ಮನದ ಬಂಜರು ನೆಲದಿ
ಸವಿಗನಸ ಬಿತ್ತುತಲಿ
ಹಸನಾಗಿ ನನಸಲ್ಲಿ
ಬೆಳೆಯುವವಳು.
ಅಡಿಯಿಂದ ಮುಡಿವರೆಗು
ಒಲುಮೆಯನು ಹೊದ್ದಿಸುತ
ತೊಡೆಯ ತೊಟ್ಟಿಲ ಲಾಲಿ
ಹಾಡುವವಳು.
ಏಳಲಾಗದೆ ಬಿದ್ದು
ಒದ್ದಾಡಿ ಅಳುತಿರಲು
ಹಿಡಿದೆತ್ತಿ ನಡೆಯಲಿಕೆ
ಕಲಿಸಿದವಳು.
ತನ್ನ ಅಸ್ತಿತ್ವವನು
ನನ್ನಿರವಿನಲಿ ಕಂಡು
ಕಣ್ಣೀರ ಕಡಲನ್ನು
ದಾಟಿದವಳು.
ತನ್ನವರ ಬಿಟ್ಟುಳಿದು
ಸತ್ತವರ ಬದುಕಿಸಲು
ಪ್ರೀತಿಯಮ್ರತವ ಸುರಿಸಿ
ಖಾಲಿಯಾದವಳು.
ತಾಯಿ,ಹೆಂಡತಿ,ತಂಗಿ
ಭೂಮಿ ಹೋಲಿಕೆ ನೀನು
ತ್ಯಾಗ,ತಾಳ್ಮೆಯ ಪಾಠ
ಹೇಳುವವಳು.
ಜೀವಿಗಳ ಜೀವಿತದಿ
ಜೀವ ಸೆಲೆ ಉಕ್ಕಿಸಲು
ಬುವಿಗಿಳಿದ ದೇವತೆಯು
ಬಲ್ಲೆ ನಾನು.
ಬಾನಿನೆತ್ತರ ನೀನು
ಕೈಯ್ಯೆತ್ತಿ ಮುಗಿಯುವೆನು
ನನ್ನ ನಲ್ಮೆಯ ಮಡದಿ
ಅಹುದು ನೀನು.
--ಅಬ್ಳಿ,ಹೆಗಡೆ.*
Comments