top of page

ಹೊಳೆಸಾಲಿನ ಶ್ರಾವಣ


ಶ್ರಾವಣದ ಹೊಳೆಸಾಲಿನಲ್ಲಿ

ತೋರಣಗಳು ಏಳುವುದಿಲ್ಲ;

ನಾಗಪಂಚಮಿಗೆ

ಉಯ್ಯಾಲೆ ಕಟ್ಟಿ ಜೀಕುವುದಿಲ್ಲ.


ಹನಿ ಕಡಿಯದ ಪುಷ್ಯ ಪುನರ್ವಸು

ಗುಡ್ಡದಿಂದ ಭೋಸ್ ಎಂದು ಧುಮ್ಮಿಕ್ಕುವ ಹನಾಲು

ಬೆಚ್ಚಗೆ ಕಂಬಳಿ ಹೊದ್ದು ಕುಕ್ಕುರುಗಾಲಲ್ಲಿ ಕುಳಿತು

ತಟ್ಟಿ ಗಂಡಿಯಲ್ಲಿ ಹೊಳೆಯತ್ತ ನೋಟ


ಸೊಂಟದಲ್ಲಿ ಕಸುವಿಲ್ಲದೆ ಬಿಮ್ಮಗೆ ಬಿದ್ದ

ಮುದುಕಿಯಂತಿದ್ದ ಶರಾವತಿಗೆ

ತಟ್ಟನೆ ಪ್ರಾಯ ಬಂದಂತೆ ಲಗುಬಗೆಯ ಓಟ;

ಪುಂಡರಿಗೆ ಬಸಿರಾದಂತೆ

ನಡದ ಬಿಗುವ ಸಡಿಲಿಸುತ್ತ ಉಬ್ಬುತ್ತ ಉಬ್ಬುತ್ತ…


ಬಸುರಿ ಹೆಣ್ಣಿಗೆ ಜಗ ಮೊಗೆದು

ಮುಕ್ಕಳಿಸಿ ಉಗಿವ ಬಾಯ್ಚಪಲ

ಕರೆಯದಿದ್ದರೂ ಬಂದೇಬಿಟ್ಟೆ ಎಂದು ಬಾಗಿಲು ತಟ್ಟುವವಳು

ಇವರಿಗೋ ಒಲೆಯ ಹಿಡಿಸುವ ಅವಸರವಸರ

ಅವಳಿಗೋ ಉಂಡು ತೇಗುವ ಹಸಿವು ಬಕಾಸುರ


ಮಡಿಕೆಯಲ್ಲಿ ಇಟ್ಟದ್ದು ಕುಡಿಕೆಯಲ್ಲಿ ಬಚ್ಚಿಟ್ಟದ್ದು

ಸಿಕ್ಕದಲ್ಲಿ ತೂಗಿಟ್ಟದ್ದು ನಾಗಂದಿಗೆ ಮೂಲೆಯಲ್ಲಿ ಮುಚ್ಚಿಟ್ಟದ್ದು

ಉಂಡೂ ಹೋಯ್ತು; ಕೊಂಡೂ ಹೋಯ್ತು


ನೆಗಸೋ ನೆಗಸು, ನೆಗಸೋ ನೆಗಸು,

ಮನೆಯ ಒಳಗೆ, ತೆಂಗಿನ ಸುಳಿಗೆ

ಹಸುರಿನ ಮೈಗೆಲ್ಲ ಕೆಸರೋ ಕೆಸರು

ಜೊತೆಯಲ್ಲಿಷ್ಟು ಗೊಸರೋ ಗೊಸರು


ಕೆಸರು ಗೊಸರು ಭಲೆಜೋಡಿ

ಬೊಂಬಾಟ್ ಮಾಡಿ, ಅದೆಂಥದ್ದೋ ಮೋಡಿ


ನೆಲ ಕಚ್ಚಿದ್ದ ಹಸುರಿಗೆಲ್ಲ ಹೊಸ ಚಿಗುರೋ ಚಿಗುರು

ಶ್ರಾವಣದಲ್ಲಿ ಸೊರಗಿದ್ದು; ಮತ್ತ್ತೆ ಸೊಕ್ಕಿದ್ದು

ಕಾರ್ತಿಕದಲ್ಲಿ ಸುಗ್ಗಿ

--

ಸಿಕ್ಕ- ನೆಲವು; ಗೊಸರು- ಪಾಚಿ, ಹಾವಸೆ,

ಪುಂಡರು- ಪುಷ್ಯ, ಪುನರ್ವಸು ಮಳೆ;


- ಡಾ.ವಾಸುದೇವ ಶೆಟ್ಟಿ


ವಾಸುದೇವ ಶೆಟ್ಟಿ ಶರಾವತಿ ಹೊಳೆಸಾಲಿನ ಜಲವಳ್ಳಿಯವರು. ಕತೆ, ಕವಿತೆ, ಪ್ರಬಂಧ, ಕಾದಂಬರಿ, ವಿಮರ್ಶೆ ಇತ್ಯಾದಿಗಳನ್ನು ಬರೆಯುತ್ತಿರುವ ಇವರು ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ- ಆಧುನಿಕ ಕನ್ನಡ ಸಾಹಿತ್ಯದಲ್ಲಿ ಪತ್ರಿಕೆಗಳ ಪಾತ್ರ- ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಸದ್ಯ ಕನ್ನಡಪ್ರಭ ಬೆಂಗಳೂರು ಕಚೇರಿಯಲ್ಲಿ ಹಿರಿಯ ಸುದ್ದಿಸಂಪಾದಕ ಹಾಗೂ ಮುದ್ರಕ ಮತ್ತು ಪ್ರಕಾಶಕರಾಗಿದ್ದಾರೆ. ಆಸಕ್ತರು ಇವರ ಬರೆಹಗಳನ್ನು ಓದಲು ಅವರ ವೆಬ್ ಸೈಟ್- holesaalu.com ಗೆ ಭೇಟಿ ನೀಡಬಹುದು.


Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

Comments


©Alochane.com 

bottom of page