top of page

ಹೀಗೊಂದು ಸ್ವಯಂವರ ಪ್ರಸಂಗ [ ಒಂದು ಮೆಲಕು ]

ಈ ಪ್ರಸಂಗ ನಡೆದು ಸುಮಾರು ನಲವತ್ತು ವರುಷಗಳ ಮೇಲಾಗಿರಬೇಕು. ನಾನು ಆಗ ಕಾಳಿನದಿ ಯೋಜನೆಯ ಸುಪಾದ ಗಣೇಶಗುಡಿಯಲ್ಲಿ ಕೆಲಸದಲ್ಲಿದ್ದೆ. ಯೋಜನಾಕಾರ್ಯ ಭರದಿಂದ ಸಾಗಿತ್ತು. ನಗರ ಜೀವನದಿಂದ ದೂರದಲ್ಲಿದ್ದ ನಮಗೆ ಮನೋರಂಜನೆ ಎಂಬುದು ಮರೀಚಿಕೆಯಾಗಿತ್ತು. ನಾವು ಕೆಲವು ಸಮಾನ ವಯಸ್ಕ, ಸಮಾನ ಮನಸ್ಕ ಮಿತ್ರರು ಸೇರಿ ಅಲ್ಲಿ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನ ನಡೆಸುತ್ತಿದ್ದೆವು. ಬೇರೆ ಏನೂ ಮಾಧ್ಯಮಗಳಿಲ್ಲದಿರುವುದರಿಂದ ನಮಗೆ ಒಳ್ಳೆಯ ಪ್ರಚೋದನೆ ದೊರೆತಿತ್ತು. ಈ ಉತ್ಸಾಹದಲ್ಲಿ ನಾವು ' ಹವ್ಯಾಸಿ ಕಲಾ ಬಳಗ' ಎಂಬ ತಂಡ ಕಟ್ಟಿ ಏಕಾಂಕ ನಾಟಕಗಳ ಪ್ರದರ್ಶನ ನೀಡತೊಡಗಿದೆವು. ಜನಪ್ರಿಯತೆ ಕಂಡ ನಮ್ಮ ತಂಡ ಪಕ್ಕದ ಯೋಜನಾ ಪ್ರದೇಶ ಮತ್ತು ಊರುಗಳಲ್ಲೂ ಸಂಚರಿಸಿ ನಾಟಕ ಪ್ರದರ್ಶಿಸಿದ್ದೆವು. ಕೆಲವು ನಾಟಕ ಸ್ಪರ್ಧೆಗಳಲ್ಲೂ ಭಾಗವಹಿಸಿ ಬಹುಮಾನ ಗಿಟ್ಟಿಸಿದ್ದೆವು. ಆ ವರ್ಷ ನಮ್ಮ ನಾಟಕ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿ ಬೆಳಗಾವಿಯಲ್ಲಿ ಪ್ರದರ್ಶಿಸಬೇಕೆಂಬ ಆದೇಶ ಬಂದಿತ್ತು.

ನಾವೆಲ್ಲರೂ ಸೇರಿ ಗಂಭೀರವಾಗಿ ಯೋಚಿಸಿ ಒಂದು ಒಳ್ಳೆಯ ಮತ್ತೂ ಮಾರ್ಮಿಕವಾದ ನಾಟಕ ಆಯ್ಕೆ ಮಾಡಿ ಪ್ರದರ್ಶನ ನೀಡಬೇಕೆಂದು ಯೋಜಿಸಿ, ಕರ್ನಾಟಕದ ಬರ್ನಾಡ್ ಷಾ ಎಂದೇ ಖ್ಯಾತರಾಗಿದ್ದ ಶ್ರೀರಂಗರ ' ಅಶ್ವಮೇಧ ' ನಾಟಕವನ್ನು ಎತ್ತಿಕೊಂಡೆವು. ರಾಜಕೀಯ , ಸಾಮಾಜಿಕ ಮತ್ತು ಸಮಕಾಲೀನ ಸ್ಥಿತಿಗತಿಗಳನ್ನು ಮಾರ್ಮಿಕವಾಗಿ ಬಿಂಬಿಸುವ ಉದರ ವೈರಾಗ್ಯ, ಶೋಕಚಕ್ರ, ಹರಿಜನವಾರ ಮುಂತಾದ ಪ್ರಭಾವಶಾಲಿ ನಾಟಕಗಳಂತೆ ಅಶ್ವಮೇಧವೂ ಒಂದು. ವೆಂಕಪ್ಪನೆಂಬ ಬಡ ಬ್ರಾಹ್ಮಣ ವಯಸ್ಸಿಗೆ ಬಂದ ಮಗಳಿಗೆ ಯೋಗ್ಯ ವರನನ್ನು ಹುಡುಕುವಲ್ಲಿ ವಿಫಲನಾಗುತ್ತಾನೆ. ಸಿಕ್ಕ ಸಿಕ್ಕ ಯುವಕರಲ್ಲಿಯೂ ಈತ ಮದುವೆಯ ಹುಡುಗನಿರಬಹುದೇ ಎಂಬ ಆಸೆಯಿಂದ ವಿಚಾರಿಸುತ್ತಾ ಹೋಗಿ ಅವಮಾನಿತನಾಗುತ್ತಾನೆ. ತೀರಾ ಹತಾಶನಾಗಿ ಇನ್ನು ವರ ಹುಡುಕುವುದು ಅಸಾಧ್ಯವೆಂದು ಮಗಳನ್ನು ಅಶ್ವಮೇಧದ ಕುದುರೆಯಂತೆ ನಿಲ್ಲಿಸಿ ಯಾರಾದರೂ ಮದುವೆಯಾಗಬಹುದೆಂದು ಹಣೆಪಟ್ಟಿ ಕಟ್ಟಿ ಬಿಟ್ಟು ಬಿಡುತ್ತಾನೆ. ಈ ನಾಟಕಕ್ಕೆ ಅಪ್ಪ ವೆಂಕಪ್ಪನ ಪಾತ್ರಕ್ಕೆ ಸಮರ್ಥ ವ್ಯಕ್ತಿಯನ್ನೇನೋ ಆಯ್ಕೆ ಮಾಡಿಕೊಂಡೆವು. ಮಗಳ ಪಾತ್ರಕ್ಕೆ ಸ್ನೇಹಿತರೊಬ್ಬರ ಮಗಳು ಸೂಕ್ತಳೆಂದು ಅನಿಸಿ ಅವರಲ್ಲಿ ವಿನಂತಿಸಿದೆವು. ಖುಷಿಯಿಂದ ಒಪ್ಪಿಕೊಂಡ ಅಪ್ಪ ಮಗಳು ಸಹಕರಿಸಿ ತಾಲೀಮಿಗೆ ಬಂದು ಹೋಗುತ್ತಿದ್ದರು.


ಬೆಳಗಾವಿಯ ನಗರದ ಹೊರವಲಯದ ಅಲ್ಯೂಮಿನಿಯಂ ಕಂಪನಿಯ ಇಂಡಾಲ್ ಕ್ಲಬ್ಬಿನಲ್ಲಿ ವಿಭಾಗೀಯ ಮಟ್ಟದ ಸ್ಪರ್ಧಾ ನಾಟಕ ಏರ್ಪಡಿಸಿದ್ದರು. ಸಭಾಂಗಣ ವಿಶಾಲವಾಗಿ ಅಚ್ಚುಕಟ್ಟಾಗಿತ್ತು. ನಿಗದಿತ ವೇಳೆಗೆ ನಾವು ಪ್ರದರ್ಶನಕ್ಕೆ ಸಜ್ಜಾದೆವು. ಬೆಳಗಾವಿಯ ಶಹರದಿಂದ ಬಂದ ಕನ್ನಡಿಗರು ಮತ್ತೂ ಇಂಡಾಲ್ ಕಂಪನಿಯ ಬಹುಪಾಲು ಕನ್ನಡಿಗರು ಎನ್ನುತ್ತ ಮುಕ್ಕಾಲು ಸಭಾಂಗಣ ತುಂಬಿತ್ತು. ವೆಂಕಪ್ಪನ ಪಾತ್ರಧಾರಿ ಮತ್ತು ಮಗಳ ಪಾತ್ರದ ನಿರ್ವಹಿಸಿದ ಹುಡುಗಿ ತುಂಬಾ ಮನೋಜ್ಞವಾಗಿ ಅಭಿನಯಿಸಿದ್ದಳು. ಪ್ರೇಕ್ಷಕ ವರ್ಗ ಎಷ್ಟು ತಾದಾತ್ಮ್ಯರಾಗಿದ್ದರೆಂದರೆ ಬಹುತೇಕ ಮಂದಿ ಅಳುತ್ತಿದ್ದರು. ಎರಡನೇ ಸಾಲಿನಲ್ಲಿ ಕುಳಿತಿದ್ದ ವೃದ್ಧೆಯೊಬ್ಬರು ತೀರಾ ಭಾವುಕರಾಗಿ, ಪಕ್ಕದಲ್ಲಿ ಕೂತಿದ್ದ ಮಗನಿಗೆ " ಈ ಹುಡ್ಗಿ ಸ್ಥಿತಿ ನೋಡಿದ್ರೆ ಭಾಳ್ ಕೆಟ್ಟಂಸ್ತದಲ್ಲಾ ? ಈ ನಮ್ ಬ್ರಾಹ್ಮಣ ಜಾತಿ ಸುಡ್ಲಿ, ಯಷ್ಟೊಂದ್ ರೀತಿ ರಿವಾಜು " ಎಂದು ತಮಗರಿವಿಲ್ಲದಂತೆ ಎತ್ತರದ ಸ್ವರದಲ್ಲಿ ಹೇಳಿಯೇಬಿಟ್ಟರು. ಅವರ ಹಿಂದಿನ ಸಾಲಿನಲ್ಲಿ ಕುಳಿತಿದ್ದ ನಮ್ಮ ಮಿತ್ರರು " ನಿಜ ಜೀವನದಲ್ಲೂ ಆ ಹುಡುಗಿ ಮದುವೆಗಿದ್ದಾಳೆ . ಅದೋ ನೋಡಿ ಮುಂದಿನ ಸಾಲಿನಲ್ಲಿ ಕುಳಿತ ಮೂರನೆಯವರು ಹುಡುಗಿಯ ಅಪ್ಪ " ಎಂದರು. ಅವರಿಬ್ಬರೂ ಗುಸು ಗುಸು ನಡೆಸಿದ್ದರು. ಮುಂದೆಲ್ಲ ಬೆಳವಣಿಗೆ ಯಾರೂ ಊಹಿಸಲಾಗದ ನಾಟಕದ ಸನ್ನಿವೇಶದಂತೆ ನಡೆಯಿತು. ಅವರಿಬ್ಬರೂ ತಾಯಿ ಮಗನೆಂದು ಪರಿಚಯಿಸಿಕೊಂಡು ಹುಡುಗಿಯ ತಂದೆಯೊಂದಿಗೆ ನೇರವಾಗಿ ಬಣ್ಣದ ಮನೆಗೆ ಬಂದಿದ್ದರು. ಹುಡುಗಿಯನ್ನು ನೇವರಿಸಿ , " ಏಸ್ ಚಂದ್ ಇದ್ದೀಯೋ ನನ್ನವ್ವ " ಎಂದು ಹಣೆಗೆ ಚುಂಬಿಸಿದಳು. ವಿಜಾಪುರದವರಾದ ಅವರು ಬೆಳಗಾವಿಯಲ್ಲಿ ಕೆಲಸದಲ್ಲಿದ್ದ ಮಗನಿಗೆ ಈ ಹುಡುಗಿಯನ್ನು ಮದುವೆ ಮಾಡಿಕೊಡುವಂತೆ ಕೇಳಿಕೊಂಡರು. ಉಭಯತರ ಕೂಲಂಕುಷ ವಿಚಾರಣೆಯ ನಂತರ ಪರಸ್ಪರ ಒಪ್ಪಿಗೆ ದೊರೆತು ಸ್ವಯಂವರವೂ ನಡೆಯಿತು.

ಆ ದಂಪತಿಗಳು ಈಗ ಅಜ್ಜ ಅಜ್ಜಿಯಾಗಿರಲು ಸಾಕು. ನಮ್ಮನ್ನೆಲ್ಲ ಮರೆತಿರಲೂ ಸಾಕು. ಆದರೆ ಆವರ ಆ ಬೆಸುಗೆಗೆ ಮೂಲಭೂತ ಕಾರಣವಾದ ಅಶ್ವಮೇಧ ನಾಟಕವನ್ನು ಅವರು ಮರೆಯಲು ಸಾಧ್ಯವೇ?

ನಾವು ಅಂದು ಪ್ರದರ್ಶಿಸಿದ ಅಶ್ವಮೇಧ ನಾಟಕಕ್ಕೆ ದ್ವಿತೀಯ ಬಹುಮಾನ ಸಿಕ್ಕಿತ್ತು. ಆದರೆ ಅದಕ್ಕಿಂತ ಮುಖ್ಯವಾಗಿ ಆ ನಾಟಕದ ಕಾರಣದಿಂದ ಅಂದು ಆ ಯುವ ಜೋಡಿಗೆ ಹೊಸ ಬಾಳ್ವೆ ದೊರಕಿದ್ದು ಮರೆಯಲಾಗದ ಸ್ಮರಣೆಯಾಗಿ ನಮ್ಮ ಮನಸ್ಸಿನಲ್ಲಿ ಉಳಿದಿದೆ.

- ಸುರೇಶ ಹೆಗಡೆ ಹುಬ್ಬಳ್ಳಿ

ಕರ್ನಾಟಕ ವಿದ್ಯುತ್ ನಿಗಮದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯ ಬಳಿಕ ಹುಬ್ಬಳ್ಳಿಯಲ್ಲಿ ನೆಲೆನಿಂತಿರುವ ಸುರೇಶ ಹೆಗಡೆಯವರು ತಮ್ಮ ವೃತ್ತಿ ಪ್ರಪಂಚಕ್ಕಷ್ಟೇ ಬದುಕನ್ನು ಸೀಮಿತಗೊಳಿಸಿಕೊಂಡವರಲ್ಲ. ಬರವಣಿಗೆ, ನಾಟಕ, ಆಕಾಶವಾಣಿಗಳಲ್ಲಿ ಕಥಾವಾಚನ, ವ್ಯಕ್ತಿತ್ವ ವಿಕಸನ ಉಪನ್ಯಾಸ ಹೀಗೆ ಹಲವು ಹತ್ತು ಪ್ರವೃತ್ತಿಗಳಲ್ಲಿ ತೊಡಗಿಸಿಕೊಂಡ ಇವರದು ಕ್ರಿಯಾಶೀಲ ವ್ಯಕ್ತಿತ್ವ. ಸುಧಾ, ಮಯೂರ, ತುಷಾರ, ಉತ್ಥಾನ ಮುಂತಾದ ಪತ್ರಿಕೆಗಳಲ್ಲಿ ಅವರ ಕತೆ, ನಗೆಬರೆಹಗಳು ಪ್ರಕಟಗೊಂಡಿವೆ. ಅವರು ಬರೆದ ಕತೆಗಳಿಗೆ ಬಹುಮಾನಗಳು ದೊರೆತಿವೆ. ಇತ್ತೀಚೆಗೆ ಸುರೇಶ ಹೆಗಡೆಯವರ ಚೊಚ್ಚಲ ಕಥಾಸಂಕಲನ ‘ ಇನಾಸ್ ಮಾಮನ ಟಪಾಲು ಚೀಲ’ ಪ್ರಕಟಗೊಂಡಿದ್ದು ಅದು ಬಹುಜನರ ಮೆಚ್ಚುಗೆಗೆ ಪಾತ್ರವಾಗಿದೆ. - ಸಂಪಾದಕ.

70 views1 comment

1 comentario


Lakshmi H
Lakshmi H
18 jul 2020

ಚೆನ್ನಾಗಿದೆ ಸರ್.ಚಿಕ್ಕದಾಗಿ ಚೊಕ್ಕದಾಗಿ ವಿಷಯ ಕುರಿತು ಬರೆದಿದ್ದೀರ,.

Me gusta
bottom of page