸಲು ಸಾಧ್ಯವಾಗುತ್ತಿತ್ತು. ಆ ಕಾರಣಕ್ಕೆ ನೂರಿನ್ನೂರು ವರ್ಷಗಳ ಹಿಂದೆ ‘ಆತ ಗಟ್ಟಿ ಕುಳವಾರು’, ‘ಅವರು ಒಳ್ಳೆಯ ಕುಳವಾಡಿಗಳು’ ಎಂಬ ಮಾತು ಪ್ರಚಲಿತಕ್ಕೆ ಬಂತು.

ಆಗ ಇತರ ಭಾಷೆಗಳ ಪ್ರಭಾವ ಅಷ್ಟಾಗಿ ಇಲ್ಲದಿದ್ದುದರಿಂದ ದೇಸೀ ಪ್ರಯೋಗಗಳು ಬಳಕೆಗೆ ಬಂದವು. ಆದರೆ ನಮ್ಮ ಹಿರಿಯರ ಸಾಂಸ್ಕೃತಿಕ ಅನನ್ಯತೆಗಳನ್ನು ಉಳಿಸಿಕೊಳ್ಳುವ ಸ್ಥಿತಿಯಲ್ಲಿ ನಾವಿಂದು ಇಲ್ಲ!

ಜೀವನದಲ್ಲಿ ಕೊಳು-ಕೊಡೆ ಇದ್ದೇ ಇರುತ್ತದೆ, ನಿಜ. ನಾವು ಬಾವಿಯೊಳಗಿನ ಕಪ್ಪೆಯಂತೆ ಜೀವನ ಮಾಡಲು ಸಾಧ್ಯವಿಲ್ಲ. ವಿಶಾಲ ಸಮಾಜದ ಮತ್ತು ಬೇರೆ ಬೇರೆ ದೇಶಗಳ ಜೊತೆಗೆ ಸಂಪರ್ಕ ಏರ್ಪಡುತ್ತಿರುವಂತೆ ಅಲ್ಲಲ್ಲಿನ ಪ್ರಭಾವಗಳು ನಮ್ಮ ಮೇಲೆ ಉಂಟಾಗುತ್ತದೆ. ಜನಜೀವನದಲ್ಲಿ ಬದಲಾವಣೆಗಳು ಕಂಡು ಬರುತ್ತವೆ. ಉದ್ಯೋಗ ಮತ್ತು ಸಂಪತ್ತಿನ ಬಗೆಗಿನ ವ್ಯಾಖ್ಯೆ ಬದಲಾಗುತ್ತದೆ. ಎಲ್ಲವೂ ನಿಜ. ಆದರೆ ನಮ್ಮ ಮೂಲ ಶಬ್ದಗಳನ್ನು ಮರೆಯುವ ಅಗತ್ಯವಿದೆಯೇ? ಅವುಗಳನ್ನು ಉಳಿಸಿಕೊಳ್ಳುವ, ಬಳಸಿಕೊಳ್ಳುವ ಪ್ರಯತ್ನ ಮಾಡಲೇಬೇಕು.

ನಮ್ಮ ಹಳ್ಳಿಗಳ ಬದುಕು ಈಗ ಹಿಂದಿನಂತಿಲ್ಲ. ಹಳ್ಳಿಗಳಲ್ಲಿ ಕೂಡ ನಗರಗಳಂತೆ ಎಲ್ಲ ಆಧುನಿಕ ಸೌಲಭ್ಯಗಳು ಇಂದು ಲಭ್ಯವಿದೆ. ಕೃಷಿ ಕಾಯಕಗಳು ನಿಧಾನವಾಗಿ ಹಿನ್ನೆಲೆಗೆ ಸರಿಯುತ್ತಿವೆ. ಕೃಷಿಗಿಂತ ವ್ಯಾಪಾರ ವಾಣಿಜ್ಯ ಕೈಗಾರಿಕೆ ನೌಕರಿ ಉತ್ತಮ ಎಂಬ ಮನೋಭಾವ ಎಲ್ಲೆಡೆ ವ್ಯಾಪಿಸತೊಡಗಿದೆ. ಹಾಗೆಂದು ನಮ್ಮ ಶ್ರೀಮಂತ ಪರಂಪರೆಯನ್ನು ಮರೆಯಬಾರದು.

ಕೃಷಿರಂಗದಲ್ಲಿ ಇರುವ ದೇಸೀಯತೆ ಮತ್ತು ಸ್ವಾವಲಂಬನೆ ನಗರ ಬದುಕಿನಲ್ಲಿ ಇಲ್ಲ. ಹಳ್ಳಿಗರದು ಧಾವಂತವಿಲ್ಲದ ನಿಧಾನ ಬದುಕು. ನಗರಗಳದು ಅವಸರದ ಬದುಕು.

ನಗರಗಳಲ್ಲಿ ಕುಳವಾರು, ಕುಳವಾಡಿ ಎಂಬ ಶಬ್ದಕ್ಕೆ ಅರ್ಥವಿರಲಾರದು. ಆದರೆ ಹಳ್ಳಿಗಳಲ್ಲಿ ಇಂತಹ ಅಪರೂಪದ ಶಬ್ದಗಳನ್ನು ಬಳಸಲು ಯಾವ ಅಡ್ಡಿಯೂ ಇರಲಾರದು.


ಡಾ.ವಸಂತಕುಮಾರ ಪೆರ್ಲ.

32 views0 comments
bottom of page