top of page

ಒಂದ್ಮೊಳ ಹೂವಿನ ರೇಟು ಗೊತ್ತೈತೇನು?...

ಸೀದಾ ಸಾದಾ ಅಂಗಿ ಫಾರ್ಮಲ್ ಪ್ಯಾಂಟು ಕೈ ಗೊಂದು ವಾಚು ಘಮ್ ಅನ್ನೋ ಸೆಂಟು ಅಪ್ಪ ಕೊಡಿಸಿದ ಮೊಬೈಲು ಅವಂದೇ ಬೈಕು ಯಾವುದೋ ಜಾತ್ರೇಲಿ ತಗೊಂಡಿರೋ ಸ್ಪೆಕ್ಟು ಒಳ್ಳೇ ಹೀರೋ ಥರಾ ಕಾಣಿಸ್ತಿಲ್ವ ದೋಸ್ತ್ ಅಂತ ನಾಲ್ಕ ನಾಲ್ಕು ಸೆಲ್ಫಿ ಹೊಡ್ಕಂಡು ಝೂಮ್ ಹಾಕಿ ನೋಡೋ ಹುಡುಗ ಒಂದ ಮೊಳ ಮಲ್ಲಿಗೆ ರೇಟು ಕೇಳಿ ತಡಬಡಾಯ್ಸಿದ್ದ.


ನಂಗೊತ್ತಿಲ್ಲ ಆದ್ರೆ ನಿನ್ನ ಮಲ್ಲಿಗೆ ಹೂವ್ವಲ್ಲೇ ಮುಚ್ಚೋವಷ್ಟು ದುಡ್ಡೈತೇ....


ಬೆವರ ವಾಸನೆ ಗೊತ್ತಿಲ್ಲದ ಹುಡುಗನ ಮಾತಲ್ಲಿ ಧಿಮಾಕಿನ ಧಾಟಿಯಿತ್ತು. ಗಂಡಸ್ತನದ ಗಡಸು ತುಂಬಿತ್ತು. ಮನಸ್ಸೆಲ್ಲ ಮೈಲಿಗೆ ತುಂಬ್ಕೊಂಡ ಹರೆಯದ ಹುಡುಗ ಹೆಣ್ಣಂದ್ರೆ ಇಷ್ಟೇ ದುಡ್ಡಿಗಾಗಿ ಬೆಡ್ಡೇರೋ ಬೆಡಗಿಯರು ಅನ್ನೋ ಅತಿಯಾದ ಅಹಂ ಹುಡುಗನ ಕಣ್ಣುಗಳಲ್ಲಿ ಖಡ್ಗದಂತೆ ಝಳಪಿಸುತ್ತಿತ್ತು.


ಬಣ್ಣಕ್ಕೆ ಬೆರಗಾದ ಬೆರಕಿ ಒಳಗ ಹುಡುಕ್ಯಾಡಿ ನೋಡಿಯೇನು?


ತಂಗಾಳಿಗೆ ಕೆನ್ನೆ ಸೋಕುವ ಮುಂಗುರುಳನ್ನೊಮ್ಮೆ ತೀಡುತ್ತ ಕಣ್ಣಲ್ಲೇ ಪ್ರಶ್ನೆ ಮಾಡಿದಳವಳು. ಎದೆಯ ಸೆರಗು ತುಸು ಜಾರಿದ ಅವಳ ಮೊಲೆಗಳ ತಿಳಿ ಹಾಲುಬಣ್ಣ ಅವನ ಕಣ್ಣ ಸೆಳೆದಿದ್ದು ಅದಾಗಲೇ ಆಕೆಗೆ ತಿಳಿದು ಹೋಗಿರಬೇಕು. ಸಣ್ಣಗೆ ಎದೆ ನಡುಕ ಶುರುವಾದ ಆತನ ಮುಖ ಸಣ್ಣಗೆ ಬೆವರಿಡಿಯಲು ಶುರು ಮಾಡಿತ್ತು.


ಇದೇ... ಮೊದಲ ಸಲ ....


ತಡವರಿಸುತ್ತ ತೊದಲ ದನಿಯಲ್ಲೇ ಕಣ್ಣುಗಳನ್ನು ನೆಲಕ್ಕೆ ತಾಗಿಸಿದವನಂತೆ ಉತ್ತರಿಸಿದ. ಮೊದಲಿನ ಎಲ್ಲವೂ ಕ್ರಮೇಣ ಕಡಿಮೆ ಆದಂತಿತ್ತು.


ಹತ್ರ ಬಾ ಕೂರು...


ಸಣ್ಣಗೆ ತುಟಿಯರಳಿಸಿ ನಗುತ್ತ ನುಡಿದಳಾಕೆ. ದೂರದಲ್ಲೆಲ್ಲೋ ಇಳಿ ಸಂಜೆಯ ಆಜಾನಿನ ಸದ್ದು ಕಿವಿಗಪ್ಪಳಿಸುವಂತಿತ್ತು. ತಲೆಯೆತ್ತಿ ಅವಳನ್ನೊಮ್ಮೆ ಕಣ್ಣರಳಿಸಿ ನೋಡಬೇಕೆನಿತೇನೋ ನೇರ ಮುಖಕ್ಕೆ ಮುಖ ಕೊಟ್ಟು ಕಣ್ಣೆವೆಯಿಕ್ಕದೇ ನೋಡಬೇಕೆಂದುಕೊಂಡು ತೀರ ಹತ್ತಿರಕ್ಕೆ ಹೋಗಿ ಕತ್ತೆತ್ತಿದ ನೀಲವರ್ಣದ ತೆಳುವಾದ ಸೀರೆಯುಟ್ಟ ಆ ಅಪ್ಪಟ ಬೊಂಬೆಯ ಅಂದಕ್ಕೆ ಒಂದು ಕ್ಷಣ ತನ್ನನ್ನೇ ತಾ ಮೈ ಮರೆತಿದ್ದ.


ಮುಂದೇನು...


ಬಾಣದಷ್ಟೇ ಹರಿತಾದ ನೇರ ಪ್ರಶ್ನೆ ಅವಳದು.


ಅದೆಂಥದೋ ನಶೆಯ ಗುಂಗೇರಿದವನಂತೆ ಅವಳ ಮೋಹಕ್ಕೆ ಬೆರಗಾಗಿ ಬೇಟೆಗಾರನ ಕೈಗೆ ಸೆರೆಸಿಕ್ಕ ಹರಿಣಿಯಂತಾಗಿದ್ದ ಆತ ತದೇಕಚಿತ್ತದಿಂದ ಅವಳನ್ನೇ ಧ್ಯಾನಿಸುತ್ತ 'ಒಂದೇ ಒಂದು ಸಲ ನಿನ್ನನ್ನು ನನ್ನೊಳಗೊಳ್ಳಬೇಕು' ಗುಣುಗಿದ.


ಯಾರೆಂದು ಅವಳಿಗೆ ಗೊತ್ತಿಲ್ಲ ಅವನಿಗೂ....

ಆತ ಯಾರು ಅಂತ ಗೊತ್ತಿಲ್ಲ ಹೋಗ್ಲಿ ಆತನಿಗೂ ಅವಳು ಯಾರು ಅಂತ ಗೊತ್ತಿಲ್ಲ ವಿಪರ್ಯಾಸ ಅಂದರೆ ಅದು ಅವರ ಮೊದಲ ಭೇಟಿ. ಈ ಜಗತ್ತಲ್ಲಿ ಪ್ರೇಮಕ್ಕಿಂತ ಮಿಗಿಲಾದ ನಶೆ ಮತ್ತೊಂದಿಲ್ಲ ಅನ್ನೋದಕ್ಕೆ ಆತ ಅಪ್ಪಟ ಸಾಕ್ಷ್ಯದಂತಾಗಿದ್ದ.


ಆಕೆ ಸಾತ್ವಿಕ ಹೆಣ್ಣು ವಿವಾಹಿತೆ ಈತ ಅವಿವಾಹಿತ ಹರೆಯದ ಹುಚ್ಚಿನವ ಇಬ್ಬರು ಮಧ್ಯೆ ಈ ಮೊದಲು ಯಾವ ಮಾತಿಲ್ಲ ಕಥೆಯಿಲ್ಲ. ಹಾಸಿಗೆಗೆ ಕರೆಯುತ್ತಿದ್ದಾನೆ ಹುಂಬು ಧೈರ್ಯ ಆತನದು. ಅವಳೋ ಅಷ್ಟೇ ಗಾಂಭೀರ್ಯದಿಂದ ಯಾವ ಭಯ ಸಂಕೋಚವೂ ಇರದೇ ಆತನೊಂದಿಗೆ ಮಾತಿಗಿಳಿದಿದ್ದಾಳೆ. ಆತ ಗಂಡಸು ದುಡ್ಡಿದ್ದವ ಧೈರ್ಯಶಾಲಿ ಹುಂಬ ಆದರೆ ಆತ ಒಬ್ಬ ಒಳ್ಳೆಯ ಮನುಷ್ಯ ಅನ್ನೋದು ಅವಳ ಗಟ್ಟಿಯಾದ ನಂಬಿಕೆ.


ಆಕೆ ಈ ಪ್ರೇಮ ಪ್ರೀತಿ ಬಗ್ಗೆ ಸಾಕಷ್ಟು ನಿಖರವಾಗಿ ಅರ್ಥೈಸಿಕೊಳ್ಳಬಲ್ಲ ಸಾಮರ್ಥ್ಯದ ಅಪ್ಪಟ ದೇಸಿ ಸಂಸ್ಕೃತಿಯ ಹೆಣ್ಣು. ಚಪ್ಪಾಳೆ ಒಂದೇ ಕೈಯಿಂದ ಸಾಧ್ಯವಿಲ್ಲ ತಪ್ಪೂ ಅಷ್ಟೇ!


ಪ್ರೇಮಕ್ಕೂ ಕಾಮಕ್ಕೂ ನಡುವಿನ ಅತಿ ಸೂಕ್ಷ್ಮ ಎಳೆಯನ್ನು ಅರಿತವಳಾದ ಆಕೆ ಒಂದು ಕ್ಷಣ ತನ್ನನ್ನೇ ಬಗ್ಗೆ ಆತನಲ್ಲುಂಟಾದ ಆಕರ್ಷಣೆಯ ಬಗ್ಗೆ ಮೆಚ್ಚುಗೆಯಿಂದಲೇ ಸರಿದ ಸೀರೆ ಸೆರಗನ್ನೊಮ್ಮೆ ಜಾಡಿಸಿ ತಲೆ ಮೇಲೆ ಸೆರಗು ಹೊತ್ತವಳೇ....


ನಾಳೆಯೇ ರಾತ್ರಿ ನಿನಗಾಗಿ ಕಾಯುತ್ತಿರುವೆ ತಪ್ಪದೇ ಬಂದು ಬಿಡು....


ಆಕೆ ಹೊರಟಿದ್ದಳು ಹುಣ್ಣಿಮೆಯ ಚಂದ್ರ ಹೀಗೆ ಕೈ ತಪ್ಪಿಸಿಕೊಂಡು ಹೊರಟನೇನೋ ಅನ್ನೋ ಅನುಭವ ಅದೆಂಥದೋ ಪುಳಕ ಆತನೊಳಗೆ,ಆಹಾ ಸಂಭ್ರಮ ವೋ ಸಂಭ್ರಮ!


ರಾತ್ರಿ ಕಳೆಯಿತು ಬೆಳಕು ಹರಿಯಿತು. ಮಾರುಕಟ್ಟೆಯ ಬೀದಿ ಬೆಳಗಿನ ಮಲ್ಲಿಗೆಯ ಸುವಾಸನೆಗೆ ಇನ್ನೂ ಮಂಪರಿನಲ್ಲದ್ದಂತೆ ಭಾಸವಾಗುತ್ತಿದ್ದರೆ ದೇವಸ್ಥಾನದ ಬೀದಿಯ ಗುಂಟ ಹಾಕಿದ ರಂಗವಲ್ಲಿಗೆ ಮನಸ್ಸು ಪುಳಕವಾಗುತ್ತಿತ್ತು. ಗುಡಿಯೊಳಗಿನ ಗಂಟೆ ನಾದ ಸುಪ್ರಭಾತದ ಸದ್ದು ಒಳಗೊಳಗೆ ಅದೆಂಥದ್ದೋ ಪಾವಿತ್ರ್ಯತೆಯನ್ನು ಹುಟ್ಟಿಸುತ್ತಿತ್ತು.


ಒಂದು ಮೊಳ ಮಲ್ಲಿಗೆ ಎಷ್ಟು?

ಚಿಗುರು ಮೀಸೆ ಹುಡುಗ ಮಲ್ಲಿಗೆಯ ರೇಟು ಕೇಳಿದ್ದೇ ಮೊದಲ ಸಲ ಸುಡುವ ಬಿಸಿಲಿಗೆ ಮಲ್ಲಿಗೆ ಬಾಡಿ ಹೋದಿತೆಂದು ತಂದವನೇ ಫ್ರಿಡ್ಜ್ ನಲ್ಲಿದ್ದ. ಗಂಟೆಗೊಮ್ಮೆ ತೆರೆದು ಅದರ ಘಮ್ಮನೆಯ ಸುವಾಸನೆ ಅನುಭವಿಸುತ್ತಿದ್ದ. ಮಧ್ಯಾಹ್ನದ ಸೂರ್ಯ ತಣ್ಣಗೆ ತಾಯಿ ಮಡಿಲ ಸೇರುತ್ತಲಿದ್ದ. ಮತ್ತದೇ ಸಂಜೆ ಅವಳ ಆ ನೆನಪು ಬೀದಿಗುಂಟ ನಡೆವ ಒಂದೊಂದು ಹೆಜ್ಜೆಗೂ ಅವಳದೇ ಧ್ಯಾನ.


ಪುಟ್ಟ ಮನೆ ಎದುರು ಒಂದಿಷ್ಟು ಹೂದೋಟ ಅನೇಕ ಹೂಗಳು ಅರಳಿ ಸುವಾಸನೆ ಬೀರುತ್ತಿದ್ದವು. ಸುಳಿವು ಗೊತ್ತಾಗಿತ್ತು. ಬಾಗಿಲು ತೆರೆದಳು. ಅತಿಥಿ ಒಳ ಬಂದಿದ್ದ ಅನುಮತಿ ಕೇಳಿಯೇ ಕೂತಿದ್ದ.


ಗಂಡನೂ ಒಳಗೆ ಇದ್ದ.


ಯಾರವರು? ಗಂಡ ಕೇಳಲಿಲ್ಲ

ಊಟಕ್ಕೆ ಕರೆಯಬಹುದಲ್ಲ ಅಂತಷ್ಟೇ ನುಡಿದ ಧ್ವನಿಗೆ ಈತ ಬೆವರಿದ್ದ.


ನಂತರ ಜೊತೆಯಾಗಿಯೇ ಊಟ ಮಾಡ್ತೀವಿ...


ಈತ ಒಳಗೊಳಗೆ ಖುಷಿ ಪಟ್ಟ.


ಗಂಡ ಊಟ ಮುಗಿಸಿದ ಒಂದಿಷ್ಟು ಎಂಜಲು ಉಳಿಸಿದ್ದ, ಮತ್ತೊಂದು ಮಣೆ ಹಾಕಿದಳು.


ಊಟ ಮಾಡಿ ಬನ್ನಿ....


ಆ ಧ್ವನಿಯಲ್ಲಿ ಅದೆಂಥದ್ದೋ ಸೆಳೆತ ಕೈ ತೊಳೆದೇ ಮಣೆ ಹತ್ತಿದ. ಗಂಡ ಉಂಡ ಅದೇ ಎಂಜಲು ತಾಟಿತ್ತು ಮತ್ತೊಂದಿಷ್ಟು ಅನ್ನ ಉಪ್ಪಿನಕಾಯಿ ಸಾರು...


ತಗೊಳ್ಳಿ ಊಟ ಮಾಡಿ...


ಒಂದು ಕ್ಷಣ ಆತನ ಸಿಟ್ಟು ನೆತ್ತಿಗೇರಿತ್ತು ಅಷ್ಟಮದಗಳೆಲ್ಲವೂ ಒತ್ತರಿಸಿ ಬಾಯಿಗೆ ಬಂದವು. ತಂದ ಮಲ್ಲಿಗೆ ಹೂವು ಹರಿದು ನೆಲಕ್ಕುರುಳಿದ್ದವು. ರೋಷ ಉಕ್ಕೇರಿ ಬಂದಿತ್ತು.


ಈ ಎಂಜಲು ತಿನ್ನಲು ನನ್ನನ್ನು ನಾಯಿ ಅಂದುಕೊಂಡಿದೀಯ...?


ಶಹಬ್ಬಾಷ್!

ಚಪ್ಪಾಳೆ ಸದ್ದಿಗೆ ಬಳೆಗಳ ಘಲ್ ಘಲ್ ಸದ್ದು ಸಾಥ್ ನೀಡಿದ್ದವು.


ಮದುವೆಯಾದ ನನ್ನ ಈ ದೇಹವೂ ಕೂಡ ನನ್ನ ಗಂಡ ಉಂಡ ಎಂಜಲೇ ಸರಿ ಹುಚ್ಚಪ್ಪ ಈ ಎಂಜಲಿನಾಸೆಗೆ ಜೊಲ್ಲು ಸುರಿಸುವ ನಿನ್ನ ಕಾಮದ ಪರಿಗೆ ಹೇಗೆ ಉತ್ತರಿಸಲಿ? ಅದಕ್ಕೆಂದೇ ನಿನ್ನನ್ನು ಕರೆದಿದ್ದು.


ಬಾ ಉಣ್ಣು ಬಾ.....


ಆತ ಸಂಪೂರ್ಣವಾಗಿ ಕುಸಿದಿದ್ದ ಅವಳ ಮಾತುಗಳಿಂದ ಅವನ ಅಂತರಂಗದ ಕಣ್ಣಿಗೆ ಬೆಳಕು ಅದೆಂಥದ್ದೋ ಕಂಡಿತ್ತು.


ಬಾಗಿಲಿನಿಂದಾಚೆ ಕಾಲಿಟ್ಟು ತನ್ನ ತಪ್ಪಿಗೆ ಕ್ಷಮೆ ಯಾಚಿಸಿದ್ದ, ತೆರೆದ ಬಾಗಿಲು ಹಾಗೆಯೇ ಇತ್ತು...

ದೀಪ ತಣ್ಣಗೆ ಉರಿಯುತ್ತಿತ್ತು....


(ಮೂಲ: ಅಧ್ಯಾತ್ಮ)

16 views0 comments
bottom of page