top of page

ಹಾಡಿಗೆ ಹಾದಿ ತೋರಿದ ಲತಾ ದೀದಿ.

ಹಾಡಿನ ನಾಡಿನಲ್ಲಿ ಬೆಳೆದು ಜನ ಮನವನ್ನು ತಣಿಸಿದ ಮಹಾ ಮರವೊಂದು ಇಂದು ಧರಾಶಾಯಿಯಾಯಿತು.

ಭಾರತ ದೇಶದ ಘನತೆಯನ್ನು ಸಾದರ ಪಡಿಸಿದ ಗಾನಲೋಕದ ದ್ರುವತಾರೆ ಭಾರತರತ್ನ ಲತಾ ಮಂಗೇಶ್ಕರ್ ಅವರು ಇನ್ನಿಲ್ಲ ಎಂಬುವುದನ್ನು ನಂಬುವುದೆ ಕಷ್ಟ. ಅಪ್ರತಿಮ ಸುಂದರಿಯಾಗಿದ್ದ ಲತಾ ಅನುಪಮ ಗಾಯಕಿಯು ಹೌದು. ಅವರು ಹಾಡಿದ ದೇಶ ಭಕ್ತಿ ಗೀತೆಗಳನ್ನು ಕೇಳುತ್ತಾ ಹೋದರೆ ನಮ್ಮ ದೇಶ ಭಕ್ತಿ ಉದ್ದೀಪನಗೊಂಡು ದೇಶ ಪ್ರೇಮದ ಅಭೀಪ್ಸೆ ಗರಿಗೆದರಿ ರೋಮಾಂಚನವುಂಟಾಗುವುದು ನಿತ್ಯ ಸತ್ಯ. ಲತಾ ಮಂಗೇಶ್ಕರ್ ಮತ್ತು ಆಶಾ ಬೋಸ್ಲೆ ಸಹೋದರಿಯರು.

ಸಂಗೀತಕ್ಕೆ ತನ್ನನ್ನು ಸಂಪೂರ್ಣವಾಗಿ ತೆತ್ತುಕೊಂಡ ಲತಾ ಅವರು ಹಾಡಿನ ಜೊತೆಗೆ ಸಂಸಾರ ಮಾಡಿದ್ದು ವಿಶೇಷ." ನಿನ್ನಾಂಗ ಹಾಡಾಕ ನಿನ್ನಾಂಗ ಆಡಾಕ ಪಡದ ಬರಬೇಕೊ ಯಪ್ಪಾ" ಎಂದು ದ.ರಾ.ಬೇಂದ್ರೆಯವರ ಬಗ್ಗೆ ಬರೆದ ಸಾಲು ಲತಾ ಮಂಗೇಶ್ಕರ್ ಅವರಿಗೆ ಅನ್ವಯಿಸುವಂತ ಮಾತು.

ಗೋವಾದ ಮಂಗೇಶ ದೇವಸ್ಥಾನಕ್ಕೆ ನಡೆದುಕೊಳ್ಳುವ ಕಾರಣ ಅವರ ಮನೆಯವರಿಗೆ ಮಂಗೇಶ್ಕರ್ ಎಂಬ ಅಡ್ಡ ಹೆಸರು ಬಂದಿದೆ. ಅವರ ಹಾಡಿನ ಮೋಡಿ ಎಂತಹದು ಎಂದರೆ ಅದನ್ನು ಅನುಭವಿಸಿದವರಿಗೆ ಮಾತ್ರ ಅನುಭವ ವೇದ್ಯ.

" ಯತಾ ನಯತಿ ಕೈಲಾಸ ನಗಂ ಗಾನ ಸರಸ್ವತಿ


ತತಾ ನಯತಿ ಕೈಲಾಸಂ ನ ಗಂಗಾ ನ ಸರಸ್ವತಿ"

ಎಂಬ ಮಾತು ಸಂಗೀತದ ಮಹತಿಯನ್ನು ಶ್ರುತ ಪಡಿಸುತ್ತದೆ. ಗಾನ ಸರಸ್ವತಿಯು ನಮ್ಮನ್ನು ಕೈಲಾಸ ಪರ್ವತದ ಎತ್ತರಕ್ಕೆ ಕೊಂಡೊಯ್ಯ ಬಲ್ಲಳು. ಆದರೆ ಗಂಗಾ ಮತ್ತು ಸರಸ್ವತಿ ನದಿಗಳು ನಮ್ಮನ್ನು ಕೈಲಾಸ ಪರ್ವತದ ಎತ್ತರಕ್ಕೆ ತಲುಪಿಸಲಾರವು.

ಗಾನ ವಿಮಾನದಲಿ ಮೇಲಕೆ ಮೇಲಕೆ ಏರುವೆ ನಾನು ಎಂದರು ಕವಿ ಕುವೆಂಪು. ಹಾಗೆ ತಮ್ಮ ಗಾನ ಯಾನದಲ್ಲಿ ಲಕ್ಷಾಂತರ ಕೇಳುಗರನ್ನು ಮೇಲೆ ಮೇಲೆ ಕರೆದೊಯ್ದು ಗಂಧರ್ವ ಲೋಕದ ದರ್ಶನ ಮಾಡಿಸಿದ ಅದ್ಭುತ ಪ್ರತಿಭೆ ಭಾರತ ರತ್ನ ಲತಾ ಮಂಗೇಶ್ಕರ ಅವರು.

ಮದ್ಯಪ್ರದೇಶದ ಇಂದೋರ್ ನಲ್ಲಿ ೧೯೨೯ ನೇ ಇಸ್ವಿ ಸಪ್ಟಂಬರ ೨೮ ರಂದು ಜನಿಸಿದ ಅವರು ೨೦೨೨ ನೇ ಇಸ್ವಿ ಫೆಬ್ರುವರಿ ೬ ರಂದು ಅವರು ನಮ್ಮನ್ನೆಲ್ಲಾ ಅಗಲಿದರು.

ಲತಾ ಅವರ ತಾಯಿ ಶೇವಂತಿ ತಂದೆ ಪಂಡಿತ ದೀನಾನಾಥ ಮಂಗೇಶ್ಕರ್ ಸಂಗೀತಕಾರ ಮತ್ತು ರಂಗ ಕರ್ಮಿ.ಆಶಾ ಬೋಸ್ಲೆ, ಉಷಾ ಮಂಗೇಶ್ಕರ,ಮೀನಾ ಮಂಗೇಶ್ಕರ ಅವರ ಸಹೋದರಿಯರು.ಹೃದಯನಾಥ ಮಂಗೇಶ್ಕರ ಸಹೋದರ.ಇಡಿ ಕುಟುಂಬವೆ ಸಂಗೀತ ಸಾಮ್ರಾಜ್ಯದ ಮಹಾನ್ ಸಾಧಕರಾಗಿ ಬಾಳಿದವರು. ಲತಾ ಮಂಗೇಶ್ಕರ ಅವರು ಮುಕುಟ ಮಣಿಯಾಗಿ ಮಂಗೇಶ್ಕರ ಮನೆತನದಲ್ಲಿ ಮಿಂಚಿದ ಸ್ವರ ಸಾಮ್ರಾಜ್ಞಿ.

ಲತಾ ಅವರನ್ನು ಲತಾ ದೀದಿ ಎಂದು ಕರೆದು ಗೌರವಿಸುತ್ತಿದ್ದರು.ಅವರ ಮೊದಲ ಹೆಸರು ಹೇಮಾ. ಭಾವಬಂಧನ್ ಎಂಬ ನಾಟಕದಲ್ಲಿ ಅಭಿನಯಿಸಿದ ಬಳಿಕ ಅವರಿಗೆ ಲತಾ ಎಂಬ ಹೆಸರು ಬಂದಿತು.ಶಾಲೆಗೆ ಮೊದಲ ದಿನ ಲತಾ ಅವರು ತಮ್ಮ ಪುಟ್ಟ ತಂಗಿ ಆಶಾ ಅವರನ್ನು ಶಾಲೆಗೆ ಎತ್ತಿಕೊಂಡು ಹೋಗಿದ್ದರು.ಅದನ್ನು ಕಂಡ ಶಿಕ್ಷಕರೊಬ್ಬರು ಲತಾ ಅವರನ್ನು ಗದರಿದರು.ಆ ಕಾರಣಕ್ಕಾಗಿ ಒಂದೆ ದಿನಕ್ಕೆ ಅವರು ಶಾಲೆಯನ್ನು ಬಿಟ್ಟರು.ಮುಂದೆ ಅವರು ಬದುಕಿನ ಶಾಲೆಯಲ್ಲಿ ಬಹಳಷ್ಟನ್ನು ಕಲಿತರು. ತಮ್ಮ ಸತತಾಭ್ಯಾಸ ಜೀವನ ಶೃದ್ಧೆಯ ಮೂಲಕ ಮನೆಗೆ ಗುರುಗಳನ್ನು ಕರೆಸಿಕೊಂಡು ಅವರು ಶಿಕ್ಷಣವನ್ನು ಪಡೆದರು.ನಟ ದಿಲೀಪ್ ಕುಮಾರ ಅವರು ಲತಾ ಅವರ ಹಿಂದಿ ಮತ್ತು ಉರ್ದು ಉಚ್ಚರಣೆಯನ್ನು ಕಂಡು ನಕ್ಕರಂತೆ. ಅಗ ಮನೆಯಲ್ಲಿಯೆ ಶಿಕ್ಷಕರ ನ್ನಿಟ್ಟುಕೊಂಡು ಹಿಂದಿ ಮತ್ತು ಉರ್ದುವನ್ನು ಕಲಿತರು.ಬದುಕಿನ ಪಾಠಶಾಲೆಯಲ್ಲಿ ಯಾವ ಸಾಕ್ಷರರಿಗು ಕಡಿಮೆಯಾಗದಷ್ಟನ್ನು ಕಲಿತು ಎಲ್ಲ ಸುಶಿಕ್ಷಿತರಿಗೆ ಸರಿಸಮನಾದರು.

ಸಂಗೀತ್ ಸೌಭದ್ರ ನಾಟಕದ ನಾರದನ ಪಾತ್ರಧಾರಿ ಅಂದು ಬಂದಿರಲಿಲ್ಲ.ಎಂಟು ವರ್ಷದ ಕುವರಿ ಲತಾ ಅವರು ನಾರದನ ಪಾತ್ರ ನಿರ್ವಹಿಸಿ ಎಲ್ಲರಿಂದ ಒನ್ಸಮೋರ್ ಎನಿಸಿಕೊಂಡರು.ತಂದೆಯೆ ಅವರ ಮೊದಲ ಗುರು.ರಾಮಕೃಷ್ಣ ಬುವಾವಾಡಿ ಮತ್ತು ಉಸ್ತಾದ ಅಮಾನತ್ ಖಾನ್ ಅವರ ಬಳಿ ಲತಾ ಅವರು ಸಂಗೀತ ಶಿಕ್ಷಣವನ್ನು ಪಡೆದರು.ಅವರಿಗೆ ಶಾಸ್ತ್ರೀಯ ಸಂಗೀತದ ಗಾಯಕಿಯಾಗುವ ಹಂಬಲವಿತ್ತು. ಆದರೆ 41 ನೇ ವಯಸ್ಸಿನಲ್ಲಿ ತಂದೆಯವರ ಆಕಸ್ಮಿಕ ನಿದನದಿಂದ ಸಂಸಾರದ ಸಂಪೂರ್ಣ ಹೊಣೆ 13 ವರ್ಷದ ಲತಾ ಅವರ ಮೇಲೆ ಬಿದ್ದಿತು. ಸಂಸಾರ ನಿರ್ವಹಣೆಗೆ ಮರಾಠಿ ಚಲನಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡ ಬೇಕಾಗಿ ಬಂತು.1942ರಲ್ಲಿ ಮರಾಠಿ ಚಿತ್ರ ಕಿತೀ ಹಸಾಲ್ ನಲ್ಲಿ ಹಾಡಿದರು ಅವರ ಗಾಯನ ಸಿನೇಮಾದಲ್ಲಿ ಸೇರ್ಪಡೆ ಆಗಲಿಲ್ಲ. ಮಂಗಳ್ ಚಿತ್ರದಲ್ಲಿ ಅವರು ನಟಿಸಿದ್ದರು.1947 ರಲ್ಲಿ ಹಿಂದಿ ಚಿತ್ರದಲ್ಲಿ ಹಿನ್ನೆಲೆ ಗಾಯಕಿಯಾಗಿ ಹಾಡುವ ಅವಕಾಶ ಅವರಿಗೆ ಸಿಕ್ಕಿತು.

'ಆಪ್ ಕಿ ಸೇವಾ ಮೆ'.' ಪಾಂ ಲಾಗೂ ಕರ್ ಚೋರಿರೆ ' ಎಂಬ ಹಾಡಿನಲ್ಲಿ ಅವರ ಕಂಠಶ್ರೀಯನ್ನು ಕೇಳಿದ ಹುಸ್ನಲಾಲ್ ಭಗತ್ ರಾಮ್ ಲತಾ ಅವರಿಗೆ ಯೋಗ್ಯವಾದ ಅವಕಾಶಗಳನ್ನು ಒದಗಿಸಿಕೊಟ್ಟರು. ಆ ಬಳಿಕ ಲತಾ ಅವರು ಸಂಗೀತ ಲೋಕದ ಸಾಮ್ರಾಜ್ಞಿಯಾದರು.

ಹಿಂದಿ ಚಿತ್ರರಂಗ ಅವರನ್ನು ಲತಾ ದೀದಿ ಎಂದೆ ಕರೆಯುತ್ತಿತ್ತು. ಅವಿವಾಹಿತರಾಗಿಯೆ ಉಳಿದ ಅವರು ತಮ್ಮ ಜೀವಿತವನ್ನು ಸಂಗೀತಕ್ಕಾಗಿಯೆ ಮೀಸಲಿಟ್ಟರು.ಲತಾ ಅವರು ತಮ್ಮ ಸಹೋದರಿಯರ ಜೊತೆ ಹಾಡಿದ ಯುಗಳ ಗೀತೆಗಳು ಜನಮನವನ್ನು ಸೂರೆಗೊಂಡಿವೆ.ತಮ್ಮ ಸಹೋದರ ಹೃದಯನಾಥ. ಮಂಗೇಶ್ಕರ ಅವರ ನಿರ್ದೇಶನದಲ್ಲಿ ಲತಾ ಅವರು ಅನೇಕ ಗೀತೆಗಳನ್ನು ಹಾಡಿದ್ದಾರೆ.ಅದರಲ್ಲಿ ಮೀರಾ ಭಜನೆಗಳು ಉಲ್ಲೇಖನಾರ್ಹವಾಗಿವೆ.

ಲತಾ ಅವರು "ಲೇಕಿನ್" ಎಂಬ ಕಲಾತ್ಮಕ ಚಿತ್ರದ ನಿರ್ದೇಶನವನ್ನು ಮಾಡಿದ್ದರು.

ಚೀನಾ ಭಾರತ ಯುದ್ಧದಲ್ಲಿ ಅನೇಕ. ಸೈನಿಕರು ಹುತಾತ್ಮರಾದರು. ಹುತಾತ್ಮ. ಯೋಧರ ನೆನಪಿಗೆ ಪ್ರದೀಪ್ ಅವರು ಗೀತೆಗಳನ್ನು ಬರೆದರು.ಈ ಗೀತೆಗಳನ್ನು ಸಿ.ರಾಮಚಂದ್ರ ಅವರ ನಿರ್್ದೇಶನದಲ್ಲಿ 1963 ಜನವರಿ 27 ರಂದು ನವದೇಹಲಿಯಲ್ಲಿ ನಡೆದ ಸಮಾರಂಭದಲ್ಲಿ ಲತಾ ಮಂಗೇಶ್ಕರ ಅವರ ಹಾಡು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆನಿಲ್ಲುವಂತಾಯಿತು.

' ಐ ಮೇರೆ ವತನ್ ಕೆ ಲೋಗೋಂ

ಜರಾ ಆಂಖ ಮೆ ಭರಲೊ ಪಾನಿ'

ಎಂದು ಆರಂಭವಾಗುವ ಈ ಗೀತೆಯನ್ನೆ ಕೇಳಿ ಪ್ರದಾನಮಂತ್ರಿ ನೆಹರು ಅವರ ಕಣ್ಣಿನಲ್ಲಿ ನೀರಾಡಿತು. ಈ ಹಾಡು ಇಂದಿಗು ಎಲ್ಲರನ್ನು ಹಿಡಿದು ನಿಲ್ಲಿಸುವ ಹಾಡು.ಲತಾ ದೀದಿ ಅವರು ಹತ್ತು ಸಾವಿರಕ್ಕು ಹೆಚ್ಚು ಹಾಡುಗಳನ್ನು 22 ಭಾಷೆಗಳಲ್ಲಿ ಹಾಡಿದ ಹಾಡುಗಳ ಮೋಡಿಕಾರ್ತಿ.

ಲತಾ ದೀದಿ ಅವರನ್ನು ಹುಡುಕಿಕೊಂಡು ಹಲವು ಪ್ರಶಸ್ತಿಗಳು ಬಂದವು.ಆರು ವಿಶ್ವ ವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ ನೀಡಿದವು.ಅನೇಕ ಫಿಲ್ಮ್‌ಫೇರ್ ಪ್ರಶಸ್ತಿಗಳು ಅವರಿಗೆ ಬಂದವು.ಶಾಂತಿನಿಕೇತನದ ದೇಶಿಕೋತ್ತಮ ಪ್ರಶಸ್ತಿ,ತಿರುಪತಿ ದೇವಸ್ಥಾನದ ಆಸ್ಥಾನ ವಿದ್ವಾನ್ ಪ್ರಶಸ್ತಿ,ಪ್ರಾನ್ಸ ಸರ್ಕಾರದ 'ಆಫೀಸರ್ ಆಫ್ ದ ಲೀಜಿಯನ್ ಆಫ್ ಆನರ್,1969 ರಲ್ಲಿ ಪದ್ಮಭೂಷಣ,1999 ರಲ್ಲಿ ಪದ್ಮ ವಿಭಾಊಷಣ,2001 ರಲ್ಲಿ ಭಾರತರತ್ನ ಪ್ರಶಸ್ತಿಗಳು ಅವರ ಘನತೆಯನ್ನು ಜಗತ್ತಿನಾದ್ಯಂತ ಶ್ರುತ ಪಡಿಸಿತು.

ಲತಾ ಅವರು 'ಪುಲೆ ವೇಚಿತಾ' ಎಂಬ ಆತ್ಮ ಚರಿತ್ರೆಯನ್ನು ಬರೆದಿದ್ದಾರೆ. ಅವರನ್ನು ಕುರಿತು ಕನ್ನಡದಲ್ಲಿ ವಸಂತ ನಾಡಿಗೇರ್ ಅವರು "ಹಾಡುಹಕ್ಕಿಯ ಹೃದಯ ಗೀತೆ " ಎಂಬ ಕೃತಿಯನ್ನು ರಚಿಸಿದ್ದಾರೆ‌.

ತಮ್ಮ ಹಾಡುಗಳ ಮೂಲಕ ಜಗತ್ತಿನಾದ್ಯಂತ ನಾದದ ನವನೀತವನ್ನೆ ನೀಡಿದ ಗಾನ ಕೋಗಿಲೆ ಲತಾ ಮಂಗೇಶ್ಕರ ನಮ್ಮ ನಡುವೆ ಭೌತಿಕವಾಗಿ ಇಲ್ಲದಿದ್ದರು ಅವರ ಹಾಡಿನ ಸ್ವರ ಸಂಚಾರ ನಮ್ಮನ್ನು ಸದಾಕಾಲ ಚೈತನ್ಯಶೀಲರನ್ನಾಗಿ ಮಾಡುವ ಗುಣವನ್ನು ಹೊಂದಿದೆ.ಮಳೆ ನಿಂತ ಬಳಿಕವು ಮಳೆಯ ಹನಿಗಳು ಬಂದು ಹೋದ ಮಳೆಯ ನೆನಪನ್ನು ಜೀವಂತವಾಗಿಡುವಂತೆ ಲತಾ ಅವರು ಹಾಡಿದ ಗೀತಗಳು ಬಹುಕಾಲ ಉಳಿಯುವ ಗುಣವನ್ನು ಹೊಂದಿವೆ. ಸಿನಿಮಾ ಸಂಗೀತ ಕ್ಷೇತ್ರದಲ್ಲಿ ತಮ್ಮ ಅಗಲುವಿಕೆಯಿಂದ ತಬ್ಬಲಿ ಭಾವವನ್ನುಂಟು ಮಾಡಿದ ಲತಾ ಮಂಗೇಶ್ಕರ ಅವರಿಗೆ ಭಾವಪೂರ್ಣ ವಿದಾಯ.


ಡಾ.ಶ್ರೀಪಾದ ಶೆಟ್ಟಿ




4 views0 comments

Comments


bottom of page