ರಾತ್ರಿಯ ಬಟ್ಟೆ ಹೊದ್ದು
ತುಣುಕು ತುಣುಕು ಜಾರುವ
ಅರಳುವ ಜಾದು ನೋಡಿ
ಮೂಡಣದ ಊರಿಂದ
ವಿಹಾರಕ್ಕೆ ಬರುವ ದಾರಿ ದೀಪ
ಹಸಿರ ಮೈಯಿಗೆ ಬಣ್ಣದ
ಅಂಚು ಕಟ್ಟುವ ಕರಕುಶಲತೆ
ಇಬ್ಬನಿಗೆ ಶಾಖ ನೀಡುವ
ದಾರಿಹೋಕನ ಗಳೆಯನಂತೆ
ನಗುವ ಜಗದ ದೀಪ
ನದಿಯ ಎದೆಯ ಮೇಲೆ
ಬಿಲ್ಲಿನ ಬಣ್ಣ ಹರಡಿ
ಜುಳು ಜುಳು ರಾಗದ ಮೋಡಿಗೆ
ದಂಡೆಯ ಮೈ ಸಿರಿ ಮೋಹಕ್ಕೆ
ನಿತ್ಯ ಬರುವ ಪ್ರೇಮ ದೀಪ
ಸಹಸ್ರ ದೀಪಕ್ಕೆ ದೀಪವಾಗಲು
ಬೀಜ,ಹತ್ತಿಯ ಒಪ್ಪಂದ ಬೇಡದೆ
ಮುಂಜಾವಿನ ಕದವ ತೆರೆಯುವ
ಮನೆ ಮನೆಗಳ ನಂದಾ ದೀಪ
ಋತುವಿನ ಜಳಕ ವರ್ಷಪೂರ್ತಿ
ಉರಿಯುವಾ ದಿವಸ್ಪತಿ
ಭೂಮಿಯ ಹಣೆಗೆ ಮುತ್ತಿಡುವ
ನೀಲಿ ಬಯಲಿನ ವಾರಸುದಾರ
ಮಾಯೆ ಮರೆಸುವ ಸುಂದರ ದೀಪ
ಎಂ.ಜಿ.ತಿಲೋತ್ತಮೆ
ಭಟ್ಕಳ
Commentaires