ಹೆಣ್ಣೆಂಬ ಬಾಳ ಹಣತೆ.

ದಟ್ಟ ಕಷ್ಟವಿದ್ದರೇನು

ಹುಟ್ಟಿ ಬೆಳೆದ ಹೆಣ್ಣು ತಾನು

ಕೊಟ್ಟ ಮನೆಗೆ ಬೆಳಕನೀವ

ಗಟ್ಟಿ ಗಿತ್ತಿಯು


ಬಸಿರು ಹೊತ್ತ ತಾಯಿ ತಾನು

ಉಸಿರನಿತ್ತ ದೇವನವನು

ಕಸುವಿನಲಿ ಕುಡಿಯ ಬೆಳೆಸು-

ವಾಸೆಯೊಳಿರುವಳು


ಮಕ್ಕಳಿರುವ ಮನೆಯ ತುಂಬ

ಅಕ್ಕರೆಯ ಕೊರತೆ ನೀಗಿ

ಸಕ್ಕರೆ ಸವಿಗನಸುಗಳಲಿ

ನಕ್ಕು ನಲಿವಳು.


ಹೊಟ್ಟೆ ಹಸಿವ ಪಕ್ಕ ನೂಕಿ

ಪಟ್ಟಕಷ್ಟ ಲೆಕ್ಕವಿಡದೆ

ಉಟ್ಟುಂಬುವಾಸೆಗಳನೆ

ಮೆಟ್ಟಿ ನಿಲುವಳು.


ಯಾವುದಾದರೇನು ದಾರಿ

ನೋವ ಮರೆವ ಕಾಯಕವ

ಭಾವದುಂಬಿ ಪೂರೈಪ

ಜೀವಯಿವಳದು.


ತನ್ನದೆನುವ ತವರ ಮರೆತು

ತನ್ನಿನಿಯನಲಿ ಬೆರೆತು

ತನ್ನ ಬಾಳ ತಮವ ಕಳೆಯೆ

ಹೊನ್ನ ಹಣತೆ ಬೆಳಗಿತು.


ಮಣ್ಣಿನಲ್ಲೂ ಹೊನ್ನು ಬೆಳೆವ

ಹೆಣ್ಣು ಇವಳು ಜಗದ ಕಣ್ಣು

ಸಣ್ಣ ಭಾವ ಸುಳಿಯದಿವಳ

ಬಣ್ಣಿಸಲೆಂತು!ರಚನೆ- ಸಾವಿತ್ರಿ ಮಾಸ್ಕೇರಿ.

ಮೊಬೈಲ್ ಸಂಖ್ಯೆ- 9591051437

1 view0 comments