top of page

ಹೀಗಿದ್ದಳು ಹಿರಿಯಬ್ಬೆ [ಪ್ರಬಂಧ ]

ಹಿರಿಯಬ್ಬೆ… ಈ ಹೆಸರು ನನ್ನ ದೊಡ್ಡಮ್ಮನನ್ನು ನೋಡಿಯೇ ಹುಟ್ಟಿಕೊಂಡಿತ್ತೋ ಅಥವಾ ನಮ್ಮ ಜೊತೆ ಕೇರಿಯ ಮಕ್ಕಳೆಲ್ಲಾ ಹಾಗೆ ಕರೆಯುವುದರಿಂದಾಗಿ ಅವರೇ ಆ ಹೆಸರಿಗೆ ಅನ್ವರ್ಥವಾಗುವಂತೆ ಆಗಿಬಿಟ್ಟಿದ್ದರೋ ಗೊತ್ತಿಲ್ಲ. ಇವತ್ತಿಗೂ ಆ ಹೆಸರಿಗೆ ಅವರಷ್ಟು ಹೊಂದಿಕೆ ಆಗುವಂತಹ ಇನ್ನೊಬ್ಬ ಹಿರಿಯಬ್ಬೆಯನ್ನು ನಾನು ನೋಡಿಲ್ಲ. ತುಂಬ ಬಿಳುಪಲ್ಲದ, ಕಪ್ಪೂ ಅಲ್ಲದ, ಮಧ್ಯ ಬಿಳುಪಿನ ಮೈಬಣ್ಣ ಹೊಂದಿದ್ದ ಅಗಲ ಮುಖದ ಹಿರಿಯಬ್ಬೆಗೆ ತನ್ನ ಹತ್ತು ಮಕ್ಕಳಂತೆ ಕೇರಿಯ, ನೆಂಟರಿಷ್ಠರ ಮಕ್ಕಳೆಲ್ಲ ತನ್ನವೇ ಎಂಬಂತಹ ವಾತ್ಸಲ್ಯ. ದೊಡ್ಡ ಹಣೆಯಲ್ಲೊಂದು ಕಡು ಕೆಂಪು ಬಣ್ಣದ ದುಂಡು ಕುಂಕುಮ. ಕತ್ತಿನಲ್ಲೊಂದು ಸಣ್ಣ ಕರಿಮಣಿಯ ಎರಡೆಳೆಯ ಮಾಂಗಲ್ಯ ಸರ. ಮನೆಯಲ್ಲಿ ಯವಾಗಲೂ ಉಡುತ್ತಿದ್ದದ್ದು ತೆಳು ವಾಯಿಲ್ ಸೀರೆ. ಗುಂಗುರು ಕೂದಲನ್ನು ನೇರ ಮಾಡಲೆಂದು ಎಣ್ಣೆ ಹಾಕಿ ತಿಕ್ಕಿ ತಿಕ್ಕಿ ಬಾಚಿದ ದಪ್ಪ ಜಡೆ. ಎಲ್ಲರ ಕಷ್ಠ ಕೇಳಿ ಅನುಕಂಪ ಸೂಸುವ ಕಣ್ಣು, ಸಂತೋಷಕ್ಕೆ ಸ್ಪಂದಿಸುವ ಸುಂದರ ತುಂಬು ನಗು. ನಡೆಯುವಾಗ ಅವರ ಭಾರಕ್ಕೋ ಅಥವಾ ದಪ್ಪ ಕಾಲುಂಗುರ ನೆಲಕ್ಕೆ ತಾಗಿದ್ದಕ್ಕೋ ಉಂಟಾಗುವ ತಪ್ ಟಪ್ ಶಭ್ಧ ಅವರ ಬರುವಿಕೆಯನ್ನು ಮನೆಯಲ್ಲಿ ಸಾರುತ್ತಿತ್ತು. ನಮಗಾಗ ಹಸಿವಾದರೆ, ಜಗಳವಾದರೆ, ಖಾಯಿಲೆಯಾದರೆ, ಏಟಾದರೆ ಪರಿಹಾರಕ್ಕಿದ್ದ ಮೊದಲ ಶಬ್ಧ ಹಿರಿಯಬ್ಬೆ. ನಮಗಷ್ಟೇ ಅಲ್ಲ ನಮ್ಮಪ್ಪ ಅಮ್ಮಂದಿರಿಗೂ ಹಿರಿಯಬ್ಬೆ ಒಂದು ಕಲ್ಪವೃಕ್ಷದಂತಿದ್ದರು. ಅಬ್ಬೆ ಅಂದರೆ ಅಮ್ಮ. ಹಿರಿಯ ಎಂದರೆ ಹೆಚ್ಚಿನ. ತನ್ನಮ್ಮನ ಅಕ್ಕ ಅಥವಾ ತಂದೆಯ ಅತ್ತಿಗೆಗೆ ಆ ಹೆಸರಿನಿಂದ ಕರೆಯುತ್ತಾರಾದರೂ ನಗರದ ಆಂಟೀ ಎಂಬ ಪದಕ್ಕೂ ಅದು ಪರ್ಯಾಯ ಪದವಾಗುವುದೂ ಇತ್ತು. ನನ್ನ ತಂಗಿ ಚಿಕ್ಕವಳಿದ್ದಾಗ ಗುಂಡಗಿರುವ ಮಧ್ಯ ವಯಸ್ಸಿನ ಎಲ್ಲ ಮಹಿಳೆಯರೂ ಅವಳ ತೊದಲ ಬಾಯಿಯಲ್ಲಿ ಹಿರಿಯಮ್ಮಂದಿರಾಗಹೋಗಿ ನಾಲಿಗೆ ಹೊರಳದ ಕಾರಣ ಹಿಲಿಯಮ್ಮಂದಿರಾಗುತ್ತಿದ್ದರು. ಬಹಳಷ್ಟು ಎಳೆಯರಿಗೆ ‘ರ’ ಕಾರವೇಕಿದೆ ಎಂಬುದು ಇಂದಿಗೂ ಯಕ್ಷಪ್ರಶ್ನೆಯೇ. ನನ್ನಜ್ಜನಿಗೆ ಜಗದೀಶ, ರಮೇಶ, ಸುರೇಶ, ಸತೀಶ ಎಂಬ ನಾಲ್ಕು ಗಂಡುಮಕ್ಕಳು. ಅಜ್ಜನ ಮೊದಲ ಮಗ ಜಗದೀಶ(ಹಿರಿಯಪ್ಪ)ನ ಹೆಂಡತಿಯೇ ಈ ಹಿರಿಯಬ್ಬೆ.

ಹಿರಿಯಬ್ಬೆಯ ವಯಸ್ಸು, ಹೆಸರು, ಗೊತ್ತಾಗಲು ನನಗೆ ಹದಿನೆಂಟು ವರ್ಷ ತುಂಬಬೇಕಾಯಿತು. ಅದಕ್ಕೆ ಕಾರಣ ಹಲವಾರು. ಅವರೊಂದು ದೊಡ್ಡ ಆಲದ ಮರದಂತೆ. ಸ್ವಭಾವದಲ್ಲಿ ಮತ್ತು ಕಾಯದಲ್ಲಿ. ಯಾವುದೇವಿಷಯ, ವಸ್ತು, ಅಥವಾ ವ್ಯಕ್ತಿ ಅವರ ಹಿಂದೆ ಲೀಲಾಜಾಲವಾಗಿ ಕಳೆದುಹೋಗಬಹುದಿತ್ತು. ಅರ್ಥಾತ್ ಅಡಗಿಕೊಳ್ಳಬಹುದಿತ್ತು. ಅದಕ್ಕೆ ಕಾರಣ ಅವರ ದೇಹಕ್ಕಿದ್ದಷ್ಟೇ ತೂಕ ಅವರ ಮಾತಿಗೂ ಆ ಕುಟುಂಬದಲ್ಲಿ ಇತ್ತು. ಕುಳಿತರೆ ಒಂದಂಕಣದ ಜಾಗ ನಡೆದರೆ ಭೂಮಿ ತೂಕ ಎಂದಂತೆ ಇದ್ದವರು. ದಪ್ಪಗಿನ ದೇಹ, ಮಾಮೂಲಿನದಾಗಿರದ ಕಾಲದಲ್ಲಿ ಹಿರಿಯಬ್ಬೆ ಒಬ್ಬರೇ ಏಕೆ ಹಾಗಿದ್ದರೋ ತಿಳಿಯರು. ಆಗಿನ ಆಹಾರ ಪದ್ಧತಿಗೋ ಕೆಲಸದ ರೀತಿಗೋ ಏನೋ ನಾವು ಚಿಕ್ಕವರಿದ್ದಾಗ ಬೊಜ್ಜಿನ(ಒಬೆಸಿಟಿ) ಸಮಸ್ಯೆ ಇಷ್ಟೊಂದಿರಲಿಲ್ಲ. ಆಗ ಈ ರೀತಿಯ ಕುರುಕಲುತಿಂಡಿಗಳೂ ಇರಲಿಲ್ಲ. ಏನಿದ್ದರೂ ಶಾಲೆಯಿಂದ ಬಂದೊಡನೆ ಮಳೆಗಾಲ ಬೇಸಿಗೆಯಲ್ಲಿ ಬೆಳಿಗ್ಗೆಯೇ ಮಾಡಿಟ್ಟ ತೆಳ್ಳೇವು(ತೆಳ್ಳಗಿನ ದೋಸೆ). ಚಳಿಗಾಲದಲ್ಲಿ ಲಂಗದಲ್ಲಿ ತುಂಬಿಟ್ಟುಕೊಂಡು ತಿನ್ನುವ ಚುರುಮುರಿ. ಯಾವುದರಲ್ಲೂ ಬೇಕೆಂದರೂ ಜಿಡ್ಡಿಲ್ಲ, ಸಿಹಿಯಿಲ್ಲ, ಖಾರವಿರುತ್ತಿರಲಿಲ್ಲ. ಈಗ ನೆನಪಾದರೂ, ಆಗ ಅಗಿದಿದ್ದಕ್ಕೆ ಬಾಯಿ ನೋವಾಗುವಂತಹ ಜಗಿತವನ್ನೇ ಬೇಡುವ ಆ ತೆಳು-ತಣ್ಣನೆಯ ದೋಸೆಯಲ್ಲಿ ರುಚಿ ಎಂಬುದು ಎಲ್ಲಿತ್ತೋ? ಎಲ್ಲಾ ಅದರ ತೂತಿನಲ್ಲೇ ಸೋರಿಹೋಗಿರುತ್ತಿತ್ತೋ ಏನೋ, ಆದರೂ ಅದಕ್ಕಾಗಿಯೂ ನಾವೇಕೆ ಹಾಗೆ ಹಪಹಪಿಸಿದೆವೋ ತಿಳಿಯದು. ಅದೂ ಬೆಳಗ್ಗಿನ ತಿಂಡಿಗೆ ಆ ದೋಸೆಯೂ ಸಿಗುತ್ತಿರಲಿಲ್ಲ. ಬೆಳ ಬೆಳಿಗ್ಗೆ ಅಕ್ಕಿ ಗಂಜಿ ಸುರಿ ಸುರಿದು ಉಂಡು ದೂರದ ಶಾಲೆಗೆಓಡಬೇಕಿತ್ತು.

ಕೆಲವು ತಿಂಡಿ ತಿನಿಸುಗಳನ್ನು ಬಿಸಿ ಇದ್ದಾಗ ಮಕ್ಕಳು ತಿನ್ನಬಾರದೆಂಬುದು ಯಾವ ಬುದ್ಧಿವಂತರು ತಂದ ಕಾನೂನಾಗಿತ್ತೋ ತಿಳಿಯದು. ಬಿಸಿ ಇದ್ದಾಗ ದೊಡ್ಡವರು,ಬಿಸಿ ಆರಿದ ಮೇಲೆ ಅಥವಾ ಅವರಿಗೆ ಅಗಿಯಲಾರದಂತಹ ನಾರಾದ ಮೇಲೆ ಚಿಕ್ಕವರಿಗೆ. ಆ ರೀತಿಯ ನಾರನ್ನು ಅಗಿ ಅಗಿದು, ಜಗಿ ಜಗಿದೋ ಏನೋ ಬೊಜ್ಜು ಹಾಗಿರಲಿ ಇರಬೇಕಾದ ತೂಕವೂ ಅಂದಿನ ಮಕ್ಕಳಿಗಿರುತ್ತಿರಲಿಲ್ಲ. ಮಕ್ಕಳಷ್ಠೇ ಅಲ್ಲ ದೊಡ್ಡವರಲ್ಲೂ ಅಷ್ಟಾಗಿ ಇರುತ್ತಿರಲಿಲ್ಲ. ಅಂತಹ ಕಾಲದಲ್ಲಿ ನಮ್ಮ ಹಿರಿಯಬ್ಬೆಯ ತೂಕ ಎಲ್ಲಿಂದ ಬಂದಿತ್ತೊ? ಹೇಗೆ ಸೇರಿಕೊಂಡಿತ್ತೊ? ತಿಳಿಯದು. ಹಲವಾರು ಮಕ್ಕಳನ್ನು ಹೆತ್ತು ಹೆತ್ತೂ ಅದು ಮತ್ತೂ ಬೆಳೆದುಕೊಂಡಿತ್ತೇ ವಿನಹ ಕರಗುವ ಮಾತೇ ಇರಲಿಲ್ಲ. ಕೂಡು ಕುಟುಂಬದ ದೊಡ್ಡ ಸಂಸಾರಕ್ಕೆ ಹಿರಿಯಪ್ಪ ಯಜಮಾನನಾದರೆ, ಹಿರಿಯಬ್ಬೆ ಅಘೋಶಿತ ಯಜಮಾನತಿ. ನನಗೆ ತಿಳುವಳಿಕೆ ಬಂದಾಗಿನಿಂದ ಹಿರಿಯಬ್ಬೆ ಜೋರಾಗಿ ಮಾತನಾಡಿದ್ದಾಗಲೀ, ಕೆಲಸ ಮಾಡಿದ್ದಾಗಲೀ, ವರ್ಷಕ್ಕೊಮ್ಮೆ ತಾನೇ ಹೆರುತ್ತಿದ್ದ ಮಕ್ಕಳನ್ನು ಮುದ್ದು ಮಾಡಿ ಲಾಲಿಸಿದ್ದಾಗಲಿ ನಾನು ಕಂಡಿದ್ದಿಲ್ಲ. ಅಂತಹ ದೊಡ್ಡ ತೆಟ್ಟಿ ಮನೆಯಲ್ಲಿ ಐದೇ ಜಾಗ ಇಡಿಯಾಗಿ ಅವಳದ್ದು. ಜಗಲಿ ಎಂಬ ಉದ್ದನೆಯ ಮೊದಲ ಹಜಾರ(ಹೆಬ್ಬಾಗಿಲಿನ ನಂತರದ ಅಂಗಳದಿಂದ ನಾಲ್ಕು ಮೆಟ್ಟಿಲು ಮೇಲಿನದು). ಅದು ದಾಟಿದ ಮೇಲೆ ನಾಲ್ಕು ಮೂಲೆಗೂ ಕೆತ್ತನೆಯ ಕಂಬವನ್ನೊಳಗೊಂಡ ನಾಲ್ಕು ಅಡಿ ಆಳದ ತೊಟ್ಟಿ. ಅದರ ಬದಿಯಿಂದ ಹಾದು ಒಂದು ಮೆಟ್ಟಿಲು ಹತ್ತಿದರೆ ಒಂದು ನಸುಗತ್ತಲ ಹಜಾರ. ಅದಕ್ಕೊಂದೇ ಕಿಟಕಿ, ಅದರ ಇನ್ನೊಂದು ಮೂಲೆಯಲ್ಲಿ ಪೂರ್ಣಕತ್ತಲೆಯ ಕಪ್ಪುಕೋಣೆ. ಅದಕ್ಕೆ ಹಾಕಬೇಕೆಂಬ ಕಾಟಾಚಾರಕ್ಕೆ ಇದ್ದ ಒಂದು ಬಾಗಿಲು ತನ್ನನ್ನು ಯಾಕಾದರೂ ಹಾಕುತ್ತಾರೋ ಎಂದು ಮುಟ್ಟಿದಾಗೊಮ್ಮೆ ಕಿರ್ ಗುಟ್ಟುತ್ತಿತ್ತು. ಅದನ್ನು ಹಾಕಿದ್ದರೂ ತೆಗೆದಿದ್ದರೂ ಯಾರಿಗೇನೂ ವ್ಯತ್ಯಾಸವಾಗುತ್ತಿರಲಿಲ್ಲ. ಎಷ್ಟೇ ಸೂಕ್ಷ್ಮವಾಗಿ ಕಣ್ಣು ಹೊಂದಿಸಿಕೊಂಡು ನೋಡಿದರೂ ಅಲ್ಲಿ ಕತ್ತಲೆಯೊಂದನ್ನುಳಿದು ಏನೂ ಸ್ಪಷ್ಠವಾಗುತ್ತಿರಲಿಲ್ಲ. ಅಂತಹ ರೂಮಿನಲ್ಲೊಂದು ಮಂಚ. ಅದರ ಗೋಡೆಯ ಬದಿಗೆ ಹಿರಿಯಬ್ಬೆ ಒಂದು ಮಲಗಿರಬೇಕು ಇಲ್ಲವೇ ಕೊನೆಯ ಮಗುವಿಗೆ ಹಾಲು ಕುಡಿಸುತ್ತ ಕುಳಿತಿರಬೇಕು. ಅದು ಅವಳ ಮೊದಲ ಪ್ರಾಶಸ್ತ್ಯದ ಜಾಗ. ಎರಡನೇ ನಂಬರಿನದು ಸ್ನಾನಕ್ಕೆಂದು ಬಚ್ಚಲಿಗೆ ಹೋಗುವ ಮೊದಲು, ಮೊದಲ ಮಗಳಿಂದ ಎಣ್ಣೆ ಹಚ್ಚಿಸಿಕೊಳ್ಳಲು ಒಂದು ತಾಸು ಕೂಡುತ್ತಿದ್ದ ಹಿತ್ತಲ ಕಡೆಯ ಅಂದರೆ ಮನೆಯ ಹಿಂಬಾಗದ ಹಜಾರ. ಆಗ ಹಿರಿಯಬ್ಬೆಯ ಉಡುಗೆ ಎಷ್ಟೇ ಚಿಕ್ಕದಿರಲಿ ಅಥವಾ ಅದೂ ಇಲ್ಲದಿರಲಿ ಮನೆಯ ಯಾವ ಸದಸ್ಯರಿಗೂ ಅದು ಬಾದಕವೆನಿಸಿ, ಸೆನ್ಸಾರ್ ನವರ ಅಗತ್ಯವಿದೆ ಎಂದೆನಿಸಿರಲೇ ಇಲ್ಲ. ಮೂರನೆಯ ಜಾಗ ಹೊರ ಹಜಾರದಲ್ಲಿದ್ದ ಮುಂಡಿಗೆ ಕಂಬವೆಂಬ ಬಹುದೊಡ್ಡ ಕೆತ್ತನೆಯ ಕಂಬದ ಬುಡ. ಅದು ಅವಳ ಕೂದಲು ಬಾಚಿಕೊಳ್ಳುವ ಜಾಗ. ಹೊರಗಿನಿಂದ ಒಳಬರುವಾಗ ಹಿರಿಯಬ್ಬೆಯನ್ನು ಆ ಕಂಬದ ಬುಡದಲ್ಲಿ ನೋಡಿದರೆ ಮನೆಯ ಭಾರವನ್ನು ಆ ಗಜಗಂಬ ಹೊತ್ತಂತೆ ಈ ಅವಿಭಕ್ತ ಕುಟುಂಬವನ್ನು ಇವರೇ ಹೊತ್ತು ಕುಳಿತಿದ್ದಾರೇನೋ ಎಂದೆನಿಸುತ್ತಿತ್ತು. ಅದು ನಿಜವಿತ್ತೂ ಕೂಡ. ಅವರ ಮುಖಭಾವವಿರುತ್ತಿದ್ದದ್ದೂ ಹಾಗೆಯೇ. ಯಾವಾಗಲೂ ಎಂತದ್ದೋ ವಿಚಾರದಲ್ಲಿ ಮುಳುಗಿರುವಂತಹ ಭಾವನೆಯಿಂದ ತೊಯ್ದ ಮುಖ. ನೋಡಿದೊಡನೆ ಅನುಕಂಪದ ಆತ್ಮೀಯತೆ ಎಂತವರಿಗಾದರೂ ಬರುವಂತಿತ್ತು. ಸ್ವ ಅನುಕಂಪ ಒಂದೇ ಅಲ್ಲ ಪರಿಚಿತರೊಂದೇ ಅಲ್ಲ, ಅಪರಿಚಿತರ್ಯಾರಾದರೂ ಬಂದು ತಮ್ಮ ಗೋಳು ಹೇಳಿಕೊಂಡರೂ ಇವರ ಅನುಕಂಪ ಅವರ ಎಲ್ಲ ನೋವಿಗೂ ಲೇಪಿಸಲ್ಪಟ್ಟು ಬಾಚಿ ತಬ್ಬಿಕೊಳ್ಳುತ್ತಿತ್ತು. ತೋಟದಲ್ಲಿ ಕೆಲಸ ಮಾಡುವ ಆಳುಕಾಳುಗಳು ಕಂಬದ ಬುಡದಲ್ಲಿ ಕೂಡ್ರುವ ಅವರ ತಲೆಬಾಚುವ ಸಾಯಂಕಾಲದ ಸಮಯವನ್ನೇ ತಮ್ಮ ಕಷ್ಠ ತೋಡಿಕೊಳ್ಳುವ ಮತ್ತು ಅವರಿಂದ ಪರಿಹಾರ ಕಂಡುಕೊಳ್ಳುವ ಸಮಯವನ್ನಾಗಿ ಪರಿವರ್ತಿಸಿಕೊಂಡಿದ್ದರು. ಆ ಸಮಸ್ಯೆಗಳಲ್ಲಿ ಆಯ್ದ ಕೆಲವು, ಹಜಾರದ ಮೂಲೆಯ ಕತ್ತಲ ಕೋಣೆಯಲ್ಲಿ ಪಿಸು ಮಾತಾಗಿ ಹಿರಿಯಪ್ಪನ ಕಿವಿಯಲ್ಲಿ ಊದಿಸಿಕೊಂಡು ತಾವೇ ಪರಿಹಾರವಾಗಿ ಅರಳಿಕೊಳ್ಳುವುದೂ ಇತ್ತು. ಐದನೆಯ ಜಾಗವೇ ಮಧ್ಯಾನ್ಹ ರಾತ್ರಿ ಬೆಳಿಗ್ಗೆಯ ತಿಂಡಿಗೆ ಕೂಡ್ರುವ ಊಟದ ಮನೆಯ ಜಾಗ. ಆಗ ಬಾಳೆ ಎಲೆಯದುರು ಕೆಳಗಡೆಯೇ ಕೂರಬೇಕಿತ್ತು. ಯಾರಿಗೂ ರಿಯಾಯಿತಿಯಿರಲಿಲ್ಲ. ಎಂಜಲು ಕೈ ತೊಳೆದ ಹೊರತು ಎಲ್ಲೂ ಮುಟ್ಟಿಸುವಂತಿಲ್ಲ. ಏಳುವಾಗ ಎಂಜಲೆಲೆಯಲ್ಲೇ ಕೈ ಊರಿ ಏಳದೇ ಹಿರಿಯಬ್ಬೆಗೆ ಬೇರೆ ದಾರಿಯಿರಲಿಲ್ಲ. ಒಮ್ಮೊಮ್ಮೆ ಎರಡೂ ಕೈ ಊರಿ ತಿರು ತಿರುಗಿ ಏಳಬೇಕಾಗುತ್ತಿತ್ತು. ಅದಕ್ಕೇ ಊಟದ ಮನೆಯ ತುದಿಯ ಮೂಲೆ ಅವರಿಗೆಂದೇ ಮೀಸಲಾಗಿತ್ತು. ನೆಂಟರ್ಯಾರೇ ಬಂದರೂ ಅವರ ಜಾಗದಿಂದ ಯಾರಿಗೂ ತೊಂದರೆಯಾಗುವಂತಿರಲಿಲ್ಲ.

ಈ ಐದೂ ಜಾಗದ ಸಮಯವೂ ಮನೆಯ ಸದಸ್ಯರಿಗಷ್ಟೇ ಅಲ್ಲ ಆ ಮನೆಯ ಆಳು ಕಾಳಿನಿಂದ ಹಿಡಿದು ಮಾಮೂಲಾಗಿ ಬಂದು ಹೋಗುವ ನೆಂಟರಿಷ್ಟರಿಗೂ ತಿಳಿದಿತ್ತು. ಅಲ್ಲಿಯ ಪ್ರಾಥಮಿಕ ಶಾಲೆಯಿಂದ ಏನಾದರೂ ಒಸಗೆ, ಮಕ್ಕಳ ಕುರಿತಾದ ದೂರು ಅಥವಾ ಶಾಲೆಗೆ ಬರುವ ಇನ್ಸ್ಪೆಕ್ಟರ್ ರ ಕುರಿತು ವಿವರಣೆ ಕೊಡಬೇಕೆನಿಸಿದರೆ, ಬೆಳಿಗ್ಗೆಯ ಹೊತ್ತಾದರೆ ಅಕ್ಕೋರು(ಮೇಡಮ್), ಸಾಯಂಕಾಲದ ಹೊತ್ತಾದರೆ ಮಾಸ್ತರ್(ಸರ್) ಬರುತ್ತಿದ್ದರು. ಇದು ಆಶಾಲೆಗೆ ಹೊಸತಾಗಿ ಬರುವ ಶಿಕ್ಷಕ ಶಿಕ್ಷಕಿಯರಿಗೂ ಅಲ್ಲಿಂದ ವರ್ಗವಾಗಿ ಹೋಗುವವರು ಸಂದೇಶವೆಂಬಂತೆ ಕಿವಿಮಾತು ಹೇಳೇ ಹೋಗುತ್ತಿದ್ದರು. ಇಲ್ಲವಾದಲ್ಲಿ ಆ ಮನೆಗೆ ಬಂದ ಎಲ್ಲರೂ ತಿಂಡಿ ತಿಂದೇ ಹೋಗುವ ಪದ್ಧತಿಯಿದ್ದದ್ದರಿಂದ ಆ ಪದ್ಧತಿ ಮುರಿಯಲಾರದೆ, ಏನಾದರೂ ಸೇವಿಸುತ್ತಿದ್ದರು. ತಿಂಡಿ ತಿಂದರೆ ಕೈ ತೊಳೆಯಲು ಮಧ್ಯಾನ್ಹದ ಅವಧಿಯಲ್ಲಿ ಹೋದರೆ, ಹಿಂದಿನ ಹಜಾರದ ಸೆನ್ಸಾರ್ ಇಲ್ಲದ ದೃಷ್ಯಕ್ಕೆ ಇವರೇ ಪಶ್ಚಾತ್ತಾಪ ಪಡುವಂತಾಗುತ್ತಿತ್ತು. ಅದಕ್ಕೆ ಆ ಒಪ್ಪಂದ ಬೆಳಿಗ್ಗೆ ಸಾಯಂಕಾಲದ ಸಮಯದ ವಿಂಗಡನೆಯನ್ನು ತಮ್ಮ ತಮ್ಮೊಳಗೆ ಮಾಡಿಕೊಂಡ ಶಿಕ್ಷಕವೃಂದ ಮಕ್ಕಳ ಕುರಿತಾದ ದೂರುಗಳಿದ್ದರೆ ಸಾಯಂಕಾಲ ಬರುವುದಾದರೆ ಶಿಕ್ಷಕಿಯರು ತಲೆ ಬಾಚುವ ಸಮಯದಲ್ಲಿ ಬಂದು ಹಿರಿಯಬ್ಬೆನೆದುರು ಇಟ್ಟುಹೋಗುತ್ತಿದ್ದರು. ಅದು ಅನುಕ್ರಮದಲ್ಲಿ ಕತ್ತಲೆಯಲ್ಲಿ ಹಿರಿಯಪ್ಪನ ಕಿವಿಸೇರಿ ಸರಿಪಡಿಸಲ್ಪಡುತ್ತಿತ್ತು. ಅದು ಮೊದಲಿಗೇ ಹಿರಿಯಬ್ಬೆಯ ಕಿವಿಯಮೇಲೆ ಬೀಳುವುದಕ್ಕೂ ಕಾರಣವಿತ್ತು. ದೊಡ್ಡ ಕುಟುಂಬ, ಜೊತೆಗೆ ದೊಡ್ಡ ಜಮೀನಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಹಿರಿಯಪ್ಪ ವ್ಯವಹಾರದಲ್ಲಿ ಸದಾ ಮುಳುಗಿರುತ್ತಿದ್ದ. ವ್ಯವಹಾರವನ್ನು ಹೊರತುಪಡಿಸಿ ಬೇರೆ ಯಾವುದೇ ವಿಷಯ ಈಗ ಹೇಳಿದ್ದು ಇನ್ನೊಂದು ನಿಮಿಷಕ್ಕೆ ಮರೆತು ಹೋಗುತ್ತಿತ್ತು. ನಾನು ನಾಲ್ಕನೇಯ ತರಗತಿಯಲ್ಲಿದ್ದಾಗ ಒಮ್ಮೆ ಮಕ್ಕಳೆಲ್ಲ ಸೇರಿ ಯಕ್ಷಗಾನ ನೋಡಲು ಹೋಗಿದ್ದೆವು. ರಾತ್ರಿ ಯಕ್ಷಗಾನ ನೋಡಿ ಬಂದದ್ದಕ್ಕೆ ನಾವು ಇಬ್ಬರು(ನಾನು ಮತ್ತು ಸುಜಾತಾ) ಕ್ಲಾಸಿನಲ್ಲಿ ನಿದ್ದೆ ಮಾಡಿದ್ದರೆ, ನಮ್ಮ ಮುಂದಿನ ಕ್ಲಾಸಿನಲ್ಲಿದ್ದ ಸುಲೋಚನಕ್ಕ ಬೆಳಿಗ್ಗೆ ಪ್ರಾರ್ಥನೆ ಮಾಡುವಾಗಲೇ ನಿದ್ದೆ ಬಂದು ಬಿದ್ದಿದ್ದಳು. ಅದಕ್ಕೆ ಯಕ್ಷಗಾನದ ಹಿನ್ನೆಲೆ ತಿಳಿಯದ ಪ್ರಭುಮಾಸ್ತರರು ವಿಷಯ ತಿಳಿಸಲು ಬಂದರು. ಅದು ಬೆಳಗಿನ ಸಮಯವೆಂಬುದನ್ನು ಗಾಬರಿಯಲ್ಲಿ ಮರೆತರು. ಮನೆಗೆ ಬರುವಂತಿಲ್ಲವಾದ್ದರಿಂದ ತೋಟಕ್ಕೆ ಹೋಗಿ ಹಿರಿಯಪ್ಪನೊಡನೆ ವಿಷಯ ತಿಳಿಸಿದರು. ಮನೆಗೆ ಬರುವುದರಲ್ಲಿ ಹಿರಿಯಪ್ಪನಿಗೆ ಪ್ರಭು ಮಾಸ್ತರರು ಯಾರ ಕುರಿತಾಗಿ ಏನು ಹೇಳಿದರೆಂಬುದು ಮರೆತು, ಏನೋ ದೂರು ಬಂದಂಗಿತ್ತು ಎಂಬುದು ಮಾತ್ರ ತಲೆಯಲ್ಲಿ ಕೊರೆಯುತ್ತಿತ್ತು. ಆದರೆ ಯಾರ ಕುರಿತಾಗಿ ಎಂಬುದೇ ನೆನಪಿಗೆ ಬರಲಿಲ್ಲ. ಅವರಿಗೆ ಸಾಲಾಗಿ ಸುಕನ್ಯ, ಸುಮಂಗಲ, ಸುನಂದ, ಸುಲೋಚನ, ಸುಜಾತ ಎಂಬ `ಸು’ ಕಾರದ ಕನ್ಯೆಯರಾದರೆ, `ಮ’ ಕಾರದ ಗಂಡುಮಕ್ಕಳು. ಮಹೇಶ, ಮಧು, ಮಂಜು, ಮಹಾಬಲೇಶ್ವರ. ಅದರಲ್ಲಿ ಮಹಾಬಲೇಶ್ವರ ಹಿರಿಯವ. ಒಟ್ಟೂ ಹತ್ತರಲ್ಲಿ ನಾಲ್ಕು ಪ್ರಾಥಮಿಕದಲ್ಲಿದ್ದರೆ, ಒಂದು ಕಾಲೇಜು ಮೆಟ್ಟಿಲೇರಿತ್ತು. ಉಳಿದವೆಲ್ಲ ಹೈಸ್ಕೂಲು. ಫೇಲ್ ಆದವರು ಹಿಂದಿನವರು ಬರುವವರೆಗೂ ಅದೇ ಕ್ಲಾಸಿನಲ್ಲಿ ಕಾಯುವವರೂ ಇದ್ದರು. ಜೊತೆಯಲ್ಲಿ ತಮ್ಮನ ಮಕ್ಕಳಾದ `ಪ್ರ’ ಕಾರದ ನಾವು ನಾಲ್ಕು ಮಂದಿ. ಪ್ರಮೀಳಾ, ಪ್ರಮೋದ, ಪ್ರೇಮ ಮತ್ತು ಪ್ರಕಾಶ. ಅವರಲ್ಲಿ ನಾವಿಬ್ಬರೂ ಪ್ರಾಥಮಿಕ ಶಾಲೆಯಲ್ಲಿದ್ದೆವು. ಸುರೇಶ ಚಿಕ್ಕಪ್ಪನ ಮೂರು ಮಕ್ಕಳು `ಗ’ ಕಾರದವು. ಗಣೇಶ, ಗಂಗಾ, ಗೋದಾವರಿ. ಅವುಗಳಲ್ಲಿ ಒಂದು ಮಾತ್ರ ಪ್ರಾಥಮಿಕದ್ದು. ಅಲ್ಲಿಗೆ ಪ್ರಾಥಮಿಕ ಶಾಲೆಯಲ್ಲಿ ನಮ್ಮನೆಯವೇ ಏಳು ಮಂದಿ. ಸತೀಶ ಚಿಕ್ಕಪ್ಪನ ಮಕ್ಕಳಾದ ವಾರಿಜಾ, ಜಲಜಾ ಇನ್ನೂ ಶಾಲೆಯ ಮೆಟ್ಟಿಲೇರಿರಲಿಲ್ಲ. ನಾವು ಏಳೂ ಚಿಳ್ಳೆ ಪಿಳ್ಳೆಗಳು ದಿನವೂ ಪಾಠೀಚೀಲ ಹೊತ್ತು, ಹೊತ್ತಿಗೆ ಸರಿಯಾಗಿ ಮನೆ ಬಿಡುತ್ತಿದ್ದೆವು. ಓದುತ್ತಿದ್ದೆವೋ, ಕಿರುಚುತ್ತಿದ್ದೆವೋ, ಅರಚುತ್ತಿದ್ದೆವೋ ತಿಳಿಯದು. ಪ್ರಭುಮಾಸ್ತರ್ ಬಂದು ಹೋದದ್ದಕ್ಕೆ ಯಾವುದೋ ಪ್ರಾಥಮಿಕ ಶಾಲೆಯದೇ ಕಂಪ್ಲೆಂಟ್ ಎಂದು ಹಿರಿಯಪ್ಪನಿಗೆ ಖಾತ್ರಿ ಇತ್ತು. ಆದರೆ ಯಾರ ಕುರಿತು? `ಸು’ ಕಾರದ್ದೋ, `ಪ್ರ’ ಕಾರದ್ದೋ, `ಗ’ ಕಾರದ್ದೋ, ಅದಕ್ಕೆ ಮಕ್ಕಳನ್ನೇ ಕೇಳಿ ಬಗೆಹರಿಸಿಕೊಳ್ಳೋಣವೆಂದು ವಿಷಯ ಪ್ರಸ್ಥಾಪಿಸಲು ನಮ್ಮನ್ನು ಕರೆದರು. ಇಂತಹ ವಿಷಯದಲ್ಲಿ ನಮ್ಮದು ಬಲು ಒಕ್ಕಟ್ಟಿತ್ತು. ಹಿರಿಯಪ್ಪ ಯಾರೊಬ್ಬರ ಹೆಸರನ್ನು ಕರೆದರೂ ಕನಿಷ್ಟ ನಾಲ್ಕು ಚಿಣ್ಣರಾದರೂ ಒಟ್ಟೆಗೆ ಧಾವಿಸುತ್ತಿದ್ದೆವು. ಒಕ್ಕಟ್ಟಿನ ಬಲ ಹಿರಿಯಪ್ಪ ಕರೆವ ದಾಟಿಯನ್ನು ಅವಲಂಬಿಸಿರುತ್ತಿತ್ತು. ಸ್ವಾಭಾವಿಕ ಧ್ಬನಿಯಾದರೆ ಇಬ್ಬರು, ಗಡುಸಾಗಿ ಕರೆದರೆ ನಾಲ್ಕು. ಕರೆ ಕಠೋರವಾಗಿದ್ದರೆ ಧೈರ್ಯಕ್ಕೆ ಮತ್ತಿಬ್ಬರಂತೆ ಒಟ್ಟೂ ಆರು ಮಕ್ಕಳು. ಸಂಖ್ಯೆಗೆನೂ ಕೊರತೆ ಇಲ್ಲದಂತೆ ನಮ್ಮದೊಂದು ದೊಡ್ಡ ದಂಡೇ ಇತ್ತು. ಸಾಲಾಗಿ ಬಂದು ನಿಂತ ನಮ್ಮತ್ತ ನೋಡಿದ ಹಿರಿಯಪ್ಪ,

``ಏನ್ರೋ! ಏನು ಕಿತಾಪತಿ ಮಾಡಿದಿರಿ? ಇವತ್ತು ಪ್ರಭುಮಾಸ್ತರ್ ಬಂದಿದ್ದರಲ್ಲ?’’ ಎಂದ, ಬೆಳಿಗ್ಗೆ ಬಿದ್ದ ನೋವು ಸುಲೋಚನಕ್ಕಂಗೆ ಮರೆತುಹೋಯಿತು. ಕ್ಲಾಸಿನಲ್ಲಿ ನಿದ್ದೆ ಮಾಡಿದ್ದು ನಮಗೂ ಮರೆತು ಪ್ರಭು ಮಾಸ್ತರರ ಹೆಸರು ಕೇಳಿ ಅವರಿಂದ ಕಿವಿ ಹಿಂಡಿಸಿಕೊಂಡದ್ದು ನೆನಪಾಗಿ, ಯಾರು ಏನು ಮಾಡಿದರೋ, ಮುಂದೇನು ಕಾದಿದೆಯೋ ಎಂಬ ಗಾಬರಿಯಲ್ಲಿ ತೊನೆದಾಡಿದ ಸುಜಾತ ಪಕ್ಕದಲ್ಲಿ ನಿಂತ ಪುಟ್ಟ ಸುಕನ್ಯಳ ಕಾಲು ತುಳಿದುಬಿಟ್ಟಳು. ನೋವು ತಡೆಯಲಾಗದೆ ಅಪ್ಪನೆದುರು ಅಕ್ಕ ಕಾಲು ತುಳಿದಿದ್ದನ್ನು ಹೇಳಲಾಗದೆ ಅವಳು ಹೋ ಎಂದು ಅಳತೊಡಗಿದಳು. ಅವಳ ಅಳು ನೋಡಿ ಕಾರಣ ತಿಳಿಯದಿದ್ದರೂ ಸಹ ಅನುಕಂಪದಿಂದ ನಾವೆಲ್ಲ ಒಟ್ಟಾಗಿ ಅತ್ತು ಮನೆಯೇ ರಣರಂಪವಾಗಿಹೋಯಿತು. ಹಿರಿಯಬ್ಬೆ ಕುಳಿತಲ್ಲಿಂದಲೇ ಅವರವರ ತಾಯಂದಿರು ತಮ್ಮತಮ್ಮ ಮಕ್ಕಳನ್ನು ಒಳಗೊಯ್ಯಿರೆಂದು ಆದೇಶವಿತ್ತರು. ಅವರು ಹಾಗೆಂದಿದ್ದೇ ತಡ ನಾವೆಲ್ಲ ಎಳೆದೊಯ್ಯಲ್ಪಟ್ಟೆವು. ಕೊನೆಗೂ ಪ್ರಭು ಮಾಸ್ತರ್ ಬಂದ ಕಾರಣ ನಿಗೂಢವಾಗೇ ಉಳಿಯಿತು.

ಆ ಪ್ರಸಂಗದ ನಂತರ ಕೌಟುಂಬಿಕ, ಶಾಲಾಂಬಿಕ, ಬಾಲ್ಯಾತ್ಮಕ ಸಮಸ್ಯೆಗಳಿಗೆ ಹಿರಿಯಬ್ಬೆಯೇ ಸರಿಯೆಂದು ಅಲಿಖಿತ ನಿಯಮ ತನ್ನಿಂದ ತಾನಾಗಿ ಬರೆಯಲ್ಪಟ್ಟುಬಿಟ್ಟಿತ್ತು. ಹಾಗಾಗಿ ಹಿರಿಯಬ್ಬೆಯ ಕೂದಲು ಬಾಚುವ ಸಮಯ ಒಮ್ಮೊಮ್ಮೆ ಒಂದೆರಡು ತಾಸು ವಿಸ್ತರಿಸಿದ್ದೂ ಇತ್ತು. ಬಹಳ ಸಮಸ್ಯೆ ಇದ್ದ ಸಮಸ್ಯಾಪೀಡಿತರು ಹಿರಿಯಬ್ಬೆಯ ಕೂದಲು ಸೀತೆಯ ಕೂದಲಿನಂತೆ ಬೇಗನೇ ಬಾಚಿ ಮುಗಿಯಲಾರದಂತೆ ದಟ್ಟವಾಗಿರಬಹುದಿತ್ತು ಎಂದು ಆಶಿಸಿದ್ದೂ ಉಂಟು.

ಹಿರಿಯಬ್ಬೆಗೆ ಆದ ಬಾಳಂತನ ಹನ್ನೊಂದು. ಆದರೆ ಉಳಿದ ಮಕ್ಕಳು ಹತ್ತು. ಪ್ರತೀ ಬಾಳಂತನಕ್ಕೆ ಎಲ್ಲ ತಾಯಂದಿರ ಹಳೆ ನೂಲಿನ ಸೀರೆಗಳು ಮೀಸಲಾಗಿರುತ್ತಿದ್ದರಿಂದ, ಬಾಳಂತನ ಮುಗಿಸಿ ಬಂದ ಎಣ್ನೆ ಕಂಪಿನ ಸೀರೆಗಳು ಹಿರಿಯಬ್ಬೆಯ ವಾತ್ಸಲ್ಯವೇ ಮೈವೆದ್ದಂತೆ ನಮ್ಮ ಹೊದಿಕೆ(ದುಪಟಿ)ಗಳಾಗಿರುತ್ತಿದ್ದವು. ನಾವು ಮದುವೆಯಾಗಿ ಊರು ಬಿಡುವಾಗ ಆದ ದೊಡ್ಡ ದುಃಖ ಇಂತಹ ಹೊದಿಕೆಯಿಂದ ಅಗಲಬೇಕಲ್ಲ ಎಂಬುದೇ ಆಗಿತ್ತು. ಏಕೆಂದರೆ ಮದುವೆ ಆದ ಮೇಲೆ ಡಬಲ್ ಬೆಡ್ ಶೀಟಿಗೆ ಬದಲಾಯಿತಲ್ಲ ಜೀವನ.

ಹಿರಿಯಬ್ಬೆಯ ಕುರಿತು ಎಷ್ಟೂ ಹೇಳಬಹುದು. ಅದರಲ್ಲಿ ಮುಖ್ಯವಾಗಿ ಎದ್ದುನಿಲ್ಲುವುದೇ ತಾರತಮ್ಯವಿಲ್ಲದ ಪ್ರೇಮಧಾರೆ ಅಥವಾ ಅವರ ವಾತ್ಸಲ್ಯ. ಅವರೊಡನಿದ್ದಾಗ ನಮಗೆ ಸಿಗುತ್ತಿದ್ದ ಎಲ್ಲ ದಿಕ್ಕಿನಿಂದ ರಕ್ಷಿಸಲ್ಪಡುತ್ತಿದ್ದೇವೆಂಬ ಬಲ. ಅದು ಬರೇ ನನಗೊಬ್ಬಳಿಗೇ ಅಲ್ಲ ಉಳಿದವರಿಗೂ ಹಾಗೆ ಅನಿಸುತ್ತಿತ್ತೆಂದು ಆಮೇಲೆ ತಿಳಿಯಿತು. ನನಗಿನ್ನೂ ಹತ್ತುವರ್ಷವಿದ್ದಾಗಿನ ಘಟನೆ ನೆನಪಾದರೆ ಅದರ ತಲೆ ಬುಡ ಈಗ ಹೊಂದಿಕೊಳ್ಳುತ್ತಿದೆ. ನನ್ನಕ್ಕ ಪ್ರಮೋದಾಳಿಗೆ ಆಗ ಮದುವೆಗೆಂದು ಗಂಡು ಹುಡುಕಿತ್ತಿದ್ದರು. ಮದುವೆ ವಿಷಯ ತೆಗೆದರೆ ಅವಳ್ಯಾಕೋ ಅಳುತ್ತಿದ್ದಳು. ಒಂದು ದಿನ ಹಿರಿಯಬ್ಬೆಯ ತೊಡೆಮೇಲೆ ಮಲಗಿ ಪ್ರಮೋದಾ ಅತ್ತಿದ್ದು ನಾವೆಲ್ಲ ನೋಡಿದ್ದೆವು. ಆಮೇಲೆ ಸುಮಾರು ಮೂರ್ನಾಲ್ಕುಸಲ ಲೇಡೀ ಡಾಕ್ಟರ್ ಒಬ್ಬರು ಮನೆಗೇ ಬಂದು ಹೋಗಿ ಮಾಡಿದರು. ಅದಾಗಿ ಆರು ತಿಂಗಳ ನಂತರ ಹಿರಿಯಪ್ಪ ನೋಡಿದ ಹುಡುಗನೊಡನೆ ಪ್ರಮೋದಾ ಖುಶಿಯಿಂದ ಮದುವೆಯಾದಳು. ಅವಳ ಸಮಸ್ಯೆಯನ್ನು ಒಳಗೊಳಗೇ ಹಿರಿಯಬ್ಬೆ ಪರಿಹರಿಸಿದ್ದಳು. ಹೀಗೆ ನಮ್ಮೆಲ್ಲರ ಬಾಲ್ಯದಿಂದ ಹಿಡಿದು ಬಾಳಂತನದವರೆಗೂ ಹಿರಿಯಬ್ಬೆ ಸಂರಕ್ಷಣಾತ್ಮಕವಾಗಿ ಆವರಿಸಿಕೊಂಡಿದ್ದಳು.

ಇಂದಿಗೂ ನಮ್ಮಮಕ್ಕಳ ಮದುವೆಗಳು, ಮೊಮ್ಮಕ್ಕಳ ಮುಂಜಿ, ಬರ್ಥ್ ಡೇಗಳಲ್ಲಿ ಸೇರಿದಾಗ ಹಿರಿಯಬ್ಬೆ ನೆನಪಿನಲ್ಲಿ ಇಣುಕಿ ಪ್ರೀತಿಯ ನೇವರಿಕೆಯಾಗಿ ಹಾದುಹೋಗುತ್ತಾರೆ. ಇವತ್ತಿಗೂ ಅವರದೇ ಆಗಿದ್ದ ಆ ಐದೂ ಜಾಗಗಳು ಬಣ್ಣವನ್ನಷ್ಟೇ ಬದಲಾಯಿಸಿಕೊಂಡು ಯಾವುದೇ ಆಧುನೀಕರಣಕ್ಕೊಳಗಾಗದೇ ಇನ್ನೊಬ್ಬ ಹಿರಿಯಬ್ಬೆ ಬರಬಹುದೆಂದು ಕಾದು ಕುಳಿತಿವೆ. ಈ ನಗರದಲ್ಲಿ ಹಿರಿಯಬ್ಬೆಯಂತಹ ಸ್ಥೂಲ ಕಾಯಗಳನ್ನು ದಿನಾಲೂ ನೂರಾರು ನೋಡುತ್ತಿದ್ದರೂ, ಅಂತಹ ವಾತ್ಸಲ್ಯಮಯಿ ಮಾತೃಹೃದಯಿಯನ್ನು ಎಲ್ಲಿ ಕಾಣುವುದು?
ಶೋಭಾ ಹೆಗಡೆ

ಪ್ರತಿಭಾವಂತ ಲೇಖಕಿ ಶ್ರೀಮತಿ ಶೋಭಾ ಹೆಗಡೆ ಮೂಲತಃ ಸಿರಸಿಯ ಪುಟ್ಟನ್ಮನೆಯವರು. ಶ್ಯಾಮಲಿ ಎಂಬ ಕಾವ್ಯನಾಮ ದಿಂದ ಬರೆಯುವ ಇವರು ಆಧ್ಯಾತ್ಮಿಕ ಚಿಂತಕಿ . 'ಬೆಳಕಿನಿಂದ ಕತ್ತಲೆಡೆಗೆ ' ಇವರ ಪ್ರಕಟಿತ ಆಧ್ಯಾತ್ಮಿಕ ಕಾದಂಬರಿ . ಇದಲ್ಲದೆ 'ಅತಿಥೇಯನಾದ ಅತಿಥಿ' , 'ಅಜ್ಜನ ಅನುಭವ ' ' ಬೋಧಿ ವೃಕ್ಷ ' ಮುಂತಾದವು ಇವರ ಪ್ರಕಟಿತ ಕೃತಿಗಳು. ಪ್ರಾಫಿಟ್ ಪ್ಲಸ್, ವಿಶ್ವವಾಣಿ ಮುಂತಾದ ಪತ್ರಿಕೆಗೆಳಲ್ಲಿ ಇವರ ಹಲವಾರು ಅಂಕಣ ಬರೆಹಗಳು ಪ್ರಕಟವಾಗಿವೆ -ಸಂಪಾದಕ

57 views0 comments

Comments


bottom of page