ಈ ಭುವಿಯ ಮೇಲೆ ಆಲೋಚನೆ ಯಾವಾಗ ಜನ್ಮ ತಾಳಿತೆಂದು ನಿಖರವಾಗಿ ಹೇಳುವುದು ಬಹುಷಃ ಆಲೋಚನೆಗೂ ಮೀರಿದ್ದು. ಭೂಮಿಯ ಮೇಲೆ ತನ್ನ ಮೊದಲ ಹೆಜ್ಜೆಯೊಂದಿಗೆ ಆಲೋಚನೆಯ ಗರಿಗಳನ್ನು ಮನುಷ್ಯ ತನ್ನ ಮುಕುಟದಲ್ಲಿ ಸಿಲುಕಿಸಿಕೊಂಡ. ಕಾಲಾಂತರದಲ್ಲಿ ಮನುಕುಲದ ಸ್ಥಿತ್ಯಂತರಗಳೊಂದಿಗೆ ಆಲೋಚನೆಯ ಪರಿಕ್ರಮಗಳೂ ಸಹ ಬದಲಾಗಿರುವದು ಎಷ್ಟು ಸತ್ಯವೊ ಅಷ್ಟೇ ಸತ್ಯ ಗರಿಗೆದರಿದ ಅಲೋಚನೆಯ ಫಲವಾಗಿ ಮಾನವನ ಬದುಕು ಇಂದು ಬಹುಮುಖಿಯಾಗಿ ನಿಂತಿರುವುದು.
ಇದೆಲ್ಲ ಹೇಳುವುದಕ್ಕೆ ಒಂದು ಬಹು ಮುಖ್ಯಕಾರಣವಿದೆ. ‘ ಆಲೋಚನೆ’ ಎಂಬ ಈ ಅಕ್ಷರ ವೇದಿಕೆ ಹುಟ್ಟಿದ್ದು ಸುಮಾರು ಹದಿನೆಂಟು ವರ್ಷಗಳ ಹಿಂದೆ, ಅಂದರೆ ಸೆಪ್ಟೆಂಬರ್ 2002 ರಂದು. ಜನಪರ ಆಲೋಚನೆಗಳ ಆಶಯದೊಂದಿಗೆ ತ್ರೈಮಾಸಿಕವಾಗಿ ಮೊದಲು ಬೆಳಕು ಕಂಡ ಆ ಪತ್ರಿಕೆ ಕೆಲವು ಅನಿವಾರ್ಯತೆಯ ಭಾರಕ್ಕೆ ಸಿಲುಕಿ ಕೇವಲ ಮೂರು ಸಂಚಿಕೆಗಳು ಹೊರಬರುವ ಹೊತ್ತಿಗೆ ವಿದಾಯ ಕೋರಬೇಕಾಗಿದ್ದು ಮಾತ್ರ ನೋವಿನ ಮಾತಾಗಿತ್ತು. ಅಂದು ಮುದ್ರಣ ರೂಪದಲ್ಲಿ ಮೂಡಿ ಬಂದ ‘ಆಲೋಚನೆ’ಯ ಅಕ್ಷರದ ಮಸಿ ಅಲ್ಲಿಗೆ ಆರಿ ಹೋಗದೆ ಇಂದು ಹೊಸ ರೂಪವನ್ನು ತಾಳಿ ಗರಿಗೆದರಿದ ಆಲೋಚೆನೆಯೊಂದಿಗೆ ತಮ್ಮ ಮುಂದೆ ಬಂದು ನಿಂತಿದೆ. ಮುದ್ರಣ ರೂಪದಿಂದ ಹೊಸ ಸಂವಹನ ರೂಪವಾದ ಡಿಜಿಟಲ್ ನಲ್ಲಿ ಹೊಸ ಆಲೋಚನೆಗಳೊಂದಿಗೆ ತಮ್ಮನ್ನು ತಲುಪುವ ಪ್ರಯತ್ನ ಇದಾಗಿದೆ. ಬಹುಷಃ ಇದು ಇಂದಿನ ಅವಶ್ಯಕತೆಯ ಜೊತೆಗೆ ಅನಿವಾರ್ಯತೆಯೂ ಹೌದು ಎಂದರೆ ತಪ್ಪಾಗಲಾರದು.
ಹೊಸ ರೂಪದಲ್ಲಿ ತಮ್ಮೊಂದಿಗೆ ಸಂವಹನಕ್ಕೆ ಸಿದ್ಧವಾಗಿರುವ ‘ಆಲೋಚನೆ’ ತನ್ನ ಮೂಲಧಾತುವಾದ ಸಾಹಿತ್ಯ, ಸಮುದಾಯ ಹಾಗೂ ಸಮಾಲೋಚನೆಗಳಿಗೆ ಕಟಿಬದ್ಧವಾಗಿ ನಿಂತಿದೆ. ಈ ಹಿನ್ನೆಲೆಯಲ್ಲಿ ಕತೆ,ಕವನ, ಪ್ರಬಂಧ, ಚಿಂತನೆ, ವಿಜ್ಞಾನ, ಚಿತ್ರಕಲೆ, ಸಂಗೀತ ಗಳಿಗೆ ‘ಆಲೋಚನೆ’ ತನ್ನ ಬಾಗಿಲನ್ನು ತೆರೆದಿದೆ. ಸೌಹಾರ್ದತೆ, ಪ್ರೀತಿ, ವಿಶ್ವಾಸಗಳನ್ನು ನಮ್ಮ ಬದುಕಿನಲ್ಲಿ ನೆಲೆಗೊಳಿಸುವ ಮತ್ತು ಜಾತಿ, ಮತ, ಪಂಥಗಳನ್ನು ಮೀರಿದ ಸಮಾಜಮುಖಿಯಾದ ವಿಚಾರಗಳೇ ಬಗೆ ಬಗೆಯ ಬಣ್ಣಗಳ ಮಳೆಬಿಲ್ಲಾಗಿ ಮನತಣಿಸಲಿಯೆಂಬುದು ‘ಆಲೋಚನೆ’ ಯ ಬಯಕೆ.
ಈ ಹಿನ್ನೆಲೆಯಲ್ಲಿ ಪುನರಾರಂಭಗೊಂಡ ‘ಆಲೋಚನೆ’ ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮದೇ ಆದ ಛಾಪನ್ನು ಬೀರಿದ ಹಿರಿಯರ ಶುಭಾಶೀರ್ವಾದವನ್ನು ಕೋರುವುದರೊಂದಿಗೆ ಯುವ ಮತ್ತು ಹೊಸ ಪ್ರತಿಭೆಗಳ ಸಹಕಾರವನ್ನು ತುಂಬು ಹೃದಯದೊಂದಿಗೆ ಸ್ವಾಗತಿಸುತ್ತದೆ. ನಾವೆಲ್ಲ ಸೇರಿ ‘ಆಲೋಚನೆ’ ಯ ಗರಿಗಳಿಗೆ ನವಿರಾದ ಬಣ್ಣ ತುಂಬಿ ಸಂಭ್ರಮಿಸೋಣ. ಖಂಡಿತ ಕೈಜೋಡಿಸುತ್ತೀರಲ್ಲಾ?.
ಕನ್ನಡ ಉಳಿಯಬೇಕು, ಕನ್ನಡ ಬೆಳೆಯಬೇಕು. ಇದು ಕೇವಲ ಫಲಕದ ಶೃಂಗಾರಕ್ಕಲ್ಲ. ಅದು ನಮ್ಮ ಮನೆ-ಮನಗಳಲ್ಲಿ ಉಲಿಯುವ ಮಂತ್ರವಾದಾಗಲೇ ಕನ್ನಡದೇವಿಗೆ ನಾವೆಲ್ಲ ಸಲ್ಲಿಸುವ ನಿತ್ಯೋತ್ಸವವಾಗುತ್ತದೆ. ಆ ನಿಟ್ಟಿನಲ್ಲಿ ‘ಆಲೋಚನೆ’ ಹಮ್ಮಿಕೊಂಡಿರುವ ಈ ಕೈಂಕರ್ಯದಲ್ಲಿ ನಿಮ್ಮ ಸಲಹೆ, ಸಹಾಯ, ಸಹಕಾರಗಳು ಅತಿ ಅಮೂಲ್ಯವಾಗಿವೆ.
ಬನ್ನಿ! ಹೊಸ ‘ಆಲೋಚನೆ’ಯಲ್ಲಿ ತೊಡಗೋಣ.
ತಮ್ಮವ
ಡಾ.ಶ್ರೀಪಾದ ಶೆಟ್ಟಿ
'ಆಲೋಚನೆ' ಪತ್ರಿಕೆ ಹೊಸ ಬರಹಗಾರರ ಹೊಸ ಆಲೋಚನೆಗಳಿಗೆ ಬಹುದೊಡ್ಡ ವೇದಿಕೆಯಾಗಲಿ ಎಂದು ಮನದುಂಬಿ ಹಾರೈಸುವೆ.