ಹೀಗೆ ಒಂದು ವೀಕೆಂಡು  [ಕವಿತೆ]

Updated: Aug 28, 2020

- ಲಕ್ಷ್ಮಿ ಎಚ್ ದಾವಣಗೆರೆ


ಅದೊಂದು ರಾತ್ರಿ ನಗರವೊಂದು ಮಲಗಿತ್ತು 

ಜಿಟಿ ಜಿಟಿ ಮಳೆಗೆ ಸೇೂತು,ಮೆತ್ತಗಾಗಿ

ಕತ್ತಲು,ಬರೀ‌..ಬೀದಿ ದೀಪಗಳೇ ಚಂದ್ರನ ತುಂಡುಗಳು

ಮನುಷ್ಯನ ಸುಳಿವೂ ಕೂಡ ಸಿಗದು 

ರೋಡು ತೊಯ್ದು ತೊಪ್ಪೆಯಾಗಿ ಕಾಂಕ್ರೀಟಿನ 

ಹಾಸಿಗೆ ಹಿಡಿದು ಮಲಗಿತ್ತು ಮಂಕಾಗಿ,


ಆದರೂ ದಾರಿಹೋಕರನು ಅತಿಥಿಗಳಾಗಿ ಕಾಯುತ್ತಿದ್ದ 

ಅಲ್ಲೆಲ್ಲೋ ಕೂಡು ರಸ್ತೆಗಳ ಮೂಲೆಯಲಿ ನಿಂತ 

ಪಾನಿಪೂರಿ ಮಾರುವ ಹುಡುಗನೊಬ್ಬ

ಕತ್ತಲ ಮಬ್ಬು ಬೆಳಕಲಿ, ತಲೆಯ ಮೇಲೊಂದು 

ಟೊಪ್ಪಿಗೆ,ರೇನ್ ಕೋಟು ತೊಟ್ಟು,ಬಿದಿರಿನ ಕಂಬ 

ಬಳಸಿದ ಬುಟ್ಟಿಯ ಮುಂದೆ ನಿಂತು 

ಬಿಂದಿಗೆಯಲಿ ಪಾನಕವನು ಹಿಡಿದು ನಿಂತ ಹಾಗೆ

ಕಾಯುತಿದ್ದ ಸಂಜೆಯ ಚಾಟಿಗೆ ಬರುವ ಗಿರಾಕಿಗಳನು


ಹಾಗೆ ಮುಂದೆ,ಕತ್ತಲಿಗೇ ಸವಾಲು ಹಾಕುತ ನಿಂತ 

ಎಟಿಎಂನ ಲೈಟು ವಾಚ್ಮನ್ನನ್ನೂ ಮಿನುಗಿಸುತ್ತಿತ್ತು

ಅವನ ನಿದ್ರೆಗೆ ಜಾರಿಸುತ..

ಖುಷಿಯ ಕೊಳ್ಳೆ ಹೊಡೆದವರ ಹಾಗೆ ವೀಕೆಂಡಿಗೆ 

ಫೇರ್ವೆಲ್ ಕೊಡಲು ಪಾರ್ಟಿಯಲಿ,ಚಾಟಿನಲಿ

ಮೈಮರೆತು ನಿಂತಿದ್ದರಷ್ಟು ಜನ ಅದಾವುದೊ

ಫೇಮಸ್ ಸರ್ಕಲ್ಲಿನಲಿ..


ಈ ಔಟ್ಫಿಟ್ಟಿನ ಶಾಪುಗಳಿಗೇನು ಕೆಲಸ ಇನ್ನೂ ತೆಗೆದಿವೆ 

ಬಾಗಿಲುಗಳನು ಸಿಟಿಯ ರಂಜಿಸಲು..ಬಾರದೆ ನಿದ್ರೆ..?


ಪ್ಲೇಗ್ರೌಂಡಿನ ಕಲ್ಲುಬೆಂಚುಗಳೂ ಕತೆ ಹೇಳುತ್ತವೆ

ಯಾರ ಬರುವಿಕೆಗೊ ಇಡೀ ದಿನ ಕಾದು ಮೌನವಾಗಿ 

ಮಲಗಿದ ಹಾಗೆ..ತೆರೆದ ಕೋರ್ಟನು ನೋಡುತ

ಗಗನಚುಂಬಿ ಕಂಬದ ತುದಿಗೆ ಚದುರಿದ ಬೆಳಕನು ದಿಟ್ಟಿಸುತ

ಮುಂಗಾರಿನ ಇನ್ನೂ ನಿರೀಕ್ಷೆಯಲಿ..

ಅರೇ..ಮುಗಿಯಲು ಬಂದಿದೆ ವೀಕೆಂಡು..

ನಾಳೆಯಿಂದ ಮತ್ತದೇ ಸಂಜೆ ಮತ್ತದೇ ಬೇಸರ ಎನ್ನುವ ಹಾಗೆ

ರೆಪ್ಪೆ ಮೇಲೆ ಅರೆ ಮಣ ದಣಿವು ಹೊತ್ತು ಸಂಜೆ ಮಬ್ಬುಗತ್ತಲಲಿ 

ನಮಗಾಗಿ ಕಾದ ಮನೆ ಸೇರು...

68 views0 comments