ಹೌದಾದರೆ ಹೌದೆನ್ನಿ...!
- ಆಲೋಚನೆ
- Jul 30, 2020
- 2 min read
ನಿನ್ನ ನೋಡಬೇಕೆನಿಸಿದಾಗೊಮ್ಮೆ ಮೊಬೈಲ್ ಎತ್ತಿಕೊಂಡು,ನೀ ಕಳುಹಿಸಿದ ಸಂದೇಶಗಳ ತಿರುವಿನಲ್ಲಿ ಕೊಂಚ ಉ ಸಿರಾಡುತ್ತಿದ್ದೆ..ಎಂಥ ತೀವ್ರತೆ ಇದು. ಆಗೊಮ್ಮೆ ಈಗೊಮ್ಮೆ ಬರುವ ಮಿಂಚುಗಳ ಸೆಳೆತಕ್ಕೆ ಭುವಿಯೊಡಲು ನಡುಗಿದಂತೆ ಹೌಹಾರುತ್ತಿದ್ದ ಕಂಪನಗಳು.ಮೌನದ ಬಿಸಿ ಗಾಳಿಗೆ ಮನಸ್ಸು ವಿರಹ ವೇದನೆ ಅನುಭವಿಸಿದ್ದಂತೂ ನಿಜ...ಇಂತಹ ತಲ್ಲಣಗಳು ಸುಳಿದಾಗೊಮ್ಮೆ ಹುಸಿ ಕೋಪ ನನ್ನಲಾಗ.
ಯಾಕಿಂತ ಹಟ? ಕಾಡುವಿ ಯಾಕೆ ? ಕಾನನದ ಹಸಿರೆಲೆಗಳೆಲ್ಲ ಕೈ ಬಿಸಿ ಕರೆದಂತೆ...! ಪೊದೆಗಳಲಿ ಅವಿತು ಸದ್ದು ಮಾಡುವ ಜೀರುಂಡೆಗಳು ನನ್ನ ನೋಡಿ ನಸುನಕ್ಕು ಮೆಲ್ಲಗೆ ಅವಿತ ವಲ್ಲ.....ಆಗಾಗ ಸುದ್ದಿ ತರುವ ಪಾರಿವಾಳಕೆ ಜ್ವರ..! ಕಾಗೆಗಳೋ ನೆಂಟರ ಕರಿವ ತವಕದಲ್ಲಿ ಮಗ್ನ..! ನಿನ್ನ ಜಪದ ಮಾಲೆ ನನ್ನ ಹೃದಯ ಬಡಿತಕೆ ತಾಳ ಹಾಕಿದಂತೆ.ವಿರಹವೇ ಕಾಡದಿರೆಂದು ಅಂಗಲಾಚಿದರೂ ನಿನ್ನ ಸ್ಪರ್ಶದ ಕುರುಹುಗಳು ನನ್ನ ಸೋಲಿಸಲು ಹಟಕ್ಕೆ ಬಿದ್ದಂತಿವೆ.ಎತ್ತ ಹೊರಳಿದರೂ ನಿನ್ನೆದೆಯ ಮಿಡಿತದ ಸದ್ದಿಗೆ ಕರಗಿದ ಮೇಣವಾಗಿರುವೆ.
ಕಂಗಳಿಗೆ ಮುತ್ತಿಟ್ಟು,ಬಣ್ಣಬಣ್ಣದ ಕನಸುಗಳ ಹೂ ಮಾಲೆ ಮುಡಿಸಿ ಮರೆಯಾದೆ ಎತ್ತ? ನಡೆದರೆ ಸೊರಗುವೆನೆಂದು ತೋಳ ತೆಕ್ಕೆಯ ಪಲ್ಲಕ್ಕಿ ಮಾಡಿ ಎದೆಗಪ್ಪಿಕೊಂಡು ಮರೆದೆ. ಬಾನು ಭುವಿಗೂ ಒಂದೇ ಭಾವವ ಬಿತ್ತಿ.ಕಾಮನ ಬಿಲ್ಲಿಗೂ ನಾಚಿಕೆ ಸಪ್ತ ಬಣ್ಣಗಳ ಎಲ್ಲೆ ಮೀರಿದ ಪ್ರೇಮವೆಂದೆ. ಈ ಪ್ರೇಮದ ಬಣ್ಣಕೆ ಮರುಳಾಗದ ಮನವಿಲ್ಲ.ಇನ್ನು ನಾನಾವ ಲೆಕ್ಕ..! ಹೌದಾದರೆ ಹೌದೆನ್ನಿ....! ಧರೆಯಲಿ ಚಿಗುರುವ ಅಣಬೆಗಳು ಇಳೆ ಸೀಳಿ ತಲೆಹಣುಕುವ ಗುಟ್ಟು ರಟ್ಟಾಗಿದ್ದ ತಾಣಗಳು ವರುಷಕೊಮ್ಮೆ ಪ್ರವಾಸಿಗರನ್ನು ಆಕರ್ಷಿಸುದ್ದು ಅಧ್ಬುತ ಅನುಭವ.ನನ್ನೆದೆಯೊಳಗಿನ ತಾಪ ನಿನ್ನ ಎದೆಯ ನಡುಗಿಸಿ,ಪ್ರೇಮದ ಕಿರಣಗಳು ತತ್ತರಿಸಿದ್ದು ಮರೆಯಲು ಆಗದು ಸಖಾ.....! ಗುಬ್ಬಚ್ಚಿಗಳೆಲ್ಲ ಪುಟಿದೇಳುವ ಸದ್ದಿಗೆ, ಮೈಮನದಲ್ಲಿ ಹೊಸ ಚೇತನ ಹುಟ್ಟು ಹಾಕಿದೆ. ಮುಂಗುರುಳ ಹರವಿ,ಹದವಾದ ಹರೆಯಕೆ ಕೊಡವಿದ ಹಾಸಿಗೆಗಳೆಲ್ಲ ಮುದುಡಿವೆ.ಮೈ ಮರೆತ ಸವಿ ನೆನಪುಗಳು, ತುಂತುರು ಹನಿಗಳ ಚಿಮ್ಮಿಸುತಲಿವೆ. ಇಳೆಗೆ ತಂಪೆರೆದ ಸೋನೆ ಮಳೆಯಲಿ ನೆನೆದು ವಿರಹದ ತಾಪವ ಪಸರಿಸಿ ಎತ್ತ ತೇಲಿ ಹೋದೆ ?
ಚಿಟ್ಟೆಗೊಂದು ರೂಪ,ಹೂವಿಗೊಂದು ಕಾಟ.ಹುತ್ತದಲ್ಲಿ ಅಡಗಿದ ಹಾವಿಗೊಂದು ಸಂಕಟ..! ಜೇನ ಹೀರಿದ ಹುಳು ವಿಗೊಂದು ತಾಕಲಾಟ..! ಚರಾಚರ ಪ್ರಾಣಿಗಳಲ್ಲಿಯು ಮದವೆರಿದ ಹೊಯ್ದಾಟ. ನನಗೀಗಿಗ ಮಂಪರು ಕವಿದರೂ ಕಂಗಳು ಎನೋ ಹುಡುಕುತಿದೆ.ಇರುಳಲ್ಲೂ ನಿನ್ನ ಬಿಂಬ ಕಂಡಂತಾಗಿ ಬೆಚ್ಚಿ ಬಿದ್ದಿದ್ದಿದೆ.ಸೋತ ಮನಕೀಗ ನಿನ್ನ ಹೊರತು ಬೇರೆನೂ ಬೇಡ.ಬರಸೆಳೆದು ನೀಡುವ ನಿನ್ನ ಕಾಟಗಳ ಸಹಿಸಿದ ತನುವಿಗೆ,ಭದ್ರತೆಯ ನೀಡಿ ಸಾಕ್ಷಿಯಾದವುಗಳು ಚಿಂತಿಸುತಿವೆ.ಪ್ರತಿ ಮಳೆ ಹನಿಯು ಇಳೆಯ ಎದೆಯ ತಲುಪುವಾಗೆಲ್ಲ ಎನೋ ರೋಮಾಂಚನದ ಸುಖ ಅನುಭವಿಸುವ ಗಳಿಗೆ....! ಇವೆಲ್ಲವೂ ಬಯಸದೇ ಘಟಿಸುವ ಕ್ಷಣಗಳು. ನಿಂತು ಹೋದ ಅವಿನಾಭಾವ ಸಂಬಂಧಗಳಿಗೆ ಮಿಂಚಿನ ಹೊಯ್ದಾಟದ ಬೆಸುಗೆಗಳು. ಮನಕದ್ದ ಚೋರರಿಗೆಲ್ಲ ಸುಖ ನಿದ್ರೆಗಳು ಒಕ್ಕರಿಸಿದಂತೆ.
ಕನಸು ಕಾಣುವಾಗೆಲ್ಲ ಅಕ್ಷಿಪಟಲಗಳು ಅಸ್ಮಿತೆಯ ಭಾವ ಗಳ ಮೇಳೈಸಿವೆ. ಹೊಸೆಯವ ಬೇರಿಗೆಲ್ಲ ಭೂವಿಯೊಡಲ ಸೀಳುವ ಕಾತುರ.ನನಗೋ ಭಯ...! ಕಿಟಕಿ,ಬಾಗಿಲಿಗೆ ಒರಗಿ ಕಣ್ಣರೆಪ್ಪೆಯ ಸಡಲಿಸುವಾಗೆಲ್ಲ ನಿನ್ನ ಚುಂಬನವು ಗಾಳಿಗುಂಟ ಹಾರಿ ಬಂದು ಒಳಸುಳಿಗಳ ಬಡಿದೆಚ್ಚರಿಸುವ ನಿನ್ನಾರ್ಭಟಕೆ ನಾನು ತತ್ತರಿಸಿರುವೆ. ಬಿಕ್ಕಿಳಿಕೆಗಳು ಸಪ್ತ ಸಾಗರದಾಚೆ ಅಲೆಗಳಲಿ ಮೌನವಾಗಿ ಹುದುಗಿವೆ. ಅವೆಲ್ಲ ಮುತ್ತುಗಳಾಗಿ ಎನ್ನೆದೆಯ ಭಾರ ಇಳಿಸಲು ನಿನ್ನ ಹೆಗಲ ಆಶ್ರಯಿಸಿದ್ದಂತೂ ಸತ್ಯವೆನಿಸುತಿದೆ.ಮುತ್ತಿನಹಾರ ಕೊರಳಿಗೆ ತೊಡಿಸುವ ಶುಭ ಗಳಿಗೆಗಳೆತ್ತ ಹೋದವೋ..!ಹೊಸದಾಗಿ ಸೀರೆಯುಟ್ಟ ನೆನಪು.ನಿನ್ನ ಹಸ್ತದಲಿ ಮಾಗಿದ ನೀರಿಗೆಗಳು ಎನ್ನ ಮಾತ ದಿಕ್ಕರಿಸಿ,ಕನ್ನಡಿಯ ಮುಂದೆ ತಕರಾರು ಸಲ್ಲಿಸುತ್ತಿವೆ.ಬ್ಲೌಜಿನ ಗುಂಡಿಗಳು ನಿನ್ನ ಸ್ಪರ್ಶ ಕ್ಕಾಗಿ ಪುಟಿದೇಳುತಿವೆ..ಇರುಳ ಮಬ್ಬಲವಿತು ಏಕೆ ಕಾಡುತಿರುವೆ..?
ಆಶ್ವಗಳೇರಿ,ಮದಗಜಗಳ ಮದಿಸಿ,ಸಿಂಹ ಘರ್ಜನೆಯಲ್ಲಿ ಝೇಂಕರಿಸುವ ನಿನ್ನ ಪ್ರೇಮಾಲಾಪನೆಯ,ಎನ್ನ ಮನದ ಭಾವಗಳ ಶೋಧಿಸಿದಂತೆ. ಭೂತಗನ್ನಡಿಯ ಹಿಡಿದು ಹೃದಯದ ಕವಾಟುಗಳಲ್ಲಿ ಬಚ್ಚಿಟ್ಟ ನಿನ್ನ ಪ್ರೇಮದ ಪರಿ ಯ ಹೊರತೆಗೆದು ಪ್ರೀತಿ ಉಣಬಡಿಸುತ, ಗಲ್ಲಕ್ಕೊಂದು ಬೆಲ್ಲ ನೀಡಿ..ನಿನಗಾಗಿ ನಾನೇ ಎಂದವ ಸುಳಿವು ಕೊಡದೇ ಮೆಲ್ಲುಸಿರೇ ಸವಿ ಗಾನ...ವೆನ್ನುತ ಎತ್ತ ಲೀನ ವಾದೆ...? ಬಿಡುವಲ್ಲದೆ ಕಾಡಿದ ಸಖನೇ ಪೋನಿನೋಳಗೆ ರಂಗೇರಿ ಎಲ್ಲಡಗಿದೆ.ಕಂಡು ಕಾಣದಂತೆ....?
ನೂರು ಭಾವ ಎದೆಯೋಳಿಗ.ಜಂಗಮವಾಣಿ ಜಂಗು ಹಿ ಡಿದು ಮಂಕಾಗಿಹುದು..ಒಣಮರಗಳೆಲ್ಲ ಚಿಗುರಲು
ನಗ್ನ ರೂಪದಲಿ ಮಗ್ನವಾಗಿರುವೆ.ಬಯಲಾದ ಬೆಟ್ಟಗುಡ್ಡ ಗಳಂತೆ.ಖಗಗಳ ರೆಕ್ಕೆಯಲಿ ನನ್ನುಸಿರ ಬಚ್ಚಿಟ್ಟಿರುವೆ. ಮೇಘಗಳು ಹೊತ್ತು ಬರುವ ಅಮೃತ ಸಿಂಚನಕಾಗಿ,ನಿನ್ನ ಆಲಿಂಗನದ ಸುಖಕಾಗಿ.ಮಣ್ಣಲವಿತ ಸುಗಂಧ ನಾಸಿಕವ ಸೀಳಿ ಎನ್ನ ಮಸ್ತಕದಲಿ ಒಂದೇ ನಾಡಿ ಮಿಡಿದಂತಾಗಿದೆ. ಯಾಕಿಂತು ಕಾಡುವೆ..? ಸಿಟ್ಟು ನನಗಲ್ಲದೇ ನಿನಗೆ ಬಂದಿತೆ? ನಿನ್ನ ಹಾಗೆ ಮುಕ್ತವಾಗಿ ಅರುಹಲು ಆದಿತೇ?
ಅರಿತು ನೋಡು ನನ್ನಂತರಂಗ.ನೀನಿಲ್ಲದೇ ಉಳಿದಿತೆ ನನ್ನ ಜೀವ.ಹೇಳಲಾರೆ ಕಣ್ಸನ್ನೆಯಲಿ,ಕಾರಣ ಕಂಗಳ ಪ್ರತಿ ರೂಪವೇ ನೀನು.ಕಾಡುವುದ ಬಿಟ್ಟು ಕನಸಲಿ ಶಾಶ್ವತವಾಗಿ ಬಂದು ನೆಲೆಸು.ನಿರ್ಜಿವ ಇಟ್ಟಿಗೆಗಳು ಬಂಧಿಸಲಾರವು ಉಸಿರುಗಟ್ಟಿ ಸಾಯುತಿರುವೆ.ಅಮೂರ್ತವಾದ ರೂಪ ಧರಿಸಿ ಬಂದುಬಿಡು.ಸ್ವಾಗತಿಸುವೆ ಬಿಡುಗಣ್ಣ ನಿಲಿಸಿ.ಆವ ರೂಪದೊಳು ಬಂದರು ಸರಿಯೇ.. ಎದೆಗೊರಗಿ ಬಿಡು. ಅನಂತಕಾಲದವರೆಗೆ ನಾನು ನನದೆಂಬ ಮೋಹ ಕಳೆದು ಹೋಗಲಿ.ಬೆಸದ ಬೆಸುಗೆಯು ಶಾಶ್ವತವಾಗಿ ನೆಲೆನಿಲ್ಲಲಿ. ಪ್ರೇಮದ ಹೊರತು ಜಗದೊಳೆನಿಲ್ಲ...ಗಳಿಸಿ ಉಳಿಸಿದ ಅಂತಸ್ತಿನ ಮೇಲೆ ಜೀವಗಳು ಮೊಳಕೆಯೊಡೆಯುವುದಿಲ್ಲ. ನಿನ್ನ ಸಂದೇಶಗಳೇ...ನನಗೀಗ ಬದುಕುವ ಜೀವಸೆಲೆ. ಬಂದು ಬಿಡು...ಬಂಧನವ ದಾಟಿ......!!!
- ಶಿವಲೀಲಾ ಹುಣಸಗಿ ಯಲ್ಲಾಪುರ.

ವೃತ್ತಿಯಲ್ಲಿ ಶಿಕ್ಷಕಿಯಾಗಿರುವಶ್ರೀಮತಿ ಶಿವಲೀಲಾ ಹುಣಸಗಿಇವರು ಕವನ, ಲೇಖನ, ಪ್ರಬಂಧ, ಹಾಯ್ಕುಗಳು, ರುಬಾಯಿ, ಕಥೆ, ಲಹರಿ ಹೀಗೆಸಾಹಿತ್ಯದ ಹಲವು ಮಜಲುಗಳಲ್ಲಿ ತಮ್ಮ ಬರವಣಿಗೆಯ ಹರವನ್ನು ವಿಸ್ತರಿಸಿಕೊಂಡಿದ್ದಾರೆ. ಅವರ ಚೊಚ್ಚಲ ಕವನ ಸಂಕಲನ ಈಗಾಗಲೆ ಪ್ರಕಟಣೆಗೊಂಡಿದೆ. ಸೂಕ್ಷ್ಮ ಮಾನವೀಯಚಿಂತನೆಯ ನೆಲೆಯಲ್ಲಿ ತಮ್ಮ ಸಾಹಿತ್ಯ ಕೃಷಿಯನ್ನು ನಡೆಸುವ ಇವರು ಭರವಸೆಯ ಬರಹಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.
- ಸಂಪಾದಕ
ಭಾವನೆಗಳ ತಲ್ಲಣ, ವಿರಹ ವೇದನೆ, ಸವಿಯಾದ ಅನುಭವ, ಪ್ರೀತಿ ,ಚುಂಬನ
ಗಳ ಲಹರಿಯಲ್ಲಿ ತೇಲಿತು ಮನ . ವ್ಹಾವ್ ಅದ್ಭುತ ಶೈಲಿ, ಮೆಡಮ್
ಲಹರಿಯೊಂದು ಕಾವ್ಯವಾಗಿ ಕೈ ಹಿಡಿದು ಎಲ್ಲೆಲ್ಲೊ ಕರೆದೊಯ್ವ ಈ ಪರಿ ನಿಜಕ್ಕೂ ಅಚ್ಚರಿ. ಅಭಿನಂದನೆಗಳು ಕವಯತ್ರಿ ಶಿವಲೀಲಾ ಅವರಿಗೆ. ಡಾ.ಶ್ರೀಪಾದ ಶೆಟ್ಟಿ.
ತಿವ್ರತೆ,ಕಂಪನ,ವಿರಹ,ವೇದನೆ,ತಲ್ಲಣ,ಕೋಪ,ಅಣುಕಿಸುವ ಕೀಟಗಳು,ತವಕ,ಮಿಡಿತ,ಸ್ಪರ್ಶ, ಜನಸುಗಳು,ತಾಪ,ನಡುಕ,ಹೊಸಚೇತನ,ಸವಿನೆನಪು ಜಿವಿಗಳಲ್ಲಾಗುವ ಕಾಟ,ಸಂಕಟ,ತಾಕಲಾಟ,ಹೊಯ್ದಾಟ,ನಿನ್ನ ಚುಂಬನ...ಎಚ್ಚರಿಸುತಿವೆ ನನ್ನುಡುಗೆಗಳು ನಿನ್ನ ನಿರೀಕ್ಷೆಯಲ್ಲಿವೆ ಒಮ್ಮೆ ಪ್ರಶ್ನಿಸಿಕೊ ಎಲ್ಲವೂ ಫೋನೊನಲ್ಲೇ ಅಡಗಿವೆ ಹೌದಾದರೆ ಹೌದೆನ್ನಿ. ಎಂತೆಂಥಹ ಭಾವನೆಗಳು ನಮ್ಮೆಲ್ಲರೊಳಗೂ ಇದೆ ಅವು ಯಾವ ವಿಧದಲ್ಲಿ ಪರಿತಪಿಸುತಿವೆ ಈಎಂದು ಬಿಂಬಿಸಿದ್ದಾರೆ ಒಮ್ಮೊಮ್ಮೆ ಅದನ್ನೂ ನೋಡದವರು ನಮ್ಮಲ್ಲಿದ್ದಾರೆ ಹೌದಾದರೆ ಹೌದೆನ್ನಿ ವಾವ್ ಅಭಿನಂದನೆಗಳು ಮೆಡಮ್
Howdannuttuvi madam.....tumbhane sundar hagu nijvad sannuvesh....super.......