ವಾಹನ

ಒಂದಿಷ್ಟೂ ಅತ್ತಿತ್ತ

ಅಲುಗಾಡಲಾರದೆ

ಕೆಟ್ಟು ನಿಂತಿದೆ

ವಾಹನವೂಂದಿಲ್ಲಿ

ಅದಕ್ಕೀಗ ಮುತುವರ್ಜಿಯಿಂದ

ಉಸಿರು ತುಂಬಿಸಿ ಮತ್ತೊಮ್ಮೆ

ರಸ್ತೆಗಿಳಿಸುವ ಒಬ್ಬ

ಸಮರ್ಥ ಮೋಟಾರ್ ಮೆಕ್ಯಾನಿಕ್

ಬೇಕಾಗಿದ್ದಾನೆ...


ಒಂದೊಮ್ಮೆ --

ಅಪರಿಮಿತ ತರಹಾವರಿ

ಕನಸುಗಳ ಸಾಲುಸಾಲು

ಮೆರಗು ಸರಣಿಗಳಲಿ

ತುಂಬಿ ತುಳುಕಿ ತೊನೆದು

ತನ್ನ ತಾನೂ ಕನಸಲಿ ಮರೆತಂತೆ

ಊರೂರ ಅಲೆದು ಸಾಗಿಸಿದ್ದ

ರಸ್ತೆಗಳ ಉಕ್ಕಿನ ಅರಸ!


ಅಷ್ಟೇ ಅಲ್ಲ --

ಏರಿ ಇಳಿದ ಪ್ರತಿ ಒಬ್ಬೊಬ್ಬರ

ಮನದಾಳದ

ಜಗಳ ಜಂಜಾಟ

ನೋವು ನಂಜು

ಕಣ್ಣ ಹನಿಗಳ ಸಂಕಟ

ಒಳ ಉರಿಯ ಪಂಜು

ಎಲ್ಲ ಹೊತ್ತು ಅಂಡಲೆದಿದ್ದ

ಅಂತರಂಗದಲ್ಲಿ ತಂತಾನೆ

ಮರುಗಿದಂತೆ...ಓಡಿದ್ದ

ಓಡೋಡಿ ಎಲ್ಲಕಡೆ ತಲುಪಿಸಿದ್ದ

ಆ...ಅಮೋಘ

ವಾಹನ ಕೆಟ್ಟು ನಿಂತಿದೆ!


ಜೀವ ಕೊನರಿಸಿ ಮತ್ತೆ

ಓಡಾಡಿಸುವಂಥ

ದಿವ್ಯ ಮೆಕ್ಯಾನಿಕ್ ಒಬ್ಬ

ಬೇಕಾಗಿದ್ದಾನೆ...

ಯಾರಾದರೂ ಹುಡುಕಿಕೊಡಿ

ಅರ್ಜೆಂಟಾಗಿ...


ಡಾ. ಅರಕಲಗೂಡು ನೀಲಕಂಠ ಮೂರ್ತಿ.

60 views1 comment