ನಿಜ, ಹುಲ್ಲಾಗುವುದೆಂದರೆ ಬರಿ ಕಳೆಯಾಗುವುದಷ್ಟೇ ಅಲ್ಲ, ಅದರಿಂದ ಕಳೆ ಕಟ್ಟುವುದೂ ಸಾಧ್ಯವಿದೆ. ಇದಾಗುವುದಕ್ಕೆ ಸಮಯ ಬೇಕೇ ಬೇಕು. ಅಂಗಳದಲ್ಲಿ ಹುಲ್ಲು ಬೆಳೆಯಲಿ ಎಂದು ಬಯಸುವವರಿಲ್ಲ. ಮಳೆಗಾಲದಲ್ಲಿ ಮಾತ್ರ ಯಾರ ಅಪೇಕ್ಷೆಯೂ ಇರದೆ ಅಂಗಳದಲ್ಲಿ ಅದು ಬೆಳೆಯದೇ ಇರುವುದಿಲ್ಲ.ಬೆಳೆಯದಿರಲೆಂದು ಬಯಸಿದವರಿಗೇ ಹುಲ್ಲು ಕೀಳುವ, ಕೀಳಿಸುವ ಕೆಲಸ ತಪ್ಪುವುದೇ ಇಲ್ಲ.
ಮಳೆ-ಬೇಸಿಗೆ-ಚಳಿಗಾಲ, ಈ ಮೂರು ಕಾಲಗಳು, ನೆಲದ ಮೇಲಿನ ನಾನಾ ಸಸ್ಯ, ಹುಲ್ಲು ಪ್ರಭೇದಗಳಲ್ಲಿ ತರುವ ಬದಲಾವಣೆ ನಿಜಕ್ಕೂ ನವನವೀನ ಮತ್ತು ಅದರಿಂದಲೂ ಕಲಿಯಬಹುದಾದ ನಾನಾ ಪಾಠಗಳೂ ಇವೆಯೆಂಬುದೇ ಬೆರಗಿನ ಸಂಗತಿ.ಈ ಅಂಶವೇ ಲೋಕ ವಿಸ್ಮಯಕ್ಕೆ ಸದಾ ತೆರೆದುಕೊಳ್ಳುವ ಮನಸ್ಸಿಗೆ ಒಂದು ಅದ್ಭುತ, ಅಚ್ಚರಿ! ಇದರಿಂದೆಲ್ಲ ಏನು ಕಲಿಯಬಹುದು ಎಂಬುವುದಕ್ಕಿಂತ ಕಲಿಯಬಹುದಾದುದೂ ಇದೆ ಎಂಬುದೂ ಕುತೂಹಲದ ಅಂಶ. ಕಲಿಯುವರಿಗೆ ಲೋಕವೇ ಗುರು.
ಆಟದ ಮೈದಾನ ಯಾರಿಗೂ ಅಪರಿಚತ ಅಲ್ಲ. ಮಳೆ ಮುಗಿಯುತ್ತಲೇ ಆಟಗಾರರಿಗೆಲ್ಲ ಆಡುವ ಅಂಗಳ, ಹಗಲ ಮನೆ ಈ ಮೈದಾನ!. ಈ ಮನೆ ಬಿಟ್ಟು ಮನೆಗೆ ಹೊರಡುವಾಗ ಬೇಗನೇ ಬಂದ ಕತ್ತಲನ್ನು ಹಳಿಯುವವರು ಇದ್ದಿರಬಹುದೋ ಏನೋ!
ಮೈದಾನವೂ ಒಂದು ಜೀವದಂತೇ! ಅದಕ್ಕೂ ನಾನಾ ಅವಸ್ಥೆಗಳು! ಮಳೆಗಾಲದಿಂದ ಮಳೆಗಾಲಕ್ಕೆ ಈ ಬದಲಾವಣೆ ಕಣ್ಣಿಗೆ ಗೋಚರ. ಚಳಿಗಾಲದಲ್ಲಿ ನಿಧಾನಕ್ಕೆ ಒಣಗುತ್ತ, ಬೇಸಿಗೆಗೆ ಪುಡಿಪುಡಿಯಾಗಿ ಹಸಿರೆಲ್ಲ ಧೂಳೀಪಟ! ಹಸಿರಿನ ಪುಟ್ಟ ಕುರುಹೂ ಕೂಡ ಇರದ ಹಾಗೆ. ಬಯಲೆಲ್ಲ ಭಣಭಣ! ಬಹುಶ: ಈ ಅವಧಿ ತೃಣದ ತಪದ ಅವಧಿ!ಯಾರ ಯಾರದೋ ಕಾಲ ತುಳಿತದಲ್ಲಿ ಪುಡಿಪುಡಿಯಾದರೂ ಹುಲ್ಲಿನ ಬೇರಿನೊಳಗೆ ಬೀಜದೊಳಗೆ ಅವಿತ ಕಸುವೊಡೆದು ಬಯಲ ಮೈಯನ್ನು ಹಸಿರ ಹೊದಿಕೆ ಆವರಿಸಿಕೊಳ್ಳುವ ಗಳಿಗೆ ಇದೆಯಲ್ಲ,ಹಸಿರು ಪ್ರಿಯರ ಪರಮಾನಂದದ ಕ್ಷಣ.
ಬದುಕೂ ಬಯಲಂತೇ! ಎಲ್ಲಾ ದಿನವೂ ಸುಖದ ಹಸಿರೇ ತುಂಬಿರಲಾರದು. ಆಗೆಲ್ಲ, ಹುಲ್ಲು ಹುಡಿಯಾದರೂ ಬೇರಿನೊಳಗಿನ ಶಕ್ತಿ ಮಳೆಯ ಸ್ಪರ್ಶಕ್ಕೆ ಚಿಗಿತು ಹಸಿರ ಅಂಗಿ ಬಯಲು ತೊಡುತ್ತದೆಯಲ್ಲ, ಅದೇ ಒಂದು ದೊಡ್ಡ ಅರಿವಿನ ದರ್ಶನ ಮೂಡಿಸಬಲ್ಲದು.
ಈ ಬದುಕಿನಲ್ಲಿ ಯಾರು ಸೋಲುವುದಿಲ್ಲ! ಮತ್ತೆ ಎದ್ದು ನಿಲ್ಲುವುದಿಲ್ಲ! ಹಸಿರಿದ್ದಾಗ ದನ ತಿಂದರೂ ತುಳಿದರೂ ಚಿಗುರುವ ಸಾಮಾನ್ಯ ಹುಲ್ಲಕಡ್ಡಿಯೂ ಎಂತಹ ದೊಡ್ಡ ಪಾಠ ಕಲಿಸಬಲ್ಲುದು.ಅದಕೇ ಹೇಳಿದ್ದು: ಅಂಗಳಕೆ ತೋಟಕ್ಕೆ ಹುಲ್ಲು ಕಳೆಯೇ ಹೌದು,ಆದರೆ ರಣಬಿಸಿಲಿಗೆ ಧೂಳುಧೂಳಾದ ಆಟದಂಗಳಕ್ಕೆ ಚಿಗುರುವ ಹುಲ್ಲು ಕೊಡುವ ಕಳೆ, ಬಣ್ಣನೆಗೆ ಮೀರಿದ್ದು!
ಹುಲ್ಲು, ಪ್ರತೀ ವರ್ಷವೂ,
ಏಳಿ, ಏಳಿ, ಧೂಳಾಗಿ, ಏಳಿ!
ಎಂದು ತಣ್ಣಗೇ ಬೋಧಿಸುತ್ತಲೇ ಇರುತ್ತದೆ. ಕೇಳಿ, ಪಾಲಿಸಿ, ಎದ್ದವರು ಮಾತ್ರ ಎಷ್ಟೋ!?
ಬಾಳಿನಲ್ಲಿ ಕಳೆ, ಕಳೆದು ಹೋದಾಗಲೆಲ್ಲ ಕಳೆದುಹೋದ ಕಳೆಯನ್ನು ತುಂಬಿಕೊಳ್ಳುವ ಕಲೆಯ ಕಲಾವಿದರು ಯಾರೂ ಆಗಬಹುದು! ಇದನ್ನು ತಣ್ಣಗೇ ಸಾರುವ ಹುಲ್ಲೂ ಗುರುವೇ ಅಹುದು.
-- ಗಣಪತಿ ಗೌಡ, ಹೊನ್ನಳ್ಳಿ
ಅಂಕೋಲಾ
Comments