top of page

ಹೆಗಲಾಗು ಮನುಕುಲಕೆ..!

ಕಬೀರ ಕಂಡಂತೆ..೧೯


ರಾತ ಗವಾಯಿ ಸೋಯ ಕೆ, ದಿವಸ ಗವಾಯೋ ಖಾಯ/

ಹೀರಾ ಜನಮ ಅನಮೋಲ ಥಾ, ಕೌಡಿ ಬದಲೆ ಜಾಯ/

ಮಾನವ ಜನ್ಮ ಅಮೂಲ್ಯವಾದದ್ದು. ಸದಾ ಸತ್ಕಾರ್ಯಗಳಲ್ಲಿ ತೊಡಗಿಕೊಂಡು ಭಗವಂತನ ನಾಮಸ್ಮರಣೆ ಮಾಡುತ್ತ ಮೋಕ್ಷವನ್ನು ಸಾಧಿಸು -ವದರಲ್ಲಿ ಮಾನವ ಜನ್ಮದ ಸಾರ್ಥಕ್ಯ ಅಡಗಿದೆ ಎಂದು ಅನೇಕ ದಾರ್ಶನಿಕರು ಸಾರಿ ಹೇಳಿದ್ದಾರೆ. ಆದರೆ ಪಾರಮಾರ್ಥಿಕ ವನ್ನು ಬಿಟ್ಟು, ಕ್ಷಣಕಾಲ ಅನುಭವಿಸಲು ದೊರಕಿದ ಈ ಜನ್ಮ ದಲ್ಲಿಯೇ ಎಲ್ಲ ಸುಖಗಳನ್ನು ಉಪಭೋಗಿಸಬೇಕು ಎಂಬ ಭೌತಿಕವಾದವನ್ನು ಅನೇಕರು ಮುಂದಿಡುತ್ತಾರೆ. 'ಸತ್ತ ಮೇಲೆ ಸ್ವರ್ಗ ಇದೆಯೋ ಇಲ್ಲವೋ ಗೊತ್ತಿಲ್ಲ, ಹಾಗಾಗಿ ಬದುಕಿದ್ದಾಗಲೇ ಎಲ್ಲ ಸುಖ ಅನುಭವಿಸೋಣ ಎಂಬ ತತ್ವಕ್ಕೆ ಬಲವಾಗಿ ಅಂಟಿಕೊಳ್ಳುತ್ತಾರೆ.

ಜೀವನದಲ್ಲಿ ಸಂತೋಷದಿಂದ ಇರಬೇಕು ಎಂಬುದನ್ನು ಅಲ್ಲಗಳೆಯಲಾಗದು. ಆದರೆ ಈ ಸಂತೋಷ ಯಾವ ರೀತಿಯದ್ದು ಮತ್ತು ಎಷ್ಟರ ಮಟ್ಟಿಗಿನ ಸುಖವನ್ನು ಅನುಭವಿಸಬೇಕು ಎಂಬ ಬಗ್ಗೆ ಸ್ಪಷ್ಟ ಕಲ್ಪನೆ ಇರಬೇಕಾಗಿರುವದು ಅವಶ್ಯ. ಸಾಧಾರಣ ಸುಖೋಪಭೋಗದಲ್ಲಿ ಮುಳುಗದೇ ಸೇವೆ, ಪರೋಪಕಾರ, ಜ್ಞಾನ ಸಾಧನೆ, ಭಕ್ತಿ ಮುಂತಾದ ಅನೇಕ ಸಂಗತಿಗಳು ಮಾನವ ಜನ್ಮದ ಅಳತೆಗೋಲಾಗಿವೆ ಎಂಬುದನ್ನು ಮರೆಯಬಾರದು. ಅಲ್ಲದೇ ಇಂಥ ಕಾರ್ಯ -ಗಳಿಂದ ದೊರೆಯುವ ಅನಿರ್ವಚನೀಯ ಆನಂದಕ್ಕೆ ಸರಿಸಾಟಿಯೆಲ್ಲಿದೆ!?

ಈ ಹಿನ್ನೆಲೆಯಲ್ಲಿ ಸಂತ ಕಬೀರರು‌.

ನಿದ್ರೆಯಲ್ಲಿ ಕಳೆಯಿತು ರಾತ್ರಿ, ಸುಖದಲ್ಲಿ ಹಗಲು/

ವಜ್ರದ ಬೆಲೆಯ ಬಾಳು, ಕವಡೆಯಂತಾಯ್ತಲ್ಲ!// ಎಂದು ಉದ್ಗರಿಸಿದ್ದಾರೆ. ಅಮೂಲ್ಯವಾದ ಮನುಷ್ಯ ಜನ್ಮವನ್ನು ಕವಡೆಗಿಂತಲೂ ಕಡೆಯಾಗಿ ಕಂಡು ನಿಕೃಷ್ಟ ಜೀವನವನ್ನು ಸಾಗಿಸಿ ಕೊನೆಗೆ ಹೇಳ ಹೆಸರಿಲ್ಲದಂತೆ ಸಾಯುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಪಶು, ಪಕ್ಷಿಗಳು ಆಹಾರ, ಮೈಥುನಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡು ಬದುಕುತ್ತವೆ‌ ಆದರೆ ಇತರ ಪ್ರಾಣಿಗಿಂತ ಬುದ್ಧಿವಂತ ಎಂದು ಹೇಳಿಕೊಳ್ಳುವ ಮನುಷ್ಯ, ಸಂಘಜೀವಿ ಆಗಿದ್ದರಿಂದ ಆತನಿಗೆ ಸಮಾಜದ ಋಣ ತೀರಿಸುವ ಜವಾಬ್ದಾರಿ ಇದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಸಮಾಜದ ಋಣ ತೀರಿಸುವ ನಿಟ್ಟಿನಲ್ಲಿ ಮನುಷ್ಯ, ಮಾನವ ಕುಲದ ಸೇವೆಗಾಗಿ ತೆರೆದುಕೊಳ್ಳುವ ಅಗತ್ಯತೆಯಿದೆ. ಬದುಕಿನ ಕೊನೆಯವರೆಗೂ ಸ್ವಾರ್ಥ ಸಾಧನೆಯಲ್ಲಿ ಕಾಲಹರಣ ಮಾಡಿ ಕೊನೆಗೆ ಜೀವನದ ಸಂಧ್ಯಾ ಕಾಲದಲ್ಲಿ ಪಶ್ಚಾತ್ತಾಪ ಪಡುವದರ ಬದಲು, ನಾವಿರುವದೇ ಪರರ ಕಣ್ಣೊರೆಸಲು ಎಂಬ ಸಂಕಲ್ಪದೊಂದಿಗೆ ಕಾರ್ಯಪ್ರವೃತ್ತರಾಗ ಬೇಕಿದೆ.


ಜಗಕೆಲ್ಲ ಕಣ್ಣಾಗಿ, ಜನಕೆಲ್ಲ ಕಿವಿಯಾಗುತ್ತ

ಹಗಲಾಗಿ ನಿಲ್ಲು ದೀನರ ಕತ್ತಲು ರಾತ್ರಿಗೆ/

ಜೂಗರಿಕೆಯೇಕೆ ಜನರ ಕಷ್ಟ, ಕಾರ್ಪಣ್ಯಕೆ?

ಹೆಗಲಾಗು ಮನುಕುಲಕೆ - ಶ್ರೀವೆಂಕಟ //


ಶ್ರೀರಂಗ ಕಟ್ಟಿ ಯಲ್ಲಾಪುರ.

39 views0 comments

コメント


bottom of page