ಆಸ್ಪತ್ರೆಯ ಮಂಚದ ಕೋಲಿಗೆ
ತ್ರಿವಿಕ್ರಮನ ಬೇತಾಳದಂತೆ
ತಲೆಕೆಳಗಾಗಿ ನೇತು ಬಿದ್ದ
ಬಾಟಲಿಯಿಂದ
ಜಿನುಗುವ ರಕ್ತದ ಹನಿಗೆ
ಜೀವ ಉಳಿಸುವ ಮಹತ್ತರ ಹೊಣೆಯಿತ್ತು
ಅದಕ್ಕಾಗಿ ಆಚೀಚೆ ನೋಡದೆ
ಅದು ಓಡುತ್ತಿತ್ತು
ಶಿಸ್ತಿನ ಸಿಪಾಯಿಗಳಂತೆ
ಒಂದರ ಹಿಂದೆ ಒಂದೊಂದೇ ಹನಿ
ದೇಹದೊಳಗೆ ಸೇರುತ್ತಿತ್ತು
ಖಂಡಿತ ಜೀವ ಉಳಿಸುತ್ತೇನೆಂಬ
ಭರವಸೆಯ ಹೊತ್ತು
ತಾನಾವ ಜಾತಿಯ ಲೇಬಲ್
ಅಂಟಿಸಿ ಕೊಂಡವರಿಂದ ಬಂದೆ
ಮತ್ತಾವ ಜಾತಿಯ ಪಟ್ಟಿಯಲ್ಲಿದ್ದವರ
ದೇಹ ಸೇರುತ್ತೇನೆಂಬ ಅರಿವು
ಕಿಂಚಿತ್ತೂ ಇರಲಿಲ್ಲವದಕೆ
ಪ್ರಾಣ ಉಳಿಸುವುದಷ್ಟೇ ಗೊತ್ತಿತ್ತು
ಯಾರೋ ಪುಣ್ಯಾತ್ಮರ ದೇಹದಿಂದಿಳಿದು
ಇನ್ನಾರೋ ಕಂಡು ಕೇಳರಿಯದವರ
ದೇಹ ಹೊಕ್ಕಲು ಒಲ್ಲೆಯೆನಲಿಲ್ಲವದು
ಒಂದಿನಿತೂ ತಕರಾರೆತ್ತಲಿಲ್ಲ
ಯಾವ ಶರತ್ತೂ ಹಾಕಲಿಲ್ಲ
ಒಂದೇ ಗುರಿಗೆ ಧಾವಿಸುತ್ತಿತ್ತು
ಗೋರಿಯೊ ಪೆಟ್ಟಿಗೆಯೊ ಸುಡುಗಾಡೊ
ಒಟ್ಟಿನಲ್ಲಿ ಯಾವುದೋ ರೀತಿಯಲಿ
ಮಣ್ಣ ಬೆರೆಯುವ
ಒಂದು ಜೀವ ಉಳಿಸುವ
ಪವಿತ್ರ ಕಾರ್ಯವಿತ್ತು
ಅದಕ್ಕಾಗಿ ಅದು ನಿಲ್ಲದೇ
ನಿರಂತರ ಹರಿಯುತ್ತಲೇ ಇತ್ತು
ವೆಂಕಟೇಶ ಬೈಲೂರು
ನಮ್ಮ ನಡುವಿನ ಜೀವನ ಪ್ರೀತಿ ಮತ್ತು ಭರವಸೆಯ ಕವಿ ವೆಂಕಟೇಶ ಬೈಲೂರು.ಭಾರತೀಯ ಸ್ಟೇಟ್ ಬ್ಯಾಂಕಿನ ಉದ್ಯೋಗಿ. ಪ್ರವೃತ್ತಿಯಲ್ಲಿ ಕವಿ. ಈಗಾಗಲೇ "ಹೊಸ ಬೆಳಕಿನ ಬೀಜಗಳು" "ಮಿಂಚು ಹನಿಗಳು" ಎನ್ನುವ ಹನಿಗವನ ಸಂಕಲನ ಮತ್ತು "ತಿಂಗಳ ಮಾಮ" (ಮಕ್ಕಳ ಕವನ ಸಂಕಲನ) ಎನ್ನುವ ಮೂರು ಸಂಕಲನಗಳನ್ನು ಪ್ರಕಟಿಸಿ ಕನ್ನಡ ತಾಯಿಯ ಉಡಿ ತುಂಬಿದ್ದಾರೆ. "ಮೂಕಸಾಕ್ಷಿ" ಎನ್ನುವ ಕವನ ಸಂಕಲನ ಪ್ರಕಟಣೆಯ ಹಂತದಲ್ಲಿದೆ. ಇವರು ಹನಿಗವನ' ಚುಟುಕು' ಮುಕ್ತಕ' ಕವಿತೆ' ಮಕ್ಕಳ ಕಥೆ' ಮಕ್ಕಳ ಕವಿತೆ ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡುತ್ತಿದ್ದಾರೆ. ನಾಡಿನ ಹಲವಾರು ಪತ್ರಿಕೆಗಳಲ್ಲಿ ಇವರ ಕವಿತೆಗಳು ಮತ್ತು ಬರಹಗಳು ಪ್ರಕಟವಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ವರ್ಷದ ಬರಹಗಾರ ಪ್ರಶಸ್ತಿ ಸೇರಿದಂತೆ ೨೦೨೨ನೆ ಸಾಲಿನ ಭಟ್ಕಳ ತಾಲೂಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯೂ ಸಂದಿದೆ. ಇವರ " ಹರಿವು" ಕವಿತೆ ಈಗ ನಿಮ್ಮ ಓದು ಮತ್ತು ಪ್ರತಿಕ್ರಿಯೆಗಾಗಿ ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ
ಜಾತ್ಯತೀತ ನೆಲೆಯ ರಕ್ತ ಸಂಚಲನೆಯಂತಹ ಉತ್ತಮ ಕವಿತೆಗಾಗಿ ಕವಿ ವೆಂಕಟೇಶ ಬೈಲೂರ ಅವರಿಗೆ ಅನೇಕ ಅಭಿನಂದನೆಗಳು.
ಡಾ.ಶ್ರೀಪಾದ