top of page

ಅಳಿದರೂ ಉಳಿಯುವ ನೆನಪು : ಕವಿ ಸಿದ್ಧಲಿಂಗಯ್ಯ

'ಕವಿ' ಎಂದೇ ಕರೆಸಿಕೊಂಡ‌ ಸಿದ್ಧಲಿಂಗಯ್ಯನವರು ಅಂದು ಬರೋಬ್ಬರಿ ಒಂದು ತಾಸಿಗಿಂತಲೂ ಹೆಚ್ಚೇ ಮಾತಾಡಿದರು. ಅವರ ಅಂದಿನ ಆ ಮಾತುಗಳಿಗೆ ಅನುಭವಗಳು, ನೆನಪುಗಳು ಜೊತೆಯಾಗಿದ್ದವು. ಅವು ಬರೀ ನೆನಪುಗಳಾಗಿರಲಿಲ್ಲ, ಒಂದುವೇಳೆ ಅವು ನೆನಪುಗಳು ಮಾತ್ರ ಆಗಿದ್ದರೆ ಗಾಳಿಗೆ ಹಾರಿ, ಮರೆಯಾಗಿಬಿಡುತ್ತಿದ್ದವೇನೊ! ಆದರೆ ಆ ನೆನಪುಗಳಿಗೆ, ಅನುಭವದ ಮಾತುಗಳಿಗೆ ಕಾಡುವ, ಕದಡುವ, ಸದಾ ಉಳಿಯುವ, ಒಳಗೇ ಬೆಳೆಯುವ ಗುಣವಿದೆ. ಈ ಕಾರಣದಿಂದಾಗಿ ಅವುಗಳಿಗೆ ಸಾಂಸ್ಕೃತಿಕ ಮಹತ್ವ ಇದೆ. ಅವರ ಆ ನೆನಪುಗಳು ಮತ್ತೆಮತ್ತೆ ಮೆಲುಕಾಡುವಂತಿವೆ. ಕವಿಗಳ ನೆನಪ ಬುತ್ತಿಯಲಿ ಇಡೀ ಭಾರತ ಅಲ್ಲದೇ, ನಮ್ಮ ನಾಡು ನಾಲ್ಕೈದು ದಶಕಗಳಲ್ಲಿ ಕಂಡ ಸಾಮಾಜಿಕ, ರಾಜಕೀಯ, ಸಾಹಿತ್ಯಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸ್ಥಿತ್ಯಂತರಗಳ ಖಾದ್ಯಗಳು ಹೇರಳವಾಗಿದ್ದವು. ಈ ಖಾದ್ಯಗಳನ್ನು ಮೆಲ್ಲುತ್ತಿದ್ದರೆ ಸಮಾಜದ, ಸಮುದಾಯಗಳ ಆರೋಗ್ಯವು ವೃದ್ಧಿಯಾಗುತ್ತದೆ ಎಂಬುದು ನನ್ನ ನಂಬಿಕೆ. ಕವಿ ಸಿದ್ಧಲಿಂಗಯ್ಯ ಅವರು ಅಂದು ತಮ್ಮ ಮಾತಿನ ಮೂಲಕ ಇಡೀ ಸಭಾಂಗಣವನ್ನೇ ನೆನಪುಗಳ ಮಳೆಯಲ್ಲಿ ತೊಯ್ಯಿಸಿಬಿಟ್ಟಿದ್ದರು. ಅದು 2021 ರ ಮಾರ್ಚ್ 28, ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ 'ಡಿಆರ್ ನಾಗರಾಜ-೬೭' ವಿಚಾರ ಸಂಕಿರಣ, ಪುಸ್ತಕ ಬಿಡುಗಡೆ ಹೀಗೆ ಇಡೀ ದಿನದ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಿತ್ರ ಡಾ. ಶಿವರಾಜ ಬ್ಯಾಡರಹಳ್ಳಿ ಅವರು ಸಂಪಾದಿಸಿದ 'ಅನನ್ಯ ಪ್ರತಿಭೆಯ ಪರಿ' ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕವಿಗಳು ಅಂದು ಅಮೋಘವಾಗಿ ಮಾತನಾಡಿದರು. ಅವರ ಮಾತಿಗೆ ಕಣ್ಣು, ಕಿವಿ ನೆಟ್ಟಗೆ ಮಾಡಿ ಕುಳಿತಕೊಂಡಿದ್ದ ನನಗೆ ಅದು ಮರೆಯಲಾರದ ಅಪರೂಪದ, ಅವಿಸ್ಮರಣೀಯ ಕ್ಷಣ. ಡಿಆರ್ ಅವರ ಒಡನಾಡಿಯಾಗಿ ಬೆಳೆದ ಸಿದ್ಧಲಿಂಗಯ್ಯನವರು ಡಿಆರ್ ಮತ್ತು ತಮ್ಮೊಂದಿಗಿನ ಸಂಬಂಧ, ತಾವು ಕವಿಯಾಗಿ ಬೆಳೆದ ಪರಿ, ಹೋರಾಟದ ಹಾದಿ, ಸಾಮಾಜಿಕ ಚಳವಳಿ, ದಲಿತ ಚಳವಳಿಗಳ ಸ್ವರೂಪ, ಚಳವಳಿಗಳ ಸದ್ಯದ ಸ್ಥಿತಿಗತಿ, ಸಾಮಾಜಿಕ, ರಾಜಕೀಯ ಚಿತ್ರಣ ಹೀಗೆ ಹತ್ತು ಹಲವು ಸಂಗತಿಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ದಲಿತ ಕವಿ ಸಿದ್ಧಲಿಂಗಯ್ಯ ಎಂದು ನಮಗೆ ನಿಗದಿಯಾದ ಪಠ್ಯಗಳಲ್ಲಿ ಓದಿಕೊಂಡಿದ್ದ ನನಗೆ ಆವತ್ತು ಸಿದ್ಧಲಿಂಗಯ್ಯನವರ ವ್ಯಕ್ತಿತ್ವದ ಆಂಶಿಕ ಪರಿಚಯ ಸಾಧ್ಯವಾಯಿತು. ಭಾವುಕತೆ, ಸರಳತೆ, ಸಜ್ಜನಿಕೆ, ಮೆಲುಮಾತು, ವಿಚಾರ ಸ್ಪಷ್ಟತೆ, ನಿರ್ಧಾರ ಕಾಠಿಣ್ಯತೆ, ಸಹೃದಯತೆ, ಪ್ರತಿಭಾ ಪಕ್ಷಪಾತತೆ ಸಿದ್ಧಲಿಂಗಯ್ಯನವರ ವಿಶೇಷತೆಯೇ ಸರಿ!. ತಮ್ಮ‌ ಜೀವನದುದ್ದಕ್ಕೂ ನೋವು, ಅವಮಾನ, ಶೋಷಣೆ ಅನುಭವಿಸಿದ್ದ ಅವರು ಇಡೀ ದಲಿತ ಶೋಷಿತ‌ ಸಮುದಾಯವರ ಬಿಡುಗಡೆಗೆ, ನೆಮ್ಮದಿಗೆ ಸದಾ ಮಿಡಿದರು. ತೀವ್ರ ಅಂತಃಕರುಣಿಯಾಗಿದ್ದ ಕವಿಗಳು ತಳಸಮುದಾಯವರನ್ನು ಹಿಂಸಿಸಿ ಬದುಕುವ ಪ್ರಬಲ ವರ್ಗದ ದರ್ಪವನ್ನು ದಮನಿಸಲು ಅಷ್ಟೇ ಕಠಿಣವಾಗಿಯೂ ನಡೆದುಕೊಳ್ಳುತ್ತಿದ್ದರು. ದಲಿತ, ದಮನಿತರ ಅಷ್ಟೇ ಅಲ್ಲ ಸಮಸ್ತ ಶೋಷಿತರ ದನಿಯಾಗಿ ಅವರ ಕಾವ್ಯ ಅಭಿವ್ಯಕ್ತಿ ಪಡೆದಿದೆ. ಶೋಷಿತರನ್ನು ಬಿಡುಗಡೆ ಮಾಡುವಲ್ಲಿಯೇ ಅವರ ಕಾವ್ಯದ ಕೇಂದ್ರ ಕಾಳಜಿ ಇದೆ. ಆಧುನಿಕ ಕನ್ನಡ ಕಾವ್ಯದ ನವ್ಯೋತ್ತರ ಕಾಲದ ಮುಂಗೋಳಿ ಎನ್ನಬಹುದಾದ ಸಿದ್ಧಲಿಂಗಯ್ಯನವರ ಕಾವ್ಯವು ಉಳ್ಳವರ, ಪ್ರಬಲ ವರ್ಗದವರ, ದರ್ಪ, ದಬ್ಬಾಳಿಕೆಯ ವಿರುದ್ಧ ಖಡ್ಗ ಝಳಪಿಸಿದೆ. "ಹಸಿವಿನಿಂದ ಸತ್ತೋರು, ಸೈಜುಗಲ್ಲು ಹೊತ್ತೋರು, ವದಸಿಕೊಂಡು ವರಗಿದೋರು ನನ್ನ ಜನಗಳು, ಕಾಲುಕಯ್ಯಿ ಹಿಡಿಯೋರು, ಕೈ ಮಡಗಿಸಿಕೊಳ್ಳೋರು, ಭಕ್ತರಪ್ಪ ಭಕ್ತರೋ ನನ್ನ ಜನಗಳು" ಎನ್ನುವ ಕವಿಗೆ ತನ್ನ‌ ಜನಾಂಗದ ನೋವು, ಅಪಮಾನಗಳು ತೀವ್ರವಾಗಿ ಕಾಡಿವೆ. ದೇವರು, ಧರ್ಮದ ಹೆಸರಿನಲ್ಲಿ‌ ದಲಿತರನ್ನು ಹಿಂಸಿಸುವ ಮನುಷ್ಯರನ್ನು‌ ಕಂಡರೆ ಕೆಂಡವಾಗುವ ಅವರ ಕಾವ್ಯ;

"ಇಕ್ರಲಾ ವದೀಲ್ರಾ, ಈ ನನ್ ಮಕ್ಕಳ ಚರ್ಮ ಎಬ್ರಲಾ, ದೇವ್ರು ಒಬ್ನೇ ಅಂತಾರೆ, ಓಣಿಗೊಂದೊಂದ್ ತರಾ ಗುಡಿ ಕಟ್ಸವ್ರೆ, ಎಲ್ಲಾರೂ ದೇವ್ರ ಮಕ್ಳು ಅಂತಾರೆ, ಹೊಲೇರ್ನ ಕಂಡ್ರೆ ಹಾವ್ ಕಂಡಂಗಾಡ್ತಾರೆ" ಎನ್ನುವ ಮೂಲಕ ಪುರೋಹಿತಶಾಹಿಯ ಒಳವಂಚನೆಯನ್ನು‌ ಬಯಲು ಮಾಡುವುದರ ಜೊತೆಗೆ ಆಕ್ರೋಶವನ್ನೂ ಪ್ರಕಟಿಸುತ್ತದೆ. ಅಧಿಕಾರ ಬಲದ ಮೂಲಕವೇ ಕೆಳ ಸಮುದಾಯಗಳು ಸೌಲಭ್ಯ, ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯ ಎಂಬುದು ದಿಟ. ಆದರೆ ನಡೆದಿರುವುದು ಮಾತ್ರ ಇದಕ್ಕೆ ವ್ಯತಿರಿಕ್ತ. ಆವರೆವಿಗೂ ಕೆಳವರ್ಗದವರು ಬರೀ ಓಟು ಹಾಕಲು ಮಾತ್ರ ಇರುವ ಮಂದಿ ಎಂದು ನಂಬಿಸಿ, ನಡೆಸಿಕೊಳ್ಳಲಾಗಿತ್ತು. ಅವಕಾಶ ಕೊಟ್ಟರೆ ದಲಿತರು ಅಧಿಕಾರ‌ ಪಡೆದು ಆಡಳಿತ ನಡೆಸಲು ಸಮರ್ಥರು ಎಂಬುದನ್ನು‌ ಕವಿ ಸಿದ್ಧಲಿಂಗಯ್ಯ;

"ದಲಿತರು ಬರುವರು ದಾರಿ ಬಿಡಿ, ದಲಿತರ ಕೈಗೆ ರಾಜ್ಯಕೊಡಿ" ಎಂದು ಹೇಳುವ ಮೂಲಕ ರಾಜಕೀಯಚಿತ್ರಣವನ್ನು ಹೊಸದಾಗಿ ಕಟ್ಟಲು ಪ್ರಯತ್ನಿಸಿದರು. ಇದು ಚಾರಿತ್ರ್ಯಿಕವಾಗಿ ಮಹತ್ವದ ಹೆಜ್ಜೆಯಾಗಿ ಕಾಣಿಸಿದ್ದು ಸುಳ್ಳಲ್ಲ. ಆದರೆ ಅದು ಅಷ್ಟು ಸುಲಭದ ಮಾತಲ್ಲ ಎಂಬುದು‌ ಕವಿಗೆ ಗೊತ್ತಿರದ‌ ಸತ್ಯವೇನಲ್ಲ. ಸಂಘಟನೆ, ಹೋರಾಟದ ಮೂಲಕವೇ ಅಧಿಕಾರ ಪಡೆದುಕೊಳ್ಳಲು ಸಾಧ್ಯ ಎಂಬುದನ್ನು ತಿಳಿದಿರುವ ಕವಿ;

"ನೆನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು,

ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು..." ಎಂದು ದೃಢ ನುಡಿಯುತ್ತಾರೆ. ಸಂಘಟನೆಯ ಸ್ವರೂಪ ಸ್ಪಷ್ಟತೆಯನ್ನು ಮೇಲಿನ ಈ ಸಾಲುಗಳು ಮನವರಿಕೆ ಮಾಡಿಕೊಡುತ್ತವೆ. ಸ್ವಾತಂತ್ರ್ಯೋತ್ತರ ಭಾರತದ ಪರಿಸ್ಥಿತಿ ಅವಲೋಕಿಸಿದರೆ ಸ್ವಾತಂತ್ರ್ಯ ಎಂಬೋದು ಕೆಲ ವರ್ಗದವರಿಗೆ ಇನ್ನೂ ಮರಿಚೀಕೆಯಾಗಿದೆ. ಸ್ವಾತಂತ್ರ್ಯ ದ ಹೆಸರಿನಲ್ಲಿ‌ ನಡೆದಿರುವ ಅನ್ಯಾಯ, ಅನಾಚಾರ, ಮೋಸ, ವಂಚನೆಗಳು ಪ್ರಶ್ನಾರ್ಹವೇ. ಆಳುವವರ ಸ್ವಾರ್ಥ, ಮೋಸಕ್ಕೆ‌ ಬಲಿಯಾಗುವ ದಲಿತರು, ಶೋಷಿತರು ಇನ್ನೂ ಪರಾವಲಂಬಿಗಳಾಗಿ ಬದುಕುತ್ತಿರುವುದು ಸ್ವಾತಂತ್ರ್ಯೋತ್ತರ ಭಾರತದ ಬಹುದೊಡ್ಡ‌ ದುರಂತ. ಈ ಹಿನ್ನೆಲೆಯಲ್ಲಿಯೇ ಕವಿ ಸಿದ್ಧಲಿಂಗಯ್ಯ;

"ಯಾರಿಗೆ ಬಂತು ಎಲ್ಲಿಗೆ ಬಂತು, ನಲವತ್ತೇಳರ ಸ್ವಾತಂತ್ರ್ಯ, ಟಾಟಾ ಬಿರ್ಲಾ ಜೋಬಿಗೆ ಬಂತು, ಕೋಟ್ಯಾಧೀಶನ ಕೋಣೆಗೆ ಬಂತು ನಲವತ್ತೇಳರ ಸ್ವಾತಂತ್ರ್ಯ" ಎಂದು ಪ್ರಶ್ನಿಸಿರುವುದು ಔಚಿತ್ಯವೇ. ಅಲ್ಲದೇ "ಗುಡಿಸಲುಗಳು ಗುಡುಗಿದರೆ ವಿಧಾನಸೌಧ ಗಡಗಡ ನಡುಗುತಿದೆ" ಎಂದೂ ಕವಿ ಎಚ್ಚರಿಕೆಯನ್ನೂ ನೀಡುತ್ತಾರೆ. ಬಂಡವಾಳಶಾಹಿಯನ್ನು ಕೆಂಪುಹಾಸಿಗೆ ಹಾಕಿ ಆಹ್ವಾನ ನೀಡುತ್ತಿರುವ ಯಾವ ಸರ್ಕಾರವೂ ಸ್ಥಳೀಯ ಜನಸಾಮಾನ್ಯರ ಬದುಕನ್ನು‌ ಬೀದಿಪಾಲಾಗಿಸಿದೆ. ಇಂಥ‌ ನಿರ್ದಯಿ, ಕ್ರೂರ ಸರ್ಕಾರಗಳ ಧೋರಣೆಗಳನ್ನು ಖಂಡಿಸುವುದಲ್ಲದೇ, ಸೆಟೆದು ನಿಲ್ಲುವ ಧೈರ್ಯವನ್ನೂ ಪ್ರಕಟಿಸುವ ಕಾರಣಕ್ಕಾಗಿಯೇ ಕವಿ ಸಿದ್ಧಲಿಂಗಯ್ಯನವರ ಕಾವ್ಯಕ್ಕೆ ಪ್ರಸ್ತುತತೆ ಪ್ರಾಪ್ತವಾಗುತ್ತದೆ. ಪ್ರಕೃತ ಸಮಾಜದಲ್ಲಿ ಜೀವಂತವಾಗಿರುವ ಜಾತಿ, ವರ್ಗ, ವರ್ಣ, ಬಡವ-ಬಲ್ಲಿದ ಇಂಥ ಹಲವು ಪಿಡುಗುಗಳಿಗೆ ಮದ್ದು ಅರೆಯುವ ಕವಿ ಸಿದ್ಧಲಿಂಗಯ್ಯನವರ ಕಾವ್ಯ ಸಮಾನತೆಯ, ಸಮಸಮಾಜದ ಆಶಯವನ್ನು‌ ಉಸುರುತ್ತದೆ.‌ "ನಾಡ ನಡುವಿನಿಂದ ಸಿಡಿದ ನೋವಿನ ಕೂಗೇ ಆಕಾಶದ ಅಗಲಕ್ಕೂ ನಿಂತ ಆಲವೇ" ಎಂದು ಕೂಗಿಕೊಳ್ಳುವ ಕವಿ; ಸಮಾಜದ ಕೇಡುಗಳಿಗೆ ಕಾವ್ಯದ ಕಿಡಿ ಹೊತ್ತಿಸುತ್ತಾನೆ. ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ಲೋಹಿಯಾ, ಪೆರಿಯಾರ್ ಮುಂತಾದ ದಾರ್ಶನಿಕರ ಚಿಂತನೆಯ ಪ್ರಭಾವದ ಮೂಸೆಯಲ್ಲಿ ಪಡಿಮೂಡಿದ ಸಿದ್ಧಲಿಂಗಯ್ಯನವರು ಕಾವ್ಯ, ಲೇಖನ, ಅನುವಾದ, ನಾಟಕ, ಆತ್ಮಕಥೆ ಮುಂತಾದ ಸಾಹಿತ್ಯಿಕ ಪ್ರಕಾರಗಳಲ್ಲಿ ಸಮಸಮಾಜದ ಕನಸು, ಜೀವಪರ ಮೌಲ್ಯ, ಮಾನವಪರ ಚಿಂತನೆಗಳನ್ನು ಪ್ರಕಟಿಸಿದ್ದಾರೆ. ಅವರು ಹಾಕಿ ಕೊಟ್ಟ ಹೋರಾಟದ ಹಾದಿ, ರೂಪಿಸಿದ ಮಾರ್ಗ, ಸಾಹಿತ್ಯಿಕ‌ ಚಿಂತನೆಗಳ ಬೆಳಕಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕು. ಕವಿ ಅಳಿದರೂ ಕಾವ್ಯ ಉಳಿದಿರುತ್ತದೆ. ಪ್ರೀತಿಯ ಕವಿ ಸಿದ್ಧಲಿಂಗಯ್ಯ ಅವರು ತಮ್ಮ ಕಾವ್ಯದ ಮೂಲಕ, ಕಾರ್ಯಗಳ ಮೂಲಕ ಸದಾ ಜೀವಂತವಾಗಿರುತ್ತಾರೆ ಎಂದೂ‌ ಮರೆಯದ ನೆನಪಿನಂತೆ!

(ಚಿತ್ರದಲ್ಲಿ : ಕವಿ ಸಿದ್ದಲಿಂಗಯ್ಯನವರು, ಬೆಂಗಳೂರು ವಿವಿ ವಿಶ್ರಾಂತ ಕುಲಪತಿಗಳಾದ ಪ್ರೊ. ಜಾಫೆಟ್ ಅವರು, ಗೆಳೆಯ ಪ್ರಕಾಶ ಗುಳೇದಗುಡ್ಡ)


ಡಾ. ಸಂಗಮೇಶ ಎಸ್. ಗಣಿ

96 views0 comments
bottom of page