top of page

ಹಿಂದೋಟ

-1-


ಬಿಕೋ ಎನ್ನುವ ಹೆದ್ದಾರಿಗಳು ಸದ್ದೇ ಇರದ ಸಂತೆ ಮಾರ್ಕೇಟುಗಳು ಕತ್ತಲ ಹೊದ್ದ ಝಗಮಗಿಸುತ್ತಿದ್ದ ಮಾಲ್ ಐಸ್ ಕ್ರೀಂ ಪಾರ್ಲರ್ ಗಳು ಧೂಳು ಹಿಡಿದ ಖಾಲಿ ಖುರ್ಚಿ ಥಿಯೇಟರ್ ಗಳು ಓಡದ ವಾಹನ ಗಾಲಿಗಳು ರಾತ್ರಿಯೂ ಹಗಲಂತಿದ್ದ ;  ಹಗಲೂ ಇರುಳಂತಾಗಿ ಕಳೆಗುಂದಿದ ನಗರಗಳು ಎಲ್ಲವೂ ನಿಸ್ತೇಜ...

ಗಿಜಿಗುಡುತ್ತಿದ್ದ ಜನಸಂದಣಿ ಹೊಗೆ ಉಗುಳುವ ಕಾರ್ಖಾನೆ ಅವಸರದಲ್ಲಿ ಕೆಲಸಕ್ಕೋಡುವ ಕಾರ್ಮಿಕರು ಬಾಡಿಗೆಗೆ ಕಾಯುವ ಆಟೋ ಟ್ಯಾಕ್ಸಿಗಳು ಕೋಟಿಯಿದ್ದವರ ಮೋಜುಮಸ್ತಿ ಶೂನ್ಯಕ್ಕಿಳಿದ ಐಟಿಬಿಟಿ ಶೇರುಗಳು ಬೀದಿ ಬದಿ ವ್ಯಾಪಾರಿ ಹಪ್ತಾ ವಸೂಲಿ ಪುಡಿ ರೌಡಿಗಳು ಹೆಣ ಉರುಳುಸುತ್ತಿದ್ದ ಮಚ್ಚು ಲಾಂಗ್ ಗಳು ಎಲ್ಲವೂ ಸ್ತಬ್ಧ...


    -2-


ಈಡಿನ ಸದ್ದಿಲ್ಲದ ಕಾನನದ ತುಂಬ ಹಕ್ಕಿಗಳ ಕಲರವದ ಮಾರ್ದನಿ ಕಾನನದಾಚೆಗೂ ನಿರ್ಭಯವಾಗಿ ದಾರಿಗುಂಟ ಓಡಾಡುವ ವನ್ಯ ಮೃಗಗಳು ಸುಗಂಧ ತುಂಬಿದ ವನರಾಶಿ ಮಧು ಹೀರುವ ಜೇನು ದುಂಬಿ ಪತಂಗ ತೊನೆವ ಬಗೆ ಬಗೆಯ ಹಣ್ಣುಗಳು ಕಲುಷಿತವಿರದ ಹಿತವಾದ ತಂಗಾಳಿ ಇರಲಿರಲಿ ಹೀಗೇ ಜೀವಂತ..!

ಎಂದೋ ಕಾಣುತ್ತಿದ್ದ ಮುಖಗಳೆಲ್ಲಾ ಈಗ ಹಳ್ಳಿ ಮನೆಯಲ್ಲಿ ಮರಳಿ ಮಣ್ಣಿಗೆ ಮೊಬೈಲ್ ಗೇಮ್ ಜೊತೆ ಓಡುತ್ತಿದ್ದ ಮಕ್ಕಳು ಹಳ್ಳಿ ಆಟಕೆ ಮರು ಜೀವ ತುಂಬಿವೆ ಫಿಜ್ಜಾ ಬರ್ಗರ್ ಅಂತಿದ್ದವರು ಹಪ್ಪಳ ಸಂಡಿಗೆ ಒಣ ಹಾಕಿದ್ದಾರೆ ಸಿಟಿ ಸ್ಕ್ಯಾನ್ ಬಾಡಿ ಚೆಕಪ್ ಟ್ಯಾಬ್ಲೇಟ್ ಗ್ಲೂಕೋಸ್ ಗೆ ನೇತು ಬಿದ್ದವರು ಮನೆ ಮದ್ದಿನಲ್ಲೇ ಆರೋಗ್ಯವಾಗಿದ್ದಾರೆ ಹೊತ್ತಿಗೆ ಸರಿಯಾಗಿ ಸೊಪ್ಪು ತರಕಾರಿ ಮಿತವಾದ ಊಟ ಮನೆಮಂದಿಯೆಲ್ಲಾ ಒಂದೆಡೆ ಕಲೆತು ಮನಬಿಚ್ಚಿದ ನಗೆಗಡಲಿನ ಕೂಟ ಹಳೆಯ ನೆನಪುಗಳ ಮೆಲುಕು ಹಿತ ಪುಳಕಗಳ ಕುಲುಕು... ಅಪರಾಧವಿಲ್ಲದ ಬದುಕು ಗತಿಸಿ ಓಡಿದ ಕಾಲ ಚಕ್ರ ಮರಳಿ ಬಂದಿದೆ ಮತ್ತೊಮ್ಮೆ ಉಳಿಸಿಕೊಳ್ಳೋಣ ಹೀಗೇ ಅನವರತ..!


: ಬಾಲಕೃಷ್ಣ ದೇವನಮನೆ, ಬೆಳಂಬಾರ


ಬಾಲಕೃಷ್ಣ ದೇವನಮನೆ ಇವರು ಅಂಕೋಲಾ ತಾಲೂಕಿನ ಬೆಳಂಬಾರದವರು.ವೃತ್ತಿಯಲ್ಲಿ ಆರಕ್ಷಕರಾಗಿರುವ ಇವರು ಸದ್ಯ ಕುಮಟಾ ಪೋಲಿಸ ಠಾಣೆಯಲ್ಲಿ ಹೆಡ್ ಕಾನಸ್ಟೇಬಲ್ ಆಗಿ ಕಾರ್ಯ ನಿರ್ವಹಿಸು ತ್ತಿದ್ದಾರೆ.ಇವರ ಕತೆ,ಕವನ,ಹನಿಗವನಗಳು ತುಷಾರ,ಮಯೂರ,ಕರ್ಮವೀರ,ತರಂಗ,ಸಂಯುಕ್ತ ಕರ್ನಾಟಕ,ಸಕಾಲಿಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಕವನ ರಚನಾ ಸ್ಪರ್ಧೆಯಲ್ಲಿ ಹೊನ್ನಾವರ ಎಸ್.ಡಿ.ಎಂ.ಕಾಲೇಜಿನ ಪ್ರಥಮ ಬಹುಮಾನ ಸತತ ಮೂರು ವರ್ಷ,(೨೦೦೧ರಿಂದ ೨೦೦೩)ತುಷಾರ ಮಾಸ ಪತ್ರಿಕೆಯ ಬಹುಮಾನ,ಚಿತ್ರದುರ್ಗದ ಎ.ಬಿ.ವಿ.ಪಿ.ಶಾಖೆಯವರ ರಾಜ್ಯಮಟ್ಟದ ಕವನ ರಚನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿರುವ ಇವರು ನಾಡಿನ ಭರವಸೆಯ ಕವಿ



49 views0 comments

Comments


bottom of page