ಕೊನೆಗೂ ಸಿಕ್ಕಿತು ಹೊಸತು!
********
ಹೊಸ ವರ್ಷ ಬಂತೆಂದರು.
ಹೌದೇ?
ಹುಡುಕಿಯೇ ಹುಡುಕಿದೆ
ಕಾಣಸಿಗಲಿಲ್ಲ;
ಯಾವ ವೇಷದಲಿ ಬಂತೋ
ತಿಳಿಯಲಿಲ್ಲ
ಅವರಿವರ ಕೇಳಿದೆ
ಕಂಡರೆ ತಿಳಿಸಿ
ಎಂದು ಕಾಡಿದೆ
ಯಾರೂ ಸರಿಯಾಗಿ ಹೇಳಲಿಲ್ಲ
ಬದಲಿಗೆ ನಕ್ಕರು
ಇವನೊಬ್ಬ ಹುಚ್ಚನೆಂಬಂತೆ
ಇಲ್ಲದೇ ಇರುವದನ್ನು
ತೋರಿಸುವದಾದರೂ ಹೇಗೆ?
ಹೊಸದೆನ್ನುವದರ
ಗುರುತಾದರೂ ಏನು?
ಬದುಕಿನ ರೀತಿನೀತಿಗಳಲ್ಲಿ
ಬದಲಾಗಿದ್ದಾದರೂ ಏನು?
ಎಲ್ಲವೂ ಇದ್ದ ಹಾಗೆಯೇ ಇವೆ
ಡಿಸೆಂಬರದಲ್ಲಿ ನಡೆದಂತೆಯೇ
ಜನೆವರಿಯಲ್ಲೂ ನಡೆಯುತ್ತಿದೆ
ಅದೇ ಊಟ, ಅದೇ ನಿದ್ದೆ
ಅದೇ ಕೆಲಸ, ಅದೇ ವೇಷ
ಅದೇ ನೋಟ , ಅದೇ ಆಟ
ಹೊಸದೆನ್ನುವ ಗುರುತು
ಎಲ್ಲಿಯೂ ಇರಲಿಲ್ಲ..
ಹಾಂ....ಕೊನೆಗೂ
ಒಂದೇ ಒಂದು ಹೊಸದು
ಕಣ್ಣಿಗೆ ಬಿತ್ತು
ನಮ್ಮ ಮನೆಯ
ಗೋಡೆಯ ಮೇಲೆ
೨೦೨೨ ರ ಕ್ಯಾಲೆಂಡರ್!
ಮೊನ್ನೆ ತಂದಿದ್ದು
ಹೊಸದಾಗಿ....
ಅಂತೂ ಸಿಕ್ಕಿತು
ಹಿಪ್ ಹಿಪ್ ಹುರ್ರೇ.....!!!
- ಎಲ್. ಎಸ್. ಶಾಸ್ತ್ರಿ
Comments