ಬೆತ್ತಲಾದ ಮರಕೆ ಬದುಕು ಕಟ್ಟುವ ಧ್ಯಾನ
ನಗುತ್ತವೆ ಒಮ್ಮೊಮ್ಮೆ
ಚಿಗುರೆಲೆಯ ತಾರುಣ್ಯ
ಹಂಗಿಸುವ ಯೌವನದ ಮುಂದೆ
ಮುದಿತನದ ಲವಲವಿಕೆ
ಬಾಗುವುದಿಲ್ಲ ಶಿರವ
ಲಜ್ಜೆಗೆಟ್ಟ ಬಿರುಗಾಳಿ ಬೀಸದೆ
ಆರುವುದಿಲ್ಲ ದಾರಿದೀಪ
ಮಾಗಿದ ದೇಹ
ಗೋಚರಿಸಿದರೂ
ಹೊರಗೆ ಬಸವಳಿದು ಮುಪ್ಪಿನಂತೆ
ತನ್ನ ಒಡಲೊಳಗೆ ಮಡಿಲ ಹಾಸುವುದು
ಹಲವು ಜೀವಗಳಿಗೆ
ಜೇನಿನ ಸಿಹಿಗಳಿಗೆ
ಬಹಿರಂಗದ ಬರಡುತನ
ಅಂತರಂಗದ ಚಿಗುರುಗಳಿಗೆ
ಖಾಲಿ ಜೋಳಿಗೆಯಾಗುವುದೇ ಇಲ್ಲ
ಮಾಗುವಿಕೆಗೆ ವೃದ್ಧಾಪ್ಯವೆಂಬ
ಹಣೆಪಟ್ಟಿ ಕಟ್ಟ ಬೇಕಿಲ್ಲ
ಕಟ್ಟಬೇಕಾಗಿರುವುದು
ಅನುಭವದ ನೆತ್ತಿಯ ಮೇಲೆ
ಬದುಕಬೇಕೆಂಬ ಬತ್ತದ ಹಸಿವಿನ ಬುತ್ತಿ
ಖಾಲಿ ಹಣೆಗೆ ಕುಂಕುಮದಿಂದ
ಸೌಭಾಗ್ಯತನ ಉತ್ಪತ್ತಿ
ಬಾಯಾರಿಕೆಯ ದಾಹಕ್ಕೆ
ಹನಿ ನೀರಿಗೆ ಮುಕ್ತಿ
ಮಂಜುನಾಥ ನಾಯ್ಕ ಯಲ್ವಡಿಕವೂರ
Comments