top of page

ಆಲೋಚನೀಯ-೪೩

" ನನ್ನ ಕೈಯ ಹಿಡಿದಾಕಿ ಅಳು ನುಂಗಿ ನಗು ಒಮ್ಮೆ

ನಾನು ನಕ್ಕೇನ" ದ.ರಾ.ಬೇಂದ್ರೆ.

ಅಳು ನುಂಗಿ ನಗುವುದು ದಾಂಪತ್ಯದಲ್ಲಿ ಸಾಧ್ಯವಾಗ ಬಹುದು.ಆದರೆ ಪವರ ಪಾಲಿಟಿಕ್ಸನಲ್ಲಿ ಇದು ಸುಲಭವಲ್ಲ. ಅಧಿಕಾರವನ್ನು ಕೈಗೆ ತೆಗೆದುಕೊಳ್ಳಲು ಯಾವ ಯಾವುದೊ ತಂತ್ರವನ್ನು ಮಾಡಿ,ಹಲವು ಸವಾಲುಗಳನ್ನು ಎದುರಿಸಿ, ಷಡ್ಯಂತ್ರಗಳನ್ನು ಸೃಷ್ಟಿಸಿ ಅಧಿಕಾರದ ಗದ್ದುಗೆ ಏರುವವರೆಗೆ ಜೀವ ಬೇಡ ಜಾತಿ ಬೇಡ ಎಂಬಂತೆ ಆಗಿ ಬಿಡುತ್ತದೆ. ಗದ್ದುಗೆಯ ಮೇಲೆ ಕುಳಿತ ಮೇಲೆ ಎಲ್ಲ ಸಮಸ್ಯೆ ಮುಗಿಯಿತು ಎಂದೇನು ಅಲ್ಲ. ರಾತ್ರಿಯ ಚಳಿಯಲ್ಲಿ ಸೊಳ್ಳೆ ಪರದೆಯ ಒಳಗೆ ಮಲಗಿದವನಿಗೆ ಹೊರಗಡೆಯಲ್ಲಿಯ ಸೊಳ್ಳೆಯ ರಾಗ ನಿದ್ದೆ ಕೆಡಿಸುವಂತೆ ಒಂದೊಂದೆ ಕಿರಿ ಕಿರಿಗಳು ಆರಂಭವಾಗುತ್ತವೆ. ಸರಕಾರ ರಚಿಸಲು ಅತಿ ಕಡಿಮೆ ಶಾಸಕರ ಬಲ ಬೇಕಾಗಿತ್ತು.ಅಷ್ಟರಲ್ಲಿ ಕಾಂಗ್ರೆಸ್ ಜೆಡಿಎಸ್ ಗೆ ಬೆಂಬಲ ಕೊಟ್ಟು ಸರ್ಕಾರ ರಚನೆ ಆಯಿತು.ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಯಿತು.ದೇಶದ ಬಹುಪಾಲು ರಾಜ್ಯಗಳಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿದ್ದು ಕರ್ನಾಟಕದ ಈ ಪರಿಸ್ಥಿತಿಯ ಬಗ್ಗೆ ದೆಹಲಿಯ ದೊರೆಗಳು ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಹೋರಾಟದೊಳಗೆ ಗೆಲುವಿದೆ ಎಂದು ನಂಬಿದ ಬಿ.ಎಸ್.ಯಡಿಯೂರಪ್ಪ ಅವರು ಸುಮ್ಮನೆ ಕೂಡಲಿಲ್ಲ.ಕೆಲವು ಕಾಂಗ್ರೆಸ್ ಶಾಸಕರ ಬೆಂಬಲದಿಂದ ಅವರನ್ನು ಪಕ್ಷಕ್ಕೆ ರಾಜಿನಾಮೆ ಕೊಡಿಸಿ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಮತ್ತೆ ಮುಖ್ಯ ಮಂತ್ರಿಯಾದರು.ಅವರ ಪದಗ್ರಹಣ ಸಮಾರಂಭಕ್ಕೆ ದೆಹಲಿಯ ದೊರೆಗಳು ಗೈರು ಹಾಜರಾದರು. ಮಂತ್ರಿಮಂಡಲ ರಚನೆ ಆಗಿ ಇನ್ನೇನು ಕೆಲಸ ಆರಂಭಿಸ ಬೇಕು ಎನ್ನುವಾಗ ಉತ್ತರ ಕರ್ನಾಟಕದಲ್ಲಿ ಉಂಟಾದ ಮಹಾಪೂರ ದಿಂದ ಬಡವರು ಮನೆ ಮಾರುಗಳನ್ನು ಕಳೆದುಕೊಂಡು ನಿರ್ಗತಿಕರಾದರು. ಆ ಸಂದರ್ಭದಲ್ಲಿ ಯಡಿಯೂರಪ್ಪನವರು ಎಲ್ಲ ಕೆಲಸಗಳನ್ನು ಬದಿಗೊತ್ತಿ ಸಂತ್ರಸ್ತರಿಗೆ ಸಾಂತ್ವನ ಹೇಳಲು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡಿದರು.ರಾಜ್ಯ ಸರ್ಕಾರದ ಬೊಕ್ಕಸದಿಂದ ಕೈಲಾದಷ್ಟು ಸಹಾಯ ಮಾಡಿದರು. ಕೇಂದ್ರ ಸರ್ಕಾರದಿಂದ ನೆರವನ್ನು ಯಾಚೊಸಿದರು.ಆದರೆ ಕೇಂದ್ರ ಸರ್ಕಾರ ಕೊಟ್ಟಿದ್ದು ಮೂರು ಮತ್ತೊಂದು ಎಂಬಂತಾಯಿತು.ಕೇಂದ್ರ ಸರ್ಕಾರದ ತಾರತಮ್ಯ ಮತ್ತು ನಿರ್ಲಕ್ಷ್ಯವನ್ನು ವಿರೋಧ. ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಕಟುವಾಗಿ ಟೀಕಿಸಿದರು. ಆದರು ಕೇಂದ್ರ ಸರ್ಕಾರ ಮುತುವರ್ಜಿ ವಹಿಸಲಿಲ್ಲ. ಯಡಿಯೂರಪ್ಪ ಅವರಿಗೆ ಇದೆಲ್ಲ ಅರ್ಥವಾಗಿತ್ತು ಆದರೆ ಅವರು ಮೌನಕ್ಕೆ ಶರಣಾದರು.ಮೌನ ಹೇಡಿಯ ಕೈಯ ಆಯುಧವಲ್ಲ.ಅದು ಸಮರ್ಥ ನಾಯಕನ ಕೃತುಶಕ್ತಿಗೆ ಟಾನಿಕ್ ರಂದು ಮೇಲಿನವರಿಗೆ ಮನವರಿಕೆ ಮಾಡಿಕೊಟ್ಟರು. ೭೫ ರ ಹರೆಯದ ಮುಖ್ಯಮಂತ್ರಿ ಇಪ್ಪತ್ತೈದರ ಯುವಕರನ್ನು ನಾಚಿಸುವ ಹಾಗೆ ಕೆಲಸ ಮಾಡುವುದು ಅಧಿಕಾರ ವಂಚಿತರಾದ ಕೆಲವು ಪೇಪರ ಟೈಗರ ರಾಜಕಾರಣಿಗಳಿಗೆ ಪಥ್ಯವಾಗಲಿಲ್ಲ.

ಮಂತ್ರಿ ಪದವಿ ಸಿಗಲಿಲ್ಲ ಎಂದು ಕೆಲವರು,ನನಗೆ ಬೇಕಾದ ಖಾತೆ ಕೊಡಲಿಲ್ಲ ಎಂದು ಸಿ.ಪಿ.ಯೋಗಿಶ್ವರರು ,ನಾನು ಚುನಾವಣೆಯಲ್ಲಿ ಸೋತರು ಸಾಹಿತಿಗಳ ಕೋಟಾದಡಿಯಲ್ಲಿ ಎಂಎಲ್ ಸಿ ಮಾಡಿ ಋಣ ತೀರಿಸಿದರು ಮಂತ್ರಿ ಪದವಿ ಕೊಡಲಿಲ್ಲ ಎಂದು ವಿಶ್ವನಾಥರು, ಶಾಸಕರಾಗಿ ಆಯ್ಕೆಯಾಗಿದ್ದರು ಮಂತ್ರಿ ಮಾಡಲಿಲ್ಲ ಎಂದು ಯತ್ನಾಳರು ತಮಗೆ ಗೊತ್ತಿರುವ ಎಲ್ಲ ದಾರಿಯಲ್ಲಿ ಎರ್ರಾಬಿರ್ರಿ ಸಾಗಿ ಗಬ್ಬು ನಾತ ಎಬ್ಬಿಸಿದರು. ಇದನ್ನೆಲ್ಲಾ ಕಾಯುತ್ತಿದ್ದ ಕೆಲವು ಒಳಗಿನವರು ತಾನು ಮುಖ್ಯಮಂತ್ರಿಯಾದರೆ ಎಂಥ ದಿರಿಸಿನಲ್ಲಿದ್ದರೆ ಚೆಂದ ಕಾಣುತ್ತೇನೆ ಎಂಬ ರಿಹರ್ಸಲ್ಲಿಗೆ ತೊಡಗಿದರು.ಇದನ್ನೆಲ್ಲಾ ಗಮನಿಸುತ್ತಾ ಮಜಾ ತೆಗೆದುಕೊಳ್ಳುತ್ತಿದ್ದ ಹೈಕಮಾಂಡು ಅಂತು ಇಂತು ಅಳೆದು ತೂಗಿ ಯಡಿಯೂರಪ್ಪನವರಿಗೆ ಬುಲಾವು ಕಳಿಸಿತು.ಅವರು ದೆಹಲಿ ಯಾತ್ರೆ ಮುಗಿಸಿ ಬಂದರು ತುಟಿಬಿಚ್ಚಲಿಲ್ಲ." ಬ್ರಹ್ಮವನು ಅರಿತವರು ಗುಮ್ಮನಂತಿರ ಬೇಕು" ಎಂಬ ಮಾತನ್ನು ಅವರು ಕೇಳಿರ ಬೇಕು ಎಂದಿಲ್ಲ.ಆದರೆ ಅವರು ಹಾಗೆ ಇದ್ದಾರೆ.

ಕರ್ನಾಟಕ ಕಂಡ ಕೆಲವು ಜನನಾಯಕರಲ್ಲಿ ಯಡಿಯೂರಪ್ಪನವರು ಒಬ್ನ ಶಕ್ತ ಜನ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ.ಅವರು ಬಸವ ಸಿದ್ಧಾಂತವನ್ನು ಒಪ್ಪಕೊಂಡವರು. ಅವರು ಮುಖ್ಯಮಂತ್ರಿಯಾಗಿ ಅಲಕ್ಷಿತ ಸಮುದಾಯಗಳ ನೆರವಿಗೆ ಧಾವಿಸಿದ್ದಾರೆ,ಅಲ್ಪ ಸಂಖ್ಯಾತರಿಗು ನೆರವು ನೀಡಿದ್ದಾರೆ.ಹಿಂದುಗಳಲ್ಲಿ ಅಲ್ಪ ಸಂಖ್ಯಾತರಾದವರ ಅಹವಾಲುಗಳನ್ನು ಕೇಳಿ ನೆರವು ನೀಡಿದ್ದಾರೆ.ಅವರ ಬಳಿ ನ್ಯಾಯವಾಗಿ ದೊರಕ ಬೇಕಾದ ಸವಲತ್ತುಗಳ ಬಗ್ಗೆ ಕೇಳಲು ಹೋದವರನ್ನು ಈಗ ಬಾ ಆಗ ಬಾ ಹೋಗಿ ಬಾ ಎನ್ನದೆ ಒಂದೆ ಪಟ್ಟಿನಲ್ಲಿ ಕೆಲಸ ಮಾಡಿಕೊಟ್ಟಿದ್ದಾರೆ. ಇಷ್ಟಾಗಿಯು ಮೊಸರಿನಲ್ಲಿ ಕಲ್ಲು ಹುಡುಕುವವರ ಸಂಖ್ಯೆ ಕಡಿಮೆಯೇನಿಲ್ಲ.

ನಾನು ಅವರಿಂದ ಯಾವುದೆ ಬಗೆಯ ಸಹಾಯ ಪಡೆದು ಈ ಮಾತನ್ನು ಬರೆಯುತ್ತಿಲ್ಲ.ಅನ್ನ ಬೆಂದಿದೆಯೊ ಇಲ್ಲವೊ ಎಂದು ತಿಳಿಯಲು ಎಲ್ಲಾ ಅಗುಳನ್ನು ಪರೀಕ್ಷೆ ಮಾಡಬೇಕಾಗಿಲ್ಲ. ಯಡಿಯೂರಪ್ಪನವರ ಶೈಲಿಯೆ ಹಾಗೆ.ಅವರು ಹೋರಾಟಗಾರರಾಗಿರುವಂತೆ ಕೆಲಸಗಾರರು ಹೌದು.ಅವರು ಮುಖ್ಯ ಮಂತ್ರಿಯಾಗಿದ್ದಾಗ ಅವರ ಮಕ್ಕಳು ಪರಿವಾರದವರು ಹಣ ಆಸ್ತಿ ಮಾಡಿರ ಬಹುದು.ಅವರ ಶೈಲಿ ಬದಲಾಗಿರ ಬಹುದು.ತಮ್ಮ ಕೆಲಸವನ್ನು ಬೇಗ ಮಾಡಿಸಿಕೊಂಡಿರಲು ಬಹುದು.ಇದು ಎಲ್ಲಾ ಮುಖ್ಯಮಂತ್ರಿಗಳ ಕಾಲದಲ್ಲಿಯು ಘಟಿಸಿದ ಸತ್ಯ. ಇದಕ್ಕೆ ನಿಜಲಿಂಗಪ್ಪ ಅವರೊಬ್ಬರು ಹೊರತಾಗಿದ್ದರು ಎಂದು ಕೇಳಿದ್ದೆ.ಆದರೆ ಅವರ ಕಾಲದಲ್ಲಿಯು ಶರಾವತಿ ಕರ್ಮಕಾಂಡದ ಕೂಗು ಎದ್ದಿತ್ತು.ದೇವರಾಜ ಅರಸು,ರಾಮಕೃಷ್ಣ ಹೆಗಡೆ, ಎಚ್.ಡಿ. ದೇವೇಗೌಡ,ಜೆ.ಎಚ್.ಪಟೇಲ,ಸಿದ್ದರಾಮಯ್ಯ,ಬಿ.ಎಸ್.ಯಡಿಯೂರಪ್ಪ, ಮೊದಲನೆ ಅವಧಿಯಲ್ಲಿ ಎಚ್.ಡಿ. ಕುಮಾರ ಸ್ವಾಮಿ ಇವರೆಲ್ಲ ಜನಹಿತಕ್ಕಾಗಿ ತುಡಿದಿದ್ದಾರೆ.

ಬಿಜೆಪಿ ಹೈ ಕಮಾಂಡ ಮುಂದಿನ ಚುನಾವಣೆಗೆ ನಿಮ್ಮ ನಾಯಕತ್ವವಿದ್ದರು ನಿಮಗೆ ಮುಖ್ಯ ಮಂತ್ರಿ ಮಾಡುವುದಿಲ್ಲ ಎಂದು ಹೇಳಿ ಈ ಅವಧಿಯನ್ನು ಮುಗಿಸಲು ಅವರಿಗೆ ಅನುವು ಮಾಡಿಕೊಟ್ಟು ಈ ವರೆಗೆ ತಡೆದಿಟ್ಟ ಅನುದಾನವನ್ನು ಬಿಡುಗಡೆ ಮಾಡಿ ಯಡಿಯೂರಪ್ಪ ಅವರಿಗೆ ನೆಮ್ಮದಿಯಿಂದ ರಾಜ್ಯಭಾರ ನಡೆಸಲು ಅನುವು ಮಾಡಿ ತಮ್ಮದೊಡ್ಡಸ್ತಿಇಕೆಯನ್ನು ಮೆರೆಯ ಬಹುದಿತ್ತು.ಮಠಾಧೀಶರು ಎಲ್ಲ ವಿವಾದಗಳನ್ನು ಬದಿಗಿಟ್ಟು ಯಡಿಯೂರಪ್ಪ ಅವರನ್ನು ಬೆಂಬಲಿಸಿದ್ದಾರೆ.ಹಲವು ಹಿರಿಯ ಹುದ್ದರಿಗಳು ಮುಖ್ಯಮಂತ್ರಿಗಳಿಗೆ ಬೆಂಬಲ ಘೋಷಿಸಿದ್ದಾರೆ. ಅದನ್ನು ಬಿಟ್ಟು ಯಡಿಯೂರಪ್ಪನವರನ್ನು ಕೆಳಗಿಳಿಸಿದರೆ ಯಡಿಯೂರಪ್ಪ ಅವರಿಗೆ ಆಡಳಿತ ನಡೆಸಲು ಅವಕಾಶ ಕೊಡದ ಜೆಡಿಎಸ್ ಈಗ ಅನುಭವಿಸುತ್ತಿರುವ ಪರಿಸ್ಥಿತಿ ಕರ್ನಾಟಕದ ಬಿಜೆಪಿಗೆ ಒದಗಿ ಬಂದರೆ ಆಶ್ಚರ್ಯ ಪಡ ಬೇಕಾಗಿಲ್ಲ


ಡಾ.ಶ್ರೀಪಾದ ಶೆಟ್ಟಿ

51 views0 comments
bottom of page