‘ಹಾಡಿನ ದನಿ’ಯ ಸ್ಮರಣೆಯಲ್ಲಿ
- Nishanth Shreepad
- Jun 25, 2020
- 2 min read
Updated: Jun 25, 2020
ಕಳೆದ 9, ಅಕ್ಟೋಬರ್,2019 ರಂದು ದೈವಾಧೀನರಾದ ಶ್ರೀ ಜಿ.ಕೆ.ರವೀಂದ್ರಕುಮಾರ ಕೇವಲ ಒಬ್ಬ ಆಕಾಶವಾಣಿಯ ಅಧಿಕಾರಿಯಾಗಷ್ಟೇ ನಮ್ಮ ಸ್ಮರಣೆಯಲ್ಲಿ ಉಳಿಯದೆ, ಬದುಕು, ಬರೆಹ, ಮಾತು, ಒಡನಾಟ, ಸ್ನೇಹಭಾವ, ಹೃದಯ ವೈಶಾಲ್ಯತೆ- ಹೀಗೆ ಹಲವು ಮುಖಗಳಲ್ಲಿ ಮರೆಯಲಾಗದ ವ್ಯಕ್ತಿತ್ವ ಹೊಂದಿದ್ದರು. ಕವಿತೆ, ಲಲಿತ ಪ್ರಬಂಧ, ವಿಮರ್ಶೆ, ಅಂಕಣ ಬರೆಹ, ವ್ಯಕ್ತಿಚಿತ್ರ, ಕವಿತೆಗಳ ಸಂಪಾದನೆಯ ಜೊತೆಗೆ ಹಲವಾರು ಸೃಜನಶೀಲ ರೆಡಿಯೋ ರೂಪಕಗಳ ಮೂಲಕ ಕನ್ನಡ ಸಾರಸ್ವತಲೋಕದಲ್ಲಿ ತಮ್ಮದೇ ಆದ ‘ದನಿ’ಯ ಮುಖೇನ ಜನಮಾನಸದಲ್ಲಿ ನೆಲೆ ನಿಂತಿದ್ದಾರೆ. ದೀಢೀರನೆ ತನ್ನ ಹಾಡು ಮುಗಿಸಿ ಹೊರಟ ಆ ಧೀಮಂತ ಚೇತನಕ್ಕೆ ಅವರ ಹಾಡಿನ ‘ದನಿ’ಯ ಸ್ಮರಣೆಯ ಮೂಲಕ ಆಲೋಚನೆ ತನ್ನ ನಮನ ಈ ಸಲ್ಲಿಸುತ್ತಿದೆ .
ಇಂದು ಜಿ.ಕೆ.ರವೀಂದ್ರ ಕುಮಾರ ಅವರ ಜನ್ಮ ದಿನ.ಅವರ ದಿವ್ಯ ಸ್ಮೃತಿಯಲ್ಲಿ ಈ ಕವನ : - ಸಂಪಾದಕ
ಯಾವುದೋ ಹಾಡು ಯಾವುದೋ ಪಾಡು
ಯಾವುದೊ ಹಾಡು ಯಾವುದೊ ಪಾಡು ಹಾಡು ಪಾಡಿನ ನಡುವೆ ಜೀವ ಸುಳಿವಿನ ಜಾಡು ಕಲ್ಲರಳಿ ಹೂವಾಗಿ ಕಲ್ಲುರಳಿ ಹೋಳಾಗಿ ಕಲ್ಲಾದ ತೇರು ದಿನದ ನೆರಳಿಗೆ ಕಾದು ಕಲ್ಲು ಕರಗುವ ಸಮಯ ಕಲ್ಲೆದೆಯು ಕರಗದೆ ನಿಂತ ಚರಿತೆಗೆ ನಡೆಯ ತರುವವರು ಯಾರು! ಮಣ್ಣರಳಿ ಮನೆಯಾಗಿ ಮನೆಯುರುಳಿ ಮಣ್ಣಾಗಿ ಮಣ್ಣಾದ ಕನಸು ಕನಸುಗಣ್ಣಿಗೆ ಕಾದು ಮಣ್ಣು ಮರಗುವ ಸಮಯ ಮನೆಹುತ್ತ ಮರುಗದೆ ಕುಸಿವ ಕಾಲಕೆ ಹೆಗಲ ಹಿಡಿವವರು ಯಾರು! ಮನವರಳಿ ನೆಲೆಯಾಗಿ ಮನ ಮುದುಡಿ ಗೂಡಾಗಿ ಹುಡಿಗೊಂಡ ಬದುಕು ಪ್ರೀತಿ ಜಲ ಕಾದು ಬದುಕು ಹುಡುಕುವ ಸಮಯ ಮುಖ ಮುಖವ ನೋಡದೆ ದಣಿದ ನಾಡಿಗೆ ದನಿಯ ಕೊಡುವವರು ಯಾರು!
- ಜಿ.ಕೆ.ರವೀಂದ್ರಕುಮಾರ

ಜಿ.ಕೆ.ರವೀಂದ್ರ ಕುಮಾರ,
ಸಿಕಾಡ,ಪ್ಯಾಂಜಿಯಾ,ಕದವಿಲ್ಲದ ಊರಲ್ಲಿ,ಒಂದು ನೂಲಿನ ಜಾಡು ಹಾಗು ಮರವನಪ್ಪಿದ ಬಳ್ಳಿ ಇವು ರವೀಂದ್ರ ಕಮಾರ ಅವರ ಕವನ ಸಂಕಲನಗಳು. ಇದಕ್ಕೆ ಇನ್ನಷ್ಟು ಕವಿತೆಗಳನ್ನು ಸೇರಿಸಿ ಇದಕ್ಕೊಂದು ಪದವ ತೊಡಿಸು ಎಂಬ ಸಮಗ್ರ ಕವಿತೆಗಳ ಸಂಕಲನವನ್ನು ಸಿದ್ಧಪಡಿಸಿ, ನನ್ನ ಕಾವ್ಯದ ಹಾದಿ ಎಂಬ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಅದು ಪ್ರಕಟವಾಗುವ ಮುನ್ನವೆ 2019 ನೆ ಇಸ್ವಿಯ ಅಕ್ಟೋಬರ 9 ರಂದು ಅವರು ಹೃದಯಾಘಾತದಿಂದ ನಮ್ಮನ್ನು ಅಗಲಿದರು.
ಪದ್ಯ ಮತ್ತು ಗದ್ಯದ ಬರವಣಿಗೆಯಲ್ಲಿ ತಮ್ಮದೆ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದವರು ರವೀಂದ್ರ ಕುಮಾರ.ತಾರಸಿ ಮಲ್ಹಾರ್( ಲಲಿತ ಪ್ರಬಂಧ), ಸಪ್ತಸ್ವರ(ಲೇಖನಗಳು),ಪುನರ್ಭವ (ವಿಮರ್ಶೆ),ಜುಗಲ್ ಬಂದಿ , ಚಿಂತಕ ಯು.ಆರ್.ಅನಂತಮೂರ್ತಿ( ಬದುಕು ಬರಹ),ಜ್ಞಾನದೇವನ ಬೋಧನೆ(ಅನುವಾದ) ,ಡಾ.ಎಚ್ಚೆಸ್ಕೆ(ಬದುಕು ಬರಹ) ಮತ್ತು ಕವಿತೆ 2001(ಸಂಪಾದನೆ)
ಆಕಾಶವಾಣಿಯ ಧಾರವಾಡ ,ಕಾರವಾರ,ಭದ್ರಾವತಿ, ಮಡಿಕೇರಿ,ಮೈಸೂರು ಬಾನುಲಿ ಕೇಂದ್ರಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಬೆಂಗಳೂರು ಆಕಾಶವಾಣಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಸಮಯದಲ್ಲಿಯೆ ಅವರು ವಿಧಿವಶರಾದರು.
ಆಕಾಶವಾಣಿಯಲ್ಲಿ ಅವರು ರೂಪಿಸಿದ ಸೃಜನಶೀಲ ರೂಪಕಗಳಿಗಾಗಿ ನಾಲ್ಕು ಬಾರಿ ಆಕಾಶವಾಣಿಯ ರಾಷ್ಟ್ರೀಯ ಪ್ರಶಸ್ತಿ, ಎಂಟು ಸಲ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ರವೀಂದ್ರ ಕುಮಾರರ ಕಾವ್ಯ ಕುರಿತು ' ಮಿನುಗು ಬೆಳಕು' ವಿಮರ್ಶಾ ಗ್ರಂಥವನ್ನು ಎಂ.ಎಸ್ ವೆಂಕಟ ರಾಮಯ್ಯ ಅವರು ಸಂಪಾದಿಸಿದ್ದಾರೆ.ಅವರ ಕವನಗಳು ಹಿಂದಿ,ಇಂಗ್ಲೀಷ್,ತೆಲುಗು ಮುಂತಾದ ಭಾಷೆಗಳಿಗೆ ಅನುವಾದಗೊಂಡಿವೆ. ಅವರ ಸಾಹಿತ್ಯ ಸಾಧನೆಗೆ ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ, ಎರಡು ಸಲ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಪುರಸ್ಕಾರ, ಕಾಂತಾವರದ ಕವಿ ಮುದ್ದಣ ಕಾವ್ಯ ಪ್ರಶಸ್ತಿ,ಉಡುಪಿಯ ಕಡಂಗೋಡ್ಲು ಕಾವ್ಯ ಪ್ರಶಸ್ತಿ ಅಂಕೋಲೆಯ ದಿನಕರ ದೇಸಾಯಿ ಕಾವ್ಯ ಪ್ರತಿಷ್ಠಾನದ ಪ್ರಶಸ್ತಿ, ಹುನಗುಂದದ 'ಸಾರಂಗಮಠ' ಹಂಸಬಾವಿಯ 'ವಾರಂಬಳ್ಳಿ ಪ್ರತಿಷ್ಠಾನ, ಬೆಂಗಳೂರು ರಿಸರ್ವ ಬ್ಯಾಂಕ ಕನ್ನಡ ಸಂಘದ ಬೆಳ್ಳಿ ಹಬ್ಬದ ಪುರಸ್ಕಾರ,ಕ.ಸಾ.ಪ.ದ ಸಾಹಿತ್ಯ ದಂಪತಿ ಪುರಸ್ಕಾರ ಹಾಗು ಹುನಗುಂದ ಸಾಹಿತ್ಯ ಸಂಭ್ರಮದ ' ಸಂಗಮ ಕಾವ್ಯ ಪ್ರಶಸ್ತಿ' ಗೆ ಅವರು ಬಾಜನರಾಗುದ್ದಾರೆ. ಬಾನುಲಿಯಲ್ಲಿ 'ಸಿರಿಗನ್ನಡಂ ಗೆಲ್ಗೆ' ಎಂಬ ಕನ್ನಡ ನಾಡು ನುಡಿ ಕುರಿತ ೩೬೫ ಸರಣಿ ಕಾರ್ಯಕ್ರಮಗಳು,ಮೈಸೂರ ಅರಮನೆ,ಅಲ್ಲಿಯ ಪರಂಪರೆ ಕುರಿತ ರೂಪಕ ಮಾಲೆ, ಶ್ರೀ ತತ್ವನಿಧಿ ಕುರಿತ ರಾಗಮಾಲಾ ಸರಣಿ ರೂಪಕಗಳು, ಕರ್ನಾಟಕ ಶಾಸ್ತ್ರೀಯ ಸಂಗೀತದ ' ನಾದ ಮೀಮಾಂಸೆ' ಇವೆಲ್ಲಾ ಜಿ.ಕೆ.ರವೀಂದ್ರಕುಮಾರ ನಿರ್ಮಾಣದ ಮೌಲಿಕ ಕಾರ್ಯಕ್ರಮಗಳು.ಆಕಾಶವಾಣಿಯಲ್ಲಿ ಅವರ ಮೊಳಗುವ ಧ್ವನಿ ಕರ್ಣಾಮೃತವೆ ಆಗಿತ್ತು.ಅಪರೂಪದ ಗುಣಗಣಾನ್ವಿತರಾದ ಅನುಪಮ ಸಾಧಕರಾದ ಅವರ ಯಶೋಗಾಥೆ ಅನನ್ಯ ಮತ್ತು ಅಪಾರ.
ಅಪ್ಪಟ ಕವಿ ಜಿ.ಕೆ ರವೀಂದ್ರಕುಮಾರ ಅವರ ಕವಿತೆಗಳ ಶಿಲ್ಪವೇ ವಿಭಿನ್ನ ಮಾದರಿಯದು. ಅವರು ಚದುರಂಗದಾಟವಾಡಿದ ಹಾಗೆ ಪದಗಳನ್ನು ಪೋಣಿಸುತ್ತಿದ್ದರೇನೋ ಅನಿಸುತ್ತದೆ, ಪದಗಳಿಗೆ ಪದ ಡಿಕ್ಕಿ ಹೊಡೆದು ಹೊಸದೇ ಆದೊಂದು ವಿಶಿಷ್ಠ ಅರ್ಥ ಉಕ್ಕಿಸುವ ಅವರ ಕವಿತೆಗಳು ಯುವ ಕವಿಗಳ ಅಧ್ಯಯನಕ್ಕೆ ಪಠ್ಯವಾಗಿ ಒದಗುವ ಅಪೂರ್ವ ಶಕ್ತಿಯುಳ್ಳದ್ದು, ಜಿಕೆಆರ್ ಬಹುಬೇಗ ಎದ್ದು ನಡೆದದ್ದು ನಮ್ಮೆಲ್ಲರಿಗೂ ಬಹುದೊಡ್ಡ ನಷ್ಟವೆಂದರೆ ಅತಿಶಯೋಕ್ತಿಯಲ್ಲ, ೨೦೦೨ ರಲ್ಲಿ ಧಾರವಾಡ ಆಕಾಶವಾಣಿಯಲ್ಲಿ ನನಗೆ 'ಜಾಗಿಂಗ್ ಎಂಬ ಬಯಲಾಟ' ವಿಷಯದ ಕುರಿತು ಮೊದಲ ಬಾರಿಗೆ ಅವಕಾಶ ನೀಡಿ ಮುಂದೆ ನಿರಂತರ ಬರವಣಿಗೆಗೆ ಸ್ಪೂರ್ತಿಯಾದವರಲ್ಲಿ ಅವರೂ ಒಬ್ಬರು. ಅವರ ಅಗಲಿಕೆ ನೋವುಂಟು ಮಾಡುವಂಥದ್ದು..