top of page

’ಏಲಾರ ಕಾನಾಡಾ’

ಇದೇನಪ್ಪಾ ವಿಚಿತ್ರ, ’ಏಲಾರ ಕಾನಡಾ’ ಅಂದರೆ ಏನು ಅಂತ ನೀವು ಹುಬ್ಬೇರಿಸಿ ಬಿಟ್ಟಿರತೀರಾ! ಆ ಹುಬ್ಬು ಕೆಳಗಿಳಿಸೋದು ಬೇಡ ಅದು ಮೇಲೇ ಇರಲಿ!


ವಿಷಯ ಏನು ಅಂದರೆ ಕೆಲವು ಹುಡುಗರು ಈಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಕನ್ನಡ ಭಾಷೆ ಸುಲಭವಾಗಿರಬೇಕು, ಎಲ್ಲರ ಕೈಗೆಟಕುವಂತಿರಬೇಕು, ಲಿಪಿ ಸಂಖ್ಯೆ ಕಡಿಮೆ ಮಾಡಬೇಕು, ಮಹಾಪ್ರಾಣ ಬೇಡ ಅಂತೆಲ್ಲ ತಗಾದೆ ಶುರು ಮಾಡ್ಕೊಂಡಿದಾರೆ. ಹಾದಿ ತಪ್ಪಿದ ಕೆಲವು ಹುಡುಗರು ಏನೇನೋ ಮಾತಾಡುತ್ತಾರೆ, ಅದನ್ನ ಗಂಭೀರವಾಗಿ ಪರಿಗಣಿಸೋದು ಬೇಡ ಅಂತ ಕೆಲವರು ಹೇಳಬಹುದು. ನಿಜ, ಇಂಥಾದ್ದನ್ನೆಲ್ಲ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ. ’ಕೆಲಸ ಇಲ್ಲದ ಬಡಗಿ ಮಗುವಿನ ಕುಂಡೆ ಕೆತ್ತಿದ’ ಅನ್ನೋ ಹಾಗೆ ಕೆಲಸ ಇಲ್ಲದ ಯಾರೋ ಹುಡುಗರು ಏನೇನೋ ಮಾತಾಡುತ್ತಿದ್ದಾರೆ ಅಂತ ನಾವೇನೋ ನಕ್ಕು ಸುಮ್ಮನಾಗಿ ಬಿಡಬಹುದು. ಆದರೆ ಇವರು ಇತರ ಹುಡುಗರ ತಲೆ ಕೆಡಿಸುತ್ತಾರಲ್ಲ, ಅದಕ್ಕೇನು ಮಾಡುವುದು?


ಮಾತಾಡಿದ ಹಾಗೆ ಬರೆಯಬೇಕು ಅಂತ ಇವರು ಹೇಳುತ್ತಿದ್ದಾರೆ. ಇವರ ಪ್ರಕಾರ ಕನ್ನಡದಲ್ಲಿ ಬರೆಯಲು ಕೇವಲ ಮೂವತ್ತೆರಡು ಅಕ್ಷರ ಸಾಕಂತೆ. ನಲವತ್ತೊಂಬತ್ತು ಅಕ್ಷರ ಯಾಕೆ ಬೇಕು? ನಲವತ್ತೊಂಬತ್ತು ಅಕ್ಷರ ಕಲಿಯೋದು ಕಷ್ಟ ಅಂತೆ! ಸಾವಿರಾರು ವರ್ಷಗಳಿಂದ ಸಾಹಿತ್ಯ ಬರೆಯುತ್ತ ಬಂದವರೆಲ್ಲ ಮೂರ್ಖ ಶಿಖಾಮಣಿಗಳು! ತಮ್ಮ ವಾದಕ್ಕೆ ಇವರು ಇಂಗ್ಲಿಷನ್ನು ಮಾದರಿಯಾಗಿ ತೆಗೆದುಕೊಂಡಿದ್ದಾರೆ ಅಂದ ಹಾಗಾಯಿತು. ಇವರಿಗೆ ಎಲ್ಲದಕ್ಕೂ ಇಂಗ್ಲಿಷು ಮತ್ತು ಇಂಗ್ಲಂಡ್ ಒಂದು ಮಾದರಿ! ನಮ್ಮ ತಾಯಿ ಮತ್ತು ಇಂಗ್ಲಂಡ್ ನ ಮೇರಿ ಒಂದೇ ಆಗುವುದು ಹೇಗೆ ಸಾಧ್ಯ?!


ಪ್ರತಿಯೊಂದು ಭಾಷೆಯೂ ಭಿನ್ನ ಮತ್ತು ಅದಕ್ಕೆ ಅದರದೇ ಆದ ಇತಿಹಾಸ ಇರುತ್ತದೆ. ಇಡೀ ಸಮುದಾಯದ ಸಾವಿರಾರು ವರ್ಷಗಳ ಬದುಕನ್ನು ಒಂದು ಭಾಷೆ ತನ್ನ ಒಡಲಲ್ಲಿ ಕಟ್ಟಿಕೊಂಡಿರುತ್ತದೆ. ಮಾತಾಡಿದಂತೆ ಬರೆಯುವುದು ಎಂದಾದರೆ- ಶಿಕ್ಷಣ, ಕಲಿಕೆ, ಪದವಿ ಇವೆಲ್ಲ ಯಾಕೆ ಬೇಕು? ಶಿಕ್ಷಣ (education) ಎಂಬುದೇ ಶಿಷ್ಟ! ಸಂಸ್ಕಾರದಿಂದ ಬರುವಂಥದು ಎಂದು ಅರ್ಥ.


ಬರವಣಿಗೆಯ ಮೂಲಕ ಸಮೂಹ ಸಂವಹನವೊಂದು ಸಾಧಿತವಾಗುತ್ತದೆ. ಮಾತಾಡುವ ಭಾಷೆಯಲ್ಲಿ ಬರೆದರೆ ನಾನು ಬರೆದದ್ದನ್ನು ನನ್ನ ನೆರೆಮನೆಯವ ಓದಿ ಅರ್ಥ ಮಾಡಿಕೊಳ್ಳುತ್ತಾನೆ ಎಂಬ ಭರವಸೆಯಿಲ್ಲ! ಯಾಕೆಂದರೆ ಮಾತಾಡುವಾಗ ಆ ಮಾತಿನಲ್ಲಿ ಆತ ಸ್ಥಳೀಯವಾದ, ತನ್ನದೇ ಆದ ಉಚ್ಚಾರದ ಮೂಲಕ ಯಾವ ಅರ್ಥ ತುಂಬಿದ್ದಾನೆ ಎಂಬುದು ಯಾರಿಗೆ ಗೊತ್ತು! ’ನಾನು ಹೇಳಿದೆ’ ಎಂಬುದನ್ನು ’ನಾಣು ಹೇಲಿದೆ’ ಅಂತಲೋ, ’ಅವನ ತಲೆಯಲ್ಲಿ ಮಣ್ಣು ತುಂಬಿದೆ’ ಎಂಬುದನ್ನು ’ಅವಣ ತಲೆಯಲ್ಲಿ ಮನ್ನು ತುಂಬಿದೆ’, ’ಅವಣಿಗೆ ಕನ್ನು ಕಾನುವುದಿಲ್ಲ’ ಎಂದೆಲ್ಲ ಬರೆದರೆ ಗತಿಯೇನು!


ಒತ್ತಕ್ಷರಗಳೂ ಇರಬಾರದಂತೆ! ಹಾಗಾಗಿ ’ಎಲ್ಲರ ಕನ್ನಡ’ ಎಂಬುದು ’ಏಲಾರ ಕಾನಡಾ’ ಆಗಿದೆ! ಅಂದರೆ ’ಅವನಿಗೆ ಕಣ್ಣು ಕಾಣುವುದಿಲ್ಲ’ ಎಂಬ ವಾಕ್ಯ ’ಅವನಿಗೆ ಕಣುಣು ಕಾನುವುದಿಲಲ’ ಎಂದಾಗುತ್ತದೆ. ಅಂದರೆ ಕನ್ನಡಿಗರು ನೇರವಾಗಿ ಚಂದ್ರಲೋಕ ಪ್ರಯಾಣಕ್ಕೆ ಟಿಕೆಟ್ ಕಾಯ್ದಿರಿಸಬಹುದು. ಚಂದ್ರಲೋಕದಲ್ಲಿ ಮಾತಾಡಲು ಇಂತಹ ಭಾಷೆ ಬೇಕಾಗಬಹುದು!


ಪ್ರಯೋಗಗಳು ಇರಬಾರದೆಂದಲ್ಲ, ಆದರೆ ಅವು ಪಂಡಿತರ ಪ್ರಯೋಗಶಾಲೆಯಲ್ಲಿ ಇದ್ದರೆ ಸಾಕು! ತಪ್ಪಿ ಪ್ರಯೋಗಶಾಲೆಯಿಂದ ಹೊರಗೆ ಬಂದು ಕೊರೋನಾ, ಒಮಿಕ್ರಾನ್ ನಂತಹ ಸಾಂಕ್ರಾಮಿಕ ಆಗಿಬಿಟ್ಟರೆ ಅಪಾಯ ತಪ್ಪಿದ್ದಲ್ಲ!


ಕನ್ನಡ ಭಾಷೆಯಿಂದ ಜನರನ್ನು ಇನ್ನಷ್ಟು ದೂರ ಮಾಡುವ ಎಲ್ಲ ಪ್ರಯತ್ನಗಳನ್ನೂ ನಮ್ಮ ಹುಡುಗರು ಮಾಡುತ್ತಿದ್ದಾರೆ.. ಭಾಷೆ ಅದರ ಪಾಡಿಗೆ ಅದು ಇರಲಿ; ಅದರ ಪಾಡಿಗೆ ಅದು ಬೆಳೆಯಲಿ. ಯಾರೂ ಅದರ ಮೇಲೆ ಸವಾರಿ ಮಾಡುವುದು ಬೇಡ. ಆಡುಮಾತಿನಲ್ಲಿ ನೂರೆಂಟು ವೈವಿಧ್ಯಗಳಿವೆ. ಅವುಗಳ ಸತ್ತ್ವವನ್ನು ಹೀರಿಯೇ ಶಿಷ್ಟಭಾಷೆ ಬೆಳೆದು ಬಂದಿದೆ. ಶಿಷ್ಟ ಭಾಷೆ ಬೇರೆಯಲ್ಲ, ಜಾನಪದವು ಬೇರೆಯಲ್ಲ. ಜಾನಪದಕ್ಕೆ ಶಿಕ್ಷಣದ –ಅಕೆಡೆಮಿಕ್- ಚೌಕಟ್ಟನ್ನು ಕೊಟ್ಟಾಗ ಅಂದರೆ ಸಂಸ್ಕರಿಸಿದಾಗ – ಅದು ಶಿಷ್ಟ ಆಯಿತು. ಒಂದು ಕಚ್ಚಾ ಚಿನ್ನ, ಇನ್ನೊಂದು ಸಂಸ್ಕರಿಸಿದ ಆಭರಣ ಚಿನ್ನ. ಆಭರಣ ಮಾಡಲು – ಅಂದರೆ ಎಲ್ಲರ ಉಪಯೋಗಕ್ಕೆ- ಎಲ್ಲರ ಸಂವಹನಕ್ಕೆ ಸಂಸ್ಕರಿತ ಶಿಷ್ಟ ಭಾಷೆ ಇದೆ.


ಕೆಲವೊಮ್ಮೆ ಹಾಸ್ಯಕ್ಕಾಗಿ ನಾವು ನಮ್ಮ ಪೆದ್ದುತನವನ್ನು ಪ್ರದರ್ಶಿಸಿದರೆ ಅಡ್ಡಿಯಿಲ್ಲ! ಆದರೆ ಆ ಪೆದ್ದುತನ ಎಲ್ಲರ ಮುಂದೆ ನಗೆಪಾಟಲಿಗೆ ಈಡಾಗುವ ಹಾಗೆ ಆಗಬಾರದು. ಬೇರೆ ದೇಶಗಳಿಂದ, ಬೇರೆ ಭಾಷೆಗಳಿಂದ ಆಧುನಿಕ ’ಜ್ಞಾನ’ವನ್ನು (knowledge) ನಾವು ನಮ್ಮ ಭಾಷೆಗೆ ತಂದು ನಮ್ಮ ಭಾಷೆಯನ್ನು ಸಮೃದ್ಧಗೊಳಿಸಬೇಕೇ ಹೊರತು, ಅದನ್ನು ಸಾವಿರ ವರ್ಷ ಹಿಂದಕ್ಕೆ ಎಳೆದೊಯ್ಯುವ ಕೆಲಸ ಮಾಡಬಾರದು.


ಭಾಷೆಯನ್ನು ಶ್ರೀಮಂತಗೊಳಿಸುವ ಕೆಲಸ ಮಾಡಬೇಕು, ಭಾಷೆಯ ಕೈಕಾಲು ಕತ್ತರಿಸಿ ಹಾಕುವ ಕೆಲಸವನ್ನಲ್ಲ.


- ಡಾ. ವಸಂತಕುಮಾರ ಪೆರ್ಲ.

34 views1 comment
bottom of page