top of page

ಗೀರು

Updated: Oct 1, 2020
ಪುಸ್ತಕ- ಗೀರು ಲೇಖಕಿ- ದೀಪ್ತಿ ಭದ್ರಾವತಿ ಪ್ರಕಾಶನ- ಆವರ್ತ ಪಬ್ಲಿಕೇಶನ್ ಬೆಲೆ- ೧೦೦/-

ಸ್ತ್ರೀ ಸಂವೇದನೆಯ ದಟ್ಟ ಛಾಯೆಹೊಂದಿದ ಗೀರು ಕಥಾ ಸಂಕಲನ ಈ ಆಸುಪಾಸಿನ ವರ್ಷಗಳಲ್ಲಿ ನಾನು ಕಂಡಂತಹ ಅತ್ಯುತ್ತಮ ಕಥಾ ಸಂಕಲನಗಳಲ್ಲಿ ಒಂದು. ಸ್ತ್ರೀ ಸಬಲೀಕರಣದ ಮಂತ್ರ ಜಪಿಸುತ್ತಲೇ ಹೆಣ್ಣನ್ನು ಧಮನಿಸುವ ಈ ಸಮಾಜದ ಅಂಚುಗಳಲ್ಲಿ ಕಂಡುಬರುವ ಓರೆಕೋರೆಗಳನ್ನು, ಸಮಾಜದ ನಟ್ಟ ನಡುವೆಯೇ ಇದ್ದರಬಹುದಾದ ಕೆಸರು ಹೊಂಡವನ್ನು ನಮ್ಮೆದುರಿಗೆ ಅನಾವರಣಗೊಳಿಸುವ ಗೀರು ಸಂಕಲನ ಡಾ. ಪಾಟೀಲ್ ಪುಟ್ಟಪ್ಪ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ತಮ್ಮ ವಿಶಿಷ್ಟ ನಿರೂಪಣೆಯಿಂದಲೇ ನಾಡಿನಾದ್ಯಂತ ಹೆಸರುಗಳಿಸಿರುವ ದೀಪ್ತಿ ಈ ಸಂಕಲನದಲ್ಲಿ ಒಟ್ಟೂ ಹದಿನಾಲ್ಕು ಕಥೆಗಳನ್ನು ನಮ್ಮೆದುರಿಗಿಟ್ಟಿದ್ದಾರೆ.

   ಸ್ಫೋಟ ಎನ್ನುವುದು ಸಂಕಲದ ಮೊದಲ ಕಥೆ. ಅರುಂಧತಿ ಎನ್ನುವ ಹೆಣ್ಣೊಬ್ಬಳ ಸುತ್ತ ಸುತ್ತುವ ಈ ಕಥೆಯು ಬಿಚ್ಚಿಡುವ ಆಯಾಮಗಳನ್ನು ಗಮನಿಸಿದರೆ ಒಂದು ಕಥೆಯಲ್ಲಿ ಕತೆಗಾರ್ತಿ ಎಷ್ಟೊಂದು ವಿಷಯಗಳನ್ನು ಏಕಕಾಲದಲ್ಲಿ ಹೇಳಹೊರಟಿದ್ದಾರೆ ಎನ್ನುವ ಅಚ್ಚರಿ ಉಂಟಾಗುತ್ತದೆ. ಇನ್ಸಿಮಿನೇಷನ್‌ನಿಂದ ಮಗುವನ್ನು ಪಡೆಯಬೇಕೆಂದು ಆಸ್ಪತ್ರೆಯ ಸ್ಟ್ರೆಚರ್ ಮೇಲೆ ಮಲಗಿದ ಅರುಂಧತಿ ಅನುಭವಿಸುತ್ತಿರುವ ತಲ್ಲಣಗಳ ಒಟ್ಟೂ ಮೊತ್ತ ಈ ಕಥೆ. ಅದು ಕೇವಲ ಅರುಂಧತಿಯ ನೋವು ಎಂದು ಹೇಳಿ ನಾವು ನಿಸೂರಾಗುವಂತಿಲ್ಲ. ಒಂದಲ್ಲಾ ಒಂದು ರೀತಿಯಲ್ಲಿ ಹೆಣ್ಣು ಅನುಭವಿಸುತ್ತಿರುವ ವೇದನೆ ಇದು. ಮದುವೆ ಆಗುವಾಗಲೂ ವಯಸ್ಸಾದವನೊಂದಿಗೆ ಮದುವೆ ಆಗಲಾರೆ ಎಂದರೂ ತವರು ಮನೆಯ ಬಡತನ, ಅಪ್ಪನ ಅಸಹಾಯಕತೆ, ತಂಗಿಯರ ಆಸೆ ಹೊತ್ತ ಕಂಗಳಿಗೆ ನಿರಾಸೆ ಮಾಡಲಾಗದೇ ಒತ್ತಾಯದಿಂದ ಮದುವೆ ಆದ ಅರುಂಧತಿ ಮದುವೆಯ ರಾತ್ರಿಯೇ ತನಗೆ ಇಷ್ಟವಿಲ್ಲ ಎಂದು ಹಾಸಿಗೆಯನ್ನು ಬೇರೆ ಮಾಡಿಕೊಂಡವನ ಜೊತೆ ಬಾಳಬೇಕಾದ ಅನಿವಾರ್‍ಯತೆಯನ್ನು ಸೆರಗಿನಲ್ಲಿ ಮುಚ್ಚಿಟ್ಟುಕೊಂಡವಳು. ಸ್ನೇಹಿತನೊಂದಿಗೆ ಆತನನ್ನು ನೋಡಬಾರದ ಸ್ಥಿತಿಯಲ್ಲಿ ನೋಡಿಯೂ ತುಟಿ ಕಚ್ಚಿಹಿಡಿದು ಜೀವನ ಮಾಡಬೇಕಾದ ಅನಿವಾರ್‍ಯತೆ. ಅತ್ತ ಮಗಳ ದುಸ್ಥಿತಿ ಗೊತ್ತಾದರೂ ಮನೆಗೆ ಕರೆದೊಯ್ಯಲಾರದ ಅಪ್ಪ ಅಮ್ಮ, ಉಣ್ಣಲು ಉಡಲು ತೊಡಲು ಯಾವ ತೊಂದರೆಯೂ ಇಲ್ಲದ ಮೇಲೇ ಅದೊಂದು ಐಬನ್ನು ಸಹಿಸಿಕೊಳ್ಳಲು ಏನೂ ಅಡ್ಡಿಯಿಲ್ಲ ಎನ್ನುತ್ತ ರೇಶ್ಮೆ ಸಿರೆಯನ್ನು ಆಸೆಯಿಮದ ನೇವರಿಸುವ ಗೆಳತಿಯರಿಗೆ ದೈಹಿಕ ಸುಖ ಕೂಡ ಬದುಕಿಗೆ ಅನಿವಾರ್‍ಯ ಎನ್ನುವ ಧೈರ್‍ಯವಾದರೂ ಆಕೆಗೆಲ್ಲಿ ಬಂದೀತು? ಮಗನ ಕೈ ಸೋಕಿದರೂ ಮಗುವಾಗಿಬಿಡುತ್ತದೆ ಎಂದುಕೊಂಡಿರುವ ಅತ್ತೆಗೆ ವಂಶದ ಕುಡಿಬೇಕು. ಮೈಯ್ಯನ್ನೇ ಮುಟ್ಟಲಾರದವನು ಮಗುವನ್ನು ಹೇಗೆ ಕೊಟ್ಟಾನು ಎಂಬ ಪ್ರಶ್ನೆ ನಾಲಿಗೆ ದಾಟಿ ಹೊರಬರುವುದಿಲ್ಲ.  ಇನ್ಸಿಮಿನೇಷನ್ ಮಾಡಿಸಿಕೊಂಡು ಮಗುವನ್ನು ಪಡೆಯಲು ಹೇಳುವ ಗಂಡ ವೈದ್ಯರಿಗೆ ಕೊಟ್ಟ ಕಾರಣ ಮಾತ್ರ ಹೆಂಡತಿ ಹಾಸಿಗೆಯಲ್ಲಿ ಸ್ವಲ್ಪವೂ ಕೋ ಆಪರೇಟ್ ಮಾಡುವುದಿಲ್ಲ ಎಂಬುದು. ಅದನ್ನು ಕೇಳಿದ ತಕ್ಷಣವೇ ಅರುಂಧತಿ ನಿರ್ಧರಿಸಿ ಬಿಡುತ್ತಾಳೆ. ತನ್ನ ಗಂಡ ಗೌತಮನ ಸೆಮೆನ್ ಬಿಟ್ಟು ಬೇರೆ ಯಾರದ್ದಾದರೂ ಸೆಮೆನ್‌ನ್ನು ಇಂಜೆಕ್ಟ್ ಮಾಡಿಕೊಳ್ಳಲು.

    ಆಸ್ಪತ್ರೆಯ ಸ್ಟ್ರೆಚರ್ ಮೇಲೆ ಮಲಗಿ ಬೆತ್ತಲೆಯ ಬಗ್ಗೆ ಅಳುಕುತ್ತ, ಭೂತವನ್ನೆಲ್ಲ ಇಣುಕುತ್ತ, ಭವಿಷ್ಯದ ಸ್ವಾರ್ಥದ ಕಡೆ ತಿರಸ್ಕಾರದಿಂದ ನೋಡುತ್ತಿರುವ ಅರುಂಧತಿ ಗಂಡನ ಸೆಮನ್‌ನ್ನು ತನ್ನೊಳಗೆ ಸೇರಿಸಿಕೊಳ್ಳುವುದನ್ನು ತಿರಸ್ಕರಿಸುವ ಮೂಲಕ ಆತ ಮಾಡಿದ ಅನ್ಯಾಯಕ್ಕೆ ಒಂದು ವಿಧದಲ್ಲಿ ಪ್ರತಿಕಾರ ತೀರಿಸಿಕೊಳ್ಳುತ್ತಾಳೆ ಎಂದೇ ಹೇಳಬಹುದು. ಗೌತಮ ಹೆಂಡತಿಯನ್ನು ಮುಟ್ಟದಿರಲು ಕಾರಣವಾದ ಆತನ ಸಲಿಂಗ ಕಾಮ, ಆದರೂ ಮನೆತನದ ಮರ್‍ಯಾದೆಗೋಸ್ಕರ ಹೆಂಡತಿಯನ್ನು ಇನ್ಸಿಮಿನೇಶನ್‌ಗೆ ಒಪ್ಪಿಸುವುದು ಇವೆಲ್ಲವನ್ನೂ ಏಕಕಾಲದಲ್ಲಿ ಹಿಡಿಟ್ಟು ಈ ಸಮಾಜ ಹೆಣ್ಣಾದವಳ ಮೇಲೆ ಮಾತ್ರ ಹೇರುವ ನಿರ್ಬಂಧಗಳನ್ನು ಸೂಕ್ಷ್ಮವಾಗಿ ತಿಳಿಸುತ್ತದೆ. ಹೀಗಾಗಿ ಗಂಡಿನ ಗೌಪ್ಯತೆಯನ್ನು ಕಾಯ್ದುಕೊಳ್ಳುತ್ತಲೇ ತನ್ನ ಗೌರವವನ್ನೂ ಕಾಪಾಡಿಕೊಳ್ಳಬೇಕಾಗಿ ಬರುವ ಹೆಣ್ಣಿನ ಪರಿಸ್ಥಿತಿಯ ಕುರಿತು ಈ ಕಥೆ ಹೇಳುತ್ತದೆ.

   ಭಾಗಿಚಿಕ್ಕಿನ್ನುವ ಕಥೆಯಲ್ಲಿಯೂ ಕೂಡ ಕಥೆಯ ಪಾತ್ರದಾರಿಗಳಾದ ಶಾರದೆ ಹಾಗೂ ಭಾಗಿಚಿಕ್ಕಿ ಇಬ್ಬರೂ ಧುತ್ತೆಂದು ಎದುರು ನಿಂತು ಹೆಣ್ಣಿನ ಸ್ಥಿತಿ ನೋಡು ಇದು ಎನ್ನುವಂತಾಗುತ್ತದೆ. ಎಲ್ಲಿಂದಲೋ ಬಂದ ಭಾಗೀರಥಿ ದೊಡ್ಡ ಮನೆಯ ಮನೆಯವಳೇ ಆಗಿಬಿಡುವುದರೊಂದಿಗೆ ಕಥೆ ಪ್ರಾರಂಭವಾಗುತ್ತದೆ. ಇದ್ದಬಿದ್ದ ಗಂಡಸರನ್ನೆಲ್ಲ ದ್ವೇಷಿಸುವ ಭಾಗಿ ಚಿಕ್ಕಿಯ ಕಥೆ ಯಾರಿಗೂ ಗೊತ್ತಿಲ್ಲ. ಮೈ ತುಂಬ ಸಿರಿಂಜ್ ಚುಚ್ಚಿಸಿಕೊಂಡ ಮಗಳು ಆಸ್ಪತ್ರೆಯಲ್ಲಿ ಸತ್ತಿದ್ದು ಹಾಗೂ ಅದಾದ ಎರಡೇ ದಿನಕ್ಕೆ ಗಂಡ ಕೂಡ ಹಗ್ಗ ಹಾಕೊಕೊಂಡ ಎನ್ನುವ ವಿಷಯದ ಹೊರತಾಗಿ. ಮನೆಗೆ ಪಾದ ಪೂಜೆಗೆ ಎಂದು ಬಂದ ಮಠಾಧೀಶನೊಬ್ಬನಿಗೆ ಕೊಟ್ಟಿಗೆಯ ಪಕ್ಕ ಹೊಸದಾಗಿ ಬಚ್ಚಲು ಹಾಗೂ ಶೌಚಾಲಯ ಮಾಡಿದ್ದರಿಂದ ಕಿರಿಕಿರಿಗೊಂಡ ಭಾಗಿಚಿಕ್ಕಿ ಆತನನ್ನು ಹೆದರಿಸಿದ್ದು, ಸ್ವಾಮಿಯೊಬ್ಬನಿಗೆ ಹೆಣ್ಣು ಮಕ್ಕಳು ಹುಟ್ಟುತ್ತಲೇ ಮುಂಡೆಯಾಗಿ ಹುಟ್ಟುವುದಿಲ್ಲ, ಮುಂಡೇರನ್ನಾಗಿ ಮಾಡಿದ್ದು ಗಂಡಸರು ಎನ್ನುವ ಮೂಲಕ ಇಡೀ ಸಮಾಜ, ಸಂಪ್ರದಾಯಕ್ಕೆ ಸೆಡ್ಡು ಹೊಡೆದು ನಿಲ್ಲುತ್ತಾಳೆ. ಅಂತಹ ಭಾಗಿಚಿಕ್ಕಿಯನ್ನು ಮನೆಯ ಐದು ಮಕ್ಕಳು ಪಾಲಾದ ನಂತರ ಸಾಕಲು ಆಗದು ಎನ್ನುವ ನೆಪ ಹೂಡಿ ಹೊರಹಾಕಿದ್ದರು. ಅಂತಹ ಗಟ್ಟಿಗಿತ್ತಿಯನ್ನು ಕೆಲಸಕ್ಕೆ ಹೋಗಿಬಂದು, ಬೆಳೆಯುತ್ತಿರುವ ಮಗಳನ್ನು ನೋಡಿಕೊಳ್ಳಲಾಗದೇ ಒದ್ದಾಡುತ್ತಿರುವ ಶಾರದೆ ಮನೆಗೆ ಕರೆದಿಟ್ಟುಕೊಳ್ಳುತ್ತಾಳೆ, ಆದರೆ ಭಾಗಿಚಿಕ್ಕಿ 'ನಿನ್ನ ಮಾವ ನನ್ನನು ಮನೆಯಿಂದ ಹೊರಹಾಕಿದ್ದು ನನ್ನ ಜೋರು ಬಾಯಿಗಲ್ಲ, ಅವನೊಂದಿಗೆ ಹಾವು ಏಣಿ ಆಟ ಆಡಲಿಲ್ಲ ಎಂದು' ಎನ್ನುತ್ತ ತನ್ನ ಅಜ್ಜಿ ಮನೆಯ ಸೋದರ ಮಾವಂದಿರ ಬಗ್ಗೆ ಇದ್ದ ಭಾವನೆಯನ್ನು ಶಾರದೆ ಮತ್ತೊಮ್ಮೆ ಯೊಚಿಸುವಂತೆ ಮಾಡುತ್ತಾಳೆ. ಅದರ ನಂತರ ಭಾಗಿಚಿಕ್ಕಿ ಮನೆಯ ಎಲ್ಲರ ಗುಣಾವಗುಣಗಳನ್ನು ಹೇಳುವುದು, ಮಗಳ ಉಡುಪು, ಅವಳ ಗೆಳತಿಯರಿಂದ ಹಿಡಿದು ಮಾವನ ಲೇಟ್‌ನೈಟ್ ಸಿನೇಮಾದ ಕುರಿತು ಮಾತನಾಡುವುದಲ್ಲದೇ ತನ್ನ ಮೈಕೈ ಮುಟ್ಟುವ ದೂರನ್ನೂ ಹೇಳಿ ಇಡೀ ಮನೆಯ ಉಸ್ತುವಾರಿಯ ನಿಗಾವಹಿಸುವುದರೊಂದಿಗೆ ಮನೆಯಲ್ಲಿ ಇರುಸುಮುರುಸು ಪ್ರಾರಂಭವಾಗುತ್ತದೆ.. ಆದರೆ ತಾಪತ್ರಯ ಪ್ರಾರಂಭವಾಗಿದ್ದು ಗಂಡನ ಫೋನ್‌ನ್ನು ಕದ್ದು ಕೇಳುತ್ತಾಳೆ ಎಂದು ಗಂಡ ಸಿಡಿಮಿಡಿಗೊಂಡಾಗಲೇ. ಕೊನೆಗೊಂದು ದಿನ ಮೊಮ್ಮಗಳನ್ನು ಸ್ನಾನ ಮಾಡಿಸುತ್ತೇನೆಂದು ಶಾರದೆಯ ಮಾವ ಬಚ್ಚಲಿಗೆ ಹೋದಾಗ ಭಾಗಿಚಿಕ್ಕಿ ಇಡೀ ಮನೆಯನ್ನೇ ರಾಣಾರಂಪ ಮಾಡಿಬಿಡುತ್ತಾಳೆ. ಮುದುಕ ಎಳೆ ಹೆಣ್ಮಗೀನ ಮೈ ಮುಟ್ಟೋಕೆ ನೋಡ್ತಾನೆ ಎನ್ನುವುದು ಭಾಗಿಚಿಕ್ಕಿಯ ಆರೋಪ. ಆದರೆ ಅಲ್ಲಿಗೆ ಸಹನೆ ಮುಗಿದು ಶಾರದೆ ಭಾಗಿಚಿಕ್ಕಿಯ ಕೆನ್ನೆಗೆ ಹೊಡೆದು ಅವಳನ್ನು ಮನೆಬಿಟ್ಟು ಹೊರಟು ಹೋಗುವಂತೆ ಬೈಯ್ದುಬಿಡುತ್ತಾಳೆ. ಸಂಜೆ ಶಾರದಾ ಮನೆಗೆ ಹಿಂದಿರುಗಿದಾಗ ತನ್ನ ಗಂಟನ್ನು ಕಟ್ಟಿಕೊಂಡಿದ್ದ ಭಾಗಿಚಿಕ್ಕಿ  ತನ್ನ ಮಗಳು ಸತ್ತದ್ದು ಅದರಪ್ಪನಿಂದಲೇ. ನಿನ್ನ ಮಗಳನ್ನು ಜೋಪಾನ ಮಾಡಿಕೋ ಎಂದು ಹೇಳಿ ಹೊರಟುಹೋಗುತ್ತಾಳೆ. ಭಾಗಿಚಿಕ್ಕಯ ಮಾತು ಕೂರಲಗಿನಂತೆ ಎದೆಯನ್ನು ಸೀಳಿ ಒಂದುಕ್ಷಣ ಮನಸ್ಸನ್ನು ಅಲ್ಲೋಲಕಲ್ಲೋಲ ಮಾಡಿಬಿಡುತ್ತದೆ. ಇಡೀ ಪುರುಷ ಸಮಾಜದ ಮೇಲಿರುವ ನಂಬಿಕೆ ಒಂದೇ ಕ್ಷಣದಲ್ಲಿ ಕುಸಿದು ಹೋಗಿ ಅಸಹ್ಯ ಹುಟ್ಟುತ್ತದೆ. ಕಾಲ ಬದಲಾಗಿದೆ ಎಂದಾಗಲೆಲ್ಲ ಕಾಮ ಬದಲಾಗಿಲ್ಲ ಎನ್ನುವ ಭಾಗಿಚಿಕ್ಕಿಯ ಮಾತು ಸದಾ ಕಿವಿಯಲ್ಲಿ, ಮೆದುಳಲ್ಲಿ ಉಳಿದುಬಿಡುವಂತಹ ಕತೆ ಇದು.

         ಕ್ಯಾನ್ವಾಸ ಎನ್ನುವ ಕಥೆಯ ಆಳಕ್ಕಿಳಿದೇ ಇದನ್ನು ಅನುಭವಿಸಬೇಕು. ಪಾರ್ಕಿನಲ್ಲಿ ತನ್ನ ಹೆಂಡತಿಯ ಪಾದವನ್ನು ಬಿಡಿಸಿದನೆಂದು ಕೂಗಾಡಿದ ಮಾಥೂರ್ ಹಾಗು ಅವನು ತನ್ನ ಪಾದಗಳ ಚಿತ್ರ ಬಿಡಿಸಿದಾಗಿನಿಂದ ಪಾದಗಳ ಕಡೆಗೆ, ದೇಹ ಸೌಂದರ್‍ಯದ ಕಡೆಗೆ ಹೆಚ್ಚು ನಿಗಾವಹಿಸುತ್ತಿರುವ ಅವನ ಹೆಂಡತಿಯ ಕುರಿತು ಕಥೆ ಹೇಳಿಕೊಳ್ಳುತ್ತಿರುವ ಸಬಾಸ್ಟಿನ್‌ಗೆ ವಿಪರೀತ ಕುತೂಹಲ. ಅಷ್ಟು ಚಂದದ ಮಾಥೂರ್‌ನ ಹೆಂಡತಿಯನ್ನೊಮ್ಮೆ ಮನದಣಿಯೇ ನೋಡಬೇಕು, ಮನಸಾರೆ ಮಾತನಾಡಬೇಕು, ಸಾಧ್ಯವಾದರೆ.... ಎನ್ನುವ ಪುರುಷ ಚಪಲ. ಒಂದು ದಿನ ಮಾಥೂರ್‌ಗೆ ಅನಾರೋಗ್ಯ ಎಂದು ತಿಳಿದು ಆಸ್ಪತ್ರೆಗೆ ಹೋದರೆ ಆತನ ಹೆಂಡತಿ ಮನೆಗೆ ಹೋಗಿದ್ದಾಳೆಂದು ನಿರೂಪಕ ಮನೆಯತ್ತ ಧಾವಿಸುತ್ತಾನೆ. ಆದರೆ ಮನೆಯ ಮುಂದೆ ಗಂಡಸೊಬ್ಬನ ಜೋಡಿ ಚಪ್ಪಲಿ ಕಂಡು ಹಾಗೆಯೇ ಹಿಂದಿರುಗುತ್ತಾನೆ. ಅತ್ತ ಮಾರನೆಯ ದಿನ ಪಾರ್ಕಿನಲ್ಲಿ ತನ್ನ ಹೆಂಡತಿಯ ಚಿತ್ರ ಬರೆದಿದ್ದಾನೆಂದು ಸುಬ್ರಹ್ಮಣಿಯನ್ ಎತ್ತಿದ ಚಪ್ಪಲಿ ಆ ದಿನ ಮಾಥೂರ್ ಮನೆಯ ಮುಂದಿದ್ದದ್ದು ಎಂದು ನಿರೂಪಕನಿಗೆ ಅರಿವಾಗುತ್ತದೆ. ಪಾರ್ಕಿನಲ್ಲಿ ಕುಳಿತ ಚಿತ್ರಕಾರ ಹೇಳುವಂತೆ ಇಲ್ಲಿ ಯಾವುದೂ ಯಾರ ಸ್ವತ್ತೂ ಅಲ್ಲ ಎನ್ನುವುದು ನಿಜ ಎಂದೇ ಭಾಸವಾಗುತ್ತದೆ.

ಚೌಕಟ್ಟು ಕಥೆಯಲ್ಲಿ ಬರುವ ಮಧುವಂತಿ ಹಾಗೂ ಮುಚ್ಚಿದ ಬಾಗಿಲು ಕಥೆಯಲ್ಲಿನ ಆತ ಇಬ್ಬರೂ ಒಂದೇ ದೋಣಿಯ ಪಯಣಿಗರಂತೆ ಭಾಸವಾಗುತ್ತಾರೆ. ನೆರಳಿನಾಚೆಯ ಸತ್ಯಮೂರ್ತಿ ಅಪ್ಪ ಮರಕಡಿದು ಮಾರಿದ ತಪ್ಪಿಗಾಗಿ ಎಂಬಂತೆ ಅವ್ವ ಹೇಳಿದಂತೆ ಕಂಡಕಂಡಲ್ಲಿ ಗಿಡನೆಡುತ್ತ ಸ್ವತಃ ಅರಣ್ಯ ಇಲಾಖೆಯೇ ರೋಸಿಹೋಗಿ ಅವನ ಮೇಲೆ ಹಗೆ ಸಾಧಿಸಿ ಗಂಧದ ಮರ ಕೊಯ್ದು ಮಾರಾಟ ಮಾಡಿದ ಆರೋಪ ಹೊರಿಸುವ, ಸ್ಮಾರ್ಟಸಿಟಿ ಮಾಡುವ ಆತುರದಲ್ಲಿ ಸತ್ಯಮೂರ್ತಿ ನೆಟ್ಟ ಮರವನ್ನೆಲ್ಲ ಕಡಿದು ಅವನ ಮೇಲೆ ಸೇಡು ತೀರಿಸಿಕೊಳ್ಳುವ ಕಥೆ ಅಂತಃಕರಣವನ್ನು ತಾಗುತ್ತದೆ. ಈ ಟೆಂಡರ್ ಎನ್ನುವ ಕಥೆ ಭಗವಂತನನ್ನೂ ಕಮೀಷನ್ ದಂಧೆಗೆ ಒಪ್ಪಿಸಿದ ನಮ್ಮ ಅಧಿಕಾರಿಗಳ ಮರ್ಮವನ್ನು ತಿಳಿಸುತ್ತದೆ. ಅಲಮೇಲಮ್ಮ ಮತ್ತು ಇಂಗ್ಲೀಷ್ ಕಥೆಯು ಮೊಮ್ಮಗನನ್ನು ಇಂಗ್ಲೀಷ್ ಶಾಲೆಗೆ ಸೇರಿಸಿದ ಅಲುಮೇಲಮ್ಮನ ಒದ್ದಾಟವನ್ನು ಹೇಳುತ್ತದೆ. ಕುದಿ ಎನ್ನುವ ಕಥೆಯಲ್ಲಿ ಕೌಸಲ್ಯೆ ಹಾಗೂ ಅವಳ ಮಹಿಳಾ ಸಂಘದ ಮಹಿಳಾಮಣಿಗಳ ನೋವಿದೆ. ಆದರೂ ಲೋಕಕಲ್ಯಾಣಾರ್ಥ ಸೀತಾಕಲ್ಯಾಣ ಮಾಡಹೊರಟವರಿಗೆ ಅಕ್ಕಮ್ಮಯ್ಯ ಒಂದು ಸಲ ಮದುವೆ ಆಗಿಯೇ ಆ ಸೀತೆ ಬೆಂಕಿಗೆ ಹಾರಿಕೊಳ್ಳುವಂತಾಯ್ತು. ಮತ್ತೆ ಮದುವೆ ಮಾಡ್ತೀರಾ ಎನ್ನುವ ಮಾತು ಎಲ್ಲ ಕಾಲಕ್ಕೂ ಎಲ್ಲ ಹೆಣ್ಣುಗಳಿಗೂ ಏಕಕಾಲದಲ್ಲಿಯೇ ಅನ್ವಯಿಸುತ್ತದೆ. ರೈತ ಸಾಲ ಮಾಡಿ ಸತ್ತರೆ ಸರಕಾರ ಪರಿಹಾರ ಕೊಡುತ್ತದೆ ಎಂದು ನಂಬಿಸಿ ಬಸಣ್ಣ ಸಾಲ ಮಾಡಿದ್ದ ಎಂಬ ಕಾಗದಪತ್ರ ಮಾಡಿಸಿ ಹೊಲವನ್ನು ನುಂಗಿಹಾಕಲು ಯೋಚಿಸಿದ್ದನ್ನು ತಡೆಯಲೆತ್ನಿಸುವ ರೊಕ್ಕದೋಷದ ದೇವಿರಿ ಇವರೆಲ್ಲರೂ ಸಂಕಲನ ಕಥೆಗಳನ್ನು ಎದೆಗೊಟ್ಟು ಓದುವಂತೆ ಮಾಡಿದ್ದಾರೆ. ಮೊಹರು ಕಥೆಯಲ್ಲಿ ಬರುವ ಅವಳು ಬಿಟ್ಟು ಹೋದ ಗಂಡ ದಯಪಾಲಿಸಿದ ಮೂರು ಮಕ್ಕಳನ್ನು ಸಾಕುವುದಕ್ಕೆಂದೇ ಮೈ ಮಾರಿಕೊಂಡು ಜೀವಿಸುವವಳು. ಕಟ್ಟಿಕೊಂಡವನಿಗೆ ಮಕ್ಕಳನ್ನು ಮಾಡುವುದು ಗೊತ್ತಿದೆಯೇ ಹೊರತೂ  ಸಾಕುವ ಜವಾಬ್ಧಾರಿ ಇಲ್ಲ. ಆದರೆ ತಾಯಿಯಾದವಳು ಸಾಕಲೇಬೇಕಲ್ಲ? ಕೊನೆಗೂ ಆಸ್ಪತ್ರೆಗೆ ಪರೀಕ್ಷೆಗೆಂದು ಹೋದವಳಿಗೂ ಅಲ್ಲಿಯ ರಿಪೋರ್ಟ ಪಾಸಿಟಿವ್ ಎಂದು ಗೊತ್ತಾದ ನಂತರವೂ ಮಕ್ಕಳನ್ನು ಸಾಕುವ ಜವಾಬ್ಧಾರಿಯಿಂದ ಆಕೆ ಹಿಂದೆ ಸರಿಯುವುದಿಲ್ಲ. ಕಿರಿಯ ಮಗನ ಹೃದಯದ ತೊಂದರೆಯನ್ನು ನಿವಾರಿಸಲೋಸುಗವಾದರೂ ಆಕೆ ದಂಧೆ ಮಾಡಲೇಬೇಕು. ಇಂಥವರನ್ನು ಕಂಡಾಗಲೆಲ್ಲ ಜೀವನವನ್ನು ಎದುರಿಸುವ ಚೈತನ್ಯವನ್ನು ಹೆಣ್ಣುಗಳಿಗೆ ನೀಡಿದಷ್ಟು ಉದಾರವಾಗಿ ಆ ದೇವರು ಗಂಡುಗಳಿಗೆ ಕೊಟ್ಟಿಲ್ಲವೇನೋ ಎಂದೆನಿಸಿಬಿಡುತ್ತದೆ. ಗೀರು ಎನ್ನುವ ಕಥೆಯಲ್ಲಿಯೂ ಕೂಡ ಪಾರ್ವತಿ ಎನ್ನುವ ಇನ್ನೂ ಓದಬೇಕಿದ್ದ ಹೆಣ್ಣುಮಗಳೊಬ್ಬಳನ್ನು ಮದುವೆ ಮಾಡಿ, ಆಕೆ ಗರ್ಬಿಣಿ ಆದಾಗ ರಕ್ತ ಪರೀಕ್ಷೆಯಲ್ಲಿ ಹೆಚ್‌ಐವಿ ಪಾಸಿಟಿವ್ ಬಂದು, ಅದಕ್ಕೆ ಕಾರಣ ಆಕೆಯ ಗಂಡ ಅಲ್ಲ ಎಂದು ಗೊತ್ತಾದ ನಂತರ ಅವಳ ಜೀವನವೇ ನಾಶವಾಗಿ, ಜೀವವೂ ಹೋಗಿ, ಆ ಮಗು ಅನಾಥವಾಗುವ ಚಿತ್ರಣವಿದೆ. ಹೆಚ್‌ಐವಿ ಎಲ್ಲಿಂದ ಬಂದಿದ್ದು ಎಂಬ ಕಿಂಚಿತ್ ಸುಳಿವೂ ಸಿಗದೇ ಇದ್ದ ಸಂದರ್ಭದಲ್ಲಿಯೇ ಹುಡುಗಿ ಚಿಕ್ಕವಳಿದ್ದಾಗ ಹಾಸ್ಟೇಲ್‌ನಲ್ಲಿ ಓದಿದ್ದು, ಇತ್ತೀಚೆಗೆ ಹಾಸ್ಟೇಲ್ ಮೇಲ್ವಿಚಾರಕನೇ ಅಲ್ಲಿನ ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದು ಎಲ್ಲವೂ ನಿರೂಪಕಳ ಎದುರಿಗೆ ಹಾದು ಹೋಗುತ್ತದೆ. ಒಟ್ಟಿನಲ್ಲಿ ಗೀರಾದ ಜಾಗ ಯಾವುದೆಂದೇ ತಿಳಿಯದೇ ಗೀರು ಕಥೆ ಮುಗಿಯುತ್ತದೆ.

 ನ್ಯೂಸ್ ಬಿ ಕಥೆಯಲ್ಲಿ ಏನೂ ತಿಳಿಯದ ಅನಕ್ಷರಸ್ಥೆಯಾದ ನ್ಯೂಸ್ ಬಿ ಎನ್ನುವ ವಿಚಿತ್ರ ಹೆಸರಿನಿಂದ ಕರೆಯಿಸಿಕೊಳ್ಳುವ ಎಮ್ಮೆ ಸಾಕಿ ಹಾಲು ಮಾರಿದ ಹಣದಿಂದ ಸಂಸಾರ ನಿಭಾಯಿಸುವ ಹೆಣ್ಣುಮಗಳೊಬ್ಬಳು ಲೇಶಪ್ಪ ಎನ್ನುವ ಎಲ್ಲಾ ವ್ಯವಹಾರದಲ್ಲೂ ನುರಿತ ಗಂಡನಿಂದಾಗಿ ಅನುಭವಿಸುವ ನೋವಿನ ಕಥೆಯನ್ನು ಹೇಳುತ್ತದೆ. ಹೆಂಡತಿಯನ್ನು ತಾಲೂಕಾ ಪಂಚಾಯತ್ ಅಧ್ಯಕ್ಷೆಯನ್ನಾಗಿಸಿ ಇಡೀ ತಾಲೂಕಾಡಳಿತವನ್ನು ತನ್ನ ಕೈವಶ ಮಾಡಿಕೊಳ್ಳಬಯಸಿದ್ದ ಲೇಶಪ್ಪ ಶಾಸಕರ ಜಗಳ ಹಾಗೂ ತನ್ನದೇ ಅವ್ಯವಹಾರದಿಂದ ಪದೇಪದೇ ಜೈಲು ಸೇರುವುದು ಹಾಗೂ ಇತ್ತ ನ್ಯೂಸ್ ಬಿ ಏನನ್ನಾದರೂ ಪ್ರಶ್ನಿಸಿದರೆ ಆತನನ್ನು ಹಿಡಿಯಲು ಕುಮ್ಮಕ್ಕು ಮಾಡುವ ವ್ಯವಹಾರದಿಂದಾಗಿ ಆಕೆ ರೋಸಿಹೋಗಿ ಜೈಲು ಸೇರಿದ ಗಂಡನನ್ನು ಬಿಡಿಸಿಕೊಳ್ಳುವ ಬದಲು ಕೇಸು ಹಾಕಿ ಜೈಲಿಗಟ್ಟಿ ಎಂದು ತನ್ನ ಬಿಡುಗಡೆಯನ್ನು ಕಂಡುಕೊಳ್ಳುತ್ತಾಳೆ. ಹೆಣ್ಣಿನ ಹೆಸರಿನಲ್ಲಿ ಅಧಿಕಾರ ಚಲಾಯಿಸುವ ಗಂಡುಕುಲದ ಶತಮಾನದ ದೌರ್ಜನ್ಯದ ಕಥೆ ಇಲ್ಲಿದೆ.

      ದೀಪ್ತಿ ಸೂಕ್ಷ್ಮ ಮನಸ್ಸಿನ ಆದರೆ ಅಷ್ಟೇ ದಿಟ್ಟತನದ ಲೇಖಕಿ. ತಾನು ಕೆಲಸ ಮಾಡುವ ಆಸ್ಪತ್ರೆಯ ವ್ಯವಹಾರದ ಒಳಸುಳಿಗಳೆಲ್ಲ ಅವರಿಗೆ ಹಾಸುಹೊಕ್ಕಾಗಿದೆ. ಆಸ್ಪತ್ರೆಯಲ್ಲಿ ದಿನನಿತ್ಯ ಅನುಭವಿಸುವ ಹತ್ತಾರು ಘಟನೆಗಳನ್ನು ಇಲ್ಲಿ ಕಥೆಯಾಗಿಸಿದ್ದಾರೆ. ಅಲ್ಲಿ ಚಿಕಿತ್ಸೆಗೆಂದು ಬರುವ ಬಡಪಾಯಿ ಹೆಂಗಸರು, ಗಂಡಿನ ಆದಿ ಅಂತ್ಯವಿಲ್ಲದ ದೌರ್ಜನ್ಯಕ್ಕೆ ಒಳಗಾಗಿಯೂ ಬದುಕನ್ನು ಜಾರಿಬಿಟ್ಟವರಲ್ಲ. ಎಲ್ಲವನ್ನು ಎದುರಿಸಿ ನಿಂತು ಬದುಕನ್ನು ಬದುಕಿಯೇ ತೋರಿಸಬೇಕು ಎಂಬ ಗಟ್ಟಿ ಸ್ವಭಾವದವರು. ಹೀಗಾಗಿಯೇ ಇಲ್ಲಿನ ಹೆಣ್ಣು ಪಾತ್ರಗಳು ತಾವುತಾವಾಗಿಯೇ ಎದ್ದು ಬಂದು ಓದುಗರ ಎದುರಿಗೆ ನಿಂತು ಮಾತನಾಡುತ್ತಿವೆಯೇನೋ ಎಂಬ ಭಾವನೆ ನೀಡುತ್ತವೆ. ಪ್ರತಿ ಕಥೆಯಲ್ಲೂ ಶೋಷಣೆಗೆ ಒಳಗಾಗುತ್ತಲೇ ಆ ಶೊಷಣೆಯ ಒಳಗಿಂದಲೇ ಗಟ್ಟಿ ದನಿ ಎತ್ತುವ ಸಂಕಲನ ಎಲ್ಲ ಹೆಣ್ಣು ಪಾತ್ರಗಳೂ ಸಂಕಲನ ಓದಿ ಮುಗಿಸಿದ ನಂತರವೂ ನಮ್ಮ ಸುತ್ತಮುತ್ತಲೇ ಓಡಾಡುತ್ತಿರುವಂತಹ ಗಾಢ ಪ್ರಭಾವ ಬೀರುತ್ತವೆ. ಹೆಣ್ಣೊಳನೋಟವೊಂದು ಸ್ಥಾಯಿಯಾಗಿ ನಿಂತು ಎಲ್ಲ ಕಥೆಗಳಿಗೂ ಗಟ್ಟಿತನ ನೀಡಿದೆ. ಒಂದೆರಡು ಕಥೆಗಳ ಓಟ ಭೂಮಿ ಸುತ್ತವ ಗಿರಗಟ್ಟಲೆಯಂತಾಗಿ ಭಯ ಹುಟ್ಟಿಸಿದರೂ ಉಳಿದ ಕಥೆಗಳೆಲ್ಲವೂ ಸಮಚಿತ್ತದ ಭೂಮಿತೂಕದ ಕಥೆಗಳೇ ಆಗಿವೆ ಎಂಬುದು ಸಮಾಧಾನಕರ ಅಂಶ.


-ಶ್ರೀದೇವಿ ಕೆರೆಮನೆ145 views1 comment

1 Comment


Suhani Shetty
Suhani Shetty
Oct 01, 2020

ಸುಂದರ ವಿಮರ್ಶೆ 👌👌🙏🙏

Like
bottom of page